Friday, May 6, 2011

ಹಬ್ಬ ಮಾಡಲು ಹಾಕಿಯೇ ಸಾಕು

ವಿಶ್ವಕಪ್ ಕ್ರಿಕೆಟಿನ ಕಾವು ಇಳಿಯುವ ಮೊದಲೇ ಐಪಿಎಲ್ ಎಂಬ ಮಾಯೆ ಶುರವಾಗಿ ಬಿಟ್ಟಿದೆ. ಹಾಗಾಗಿ ಜನರಿಗೆ ವಿಶ್ವಕಪ್ ಸುಲಭವಾಗಿ ಬದಿಗೆ ಸರಿದುಹೋಗುವುದಿಲ್ಲ. ವಿಶ್ವವಿಜೇತರ ಪ್ರಭಾವಳಿಯನ್ನು ಹೊತ್ತುಕೊಂಡೇ ಖಾಸಗೀ ಸಂಸ್ಥೆಗಳು ಆಟಗಾರರನ್ನು ಖರೀದಿಸಿ ಸರಿಯಾದ ಸಂದರ್ಭದಲ್ಲೇ ವ್ಯಾಪಾರ ಮಾಡಿವೆ. ಬಿಸಿ ಇದ್ದಾಗಲೇ ಕಬ್ಬಿಣವನ್ನು ಬಗ್ಗಿಸಬೇಕಲ್ಲವೇ ಎಂಬಂತೆ ಐಪಿಎಲ್
ತಾರಕಕ್ಕೇರಿದೆ. ಇರಲಿ, ಅದು ಕ್ರಿಕೆಟ್‌ನ ಪ್ರಾರಬ್ದ. ಅಂಕಿ-ಅಂಶಗಳ ಲೆಕ್ಕಾಚಾರವಿಲ್ಲದೆ ಕ್ರಿಕೆಟ್‌ಗೆ ಜೀವವಿಲ್ಲ. ಅಷ್ಟಕ್ಕೂ ಕ್ರಿಕೆಟನ್ನುಬೈಯಬಾರದು. ಅದೊಂದು ಮಾಯೆ.ಅದೊಂದು "ಧರ್ಮ".
ಇದೇ ಹೊತ್ತಲ್ಲಿ ರಾಷ್ಟ್ರೀಯ ಕ್ರೀಡೆಯೆಂಬ ಹಾಕಿ ನೆನಪಾಗುತ್ತದೆ.ಹಳೆಯ ಸುವರ್ಣಯುಗಗಳು, ಒಬ್ಬ ಧ್ಯಾನ್‌ಚಂದ್, ಆಧುನಿಕ ಪಿಳ್ಳೆ, ಜುಗ್ರಾಜ್‌ಸಿಂಗ್, ಐಎಚ್‌ಎಫ್ ಮತ್ತು ಹಾಕಿ ಇಂಡಿಯಾಗಳ ಜುಗಲ್ ಬಂಧಿ, ಕೋಚ್ ಮತ್ತು ಆಟಗಾರರು, ಒಟ್ಟಾರೆ ಒಂದಿಷ್ಟು ವಿವಾದಗಳು.ಇವು ಆ ರಾಷ್ಟ್ರೀಯ ಕ್ರೀಡೆಯೆಂದಾಗ ನೆನಪಾಗುವ ಸಂಗತಿಗಳು ಮತ್ತು ಇವಿಷ್ಟೇ ಹಾಕಿ ಎಂದು ವರ್ತಿಸುವಂಥ ಮಾಧ್ಯಮಗಳು.ಇಷ್ಟಕ್ಕಿಂತಲೂ ಒಂದಂಗುಲ ಹೆಚ್ಚಿನ ಮಾಹಿತಿ ಜನಸಾಮಾನ್ಯನಿಗೆ ದೊರಕುವುದಿಲ್ಲ . ಏಕೆಂದರೆ ಭಾರತೀಯ ಹಾಕಿ ತಂಡ ವಿಶ್ವಕಪ್ ಗೆಲ್ಲುವುದಿಲ್ಲ. ಹಾಕಿ ಆಟಗಾರರಿಗೆ ಬಾಲಿವುಡ್ ನಟಿಯರಿಗೆ ಕಾಳು ಹಾಕುವಷ್ಟು ಇಮೇಜ್ ಬಂದಿರುವುದಿಲ್ಲ. ಯಾವ ಸರಕಾರಗಳೂ ಅವರಿಗೆ ಮಣ್ಣು-ಹೊನ್ನು ಕೊಡುವುದಿಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ಭಾರತೀಯ ಹಾಕಿ ಭಾರತೀಯ ರೈತನಂತೆ.ಅದರದ್ದು ಎಂದಿಗೂ ತೀರದ ಬವಣೆಗಳು. ಹೀಗೆ ಹಾಕಿ ಎಂದರೆ ಇಬ್ಬನಿ ಮುಸುಕಿದ ದೊಡ್ಡ ಬೆಟ್ಟದಂತೆ ಭಾಸವಾಗುತ್ತದೆ. ಹಾಗಾಗಿ ಕೆಲವರಿಗೆ ರಾಷ್ಟ್ರೀಯ ಕ್ರೀಡೆಯು ಹಾಕಿಗಿಂತ ಕ್ರಿಕೆಟೇ ಆಗಿರಬೇಕೆಂದು ಅನಿಸುತ್ತದೆ. ಅವುಗಳ ನಡುವೆ ಅಷ್ಟೊಂದು ವ್ಯತ್ಯಾಸಗಳು. ಜನರಿಗೆ ಹಾಗನಿಸುವುದಕ್ಕೆ ಕಾರಣಗಳೂ ಹಲವಾರಿವೆ.ಏಕೆಂದರೆ ರಾಷ್ಟ್ರೀಯ ಕ್ರೀಡೆಯಾದರೂ ಹಾಕಿಯನ್ನು ಯಾವ ಮೈದಾನದಲ್ಲೂ ,ರಸ್ತೆ ಬದಿಯಲ್ಲೂ ಆಡುವುದನ್ನು ಯಾರೂ ಕಂಡಿಲ್ಲ.ಹಾಕಿ ತರಬೇತಿ ನಡೆಯುತ್ತಿರುವುದನ್ನು ಕಂಡ ಜನರೂ ವಿರಳಾತಿವಿರಳ.ಇಂಥ ಹೊತ್ತಿನಲ್ಲಿ ಹೀಗೆ ತಿಳಿದುಕೊಂಡಿರುವ ಹೊತ್ತಿನಲ್ಲಿ ಹಾಕಿ ಹಬ್ಬ ಮತ್ತೆ ಬಂದಿದೆ. ಪುನಃ ಅದೇ ಕೊಡಗು, ಅದೇ ಪೊನ್ನಂಪೇಟೆ ಎಂಬ ಲವಲವಿಕೆಯ ಪಟ್ಟಣ. ಅದೇ ಕೊಡವ ಕುಟುಂಬಗಳು.ಅದೇ ಮೈದಾನಗಳು ಮತ್ತೆ ತುಂಬಿಕೊಂಡಿವೆ. ಈಗೇನಿದ್ದರೂ ಕೊಡಗಿನಲ್ಲಿeat hockey drink hockey and dream hockey. ಅಂದರೆ ಎಲ್ಲಿ ನೋಡಿದರೂ ಹಾಕಿಯೋ ಹಾಕಿ. ತುಂಬಿ ತುಳುಕುತ್ತಿರುವ ಮೈದಾನಗಳು. iplನ ಪರಿವೆಯಿಲ್ಲ. ಅಂಕಿ-ಅಂಶಗಳ ಹಂಗಿಲ್ಲ. ಈಗ ಏನಿದ್ದರೂ ಚೆಂಡು ಮತ್ತು ಸ್ಟಿಕ್‌ಗಳ ತಾದಾತ್ಮ್ಯದ್ದೇ ಮಾತುಗಳು. ಕೇವಲ ೧೫ ವರ್ಷಗಳ ಮೊದಲು ತನ್ನ ಉದ್ಯೋಗಕ್ಕೂ ಹಾಕಿಗೂ ಸಂಬಂಧವಿರದಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ಕುಟ್ಟಪ್ಪ ಎಂಬ ವಯೋವೃದ್ಧರೋರ್ವರು ಈ ಹಾಕಿ ಹಬ್ಬವನ್ನು ಶುರು ಮಾಡಿರದಿದ್ದರೆ ಈ ಪರಿಯ ಉತ್ಸಾಹ ಇಂದು ಕಂಡುಬರುತ್ತಿರಲಿಲ್ಲ. ಹಾಕಿ ಹಬ್ಬವಾಗುತ್ತಿರಲಿಲ್ಲ. ಒಂದು
ಕಾಲದಲ್ಲಿ “ಭಾರತೀಯ ಹಾಕಿಯ ನರ್ಸರಿ ಶಾಲೆ’ ಎಂದೇ ಖ್ಯಾತವಾಗಿದ್ದ ಕೊಡಗಿನಲ್ಲಿ ಹಲವು ಅಲ್ಲೋಲಕಲ್ಲೋಲಗಳು ಉಂಟಾಗಿ ಬಿಡುತ್ತಿದ್ದವು. ಏಕೆಂದರೆ ಇಲ್ಲಿ ಹಾಕಿ ಎಂದರೆ ಕೇವಲಕ್ರೀಡೆಯಲ್ಲ. ಇಲ್ಲಿ ಕುಟ್ಟಪ್ಪನವರು ಹಾಕಿಯನ್ನು ಪೋಣಿಸಿದ್ದು ಸಂಸ್ಕೃತಿಯೊಟ್ಟಿಗೆ. ಹಾಕಿ ಉತ್ಸವವಾಗದೇ ಇರುತ್ತಿದ್ದರೆ ಸಂಸ್ಕೃತಿ ಸೊರಗುವ ಎಲ್ಲಾ ಲಕ್ಷಣಗಳು ಅದಾಗಲೇ ಗೋಚರವಾಗುತ್ತಿದ್ದವು. ಏಕೆಂದರೆ ಕೊಡಗಿನಲ್ಲಿ ಕೊಡವ ಒಕ್ಕ (ಕುಟುಂಬ)ಗಳೇ ಪ್ರಧಾನ . ಐತಿಹಾಸಿಕ ಹಿನ್ನಲೆ, ತಮ್ಮದೇ ಆದ ಮಹಾಪುರುಷರು,ಆ ಮಹಾಪುರುಷರ ವಂಶಜರು ನಾವು ಎಂಬ ಅತಿಯಾದ ಹೆಮ್ಮೆ, ತಮ್ಮದೇಆದ ಹೆಸರುಗಳನ್ನು ಹೊಂದಿರುವ ಸೋದರ ಸಂಬಂಧದ ಕುಟುಂಬಗಳೇ ಕೊಡವ ಸಂಸ್ಕೃತಿಯ ಆಧಾರಸ್ತಂಭಗಳು. ಕೆಲವೊಂದು ಕುಟುಂಬಗಳು ಅತಿ ಹೆಚ್ಚಿನ ಸದಸ್ಯರನ್ನು ಹೊಂದಿದ್ದರೆಇನ್ನು ಕೆಲವು ಕಡಿಮೆ ಜನ ಸಂಖ್ಯೆಯವು. ಪ್ರತಿಯೊಂದು ಕುಟುಂಬಕ್ಕೂ ತನ್ನದೇ ಆದ ಐನ್‌ಮನೆ (ಮೂಲಮನೆ)ಗಳು ಇರುತ್ತವೆ. ಇಂತಹ ಕೊಡವ ಮನೆತನಗಳು ಒಂದು ಸಮಯದಲ್ಲಿ ಹರಿದು ಹಂಚಿಹೋಗಿದ್ದವು. ತಮ್ಮ ಪ್ರಜ್ಞೆಯನ್ನೇ ಕಳಕೊಳ್ಳುವ ಹಂತದಲ್ಲಿದ್ದುವು. ಕೊಡಗು ಬಿಟ್ಟು ಹೊರಟ ಕೊಡವರಲ್ಲಿ ಬಹುತೇಕರು ತಮ್ಮ ಕುಟುಂಬದ ಸಂಪರ್ಕವನ್ನು ಕಡಿದುಕೊಳ್ಳಲಾರಂಭಿಸಿದ್ದರು. ‘ಈ ಕುಟುಂಬಗಳಿಂದೇನು?’ ಎಂಬಂಥ ಇಂಥ ಸನ್ನಿವೇಶದಲ್ಲಿ ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಏರ್ಪಡಿಸಿದವರು ಕುಟ್ಟಪ್ಪನವರು. ಹೀಗೆ ೧೫ ವರ್ಷಗಳ ಹಿಂದೆ ಪಾಂಡಂಡ ಕುಟ್ಟಪ್ಪನವರು ತಮ್ಮದೇ ಖರ್ಚಿನಲ್ಲಿ ಪಂದ್ಯಾವಳಿಯೊಂದನ್ನು ಏರ್ಪಡಿಸಿದರು. ಮೊದಲ ಪ್ರಯತ್ನ ಹೊಸತೆಂಬಂತೆ ಕಂಡಿತಾದರೂ ಸಂಶಯಪಟ್ಟವರೇ ಹೆಚ್ಚಿದ್ದರು.
ಹೀಗೆ ಹಾಕಿ ಹಬ್ಬ ಕೊಡಗಿನಲ್ಲಿ ಆರಂಭವಾಯಿತು. ಕೊಡವರು ಹಾಕಿಯನ್ನು ಕೈಬಿಡಲಿಲ್ಲ. ಪರಿಣಾಮ ಅದೇ ವರ್ಷ ‘ಕೊಡವಹಾಕಿ ಅಕಾಡೆಮಿ’ ಅಸ್ತಿತ್ವಕ್ಕೆ ಬಂತು. ಪ್ರತಿವರ್ಷ ಕೊಡಗಿನ ಅನ್ಯಾನ್ಯ ಜಾಗಗಳಲ್ಲಿ ಒಂದೊಂದು ಕುಟುಂಬಸ್ಥರು ಪಂದ್ಯಾವಳಿ ಆಯೋಜಿಸಲು ಮುಂದೆ ಬಂದರು. ಇದೀಗ ಅಂಥ ಪಂದ್ಯಾವಳಿ ಉತ್ಸವವಾಗಿ ಮಾರ್ಪಟ್ಟು ೧೫ನೇ ವರ್ಷಕ್ಕೆ ಕಾಲಿಟ್ಟಿದೆ. ಅದಾಗಲೇ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ವಿಶ್ವದಲ್ಲಿ ಬೇರಾವ ಕ್ರೀಡೆಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಯೋಜನೆಗೊಳ್ಳುವುದಿಲ್ಲ. ಇದೇಕೆ ಇಷ್ಟೊಂದು ಯಶಸ್ವಿಯಾಯಿತೆಂದರೆ ಮೊದಲು ಅರಿವಿಗೆ ಬರುವುದೇ ಕೊಡವರು. ಅವರಿಗೆ ಹಾಕಿ ಎಂದರೆ ಕೇವಲ ಕ್ರೀಡೆಯಲ್ಲ. ಹಾಕಿ ಉತ್ಸವದಲ್ಲಿ ತಮ್ಮ ತಂಡದ ಪಂದ್ಯವೆಂದರೆ ಅದೊಂದು ಕುಟುಂಬದ ‘ಗೆಟ್ ಟು ಗೆದರ್’ನಂತೆ. ಒಂದು
ಸೌಹಾರ್ದ ಕೂಟ. ತಮ್ಮ ತಂಡಕ್ಕೆ ಆಡುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ. ಪಂದ್ಯಾವಳಿಯಲ್ಲಿ ಭಾಗವಹಿಸುವುದು ಎಂದರೆ ಒಂದು ಸಾಂಸ್ಕೃತಿಕ ಕಾರ್ಯ. ಭಾಷಣದಿಂದ,
ಪ್ರಚಾರದಿಂದ ಮಾಡುವ ಕೆಲಸ ಇಲ್ಲಿ ಆಡುವ ಮೂಲಕ ಸಾಕಾರವಾಗುತ್ತದೆ. ಹಲವು ಕುತೂಹಲಗಳಿಗೆ ಹಲವು ಅದ್ಭುತಗಳಿಗೆ ಸಾಕ್ಷಿಯಾಗಿರುವ ಹಾಕಿ ಹಬ್ಬ ಇದೀಗ ರಂಗೇರುತ್ತಿದೆ. ೨೨೮ ತಂಡಗಳು,ಸುಮಾರು ಮೂರೂವರೆ ಸಾವಿರ ಆಟಗಾರರು.೪೯ ಜನ ರಾಷ್ಟ್ರೀಯ ಮಾನ್ಯತೆಯ ತೀರ್ಪುಗಾರರು, ಇಬ್ಬರು ಅಂತಾರಾಷ್ಟ್ರೀಯ ಮಾನ್ಯತೆಯ ತೀರ್ಪುಗಾರರು. ವಿಶೇಷವೆಂದರೆ ಎಲ್ಲರೂ ಸ್ಥಳೀಯರು. ಒಂದೇ ತಂಡದಲ್ಲಿ ಒಲಂಪಿಕ್ಸ್ ಆಡಿದವರೂ ಕೃಷಿಕರೂ ಆಡುವ ಪಂದ್ಯಾವಳಿ ಉತ್ಸವವಾಗದೆ ಮತ್ತೇನು? ಒಬ್ಬ ಪ್ರೊಫೆಶನಲ್ ಅಲ್ಲದವನೊಬ್ಬನಿಗೆ ಇಂಥ ಆಡುವ ಅವಕಾಶ ಸಿಕ್ಕಿರುವುದು ಅದ್ಭುತವಲ್ಲವೇ? ಪ್ರಸ್ತುತ ನಡೆಯುತ್ತಿರುವ ಉತ್ಸವದಲ್ಲಿ ಎಲ್ಲಾ ಕ್ಷೇತ್ರದವರು ಆಡುತ್ತಿದ್ದಾರೆ.ದೊಡ್ಡ ದೊಡ್ಡ ಆಟಗಾರರು, ನಿವೃತ್ತರು, ನರ್ಸರಿ ಮಕ್ಕಳು, ಡಾಕ್ಟರುಗಳು,ಪತ್ರಕರ್ತರು, ಸಿನಿಮಾ ನಟರು, ರಾಜಕಾರಣಿಗಳು, ಕಲಾವಿದರು,ಗಾಯಕರು, ರಂಗಕರ್ಮಿಗಳು ಎಲ್ಲರೂ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದಾರೆ. ಹಾಕಿಯ ಆರಾಧನೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಮತ್ತೇನು ಬೇಕಿದೆ?
