ಕೆಲವರ್ಷಗಳ ಹಿಂದೆ "ಹಿಂದೂ ಭಯೋತ್ಪಾದನೆ"ಎಂಬ ಹುಯಿಲಿನ ಸಮಯದಲ್ಲಿ ಬಂತನಾಗಿದ್ದ ಲೆ. ಕ. ಪುರೋಹಿತ್ ಎಂಬ ಸೈನ್ಯಾಧಿಕಾರಿಯೊಂದಿಗೆ ದೇಶದ ಖ್ಯಾತ ಪತ್ರಿಕೆಯೊಂದು ಸಂದರ್ಶನ ನಡೆಸಿತ್ತು.
ನಿಮ್ಮ ಸಿದ್ಧಾಂತಗಳಿಗೆ ನೀವು ಇನ್ನೂ ಬದ್ದರಾಗಿಯೇ ಇದ್ದೀರಾ?
ನೀವು ಯಾವ ಸಿದ್ಧಾಂತದ ಬಗ್ಗೆ ಕೇಳುತ್ತಿದ್ದೀರಿ?
ಅದೇ ನಿಮ್ಮ ಬಲಪಂಥೀಯ ವಾದ -ಸಿದ್ದಾಂತಗಳು?
ನಾನೊಬ್ಬ ಸೈನ್ಯದ ವ್ಯಕ್ತಿಯಾಗಿ ಇಂಥ ಜಾಣತನದ ಪ್ರಶ್ನೆಗಳಿಗೆ ಉತ್ತರಿಸಲಾರೆ.
ಅಭಿನವ ಭಾರತ ಸಂಘಟನೆಯ ಬಗ್ಗೆ ಸ್ವಲ್ಪ ವಿವರಿಸುವಿರಾ?
ಅಭಿನವ ಭಾರತದೊಳಗೆ ನಾನು ಬೇಹುಗಾರನಾಗಿ ಸೇರಿಕೊಂಡೆ. ಅಲ್ಲಿ ನನ್ನ ಕೆಲಸವನ್ನು ನಾನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇನೆ. ಕೆಲಸದ ವರದಿಯನ್ನು ನಾನು ನನ್ನ ಯಜಮಾನರಿಗೆ ಕೊಟ್ಟಿದ್ದೇನೆ.ಎಲ್ಲಾ ದಾಖಲೆಗಳನ್ನು ಒಪ್ಪಿಸಿದ್ದೇನೆ. ಸತ್ಯ ಯಾರಿಗೆ ತಿಳಿಯಬೇಕಿತ್ತೋ ಅದು ಅವರಿಗೆ ತಿಳಿದಿದೆ.
ಪ್ರಕರಣದಲ್ಲಿ ನಿಮ್ಮೊಂದಿಗೆ ಅಪಾದಿತರಾಗಿದ್ದ ಸುಧಾಕರ ಚತುರ್ವೇದಿಯವರಿಗೆ ನಿಮ್ಮ ಪ್ರಶ್ನೆಗಳೇನಿದೆ?
ಇವನ್ನೆಲ್ಲಾ ಅದಾಗಲೇ ಸೈನ್ಯದ ವಿಚಾರಣಾ ನ್ಯಾಯಾಲಯದ ಮುಂದಿಟ್ಟಿದ್ದೇನೆ.
ಆದರೆ ಅಭಿನವ ಭಾರತ ಅಪ್ಪಟ ಬಲಪಂಥೀಯ ಸಂಘಟನೆಯಾಗಿದೆ. ಮಾಲೇಗಾಂವ್ ಸ್ಪೋಟದಲ್ಲಿ ಅದರ ಮೇಲೆ ಅಪಾದನೆಗಳಿವೆ..?
ಯಾವುದೇ ವಾದ ಸಿದ್ಧಾಂತಗಳು ನನ್ನನ್ನು ಭಯೋತ್ಪಾದಕನನ್ನಾಗಿ ಮಾಡಲು ಸಾಧ್ಯವಿಲ್ಲ. ನನ್ನ ಶತ್ರು ಕೂಡಾ ಸಂದೇಹ ಪಡದ ರೀತಿಯಲ್ಲಿ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಅಭಿನವ ಭಾರತದ ಮೇಲಿನ ಆಪಾದನೆಗಳು ಇನ್ನೂ ನ್ಯಾಯಾಲಯದ ಮೆಟ್ಟಿಲಲ್ಲಿದೆ.
