Friday, July 4, 2008

ಬಿಸಿಯೇರಿದೆ ಜೋಪಾನ

ಮನುಷ್ಯ ಕಲ್ಪನೆ ಸಾಮರ್ಥ್ಯಕ್ಕೆ ಮೀರಿದ್ದಲ್ಲವೆಂದೂ ಆತನ ಕಲ್ಪನೆಯನ್ನು ಸಂಶಯಿಸಬಾರದೆಂದೂ ಆ ಕಲ್ಪನೆ ಅತಿಶಯೋಕ್ತಿಯೂ ಅಲ್ಲವೆಂದು ಈಗೀಗ ಹೆಚ್ಚಾಗಿ ಅರಿವಿಗೆ ಬರುತ್ತಿದೆ. ಮೊದಮೊದಲು ಹಾಲಿವುಡ್ ಸಿನಿಮಾಗಳು ಒಂದು ಅತಿಶಯೋಕ್ತಿಯನ್ನು ಸೃಷ್ಟಿಸಿ ಅಚ್ಚರಿಯ ನೋಟವನ್ನು ಸರ್ಜಿಸುತ್ತಿದ್ದವು. ನೆಲವೇ ಇಲ್ಲದೆ ಬದುಕುವ ಮಾನವ, ಹಸಿರನ್ನೇ ಕಾಣದೆ ಅಲೆದಾಡುವ ಸಂಸಾರ, ಸಂಪೂರ್ಣ ಜಲಮಯ ಲೋಕದಲ್ಲಿ ಸಹಜವೆಂಬಂತೆ ಬದುಕುವುದು...! ಹೀಗೆ ವಾತಾವರಣದ ವೈಪರೀತ್ಯವನ್ನೇ ವಿಪರೀತವಾಗಿ ಕಲ್ಪಿಸಿಕೊಂಡು ಸಿನಿಮಾ ಮಾಡುವ ಮಂದಿಯ ಬೌದ್ಧಿಕ ಸಾಮರ್ಥ್ಯಕ್ಕೆ ಅಬ್ಬಬ್ಬಾ ಎನಿಸುತ್ತಿತ್ತು ವಿಜ್ಞಾನ ಅವೆಲ್ಲವೂ ಸಂಭವವೆನ್ನುವವರೆಗೂ. ಎಷ್ಟೆಂದರೂ ಹುಲು ಮಾನವ ಅತೀತವನ್ನು ಹೇಗೆ ತಾನೇ ಕಲ್ಪಿಸಿಕೊಳ್ಳಬಲ್ಲ ಹೇಳಿ. ಇದೀಗ ಹಾಲಿವುಡ್ ಹುಸಿಯಲ್ಲವೆಂಬುದು ಸಿದ್ಧವಾಗಿದೆ. ಪ್ರಪಂಚದ ವಿಜ್ಞಾನಿಗಳು ೨೦೫೦ರ ಹೊತ್ತಿನ ಭೂಮಿಯನ್ನು ಹಾಲಿವುಡ್ ನಿರ್ದೇಶಕರಿಗಿಂತ ಭೀಕರವಾಗಿ, ಸಾಕ್ಷ್ಯಾಧಾರ ಸಹಿತ ಚಿತ್ರಿಸಿದ್ದಾರೆ. ಭೂಮಿಯನ್ನು ತಂಪಾಗಿಟ್ಟುಕೊಳ್ಳದ ಮಾನವ ತಾನಂತೂ ತಂಪಾಗಿ ಬದುಕಲಾರ ಎಂದವರು ಹೇಳಿದ್ದಾರೆ. ಬೆಂಕಿಯನ್ನರಸಿ ಹೋಗುವ ಪತಂಗದಂತೆ ಮನುಷ್ಯ ಮುಗ್ಧನಲ್ಲ. ಆತ ಪೆದ್ದನೇ ಸರಿ ಎಂಬುದು ಅವರ ತಾತ್ತ್ವಿಕ ವಾದ. ವಿಜ್ಞಾನಿಗಳ ಪ್ರಕಾರ ಆ ಹೊತ್ತಿಗೆ ೪೦೦ ಮಿಲಿಯ ಟನ್ನುಗಳಷ್ಟು ಆಹಾರದ ಕೊರತೆ ಪ್ರಪಂಚದಲ್ಲಿ ಕಂಡು ಬರಲಿದೆ. ಹೆಚ್ಚು ಕಡಿಮೆ ಅಷ್ಟೇ ಸಂಖ್ಯೆಯ ಜನರು ಹಸಿವಿನಿಂದ ತತ್ತರಿಸಲಿದ್ದಾರೆ. ಪರಿಣಾಮ ಮೂರು ಬಿಲಿಯ ಜನರು ಅತಿವೃಷ್ಟಿ , ಅನಾವೃಷ್ಟಿಗಳಿಂದ ನಿರ್ವಸಿತರಾಗುತ್ತಾರೆ. ಪ್ರಪಂಚದ ಅರ್ಧದಷ್ಟು ಕರಾವಳಿ ಪ್ರದೇಶಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ. ಮತ್ತು ಎಲ್ಲಾ ಕರಾವಳಿಗಳು ಈಗಿರುವ ಜಾಗದಿಂದ ೨೦ ಮೀಟರ್‌ನಷ್ಟು ಒಳನುಗ್ಗಲಿದೆ. ಇಷ್ಟೆಲ್ಲಾ ಆಗುವುದು ಇನ್ನು ಕೇವಲ ೪೦ ವರ್ಷಗಳಲ್ಲೇ ಎಂಬುದು ಗಮನಾರ್ಹ. ಅಷ್ಟರಲ್ಲಾಗಲೇ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಟಿಕಾಗಳಂಥ ಭೂಭಾಗಗಳೇ ಮುಳುಗಡೆಯಾಗಲಿವೆ ಎಂಬುದನ್ನು ಪ್ರಸಕ್ತ ಕಡಲು ಕೊರತೆಗಳ ತೀವ್ರತೆಯನ್ನು ನೋಡಿಯೇ ಅಂದಾಜಿಸಬಹುದು. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಎಂಬಂತೆ.ಇಷ್ಟಕೆಲ್ಲಾ ವಿಜ್ಞಾನಿಗಳು ಕೊಡುವ ಕಾರಣಗಳೂ ಅಷ್ಟೇ ತೀವ್ರತರವಾದದ್ದು. ಅದೇ `ಭೂ ಬಿಸಿ'. ಅದೊಂದು ನೈಸರ್ಗಿಕ ಪ್ರಕೋಪವಲ್ಲ. ಅದು ಭೂಮಿಗೇ ಬಂದಿರುವ ವೃದ್ಧಾಪ್ಯದಂತೆ. ಆಯಸ್ಸು ತೀರುವ ಲಕ್ಷಣ. ಮಾನವ ದೇಹದ ಸಮತೋಲನ ತಪ್ಪುವಂತೆ ಭೂಮಿ ಅಡಿಗಡಿಗೆ ತನ್ನ ಅಸಮತೋಲನವನ್ನು ದರ್ಶಿಸುತ್ತಾ ಬರುತ್ತದೆ. ಇದು ಚಕ್ರೀಯ ಗತಿಯುಳ್ಳದ್ದಲ್ಲ. ಅದು ಶಾಶ್ವತವಾದದ್ದು. ಮಾನವನೇ ಮಾಡಿದ ವಿಷಪ್ರಾಶನ ಭೂಮಿಗೆ ನಿಧಾನವಾಗಿ ಏರುತ್ತಿದೆ. ವಿಜ್ಞಾನಿಗಳು ಅದಕ್ಕೆ `ಗ್ಲೋಬಲ್ ವಾರ್ಮಿಂಗ್' ಎಂದು ಹೆಸರಿಟ್ಟಿದ್ದರೂ ಅದರ ಪರಿಣಾಮ, ತೀವ್ರತೆ, ಬಿಸಿಯೇರಿಸುವ ಮಾಪಕಗಳು ಅದನ್ನು `ಗ್ಲೋಬಲ್ ವಾರ್ನಿಂಗ್' ಎಂದೇ ಹೇಳುತ್ತವೆ. ಏನೇ ಆದರೂ ಅದು ನಾವೇ ವಹಿಸಬೇಕಾದ ಎಚ್ಚರಿಕೆಯೆಂದೂ ನಮಗೇ ತಟ್ಟಿರುವ ಅಪಾಯವೆಂಬುದೂ ಅಷ್ಟೇ ಸ್ಪಷ್ಟ. ಇಲ್ಲಿ ವೈಜ್ಞಾನಿಕವಾಗಿ ಆಗಿರುವುದಿಷ್ಟು. ಭೂಮೇಲ್ಮೈಯಲ್ಲಿ ಉಂಟಾಗುವ ಅನಿಲಗಳ ವೈಪರೀತ್ಯದಿಂದ ಭೂಮಿಯ ತಾಪಮಾನದಲ್ಲಿ ಉಂಟಾಗುವ ವ್ಯತ್ಯಾಸ, ಭೂಮಿಯನ್ನು ಅಸಹಜವಾಗಿ ಬಿಸಿ ಮಾಡುತ್ತದೆ. ಮೈಬೆವರು ಉಕ್ಕುವಂತೆ ಭೂಮೈಯೂ ದಣಿದು ಬೆವರು ಬಸಿಯುತ್ತದೆ. ಇದ್ದಕ್ಕಿದ್ದಂತೆ ಶೀತವಾಗಿ ಸೀನುತ್ತದೆ. ಅತಿವೃಷ್ಟಿಯಷ್ಟೇ ಭೀಕರವಾಗಿ ಅನಾವೃಷ್ಟಿಯೂ ಅನಾಯಾಸವಾಗಿ ಕಂಡುಬರುತ್ತದೆ. ಹಿಮನದಿಗಳನ್ನೇ ಕರಗಿಸುತ್ತದೆ. ನದಿಗಳನ್ನು ಇಂಗಿಸುತ್ತದೆ. ಕೆಲವಲ್ಲಿ ಉಕ್ಕಿಸುತ್ತದೆ. ಹೀಗೆ ಯಾವ ಕೋನದಿಂದ ನೋಡಿದರೂ ಭೂಬಿಸಿ ನೈಸರ್ಗಿಕ ವೈಪರೀತ್ಯದಂತೆ ಕಂಡು ಬರುವುದೇ ಇಲ್ಲ. ಏಕೆಂದರೆ ಭೂಮಿಯಲ್ಲಿ ಬಿಸಿ ಏರುತ್ತಿರುವುದು ಕಂಡು ಬರುತ್ತಿದೆಯೇ ಹೊರತು ಅದು ಇಳಿಕೆಯಾಗುತ್ತಿರುವ ಉದಾಹರಣೆಗಳಿಲ್ಲ. ಏರಿಕೆಗೆ ಪರಿಹಾರ ಸೂಚಿಸಲಾಗಿದ್ದರೂ ಅದಷ್ಟು ಯಶಸ್ವಿಯಾಗುವ ಸಂಭವವಂತೂ ಇಲ್ಲವೇ ಇಲ್ಲ.