ಅಲೇಮಾಡ ಚೀಯಣ್ಣ ೨೦೦೮ರಲ್ಲಿ ನಡೆದ ಅಜ್ಞಾನ್‌ಷಾ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಿದ ಕಿರಿಯ ಆಟಗಾರ. ಆದರೂ ಕೊಡವ ಹಾಕಿ ಉತ್ಸವದಲ್ಲಿ ಆಡುವುದನ್ನು ಅವರು
ತಪ್ಪಿಸುವುದಿಲ್ಲ. ಹಲವು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಚೀಯಣ್ಣನವರನ್ನು ಮಾತಾಡಿಸಿದಾಗ “ನಾನು ಹಾಕಿ ಉತ್ಸವದಲ್ಲಿ ಆಡುವಾಗ ಉಳಿದೆಡೆಗಿಂತಲೂ ಥ್ರಿಲ್ ಆಗಿರುತ್ತೇನೆ. ಇದೊಂದು ಭಿನ್ನ ಅನುಭವ. ಮಣ್ಣಿನ ಮೈದಾನಕ್ಕೆ ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ಆಟವನ್ನು ಸಾಕಷ್ಟು ಅನುಭವಿಸುತ್ತೇನೆ. ನಾನೆಂದೂ ಇಷ್ಟೊಂದು ಜನಸಂದಣಿ ಕಾಣಲಿಲ್ಲ. ಎಲ್ಲೂ ಇಷ್ಟೊಂದು ಪ್ರೇಕ್ಷಕರು ಇರುವುದಿಲ್ಲ. ನಮ್ಮಂಥವರ ಮೇಲೆ ಜನರಿಗೆ ಹೆಚ್ಚಿನ ನಿರೀಕ್ಷೆ ಇರುವುದರಿಂದ ಸ್ವಲ್ಪ ಒತ್ತಡವೂ ಇರುತ್ತದೆ. ಅಲ್ಲದೆ ನನ್ನ ಕುಟುಂಬದ ಪರವಾಗಿ ಆಡುವುದು ಉಳಿದೆಡೆ ಆಡುವುದಕ್ಕಿಂತ ಖುಷಿ
ಕೊಡುತ್ತದೆ" ಎನ್ನುತ್ತಾರೆ. ಚೀಯಣ್ಣನವರಂತೆ ಹಾಕಿ ಉತ್ಸವಕ್ಕೆಂದೇ ಹಲವು ವಿದೇಶಿ ಆಟಗಾರರೂ ಬರುತ್ತಾರೆನ್ನುವುದು ಒಂದು ವಿಶೇಷ. ವಿದೇಶಿ ಕ್ಲಬ್‌ಗಳಲ್ಲಿ ಆಡುತ್ತಿರುವ ಆಟಗಾರರು (ಲೆನ್
ಅಯ್ಯಪ್ಪನವರಂತೆ), ವಿದೇಶಿ ರಾಷ್ಟ್ರೀಯ ತಂಡಗಳಲ್ಲಿ ಕೋಚ್ ಆಗಿಯೋ,ಪಿಸಿಯೋ ಆಗಿಯೋ ಇರುವಂಥವರು (ಕೂತಂಡ ಪೂಣಚ್ಚ) ಭಾರತೀಯ ತಂಡಕ್ಕೆ ಆಡಿದ ಹಲವು ಆಟಗಾರರು, ಹಲವು ದೇಶೀ ಕ್ಲಬ್ ಆಟಗಾರರು, ಹಲವು ಕಂಪೆನಿ ಆಟಗಾರರು,ಆರ್ಮಿ ಆಟಗಾರರು ಎಪ್ರಿಲ್ ಬಂತೆಂದರೆ ಹಾಕಿಹಬ್ಬವನ್ನು ಎದುರು ನೋಡುತ್ತಾರೆ. ಕೊಡಗಿನ ಯೋಧರು ತಮ್ಮ ರಜೆಯನ್ನು ಎಪ್ರಿಲ್, ಮೇಗೆ ಕಾದಿರಿಸಿಕೊಳ್ಳುತ್ತಾರೆ. ಒಂಥರಾ ಈ ಅವಧಿಯಲ್ಲಿ ಕೊಡಗಿನಲ್ಲಿ ಹಾಕಿ ಮೇನಿಯಾ.
ಈ ೧೫ ವರ್ಷದಲ್ಲಿ ಹಾಕಿ ಹಬ್ಬದಿಂದ ಏನೇನಾಗಿದೆ ಎಂದರೆ ಅಲ್ಲೂ ಅದ್ಭುತಗಳೇ ಗೊಚರಿಸುತ್ತದೆ. ೮೦ರ ದಶಕದ ಅನಂತರದ ಪೀಳಿಗೆಗೆ ಹಾಕಿ ಏನೆಂದು ಅರ್ಥವಾಗಿದೆ. ಒಂದಿಷ್ಟು ಜನರಿಗೆ ಉದ್ಯೋಗವಾಗಿದೆ, ಪ್ರತಿಭೆಗಳು ಹೊರಬಂದಿವೆ. ಅಟ್ಟದಲ್ಲಿದ್ದ ಸ್ಟಿಕ್‌ಗಳು ಕೆಳಬಂದಿವೆ. ತಮ್ಮ ಕುಟುಂಬಗಳ ಪರಿಚಯವಾಗಿದೆ.ಕಣ್ಣು ತೇವವಾಗಿದೆ, ಮನಸ್ಸು ಆರ್ದ್ರವಾಗಿದೆ. ಸೌಹಾರ್ದ ಮೂಡಿದೆ. ಆಂತರಿಕ ಕಲಹಗಳು ಅಂತ್ಯ ಕಂಡಿವೆ. ವ್ಯಾಜ್ಯಗಳು ನ್ಯಾಯಾಲಯದ ಹಂಗಿಲ್ಲದೆ ಕೊನೆಗೊಂಡಿವೆ. ಊರು ಬಿಟ್ಟವರು ತಮ್ಮ ಕುಟುಂಬದ ಪ್ರತಿಷ್ಠೆಗಾಗಿ ಮರಳಿ ಮಣ್ಣಿಗೆ ಬರುತ್ತಿದ್ದಾರೆ. ಒಂದು ಅದ್ಭುತ ರೂಪಕವಲ್ಲವೇ? ಜಾಗತೀಕರಣಕ್ಕೆ ಉತ್ತರವೇನು ಎಂಬ ಪ್ರಶ್ನೆಗೆ ‘ಹಾಕಿ ಉತ್ಸವ’ ಎನ್ನುವುದೂ ಒನ್ ವರ್ಡ್ ಉತ್ತರವಲ್ಲವೇ? ಒಟ್ಟಾರೆ ರೋಚಕತೆ, ರೋಮಾಂಚಕತೆ,ಚಾಕಚಕ್ಯತೆ ಪುಳಕ, ಅಗಾಧ ಜನಸಾಗರ, ಪ್ರತಿಭೆ, ಕೌಶಲ್ಯ ಮೊದಲಾದವನ್ನು ಏಕಕಾಲದಲ್ಲಿ ಒಂದೆಡೆ ನೋಡಬೇಕೆಂದರೆ ಹಾಕಿ ಹಬ್ಬಕ್ಕೆ ಬರಬೇಕು. ಪಂದ್ಯಾವಳಿ ಒಂದು ತಿಂಗಳು ಮಾತ್ರ ನಡೆಯುತ್ತದೆಯಾದರೂ ಪ್ರಕ್ರಿಯೆ ನಿರಂತರ.ತಯಾರಿ,ಸಂಪರ್ಕಗಳು ಕುಟುಂಬಗಳನ್ನು ಸದಾ ಹತ್ತಿರದಲ್ಲಿಟ್ಟಿರುತ್ತವೆ.ಈಗಾಗಲೇ ಕೊಡಗಿನ ಸಣ್ಣಪುಟ್ಟ ಪಟ್ಟಣಗಳಲ್ಲಿ ಹಾಕಿ ಕೋಚಿಂಗ್
ಸೆಂಟರ್ ಗಳು, ಹಾಕಿ ಕ್ಲಬ್‌ಗಳು, ಅಕಾಡೆಮಿಗಳು ತಲೆ ಎತ್ತಿವೆ.ಬಹುಮುಖಿಯಾಗಿ ಕಾರ್ಯೋನ್ಮುಖವಾಗಿರುವ ಅಪರೂಪದ ಸಂಗತಿಗಳಲ್ಲಿ ಹಾಕಿ ಹಬ್ಬ ಪ್ರಮುಖವಾಗಿ ಗಮನ ಸೆಳೆಯುತ್ತದೆ.ಇದೀಗ
ದಿನದಿಂದ ದಿನಕ್ಕೆ ರಂಗೇರುತ್ತಿರುವ ಕೊಡವ ಹಾಕಿ ಉತ್ಸವ ಹಲವು ಅಪರೂಪದ ಘಟನೆಗಳಿಗೂ ಸಾಕ್ಷಿಯಾಗಿವೆ. ೮೬ ವರ್ಷದ ವೃದ್ದರೂ (ಚಾಚರಣೆಯಂಡ ನಾಣಯ್ಯ), ೮ ವರ್ಷದ ಬಾಲಕಿಯರಿಬ್ಬರೂ ಆಡಿದ್ದಾರೆ (ಕೋದಂಡ ನೀಲಾ ಸೋಮಣ್ಣ), ಒಂದೇ ಮನೆಯ ೮(ಮೂಕಳಮಾಡ ತಂಡ) ಮಂದಿಯೂ ಆಡಿದ್ದಾರೆ.ಗಂಡನೊಟ್ಟಿಗೆ ಹೆಂಡತಿಯೂ,ಅಣ್ಣನೊಟ್ಟಿಗೆ ತಂಗಿಯೂ(ಮಾಣಿಪಂಡ ತಂಡ), ಅಜ್ಜ, ಅಪ್ಪ, ಮೊಮ್ಮಕ್ಕಳೂ, ಅತ್ತೆ,ಸೊಸೆಯಂದಿರೂ,ಗಂಡನ ಮನೆಯೊಟ್ಟಿಗೆ ತವರು ಮನೆಯವರೂ ಸೆಣಸಿದ ಉತ್ಸಾಹಕ್ಕೆ ಪೊನ್ನಂಪೇಟೆಯ ಎರಡು ಮೈದಾನಗಳು ಸಾಕ್ಷಿಯಾಗಿದೆ.
