Tuesday, March 22, 2011

ನಾಲ್ಕನೇ ಕಂಬಕ್ಕೀಗ ತುಕ್ಕು ಹಿಡಿದಿದೆ

“ಮಾಧ್ಯಮ ಲೋಕದ ಒಳಸುಳಿಗಳೊಳಗೆ ಹೆಚ್ಚು ವಿಹರಿಸಬಾರದು. ಅಂದರೆ ಅದರ ಬಗ್ಗೆ ಏನೇನೋ ಯೋಚನೆ ಮಾಡಿಬಿಡಬಾರದು. ಎಲ್ಲರೂ ಕಂಡದ್ದನ್ನು ಎಲ್ಲರೂ ಒಪ್ಪಿಕೊಂಡದ್ದನ್ನು,ಎಲ್ಲರೂ ಮಾತಾಡುವುದನ್ನೇ ಒಪ್ಪಿಕೊಂಡುಬಿಡಬೇಕು. ಹಾಗೆ ಇಲ್ಲದಿದ್ದರೂ ಒಪ್ಪಿಕೊಂಡು ಬಿಡಬೇಕು. ಎಲ್ಲಾ ಕೆಲಸದ ಹಾಗೆ ಇದೂ ಒಂದು ಕೆಲಸ ಎಂದು ತೆಪ್ಪಗೆ ಇದ್ದು ಬಿಡಬೇಕು. ಮಾಧ್ಯಮಗಳ ಬಗ್ಗೆ ವಿನಾ ಕಾರಣ ಪ್ರಭಾವಳಿಯೊಂದನ್ನು ನಿರ್ಮಿಸಿಕೊಂಡು ಬಿಡಬಾರದು" ಹೀಗೆಲ್ಲಾ ಅನಿಸಿದ್ದು ನರಸಿಂಹರಾವ್ ಎಂಬ ಹಣ್ಣು ಹಣ್ಣು ದೇಹದ, ಬರೋಬ್ಬರಿ ೮೫ ವರ್ಷದ ಕಿವಿ, ಕಣ್ಣು ಮಂದವಾಗಿರುವ, ಅಗಾಧ ಅನುಭವದ ಪತ್ರಕರ್ತನನ್ನು ನೋಡಿದಾಗ ಮತ್ತು ಅವರ ಕಥೆಯನ್ನು ಕೇಳಿದಾಗ.
೧೯೪೮ರಲ್ಲೇ ಮಂಗಳೂರಿನಿಂದ ಮದ್ರಾಸ್‌ಮೈಲ್‌ಗೆ ವರದಿ ಮಾಡುತ್ತಾ ಬಂದ ರಾಯರು ಕನಿಷ್ಟ ಅದರ ಉದ್ಯೋಗಿಗಳೂ ಆಗಿರಲಿಲ್ಲ. ತಂದೆ ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿದರು ಅಷ್ಟೆ. ಅನಂತರ ಬೊಂಬಾಯಿಯ ಟೈಮ್ಸ್ ಆಫ್ ಇಂಡಿಯಾಕ್ಕೆ, ಮದರಾಸಿನ ದಿ ಹಿಂದೂವಿಗೆ, ಮಂಗಳೂರಿನ ಆಕಾಶವಾಣಿಗೆ, ಕೇರಳದ ಮಾತೃಭೂಮಿಗೆ ದಶಕಗಟ್ಟಲೆ ವರದಿ ಮಾಡಿದ ಅನುಭವವಿದ್ದರೂ ಕೂಡ ಅವರು ಅದರ ನೌಕರರಾಗಿರಲಿಲ್ಲ.
ಅಷ್ಟಕ್ಕೂ ಅಂದು ಪತ್ರಕರ್ತರು ನೌಕರರೇ ಆಗುತ್ತಿರಲಿಲ್ಲ. ಹಾಗೆಯೇ ನರಸಿಂಹರಾಯರು ವರದಿ ಮಾಡುತ್ತಾ ಇಂತಿಷ್ಟು ಉದ್ದದ ವರದಿಗೆ ಇಂತಿಷ್ಟು ಎಂಬ ಲೆಕ್ಕದಲ್ಲಿ ಸಂಭಾವನೆಯನ್ನು ಪಡೆಯುತ್ತಿದ್ದರು. ಹೀಗೇ ಕೊನೆಯವರೆಗೂ ಲೈನೇಜ್ ಆಧಾರದಲ್ಲೇ ದೇಶದ ದೊಡ್ಡ ದೊಡ್ಡ ಪತ್ರಿಕೆಗೆ ಕೆಲಸ ಮಾಡಿದರೂ ಮನೆ ಹೊರೆಯುವಷ್ಟು ಜೇಬು ತುಂಬುತ್ತಿರಲಿಲ್ಲ. ಕೆಲವೊಮ್ಮೆ ಊಟಕ್ಕೂ ಕಷ್ಟವಾಗುತ್ತಿತ್ತಂತೆ. ಪತ್ರಕರ್ತರ ಈ ದುರವಸ್ಥೆಯನ್ನು ನೋಡಿ ಊರಿನ ಅಂಗಡಿಯವರು, ಸಣ್ಣಪುಟ್ಟ ಉದ್ಯಮಗಳು ಪಾರ್ಟ್ ಟೈಮ್ ಕೆಲಸಕ್ಕೆ ಕರೆಯುತ್ತಿದ್ದರಂತೆ. ಆದರೆ ಪತ್ರಕರ್ತರು ಒಂದು ಗೌರವಾರ್ಹ ಕಾರ್ಯವನ್ನು ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ.
ರಾಯರು ೨೦೦ ರೂ. ಸಂಪಾದನೆಯ ಈ ಕೆಲಸದಲ್ಲೇ ನೆಮ್ಮದಿಗೆ ಪ್ರಯತ್ನಪಟ್ಟರಂತೆ. ಸೌಲಭ್ಯಗಳ ಕೊರತೆಯಂತೆ, ಸುದ್ದಿ ಕಳುಹಿಸಲು ಟೆಲಿಗ್ರಾಮನ್ನೇ ನಂಬಬೇಕಾದ ಪರಿಸ್ಥಿತಿಯಂತೆ ಎಂದೆಲ್ಲಾ ರಾಯರು ಹೇಳುತ್ತಾ ಹೋಗುತ್ತಾರೆ. ಮತ್ತು ಅಂದಿನ ಕಾಲದಲ್ಲಿ ಪತ್ರಿಕೋದ್ಯಮ ಎಂದರೆ ಇಡೀ ದೇಶದಲ್ಲಿ ಒಂದೇ ನಿಲುವು ಎಂದು ಹೇಳುವುದನ್ನೂ ಅವರು ಮರೆಯುವುದಿಲ್ಲ. ಅಲ್ಲಿ ಸಿದ್ಧಾಂತಗಳ ಹಂಗಿರಲಿಲ್ಲ. ವರದಿಯಲ್ಲಿ ವಸ್ತುನಿಷ್ಠತೆ ಮುಖ್ಯವಾಗಿತ್ತೇ ಹೊರತು ಒತ್ತಡ, ಬೆದರಿಕೆಗಳಿಗೆ ಆಸ್ಪದವೇ ಇರಲಿಲ್ಲ. ಎಲ್ಲಾ ಪತ್ರಿಕೆಗಳಿಗೆ ಒಂದೇ ನಮೂನೆಯಲ್ಲಿ ಸುದ್ದಿಗಳನ್ನು ಕಳುಹಿಸಬಹುದಿತ್ತು ಎಂದು ಹೇಳುತ್ತಾರೆ. ಅದಿಂದು ಸಾಧ್ಯವೇ ಎಂದೂ ಪ್ರಶ್ನಿಸುತ್ತಾರೆ. ಹೀಗೆ ಹಲವು ವೈಭವದ ಕಥೆಗಳನ್ನು ಹೇಳಿದರೂ ಸಂಬಳದ ವಿಷಯದಲ್ಲಿ ಅದಾವುದೂ ಸಹಾಯಕ್ಕೆ ಬರಲಿಲ್ಲ ಎಂದೂ ಹೇಳುತ್ತಾರೆ. ಕೊನೆಗೆ ಪತ್ರಕರ್ತರ ದುರವಸ್ಥೆಯನ್ನು ಕಂಡು ಕೇಂದ್ರ ಸರಕಾರ ‘ಬಚಾವತ್ ಆಯೋಗ’ದಲ್ಲಿ ಸುಧಾರಣೆಯನ್ನು ತರಬೇಕಾಯಿತಂತೆ. ಪತ್ರಕರ್ತರೂ ಸಂಬಳದ ಕೆಲಸಕ್ಕೆ ಅರ್ಹರು. ಅವರಿಗೂ ನ್ಯಾಯವಾದ ವೇತನ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿತಂತೆ. ವಿಚಿತ್ರವೆಂದರೆ ಹಾಗೆ ಶಿಫಾರಸು ಮಾಡಿದ ವರ್ಷಕ್ಕೇ ರಾಯರಿಗೆ ಅರವತ್ತು ದಾಟಿ ಮತ್ತೆಂದೂ ಸಂಬಳ ತೆಗೆಯಲಾರದೆ ಹೋದರಂತೆ. ಹೀಗೆ ಯಾರೂ ಸಂಬಳ ತೆಗೆದುಕೊಳ್ಳದಿದ್ದಾಗಲೂ, ಎಲ್ಲರೂ ಸಂಬಳ
ತೆಗೆದುಕೊಳ್ಳುತ್ತಿರುವಾಗಲೂ ರಾಯರು ಮಾತ್ರ ಹಾಗೆಯೇ ‘ಲೈನೇಜ್’ ಆಧಾರದಲ್ಲೇ ಪತ್ರಕರ್ತರಾಗಿಯೇ ಇದ್ದರಂತೆ. ಅದು ಹಳೆಯ ಪತ್ರಕರ್ತರೆಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಇಂದು? ಬಚಾವತ್ ಆಯೋಗ ರಚನೆಯಾಗಿ ಸರಿಯಾಗಿ ಇಪ್ಪತ್ತೈದು ವರ್ಷಗಳೂ ಆಗಿರಲಿಕ್ಕಿಲ್ಲ. ಅಂದು ಊಟಕ್ಕಿಲ್ಲದ ಪತ್ರಕರ್ತರಿಗೆ ಊಟಕ್ಕೆ ಆಸ್ಪದ ನೀಡಿ ಎಂದು ಆಯೋಗ ರಚನೆಯಾದರೆ ಇಂದು ಅದೇ ಪತ್ರಕರ್ತರ ಆದಾಯವನ್ನು ಶಂಕಿಸಿ ಆಯೋಗದ ರಚನೆ ಮಾಡಬೇಕೆನಿಸುತ್ತಿಯಲ್ಲಾ ! ಕೆಲವೇ ವರ್ಷಗಳಲ್ಲಿ ಅದೇ ಪತ್ರಕರ್ತರು ಲಕ್ಷ ಕೋಟಿಗಳನ್ನು ತಿನ್ನುವಷ್ಟು ಬೆಳೆದರಲ್ಲಾ? ಇದೇನು ಮಾಯೆ? ಅಂದು ಸಂಬಳವಿಲ್ಲದಿದ್ದರೂ ಗೌರವಾರ್ಹ ಸ್ಥಾನ. ಇಂದು ಕೊಳೆಯುವಷ್ಟು ಸಂಬಳವಿದ್ದೂ ಎಂಜಲಿಗೆ ಆಸೆ! ನರಸಿಂಹರಾಯರಂಥವರ ಮಾತಿಗೆ ಬೆಲೆ ಬರುವುದು ಇಂಥ ಹೊತ್ತಿನಲ್ಲಿ.
ನರಸಿಂಹರಾಯರ ಕಾಲದ ಪತ್ರಿಕೋದ್ಯಮ ಮುಗಿದು ಕಾಲವಾಗಿದೆ. ಮೈಸೂರು ಕರ್ನಾಟಕವಾಗಿದೆ. ತುರ್ತು ಪರಿಸ್ಥಿತಿ ಮುಗಿದು ಪತ್ರಕರ್ತರು ಬಹಳಷ್ಟನ್ನು ನೋಡಿಯಾಗಿದೆ. ನೆರೆದೇಶಗಳೊಂದಿಗೆ ಯುದ್ಧಗಳು ಮುಗಿದು ಅಲಿಪ್ತನೀತಿಯನ್ನು ಹೊತ್ತುಕೊಂಡಿದ್ದು, ಜಾಗತೀಕರಣವೂ ಒಳನುಗ್ಗಿ ದೇಶಾದ್ಯಂತ ಒಂದು ಸ್ಥಿತ್ಯಂತರ ಮತ್ತು ಸಂಚಲನವೂ ಆಗಿದೆ. ಸಿದ್ಧಾಂತಗಳಲ್ಲೂ ಬದಲಾವಣೆಯಾಗಿ ಹಲವು ಬಿದ್ದು, ಇನ್ನು ಕೆಲವು ಮಣ್ಣುಪಾಲಾಗಿ ಸಮಾಜವಾದ, ಸಮತಾವಾದ, ಬಂಡವಾಳಶಾಹಿಗಳು ಗೆದ್ದಲಿನ ಸರಕುಗಳಾಗಿವೆ. ಅದರ ನಂತರ ಹೊರಳಿಕೊಂಡ ಮಾಧ್ಯಮರಂಗ ಒಂದು ಹೊಸ ವೇಷದಿಂದ ಮರು ಅವತರಿಸಿತು. ‘ನಾವು ನವನಾಗರಿಕತೆಯೊಂದನ್ನು ನಿರ್ಮಿಸುತ್ತೇವೆ’ ಎಂಬ ಭ್ರಮೆಯನ್ನು ಹೊತ್ತುಕೊಂಡೇಬಂತು. ವಿಚಿತ್ರವೆಂದರೆ ಆ ಹೊತ್ತಿಗೆ ಮಾಧ್ಯಮ ಒಡೆತನಗಳೆಲ್ಲವೂ ಬೃಹತ್‌ಉದ್ಯಮಗಳ ಕೈಯಲ್ಲಿದ್ದವು. ಜಾಗತೀಕರಣಕ್ಕೆ ಒಳಗಾಗಿ ಜಗತ್ತು ತನ್ನ ಪಾಡಿಗೆ ತಾನು ಒಂದು ನವನಾಗರಿಕತೆಯನ್ನು ಅದಾಗಲೇ ಒಪ್ಪಿಕೊಂಡಾಗಿತ್ತು. ತಾನು ಹಾತೊರೆಯುತ್ತಿದ್ದ ಅದೇ ಲೋಕ ಕಣ್ಣೆದುರು ಕಂಡಾಗ ಮಾಧ್ಯಮ ಅದನ್ನೇ ಸರಕಾಗಿಸಿಕೊಂಡಿತು.
ಅನಂತರದ್ದೆಲ್ಲಾ ಮಾಹಿತಿಯುಗ.