ಗ್ಲೋಬಲ್ ವಾರ್ಮಿಂಗ್ ನೀಡುವ ವಾರ್ನಿಂಗ್ ಭೀಕರವಾದುದು. ಹಿಂದಿನ ಹಲವು ಘಟನೆಗಳು ಮುಂದಿನ ಅಪಾಯವನ್ನು ನೆನಪಿಸಿ ಹೆದರಿಸುತ್ತದೆ. ಆಂಡಿಸ್ ಪರ್ವತ ಶ್ರೇಣಿಯ ಒಂದು ಶಿಖರ ಹೌಸ್‌ಕಾರನ್. ಎತ್ತರ ೬,೭೦೦ ಮೀಟರ್‌ಗಳು. ಈ ಹಿಮಾವೃತ ಶಿಖರ ಹಲವು ನದಿಗಳ ಉಗಮಸ್ಥಾನ ಕೂಡ. ಕ್ರಿ.ಶ. ೧೯೬೨ರ ಜನವರಿ ೧೦ರಂದು ಇದ್ದಕ್ಕಿದಂತೆ ಹೌಸ್‌ಕಾರನ್ ಕುಸಿದುಬಿತ್ತು. ಮಲೆನಾಡ ಮಳೆಗಾಲದಲ್ಲಿ ಗುಡ್ಡ ಜರೆಯುವಂತೆ ಇಡೀ ಶಿಖರವೇ ೨೦ ಕಿ. ಮೀ. ವರೆಗೆ ಕೇವಲ ಏಳೇ ಏಳು ನಿಮಿಷಗಳಲ್ಲಿ ಚಾಚಿಗೊಂಡಿತು. ಜಲಾಶಯಗಳು ಒಡೆದವು. ಪರ್ವತ ತಪ್ಪಲುಗಳಲ್ಲಿ ಕೃತಕ ಜಲಾಶಯಗಳು ಸೃಷ್ಟಿಯಾದವು. ರಂದಾಹಿರ್ಕ ಎಂಬ ಪಟ್ಟಣವೂ ಇತರ ೬ ಹಳ್ಳಿಗಳೂ ಜಲಸಮಾಧಿಯಾದವು. ಗ್ಲೋಬಲ್ ವಾರ್ಮಿಂಗ್ ನೀಡುವ ಎಚ್ಚರಿಕೆ ಈ ಘಟನೆಯನ್ನು ಅಗಾಗ್ಗೆ ನೆನಪಿಗೆ ತರುತ್ತದೆ. ಏಕೆಂದರೆ ಈಗಾಗಲೇ ಹಿಮಾಲಯದಂಥ ಶಿಖರಗಳ ಹಿಮಗಳು ಭೂತಾಪಮಾನಕ್ಕೆ ಗುರಿಯಾಗಿವೆ. ಹಾಗಾಗಿ ಒಂದು ವೇಳೆ ಹಿಮಾಲಯ, ಗೌರಿ ಶಂಕರಗಳೂ... ಅಂಥದ್ದೊಂದನ್ನು ಅಲ್ಲಗಳೆಯಲಂತೂ ಆಗದು. ಜೊತೆಗೆ ದ. ಮತ್ತು ಉ. ಭಾರತದ ನದಿಗಳ ಪರಿಸ್ಥಿತಿಗಳು ತಂದೊಡ್ಡುವ ಅಪಾಯ ಭಾರತಕ್ಕೆ ಬಲವಾದ ಹೊಡೆತ ನೀಡುತ್ತದೆ. ವ್ಯವಸಾಯದ ಬೇರುಗಳಂತಿರುವ ಈ ನದೀ ಜಾಲಗಳು ಭಾರತದ ಆರ್ಥಿಕ ಮತ್ತು ನೈಸರ್ಗಿಕ ವ್ಯವಸ್ಥೆಗಳಿಗೆ ಎಷ್ಟೊಂದು ಪರಿಣಾಮ ಬೀರುತ್ತದೆಂದರೆ ಇನ್ನು ೧೦೦ ವರ್ಷಗಳಲ್ಲಿ ಉತ್ತರದ ನದಿಗಳು ವರ್ಷಪೂರ್ತಿ ಹರಿಯಲಾರವು ಎಂದು ಅಧ್ಯಯನವೊಂದು ತಿಳಿಸುತ್ತದೆ. ದಕ್ಷಿಣದ ನದಿಗಳೋ ಸಮುದ್ರಕ್ಕೆ ಬಹಳ ಹತ್ತಿರವೇ ಬಂದಿರುತ್ತದೆ.ಭೂ ಬಿಸಿಯಲ್ಲಿ ಗಮನಾರ್ಹ ಪಾತ್ರವಹಿಸುವುದು ಮತ್ತು ನಿರ್ಣಾಯಕವಾಗಿರುವುದು ಒಂದೊಮ್ಮೆ ಜೀವರಕ್ಷಕವೆನ್ನಲಾಗುತ್ತಿದ್ದ `ಓಝೋನ್'. ಇದನ್ನೇ ಈಗ ನೆತ್ತಿಯ ಮೇಲಿರುವ ಕತ್ತಿಯನ್ನಾಗಿ ಬದಲಿಸಲಾಗಿದೆ. ಭೂಮಿಯನ್ನು ಅತಿ ನೇರಳಾತೀತಕಿರಣಗಳಿಂದ ರಕ್ಷಿಸಲು, ಅತಿ ಶಾಖ ಭೂಮಿಯಲ್ಲಿ ನೆಲೆಸದಂತೆ ಮಾಡಲು ಇದ್ದ ಓಝೋನ್ ಗಾಸಿಯಾಗಲು ಮನುಷ್ಯನೇ ಕಾರಣ. ಅದೂ ಅನಿವಾರ್ಯ ಕಾರಣಗಳಿಗಾಗಿ ಅಲ್ಲ. ಅಣುಸ್ಥಾವರಗಳಂಥ ಭೀಕರ ಯೋಜನೆಗಳಿಗಾಗಿ. ಒಂದು ಮಾಹಿತಿಯ ಪ್ರಕಾರ ಓಝೋನ್‌ನ ಗಾಸಿಗೆ ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವ ಅಣು ಕೊಳಚೆಗಳೇ ಕಾರಣ. ಇದರ ಪರಿಣಾಮ ನಮಗಿಂದು ಆಗುತ್ತಿದೆ. ಬೆಂಗಳೂರುಗಳಂಥಾ ಕಿಷ್ಕಿಂದೆಯಂತಿರುವ ಮಹಾನಗರದಲ್ಲೂ ವಿಪರೀತ ಚಳಿ ಎಂದರೆ, ಮಲೆನಾಡಿನಲ್ಲೂ ಈಗೀಗ ಸೆಕೆಯೆಂದರೆ ಅದು ಪರಿಸರದ ತಪ್ಪಲ್ಲ. ಭೂಬಿಸಿಯ ತೀವ್ರತೆಯ ತಟ್ಟುವಿಕೆ.ಹಾಗಾಗಿ ಭೀಕರ - ರುದ್ರ ಸನ್ನಿವೇಶಗಳನ್ನು ನೆನಪಿಸುವ ಮಹಾಯುದ್ಧಗಳು, ಆಗಾಗ ಕಣ್ಣೀರು ಹಾಕಿಸುವ ನದಿಗಳು, ಆಗಿಂದಾಗೆ ಜಾಗೃತವಾಗುವ ಶಿಲಾ ಸ್ಫೋಟಗಳು, ಭರ್ತಿ ಆರು ತಿಂಗಳಿನ ಚುಮು ಚುಮು ಚಳಿಗಾಲ, ಮಾನ್ಸೂನ್ ಎಂಬ ಮುಂಗೋಪಿ, ಬೈಸಾಕಿ ಎಂಬ ತುಂಟ - ಇವರೆಲ್ಲಾ ಇನ್ನು ನೆಲೆ ಕಳೆದುಕೊಳ್ಳುತ್ತಾರೆ. ಹೊಸ ಋತುಮಾನಗಳಿಗೆ ಭೂಮಿ ಅಣಿಯಾಗುತ್ತಿದೆ.ಶತಮಾನದೊಳಗೆ ಮಾನವನೂ ಒಗ್ಗಿಕೊಳ್ಳಬೇಕಾಗಿದೆ.