Tuesday, May 3, 2011

ಎಂಡೋ ಎಂಬ ವಿಷಕ್ಕೆ ಪವಾರ್ ಎಂಬ ಸೀಸೆಯು

ವಿಜ್ಞಾನದ ಬಗ್ಗೆ ಯೋಚಿಸುವಾಗಲೆಲ್ಲಾ ಎರಡು ಮಜಲುಗಳು ನೆನಪಿಗೆ ಬರುತ್ತವೆ. ಅದರ ಸಾಧನೆ-ಶೋಧನೆಗಳ ಜೊತೆಗೆ ಸೃಷ್ಟಿ ವಿರೋಧಿಯಾದ ಹಲವು ಸಂಗತಿಗಳೂ ನೆನಪಿಗೆ ಬರುತ್ತವೆ. ಏಕೆಂದರೆ ವಿಜ್ಞಾನದ ತಳಪಾಯವಿರುವುದೇ ಪ್ರಯೋಗದಲ್ಲಿ. ಪ್ರಯೋಗವಿಲ್ಲದೆ ಅದಕ್ಕೆ ಅಸ್ತಿತ್ವವಿಲ್ಲ. ಸಾಧನೆಯಲ್ಲ, ಶೋಧನೆಯೂ ಇಲ್ಲ. ಇದು ವಿಜ್ಞಾನದ ಪ್ರತಿಮೆ. ವಿಜ್ಞಾನದ ಇಂಥ ಗುಣದಿಂದ ಅದನ್ನು ಹೊಗಳಬಹುದು. ತೆಗಳಬಹುದು ಮತ್ತು ನೋವುಣ್ಣಬಹುದು.‘ಕೆಟ್ಟಮೇಲೆ ಬುದ್ಧಿ ಬಂತು’ ಎಂಬ ಮಾತನ್ನು ಇತರೆಡೆಗಿಂತಲೂ ಹೆಚ್ಚಾಗಿ ವಿಜ್ಞಾನಕ್ಕೆ ಅನ್ವಯಿಸಿ ಹೇಳುವುದರ ಹಿಂದೆ ಈ ಪ್ರತಿಮೆಯಿದೆ.
ವಿಜ್ಞಾನ ಅಣ್ವಸ್ತ್ರವನ್ನು ಶೋಧಿಸಿತು. ಶೋಧನೆಯ ಆನಂತರ ಪ್ರಯೋಗಿಸದೆ ವಿಧಿ ಇರಲಿಲ್ಲ. ಪ್ರಯೋಗಿಸಿ ಅನಾಹುತವನ್ನು ದೃಢಪಡಿಸಿಕೊಂಡಿತು. ಒಂದು ನಾಗಸಾಕಿಯ ಪರಿಣಾಮ ಅಣ್ವಸ್ತ್ರ ನಿಷೇಧಕ್ಕೆ ಸಾಕಾಯಿತು. ಜಗತ್ತು ಪಾಠ ಕಲಿಯಿತು. ಅಣುವಿನಿಂದ ಶಕ್ತಿ ತಯಾರಿಸಿತು. ಶಕ್ತಿಯೇನೋ ಸಂಚಯವಾಯಿತು. ಉಳಿದಿದ್ದ ತ್ಯಾಜ್ಯಗಳದ್ದೇ ತಲೆಬಿಸಿಯಾಯಿತು. ಒಂದೆಡೆ ಗುಂಡಿ ತೋಡಿ ಹೂತು ‘ಅಗೆಯದಿರಿ’ ಎಂದು ಫಲಕ ಹಾಕಿತು. ಭೂಪಾಲದ ಅನಿಲವೇ ವಿಷಯವಾಯಿತು. ಅದರ ಪರಿಣಾಮ ಇಂದೂ ನಿಂತಿಲ್ಲ. ಹೀಗೆ ವಿಜ್ಞಾನ ಮಾಡಿಕೊಂಡ ಅನಾಹುತಗಳು ತಡವಾಗಿ ಯಾದರೂ ಅರಿವಿಗೆ ಬಂದವು. ತಡವಾಗಿಯಾದರೂ ಜಗತ್ತು ತಿದ್ದಿಕೊಂಡಿತು. ಮಾನವ ಕುಲಕ್ಕೆ ಕಂಟಕವಾಗುವ ಯಾವ ಸಂಗತಿಯನ್ನೂ ಜಗತ್ತು ಒಪ್ಪುವುದಿಲ್ಲ ಎಂಬುದನ್ನು ಆಗಾಗ್ಗೆ ಜಗತ್ತು ಸಾರಿ ಹೇಳಿದೆ. ಹಲವು ಸಿದ್ಧಾಂತಗಳಿಗೆ, ಅನ್ಯಾನ್ಯ ಸರಕಾರಗಳಿಗೆ ಸೃಷ್ಟಿನಾಶಕದ ಎಚ್ಚರಿಕೆ ಮೂಡಿದೆ.