ತಲೆತುಂಬಾ ಮಾಹಿತಿಯನ್ನು ತುಂಬಿಕೊಡುವುದು. ಅದನ್ನೇ ಜ್ಞಾನದ ಅಪರವತಾರ ಎಂಬ ವಿಶೇಷಣದೊಂದಿಗೆ ಬಣ್ಣಿಸುವುದು. ಅಂದಿನಿಂದ ಲಾಗಾಯ್ತು ಈ ಮಾಹಿತಿ ಪ್ರಪಂಚ ಎಷ್ಟೊಂದು ಗಾಢವಾಗಿ ವ್ಯಾಪಿಸಿದೆಯೆಂದರೆ ಆಧುನಿಕ ಪ್ರಪಂಚಕ್ಕೆ ಮಾಹಿತಿಯುಗ ಎಂಬ ಹೆಸರೇ ಬಂದುಬಿಟ್ಟಿದೆ. ಆ ಮಾಹಿತಿ ಅನಿವಾರ್ಯತೆಯಲ್ಲ. ಒಂದು ಅನಿವಾರ್ಯ ಅಲ್ಲದ ಸಂಗತಿ ಉತ್ತಮ ವ್ಯವಸ್ಥೆಯೊಂದನ್ನು ಕೆಡಿಸಲೂಬಹುದು. ಈ ಮಾಹಿತಿ ಯುಗದಲ್ಲಿ ಅನಗತ್ಯ ಪ್ರಾಧಾನ್ಯವೂ ಒಂದು ಮಾರ್ಗವಾಯಿತು. ಅನಗತ್ಯ ಪ್ರಾಧಾನ್ಯ ಮಾಹಿತಿಯನ್ನು ಮಾಲಿನ್ಯಗೊಳಿಸಿತು. ಮಾಲಿನ್ಯದೊಳಗಿಂದ ಮಾಧ್ಯಮಲೋಕ ತನ್ನ ಅಸ್ತಿತ್ವ ಕಂಡುಕೊಂಡಿತು. ಹೀಗೆ ಒಂದು ನವಯುಗಕ್ಕೆ ಹೊರಳಿಕೊಳ್ಳುವ ಹೊತ್ತಿಗಾಗಲೇ ಮಾಧ್ಯಮ ಕ್ಷೇತ್ರದಿಂದ ನರಸಿಂಹರಾಯರಂಥವರು ರಂಗದಿಂದ ನಿರ್ಗಮಿಸಿಯಾಗಿತ್ತು. ಬರ್ಖಾದತ್‌ರಂಥವರು ಕೂತಾಗಿತ್ತು. ಈ ಹಂತದಲ್ಲಿ ಮಾಧ್ಯಮಗಳಿಗೆ ಭಿನ್ನತೆ ಬೇಕಾಗಿತ್ತು. ಆರಂಭದಲ್ಲಿ ಜನ ಬಯಸಿದ್ದನ್ನು ಕೊಡಲಾಗುತ್ತದೆ ಎಂದುಕೊಂಡಿತು. ಇದೀಗ ಆ ಪರಿಸ್ಥತಿ ಇಲ್ಲ. ಜನ ಬಯಸದ್ದನ್ನು, ಅಷ್ಟೇ ಏಕೆ?ನಿರೀಕ್ಷಿಸದ್ದನ್ನೂ ಕೊಡುತ್ತವೆ. ಅಂಥಲ್ಲಿ ಮಾಧ್ಯಮ ವ್ಯಾಪಾರವಾಗದೆ ಹೇಗಿದ್ದೀತು? ಒಂದು ವ್ಯಾಪಾರಿ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಹೇಗೆ ತಾನೆ ಕರೆಯಬಹುದು? ವ್ಯಾಪಾರದ ಮುಖ್ಯ ವ್ಯಾಖ್ಯಾನವೇ ವಸ್ತಗಳ ವಿತರಣೆ. ಅದೂ ಜನ ಬಯಸಿದ್ದನ್ನು. ಆದರೆ ಮಾಧ್ಯಮ ಜನ ಬಯಸದ್ದನ್ನು ವಿತರಿಸಲು, ಅನಗತ್ಯ ಬಯಕೆಗಳನ್ನು ಉದ್ದೀಪಿಸುವ ವ್ಯಾಪಾರಿ ತಂತ್ರಕ್ಕಿಳಿಯಿತು. ಇದಕ್ಕೇನನ್ನಬೇಕು? ಅಂಥದ್ದನ್ನು ಪ್ರಜಾಪ್ರಭುತ್ವ ಆಧಾರಸ್ತಂಭ ಎನ್ನುವುದಾದರೆ ತಂಪುಪಾನೀಯ ಕಂಪೆನಿಗಳನ್ನೂ ಚಾಕಲೇಟ್ ಕಂಪೆನಿಗಳನ್ನೂ ಗಣಿ ಉದ್ಯಮವನ್ನೂ ನಾಲ್ಕನೇ ಆಧಾರಸ್ತಂಭ ಎನ್ನಬಾರದೇಕೆ?
ದೇಶಕ್ಕಿರುವುದು ಒಂದೇ ಕಾರ್ಯಾಂಗ, ಒಂದೇ ರಾಜ್ಯಾಂಗ, ಒಂದೇ ನ್ಯಾಯಾಂಗ ಕೂಡ. ಆದರೆ ಮಾಧ್ಯಮ...? ಎಷ್ಟಿವೆಯೋ ಅಷ್ಟು ಧೋರಣೆಗಳು. ರಾಷ್ಟ್ರೀಯ ಪ್ರಜ್ಞೆ ಯದ್ದೇ ಕೊರತೆ. ಹಲವಕ್ಕೆ ಆಳುವ ಪಕ್ಷಕ್ಕೆ ತಲೆಬಾಗುವ ಸ್ಲೇವರಿಯಾದರೆ ಇನ್ನು ಹಲವರಿಗೆ ಬಂಡಾಯದ ಬಾವುಟ ಹಾರಿಸುವ ಹುಮ್ಮಸ್ಸು. ಬಹುತೇಕ ಇಂದು ಪೇಯ್ಡ್‌ನ್ಯೂಸ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ವರದಿಗಳನ್ನು ಹೊರತುಪಡಿಸಿದ ಮಾಧ್ಯಮ ಕ್ಷೇತ್ರವನ್ನು ಕಾಣಲಾರೆವು. ಪೈಪೋಟಿಯ ಯುಗದಲ್ಲಿ ಪ್ರತಿಸ್ಪರ್ಧೆಯೇ ಚೌಕ. ವೇಗದ್ದೇ ದಾಳ. ಆ ವೇಗಕ್ಕೆ ಎದುರು ಸಿಕ್ಕಿದೆಲ್ಲವೂ ಆದೀತು. ಆದರೂ ಮಾಧ್ಯಮ ದೇಶದ ಆಧಾರಸ್ತಂಭ? ಸತ್ತುಹೋದ ಕಮ್ಯುನಿಸಮ್ಮಿನ ಗುಂಗಿನಲ್ಲಿ ಇನ್ನೂ ಮೇಕಪ್ ಮಾಡಿಕೊಳ್ಳುತ್ತಿರುವ, ಸತ್ಯದ ತಲೆಗೆ ಹೊಡೆದಂತೆ ಸುದ್ದಿ ಮಾಡುವ, ಅಭಿರುಚಿಯನ್ನೇ ಗೌರವಿಸದ, ರೇಜಿಗೆಯಾಗುವಂತೆ ಹಣ ಮಾಡುವ ಮಾಧ್ಯಮಗಳು ಆಧಾರಸ್ತಂಭಗಳು! ನರಸಿಂಹರಾಯರು ಒಂದು ಮಾತೆಂದಿದ್ದರು. “ನಮ್ಮ ಕಾಲದಲ್ಲೂ ರಾತ್ರಿ ಪತ್ರಿಕಾಗೋಷ್ಠಿಗಳಿರುತ್ತಿದ್ದವು. ಈಗೀಗ ರಾಜಧಾನಿಯಲ್ಲಲ್ಲದೆ ಇತರೆಡೆ ಅದು ಅಷ್ಟಾಗಿ ಇಲ್ಲ. ಒಳ್ಳೆಯದು. ರಾತ್ರಿ ಪತ್ರಿಕಾಗೋಷ್ಠಿಗಳಲ್ಲೇ ಲಕೋಟೆಗಳು ಬಟವಾಡೆಯಾಗುತ್ತವೆ" ಎಂದಿದ್ದರು. ಆದರೆ ಮೂಲಗಳು ಹಲವಿರುವಾಗ ಯಕಶ್ಚಿತ್ ಲಕೋಟೆಗಳಿಂದೇನು? ರಾಜಕೀಯ ಪಕ್ಷಗಳೂ ನಾಯಕರೂ ಪತ್ರಕರ್ತರನ್ನು ಎಡತಾಕುವಾಗ ಲಕೋಟೆಗಳ ಕಾಲ ಎಂದೋ ಮುಗಿದುಹೋಗಿದೆ. ಈಗೇನಿದ್ದರೂ ಸೈಟುಗಳಿಂದ ಮೇಲ್ಮಟ್ಟ ವ್ಯವಹಾರ.
ಹೀಗೆ ಯಾವ ಕೋನದಿಂದ ನೋಡಿದರೂ ಮಾಧ್ಯಮವನ್ನು ನಾಲ್ಕನೆ ಸ್ತಂಭ ಎಂದೂ ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಹೇಳಲಾಗುತ್ತಿಲ್ಲ. ನೆನಪು ಮಾಡಿಕೊಂಡರೂ ಗಾಂಯಂತೆ ತಿಲಕರಂತೆ ಕಿಂಚಿತ್ತಾದರೂ ಕಾಣುವ ರಾಷ್ಟ್ರಮಟ್ಟದ ಪತ್ರಕರ್ತರನ್ನು ಕಾಣಲಾರೆವು. ಇವತ್ತೇನಿದ್ದರೂ ಹೇರ್‌ಸ್ಟೈಟ್ನಿಂಗ್ ಮಾಡಿಸಿಕೊಂಡ ಬರ್ಖಾದತ್, ಕೋಟುದಾರಿ ಸರ್‌ದೇಸಾಯಿ, ಪ್ರಣವ್ ರಾಯ್, ಸಾಗರಿಕಾ ಘೋಷ್‌ಗಳಂತಹ ಶೋಕೀಲಾಲರೇ ಮುಖ್ಯವಾಹಿನಿಯಲ್ಲಿ ಕಾಣುತ್ತಾರೆ.ಇನ್ನುಳಿದಂತೆ ನಮ್ಮ ರಾಜ್ಯದಲ್ಲೂ ಅಂಥವರಿದ್ದಾರೆ. ಪರಮ ಅಹಂಕಾರದ, ಸರಕಾರಿ ಸೈಟು ಪಡೆದು ಉಪ್ಪುತಿಂದ ಋಣಕ್ಕೆ ಒಳಗಾಗಿ ಬಾಯಕಟ್ಟಿಕೊಂಡವರೂ ಲೋಕಕ್ಕೆ ಬುದ್ಧಿ ಹೇಳುವವರೂ ಇದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಇದ್ದಾರೆ. ಇಂದು ಪತ್ರಕರ್ತರಲ್ಲಿ ಎಷ್ಟೊಂದು ದಾರ್ಷ್ಟ್ಯ ಮನೆಮಾಡಿದೆಯೆಂದರೆ ಒಂದು ಹಂತ ದಾಟಿದ ಅನಂತರ ಸಮಾಜದೊಳಗೆ ಆತ ಎಂದೂ ಸಾಗಲಾರ. ಇಂಥವರನ್ನು ಕಟ್ಟಿಕೊಂಡು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನ್ನುತ್ತೇವಲ್ಲಾ?
"soldiers pray for peace, but hope for war" ಎಂಬ ಸೊಲ್ಲೊಂದಿದೆ. ಅದನ್ನು ಸೈನಿಕರನ್ನು ಬಿಟ್ಟು ಪತ್ರಕರ್ತರಿಗೂ ಅನ್ವಯಿಸಿಬಿಟ್ಟರೆ ಕಷ್ಟ. ವಿಪರ್ಯಾಸವೆಂದರೆ ಇಂದು ಆ ಸೊಲ್ಲು ಮಾಧ್ಯಮಕ್ಕೂ ಅನ್ವಯಿಸುತ್ತದೆ. ಇತ್ತೀಚೆಗೆ media crooks ಎಂಬ ವೆಬ್‌ಸೈಟೊಂದು ಪತ್ರಕರ್ತರ ಪ್ರಾರ್ಥನೆಗಳು ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. ಆ ಐದು ಪ್ರಾರ್ಥನೆಗಳು ಸದ್ಯದ ಮಾಧ್ಯಮದ ಧೋರಣೆಗಳು , ಮಾನಸಿಕತೆ ಮತ್ತು ಮಟ್ಟವನ್ನು ತೋರಿಸುತ್ತಿದ್ದವು.
ಪ್ರಾರ್ಥನೆ ಒಂದು - ನೈಸರ್ಗಿಕ ವಿಕೋಪಗಳು : ಮಾಧ್ಯಮದ ಮೊದಲ ಪ್ರಾರ್ಥನೆ ನೈಸರ್ಗಿಕ ವಿಕೋಪಗಳಂತೆ. ಒಮ್ಮೆ ಇಂಥ ವಿಕೋಪಗಳುಂಟಾದರೆ ಹಲವು ಸಮಯದವರೆಗೆ ಮೀಡಿಯಾ ಸುಗ್ಗಿ ಆಚರಣೆ ಮಾಡುವುದನ್ನು ಗಮನಿಸಿದ್ದೇವೆ. ಅದು ಹಲವು ಕ್ರಿಯೇಟಿವಿಟಿ ಕೈಗೊಳ್ಳುವ ಮಹತ್ತ್ವದ ಕಾಲ ಎಂದು ಬಹುತೇಕ ಎಲ್ಲಾ ಮಾಧ್ಯಮಗಳೂ ತಿಳಿಯುತ್ತವೆ.
ಪ್ರಾಥನೆ ನಂ. ಎರಡು-ಸೆಲಬ್ರಿಟಿಗಳ ರೇಪು/ಕೊಲೆ/ಸಾವು : ವಿಶೇಷ ಪುರವಣಿಗಳು, ಅಡಿಗಡಿಗೆ ಬ್ರೇಕಿಂಗ್ ನ್ಯೂಸುಗಳು, ತನಿಖಾ ವರದಿಗಳಿಗೆ ಈ ಹೊತ್ತು ಪ್ರಶಸ್ತ. ಹಾಗಾಗಿ ಹಲವರು ಸತ್ತ ಅನಂತರವಷ್ಟೇ ಸುದ್ದಿಯಾಗುತ್ತಾರೆ. ಜೆಸ್ಸಿಕಾಲಾಲ್‌ನಂತೆ.
ಪ್ರಾರ್ಥನೆ ನಂ. ಮೂರು-ಚುನಾವಣೆಗಳು : ಬರಪೂರ ಸುದ್ದಿ ಮತ್ತು ಕೈ ತುಂಬಾ ಝಣಝಣಕ್ಕೆ ಇದಕ್ಕಿಂತ ಬೇರೆ ಯಾವ ಹೊತ್ತಿದೆ. ಹಾಗಾಗಿ ಈ ಪ್ರಾರ್ಥನೆ.
ಪ್ರಾರ್ಥನೆ ನಂ. ನಾಲ್ಕು - ಹಿಂದೂವಿರೋ ಧೋರಣೆ:ದೇಶದ ಬಹುದೊಡ್ಡ ಮಾಧ್ಯಮಗಳು, ಖ್ಯಾತರೆನಿಸಿಕೊಂಡ ಪತ್ರಕರ್ತರು ಬೆಳಕಿಗೆ ಬಂದಿದ್ದೇ ಹಿಂದುತ್ವದತ್ತ ವಕ್ರ ಚಿತ್ತವನ್ನು ಬೀರಿ. ಇದೀಗಂತೂ ಈ ಪ್ರಾರ್ಥನೆ ಸಾಕಷ್ಟು ಫಲಿಸಿದೆ. ನವನವೀನ ಹಿಂದೂ ವಿರೋ ಸುದ್ದಿಗಳು, ಮಾಹಿತಿಗಳು ಬರುತ್ತಿವೆ.
ಪ್ರಾರ್ಥನೆ ನಂ. ಐದು - ಭಯೋತ್ಪಾದಕ ಘಟನೆಗಳು : ಊರು ಕೊಳ್ಳೆ ಹೋಗಲಿ, ಘಟನಾಸ್ಥಳದಿಂದ ಎದ್ದೂ ಬಿದ್ದೂ ನಾಟಕವಾಡಿ, ಮೊದಲು ತಲುಪಿ ಸೆನ್ಸೇಶನಲ್ ಸೃಷ್ಟಿಸಲು ಇದಕ್ಕಿಂತ ಬೇರೆ ಸಂದರ್ಭವಿಲ್ಲ. ಹಾಗಾಗಿ....
ಇದನ್ನು ಇಂಥ ಮಾಧ್ಯಮಕ್ಕೆಂದು ವಿಭಾಗಿಸುವ ಹಾಗಿಲ್ಲ. ಹಾಗಾಗಿ ಯಾವ ಮಾಧ್ಯಮವನ್ನೂ ಆಧಾರಸ್ತಂಭ ಎಂದುಕೊಳ್ಳುವ ಹಾಗಿಲ್ಲ. ಮನಬಿಚ್ಚಿ ಬರೆಯಲು ಇಂದು ಬಹುತೇಕ ಪತ್ರಕರ್ತರಿಗೆ ಅವಕಾಶವಿಲ್ಲ.ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪರಿಸ್ಥಿತಿಗೋ ಗುಲಾಮಗಿರಿಗೋ ಬಂ. ಒಂದು ಕಾಲದ ಉಕ್ಕಿನ ಆಧಾರಸ್ತಂಭ ಇಂದು ತುಕ್ಕು ಹಿಡಿದಿದೆ.indian mediais the real school for scoundrals ಎಂದು ಮೊನ್ನೆ ಯಾರೋ ಅಂದಿದ್ದರು.
ಅಂದ ಹಾಗೆ ನರಸಿಂಹರಾಯರೀಗ ಪತ್ರಿಕೆ ಓದುತ್ತಿಲ್ಲ.

Wednesday, March 16, 2011

ಬೂದಿ ಹಾರುತ್ತಿದೆ ನೋಡಿದಿರಾ...


ತಪ್ಪ ಪೂಜಾರಿಗಳ ಮನೆಗೆ ಮಟಮಟ ಮಧ್ಯಾಹ್ನ ಹೋದಾಗ ಅವರ ಮನೆಯಲ್ಲಿ ಕರೆಂಟಿರಲಿಲ್ಲ. ಕರಾವಳಿಯ ಸೆಖೆ ಮತ್ತು ಉರಿ ಇತ್ತು. ಅವರ ಮಗನಿಗೆ ತೆಂಡೂಲ್ಕರನ ಬ್ಯಾಟಿಂಗ್ ನೋಡಲಾಗದ ಅಸಹನೆ ಇತ್ತು. ಮನೆಯೊಳಗೆ ಮತ್ತು ಹೊರಗೆ ಕಂಡೂ ಕಾಣದಂತೆ ಏನೋ ಒಂದು ಕೂತಂತಿತ್ತು. ಹೋದವರ ಮೈಗಳಲ್ಲೂ ಏನೋ ಅಂಟು, ಕೆರೆತ, ತೆಳುವಾದ ಕೆಮ್ಮು, ಹೊರಗೂ ಗಾಳಿಯಾಡುತ್ತಿಲ್ಲ. ಏಕೆಂದರೆ ಮರಗಳಲ್ಲಿ ಹಸಿರೇ ಇಲ್ಲ. ಸೊರಗಿರುವ ಮರಗಳು. ಕುಡಿಯಲು ಕೊಟ್ಟ ತಣ್ಣನೆಯ ನೀರಿನಲ್ಲೂ ಉಪ್ಪಿನ ಘಾಟು. ಲೋಡ್ ಶೆಡ್ಡಿಂಗ್‌ಗೆ ಒಳಗಾದ ಆ ಮನೆಯಲ್ಲಿ ಕಂಡು ಬಂದ ಸನ್ನಿವೇಷಗಳು ಇಷ್ಟು.ವಿಪರ್ಯಾಸವೆಂದರೆ ಅನತಿ ದೂರದಲ್ಲೇ ಬೃಹತ್ ಉಷ್ಣವಿದ್ಯುತ್ ಸ್ಥಾವರವೊಂದಿತ್ತು. ನಿರಂತರ ಉತ್ಪಾದನೆ ಮಾಡುತ್ತಿತ್ತು.ಐತಪ್ಪ ಪೂಜಾರಿಗಳ ಮನೆಯಲ್ಲಿ ನೀರು ಸೊರಗಿರುವುದಕ್ಕೆ , ಹಸಿರು ಮಾಸಿರುವುದಕ್ಕೆ, ಕ್ರಿಕೆಟ್ ನೋಡಲಾಗದ್ದಕ್ಕೆ ಕಾರಣ ಕೂಡ ಅದೇ ಆಗಿತ್ತು.
ಅದು ನಂದಿಕೂರು. ಮಂಗಳೂರಿನಿಂದ ಉಡುಪಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಸಾಗಿ, ಪಡುಬಿದ್ರಿ ಎಂಬ ಪುಟ್ಟ ಪಟ್ಟಣದಿಂದ ಬಲಕ್ಕೆ ತಿರುಗಿಕೊಂಡರೆ ಎರಡೇ ಎರಡು ಕಿ.ಮೀ.ನಲ್ಲಿ ಸಿಗುವುದು ನಂದಿಕೂರು. ಅಲ್ಲಿಗೆ ಸಾಗಿದವರು ಮರಳಿ ಬರುವಾಗ ಹೋದಂತೆಯೇ ಹಿಂತಿರುಗುವುದಿಲ್ಲ. ಬಟ್ಟೆಗಳಿಗೆ ಕಲೆ ಅಂಟಿಸಿಕೊಂಡು, ಚರ್ಮಕ್ಕಷ್ಟು ಖನಿಜಗಳೂ ಲವಣಗಳೂ ಮತ್ತಿನ್ನೇನೋ ಒಂದನ್ನು ತುಂಬಿಸಿಕೊಂಡು, ದೇಹಕ್ಕಷ್ಟು ಗಂಧಕ- ರಂಜಕ-ಕಾರ್ಬನ್‌ಗಳನ್ನು ತುಂಬಿಸಿಕೊಂಡು ಮರಳಿ ಬರಬೇಕು. ಹೋದವರನ್ನು ನಂದಿಕೂರು ಬರಿಗೈಯಲ್ಲಿ ಕಳುಹಿಸುವುದಿಲ್ಲ.
ಏಕೆಂದರೆ ಅಲ್ಲಿ ಬೂದಿ ಹಾರುತ್ತದೆ. ಸರಕಾರಗಳು, ಬೃಹತ್ ಕಂಪನಿಗಳ ಪಾಲಿಗೆ ಆ ಬೂದಿ ಭಸ್ಮವೇ ಇರಬಹುದೇನೋ. ಆದರೆ ಪರಿಸರಕ್ಕೆ , ಕೃಷಿಗೆ ಮತ್ತು ಜನರಿಗೆ ಮಾತ್ರ ಅದು ಅಂತಿಂಥ ಬೂದಿಯಲ್ಲ. ಇಟ್ಟರೆ ಸೆಗಣಿಯಾದೆ ಸುಟ್ಟರೆ ವಿಭೂತಿಯಾದೆ ಎನ್ನುವಂತಹ ಬೂದಿ ಇದಲ್ಲ. ಅದು ಗಂಧಕದ ಡೈ ಆಕ್ಸೈಡ್‌ಗಳು ಮತ್ತು ಸಾರಜನಕದ ಆಕ್ಸೈಡ್‌ಗಳ ಮಿಶ್ರಿತ ಬೂದಿ. ಆ ಬೂದಿ ಹಾರುತ್ತದೆ.ಹಾರುತ್ತಲೇ ಇರುತ್ತದೆ. ಎಂದೂ ಅದು ನೆಲಮುಟ್ಟುವುದಿಲ್ಲ. ಹಲವು ಬಾರಿ ಅದು ಕಾಣುವುದೇ ಇಲ್ಲ. ಅದು ಕೊಳೆಯುವುದಿಲ್ಲ. ಏಕೆಂದರೆ ಅದು ಕಲ್ಲಿದ್ದಲಿನ ಬೂದಿ. ಕಲ್ಲಿನಂತೆ ಗಟ್ಟಿಯಾಗಿರುವ ಕಲ್ಲಿದ್ದಲ್ಲನ್ನು ನುಣ್ಣಗೆ ಅರೆದು ಪುಡಿಮಾಡಿ ಸುಟ್ಟು ಸಮುದ್ರದ ಉಪ್ಪುನಿರನ್ನು ಬಳಸಿಕೊಂಡು ಸ್ಥಾವರಗಳಲ್ಲಿನ ಟರ್ಬೈನುಗಳನ್ನು ತಿರುಗಿಸಿ ಹೊರಹಾಕಿದ ಬೂದಿ.
ಹೀಗೆ ನಂದಿಕೂರಿನಲ್ಲಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಹೀಗೆ ಸುಟ್ಟ ಮತ್ತು ತಿರುಗಿಸಿದ ಅನಂತರ ತ್ಯಾಜ್ಯವನ್ನು ಉದ್ದನೆಯ ಚಿಮಿಣಿಗಳ ಮೂಲಕ ಆಕಾಶಕ್ಕೆ ಬಿಡಲಾಗುತ್ತದೆ. ಹೀಗೆ ಬಿಡಲ್ಪಟ್ಟ ತ್ಯಾಜ್ಯದಲ್ಲಿ ಸಾರಜನಕ, ಗಂಧಕಗಳೊಟ್ಟಿಗೆ ಸಮುದ್ರದ ಉಪ್ಪುನೀರಿನ ಉಪ್ಪುಪ್ಪಾದ ಹಬೆಗಳು ಒಟ್ಟು ಸೇರಿ ವಿಚಿತ್ರವಾದ ಮತ್ತೇನೂ ಒಂದು ವಿಷವನ್ನು ಉತ್ಪತ್ತಿ ಮಾಡುತ್ತದೆ. ಅದು ಕಿ.ಮೀ. ದೂರದವರೆಗೆ ಹಾರುತ್ತದೆ. ಹಾರುತ್ತದೆ ಎಂದರೆ ಹನಿಯುತ್ತದೆ. ಅನಿಲಯುಕ್ತವಾಗಿ ಪರಿಸರವನ್ನೆಲ್ಲಾ ವ್ಯಾಪಿಸುತ್ತದೆ. ಇನ್ನೊಂದೆಡೆ ಸುಟ್ಟ ಕಲ್ಲಿದ್ದಲಿನ ಹುಡಿಯ ತ್ಯಾಜ್ಯ ಬೂದಿಯಿದ್ದು. ಇದರ ವಿಲೇವಾರಿ ಇನ್ನೂ ಬೃಹತ್ ಪ್ರಮಾಣದ್ದು. ಅತ್ತ ಟಬೈನುಗಳು ತಿರುಗುತ್ತಿದ್ದಂತೆಯೇ ಇತ್ತ ಅದರ ವಿಲೇವಾರಿಯಾಗುತ್ತದೆ. ಅದೂ ಹೇಗೆ? ಟ್ಯಾಂಕರುಗಳು ಮತ್ತು ಟ್ರಕ್ಕುಗಳು ತುಂಬಿದ ಬೂದಿಯನ್ನು ಹೊತ್ತು ನಂದಿಕೂರಿನ ಆಸುಪಾಸಿನ ಊರುಗಳತ್ತ ಧಾವಿಸುತ್ತದೆ. ಒಂದು ಆಯಕಟ್ಟಿನ ಜಾಗವನ್ನೂ ಅದು ಕಂಡುಕೊಂಡಿದೆ. ಮೂರು ಬೆಟ್ಟಗಳು ಸೇರುವ ಒಂದು ಜಾಗ.