ಯಾವುದಾದರೂ ಸಂದರ್ಭದಲ್ಲಿ ನೀವು ನಿಮ್ಮಂತೆ ಆಪಾದಿತರಾಗಿರುವ ದಯಾನಂದ ಪಾಂಡೆ, ಸಮೀರ್ ಕುಲಕರ್ಣಿ ಅಥವಾ ಅಜಯ್ ರಾಹಿರ್‌ಕರ್ ಮುಂತಾದವರೊಂದಿಗೆ ಚರ್ಚೆ ನಡೆಸಿದ್ದಿದೆಯೇ?
ರಾಹಿರ್ ಕರ್ ನನ್ನ ಬಾಲ್ಯದ ಗೆಳೆಯ. ಇನ್ನುಳಿದ ಸಂಗತಿಗಳ ಬಗ್ಗೆ ನಾನೇನನ್ನೂ ಹೇಳುವುದಿಲ್ಲ.
ನಿಮ್ಮ ಮತ್ತು ದಯಾನಂದ ಪಾಂಡೆ ಇಬ್ಬರ ಮಧ್ಯೆಸ್ಪೋಟದ ಬಗ್ಗೆ ಮತ್ತು ಉಗ್ರ ಹಿಂದೂ ರಾಷ್ಟ್ರದ ಬಗ್ಗೆ ಟೆಲಿಫೋನ್ ಸಂಭಾಷಣೆ ನಡೆದಿತ್ತು. ಅದನ್ನು ನೀವು ನಿರಾಕರಿಸುತ್ತೀರಾ?
ನಾನ್ಯಾಕೆ ನಿರಾಕರಿಸಲಿ? ಯಾರು ನಿರಾಕರಿಸುತ್ತಿದ್ದಾರೆ? ಒಬ್ಬ ಬೇಹುಗಾರಿಕಾ ಅಕಾರಿಯಾಗಿ, ಒಬ್ಬ ನಾಗರಿಕನಾಗಿ ನಾನು ಜನರೊಂದಿಗೆ ಮಾತಾಡಬಾರದೇ? ಯಾರಿಗೂ ಯಾರೊಂದಿಗೂ ಮಾತಾಡಬಾರದೆನ್ನಲು ಸಾಧ್ಯವಿಲ್ಲ. ನೀವು ನಿಜವಾದ ಸಂಗತಿಯನ್ನು ತಿಳಿದುಕೊಳ್ಳಬೇಕು. ಹೀಗೆ ಸತ್ಯವನ್ನು ತಿಳಿಯದೆ ಮಾತಾಡುವವರಿಂದ ನಾನು ಮೂರೂವರೆ ವರ್ಷ ಸರಳುಗಳ ಹಿಂದೆ ಕಳೆಯುವಂತಾಯಿತು. ಇವತ್ತು ನನಗೆ ಬಂದ ಸ್ಥಿತಿ ನಾಳೆ ಇನ್ನೊಬ್ಬ ಬೇಹುಗಾರ ಅಕಾರಿಗೆ ಬರಬಹುದು.
ನೀವು ವಹಿಸಿಕೊಂಡ ಕಾರ್ಯಕ್ಕೂ ಮಾಲೇಗಾಂವ್ ಸ್ಪೋಟದಲ್ಲಿ ಆಪಾದಿತರೆನ್ನಲಾದವರು ಭಾಗವಹಿದ್ದ ಫರಿದಾಭಾದ್, ಕೊಲ್ಕತ್ತಾ ಮತ್ತು ಭೂಪಾಲ್ ನ ಧಾರ್ಮಿಕ ಸಭೆಗಳಿಗೂ ಏನು ಸಂಬಂಧ?
ಇದರ ಬಗೆಗಿನ ವರದಿಗಳನ್ನು ನಾನು ನನ್ನ ವರಿಷ್ಠರಿಗೆ ತಲುಪಿಸಿದ್ದೇನೆ. ಇದು ಅಧಿಕೃತ ದಾಖಲೆ. ಅದರ ಬಗ್ಗೆ ನಾನೇನೂ ಹೇಳಬಾರದು. ಆರೋಪ ಪಟ್ಟಿಯಲ್ಲಿ ಹೇಳಿರುವಂತೆ ಆ ಮೂರು ಸಭೆಗಳಿಗೂ ಸ್ಪೋಟಕ್ಕೂ ಏನೇನೂ ಸಂಬಂಧವಿಲ್ಲ. ಅದು ಅಂತಿಮ ಸತ್ಯವಲ್ಲ.
ಹಲವು ನೇರಾ ನೇರದ ಪ್ರಶ್ನೆಗಳ ತರುವಾಯ ಇನ್ನೂ ಹಲವು ಪ್ರಶ್ನೆಗಳು ಉಳಿದಿದ್ದವು.
ಈ ಸಂದರ್ಶನದ ಹಿಂದಿನ ಪೂರ್ವರಂಗವನ್ನು ತಿಳಿಯದೆ ಸಂದರ್ಶನ ಸಂಪೂರ್ಣವಾಗದು.
೨೦೦೮ರ ಸೆಪ್ಟಂಬರ್ ೨೯ರಂದು ಮುಂಬೈನಿಂದ ೨೭೦ ಕಿ.ಮೀ ದೂರವಿರುವ ಮಾಲೇಗಾಂವ್ ಎಂಬಲ್ಲಿನ ರಮ್ಜಾನ್ ದರ್ಗಾ ಎಂಬಲ್ಲಿ ಪ್ರಬಲ ಬಾಂಬೊಂದು ಸ್ಪೋಟವಾಗಿತ್ತು. ಅದರಲ್ಲಿ ೭ಜನರು ಮೃತಪಟ್ಟಿದ್ದರು. ಸ್ಪೋಟದ ತರುವಾಯ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಸಂದೇಹಿಸಿದ್ದ ಮಹಾರಾಷ್ಟ್ರ ATS (Anty terrism squad) ಇದ್ದಕ್ಕಿದ್ದಂತೆ ಇದು ಹಿಂದೂ ಸಂಘಟನೆಗಳ ಕೃತ್ಯ ಎಂದು ಸಂಶಯ ವ್ಯಕ್ತಪಡಿಸಿತ್ತು. ಅದರಲ್ಲೂ ಮುಖ್ಯವಾಗಿ "ಅಭಿನವ ಭಾರತ"ಎಂಬ ಸಂಘಟನೆಯದ್ದೇ ಕೃತ್ಯ ಎಂದು ಮಸಾಲೆ ಅರೆದಿತ್ತು. ಈ ಹಿನ್ನಲೆಯಲ್ಲಿ ೨೦೦೯ ರ ಜನವರಿಯಲ್ಲಿ ATS "ಪ್ರತ್ಯೇಕ ಹಿಂದೂ ರಾಷ್ಟ್ರ ಮತ್ತು ಹಿಂದೂ ಸಂವಿಧಾನವನ್ನು ಹೊಂದಿರುವ" ೧೪ ಜನರ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿತ್ತು. ಅದರಲ್ಲಿ ಭಾರತೀಯ ಸೈನ್ಯದ ಲೆ.ಕ. ಪ್ರಸಾದ್ ಶ್ರೀಕಾಂತ್ ಪುರೋಹಿತ್ ಎಂಬ ವ್ಯಕ್ತಿಯೂ ಸೇರಿದ್ದರು. ಸ್ಪೋಟದ ಹೊತ್ತಲ್ಲಿ ಪುರೋಹಿತ್ ಮಧ್ಯಪ್ರದೇಶದ ಸೈನಿಕ ಶಾಲೆಯಲ್ಲಿ ಅರೆಬಿಕ್ ಕಲಿಯುತ್ತಿದ್ದರು ಎಂದೂ ದಯಾನಂದ್ ಪಾಂಡೆ ಎಂಬುವವರೊಂದಿಗೆ ಈ ಪುರೋಹಿತ್ ಫರಿದಾಭಾದ್, ಕೊಲ್ಕೊತ್ತಾ ಮತ್ತು ಭೂಪಾಲ್‌ಗಳಲ್ಲಿ ನಡೆದ "ಭಯೋತ್ಪಾದಕರ" ಸಭೆಗಳಲ್ಲಿ ಭಾಗವಹಿಸಿದ್ದರು ಎಂದೂ ಸಾಕ್ಷಿಗಳನ್ನು ಸೃಷ್ಟಿಸಲಾಯಿತು ಮತ್ತು ಮಾಲೇಗಾಂವ್ ಸ್ಪೋಟದ ಅಂತಿಮ ರೂಪು ರೇಖೆಗಳು ಇಲ್ಲೇ ಸಿದ್ಧವಾದವು ಎಂದು ಬಿಂಬಿಸಲಾಯಿತು. ಮಾಧ್ಯಮಗಳೂ ಕೂಡಾ ಅದನ್ನೇ ಬೊಬ್ಬೆ ಹೊಡೆದವು. ಅಲ್ಲದೆ ಇವರಿಬ್ಬರು ಭಾಗವಹಿಸಿದ್ದ ಉಗ್ರ ಹಿಂದುತ್ವದ ಸಭೆಯಲ್ಲಿ ಸ್ವಾಮಿ ಅಸೀಮಾನಂದರು, ಸಾದ್ವಿ ಪ್ರಜ್ಞಾಸಿಂಗ್ ಮತ್ತು ಒಬ್ಬರು ಶಂಕರಾಚಾರ್ಯರೂ ಭಾಗವಹಿಸಿದ್ದರು ಎಂದೂ ಪ್ರಚಾರ ಮಾಡಲಾಯಿತು.
ಇಷ್ಟು ನಡೆದ ಮೇಲೆ ದಿಗ್ವಿಜಯ ಸಿಂಗರಂಥವರು "ಕೇಸರಿ ಭಯೋತ್ಪಾದನೆ" ಎನ್ನಲಾರಂಭಿಸಿದರು. ರಾಷ್ಟ್ರವಾದಕ್ಕೆ ಭಯೋತ್ಪಾದನೆಯ ಕೊಂಡಿ ಬೆಸೆಯಲು ಬರ್ಖಾ ದತ್ ರಂಥವರು ಲಿಪ್ಸ್ ಸ್ಟಿಕ್ ಮೆತ್ತಿಕೊಂಡು ಶೋಕಿಯ ಕಾರ್ಯಕ್ರಮಗಳನ್ನು ಎಡೆಬಿಡದೆ ನಡೆಸಿಯೇ ಬಿಟ್ಟರು. "ಹಿಂದುತ್ವದಿಂದ ರಾಷ್ಟ್ರದ ಅಧಃಪತನ" ಎಂಬ ವಿಷಯದಲ್ಲಿ ಚರ್ಚೆ ನಡೆಸಲು ಸುಪ್ರಿಂ ಕೋರ್ಟಿನಲ್ಲಿ ಕೆಲಸವಿಲ್ಲದೆ ಆಕಳಿಸುತ್ತಲೇ ಕಾಲಕಳೆಯುವ ಜನರು ಕೋಟನ್ನು ಇಸ್ತ್ರಿ ಮಾಡಿಸಿಕೊಂಡು ಬಂದರು. ಇನ್ನು ಕೆಲವರಿಗೆ ಲೇಖನಕ್ಕೆ ವಿಷಯಗಳೂ ಭಾಷಣಕ್ಕೆ ಸಾಲುಗಳೂ ಯತೇಚ್ಛ ಸಿಕ್ಕವು.
ಆದರೆ ಕೆಲವು ದಿನಗಳ ಹಿಂದೆ ಭಾರತೀಯ ಸೈನ್ಯದ ವಿಚಾರಣಾ ನ್ಯಾಯಾಲಯ COI(court of inquiry) ಕರ್ನಲ್ ಪುರೋಹಿತ್ ಅವರನ್ನು ದೋಷಮುಕ್ತ ಎಂದಾಗ ಮತ್ತು ಪುರೋಹಿತ್ ಮೇಲಿನ ಸಂದರ್ಶನವನ್ನು ನೀಡಿದಾಗ ಅಂದು ಬೊಬ್ಬೆ ಹೊಡೆದ ಯಾವ ಮಾಧ್ಯಮಗಳಿಗೂ ಬಾಯಿಯೇ ಬರಲಿಲ್ಲ. ಪುರೋಹಿತರ ಪರವಾಗಿ ೬೦ ಸಾಕ್ಷಿಗಳು ಇದ್ದಾಗಲೂ ಕಾಣಿಸಲಿಲ್ಲ. ಏಕೆಂದರೆ ಕರ್ನಲ್ ಪುರೋಹಿತ್ ಸ್ಪಷ್ಟವಾಗಿ "ನನಗೆ ಏನು ಸೂಚನೆಯಿತ್ತೋ ಅದನ್ನು ಮಾಡಿದ್ದೇನೆ. ನನ್ನ ಬಾಸ್ ಅವರ ಅಣತಿಯಂತೆ ಎಲ್ಲವನ್ನೂ ಮಾಡಿದ್ದೇನೆ, ಮುಗಿಸಿದ್ದೇನೆ" ಎಂದು ಹೇಳಿದ್ದರು. ಸೈನ್ಯದ ವಿಚಾರಣೆಯೇನೋ ಮುಗಿದಿರಬಹುದು. ಇನ್ನು ನ್ಯಾಯಾಲಯದ ತನಿಖೆ ನಡೆಯಬಹುದು. ಆದರೆ ಅಸಲು ಪ್ರಶ್ನೆಗಳು ಆರಂಭವಾಗುವುದೇ ಇಲ್ಲಿಂದ. ಬೇಹುಗಾರನನ್ನು ಹಿಂದೂ ಸಂಘಟನೆಯೊಳಗೆ ಕಳುಹಿಸಿದ ಉದ್ದೇಶವಾದರೂ ಏನು? ಪುರೋಹಿತರನ್ನು ಕಳುಹಿಸಿದ ಬಾಸ್ ಯಾರು? ಅವರ ಮೇಲೆ ಯಾವ ಜವಾಬ್ದಾರಿಯಿತ್ತು? ಸ್ಪೋಟದ ತರುವಾಯ ಪುರೋಹಿತರ ಕೈವಾಡ ಇದೆ ಎಂದು ಸಂಶಯ ಬಂದಿದ್ದರೂ ಏಕೆ ಸೈನ್ಯ ಮಧ್ಯ ಪ್ರವೇಶಿಸಲಿಲ್ಲ? ಈತ ಬೇಹುಗಾರನೇ ಆಗಿದ್ದರೆ ಸ್ಪೋಟ ನಡೆಯಿತು ಹೇಗೆ? ತಪ್ಪಿಸಲಾಗಲಿಲ್ಲವೇಕೆ? ಪುರೋಹಿತರನ್ನು ATSಗೆ ಒಪ್ಪಿಸುವುದಕ್ಕೂ ಮೊದಲು ಏಕೆ COI ಅವರ ವಿಚಾರಣೆ ನಡೆಸಲಿಲ್ಲ? ಪ್ರಕರಣ ನಡೆದು ಮೂರ್ನಾಲ್ಕು ವರ್ಷಗಳಾದರೂ ಪುರೋಹಿತರನ್ನು ಸೇವೆಯಿಂದ ಏಕೆ ವಜಾ ಗೊಳಿಸಲಿಲ್ಲ? COI ಯ ವಿಚಾರಣೆಯ ತರುವಾಯ ಪುರೋಹಿತ್ " ಇಂದು ನನಗೆ ನಾಳೆ ಮತ್ತೊಬ್ಬರಿಗೆ ಈ ಗತಿ ಬರಬಹುದು" ಎಂದು ಏಕೆ ಹೇಳಿದರು?
ಈ ಪ್ರಶ್ನೆಗಳಿಗೆ ಬಹುಶಃ ಯಾರೂ ಉತ್ತರ ಹುಡುಕಲು ಹೋಗಲಾರರು. ಏಕೆಂದರೆ ಅದು ಜಾತ್ಯತೀತತೆಗೆ ಧಕ್ಕೆ ಎಂಬ ಭಾವನೆಯಿರಬಹುದು. ಭಯೋತ್ಪಾದಕರೆಲ್ಲರೂ ಮುಸಲ್ಮಾನರೇ ಎಂಬ ತತ್ತ್ವವನ್ನು ಅಳಿಸಲು ಸಜ್ಜಾಗಿರುವವರು ಸತ್ಯವನ್ನು ಶೋಧಿಸಲು ಹೋಗಲಾರರು. ಕ. ಪುರೋಹಿತ್ ಅವರನ್ನು ಬಲಿಪಶು ಮಾಡಿ, ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಿದ ಘಟನೆಯನ್ನು ತಡಕಾಡಿದರೆ ಮತ್ತಷ್ಟು ಸತ್ಯಗಳು ಹೊರಬೀಳುತ್ತದೆ.
ಕರ್ನಲ್ ಪುರೋಹಿತ್ ಸಂದರ್ಶನದಲ್ಲಿ " ಆ ಸಭೆಯಲ್ಲಿ ಮಾಲೇಗಾಂವ್ ನ ಬಗ್ಗೆ ಚರ್ಚೆಯೇ ನಡೆದಿಲ್ಲ" ಎಂದು ಹೇಳಿದ್ದರು. ಆದರೆ ATSಇದೇ ಸಭೆಯಲ್ಲಿ ಸ್ಪೋಟದ ಬಗೆ ತೀರ್ಮಾನಗಳಾದವು ಎಂದು ಪ್ರತಿಪಾದಿಸುತ್ತದೆ. ಇದೇ ಸಭೆಯಲ್ಲಿ ದಯಾನಂದ ಪಾಂಡೆ " ಸರಿಯಾಗಿ ನಮಾಜಿನ ಸಮಯಕ್ಕೆ ಸ್ಪೋಟವಾಗಬೇಕು" ಎಂದು ಪುರೋಹಿತರೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸಿದ್ದನೆಂದೂ ಮತ್ತು ಆತ "ಶಾರದಾಪೀಠ" ಎಂಬ ಹೆಸರಿನ ಜಿ ಮೈಲ್ ಮತ್ತು ಯಾಹೂ ಮೈಲ್ ಗಳಿಂದ ಕಳುಹಿಸಿದ ಪತ್ರಗಳಲ್ಲಿ ಸ್ವಾಧ್ವಿ ಪ್ರಜ್ನಾ ಸಿಂಗ್ ಅವರನ್ನು ಅಭಿನಂದಿಸಿ, ಹಿಂದೂ ರಾಷ್ಟ್ರಕ್ಕಾಗಿ ಮಾಲೇಗಾಂವ್ ಸರಣಿ ಮುಂದುವರಿಯುವುದು ಎಂಬ ವಾಕ್ಯಗಳಿರುವುದಾಗಿ ATS ಸಾಕ್ಷಿಗಳನ್ನು ಕಲೆಹಾಕಿತು. ಬಾಂಬು ಹಾಕುವವರು ಇಷ್ಟೊಂದು ಮುಠ್ಠಾಳರಾಗಿರುತ್ತಾರಾ ಎಂಬ ಸಂಶಯ ಇದುವರೆಗೆ ದೊಡ್ಡವರಿಗೆ ಬಂದಿಲ್ಲ. ಅದೇ ಮೈಲ್ ಮುಂದುವರಿದು" ಎಲ್ಲಾ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳನ್ನು ಮುಗಿಸಬೇಕು. ಅವರೆಲ್ಲರೂ ಹಿಂದುಗಳ ಶತ್ರುಗಳು " ಎಂದು ಸಾಗುತ್ತದೆ. ಇಲ್ಲಿ ಯಹೂದಿಗಳನ್ನು ತಂದಾಗಲೇ ಸತ್ಯ ಏನು ಎಂಬುದು ಅರ್ಥವಾಗಬೇಕಿತ್ತು. ಮತ್ತು ಯಾವ ಹಿಂದುವೂ ತನ್ನದಲ್ಲದರ ಬಗ್ಗೆ ಇಷ್ಟೊಂದು ಅಸಹನೆಯನ್ನು ಹೊಂದಿರುವುದನ್ನು ಇದುವರೆಗೆ ಕಂಡಿಲ್ಲ. ಒಂದು ವೇಳೆ ಅಂಥ ಅಸಹನೆ ಇದ್ದಿದ್ದೇ ಆದರೆ ಬಾಂಬುಗಳು ಊರೂರಲ್ಲೂ ಸಿಡಿದುಬಿಡುತ್ತಿದ್ದವು. ಇದರ ಜೊತೆಗೆ ದಯಾನಂದ ಪಾಂಡೆಯ ಲ್ಯಾಪ್‌ಟಾಪಿನಲ್ಲಿ ಮೂರು ಜಿ.ಬಿ ಯಷ್ಟು ಬ್ಲೂಫಿಲ್ಮ್‌ಗಳಿದ್ದವು ಎಂದು ಕೂಡಾ ATS ಅಪಾದನೆ ಹೊರಿಸಿತು.
ಇವನ್ನೆಲ್ಲಾ ನೋಡಿದಾಗ ಹಿಂದೂ ಭಯೋತ್ಪಾದನೆಯನ್ನು ಹುಟ್ಟಿಸಲು ತೆರೆಮರೆಯಲ್ಲಿ ಸಾಕಷ್ಟು ಟೇಬಲ್ ವರ್ಕ್‌ಗಳು ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ. ಒಂದೆಡೆ ಕ. ಪುರೋಹಿತ್ ನನ್ನು ಬಳಸಿಕೊಂಡು ಆತನನ್ನೂ ಸಿಕ್ಕಿಸುವ ತಂತ್ರ, ಇನ್ನೊಂದೆಡೆ ತಮ್ಮ ಪಾಡಿಗೆ ಪ್ರವಚನ ನೀಡುತ್ತಾ ಇರುತ್ತಿದ್ದ ಸಂತರನ್ನು ಜೈಲಿಗಟ್ಟಿ ಅವರ ಚಾರಿತ್ರ್ಯ ಹನನದ ಹುನ್ನಾರಗಳೆಲ್ಲವನ್ನೂ ನೋಡಿದರೆ ಏನೇನೋ ನೆನಪಾಗುತ್ತವೆ. ಸಾಂಪ್ರದಾಯಿಕ ಕೃಷಿಯಲ್ಲಿ ಇಂದಿಗೂ ಒಂದು ಪದ್ದತಿಯಿದೆ. ನಾಟಿ ಕೆಲಸ ಮುಗಿಸಿ, ಪೈರುಗಳು ಮೇಲೇಳುವ ಹಂತದಲ್ಲಿ ಶುರುವಾಗುವ ಪ್ರಾಣಿ-ಪಕ್ಷಿಗಳ ಕಾಟಕ್ಕೆ ಕೃಷಿಕರು ಬೆದರುಗೊಂಬೆಯನ್ನು ಜನರು ಇಂದಿಗೂ ನಿಲ್ಲಿಸುತ್ತಾರೆ. ಅದು ಡೆಮ್ಮಿ ಮನುಷ್ಯ. ಅದು ಕೈ ಅಲ್ಲಾಡಿಸುವುದಿಲ್ಲ. ಕಾಲು ಚಲಿಸುವುದಿಲ್ಲ. ಕೇವಲ ಬೆರ್ಚಪ್ಪ. ಈ ಗೊಂಬೆಯನ್ನು ನೋಡಿ ಪೈರಿಗೆ ಧಾಳಿ ಮಾಡುವ ಪ್ರಾಣಿಗಳು, ಪಕ್ಷಿಗಳು ಭ್ರಮೆಗೊಳಗಾಗುತ್ತವೆ. ಹಾಗೆಯೇ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಲು ಬೆರ್ಚಪ್ಪನನ್ನು ನಿಲ್ಲಿಸಿದಂತೆನಿಸುತ್ತದೆ. ಪ್ರಾಣಿ-ಪಕ್ಷಿಗಳಂತೆ ಜನರೂ ಭ್ರಮೆಗೊಳಗಾದವರಂತೆ ಕಾಣುತ್ತಾರೆ.