ಹೀಗೆ ಅಂದುಕೊಂಡರೆ ಅದು ಜಗತ್ತಿನ ಮಟ್ಟಿಗೆ ಸರಿ ಮತ್ತು ಭಾರತದ ಮಟ್ಟಿಗೆ ತಪ್ಪು. ಏಕೆಂದರೆ ಎಂಡೋಸಲ್ಫಾನ್ ಇದೆಯಲ್ಲಾ. ಮಾನವ ಕಂಟಕವಷ್ಟೇ ಅಲ್ಲದೆ, ಸಕಲ ಜೀವಕೋಟಿಗೆ ಕಂಟಕವೂ, ಅಮಾನುಷವೂ ಆದ ಎಂಡೋ ಎಂಬ ವಿಷಕ್ಕೆ ಇನ್ನೂ ನಿಷೇಧದ ಭಾಗ್ಯ ಬಂದಿಲ್ಲ. ವಿಷವೊಂದನ್ನು ನಿಷೇಧಿಸಬಾರದು ಎಂದ ಮೇಲೆ ಇನ್ನು ದೇಶದಲ್ಲಿ ಏನು ತಾನೆ ನಿಷೇಧವಾಗಬಹುದು? ಕರ್ನಾಟಕ ಮತ್ತು ಕೇರಳ ಭಾಗಗಳಲ್ಲಿ ಒಂದು ಲೋಕವನ್ನೇ ಸೃಷ್ಟಿ ಮಾಡಿರುವ ಎಂಡೋಸಲ್ಫಾನ್ ನಿಷೇಧವಾಗಬಾರದು ಎಂದರೆ ಇನ್ನು ದೇಶದಲ್ಲಿ ನಿಷೇಧ ಮಾಡುವ ಯಾವುದೂ ಇರುವುದಿಲ್ಲ ಎನ್ನುವುದೇ ಸರಿ. ಗೇರು ಗಿಡಗಳಿಗೆ ಸಿಂಪಡಿಸಿದ ಕೀಟನಾಶಕ ಬದುಕನ್ನೇ ಬಾಡಿಸಿದ ಘಟನೆಗಳು ಇಂದು ಎರಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಮಾನವ ಶಾಸ್ತ್ರಾಧ್ಯಯನಕ್ಕೆ ಅದು ಒಂದು ಸವಾಲಾಗಿ ನಿಂತಿದೆ. ನಾಗಾಸಾಕಿಯ ಪೀಳಿಗೆಯ ಬಗ್ಗೆ ಎಲ್ಲೋ ಕೇಳುವ ಓದುವ ನಾವು ಬಗಲಲ್ಲೇ ಇರುವ ಎಂಡೋಸಲ್ಫಾನ್ ಪೀಡಿತರ ಲೋಕವನ್ನು ಅರಿಯಲಾಗದೇ ಹೋಗುತ್ತೇವೆ. ಏಕೆಂದರೆ ಎಂಡೋ ಸಲ್ಫಾನ್ ನಿಷೇಧವಾಗಿಲ್ಲ. ನೇರವಾಗಿ ಮನುಷ್ಯನ ಜೀವಕೋಶಕ್ಕೇ ಕೈಹಾಕುವ ಈ ವಿಷ ಅದೆಷ್ಟು ಕಂಟಕವಾಗಿರಬಹುದು? ಕರ್ನಾಟಕದ ದ.ಕ. ಜಿಲ್ಲೆಯ ಕೆಲವು ಊರುಗಳು ಮತ್ತು ಕಾಸರಗೋಡು ಭಾಗದ ಕೆಲವು ಊರುಗಳ ಪರಿಸ್ಥಿತಿಯನ್ನು ನೋಡಿದರೆ ಅದರ ತೀವ್ರತೆಯ ಅರಿವಾಗುತ್ತದೆ. ಇಲ್ಲಿ ಕಾಣುವ ಕೆಲವು ದೇಹಗಳು ಭೂಮಿಯವಲ್ಲ ಎನ್ನುವಷ್ಟು ಭೀಕರವಾಗಿವೆ. ಗಂಭೀರವಾಗಿದೆ. ಆದರೂ ಎಂಡೋ ನಿಷೇಧವಾಗುವುದಿಲ್ಲ. ಇತ್ತೀಚೆಗೆ ಕೇರಳದ ಕ್ಯಾಲಿಕಟ್ ಮೆಡಿಕಲ್ ಕಾಲೇಜು ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಎಂಡೋಸಲ್ಫಾನ್ ನಿಂದ ಕೇರಳವೊಂದರಲ್ಲೇ ೫೦೦ ಜನರು ಮೃತರಾಗಿದ್ದಾರೆ. ೫೦೦೦ದಷ್ಟು ಪ್ರಕರಣಗಳು ಅತಿ ಗಂಭೀರವಾಗಿದೆ. ಆ ಗಂಭೀರ ಪ್ರಕರಣಗಳಾದರೂ ಹೇಗಿವೆಯೆಂದರೆ ಈ ಜೀವಿಗಳನ್ನು ಹೆತ್ತವರು ಮನುಷ್ಯರು ಎಂಬ ಒಂದೇ ಒಂದು ಆಧಾರದಲ್ಲಿ ಮನುಷ್ಯರು ಎಂದು ಗುರುತುಹಿಡಿಯುವಷ್ಟು ಅಮಾನುಷತೆ ಕಂಡುಬರುತ್ತದೆ. ಇಲ್ಲಿನ ಮೈ ಕೈ ಗಟ್ಟಿ ಇದ್ದವರನ್ನೂ ಆರೋಗ್ಯವಂತ ಎನ್ನುವಂತಿಲ್ಲ . ಏಕೆಂದರೆ ಈ ಭಾಗದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ರೋಗಗಳು ಜನ್ಮದತ್ತವೇ. ಹೃದ್ರೋಗ, ಹರ್ನಿಯಾ, ಮೂತ್ರ ಸಂಬಂಧಿ ರೋಗಗಳು, ಚರ್ಮರೋಗಗಳು, ಸಂತಾನಹೀನತೆಗಳು ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಆದರೂ ಅಂಥ ವಿಷ ಇನ್ನೂ ತಯಾರಾಗುತ್ತಾ ಇದೆ. ವಿಚಿತ್ರ ಎಂದರೆ ಜೀವಕೋಟಿಗೆ ಕಂಟಕವಾಗುವ ಎಲ್ಲಾ ಅಂಶಗಳಿದ್ದರೂ, ವಿಶ್ವಸಂಸ್ಥೆಯ ಕಾನೂನು ಯಾವುದನ್ನು ನಿಷೇಧಿತ ಸರಕು ಎಂದು ಪಟ್ಟಿ ಮಾಡಿದೆಯೋ ಆ ಎಲ್ಲಾ ಅರ್ಹತೆಗಳೂ ಎಂಡೋಸಲ್ಫಾನಿಗಿದೆ. ಆದರೂ ಎಂಡೋಸಲ್ಫಾನ್ ನಿಷೇಧವಾಗುವುದಿಲ್ಲ. ಪಾಶ್ಚಾತ್ಯ ರಾಷ್ಟ್ರಗಳ ಸರಕಾರಗಳು ಕೊಂಚ ಸಂವೇದನಾಶೀಲವೆನಿಸುತ್ತದೆ. ಏಕೆಂದರೆ ಈಗಾಗಲೇ ೮೧ ರಾಷ್ಟ್ರಗಳು ಎಂಡೋ ಸಲ್ಫಾನ್ ಅನ್ನು ನಿಷೇಧಿಸಿವೆ. ಇನ್ನು ಕೆಲವು ದೇಶಗಳು ಕೆಲವೇ ದಿನಗಳಲ್ಲಿ ನಿಷೇಧ ಮಾಡಲಿವೆ. ಏಕೆಂದರೆ ಅವರೆಲ್ಲರಿಗೂ ಎಂಡೋಸಲ್ಫಾನ್ ವಿಷವೆಂದು ಅರಿವಿದೆ. ಆದರೆ ಭಾರತದ ಆಡಳಿತ ಅಷ್ಟು ಸಂವೇದನಾಶೀಲವಲ್ಲ ಮತ್ತು ಮಾನವೀಯವೂ ಅಲ್ಲ.