ಅದನ್ನು ಕೊರೆದು ಗುಂಡಿ ಮಾಡಿ ೫ ಎಕರೆಯನ್ನು ಮಾಡಿಕೊಂಡಿದೆ. ಅಲ್ಲಿ ನಿತ್ಯ ಬೂದಿಯನ್ನು ಡಂಪ್‌ಮಾಡಲಾಗುತ್ತದೆ. ಅಪರೂಪಕ್ಕೆ ಕೆಲವೊಮ್ಮೆ ಬೂದಿಗೆ ನೀರು ಮಿಶ್ರ ಮಾಡಿ ಹಾಕಲಾಗುತ್ತದೆ. ಆ ಬೂದಿಯೇ ವಿಚಿತ್ರ ಗುಣವುಳ್ಳದ್ದು. ನೀರನ್ನು ಬಹುಬೇಗ ಹೀರಿಕೊಂಡು ತಾನು ಒಣಗುತ್ತದೆ. ಹಾರಲು ತವಕಿಸುತ್ತದೆ. ಬುಸಬುಸನೆ ಗಾಳಿಗೆ ಎಲ್ಲೆಂದರಲ್ಲಿ ಅಂಕುಶವಿಲ್ಲದೆ ಹಾರುತ್ತದೆ.
ಅಂದಹಾಗೆ ಇಷ್ಟೆಲ್ಲಾ ಮಾಡುತ್ತಿರುವ ಕಂಪೆನಿಯ ಹೆಸರು ‘ಉಡುಪಿ ಪವರ್ ಕಾರ್ಪೋರೇಷನ್’. ಹೆಸರೇ ಮೋಸ ಮಾಡುವಂತಿದೆ. ಹೆಸರಿನ ಬಲದಿಂದ ಅದೊಂದು ಅಪ್ಪಟ ಸರಕಾರಿ ಸ್ವಾಮ್ಯದ ಸಂಸ್ಥೆ ಎಂದುಕೊಳ್ಳುವ ಹಾಗಿಲ್ಲ.LANCO ಎಂಬ ಖಾಸಗೀ ಕಂಪೆನಿಯ ಈ ಸ್ಥಾವರದ ಹೆಸರು ‘ಉಡುಪಿ ಪವರ್ ಕಾರ್ಪೊರೇಶನ್’.
ಹೀಗೆ ಸ್ಥಳೀಯ ಹೆಸರುಗಳನ್ನಿಟ್ಟುಕೊಂಡರೂ ಉಡುಪಿಗೂ ಅದಕ್ಕೂ ಬಾಧರಾಯಣ ಸಂಬಂಧವೂ ಇಲ್ಲ. ಸಮಸ್ತ ಕರಾವಳಿಯನ್ನೇ ಗುಡಿಸಿ ಗಂಡಾಂತರ ಮಾಡಬಲ್ಲ ಪ್ರಣಾಳಿಕೆಯ ಕಂಪೆನಿಗಳು ಇವು. ವಿಶಾಖಪಟ್ಟಣದ ಕಾಂಗ್ರೆಸ್ ಸಂಸದ ರೆಡ್ಡಿ ಎಂಬವರ ಒಡೆತನದ ಈ ಕಂಪೆನಿಗೆ ಇದಕ್ಕೂ ಮೊದಲು ವಿದ್ಯುತ್ ಉತ್ಪಾದನೆ ಮಾಡಿದ ಅನುಭವವಿಲ್ಲ. ಇದೊಂದು ಅಪ್ಪಟ ವ್ಯಾವಹಾರಿಕ ಸಂಸ್ಥೆ. ಆದರೂ ರಾಜಕೀಯ ಶಕ್ತಿ, ಹಣಬಲ, ಕುಟಿಲತೆಗಳ ಬಲದಿಂದ ನಂದಿಕೂರಿನಂಥ ಕೃಷಿ ಭೂಮಿಯಲ್ಲಿ ಸ್ಥಾವರವನ್ನು ಸ್ಥಾಪಿಸುವಲ್ಲಿ ಅದು ಯಶಸ್ವಿಯಾಗಿದೆ. ಅದೂ ಬೃಹತ್ ಪ್ರಮಾಣದಲ್ಲಿ . ಆರಂಭದಲ್ಲೇ ೧೦೧೫ ಮೆ.ವಾ. ಸಾಮರ್ಥ್ಯಕ್ಕೆ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ೧೨೦೦ ಮೆ. ವಾಟ್‌ಗೆ ಬೇಡಿಕೆಯನ್ನೂ ಇಟ್ಟಿದೆ. ಒಂದು ಅನನುಭವಿ ಕಂಪೆನಿ ಭಾರತದಲ್ಲಿ ಹೀಗೆಲ್ಲಾ ಬದುಕುತ್ತವೆ.
ಅದಕ್ಕೆ ಭೂಮಿಯನ್ನು, ರಕ್ಷಣೆಯನ್ನು ಕೊಡಲು ಸರಕಾರಗಳು ಸಿದ್ಧವಾಗಿಡುತ್ತವೆ. ಪ್ರಸ್ತುತ ನಂದಿಕೂರು ಸ್ಥಾವರದಲ್ಲಿ ಒಂದು ಪ್ಲಾಂಟ್ ಮಾತ್ರ ಸ್ಥಾಪನೆಯಾಗಿದೆ. ಉಳಿದದ್ದು ಕಾಮಗಾರಿಯಲ್ಲಿದೆ. ಒಂದಕ್ಕೇ ಇಷ್ಟು ಬೂದಿ ಹಾರುತ್ತಿದೆ. ಹಾರಿಹಾರಿ ಊರು ಹಾಳು ಮಾಡುತ್ತಿದೆ. ನಂದಿಕೂರು ಸುತ್ತಮುತ್ತಲಿನ ಕುತ್ಯಾರು, ಕೊಲೆಚ್ಚೂರು, ಸಾಂತೂರು, ಪಡುಸಾಂತೂರು ಊರುಗಳಲ್ಲಿ ಬೂದಿಗಳ ಕಾಟದಿಂದ ಜನ ವಿಭೂತಿ ಧರಿಸುವುದಕ್ಕೂ ಹೆದರುವಂತಾಗಿರುವುದು ಸುಳ್ಳಲ್ಲ.ಸ್ಥಾವರದ ಪಕ್ಕದಲ್ಲೇ ವಾಸಮಾಡುತ್ತಿರುವ ಜನಾರ್ದನ ಸುವರ್ಣರು ಸಣ್ಣ ರೈತರು. ಸ್ವಲ್ಪ ಭತ್ತ, ನಾಲ್ಕು ಹಸುಗಳನ್ನಿಟ್ಟುಕೊಂಡು ಬದುಕುತ್ತಿರುವವರು. ಚಿಮಣಿಗಳಿಂದ ಹೊರಬರುವ ಅನಿಲಗಳಿಂದ ಇವರ ಬದುಕು ಅಪಾಯದಲ್ಲಿದೆ. ಭತ್ತದ ತೆನೆ ಸೊಗಸಾಗಿ ಕಟಾವಿಗೆ ಬರುತ್ತದೆ. ಕಟಾವು ಮಾಡಿದರೆ ಬರೀ ಜೊಳ್ಳ್ಳುಜೊಳ್ಳು. ಹಸುಗಳು ಸೊರಗಿವೆ.
ಮೇವು ಹುಟ್ಟುತ್ತಿಲ್ಲ. ಕೆಲವು ಹಸುಗಳು ಕರು ಹಾಕುತ್ತಿಲ್ಲ. ಸಂಜೆಯಾಯಿತೆಂದರೆ ಕೊಡೆಹಿಡಿದೇ ಹೊರಬರಬೇಕು. ಮರಗಳಿಂದಲೂ ಹನಿಗಳು ತೊಟ್ಟಿಕ್ಕುತ್ತವೆ. ಇದ್ದ ಎರಡು ಹಲಸಿನ ಮರಗಳು ಒಣಗುತ್ತಿವೆ. ಬಾಳೆ ಗಿಡಗಳು ಕರಕಲಾಗುತ್ತಿವೆ. ಬಾವಿಯ ನೀರು ಕಪ್ಪು ಕಪ್ಪಾಗಿದೆ. ಕುದಿಸಿದರೂ ಕಪ್ಪು ಹೋಗದು. ಮಕ್ಕಳಿಗೆ ದಿನನಿತ್ಯ ಬಿಸ್ಲೇರಿ ಬಾಟಲಿನಿಂದ ನೀರು ತಂದು ಕುಡಿಸುತ್ತಿದ್ದಾರೆ. ಎಲ್ಲವೂ ಕರೆಂಟಿಗಾಗಿ. ಎಲ್ಲೋ ಯಾರಿಗೋ ಬೆಳಕು ನೀಡುವುದಕ್ಕಾಗಿ. ನಂದಿಕೂರಿನವರೇ ಆದ ಐತಪ್ಪ ಪೂಜಾರಿಗಳು ಸ್ವಲ್ಪ ಸ್ಥಿತಿವಂತರು. ಆದರ್ಶ ಕೃಷಿಕರು. ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದರು. ಕಳೆದ ಕೃಷಿಯಲ್ಲಿ ಕೆಲಸ ಮುಗಿಸಿ ನಿಲ್ಲಿಸಿದ್ದ ಟಿಲ್ಲರನ್ನು ತಿಂಗಳ ನಂತರ ಸ್ಟಾರ್ಟ್ ಮಾಡುವಾಗ ನಿಶ್ಚಲವಾಗಿತ್ತು. ಅಷ್ಟೇ ಅಲ್ಲ ಮುಟ್ಟಿದೆಡೆ ಮುರಿದು ಬೀಳುತ್ತಿತ್ತು.ಅವರು ದನದ ಕೊಟ್ಟಿಗೆಗೆ ಹಾಕಿದ ಝಿಂಗ್‌ಶೀಟಿನ ಮಾಡು ಬಾಯಿ ಬಿಡುತ್ತಿದೆ. ಕಿಟಕಿಯ ಗ್ರಿಲ್ಲುಗಳು, ಮನೆಯ ಪಾತ್ರೆಗಳು, ಅಡಿಕೆ ಕತ್ತರಿಸುವ ಕತ್ತಿ, ನಾಯಿಯ ಗೂಡು, ನಾಯಿ ಕಟ್ಟುವ ಸರಪಳಿಗಳು ತುಕ್ಕು ಹಿಡಿಯುತ್ತಿವೆ. ಕಬ್ಬಿಣವೆಂದರೆ ಪೂಜಾರಿಗಳು ಬೆಚ್ಚಿ ಬೀಳುತ್ತಾರೆ. ಐತಪ್ಪ ಪೂಜಾರಿಗಳ ಶ್ರೀಮತಿಯವರ ಹೊಲಿಗೆ ಯಂತ್ರ ಕಿರಕಿರವೆನ್ನುತ್ತಿದೆ. ಅಂಗಳದಲ್ಲಿನ ತುಳಸಿ ಗಿಡಕ್ಕೆ ರಾಸಾಯನಿಕ ಹನಿಗಳ ಕಾಟ. ಕಾಣದ ಕೈಗಳ ದೋಷಕ್ಕೆ ಪರಿಹಾರವಿದೆ. ಇದಕ್ಕೇನು ಪರಿಹಾರ ಎಂದು ಪ್ರಶ್ನಿಸುತ್ತಾರೆ ಪೂಜಾರಿ ದಂಪತಿಗಳು.
೯೦ರ ದಶಕದಲ್ಲಿ ಇದೇ ಜಾಗದಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ನಾಗಾರ್ಜುನ ಎಂಬ ಕಂಪೆನಿ ಬಂದಿತ್ತು. ಭೂಕಬಳಿಕೆಯೂ ಆಗಿ ಬೇಲಿಯೂ ಹಾಕಿತ್ತು. ಆದರೆ ಉತ್ಪಾದನೆಯವರೆಗೆ ಅದು ಮುಂದುವರೆದಿರಲಿಲ್ಲ. ಆ ಪ್ರದೇಶದಲ್ಲಿ ಕರಾವಳಿಯಲ್ಲಿ ಪ್ರಭಾವಿ ಎಂದು ಕರೆಯಲಾಗುವ ಬಬ್ಬು ಸ್ವಾಮಿಗಳ ದೇಗುಲವಿತ್ತು.ಭೂಕಬಳಿಕೆಯ ತರುವಾಯ ಸ್ಥಾವರದ ‘ಬಕೇಟ್’ನ ಪಕ್ಕದಲ್ಲಿ ಬಬ್ಬು ಸ್ವಾಮಿಗಳು ನೆಲೆ ನಿಂತಿದ್ದಾರೆ. ಪೂಜೆಯಿಲ್ಲ. ಪುನಸ್ಕಾರವಿಲ್ಲ. ಬ್ರಹ್ಮಕಲಶಗಳಂತೂ ಮೊದಲೇ ಇಲ್ಲ. ಆಮ್ಲದ ಅಭಿಷೇಕ , ರಾಸಾಯನಿಕಗಳ ಆರತಿ. ಅಭಿವೃದ್ಧಿಗೆ ಭಾವನೆಗಳ ಹಂಗಿಲ್ಲ. ಸ್ಥಾವರದ ಹೊರಗೆ ಅನತಿ ದೂರದಲ್ಲೇ ಬ್ರಹ್ಮ ಬೈದರ್ಕಳ ಗರಡಿಯೊಂದಿದೆ. ಗರಡಿಯ ತಗಡಿನ ಹೊದಿಗೆ ನಿತ್ಯ ಸಿಂಚನವಾಗುವ ರಾಸಾಯನಿಕ ಸಿಂಚನಕ್ಕೆ ಕಬ್ಬಿಣವೂ ಕರಗಿದೆ. ಕಬ್ಬಿಣದ ಪಾಕ ಗರಡಿಯ ಸುತ್ತಲೂ ಚಿತ್ತಾರ ಬಿಡಿಸಿದೆ. ಗರಡಿಯ ಬಾವಿಯಲ್ಲಿ ಕಪ್ಪು ನೀರಿದೆ. ಬಾವಿಯಲ್ಲಿ ಕಪ್ಪೆಗಳು ತೇಲಿಕೊಂಡಿವೆ. ಕ್ಷಮಿಸಿ ಇದೆಲ್ಲಾ ಕರಾವಳಿಯಲ್ಲಿ , ಅದೇ ಗರಡಿಯನ್ನು ದೇವಸ್ಥಾನವೆಂದು ಭಾವಿಸುವ ತುಳುವರ ನೆಲದಲ್ಲಿ, ಅದೇ ಉಡುಪಿ ಜಿಲ್ಲೆಯಲ್ಲಿ. ಅದೇ ಸನ್ಮಾನ್ಯರಿರುವ ನೆಲದಲ್ಲಿನಡೆಯುತ್ತಿದೆ.
ಇನ್ನು ಬೂದಿ ಡಂಪಿಂಗ್ ಯಾರ್ಡನ್ನೊಮ್ಮೆ ನೋಡಬೇಕು. ಬೂದಿ ಸಾಗಿಸಲು ಬೆಟ್ಟಗಳನ್ನು ಕೊರೆದು ರಸ್ತೆಯನ್ನೇ ನಿರ್ಮಿಸಲಾಗಿದೆ. ರಸ್ತೆಯಲ್ಲಿ ಸಾಗಿದರೆ ಬಳ್ಳಾರಿ ನೆನಪಾಗುತ್ತದೆ. ರಸ್ತೆಯುದ್ದಕ್ಕೂ ಬೂದಿ ಚೆಲ್ಲಿದೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ೧೨೦೦ ಟನ್ ಹಾರುಬೂದಿಯನ್ನು ಇಲ್ಲಿ ಡಂಪ್ ಮಾಡಲಾಗುತ್ತದೆ. ಅದರ ಸುತ್ತಲೂ ಊರುಗಳಿವೆ. ಸಾಂತೂರು ಎಂಬ ಗ್ರಾಮದವರ ತೆಂಗಿನ ಮರಗಳು ಬೋಳಾಗಲಾರಂಭಿಸಿವೆ. ದೇವದಾಸ ಪ್ರಭುಗಳೆಂಬವರು ನೆಟ್ಟ ಗೆಣಸುಗಳು ಕಡ್ಡಿಯಂತಾಗಿವೆ. ಪಕ್ಕದಲ್ಲೇ ಹರಿಯುವ ಹೊಯಿಗೆ ಮಾರು ಹೊಳೆ, ಸಮೃದ್ಧ ಪರಿಸರ, ದುಡಿಯುವ ಶಕ್ತಿ ಎಲ್ಲವೂ ಇದೆ ಆದರೆ. ಹಾರುವ ಬೂದಿಯಿಂದ ಬದುಕು ಬರ್ಬರವಾಗಿದೆ ಎನ್ನುತ್ತಾರೆ ದೇವದಾಸ ಪ್ರಭುಗಳು. ಪ್ರಭುಗಳ ಮಗ ದೀಕ್ಷಿತನಿಗೆ ಮನೆಪಕ್ಕದ ಹೊಳೆಯಲ್ಲಿ ಆಡುವ ಆಶೆ. ಆದರೆ ವಾಸನೆ ಹೊಡೆಯುವ ನೀರಿನ ಬಗ್ಗೆ ಅವನಿಗೆ ಪ್ರಶ್ನೆಗಳಿವೆ. ದೀಕ್ಷಿತನ ಅಕ್ಕನಿಗೆ ಕೆಮ್ಮು, ಕಫದ ಸಮಸ್ಯೆ. ಇಬ್ಬರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಲೆಗೆ ಹೋಗುತ್ತಾರೆ. ಪಾದೆಬೆಟ್ಟು ಗ್ರಾಮದ ೭೦ರ ವಯಸ್ಸಿನ ಜಗನ್ನಾಥ ಶೆಟ್ಟಿ ಕೃಷಿಯಲ್ಲಿ ಪಳಗಿದವರು. ಈ ಬೂದಿಯ ಕಾಟದಿಂದ ಕೃಷಿ ಏಕೆ ಮಾಡಬೇಕು ಎಂಬುದು ಅವರಿಗೂ ಅನಿಸಿದೆ. ಚಾಪೆ ಹಾಕಿ ಮಲಗಿದರೆ ಮರುದಿನ ಚಾಪೆಯ ಸುತ್ತಲೂ ಬೂದಿ ಹರಡಿರುವುದು, ಉಸಿರಾಟಕ್ಕೆ ತೊಂದರೆಯಾಗಿರುವುದು, ಮೀನಿನ ಸಾರು ತಿನ್ನಲೂ ಕಷ್ಟಪಡುವ ಬದುಕಿನ ಬಗ್ಗೆ ಶೆಟ್ಟರಿಗೆ ನೋವಿದೆ. ಸರಕಾರ, ಕಂಪೆನಿಗಳು ಮತ್ತು ಪೇಪರಿನವರ ಕೈವಾಡದಿಂದ ಹಾರುಬೂದಿಯ ಸಮಸ್ಯೆ ನಿಲ್ಲುತ್ತಿಲ್ಲ ಎನ್ನುವುದು ಅವರ ಆಕ್ರೋಶ.
ಹೀಗೆ ನಂದಿಕೂರು ಸುತ್ತಮುತ್ತಲ ಪ್ರಪಂಚವೇ ಬೇರೆಯಂತೆ ಅನಿಸುತ್ತದೆ. ಒಂದೆಡೆ ಜಗಕ್ಕೆ ಬೆಳಕು ನೀಡಲು ತಂತ್ರಜ್ಞಾನದ ಅಬ್ಬರ. ಇನ್ನೊಂದೆಡೆ ಮಾನವ ಬಾಳಿಗೆ ಕತ್ತಲೆ ನೀಡುವ ಸ್ಥಾವರಗಳ ಅಬ್ಬರ. ಕರಾವಳಿಯಂತಹ ಪರಿಸರ ಸೂಕ್ಷ್ಮವಾದ ಅದೂ ಯಾವ ರೀತಿಯಿಂದಲೂ ನಾಶಕ್ಕೆ ಅರ್ಹವಲ್ಲದ ಭೂಮಿಯನ್ನು ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಕೈಗಾರಿಕೆಗಾಗಿ ಭೂಮಿಯನ್ನು ತಟ್ಟೆಯಲ್ಲಿಟ್ಟು ಕೊಡಲು ಹೇಗೆ ತಾನೆ ಮನಸ್ಸು ಬರುತ್ತದೆ? ಹಾಗಾದರೆ ವಿದ್ಯುತ್ ಬೇಡವೇ ಎಂಬ ಪ್ರಶ್ನೆಯೂ ಇಲ್ಲಿ ಪ್ರಾಯೋಗಿಕವಾಗಿ ಕಾಣುವುದಿಲ್ಲ. ಏಕೆಂದರೆ ಯಾವುದೋ ಖಾಸಗೀ ಕಂಪೆನಿ ಉತ್ಪಾದಿಸುವ ಈ ವಿದ್ಯುತ್ತನ್ನು ಸರಕಾರ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳಬೇಕು. ಕಂಪೆನಿ ಒಂದು ಯೂನಿಟ್‌ಗೆ ಒಂದು ಒಂದೂವರೆ ರೂ.ಗಳಲ್ಲಿ ವಿದ್ಯುತ್ ಉತ್ಪಾದಿಸಿದರೆ ಸರಕಾರ ಕೊಂಡುಕೊಳ್ಳುವುದು ೪ ಅಥವಾ ೫ ರೂ.ಗಳಲ್ಲಿ. ಅಲ್ಲದೆ ಪ್ರಸ್ತುತ ನಂದಿಕೂರು ಸ್ಥಾವರದಿಂದ ಎಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಕನಿಷ್ಟ ಕಾಣುತ್ತಲೂ ಇಲ್ಲ. ಯೋಜನೆಯ ರೂಪುರೇಷೆಯ ಪ್ರಕಾರ ಸಾವಿರ ಮೆ. ವಾಟ್‌ನಷ್ಟು ವಿದ್ಯುತ್ ಹಾಸನದ ಶಾಂತಿಗ್ರಾಮಕ್ಕೆ ಸಾಗಿ ಅಲ್ಲಿ ಶೇಖರಣೆಯಾಗಿ ಬೆಂಗಳೂರಿಗೆ ಹರಿಯಬೇಕು. ಆದರೆ ಅದಿನ್ನೂ ಆಗಿಲ್ಲ. ಹಾಸನಕ್ಕೆ ಸಾಗಬೇಕಿದ್ದರೆ ಪ. ಘಟ್ಟದ ೪೦೦ ಎಕರೆ ಅರಣ್ಯ ಪ್ರದೇಶ ನಾಶವಾಗಬೇಕು.
ಈ ಸಂಬಂಧ ಹಿಂದೊಮ್ಮೆ National Environment Engineering Research Institute (NEERI) ನಡೆಸಿದ ಸಂಶೋಧನಾ ವರದಿಯು ನಂದಿಕೂರು ಸ್ಥಾವರಗಳ ಪರಿಣಾಮವಾಗಿ ಪಶ್ಚಿಮ ಘಟ್ಟದಲ್ಲಿ ಮರಗಳೇ ಚಿಗುರದಂತೆ ಆಗುತ್ತದೆ ಎಂಬ ಎಚ್ಚರಿಕೆಯನ್ನು ಕೊಟ್ಟಿತ್ತು.ಆದರೆ ನಾವು ಪರಿಸರದ ಸಂತಾನಹರಣವನ್ನು ಮಾಡುವ ಅಭಿವೃದ್ಧಿಯನ್ನು ಜಗಬೆಳಗುವ ಜ್ಯೋತಿ ಎಂದುಕೊಳ್ಳುತ್ತಿದ್ದೇವೆ.
ಒಂದು ವಿದ್ಯುತ್‌ನ ಹಿಂದೆ ಇಷ್ಟೆಲ್ಲಾ ಕಥೆಗಳಿವೆ. ಅಥವಾ ಒಂದು ನಂದಿಕೂರು ಉಷ್ಣವಿದ್ಯುತ್ ಸ್ಥಾವರ ವಿದ್ಯುತ್ತಿನ ಕಥೆಯನ್ನು ಹೇಳುತ್ತದೆ. ಯಾರದ್ದೋ ಕಫ, ಯಾರದ್ದೊ ಕೆಮ್ಮು, ಜ್ವರ ನರಳುವಿಕೆ, ಸತ್ತ ಎಮ್ಮೆ-ಹಸು, ಭೂಮಿಯೊಳಗಿನ ಕಪ್ಪೆ , ಹೊಲಸು ನೀರು, ಗಂಧಕ, ರಂಜಕ , ಕಲ್ಲಿದ್ದಲು. ಯಾರದ್ದೋ ನೋವು. ಹತಾಶೆ, ಯಾರದೋ ಕೇಸುಗಳ ಕತೆಯನ್ನು ನಮ್ಮ ಮನೆಯ ಬಲ್ಬುಗಳು ಹೇಳಲಾರವು. ತಂಪಾದ ಏಸಿ, ತಣ್ಣನೆಯ ರೆಫ್ರಿಜರೇಟರುಗಳು. ಬಣ್ಣದ ಟಿವಿಗಳ ಮಧ್ಯೆ ಅವಾವೂ ನಮಗೆ ಪ್ರಸ್ತುvವಾಗಿ ಕಾಣುವುದಿಲ್ಲ. ವೇದನೆಯನ್ನು ಮರೆಯಲು ಇಂದು ನಮಗೆ ಕರೆಂಟು ಬೇಕೇ ಬೇಕು ಆದರೆ ನಂದಿಕೂರಿನಲ್ಲಿ ಕರೆಂಟೇ ಎಲ್ಲಾ ವೇದನೆಗಳಿಗೆ ಮೂಲ.ಇದನ್ನು ಬಾಧರಾಯಣ ಎಂದುಕೊಳ್ಳುವ ಹಾಗಿಲ್ಲ.