ಇಲ್ಲಿ ಹಾಕಿ ರಂಗೇರುತ್ತಿರುವ ಹೊತ್ತಲ್ಲಿ ಅಲ್ಲಿ ಸುರೇಶ್ ಕಲ್ಮಾಡಿಯ ಬಂಧನವಾಗಿದೆ. ಅಲ್ಲಿ ಸೇಲ್ ಆದ ಆಟಗಾರರು ಆಡುತ್ತಿದ್ದಾರೆ.ಹೊಡೆದಿರುವ ರನ್ನು,ಉರುಳಿರುವ ವಿಕೆಟುಗಳ ಲೆಕ್ಕಾಚಾರಗಳ ಚರ್ಚೆಯಾಗುತ್ತಿವೆ.ತುಂಡು ಚಡ್ಡಿಯ,ಮೋಟು ಲಂಗದ ಚೀರೋ ಹುಡುಗಿಯರ ಕುಣಿತ ನಡೆಯುತ್ತಲೇ ಇದೆ.ಇಲ್ಲಿ ಆರಾಧನೆಯ ಸಂಸ್ಕೃತಿ ಪರಂಪರೆಯನ್ನು ಉಳಿಸುತ್ತಿದೆ.ಕ್ರೀಡೆಯಲ್ಲಿ ಎರಡು ವೈರುಧ್ಯಗಳು. ಎರಡು ತುದಿಗಳಲ್ಲಿ ಎರಡು ಉತ್ತುಂಗಗಳು!ಈ ಹೊತ್ತಿನಲ್ಲಿ ಕುಟುಂಬವಾಗಿ ಆಡುವುದು ಎಲ್ಲಾ ಕ್ರೀಡೆಗಳಿಗೆ ಒಂದು ಪಾಠವಾಗಬೇಕು. ಅದು ಹೇಗೆಂಬುದನ್ನು ಕೊಡವ ಹಾಕಿ ಹಬ್ಬದಿಂದ ತಿಳಿಯಬೇಕು. ಇದೆಲ್ಲದರ ಬಗ್ಗೆ ಪಾಂಡಂಡ ಕುಟ್ಟಪ್ಪನವರನ್ನು ಕೇಳಿದರೆ ಅವರು ಹೇಳುವುದು ಒಂದೇ“ಎಲ್ಲವನ್ನೂ ನಮ್ಮ ಮನೆಯಿಂದ ಆರಂಭಿಸಿದ್ದೇವೆ" ಎಲ್ಲದಕ್ಕೂ ಒಮ್ಮೆ ಪೊನ್ನಂಪೇಟೆಗೆ ಬಂದು ನೋಡಬೇಕು.
drink coorg coffee and watch good hockey

Tuesday, May 3, 2011

ಎಂಡೋ ಎಂಬ ವಿಷಕ್ಕೆ ಪವಾರ್ ಎಂಬ ಸೀಸೆಯು

ವಿಜ್ಞಾನದ ಬಗ್ಗೆ ಯೋಚಿಸುವಾಗಲೆಲ್ಲಾ ಎರಡು ಮಜಲುಗಳು ನೆನಪಿಗೆ ಬರುತ್ತವೆ. ಅದರ ಸಾಧನೆ-ಶೋಧನೆಗಳ ಜೊತೆಗೆ ಸೃಷ್ಟಿ ವಿರೋಧಿಯಾದ ಹಲವು ಸಂಗತಿಗಳೂ ನೆನಪಿಗೆ ಬರುತ್ತವೆ. ಏಕೆಂದರೆ ವಿಜ್ಞಾನದ ತಳಪಾಯವಿರುವುದೇ ಪ್ರಯೋಗದಲ್ಲಿ. ಪ್ರಯೋಗವಿಲ್ಲದೆ ಅದಕ್ಕೆ ಅಸ್ತಿತ್ವವಿಲ್ಲ. ಸಾಧನೆಯಲ್ಲ, ಶೋಧನೆಯೂ ಇಲ್ಲ. ಇದು ವಿಜ್ಞಾನದ ಪ್ರತಿಮೆ. ವಿಜ್ಞಾನದ ಇಂಥ ಗುಣದಿಂದ ಅದನ್ನು ಹೊಗಳಬಹುದು. ತೆಗಳಬಹುದು ಮತ್ತು ನೋವುಣ್ಣಬಹುದು.‘ಕೆಟ್ಟಮೇಲೆ ಬುದ್ಧಿ ಬಂತು’ ಎಂಬ ಮಾತನ್ನು ಇತರೆಡೆಗಿಂತಲೂ ಹೆಚ್ಚಾಗಿ ವಿಜ್ಞಾನಕ್ಕೆ ಅನ್ವಯಿಸಿ ಹೇಳುವುದರ ಹಿಂದೆ ಈ ಪ್ರತಿಮೆಯಿದೆ.
ವಿಜ್ಞಾನ ಅಣ್ವಸ್ತ್ರವನ್ನು ಶೋಧಿಸಿತು. ಶೋಧನೆಯ ಆನಂತರ ಪ್ರಯೋಗಿಸದೆ ವಿಧಿ ಇರಲಿಲ್ಲ. ಪ್ರಯೋಗಿಸಿ ಅನಾಹುತವನ್ನು ದೃಢಪಡಿಸಿಕೊಂಡಿತು. ಒಂದು ನಾಗಸಾಕಿಯ ಪರಿಣಾಮ ಅಣ್ವಸ್ತ್ರ ನಿಷೇಧಕ್ಕೆ ಸಾಕಾಯಿತು. ಜಗತ್ತು ಪಾಠ ಕಲಿಯಿತು. ಅಣುವಿನಿಂದ ಶಕ್ತಿ ತಯಾರಿಸಿತು. ಶಕ್ತಿಯೇನೋ ಸಂಚಯವಾಯಿತು. ಉಳಿದಿದ್ದ ತ್ಯಾಜ್ಯಗಳದ್ದೇ ತಲೆಬಿಸಿಯಾಯಿತು. ಒಂದೆಡೆ ಗುಂಡಿ ತೋಡಿ ಹೂತು ‘ಅಗೆಯದಿರಿ’ ಎಂದು ಫಲಕ ಹಾಕಿತು. ಭೂಪಾಲದ ಅನಿಲವೇ ವಿಷಯವಾಯಿತು. ಅದರ ಪರಿಣಾಮ ಇಂದೂ ನಿಂತಿಲ್ಲ. ಹೀಗೆ ವಿಜ್ಞಾನ ಮಾಡಿಕೊಂಡ ಅನಾಹುತಗಳು ತಡವಾಗಿ ಯಾದರೂ ಅರಿವಿಗೆ ಬಂದವು. ತಡವಾಗಿಯಾದರೂ ಜಗತ್ತು ತಿದ್ದಿಕೊಂಡಿತು. ಮಾನವ ಕುಲಕ್ಕೆ ಕಂಟಕವಾಗುವ ಯಾವ ಸಂಗತಿಯನ್ನೂ ಜಗತ್ತು ಒಪ್ಪುವುದಿಲ್ಲ ಎಂಬುದನ್ನು ಆಗಾಗ್ಗೆ ಜಗತ್ತು ಸಾರಿ ಹೇಳಿದೆ. ಹಲವು ಸಿದ್ಧಾಂತಗಳಿಗೆ, ಅನ್ಯಾನ್ಯ ಸರಕಾರಗಳಿಗೆ ಸೃಷ್ಟಿನಾಶಕದ ಎಚ್ಚರಿಕೆ ಮೂಡಿದೆ.
ಹೀಗೆ ಅಂದುಕೊಂಡರೆ ಅದು ಜಗತ್ತಿನ ಮಟ್ಟಿಗೆ ಸರಿ ಮತ್ತು ಭಾರತದ ಮಟ್ಟಿಗೆ ತಪ್ಪು. ಏಕೆಂದರೆ ಎಂಡೋಸಲ್ಫಾನ್ ಇದೆಯಲ್ಲಾ. ಮಾನವ ಕಂಟಕವಷ್ಟೇ ಅಲ್ಲದೆ, ಸಕಲ ಜೀವಕೋಟಿಗೆ ಕಂಟಕವೂ, ಅಮಾನುಷವೂ ಆದ ಎಂಡೋ ಎಂಬ ವಿಷಕ್ಕೆ ಇನ್ನೂ ನಿಷೇಧದ ಭಾಗ್ಯ ಬಂದಿಲ್ಲ. ವಿಷವೊಂದನ್ನು ನಿಷೇಧಿಸಬಾರದು ಎಂದ ಮೇಲೆ ಇನ್ನು ದೇಶದಲ್ಲಿ ಏನು ತಾನೆ ನಿಷೇಧವಾಗಬಹುದು? ಕರ್ನಾಟಕ ಮತ್ತು ಕೇರಳ ಭಾಗಗಳಲ್ಲಿ ಒಂದು ಲೋಕವನ್ನೇ ಸೃಷ್ಟಿ ಮಾಡಿರುವ ಎಂಡೋಸಲ್ಫಾನ್ ನಿಷೇಧವಾಗಬಾರದು ಎಂದರೆ ಇನ್ನು ದೇಶದಲ್ಲಿ ನಿಷೇಧ ಮಾಡುವ ಯಾವುದೂ ಇರುವುದಿಲ್ಲ ಎನ್ನುವುದೇ ಸರಿ. ಗೇರು ಗಿಡಗಳಿಗೆ ಸಿಂಪಡಿಸಿದ ಕೀಟನಾಶಕ ಬದುಕನ್ನೇ ಬಾಡಿಸಿದ ಘಟನೆಗಳು ಇಂದು ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಮಾನವ ಶಾಸ್ತ್ರಾಧ್ಯಯನಕ್ಕೆ ಅದು ಒಂದು ಸವಾಲಾಗಿ ನಿಂತಿದೆ. ನಾಗಾಸಾಕಿಯ ಪೀಳಿಗೆಯ ಬಗ್ಗೆ ಎಲ್ಲೋ ಕೇಳುವ ಓದುವ ನಾವು ಬಗಲಲ್ಲೇ ಇರುವ ಎಂಡೋಸಲ್ಫಾನ್ ಪೀಡಿತರ ಲೋಕವನ್ನು ಅರಿಯಲಾಗದೇ ಹೋಗುತ್ತೇವೆ. ಏಕೆಂದರೆ ಎಂಡೋ ಸಲ್ಫಾನ್ ನಿಷೇಧವಾಗಿಲ್ಲ. ನೇರವಾಗಿ ಮನುಷ್ಯನ ಜೀವಕೋಶಕ್ಕೇ ಕೈಹಾಕುವ ಈ ವಿಷ ಅದೆಷ್ಟು ಕಂಟಕವಾಗಿರಬಹುದು? ಕರ್ನಾಟಕದ ದ.ಕ. ಜಿಲ್ಲೆಯ ಕೆಲವು ಊರುಗಳು ಮತ್ತು ಕಾಸರಗೋಡು ಭಾಗದ ಕೆಲವು ಊರುಗಳ ಪರಿಸ್ಥಿತಿಯನ್ನು ನೋಡಿದರೆ ಅದರ ತೀವ್ರತೆಯ ಅರಿವಾಗುತ್ತದೆ. ಇಲ್ಲಿ ಕಾಣುವ ಕೆಲವು ದೇಹಗಳು ಭೂಮಿಯವಲ್ಲ ಎನ್ನುವಷ್ಟು ಭೀಕರವಾಗಿವೆ. ಗಂಭೀರವಾಗಿದೆ. ಆದರೂ ಎಂಡೋ ನಿಷೇಧವಾಗುವುದಿಲ್ಲ. ಇತ್ತೀಚೆಗೆ ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜು ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಎಂಡೋಸಲ್ಫಾನ್ ನಿಂದ ಕೇರಳವೊಂದರಲ್ಲೇ ೫೦೦ ಜನರು ಮೃತರಾಗಿದ್ದಾರೆ. ೫೦೦೦ದಷ್ಟು ಪ್ರಕರಣಗಳು ಅತಿ ಗಂಭೀರವಾಗಿದೆ. ಆ ಗಂಭೀರ ಪ್ರಕರಣಗಳಾದರೂ ಹೇಗಿವೆಯೆಂದರೆ ಈ ಜೀವಿಗಳನ್ನು ಹೆತ್ತವರು ಮನುಷ್ಯರು ಎಂಬ ಒಂದೇ ಒಂದು ಆಧಾರದಲ್ಲಿ ಮನುಷ್ಯರು ಎಂದು ಗುರುತುಹಿಡಿಯುವಷ್ಟು ಅಮಾನುಷತೆ ಕಂಡುಬರುತ್ತದೆ. ಇಲ್ಲಿನ ಮೈ ಕೈ ಗಟ್ಟಿ ಇದ್ದವರನ್ನೂ ಆರೋಗ್ಯವಂತ ಎನ್ನುವಂತಿಲ್ಲ . ಏಕೆಂದರೆ ಈ ಭಾಗದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ರೋಗಗಳು ಜನ್ಮದತ್ತವೇ. ಹೃದ್ರೋಗ, ಹರ್ನಿಯಾ, ಮೂತ್ರ ಸಂಬಂಧಿ ರೋಗಗಳು, ಚರ್ಮರೋಗಗಳು, ಸಂತಾನಹೀನತೆಗಳು ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಆದರೂ ಅಂಥ ವಿಷ ಇನ್ನೂ ತಯಾರಾಗುತ್ತಾ ಇದೆ. ವಿಚಿತ್ರ ಎಂದರೆ ಜೀವಕೋಟಿಗೆ ಕಂಟಕವಾಗುವ ಎಲ್ಲಾ ಅಂಶಗಳಿದ್ದರೂ, ವಿಶ್ವಸಂಸ್ಥೆಯ ಕಾನೂನು ಯಾವುದನ್ನು ನಿಷೇಧಿತ ಸರಕು ಎಂದು ಪಟ್ಟಿ ಮಾಡಿದೆಯೋ ಆ ಎಲ್ಲಾ ಅರ್ಹತೆಗಳೂ ಎಂಡೋಸಲ್ಫಾನಿಗಿದೆ. ಆದರೂ ಎಂಡೋಸಲ್ಫಾನ್ ನಿಷೇಧವಾಗುವುದಿಲ್ಲ. ಪಾಶ್ಚಾತ್ಯ ರಾಷ್ಟ್ರಗಳ ಸರಕಾರಗಳು ಕೊಂಚ ಸಂವೇದನಾಶೀಲವೆನಿಸುತ್ತದೆ. ಏಕೆಂದರೆ ಈಗಾಗಲೇ ೮೧ ರಾಷ್ಟ್ರಗಳು ಎಂಡೋ ಸಲ್ಫಾನ್ ಅನ್ನು ನಿಷೇಧಿಸಿವೆ. ಇನ್ನು ಕೆಲವು ದೇಶಗಳು ಕೆಲವೇ ದಿನಗಳಲ್ಲಿ ನಿಷೇಧ ಮಾಡಲಿವೆ. ಏಕೆಂದರೆ ಅವರೆಲ್ಲರಿಗೂ ಎಂಡೋಸಲ್ಫಾನ್ ವಿಷವೆಂದು ಅರಿವಿದೆ. ಆದರೆ ಭಾರತದ ಆಡಳಿತ ಅಷ್ಟು ಸಂವೇದನಾಶೀಲವಲ್ಲ ಮತ್ತು ಮಾನವೀಯವೂ ಅಲ್ಲ.ಇಂದು ಭಾರತ ವಿಶ್ವದ ಶೇ. ೭೦ರಷ್ಟು ಎಂಡೋಸಲ್ಫಾನ್ ಅನ್ನು ಉತ್ಪಾದನೆ ಮಾಡುತ್ತಿದೆ. ಅಕ್ಕಿ,ಗೋಧಿಯಂತೆ ಎಂಡೋಸಲ್ಫಾನ್ ಕೂಡ ಭಾರತದಲ್ಲಿ ಒಂದು ಪ್ರಮುಖ ರಫ್ತಿನ ಸರಕು. ಒಳ್ಳೆಯದೆಲ್ಲವೂ ಇಲ್ಲಿಗೆ ಹರಿದುಬರಬೇಕು ಮತ್ತು ಉತ್ತಮವಾದುದನ್ನೇ ಭಾರತ ಜಗತ್ತಿಗೆ ಕೊಡುತ್ತದೆ ಎಂಬ ಪರಂಪರೆಯ ದೇಶದಿಂದ ರಫ್ತಾಗುವುದು ಮಾತ್ರ ಭಯಂಕರ ಹಾಲಾಹಲ ಎಂಬುದು ಒಂದು ಕಠೋರ ವಾಸ್ತವ. ಈ ವಿಷಯದಲ್ಲಿ ಭಾರತವೆಷ್ಟು ನೀಚನತದಿಂದ ವರ್ತೀಸುತ್ತಿದೆಯೆಂದರೆ ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹಗಳು ಹೆಚ್ಚುತ್ತಿರುವಂತೆಯೇ ಅದಕ್ಕೆ ಸಮರ್ಥನೆಯನ್ನೂ ಕೊಟ್ಟುಕೊಳ್ಳುತ್ತದೆ. ಜೀವಕಂಟಕ ವಿಷವನ್ನು ಸಮರ್ಥಿಸಿಕೊಂಡು ಭಯೋತ್ಪಾದನೆಯನ್ನು ವಿರೋಧಿಸುವ ಇಬ್ಬಂದಿತನದ ಮಾನಸಿಕತೆ ನಮ್ಮ ಆಡಳಿತದವರದ್ದು. ಜೀವಕೋಟಿಯನ್ನು ಪೂಜಿಸುವ ಪರಂಪರೆಯ ನೆಲದಲ್ಲಿ ವಿಷಪ್ರಿಯಮಾನಸಿಕತೆಯವರುಪ್ರಭುಗಳಾಗಿದ್ದಾರೆ.ಇದಕ್ಕೇನನ್ನಬೇಕು?ಎಂಡೋಸಲ್ಫಾನ್ ಮಾಡಿದ ಪರಿಣಾಮಗಳು ನಿಚ್ಚಳವಾಗಿದೆ ಮತ್ತು ಅವು ಪ್ರತ್ಯಕ್ಷವಾಗಿ ಕಣ್ಣಿಗೂ ರಾಚುತ್ತವೆ. ಆದರೂ ಸಮರ್ಥನೆ ಹೇಗೆ ಸಾಧ್ಯವಾಗುತ್ತದೆ? ಬೇರಾವುದೇ ದೇಶದಲ್ಲಿ ಒಂದು ಕೀಟನಾಶಕ ನಿಗದಿತ ಉದ್ದೇಶಕ್ಕಿಂತ ಹೊರತಾಗಿ ಮೀನೋ, ಕಪ್ಪೆಯೋ, ಯಾವುದಾದರೂ ಒಂದು ಕೀಟಕ್ಕೋ ಕಂಟಕ ಎಂದು ಕಂಡುಬಂದೊಡನೆ ನಿಷೇಧವಾಗುತ್ತದೆ. ಆದರೆ ಭಾರತದಲ್ಲಿ ಸರದಿಯ ಪ್ರಕಾರ ಮನುಷ್ಯರೇ ಸಾಯುತ್ತಿದ್ದರೂ ಏನೂ ಆಗುವುದಿಲ್ಲವಲ್ಲಾ ಏಕೆ?
ಏಕೆಂದರೆ ಶರದ್ ಪವಾರ್ ಎಂಬ ಕೃಷಿರೂಪಿ ಕ್ರಿಕೆಟ್ ಸಚಿವರಿದ್ದಾರಲ್ಲಾ .ಲೋಕ ಮುಳುಗಿ ಹೋದರೂ ಪವಾರ್ ಅದಕ್ಕೆ ತನ್ನದೇ ಆದ ಕಾರಣಗಳನ್ನು ಕೊಡಬಲ್ಲರು. ರೈತ ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕೂ ಕೃಷಿ ಸಚಿವನಿಗೂ ಸಂಬಂಧವಿಲ್ಲವೆಂದು ಪವಾರ್ ವಾದಿಸಬಲ್ಲರು. ಅಂಥ ಕೃಷಿ ಸಚಿವ ಶರದ್ ಪವಾರ್ ಎಂಡೋ ನಿಷೇಧಕ್ಕೆ ವಿರೋಧಿಸುವ ಭಾರತದ ಪ್ರಮುಖ ಕೈ. ಪವಾರರ ಹಿಡಿತಕ್ಕೊಳಪಟ್ಟ ಸಜ್ಜನ ಜೈರಾಮ್ ರಮೇಶ್ ಮತ್ತು ಪ್ರಧಾನಿಗಳೂ ಶರದ್ ಪವಾರರ ಆಲಾಪಕ್ಕೆ ಹಿನ್ನಲೆ ಸಂಗೀತ ಒದಗಿಸಿಬಿಡುತ್ತಾರೆ. ಪವಾರರ ನಿಷೇಧಕ್ಕೆ ವಿರೋಧ ಮತ್ತು ಸಮರ್ಥನೆಯ ಹಿನ್ನೆಲೆಯ ಜಾಡು ಹಿಡಿದು ಹೊರಟಾಗ ಹಲವು ಸಂಗತಿಗಳು ಎದುರಾಗುತ್ತವೆ. ಅಂದರೆ ವಿಶ್ವದ ಅತಿ ಹೆಚ್ಚು ವಿಷ ಉತ್ಪಾದನೆಯಾಗುವ ಭಾರತದಲ್ಲಿ ಎಂಡೋಸಲ್ಫಾನ್ ಅನ್ನು ಉಛ್ಝಿ ಟm Zಛಿ, ಏಜ್ಞಿboಠಿZ ಜ್ಞಿoಛ್ಚಿಠಿಜ್ಚಿಜ್ಚಿಜಿbo ಠಿb. ಮತ್ತು ಕೋರೋಮಂಡಲ್ ಫರ್ಟಿಲೈಸರ್‍ಸ್ ಎಂಬ ಮೂರು ಸರಕಾರಿ ಸ್ವಾಮ್ಯದ ಕಂಪೆನಿಗಳು ಉತ್ಪಾದನೆ ಮಾಡುತ್ತವೆ. ಇವು ಮೂರೂ ಸೇರಿ ವಾರ್ಷಿಕವಾಗಿ ೪೫೦೦ ಮೆ.ಟನ್‌ಗಳಷ್ಟು ಎಂಡೋಸಲ್ಫಾನ್ ಅನ್ನು ತಯಾರಿಸುತ್ತವೆ ಮತ್ತು ವಾರ್ಷಿಕ ೪೦೦೦ ಟನ್‌ಗಳಷ್ಟನ್ನು ರಫ್ತು ಮಾಡುತ್ತವೆ. ಆಂದರೆ ವಿಷ ತಯಾರಿಕಾ ಕಾರ್ಖಾನೆಗಳು ಬಾರಿ ಬಂಡವಾಳ ಹೊಂದಿರುವ ಶ್ರೀಮಂತ ಕಂಪೆನಿಗಳು. ಶರದ್ ಪವಾರರ ಒಂದು ನಿಲುವು ಆ ಕಂಪೆನಿಗಳ ಪಾಲಿನ ಅಸ್ತಿತ್ವದ ಪ್ರಶ್ನೆಯಾಗಲಿದೆ. ಹಾಗಾಗಿ ಪವಾರರನ್ನು ಬೆಚ್ಚಗೆ ಇಟ್ಟುಕೊಂಡಷ್ಟೂ ಕಂಪೆನಿಗಳು ದೈತ್ಯವಾಗುತ್ತಾ ಹೋಗುತ್ತವೆ. ಪವಾರ್ ದಿನದೂಡಿದಷ್ಟೂ ಅವರೂ ಬೆಳೆಯುತ್ತಾ ಸಾಗುತ್ತಾರೆ. ಅಷ್ಟರಲ್ಲಿ ಪವಾರರಿಗೂ ಕ್ರಿಕೆಟಿಗೆ ಹಣ ಒದಗಿಸಿಕೊಳ್ಳಬಹುದು. ಐಪಿಎಲ್‌ನ ಇನ್ನೊಂದೆರಡು ಆವೃತ್ತಿಗಳನ್ನು ಸುಲಭವಾಗಿ ನಡೆಸಬಹುದು. ಇನ್ನೆಲ್ಲಿಗೋ ಕೈ ತೂರಿಸಬಹುದು. ಒಟ್ಟು ತನ್ನ ಪವರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ತನ್ನ ಸದ್ಯದ ಪವರನ್ನು ಬಳಸಿಕೊಳ್ಳಬೇಕಷ್ಟೆ.ಪವಾರ್ ಇವಿಷ್ಟನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಇನ್ನು ಕಾಸರಗೋಡಿನ ಸ್ವರ್ಗ(ಎಂಡೋಸಲ್ಫಾನ್ ಪೀಡಿತ ಒಂದು ಗ್ರಾಮದ ಹೆಸರು) ನರಕವಾದರೇನು? ಕರ್ನಾಟಕದ ಕೊಕ್ಕಡ ಮುರುಟಿ ಹೋದರೇನು? ಅದಕ್ಕೆ ಅವರ ಬಾಯಿಂದ ಪುಂಖಾನುಪುಂಖವಾಗಿ ಸಮರ್ಥನೆಗಳ ಸರಮಾಲೆಗಳು ಬರುತ್ತಿರುತ್ತವೆ. ಅದಕ್ಕೆ ಜೈರಾಮ್ ರಮೇಶ್‌ರಂಥವರೂ ತಲೆದೂಗುತ್ತಾರೆ ಎಂಡೋಸಲ್ಫಾನನ್ನು ಸಮರ್ಥಿಸುವ ಮೂಲಕ ಜೈರಾಮ್ ರಮೇಶ್ ತನ್ನ ಸಜ್ಜನಿಕೆಗೆ ವಿಷಪ್ರಾಶನ ಮಾಡಿದ್ದ್ದಾರೆ ಎಂದೇ ಹೇಳಬೇಕು. ಅರಣ್ಯ ಪ್ರೇಮ, ಬಿಟಿಯನ್ನು ಸಮರ್ಥವಾಗಿ ನಿಭಾಯಿಸಿದ ಅವರ ಛಾತಿ ಎಂಡೋ ಎಂಬ ವಿಷದಡಿಯಲ್ಲಿ ಮಣ್ಣುಪಾಲಾಗಿ ಹೋಯಿತು. ಹಾಗಾಗಿ ಪ್ರಧಾನಿ, ಪವಾರ್ ಮತ್ತು ಜೈರಾಮ್ ಎಲ್ಲರೂ ಒಂದೇ ತರಹದ ವ್ಯಕ್ತಿತ್ವಗಳಂತೆ ಕಂಡುಬರುತ್ತಾರೆ. ಪುರಾಣ ಕಾಲದ ನರಹಂತಕ ರಾಕ್ಷಸರನ್ನು ನೆನಪಿಗೆ ತರುತ್ತಾರೆ.
ಹನ್ನೊಂದು ವರ್ಷದೊಳಗೆ ಹಂತಹಂತವಾಗಿ ಎಂಡೋ ಸಲ್ಫಾನ್ ನಿಷೇಧ ಮಾಡಲಾಗುವುದು ಎಂಬ ಸದ್ಯದ ಪ್ರಹಸನ ಪವಾರರ ಮತ್ತೊಂದು ತಂತ್ರವಲ್ಲದೆ ಬೇರೇನೂ ಅಲ್ಲ. ಒಂದು ವೇಳೆ ಮಾನವೀಯ ಪ್ರೇಮ ಪವಾರ್‌ಗೆ ಇದ್ದಿದ್ದೇ ಆಗಿದ್ದರೆ ೧೧ ವರ್ಷದ ಕಾಲಾವಕಾಶ ಏಕೆ ಬೇಕಿತ್ತು? ಹಂತಹಂತ ಎಂದರೇನು? ಅಂತಾರಾಷ್ಟ್ರೀಯ ಒತ್ತಡಕ್ಕೆ ಬಿದ್ದ ಪವಾರ್‌ರ ಈ ಹೇಳಿಕೆ ಐಪಿಎಲ್ ಬಿಡ್‌ನಷ್ಟೇ ಕುತೂಹಲಕರ. ತಾನು ಜೀವಂತ ವಿರುವವರೆಗೆ ಎಂಡೋ ನಿಷೇಧ ಸಾಧ್ಯವಿಲ್ಲವೆನ್ನುವ ಪ್ರಚ್ಛನ್ನವಾದ ಮಾತನ್ನು ಅವರು ಆಡಿದ್ದಾರೆ. ಇಲ್ಲದಿದ್ದರೇನು? ಇನ್ನೂ ಹನ್ನೊಂದು ವರ್ಷ. ಅದೂ ಹಂತಹಂತವಾಗಿ. ಅಂದರೆ ದಿನದೂಡುವ ತಂತ್ರವಲ್ಲವೇನು? ಅಷ್ಟರೊಳಗೆ ಪರ್ಯಾಯದ ತಯಾರಿ ನಡೆಯುವುದಂತೆ.ಅಂದರೆ ಮತ್ತೊಂದು ಹೆಸರಿನ ವಿಷ ಮಾರುಕಟ್ಟೆಗೆ ಬರುವುದು, ಜನರು ಕೊರಡಾಗುವರು, ಹಾರ್ಮೋನುಗಳು ವ್ಯತ್ಯಾಸವಾಗುವುದು,ಇನ್ನೂ ಅಷ್ಟು ಅಂಗವಿಕಲ ಪೀಳಿಗೆಗಳು ಹುಟ್ಟುವುದು,ಸದ್ಯದ ಸ್ಥಿತಿ ಯಥಾವತ್ತು ಮುಂದುವರಿಯುವುದು.ವಿಕೇಟು, ರನ್ನುಗಳ ಲೆಕ್ಕಾಚಾರದ ಪವಾರರಿಗೆ ಇಂಥ ತಂತ್ರವನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಹಗರಣಗಳ ಸರದಾರ, ಕ್ರಿಕೆಟ್ ಮಂತ್ರಿ ಪವಾರ್ ಒಮ್ಮೆ ಸದನದಲ್ಲೂ ಇದೇ ರೀತಿ ಬಡಬಡಿಸಿದ್ದರು.
ಕಳೆದ ಫೆಬ್ರವರಿ ೨೨ರಂದು ಲೋಕಸಭೆಯಲ್ಲಿ ಮಾತನಾಡುತ್ತಾ ಪವಾರ್ ಎಂಡೋಸಲ್ಫಾನ್ ನಿಷೇಧಕ್ಕೆ ತಾಂತ್ರಿಕ ಅಡಚಣೆಗಳಿವೆ. ಹಲವು ರಾಜ್ಯಗಳು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದಿದ್ದರು. ಆದರೆ ಪತ್ರಕರ್ತನೊಬ್ಬ ಈ ಹೇಳಿಕೆಯ ಜಾಡು ಹಿಡಿದು ಹೊರಟಾಗ ಗೋಚರಿಸಿದ್ದೇ ಬೇರೊಂದು ಸಂಗತಿ. ಅಂದರೆ ಯಾವ ರಾಜ್ಯವೂ ಎಂಡೋಸಲ್ಫಾನ್ ನಿಷೇಧಕ್ಕೆ ವಿರೋಧ ಸೂಚಿಸಿರಲಿಲ್ಲ .ಕೃಷಿ ಇಲಾಖೆಗೆ ನಿಷೇಧಕ್ಕೆ ವಿರೋಧ ಸೂಚಿಸಿ ಕೇವಲ ೬ ಪತ್ರಗಳು ಬಂದಿದ್ದವಷ್ಟೆ. ಆ ೬ ಪತ್ರಗಳಲ್ಲಿ ಮೂರು ಪತ್ರಗಳು ಎಂಡೋಸಲ್ಫಾನ್ ತಯಾರಿಕಾ ಕಾರ್ಖಾನೆಗಳವು ಮತ್ತು ಇತರ ಮೂರು ಶರದ್‌ಪವಾರ್ ಪ್ರಾಯೋಜಿತ ರೈತ ಮತ್ತು ವ್ಯಾಪಾರಿಗಳ ಒಕ್ಕೂಟಗಳವು. ಆದರೆ ಕೇಂದ್ರ ಸರಕಾರಕ್ಕೆ ವಿಷ ನಿಷೇಧವಾಗಬೇಕೆಂದು ಬಯಸಿ ೩೦೦೦ ಪತ್ರಗಳು ಬಂದಿದ್ದವು. ಆದರೆ ಪವಾರ್ ಈ ಪತ್ರಗಳ ಬಗ್ಗೆ ಚಕಾರವೆತ್ತಿರಲಿಲ್ಲ. ಬದಲು ಸದನವನ್ನು ತಪ್ಪುದಾರಿಗೆಳೆದಿದ್ದರು. ದುರ್ಬಳಕೆ ಮಾಡಿಕೊಂಡಿದ್ದರು. ಕ್ರಿಕೆಟಿನ ನೋಬಾಲ್ ನಂತರದ ಪವರ್ ಪ್ಲೇಯಂತೆ ಯದ್ವಾತದ್ವ ನಾಲಿಗೆ ಹರಿಸಿದ್ದರು.ಅಂಥವರು ಇಂದು ಹನ್ನೊಂದು ವರ್ಷಗಳ ಕಾಲಾವಧಿಯ ಮಾತಾಡಿದ್ದಾರೆ. ಪರ್ಯಾಯದ ಪ್ರಸ್ತಾಪವನ್ನೂ ಮಾಡಿದ್ದಾರೆ. ಪರ್ಯಾಯವೇಕೆ? ವಿಷ ವಿಷವೇ. ನಿಷೇಧದ ಪ್ರಶ್ನೆಯಿರುವುದು ಸ್ವದೇಶಿ ವಿಷ ಅಥವಾ ವಿದೇಶಿ ವಿಷ ಅಥವಾ ಬ್ರಾಂಡಿನ ಸಂಗತಿಯಲ್ಲ್ಲಲ್ಲ.ಮಾನವ ಕಂಟಕವಾದುದ್ದು ನಿಷಧವಾಗಬೇಕೆಂಬುದು ಆಗ್ರಹ.ಆದರೆ ಪವಾರ್ ಮತ್ತೊಂದು ವಿಧದ ವಿಷಪ್ರಾಶನದ ಮಾತಾಡುತ್ತಾರೆ.ಇದನ್ನೆಲ್ಲಾ ನೋಡಿದರೆ ಪವಾರ್ ಎಲ್ಲೋ ನುಸುಳಲು ಯತ್ನಿಸುತ್ತಿರುವುದು ಗೊತ್ತಾಗುತ್ತದೆ. ಸಾಕ್ಷಾತ್ ಕೃಷಿ ಸಚಿವರಾಗಿರುವ ಪವಾರ್‌ಗೆ ವಿಷ ಹಾಕದೆ ಬೆಳೆ ತೆಗೆಸಲು ಗೊತ್ತಿಲ್ಲವೇ? ಹಾಗಾದರೆ ಬಜೆಟ್‌ನಲ್ಲಿ ಸಾವಯವ ಎಂದು ಬೊಬ್ಬೆ ಹಾಕಿದ್ದೇಕೆ? ಸಾವಯವ ಇದ್ದಮೇಲೆ ವಿಷವೇಕೆ? ಹೀಗೆ ನೂರಾರು ಪ್ರಶ್ನೆಗಳು ಮುತ್ತಿಕೊಳ್ಳುತ್ತವೆ. ಅಲ್ಲದೆ ಎಂಡೋಸಲ್ಫಾನ್‌ನಿಂದ ಅನಾಹುತಗಳಾದ ನಿದರ್ಶನಗಳಿಲ್ಲವೆಂದು ಇವರೆಲ್ಲಾ ಯಾವ ಬಾಯಲ್ಲಿ ಹೇಳುತ್ತಾರೆ? ಅಷ್ಟೊಂದು ಸಂಶೋಧನೆಗಳು, ವರದಿಗಳು, ಮಾಧ್ಯಮಗಳ ಸುದ್ದಿಗಳು ಸುಳ್ಳು ಎಂಬ ಅಭಿಪ್ರಾಯವೇ?
ಅದನ್ನು ಪ್ರಮಾಣೀಕರಿಸಲು ಕೊನೆಗೆ ಒಂದು ದಾರಿಯಿದೆ . ಪವಾರರನ್ನು ದಕ್ಷಿಣಕ್ಕೆ ಕರೆತಂದು ಅಂಗಾತ ಮಲಗಿಸಿ ಎಂಡೋಸಲ್ಫಾನ್ ಸಿಂಪಡಿಸುವುದು. ಅನಂತರ ಅವರ ಹಾರ್ಮೋನನ್ನು ಪರೀಕ್ಷಿಸುವುದು. ಆಗಲಾದರೂ ಪವಾರರು ತಕ್ಷಣದ ನಿಷೇಧಕ್ಕೆ ಮನಸ್ಸು ಮಾಡಬಹುದು.

Monday, May 2, 2011

ನಾಯಕ:ಸಮಾಜ ರಥ ಚಾಲಕ

ನಾಯಕರುಹೇಗಿರುತ್ತಾರೆ? ನಾಯಕತ್ವ ಹೇಗೆ ರೂಪು ಪಡೆಯುತ್ತದೆ ಎಂಬ ಎರಡು ಪ್ರಶ್ನೆಗಳು ಅವುಗಳ ಗುಣಮಟ್ಟ ಮತ್ತು ಕಾರ್ಯವೈಖರಿಯ ಉತ್ತರಗಳೂ ಹೌದು. ಈ ಹಿನ್ನೆಲೆಯಲ್ಲಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಎಂಥೆಂಥವರೋ ನಾಯಕ ಗಣವನ್ನು ಕಂಡ ದೇಶ ಇದು. ಅಲ್ಲೇ ಇಂದು ಎಂಥೆಂಥದ್ದೋ ವಿಪರ್ಯಾಸಗಳನ್ನು ದೇಶ ನೋಡುತ್ತಿದೆ. ಅದೂ ನಾಯಕರ ಮುಖಾಂತರ. ಆ ಕಾರಣಕ್ಕೆ ನಾಯಕತ್ವವನ್ನು ಪರಿಚರ್ಚಿಸಲು ಇದು ಸೂಕ್ತ ಸಮಯ.
ಸಮಾಜವೊಂದು ಬೃಹತ್ ಶಕ್ತಿ. ಅದೊಂದು ಸಮೂಹ. ಸಮೂಹವೊಂದು ತನ್ನಿಂದ ತಾನೇ ಚಲಿಸಲಾರದು. ಚಲನೆಗೊಳಪಡಿಸಲು ಒಂದು ಗುರಿ ಇರಬೇಕು. ಅದಕ್ಕೊಬ್ಬ ಗುರಿಕಾರ ಇರಬೇಕು. ಹಾಗಾಗಿ ಸಮಾಜರಥದ ಸಾರಥಿಯಾಗಿ ನಾಯಕನನ್ನು ಒಪ್ಪಿಕೊಳ್ಳುವ ಪರಂಪರೆ ಬಹುತೇಕ ಎಲ್ಲಾ ಸಮಾಜದ್ದು. ಆದರೆ ಕಾಲದ ಭರದಲ್ಲಿ ವಿಕೃತಿಗೊಳ್ಳದೆ ಇದ್ದುದ್ದು ಯಾವುದಿದೆ? ಕಾಲದ ಭರದಲ್ಲಿ ನಾಯಕನೂ ಅರ್ಥ ಪಲ್ಲಟಗೊಂಡ. ಕಂಡೆಕ್ಟರನು ಕುಡಿದಿದ್ದರೆ ಸಹಿಸಿಕೊಳ್ಳಬಹುದಿತ್ತೇನೋ.ಆದರೆ ಇಲ್ಲಿ ಡ್ರೈವರನಿಗೇ ಅಮಲೇರಿತ್ತು.ಪರಿಣಾಮ ಸಮಾಜವೂ ದಿಕ್ಕು ತಪ್ಪಿತು. ಹೀಗೆ ಅನಿವಾರ್ಯತೆಗಾಗಿ ಅಸಂಬಂಧವೆನಿಸಿದವುಗಳೆಲ್ಲವೂ ನಾಯಕನ ಬಿಂಬದಲ್ಲಿ ಸಮಾಜರಥದ ಸಾರಥಿಗಳಾದರು.
ಕೆಲವು ಸಂದರ್ಭಗಳು ಉತ್ತಮ ನಾಯಕನನ್ನು ರೂಪಿಸಿದವು. ಆಕ್ರಮಣವನ್ನು ಅಟ್ಟುವ ಬಲ ಮತ್ತು ಇಚ್ಛಾ ಶಕ್ತಿಗಳೇ ಒಂದು ಕಾಲದ ನಾಯಕರ ಗುರಿ ಮತ್ತು ನಾಯಕತ್ವದ ಮಾನದಂಡವೂ ಆಗಿತ್ತು.ಒಂದರ್ಥದಲ್ಲಿ ಹೇಳಬೇಕೆಂದರೆ ಪರಕೀಯ ಆಳ್ವಿಕೆಯಲ್ಲಿ, ನಿರಂಕುಶತೆಯಡಿಯಲ್ಲಿ ಹೊರಬಂದ ನಾಯಕರು ಅತಿ ಹೆಚ್ಚು ಇಚ್ಛಾ ಶಕ್ತಿಯನ್ನ್ನೂ ಕಾಳಜಿಯನ್ನೂ ಹೊಂದಿರುವುದೂ ಗಮನ ಸೆಳೆಯುತ್ತದೆ. ಅಂಥ ಬಹಳಷ್ಟು ಮಹಾಪುರುಷರನ್ನು ದೇಶ ಕಂಡಿದೆ. ಗ್ರೀಕರ ವಿರುದ್ಧ ಎದ್ದ ನಾಯಕತ್ವ, ಸಾಮ್ರಾಜ್ಯಗಳನ್ನು ಸಂಚಯಿಸಿದ ನಾಯಕತ್ವ, ಮೊಗಲರ ವಿರುದ್ಧ ಹೋರಾಡಿದ ನಾಯಕತ್ವ, ಅನಂತರ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಾಯಕತ್ವಗಳು ದಾಸ್ಯದ ಕಾಲದಲ್ಲಿ ಸ್ವಾಭಿಮಾನವನ್ನು ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದವು. ದಾಸ್ಯ ಕಳೆಯಿತು. ಪ್ರಜಾಪ್ರಭುತ್ವವೇ ಬಂತು. ದಾಸ್ಯದ ಕಾಲದಲ್ಲಿ ನಾಯಕತ್ವವನ್ನು ಗಾಂಧಿಯ ಕೈಗೆ ಕೊಟ್ಟ ಜನತೆ ಗಾಂಧೀ ಅನಂತರ ಯಾರು ಎಂಬ ಪ್ರಶ್ನೆಗೆ ಬಿದ್ದದ್ದೇ ದೇಶದ ನಾಯಕತ್ವದ ದಿಕ್ಕು ತಪ್ಪತೊಡಗಿತು. ಏಕೆಂದರೆ ಸರಳತೆಯನ್ನು, ಅಂಹಿಸೆಯನ್ನು, ಧರ್ಮವನ್ನು, ರಾಮರಾಜ್ಯವನ್ನು ಬೋಧಿಸಿದ ಗಾಂಧಿಯೇ ಸ್ವತಃ ನಾಯಕತ್ವದ ವ್ಯಾಖ್ಯಾನದ ದಿಕ್ಕು ತಪ್ಪಿಸಿ ಬಿಟ್ಟರು. ನೆಹರೂ ಕೈಗೆ ಆಡಳಿತದ ಚುಕ್ಕಾಣಿ ವಹಿಸಿಕೊಟ್ಟುಬಿಟ್ಟರು, ಅಲ್ಲಿಂದ ದೇಶ ಮಂತ್ರಿಗಳನ್ನ್ನೂ ನಾಯಕರೆಂದು ಬಲವಂತವಾಗಿ ಒಪ್ಪಿಕೊಳ್ಳುವ ಮಾನಸಿಕತೆಯನ್ನು ಬೆಳೆಸಿಕೊಂಡರು. ಅದು ಎಷ್ಟು ಮುಂದುವರಿಯಿತೆಂದರೆ ಚುನಾವಣೆಗೆ ಸ್ಪರ್ಧಿಸುವವನ್ನು ನಾಯಕರೆಂದು ಒಪ್ಪಿಕೊಳ್ಳುವ ಹಂತಕ್ಕೆ ನಾವು ಬಂದೆವು. ನಾವು ಇಂದು ಕಾಣುತ್ತ್ತಿರುವ ಸಮಾಜದ ಅನಿಷ್ಟಗಳೆಲ್ಲದರ ಮೂಲ ಧಾತು ಅಲ್ಲಿಂದಲೇ ಶುರುವಾಗುತ್ತವೆ. ಪರಿಣಾಮ ಪರಿಸ್ಥಿತಿ ಇಂದು ಹೀಗಿದೆ. ಇಂದು ನಾಯಕರ ಮೇಲೆ ಭಕ್ತಿ ಮೂಡುತ್ತಿಲ್ಲ. ಏಕೆಂದರೆ ವಾಸ್ತವವಾಗಿ ಅವರೆಲ್ಲರೂ ನಾಯಕರೇ ಅಲ್ಲ. ನಾಯಕರ ಮೇಲೆ ಗೌರವವೂ ಮೂಡುತ್ತಿಲ್ಲ. ಕಾಣುತ್ತಿರುವುದೆಲ್ಲವೂ ನಾಟಕರಂಗ. ನಾಯಕರು ಶುದ್ಧವಾಗಿಲ್ಲ. ಅವರು ಕೇವಲ ಚುನಾವಣಾ ಕೇಂದ್ರಿತ ಉದ್ಯಮಿಗಳು ಮಾತ್ರ. ಇನ್ನೆಲ್ಲಿ ದೇಶ-ಧರ್ಮ, ಇನ್ನೆಲ್ಲಿಯ ನೈತಿಕತೆ, ಮೌಲ್ಯ? ನಾಯಕ ಬೇಲಿಯೂ ಹೌದು, ಹೊಲವೂ ಹೌದು. ಇಂದೇನಾಗಿದೆಯೆಂದರೆ ಬೇಲಿ ಹೊಲ ಮೇಯುತ್ತಿದೆ. ಹೊಲ ಬೇಲಿಗೆ ಇಂಬು ನೀಡುತ್ತಿದೆ.
ಅಂಥ ಪರಿಸ್ಥಿತಿಯಲ್ಲಿ ಒಬ್ಬ ಅಣ್ಣಾ ಹಜಾರೆ ರಾಷ್ಟ್ರ ನಾಯಕರಂತೆ ಕಂಡುಬರುತ್ತಾರೆಯೇ ಹೊರತು ಚುನಾವಣೆಯಲ್ಲಿ ಹಣ ಚೆಲ್ಲಿ ಅಬ್ಬರದ ಪ್ರಚಾರದಿಂದ ಜಯಿಸಿ ಬಂದವರಲ್ಲ. ಅಂಥವರ ಕೈಯಲ್ಲಿ ಅಧಿಕಾರವಿರಬಹುದು. ಆದರೆ ಮನಪೂರ್ವಕ ಗೌರವ ನೀಡಬೇಕೆನಿಸುವುದಿಲ್ಲ. ಸ್ವಾತಂತ್ರ್ಯಪೂರ್ವದ ಘಟನಾವಳಿಗಳನ್ನೇ ಗಮನಕ್ಕೆ ತೆಗೆದುಕೊಳ್ಳಬಹುದು. ಅಂದೂ ಚುನಾವಣೆಗಿಳಿದ್ದವು. ಕೆಲವು ಸ್ವಾತಂತ್ರ್ಯ ಹೋರಾಟಗಾರರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರಾರೂ ಇಂದು ನೆನಪಿಲ್ಲ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದ ಗಾಂಧಿ, ತಿಲಕರು ನೆನಪಿನಲ್ಲಿ ಉಳಿಯುತ್ತಾರೆ. ಮುಂದೊಂದು ದಿನ ಇಂದು ನಾಯಕರ ಪೋಷಾಕಿನಲ್ಲಿ ಕಾಣಿಸಿಕೊಳ್ಳುವವರೆಲ್ಲರೂ ಮರೆತು ಹೋಗುತ್ತಾರೆ. ಅಮೃತ ಶಿಲೆಗಳ ಶಿಲಾನ್ಯಾಸಗಳಲ್ಲಿ ಹೆಸರೊಂದಿರುತ್ತದೆ. ಹಜಾರೆಯಂಥವರು ನೆನಪಾಗುತ್ತಾರೆ. ದಾಸ್ಯಕ್ಕಿಂತಲೂ ಸ್ವಪ್ರಭುತ್ವದ ಕಾಲದಲ್ಲೇ ನಾಯಕರ ಅಗತ್ಯತೆ ಹೆಚ್ಚು ಎನ್ನುವ ವಾಸ್ತವದ ಸತ್ಯ ಇದರೆಡೆಯಲ್ಲಿ ಕಾಡುತ್ತದೆ. ನಾಯಕತ್ವ ಎಂಬ ಸಂವೇದನೆ ದಾಸ್ಯದ ಕಾಲದಲ್ಲಿಯೇ ಉಳಿದು ಹೋಯಿತು ಎಂಬ ವಾಸ್ತವದ ಸಂಗತಿಯನ್ನೂ ಮರೆಯುವಂತಿಲ್ಲ. ಅದನ್ನು ದಾಸ್ಯಕಾಲದ ಉಡುಗೊರೆ ಎನ್ನುವ ಹಾಗಿಲ್ಲವಲ್ಲ. ಆದರೆ ಸ್ವಪ್ರಭುತ್ವದ ಕೊರತೆ ಎಂದು ನಿಸ್ಸಂಶಯವಾಗಿ ಹೇಳಬಹುದು.