ಇಂದು ಭಾರತ ವಿಶ್ವದ ಶೇ. ೭೦ರಷ್ಟು ಎಂಡೋಸಲ್ಫಾನ್ ಅನ್ನು ಉತ್ಪಾದನೆ ಮಾಡುತ್ತಿದೆ. ಅಕ್ಕಿ,ಗೋಧಿಯಂತೆ ಎಂಡೋಸಲ್ಫಾನ್ ಕೂಡ ಭಾರತದಲ್ಲಿ ಒಂದು ಪ್ರಮುಖ ರಫ್ತಿನ ಸರಕು. ಒಳ್ಳೆಯದೆಲ್ಲವೂ ಇಲ್ಲಿಗೆ ಹರಿದುಬರಬೇಕು ಮತ್ತು ಉತ್ತಮವಾದುದನ್ನೇ ಭಾರತ ಜಗತ್ತಿಗೆ ಕೊಡುತ್ತದೆ ಎಂಬ ಪರಂಪರೆಯ ದೇಶದಿಂದ ರಫ್ತಾಗುವುದು ಮಾತ್ರ ಭಯಂಕರ ಹಾಲಾಹಲ ಎಂಬುದು ಒಂದು ಕಠೋರ ವಾಸ್ತವ. ಈ ವಿಷಯದಲ್ಲಿ ಭಾರತವೆಷ್ಟು ನೀಚನತದಿಂದ ವರ್ತೀಸುತ್ತಿದೆಯೆಂದರೆ ಎಂಡೋಸಲ್ಫಾನ್ ನಿಷೇಧಕ್ಕೆ ಆಗ್ರಹಗಳು ಹೆಚ್ಚುತ್ತಿರುವಂತೆಯೇ ಅದಕ್ಕೆ ಸಮರ್ಥನೆಯನ್ನೂ ಕೊಟ್ಟುಕೊಳ್ಳುತ್ತದೆ. ಜೀವಕಂಟಕ ವಿಷವನ್ನು ಸಮರ್ಥಿಸಿಕೊಂಡು ಭಯೋತ್ಪಾದನೆಯನ್ನು ವಿರೋಧಿಸುವ ಇಬ್ಬಂದಿತನದ ಮಾನಸಿಕತೆ ನಮ್ಮ ಆಡಳಿತದವರದ್ದು. ಜೀವಕೋಟಿಯನ್ನು ಪೂಜಿಸುವ ಪರಂಪರೆಯ ನೆಲದಲ್ಲಿ ವಿಷಪ್ರಿಯಮಾನಸಿಕತೆಯವರುಪ್ರಭುಗಳಾಗಿದ್ದಾರೆ.ಇದಕ್ಕೇನನ್ನಬೇಕು?ಎಂಡೋಸಲ್ಫಾನ್ ಮಾಡಿದ ಪರಿಣಾಮಗಳು ನಿಚ್ಚಳವಾಗಿದೆ ಮತ್ತು ಅವು ಪ್ರತ್ಯಕ್ಷವಾಗಿ ಕಣ್ಣಿಗೂ ರಾಚುತ್ತವೆ. ಆದರೂ ಸಮರ್ಥನೆ ಹೇಗೆ ಸಾಧ್ಯವಾಗುತ್ತದೆ? ಬೇರಾವುದೇ ದೇಶದಲ್ಲಿ ಒಂದು ಕೀಟನಾಶಕ ನಿಗದಿತ ಉದ್ದೇಶಕ್ಕಿಂತ ಹೊರತಾಗಿ ಮೀನೋ, ಕಪ್ಪೆಯೋ, ಯಾವುದಾದರೂ ಒಂದು ಕೀಟಕ್ಕೋ ಕಂಟಕ ಎಂದು ಕಂಡುಬಂದೊಡನೆ ನಿಷೇಧವಾಗುತ್ತದೆ. ಆದರೆ ಭಾರತದಲ್ಲಿ ಸರದಿಯ ಪ್ರಕಾರ ಮನುಷ್ಯರೇ ಸಾಯುತ್ತಿದ್ದರೂ ಏನೂ ಆಗುವುದಿಲ್ಲವಲ್ಲಾ ಏಕೆ?
ಏಕೆಂದರೆ ಶರದ್ ಪವಾರ್ ಎಂಬ ಕೃಷಿರೂಪಿ ಕ್ರಿಕೆಟ್ ಸಚಿವರಿದ್ದಾರಲ್ಲಾ .ಲೋಕ ಮುಳುಗಿ ಹೋದರೂ ಪವಾರ್ ಅದಕ್ಕೆ ತನ್ನದೇ ಆದ ಕಾರಣಗಳನ್ನು ಕೊಡಬಲ್ಲರು. ರೈತ ಆತ್ಮಹತ್ಯೆ ಮಾಡಿಕೊಂಡರೂ ಅದಕ್ಕೂ ಕೃಷಿ ಸಚಿವನಿಗೂ ಸಂಬಂಧವಿಲ್ಲವೆಂದು ಪವಾರ್ ವಾದಿಸಬಲ್ಲರು. ಅಂಥ ಕೃಷಿ ಸಚಿವ ಶರದ್ ಪವಾರ್ ಎಂಡೋ ನಿಷೇಧಕ್ಕೆ ವಿರೋಧಿಸುವ ಭಾರತದ ಪ್ರಮುಖ ಕೈ. ಪವಾರರ ಹಿಡಿತಕ್ಕೊಳಪಟ್ಟ ಸಜ್ಜನ ಜೈರಾಮ್ ರಮೇಶ್ ಮತ್ತು ಪ್ರಧಾನಿಗಳೂ ಶರದ್ ಪವಾರರ ಆಲಾಪಕ್ಕೆ ಹಿನ್ನಲೆ ಸಂಗೀತ ಒದಗಿಸಿಬಿಡುತ್ತಾರೆ. ಪವಾರರ ನಿಷೇಧಕ್ಕೆ ವಿರೋಧ ಮತ್ತು ಸಮರ್ಥನೆಯ ಹಿನ್ನೆಲೆಯ ಜಾಡು ಹಿಡಿದು ಹೊರಟಾಗ ಹಲವು ಸಂಗತಿಗಳು ಎದುರಾಗುತ್ತವೆ. ಅಂದರೆ ವಿಶ್ವದ ಅತಿ ಹೆಚ್ಚು ವಿಷ ಉತ್ಪಾದನೆಯಾಗುವ ಭಾರತದಲ್ಲಿ ಎಂಡೋಸಲ್ಫಾನ್ ಅನ್ನು ಉಛ್ಝಿ ಟm Zಛಿ, ಏಜ್ಞಿboಠಿZ ಜ್ಞಿoಛ್ಚಿಠಿಜ್ಚಿಜ್ಚಿಜಿbo ಠಿb. ಮತ್ತು ಕೋರೋಮಂಡಲ್ ಫರ್ಟಿಲೈಸರ್‍ಸ್ ಎಂಬ ಮೂರು ಸರಕಾರಿ ಸ್ವಾಮ್ಯದ ಕಂಪೆನಿಗಳು ಉತ್ಪಾದನೆ ಮಾಡುತ್ತವೆ. ಇವು ಮೂರೂ ಸೇರಿ ವಾರ್ಷಿಕವಾಗಿ ೪೫೦೦ ಮೆ.ಟನ್‌ಗಳಷ್ಟು ಎಂಡೋಸಲ್ಫಾನ್ ಅನ್ನು ತಯಾರಿಸುತ್ತವೆ ಮತ್ತು ವಾರ್ಷಿಕ ೪೦೦೦ ಟನ್‌ಗಳಷ್ಟನ್ನು ರಫ್ತು ಮಾಡುತ್ತವೆ. ಆಂದರೆ ವಿಷ ತಯಾರಿಕಾ ಕಾರ್ಖಾನೆಗಳು ಬಾರಿ ಬಂಡವಾಳ ಹೊಂದಿರುವ ಶ್ರೀಮಂತ ಕಂಪೆನಿಗಳು. ಶರದ್ ಪವಾರರ ಒಂದು ನಿಲುವು ಆ ಕಂಪೆನಿಗಳ ಪಾಲಿನ ಅಸ್ತಿತ್ವದ ಪ್ರಶ್ನೆಯಾಗಲಿದೆ. ಹಾಗಾಗಿ ಪವಾರರನ್ನು ಬೆಚ್ಚಗೆ ಇಟ್ಟುಕೊಂಡಷ್ಟೂ ಕಂಪೆನಿಗಳು ದೈತ್ಯವಾಗುತ್ತಾ ಹೋಗುತ್ತವೆ. ಪವಾರ್ ದಿನದೂಡಿದಷ್ಟೂ ಅವರೂ ಬೆಳೆಯುತ್ತಾ ಸಾಗುತ್ತಾರೆ. ಅಷ್ಟರಲ್ಲಿ ಪವಾರರಿಗೂ ಕ್ರಿಕೆಟಿಗೆ ಹಣ ಒದಗಿಸಿಕೊಳ್ಳಬಹುದು. ಐಪಿಎಲ್‌ನ ಇನ್ನೊಂದೆರಡು ಆವೃತ್ತಿಗಳನ್ನು ಸುಲಭವಾಗಿ ನಡೆಸಬಹುದು. ಇನ್ನೆಲ್ಲಿಗೋ ಕೈ ತೂರಿಸಬಹುದು. ಒಟ್ಟು ತನ್ನ ಪವರನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ತನ್ನ ಸದ್ಯದ ಪವರನ್ನು ಬಳಸಿಕೊಳ್ಳಬೇಕಷ್ಟೆ.ಪವಾರ್ ಇವಿಷ್ಟನ್ನು ಚಾಚೂ ತಪ್ಪದೆ ಮಾಡುತ್ತಿದ್ದಾರೆ. ಇನ್ನು ಕಾಸರಗೋಡಿನ ಸ್ವರ್ಗ(ಎಂಡೋಸಲ್ಫಾನ್ ಪೀಡಿತ ಒಂದು ಗ್ರಾಮದ ಹೆಸರು) ನರಕವಾದರೇನು? ಕರ್ನಾಟಕದ ಕೊಕ್ಕಡ ಮುರುಟಿ ಹೋದರೇನು? ಅದಕ್ಕೆ ಅವರ ಬಾಯಿಂದ ಪುಂಖಾನುಪುಂಖವಾಗಿ ಸಮರ್ಥನೆಗಳ ಸರಮಾಲೆಗಳು ಬರುತ್ತಿರುತ್ತವೆ. ಅದಕ್ಕೆ ಜೈರಾಮ್ ರಮೇಶ್‌ರಂಥವರೂ ತಲೆದೂಗುತ್ತಾರೆ ಎಂಡೋಸಲ್ಫಾನನ್ನು ಸಮರ್ಥಿಸುವ ಮೂಲಕ ಜೈರಾಮ್ ರಮೇಶ್ ತನ್ನ ಸಜ್ಜನಿಕೆಗೆ ವಿಷಪ್ರಾಶನ ಮಾಡಿದ್ದ್ದಾರೆ ಎಂದೇ ಹೇಳಬೇಕು. ಅರಣ್ಯ ಪ್ರೇಮ, ಬಿಟಿಯನ್ನು ಸಮರ್ಥವಾಗಿ ನಿಭಾಯಿಸಿದ ಅವರ ಛಾತಿ ಎಂಡೋ ಎಂಬ ವಿಷದಡಿಯಲ್ಲಿ ಮಣ್ಣುಪಾಲಾಗಿ ಹೋಯಿತು. ಹಾಗಾಗಿ ಪ್ರಧಾನಿ, ಪವಾರ್ ಮತ್ತು ಜೈರಾಮ್ ಎಲ್ಲರೂ ಒಂದೇ ತರಹದ ವ್ಯಕ್ತಿತ್ವಗಳಂತೆ ಕಂಡುಬರುತ್ತಾರೆ. ಪುರಾಣ ಕಾಲದ ನರಹಂತಕ ರಾಕ್ಷಸರನ್ನು ನೆನಪಿಗೆ ತರುತ್ತಾರೆ.
ಹನ್ನೊಂದು ವರ್ಷದೊಳಗೆ ಹಂತಹಂತವಾಗಿ ಎಂಡೋ ಸಲ್ಫಾನ್ ನಿಷೇಧ ಮಾಡಲಾಗುವುದು ಎಂಬ ಸದ್ಯದ ಪ್ರಹಸನ ಪವಾರರ ಮತ್ತೊಂದು ತಂತ್ರವಲ್ಲದೆ ಬೇರೇನೂ ಅಲ್ಲ. ಒಂದು ವೇಳೆ ಮಾನವೀಯ ಪ್ರೇಮ ಪವಾರ್‌ಗೆ ಇದ್ದಿದ್ದೇ ಆಗಿದ್ದರೆ ೧೧ ವರ್ಷದ ಕಾಲಾವಕಾಶ ಏಕೆ ಬೇಕಿತ್ತು? ಹಂತಹಂತ ಎಂದರೇನು? ಅಂತಾರಾಷ್ಟ್ರೀಯ ಒತ್ತಡಕ್ಕೆ ಬಿದ್ದ ಪವಾರ್‌ರ ಈ ಹೇಳಿಕೆ ಐಪಿಎಲ್ ಬಿಡ್‌ನಷ್ಟೇ ಕುತೂಹಲಕರ. ತಾನು ಜೀವಂತ ವಿರುವವರೆಗೆ ಎಂಡೋ ನಿಷೇಧ ಸಾಧ್ಯವಿಲ್ಲವೆನ್ನುವ ಪ್ರಚ್ಛನ್ನವಾದ ಮಾತನ್ನು ಅವರು ಆಡಿದ್ದಾರೆ. ಇಲ್ಲದಿದ್ದರೇನು? ಇನ್ನೂ ಹನ್ನೊಂದು ವರ್ಷ. ಅದೂ ಹಂತಹಂತವಾಗಿ. ಅಂದರೆ ದಿನದೂಡುವ ತಂತ್ರವಲ್ಲವೇನು? ಅಷ್ಟರೊಳಗೆ ಪರ್ಯಾಯದ ತಯಾರಿ ನಡೆಯುವುದಂತೆ.ಅಂದರೆ ಮತ್ತೊಂದು ಹೆಸರಿನ ವಿಷ ಮಾರುಕಟ್ಟೆಗೆ ಬರುವುದು, ಜನರು ಕೊರಡಾಗುವರು, ಹಾರ್ಮೋನುಗಳು ವ್ಯತ್ಯಾಸವಾಗುವುದು,ಇನ್ನೂ ಅಷ್ಟು ಅಂಗವಿಕಲ ಪೀಳಿಗೆಗಳು ಹುಟ್ಟುವುದು,ಸದ್ಯದ ಸ್ಥಿತಿ ಯಥಾವತ್ತು ಮುಂದುವರಿಯುವುದು.ವಿಕೇಟು, ರನ್ನುಗಳ ಲೆಕ್ಕಾಚಾರದ ಪವಾರರಿಗೆ ಇಂಥ ತಂತ್ರವನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಹಗರಣಗಳ ಸರದಾರ, ಕ್ರಿಕೆಟ್ ಮಂತ್ರಿ ಪವಾರ್ ಒಮ್ಮೆ ಸದನದಲ್ಲೂ ಇದೇ ರೀತಿ ಬಡಬಡಿಸಿದ್ದರು.
ಕಳೆದ ಫೆಬ್ರವರಿ ೨೨ರಂದು ಲೋಕಸಭೆಯಲ್ಲಿ ಮಾತನಾಡುತ್ತಾ ಪವಾರ್ ಎಂಡೋಸಲ್ಫಾನ್ ನಿಷೇಧಕ್ಕೆ ತಾಂತ್ರಿಕ ಅಡಚಣೆಗಳಿವೆ. ಹಲವು ರಾಜ್ಯಗಳು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದಿದ್ದರು. ಆದರೆ ಪತ್ರಕರ್ತನೊಬ್ಬ ಈ ಹೇಳಿಕೆಯ ಜಾಡು ಹಿಡಿದು ಹೊರಟಾಗ ಗೋಚರಿಸಿದ್ದೇ ಬೇರೊಂದು ಸಂಗತಿ. ಅಂದರೆ ಯಾವ ರಾಜ್ಯವೂ ಎಂಡೋಸಲ್ಫಾನ್ ನಿಷೇಧಕ್ಕೆ ವಿರೋಧ ಸೂಚಿಸಿರಲಿಲ್ಲ .ಕೃಷಿ ಇಲಾಖೆಗೆ ನಿಷೇಧಕ್ಕೆ ವಿರೋಧ ಸೂಚಿಸಿ ಕೇವಲ ೬ ಪತ್ರಗಳು ಬಂದಿದ್ದವಷ್ಟೆ. ಆ ೬ ಪತ್ರಗಳಲ್ಲಿ ಮೂರು ಪತ್ರಗಳು ಎಂಡೋಸಲ್ಫಾನ್ ತಯಾರಿಕಾ ಕಾರ್ಖಾನೆಗಳವು ಮತ್ತು ಇತರ ಮೂರು ಶರದ್‌ಪವಾರ್ ಪ್ರಾಯೋಜಿತ ರೈತ ಮತ್ತು ವ್ಯಾಪಾರಿಗಳ ಒಕ್ಕೂಟಗಳವು. ಆದರೆ ಕೇಂದ್ರ ಸರಕಾರಕ್ಕೆ ವಿಷ ನಿಷೇಧವಾಗಬೇಕೆಂದು ಬಯಸಿ ೩೦೦೦ ಪತ್ರಗಳು ಬಂದಿದ್ದವು. ಆದರೆ ಪವಾರ್ ಈ ಪತ್ರಗಳ ಬಗ್ಗೆ ಚಕಾರವೆತ್ತಿರಲಿಲ್ಲ. ಬದಲು ಸದನವನ್ನು ತಪ್ಪುದಾರಿಗೆಳೆದಿದ್ದರು. ದುರ್ಬಳಕೆ ಮಾಡಿಕೊಂಡಿದ್ದರು. ಕ್ರಿಕೆಟಿನ ನೋಬಾಲ್ ನಂತರದ ಪವರ್ ಪ್ಲೇಯಂತೆ ಯದ್ವಾತದ್ವ ನಾಲಿಗೆ ಹರಿಸಿದ್ದರು.ಅಂಥವರು ಇಂದು ಹನ್ನೊಂದು ವರ್ಷಗಳ ಕಾಲಾವಧಿಯ ಮಾತಾಡಿದ್ದಾರೆ. ಪರ್ಯಾಯದ ಪ್ರಸ್ತಾಪವನ್ನೂ ಮಾಡಿದ್ದಾರೆ. ಪರ್ಯಾಯವೇಕೆ? ವಿಷ ವಿಷವೇ. ನಿಷೇಧದ ಪ್ರಶ್ನೆಯಿರುವುದು ಸ್ವದೇಶಿ ವಿಷ ಅಥವಾ ವಿದೇಶಿ ವಿಷ ಅಥವಾ ಬ್ರಾಂಡಿನ ಸಂಗತಿಯಲ್ಲ್ಲಲ್ಲ.ಮಾನವ ಕಂಟಕವಾದುದ್ದು ನಿಷಧವಾಗಬೇಕೆಂಬುದು ಆಗ್ರಹ.ಆದರೆ ಪವಾರ್ ಮತ್ತೊಂದು ವಿಧದ ವಿಷಪ್ರಾಶನದ ಮಾತಾಡುತ್ತಾರೆ.ಇದನ್ನೆಲ್ಲಾ ನೋಡಿದರೆ ಪವಾರ್ ಎಲ್ಲೋ ನುಸುಳಲು ಯತ್ನಿಸುತ್ತಿರುವುದು ಗೊತ್ತಾಗುತ್ತದೆ. ಸಾಕ್ಷಾತ್ ಕೃಷಿ ಸಚಿವರಾಗಿರುವ ಪವಾರ್‌ಗೆ ವಿಷ ಹಾಕದೆ ಬೆಳೆ ತೆಗೆಸಲು ಗೊತ್ತಿಲ್ಲವೇ? ಹಾಗಾದರೆ ಬಜೆಟ್‌ನಲ್ಲಿ ಸಾವಯವ ಎಂದು ಬೊಬ್ಬೆ ಹಾಕಿದ್ದೇಕೆ? ಸಾವಯವ ಇದ್ದಮೇಲೆ ವಿಷವೇಕೆ? ಹೀಗೆ ನೂರಾರು ಪ್ರಶ್ನೆಗಳು ಮುತ್ತಿಕೊಳ್ಳುತ್ತವೆ. ಅಲ್ಲದೆ ಎಂಡೋಸಲ್ಫಾನ್‌ನಿಂದ ಅನಾಹುತಗಳಾದ ನಿದರ್ಶನಗಳಿಲ್ಲವೆಂದು ಇವರೆಲ್ಲಾ ಯಾವ ಬಾಯಲ್ಲಿ ಹೇಳುತ್ತಾರೆ? ಅಷ್ಟೊಂದು ಸಂಶೋಧನೆಗಳು, ವರದಿಗಳು, ಮಾಧ್ಯಮಗಳ ಸುದ್ದಿಗಳು ಸುಳ್ಳು ಎಂಬ ಅಭಿಪ್ರಾಯವೇ?
ಅದನ್ನು ಪ್ರಮಾಣೀಕರಿಸಲು ಕೊನೆಗೆ ಒಂದು ದಾರಿಯಿದೆ . ಪವಾರರನ್ನು ದಕ್ಷಿಣಕ್ಕೆ ಕರೆತಂದು ಅಂಗಾತ ಮಲಗಿಸಿ ಎಂಡೋಸಲ್ಫಾನ್ ಸಿಂಪಡಿಸುವುದು. ಅನಂತರ ಅವರ ಹಾರ್ಮೋನನ್ನು ಪರೀಕ್ಷಿಸುವುದು. ಆಗಲಾದರೂ ಪವಾರರು ತಕ್ಷಣದ ನಿಷೇಧಕ್ಕೆ ಮನಸ್ಸು ಮಾಡಬಹುದು.

No comments: