Tuesday, November 6, 2012

ಲೇಖಕ ತುಘಲಕನಾದರೂ ನೈಪಾಲ್ ನಾಯಿಪಾಡು ಪಡಲಾರರು

ಕಳೆದ ಶುಕ್ರವಾರ ಸಂಜೆ ಮುಂಬೈ ಸಾಹಿತ್ಯೋತ್ಸವದಲ್ಲಿ ಗಿರೀಶ್ ಕಾರ್ನಾಡ್ ಮಾತಾಡಲು ಶುರುಮಾಡಿಯೇ ಬಿಟ್ಟರು. ಮುಂಬೈನ Landumark and literture live ಸಂಸ್ಥೆಗಳು ಜಂಟಿಯಾಗಿ  ಸಾಹಿತ್ಯದಲ್ಲಿ ಜೀವಮಾನದ ಸಾಧನೆ ಮಾಡಿದ ವಿ.ಎಸ್. ನೈಪಾಲರಿಗೆ ಗೌರವವನ್ನು ನೀಡಿದ ಕ್ರಮವನ್ನು ಗಿರೀಶ್ ಕಾರ್ನಾಡ್ ಹಿಗ್ಗಾಮುಗ್ಗಾ ಟೀಕಿಸಿದರು. ಅಷ್ಟಕ್ಕೂ ಗಿರೀಶ್ ಕಾರ್ನಾಡರನ್ನು ವೇದಿಕೆಗೆ ಕರೆದಿದ್ದು ತಮ್ಮ ನಾಟಕಗಳ ಬಗ್ಗೆ ಭಾಷಣ ಮಾಡಲು. ಆದರೆ ಸಭಿಕರಿಗೂ ಸಂಘಟಕರಿಗೂ ಮುಜುಗರವಾಗುವಂತೆ ಕಾರ್ನಾಡ್ ನಡೆದುಕೊಂಡರು. ಕೆಲವರನ್ನು ಕೆಲವು ಕಾರ್ಯಕ್ರಮಗಳಿಗೆ ಕರೆಯಲೇಬಾರದು ಎಂಬುದನ್ನು ಕಾರ್ನಾಡ್ ಸಿದ್ಧಮಾಡಿ ತೋರಿಸಿದರು. ಮಾರನೇ ದಿನ ಪತ್ರಿಕೆ ಓದಿದ ಜನ ಇಂಥವರನ್ನು ಕಾಫಿ ತಿಂಡಿ ಕೊಟ್ಟು ಕಳುಹಿಸಿಬಿಡಬೇಕು, ವೇದಿಕೆಗಳಿಗೆಲ್ಲಾ ಕರೆಯಬಾರದು ಎಂದು ಆಡಿಕೊಂಡರು.  ಜ್ನಾನಪೀಠವನ್ನೇ ಸಂಶಯಾಸ್ಪದವಾಗಿ ಪಡೆದವರು ನೊಬೆಲ್ ಪಡೆದವರನ್ನು  ಹಂಗಿಸಿದರೆ ಜನ ಆಡಿಕೊಳ್ಳದೆ ಇದ್ದಾರೆಯೇ?
"ನೈಪಾಲ್ ಮೂರು ದೊಡ್ಡ ಪುಸ್ತಕಗಳನ್ನು ಬರೆದರೂ ಕೂಡಾ ಅವರಿಗೆ ಭಾರತದ ಬಗ್ಗೆ ಜ್ನಾನ ಇಲ್ಲ", "ಅವರು ಭಾರತೀಯ ಸಂಗೀತದ ಬಗ್ಗೆ ಕಿವುಡರಾಗಿದ್ದಾರೆ", " ನೈಪಾಲರಿಗೆ "ಭಾರತದ ಮುಸಲ್ಮಾನರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅರಿವೇ ಇಲ್ಲ" ಮೊದಲಾದ ಅಣಿಮುತ್ತುಗಳನ್ನು ಕಾರ್ನಾಡ್ ಉದುರಿಸಿದ್ದರು. ಕಾರ್ನಾಡರು ನೈಪಾಲರನ್ನು ನಿಂದಿಸಿದರೆಂದರೆ ನೈಪಾಲ್ ಉತ್ತಮ ಬರಹಗಾರರೇ ಇರಬೇಕು. ನೊಬೆಲ್‌ಗೆ ತಕ್ಕುದಾದುದೇ ಇರಬೇಕು. ನೊಬೆಲನ್ನು ಅವರು ಖಂಡಿತಾ ಹೊಡಕೊಂಡಿರಲಿಕ್ಕಿಲ್ಲ. ಕಾರ್ನಾಡರ ಜಾಯಮಾನವನ್ನು ಅರಿತವರಿಗೆ ಅದು ವೇದ್ಯವಾಗುತ್ತದೆ. ಏಕೆಂದರೆ ಕಾರ್ನಾಡರು ಯಾವತ್ತೂ ಇತಿಹಾಸವನ್ನು ಅದು ಇದ್ದಂತೆ ಒಪ್ಪಿಕೊಳ್ಳುವುದಿಲ್ಲ. ಆದರೂ ಇತಿಹಾಸ ಪರಿಣತರಂತೆ ಮಾತಾಡುತ್ತಾರೆ. ಸಾಹಿತ್ಯದ ಪ್ರಭಾವಳಿಯಿಂದ ಸತ್ಯವನ್ನು ಮುಚ್ಚಬಹುದು ಎಂದು ಭಾವಿಸುತ್ತಾರೆ. ಇತಿಹಾಸ ಅವರಿಗೆ "ಸೃಜನಶೀಲ" ಸಾಹಿತ್ಯ ಸೃಷ್ಟಿಗೆ ಒಂದು ಸರಕೇ ಹೊರತು ಇತಿಹಾಸದಿಂದ ಆಗಬೇಕಾಗಿರುವುದೇನೂ ಇಲ್ಲವೆಂಬುದು ಅವರ ಧೋರಣೆ. ಹಾಗಾಗಿ ಹುಚ್ಚುದೊರೆ ತುಘಲಕ್ ಕಾರ್ನಾಡ್ ಪ್ರಕಾರ ಕ್ರಿಯೇಟಿವ್, ಸಂದೇಹ ಗ್ರಸ್ಥ, ಗೊಂದಲಯುಕ್ತ,ಮಾನಯ ಮುಖದ ಮನುಷ್ಯ ಮಾತ್ರ. ಅದಕ್ಕಿಂತ ಒಂದಂಗುಲ ಹೆಚ್ಚುಕಡಿಮೆ ತುಘಲಕ್ ನನ್ನು ಅವರು ಚಿಂತಿಸಲು ಹೋಗುವುದಿಲ್ಲ. ಹುಚ್ಚು ದೊರೆ ತುಘಲಕ್‌ನನ್ನೇ ಹೀಗೆ ಕಾಣುವವರು ಇನ್ನು ಲಾಡೆನ್‌ನನ್ನೂ  ಸದ್ದಾಮನನ್ನು ಹೇಗೆ ಕಾಂಡಾರು ಎಂಬುದು  ಪ್ರಶ್ನೆ. ಕಾರ್ನಾಡರಿಗೆ ತುಘಲಕ್ ಕಂಡ ಹಾಗೆ ನೈಪಾಲರಿಗೂ ಕಾಣಬೇಕೆಂದೇನೂ ಇಲ್ಲವಲ್ಲ. ಇತಿಹಾಸವನ್ನು ನೈಪಾಲ್ ಇದ್ದದ್ದನ್ನು ಇದ್ದಂತೆಯೇ ನೋಡಿದರೆ ಕಾರ್ನಾಡರಿಗೇಕೆ ಹೊಟ್ಟೆಉರಿ?ದೇವಸ್ಥಾನಕ್ಕೆ ಹೋದ ಭಕ್ತ, ಕಳ್ಳ ಮತ್ತು ಕಲಾವಿದ  ದೇವರ ವಿಗ್ರಹವನ್ನು ವಿಭಿನ್ನವಾಗಿ ನೋಡುತ್ತಾರೆ. ಭಕ್ತನ ದೃಷ್ಟಿ ಇಲ್ಲಿ ನೇರವಾದುದು ಮತ್ತು ಪ್ರಾಮಾಣಿಕವಾದುದು. ಅದರಲ್ಲಿ ಗೊಂದಲಗಳಿಲ್ಲ. ಕಲಾವಿದನ ದೃಷ್ಟಿಯಲ್ಲಿಯೂ ಅಪ್ರಾಮಾಣಿಕತೆಯಿಲ್ಲ. ಅವರಲ್ಲಿ ಗೊಂದಲಗಳಿಲ್ಲ. ಆದರೆ ಕಳ್ಳನ ದೃಷ್ಟಿ ಹಾಗಲ್ಲ. ಕಾರ್ನಾಡ್ ಮತ್ತು ನೈಪಾಲ್ ಇತಿಹಾಸವನ್ನು ನೋಡುವ ದೃಷ್ಟಿಯ ವ್ಯತ್ಯಾಸ ಇಷ್ಟೇ. ನೈಪಾಲ್ ವಿಗ್ರಹವನ್ನು ಭಕ್ತನ ದೃಷ್ಟಿಯಲ್ಲಿ , ಕಲಾವಿದನ ದೃಷ್ಟಿಯಲ್ಲಿ ನೋಡಿದರೆ ಕಾರ್ನಾಡ್ "ಇದರ ರೇಟೆಷ್ಟಿರಬಹುದು?" "ಎಷ್ಟು ತೂಗಬಹುದು?" ಎಂಬಂತೆ ನೋಡುತ್ತಾರೆ. ಇತಿಹಾಸದ ಪ್ರತಿಮೆಗಳನ್ನು ಬಳಸಿ ಸಾಹಿತ್ಯ ಸೃಷ್ಟಿಸಲು ಘನ ವಿದ್ವತ್ತು ಮತ್ತು ಭಾರೀ ಸಂಶೋಧನೆಗಳ ಆವಶ್ಯಕತೆಯೇನೂ ಬೇಕಾಗಿಲ್ಲ. ಹೆಚ್ಚೆಂದರೆ ಅದು ಅನಂತಮೂರ್ತಿ ಹೇಳಿದಂತೆ "ರೂಪಕ ಚೋರತನ" ಅಷ್ಟೇ. ಆದರೆ ಸಮಾಜದ ಮನೋಧರ್ಮವನ್ನು ಅಳೆಯಲು ಇತಿಹಾಸದ ಅಧ್ಯಯನದ ಅಗತ್ಯವಿದೆ. ಅದನ್ನು ನೈಪಾಲ್ ಮಾಡಿದರು. ಅದನ್ನು ಮಾಡದ ಕಾರ್ನಾಡ್ ರೂಪಕ ಚೋರರಾದರು. ಹಾಗಾಗಿ ಕಾರ್ನಾಡ್ "ತುಘಲಕ್"ಬರೆಯುತ್ತಾರೆ. ನೈಪಾಲ್" ಗಾಯಗೊಂಡ ನಾಗರಿಕತೆ" ಬರೆಯುತ್ತಾರೆ. ಇತಿಹಾಸವನ್ನು ಕೇವಲ ರಂಜಕ ಪದಗಳಲ್ಲಿ ಬಂಸಿಡುವ, ಅರ್ಥಪಲ್ಲಟಗೊಳಿಸುವ ಕಾರ್ನಾಡ್ ನೈಪಾಲರನ್ನು "ಮುಸ್ಲಿಂ ದ್ವೇಷಿ"ಎಂದರೆ ನೈಪಾಲ್ ಇತಿಹಾಸದ ಕಿಂಡಿಯಿಂದ ಸತ್ಯವನ್ನು ಅರಸುವ ದೊಡ್ಡವರಾಗಿ ಕಾಣುತ್ತಾರೆ.  ಸತ್ಯವನ್ನು ಅರಸಿ ಪ್ರತಿಪಾಸುವ ನೈಪಾಲ್ ಮುಸ್ಲಿಂ ವಿರೋ ಆಗುವುದಾದರೆ ಇತಿಹಾಸವನ್ನೇ ಪಲ್ಲಟಗೊಳಿಸುವ ಕಾರ್ನಾಡ್ ಮಾನವ ವಿರೋ ಆಗಲಾರರೇ? ಭಾರತದ ಸಂಗೀತದ ಬಗ್ಗೆ ನೈಪಾಲ್ ಕಿವುಡರು ಎಂದು ಕಾರ್ನಾಡ್ ಜರೆದರು. ಹಾಗಾದರೆ ಕಾರ್ನಾಡ್ ಹಿಂದೂ ಸಂಗತಿಗಳ ಬಗ್ಗೆ  ದಿವ್ಯ ದೃಷ್ಟಿಯುಳ್ಳವರಾಗಿ ಏಕಿಲ್ಲ ಎಂದು ಯಾರೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ತಸ್ಲೀಮಾ ನಸ್ರಿನ್ ಗೂ ಕೋಪ ಬರುವುದು. ಗಿರೀಶ್ ಕಾರ್ನಾಡ್ ಅಣಿಮುತ್ತು ಉದುರಿಸಿದ ಎರಡು ದಿನಗಳ ತರುವಾಯ ನಸ್ರಿನ್ ಕೂಡಾ " ಕಾರ್ನಾಡರು ಸರಿಯಾಗಿಯೇ ಹೇಳಿದ್ದಾರೆ. ನೈಪಾಲ್ ತಮ್ಮ ದೊಡ್ಡ ಪುಸ್ತಕದಲ್ಲಿ ಎಲ್ಲಿಯೂ ಭಾರತೀಯ ಸಂಗೀತದ ಬಗ್ಗೆ  ಏನೇನೂ ಬರೆದಿಲ್ಲ. ನೈಪಾಲ್ ಎಂದರೆ ilsamophobia writer ಎಂದು ಹೇಳಿಕೆ ಕೊಟ್ಟರು. ದೇಶಭ್ರಷ್ಟರಾಗಿ ತಿರುಗಿದವರಿಗೆ ಒಮ್ಮೆಲೆ ಹೊಟ್ಟೆ ತುಂಬಿದರೆ ಇಂಥ ಹೇಳಿಕೆಗಳು ಬರುತ್ತವೇನೋ.

ವಿ.ಎಸ್. ನೈಪಾಲ್ ಟ್ರೆನಿಡಾಡ್ ಮೂಲದ , ಯೂರೋಪಿನಲ್ಲಿ ಬೆಳೆದ ಭಾರತೀಯ ಸಂಜಾತರು. ಸಹಜವಾಗಿಯೇ ಅವರಿಗೆ ಭಾರತೀಯತರ ಮತ್ತು ಹಿಂದುತ್ವದ ಕುರಿತಾದ ತುಡಿತವಿರುತ್ತದೆ. ಅದು ಕಾಡುವ ಗುಣ. ಹಾಗಾಗಿ ಅವರ ಭಾರತದ ಕುರಿತಾದ ಪುಸ್ತಕಗಳಲ್ಲಿ ಇತಿಹಾಸದಿಂದ ಕಲಿಯಬೇಕಾಗಿರುವ ಪಾಠ ಮತ್ತು ಇತಿಹಾಸದ ಭಾರದಿಂದ ನಲುಗಿರುವ ಭಾರತದ ಚಿತ್ರಣವಿರುತ್ತದೆ. ಕಾರ್ನಾಡರಿಗಾದರೋ ಅದಿಲ್ಲ. ಅವರಿಗೆ ಭಾರತ ಕಾಡುವುದಿಲ್ಲ. ಅವರ ಸಾಹಿತ್ಯದಲ್ಲಿ ಭಾರತೀಯತೆಯಿಲ್ಲ. ಅದಕ್ಕೇನು ಮಾಡಲಾಗುತ್ತದೆ? ನೈಪಾಲ್ ಮುಸಲ್ಮಾನರ ಕೊಡುಗೆಯನ್ನು ಬರೆದಿಲ್ಲ  ಎಂದು ಗೋಳಾಡುವ  ಕಾರ್ನಾಡ್ ದೇಶಕ್ಕೆ ಹಿಂದೂ ಪರಂಪರೆಯ ಕೊಡುಗೆಗಳೆಷ್ಟು  ಎಂದು ಬರೆದಿದ್ದಾರೆಯೇ? ಅದೂ ಬಿಡಿ ಪ್ರಸ್ತುತ ಸಮಸ್ಯೆಗಳ  ಬಗ್ಗೆ  ಕಾರ್ನಾಡರು ಎಷ್ಟು ಬರೆದಿದ್ದಾರೆ? ಮಾತಾಡಿದ್ದಾರೆ? " ತುಘಲಕ್ ಎಂಬ  ಅರಸನ ಕಾಲದಲ್ಲಿ ಪಾಕಿಸ್ಥಾನದ ರಾಜಧಾನಿ ದೆಹಲಿಯಿಂದ ದಕ್ಷಿಣದ ದೇವಗಿರಿಗೆ  ಸ್ಥಳಾಂತರಗೊಂಡಿತ್ತು" , "ಔರಂಗಜೇಬ್ ಸಾಹಿಬ್‌ನ ಆಳ್ವಿಕೆಯಲ್ಲಿ ಪಾಕಿಸ್ಥಾನ ದಕ್ಖನ್ ಪ್ರಸ್ಥಭೂಮಿಯನ್ನೂ ದಾಟಿತ್ತು" ಎಂಬುದಾಗಿ ಪಾಕಿಸ್ಥಾನದ ಪಠ್ಯಪುಸ್ತಗಳು ಹೇಳುತ್ತವೆ. ಆ ಬಗ್ಗೆ  ಕಾರ್ನಾಡರು ಕುರುಡರು. ಇವರ ತುಘಲಕ್ ಪಾಕಿಸ್ಥಾನಿಯಾದರೂ ಇವರಿಗೆ ಚಿಂತೆ ಇಲ್ಲ. ಕಾಶ್ಮೀರ ದೇಶದಿಂದ ಬಿಟ್ಟು ಹೋದರೂ ಅವರಿಗೇನೂ ಅನಿಸಲಿಕ್ಕಿಲ್ಲ. ಕೋಟಿಕೋಟಿ ಬಾಂಗ್ಲಾದವರು ದೇಶದೊಳಗೆ ಸೇರಿಕೊಂಡರೂ  ಕಾರ್ನಾಡರಿಗೆ ಅದು ಮುಸಲ್ಮಾನರ ಕೊಡುಗೆ ಎಂದೇ ಅನಿಸುವುದೋ ಏನೋ? ಇನ್ನು ಪಾಕಿಸ್ಥಾನದ ಹಿಂದುಗಳ ದುಸ್ಥಿತಿ, ಚೀನಾದ ಗಡಿ ತಂಟೆ ವೊದಲಾದವುಗಳ ಬಗ್ಗೆ ಅವರು ಮಾತಾಡಿದ್ದನ್ನು ನಾವಾರೂ ಕೇಳಿಲ್ಲ. ಓರ್ವ ಸಾಹಿತಿ ಇವುಗಳ ಬಗ್ಗೆ ಮಾತಾಡಲೇಬೇಕೆಂದೇನೂ ಇಲ್ಲ. ಆದರೆ "ಗಾಯಗೊಂಡ ನಾಗರಿಕತೆ ಅಲ್ಲ" ಎನ್ನುವವರು ಇಂಥವುಗಳ ಬಗ್ಗೆ ಕಡ್ಡಾಯವಾಗಿ ಮಾತಾಡಲೇ ಬೇಕು. ಇವೆಲ್ಲವನ್ನೂ ನೋಡಿದಾಗ ವೊನ್ನೆ ನೈಪಾಲರ ಜೊತೆಗೆ ಕಾರ್ನಾಡರನ್ನೂ ಕೂರಿಸಿ  ಸಣ್ಣದೋ ಪುಟ್ಟದೋ ಏನೋ ಒಂದು ಸನ್ಮಾನವನ್ನು ಮಾಡಿಬಿಟ್ಟಿದ್ದರೆ ತಣಿಯುತ್ತಿದ್ದರೇನೋ ಅನಿಸುತ್ತದೆ.
ಕನ್ನಡಿಗರಿಗೇನೂ ಕಾರ್ನಾಡ್ ಹೇಳಿಕೆ ಹೊಸದೇನೂ ಅನಿಸುವುದಿಲ್ಲ. ನೈಪಾಲರಿಗಿಂತ ಸಾಕಷ್ಟು ವೊದಲೇ ಇಲ್ಲಿ ಭೈರಪ್ಪನವರನ್ನು ಹಿಗ್ಗಾಮುಗ್ಗಾ ಜರೆದು ಅದೇ ಹಳಸಲು ಪದಗಳನ್ನು ಇದೀಗ ಮುಂಬೈಯಲ್ಲಿ ಹರಿಯಬಿಟ್ಟಿದ್ದಾರಷ್ಟೇ. ಸಾಹಿತ್ಯದಲ್ಲಿ ದೇಶೀತನವನ್ನು ಸದಾ ವಿರೋಧಿಸುವ ಕಾರ್ನಾಡರು ಮುಸಲ್ಮಾನ ಓಲೈಕೆಯನ್ನು, ಪ್ರಭುತ್ವದ ಪಾದಪೂಜೆಯನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಎಲ್ಲವೂ ಮುಸಲ್ಮಾನರು ಬೆನ್ನ ಮೇಲೆ ಗುದ್ದಿಯಾರೆಂಬ ಭಯ.  ಹಿಂದುಗಳಿಗೆ ಬಯ್ದರೂ ಗುದ್ದಲಾರರೆಂಬ ಧೈರ್ಯ ಕಾರ್ನಾಡರದ್ದು. ಹೀಗೆ ಗುಲಾಮ ಸುಖವನ್ನು ಅನುಭವಿಸಿ ಸಂವೇದನೆಯ ಹೆಸರಿಟ್ಟುಕೊಳ್ಳುವ ಬುದ್ಧಿ ಹಲವರಿಗಿದೆ. ಕಾರ್ನಾಡ್ ಅವರೆಲ್ಲರಿಗೂ ಗುರುಸಮಾನರು. ಸಾಹಿತ್ಯಕ್ಕೆ ಸಾಹಿತ್ಯವೂ ಆಯಿತು. ಸೆಕ್ಯುಲರಿಸಮ್ಮಿಗೆ ಸೆಕ್ಯುಲರಿಸಮ್ಮೂ ಆಯಿತು. ಪ್ರಶಸ್ತಿಗೆ ಪ್ರಶಸ್ತಿಯೂ ಆಯಿತು ಎಂಬ ತಂಡದ ನಾಯಕ ಈ ತುಘಲಕ. ಸಾಹಿತಿಯಾದವನು ಪ್ರಭುತ್ವದ ಹಂಗಿಲ್ಲದವನು. ಅಪ್ಪಟ ಸಾಹಿತಿ ರಾಜಕಾರಣದ ಮೈಲುಗಲ್ಲುಗಳನ್ನು ವಿಶ್ಲೇಷಿಸಬಲ್ಲ ಅಥವಾ ಆ ದಾರಿಯನ್ನು ದೂರ ನಿಂತು ನೋಡಬಲ್ಲ. ಆದರೆ ಕಾರ್ನಾಡರು ಆ ದಾರಿಯಲ್ಲೇ ಸಾಗಲು ಮುಜುಗರವನ್ನು ಪಡಲಾರರು. "ಹೇಮಾಮಾಲಿನಿ ಕರ್ನಾಟಕದವರಲ್ಲ. ಆಕೆ ರಾಜ್ಯ ಸಭೆಗೆ ಇಲ್ಲಿಂದ ಅಭ್ಯರ್ಥಿಯಾಗಬಾರದು" ಎನ್ನುವಷ್ಟು ಅವರು ಸಕ್ರೀಯರು ಮತ್ತು ರಾಜಕೀಯ ಆಸಕ್ತರು. ಈ ಮಾತನ್ನು ಅವರು ಮುಂಬೈಯಲ್ಲಿ ಕೂತೇ ಹೇಳಬಲ್ಲರು. ಸಾಹಿತಿಗೇಕೆ ಈ ಉಸಾಬರಿ? ಪ್ರಭುತ್ವದ ಬಗೆಗೆ  ಈ ಆಸಕ್ತಿಯೇಕೆ? ನೈಪಾಲ್ ಎಂದಾದರೂ ಇಂಥ ಮಾತನ್ನು ಆಡಿದ್ದುಂಟೇ?  ಭಾರತ ಗಾಯಗೊಂಡ ನಾಗರಿಕತೆಯಲ್ಲ ಎಂಬುವವರು ಅದನ್ನು ಪ್ರಮಾಣೀಕರಿಸಿ ತೋರಿಸದೆ ಎಲ್ಲೆಲ್ಲಿಗೋ ಹತ್ತಿ ಭಾಷಣ ಮಾಡಿಬಿಡುವರೇಕೆ?
ಏಕೆಂದರೆ ಕಾರ್ನಾಡ್ ಸಾಹಿತ್ಯವನ್ನು ವಿಭಿನ್ನವಾಗಿ ಕಟ್ಟಿಕೊಡಲು ಮಾತ್ರ ಯೋಚಿಸುತ್ತಾರೆ. ಅದರ ಮಾರ್ಗಗಳು ಅವರಿಗೆ ಮುಖ್ಯವಾಗುವಿದಿಲ್ಲ. ಸಮಾಜದ ಆಳವನ್ನು ಅರಿಯುವ  ಗೊಡವೆಗೆ ಅವರು ಹೋಗುವುದಿಲ್ಲ. ಆದರೆ ನೈಪಾಲ್ ಒಂದು ಸಮಾಜವನ್ನು ಅರ್ಥೈಸಿಕೊಳ್ಳಲು ಭೌಗೋಳಿಕ ನೆಲೆ, ವ್ಯಾಪ್ತಿ- ವಿಸ್ತಾರದ ಜೊತೆಗೆ ಇತಿಹಾಸವೂ ಪ್ರಮುಖವೆಂದು ಭಾವಿಸುತ್ತಾರೆ. ಹಾಗಾಗಿ ನೈಪಾಲ್ "ವೂಂಡೆಡ್ ಸಿವಿಲೈಸೇಶನ್ ನಲ್ಲಿ "ವಿಜಯನಗರದ ಲೂಟಿಯಿಂದ ಮೊದಲುಗೊಂಡು ಗಾಂಧಿ- ವಿನೋಭಾವರೆಗಿನ ಭಾರತವನ್ನು ಮುಂದಿಟ್ಟುಕೊಂಡು ದೇಶವನ್ನು ಶೋಧಿಸುತ್ತಾರೆ. ಭಾರತ ಕಥನವನ್ನು ಮಾಡುತ್ತಾರೆ. ನೈಪಾಲರು ತಮ್ಮ "ಗಾಯಗೊಂಡ ನಾಗರಿಕತೆ"ಯಲ್ಲಿ   ಹೀಗೆ ಬರೆಯುತ್ತಾರೆ. ಸ್ವಾತಂತ್ರ್ಯಾನಂತರ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಸ್ವಾತಂತ್ರ್ಯಾನಂತರವೂ ಶಿಥಿಲವಾಗಿರುವ ದೇಶವಾಗಿರುವುದು ಭಾರತದ ದುಸ್ಥಿತಿ. ಇಲ್ಲಿ ಸಾವಿರಾರು ವರ್ಷಗಳ ನಿರಂತರ ಹೋರಾಟದಿಂದ ಸಂವೇದನೆಯೊಂದು ಸತ್ತುಹೋಗಿದೆ. ಭಾಷೆ-ಪ್ರಾಂತ-ಜಾತಿಗಳ ನಡುವೆ ಹೊಂದಾಣಿಕೆಯಿಲ್ಲದೆ ಎಲ್ಲೆಲ್ಲೂ ಘಾಸಿಗೊಂಡ ಮನಸು ನಿರ್ಮಾಣವಾಗಿವೆ. ಸವಾಲುಗಳನ್ನು ಎದುರಿಸುವಲ್ಲಿ ದೌರ್ಬಲ್ಯ ಬಂದಿದೆ."
ಇದು ದೇಶದ ತತ್ತ್ವ ಶಾಸ್ತ್ರವಲ್ಲವೇನು? ಇಂದಿನ ಸ್ಥಿತಿಗೆ ಇತಿಹಾಸದ ಭಾರವೇ ಕಾರಣವಲ್ಲದೆ ಬೇರೇನು ಕಾರಣವಿದ್ದೀತು? ವೊಗಲರನ್ನು ತಿಳಿಯದೆ, ದೇಶವಿಭಜನೆಯನ್ನು ತಿಳಿಯದೆ ದೇಶದ ಒಳತಿರುಳನ್ನು ತಿಳಿಯಲಾಗದು. ವಾಸ್ತವದ ಭಾರತದಲ್ಲಿ ಇತಿಹಾಸದ ಕರಾಳ ಛಾಯೆ ಇದೆ. ನೈಪಾಲರಂಥವರಿಗೆ ಅದು ಅರ್ಥವಾಗುತ್ತದೆಯೇ ಹೊರತು ಅದನ್ನು ತಿಳಿದವರು ಕೇವಲ ಆರೆಸ್ಸೆಸ್ಸಿನರೇ ಎಂದೇನೂ ಅಲ್ಲ.
ಕೆಲವರಿರುತ್ತಾರೆ. ಅವರು ಕೆಲವರನ್ನು ಅನುಸರಿಸಿಯೋ, ಆರಾಧಿಸಿಯೋ ಅವರಂತೆಯೇ ಆಗಿಹೋಗಿರುತ್ತಾರೆ. ಕಾರ್ನಾಡರೂ ಹಾಗೆ ಆಗಿಹೋದವರೇನೋ ಎಂದು ಧಿಗಿಲಾಗುತ್ತದೆ. ಅವರ ತುಘಲಕ್ ನಾಟಕದಲ್ಲಿ  ಒಂದು ದಿನ ಅರಸ ನಿದ್ರೆ ಬಾರದೆ ಒದ್ದಾಡುತ್ತಾನೆ. ಅಪರಾತ್ರಿಯಲ್ಲಿ ಕೋಣೆಯಿಂದ ಹೊರಗೆ ಬರುತ್ತಾನೆ. ನರಿಗಳು ಊಳಿಡುತ್ತಿರುತ್ತವೆ. ಸುಯ್ಯೆಂದು ಗಾಳಿ ಬೀಸುತ್ತಿರುತ್ತವೆ. ಕೋಟೆ ಬರುಜಿನ ಬಳಿ ಅಡ್ಡಾಡುತ್ತಾನೆ. ಕಾವಲುಗಾರನೊಡನೆ ಮಾತಿಗೆ ಕೂರುತ್ತಾನೆ. ಏನೇನೋ ಆಲಾಪಿಸುತ್ತಾನೆ.  ಸದಾ ಗೊಂದಲದ, ವಿಪರೀತ ಸಂಶಯದ ,ಯದ್ವಾತದ್ವಾ ನಿಲುವಿನ ಕಾರ್ನಾಡರ ತುಘಲಕ್ ಲೇಖಕನದ್ದೇ ಮನಸಿನ ಪ್ರತಿಬಿಂಬವೇನೋ ಎಂದು ಈಗ ಭಾಸವಾಗುತ್ತದೆ.
ಕಾರ್ನಾಡ್ ನಿಂದಿಸಿರುವುದರಿಂದ  ನೈಪಾಲರೇನೂ ನಾಯಿಪಾಡು ಪಡುವಂತಿಲ್ಲ. ಕಾರ್ನಾಡರೇ ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಜನ ಕಾರ್ನಾಡರಿಗೆ ನೊಬೆಲ್ ಆಸೆ ಹುಟ್ಟಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

Tuesday, October 30, 2012

ಮೋದಿ ಯಾಕೆ ಇಷ್ಟವಾಗುತ್ತಾರೆಂದರೆ...

ರು ತಿಂಗಳ ಹಿಂದಿನ ಒಂದು ದಿನ ಗುಜರಾತಿನ ಗಾಂಧೀನಗರದ ಮೋದಿ ಮನೆಯಲ್ಲಿದ್ದೆವು. ಮೋದಿ ಮನೆ ಹೇಗಿರಬೇಕಿತ್ತೋ ಹಾಗೆಯೇ ಆ ಮನೆ ಇತ್ತು. ಉದ್ಯಾನದಲ್ಲಿ ನವಿಲುಗಳು ಕುಣಿಯುತ್ತಿದ್ದವು. ಮರ್ಕಟಗಳು ಮನೆಯನ್ನು ಹತ್ತಿ ನಮ್ಮದೇ ಸಾಮ್ರಾಜ್ಯ ಎಂಬಂತೆ ಆಡುತ್ತಿದ್ದವು. ಸಂಪೂರ್ಣ ವಠಾರವೇ ಹಕ್ಕಿಗಳ ಚಿಲಿಪಿಲಿಯಿಂದ ತುಂಬಿತ್ತು. ಬಣ್ಣ ಬಣ್ಣದ ಹೂವುಗಳು, ಹುಲ್ಲಿನ ಪ್ರಾಂಗಣಗಳು. ಹಸನ್ಮುಖಿ ಸೇವಕರು. ಸದ್ದುಗದ್ದಲವಿಲ್ಲ. ಗೌಜು ದೌಲತ್ತುಗಳಿಲ್ಲ. ಬಂದವರಿಗೆ ವಿನಮ್ರ ಉಪಚಾರ. ಒಟ್ಟಾರೆ ಅದು ಪ್ರಾಚೀನ ಋಷ್ಯಾಶ್ರಮಗಳು ಹೀಗಿದ್ದಿರಬಹುದಲ್ಲವೇ ಎಂದೆಲ್ಲಾ  ಯೋಚನೆ ಬರುವ ಹೊತ್ತು. ನಾವಿದ್ದವರು ನಾಲ್ಕು ಜನ. ಕೊನೆಗೂ ಭೇಟಿಯ ಕ್ಷಣ ಬಂದೇ ಬಂತು. ಕೋಣೆಯ ಬಾಗಿಲು ತಳ್ಳಿ ನುಗ್ಗಿದವರೇ ಎಲ್ಲರೂ ಅವಕ್ಕಾಗಿಹೋದೆವು. ಮೋದಿ ತಮ್ಮ ಕುರ್ಚಿಯಿಂದ ಎದ್ದು ಬರಮಾಡಿಕೊಳ್ಳಲು ನಿಂತಿದ್ದರು. " ನಾವು ಕರ್ನಾಟಕದಿಂದ..." ಎನ್ನುವಷ್ಟರಲ್ಲಿ " ಬನ್ನಿ ಬನ್ನಿ ಕುಳಿತುಕೊಳ್ಳಿ .ಕುಳಿತು ಮಾತಾಡೋಣ" ಎಂದರು. ಹೋದವರು ಕೂರುವವರೆಗೂ ಮೋದಿ ಕೂರಲಿಲ್ಲ. ಮನೆಗೆ ಬಂದ ನೆಂಟರನ್ನು ಮಾತಾಡಿಸುವಂತೆ ಮಾತಾಡಿಸಿದರು. ಮೋದಿ ಮೇಜಿನ ಮೇಲೆ ಎದ್ದು ಕಾಣುವಂತೆ " ಬಿಸ್ಮಾರ್ಕ್" ಎಂಬ ದೊಡ್ಡ ಪುಸ್ತಕವೊಂದಿತ್ತು. ಜನಪ್ರೀಯ ಮುಖ್ಯಮಂತ್ರಿಗಳು ಯಕಶ್ಚಿತ್ ಎಲ್ಲಿಂದಲೋ ಹೋದವರನ್ನು ಹಾಗೆ ಮಾತಾಡಿಸುವರೇ ಎಂಬ ಅಚ್ಚರಿಯಿಂದ ಹೊರಗೆ ಬರುವ ಮೊದಲೇ ಮೋದಿಯವರು "ಬಿಸ್ಮಾರ್ಕ್" ಅನ್ನೂ ಓದುತ್ತಾರೆಯೇ ಎಂಬ ಮತ್ತೊಂದು ಅಚ್ಚರಿ ಹುಟ್ಟಿಕೊಂಡಿತ್ತು. ಮಾತುಕತೆಗಳಾದವು. ಜೊತೆಗಿದ್ದ ಯುವಕನ ಹೆಗಲನ್ನು ತಟ್ಟಿ ದರು. ಆರೆಸ್ಸೆಸ್‌ನ ಪ್ರಚಾರಕರೇ ಪ್ರೀತಿಯಿಂದ ತಟ್ಟುವಂತೆ. "ಆಪ್ ಕಾ ಶುಭ್ ನಾಮ್?" ಅಂದರು. "ಗುಜರಾತ್ ಪೂರಾ ದೇಖಾ?" ಎಂದು ಪ್ರಶ್ನಿಸಿದರು. ಇವರು ಪ್ರಚಾರಕರ ಹಾಗೆಯೇ ಎನಿಸುತ್ತಿತ್ತು.
ಗುಜರಾತಿನ ರಸ್ತೆಗಳು, ಸಾರಿಗೆ, ಸೋಲಾರು, ಸಾಲ, ಕರೆಂಟು ಮೊದಲಾದ ಪ್ರತ್ಯಕ್ಷ ಕಾಣುವ ಸಂಗತಿಗಳಿಗಿಂತಲೂ ಮೋದಿ ಮೊದಲು ಯೋಗ್ಯ ಮಾನವ ಎಂಬ ಕಾರಣಕ್ಕೆ  ಇಷ್ಟವಾಗುತ್ತಾರೆ. ಕರ್ನಾಟಕದವರಿಗೆ ಅದು ಅಚ್ಚರಿ ಕೂಡಾ. ಏಕೆಂದರೆ ಇಲ್ಲಿ ಸಚಿವರು, ಶಾಸಕರು ಬಿಡಿ ಅವರನ್ನು ಪರಿಚಯವಿದೆ ಎಂದುಕೊಳ್ಳುವವರನ್ನೂ ಮಾತಾಡಿಸಲೂ ಕಷ್ಟ. ಮಾತಾಡಿಸಲು ಹೋಗುವುದೂ ಹೆದರಿಕೆಯೇ. ಇನ್ನು ನಮ್ಮ ಹಲವು ರಾಜಕಾರಣಿಗಳಿಗಂತೂ ಬಿಸ್ಮಾರ್ಕ್ ಎಂದರೆ "ಅದೇನು ಬಿಸ್ಕೇಟೇ?" ಎಂದೇ ಕೇಳಿಬಿಡುವರು. ದೇಶದ ಎಲ್ಲೆಲ್ಲೂ ಇಂಥಾ ರಾಜಕಾರಣಿಗಳೇ ಕಾಣುವಾಗ ಅಪರೂಪವಾಗಿ ಮೋದಿಯಂಥವರು ಕಾಣುತ್ತಾರೆ. ಹಾಗಾಗಿ ಅವರು ಇಷ್ಟವಾಗುತ್ತಾರೆ. ಮೋದಿಯನ್ನು ಇಷ್ಟಪಡದಿರಲು ಕಾರಣಗಳೇ ಇಲ್ಲ ಎನಿಸುತ್ತದೆ. ಅವರ ಅಭಿವೃದ್ಧಿಗಿಂತಲೂ ಮೊದಲೇ ಅವರ ವ್ಯಕ್ತಿತ್ವ ಸೆಳೆಯುತ್ತದೆ.
ಕೆಲ ವಾರಗಳ ಹಿಂದೆ ಗುಜರಾತಿನ ಪತ್ರಕರ್ತರೊಬ್ಬರು ಕಾಂಗ್ರಸಿನ ಹಿರಿಯ ನಾಯಕರನ್ನು ಸಂದರ್ಶಿಸಿದ್ದರು.ರಾಜ್ಯ ರಾಜಕೀಯದ ಮಾತುಕತೆಗಳಾದವು. ಸಂದರ್ಶನದ ಕೊನೆಯಲ್ಲಿ ಆ ಪತ್ರಕರ್ತರು " ಮೋದಿ ಕವನ ಬರೆಯುತ್ತಾರೆ. ಫೋಟೋಗ್ರಾಫಿಯ ಹವ್ಯಾಸವೂ ಇದೆ. ನಿಮಗೆ ಅಂಥ ಹವ್ಯಾಸಗಳೇನಾದರೂ ಇದೆಯೇ?" ಎಂದು ಕೇಳಿದರು. ಆ ಕಾಂಗ್ರೆಸಿಗರು "ಮೊದಲೆಲ್ಲಾ ಇತ್ತು . ಈಗ ರಾಜಕೀಯಕ್ಕೆ ಬಂದ ಮೇಲೆ ಎಲ್ಲಾ ಬಿಟ್ಟುಹೋಯಿತು." ಎಂದು ಉತ್ತರಿಸಿದರು. ಇದು ಕಾಂಗ್ರೆಸ್ ನಾಯಕನೊಬ್ಬನ ಮಾತಲ್ಲ. ಅದು ಬ್ರಾಂಡ್ ನದ್ದೇ ಸಮಸ್ಯೆ. ರಾಜಕಾರಣದಲ್ಲಿ ಹವ್ಯಾಸಗಳಿಗೆ ಸ್ಥಾನವಿಲ್ಲ. ಇದ್ದರೆ ಕೇವಲ ಚಟಗಳು ಮಾತ್ರ ಎಂಬ ಪರಿಸ್ಥಿತಿಯೇ ಎಲ್ಲೆಡೆ ಇರುವಾಗ ಮೋದಿ ಅಚ್ಚರಿ ಹುಟ್ಟಿಸದೇ ಹೇಗೆ ಇದ್ದಾರು? ಆಪ್ತವಾಗದೇ ಹೇಗೆ ಇದ್ದಾರು? ಕೆಲವರ್ಷಗಳ ಹಿಂದೆ ಅಹಮದಾಬಾದಿನಲ್ಲಿ ಮೋದಿಯವರು  ತಾವು ೧೯೯೦ಕ್ಕೂ ಮೊದಲು ತೆಗೆದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದರು.ಕೊನೆಯ ಒಂದು ದಿನ ಅಹಮದಾಬಾದ್ ಫೋಟೋಗ್ರಾಫರ್ಸ್ ಅಸೋಶಿಯೇಶನ್ನಿನವರು ಮುಖ್ಯಮಂತ್ರಿಗಳನ್ನೇ  ಕರೆಸಿ ಸಂವಾದವನ್ನೇ ಏರ್ಪಡಿಸಿದ್ದರು. ಪ್ರಜಾಪ್ರಭುತ್ವದ ಸಾಕಾರ ರೂಪ ಇದಲ್ಲದೆ ಬೇರೇನು? ಮೋದಿ ಅಚ್ಚರಿಯಲ್ಲದೆ ಇನ್ನೇನು? ಹವ್ಯಾಸಗಳಿದ್ದವನು ರಾಜಕಾರಣಿಯಾಗಲಾರ ಮತ್ತು ಚಟಗಳಿದ್ದವನಷ್ಟೇ ರಾಜಕಾರಣಿ ಎಂಬ ನಂಬಿಕೆಗಳು ಮೋದಿಯಿಂದ ಹುಸಿಯಾಗುತ್ತವೆ.
ಸಿದ್ಧಾಂತಗಳು  ಪುಸ್ತಕಗಳ ಬದನೇಕಾಯಿಗಳು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಆದರೆ ಮೋದಿ ರಾಜ್ಯದಲ್ಲಿ ಸಿದ್ಧಾಂತಗಳು ಮೋದಿಯ ದೂರದೃಷ್ಟಿಯಿಂದ ರಸ್ತೆಗಿಳಿದಿವೆ. ಕೇಳುವ ಸಿದ್ಧಾಂತಗಳನ್ನು ಗುಜರಾತಿನಲ್ಲಿ  ನೋಡಲು ಸಿಗುತ್ತವೆ.
ಮೋದಿ ಯಾವತ್ತೂ ಒಂದು ಕೆಲಸವನ್ನು ಒಂದೇ ಉದ್ದೇಶದಿಂದ ಮಾಡುವುದಿಲ್ಲ. ಅಲ್ಲಿ ಮತ್ತೇನೋ ಒಂದರ ಆಲೋಚನೆಯಿರುತ್ತದೆ. ಊರಿಗೆ ಊರೇ ಗಾಳಿಪಟ ಹಾರಿಸುವ  ಹೊತ್ತಲ್ಲಿ ಮೋದಿ ಕೂಡಾ ಅಪ್ಪಟ ಗುಜರಾತಿಯಂತೆ ಗಾಳಿಪಟ ಹಾರಿಸುತ್ತಾರೆ. ಗಾಳಿಪಟ ಹಾರಿಸುತ್ತಲೇ ಅನಿವಾಸಿಗಳನ್ನು ಆಹ್ವಾನಿಸುತ್ತಾರೆ. ಬಂಡವಾಳ ತೊಡಗಿಸುತ್ತಾರೆ. ನೀರಿನ ಕಾಲುವೆಗಳಿಗೆ ಸೋಲಾರ್ ಪ್ಲೇಟ್‌ಗಳಿಂದ ಮುಚ್ಚಳ ಹಾಕಿಸುತ್ತಾರೆ. ಮೋದಿಯವರ ಎಲ್ಲಾ ಯೋಜನೆಗಳು ಅಂಥವೇ.
ಮೋದಿಯವರ ಇಂಥ ಯೋಜನೆಗಳು ಐದು ಶತಮಾನಗಳ ಹಿಂದಿನ ಕೃಷ್ಣ ದೇವರಾಯರನ್ನು ನೆನಪಿಗೆ ತರುತ್ತದೆಯೇ ಹೊರತು "ಜಿಮ್" ಸಮಾವೇಶವನ್ನಂತೂ ನೆನಪಿಗೆ ತರಲಾರದು.
ಒಮ್ಮೆ ಕೃಷ್ಣದೇವರಾಯರು ಬಿದರೆಯನ್ನು ಮುತ್ತಲು ಸೇನೆಯೊಡನೆ ಹೊರಟಿದ್ದರು. ದಾರಿಯಲ್ಲಿ ತುಂಬಿ ಹರಿಯುತ್ತಿದ್ದ ಕೃಷ್ಣೆ ಅಡ್ಡ ನಿಂತಿದ್ದಳು. ಪ್ರವಾಹ ಇಳಿಯಲೆಂದು ರಾಯರು ಮೂರು ವಾರಗಳ ಕಾಲ ಕಾದರು. ಕೃಷ್ಣೆ ದಾರಿಬಿಡುವ ಲಕ್ಷಣಗಳು ಕಾಣಿಸಲಿಲ್ಲ. ಪ್ರವಾಹ ಇಳಿಯದೆ ಬಿದರೆಯನ್ನು ಮುತ್ತುವಂತಿರಲಿಲ್ಲ. ಏಕಾಏಕಿ ರಾಯರು ಸೈನ್ಯಕ್ಕೆ ಕೃಷ್ಣೆಗೆ ಕಾಲುವೆ ತೋಡಿ ಎಂದು ಆಜ್ಞಾಪಿಸಿದರು. ಕಾಲುವೆ ಸಿದ್ಧವಾಯಿತು. ಪ್ರವಾಹ ಇಳಿಯಿತು.  ತೋಡಿದ ಕಾಲುವೆಯಿಂದ ನೀರು ವಿಜಯನಗರಕ್ಕೆ ಹರಿಯಿತು. ಅತ್ತ ಜಯವೂ ದಕ್ಕಿತು. ಇತ್ತ ಕೃಷಿಯೂ ಆಯಿತು. ಅದು ರಾಯರ ವೈಶಿಷ್ಟ್ಯ. ಅಂಥ ವೈಶಿಷ್ಟ್ಯ ರಾಯರ ಕಾಲದಲ್ಲೇ ಕೊನೆಯಾಯಿತೋ ಎಂದುಕೊಳ್ಳುತ್ತಿರುವಾಗ  ಗುಜರಾತಿನಲ್ಲಿ ಮೋದಿ ಸಾಕ್ಷಾತ್ ರಾಯರಂತೆ ಕಂಡುಬರುತ್ತಾರೆ. ಕವಿಮನಸ್ಸಿನ ಆಡಳಿತಗಾರನೊಬ್ಬ ಮತ್ತೆ ಹುಟ್ಟಿಬರುತ್ತಾನೆ. ತಮ್ಮ ಆಡಳಿತಾವಧಿಯಲ್ಲಿ ಮೋದಿ ಕೈಗೊಂಡ ಇಂಥ ಯೋಜನೆಗಳು ಎಷ್ಟೋ ಇವೆ. ಜತೆಗೆ ರಾಯರಂತೆ ಮೋದಿ ಕೂಡಾ ಅಸಾಮಾನ್ಯವೆನಿಸುವ ರಿಸ್ಕ್‌ಗಳನ್ನು ತೆಗೆದುಕೊಳ್ಳುವ ಸಾಹಸಿ. ಮೋದಿ ತನ್ನ ರಾಜ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಲಿಂಗ ಅನುಪಾತದ ವೈಪರೀತ್ಯವನ್ನು ಸುಧಾರಿಸಲು ಒಂದು ಕ್ರಮವನ್ನು ಕೈಗೊಂಡರು. ಆಸ್ತಿ ರಿಜಿಸ್ಟ್ರೇಶನ್‌ನಲ್ಲಿ ಮಹಿಳೆಯರಿಗೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಸಂಪೂರ್ಣ ವಿನಾಯಿತಿಯನ್ನು ಅವರು ಘೋಷಿಸಿದರು. ಅಂದರೆ ಮಹಿಳೆಯೊಬ್ಬಳು ತನ್ನ ಹೆಸರಿನಲ್ಲಿ ಆಸ್ತಿಯನ್ನು ನೊಂದಾವಣಿ ಮಾಡಿಕೊಳ್ಳಲು ಸ್ಟ್ಯಾಂಪ್ ಡ್ಯೂಟಿಯನ್ನು ಭರಿಸಬೇಕಿಲ್ಲ. ಅಂಥ ಕ್ರಮವನ್ನು ಬಹುಶಃ ಯಾರೂ ಊಹಿಸುವ ಗೊಡವೆಗೇ ಹೋಗಲಿಕ್ಕಿಲ್ಲ. ಆ ಕಾರಣಕ್ಕೆ ಗುಜರಾತಿನಲ್ಲಿ ಜನ ತಮ್ಮ ಆಸ್ತಿಯನ್ನು ಹೆಂಗಸರ ಹೆಸರಿನಲ್ಲಿ ನೊಂದಾವಣಿ ಮಾಡಲಾರಂಭಿಸಿದರು. ಇದರಿಂದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ಕೊರತೆಯುಂಟಾಯಿತು. ಆದರೆ ಮೋದಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಏಕೆಂದರೆ ಇದರಿಂದ ಮಹಿಳೆ ಸಬಲಳಾದಳು. ಆಸ್ತಿವಂತಳಾದಳು. ಈ ನಿರ್ಧಾರವನ್ನು ಯಾರು ತಾನೇ ವಿರೋಧಿಸಬಹುದು? ಹೇಗೆ ತಾನೇ ವಿರೋಧಿಸಬಲ್ಲರು? ಹೇಗೆ ತಾನೇ ಮೋದಿಯನ್ನು ಪೂಜಿಸದೇ ಇದ್ದಾರು?
ದೂರದೃಷ್ಟಿಯ ಜೊತೆಗೆ ಬಹುಮುಖಿ ವ್ಯಕ್ತಿತ್ವ ಮೋದಿಯವರ ವಿಶೇಷತೆ. ಅವರು ವ್ಯಕ್ತಿಯೊಬ್ಬ. ಆಲೋಚನೆಗಳು ಹಲವು ಇರುವಂಥ ಮನುಷ್ಯ. ಇಂದು ಗುಜರಾತಿನ ಮಹಾನಗರಗಳಿಗೆ ಹೋದರೆ ರಸ್ತೆಬದಿಯ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಕಾಣಬಹುದು. ಅವಾವುವೂ  ಖ್ಯಾತ ಕಲಾವಿದರು ಬಿಡಿಸಿದ ಚಿತ್ರಗಳಲ್ಲ. ಚಿತ್ರ ಬಿಡಿಸಲೆಂದೇ ಸರಕಾರ ಟೆಂಡರ್ ಕರೆಯಲಿಲ್ಲ. ನಮ್ಮ ಬೆಂಗಳೂರಿನ ಗೋಡೆಗಳ ಚಿತ್ರಗಳಂತೆ ಅವು ಮಾಸಿಲ್ಲ. ಇಲ್ಲಿನ ಮಹಿಷಾಸುರನ ಚಿತ್ರಕ್ಕೆ ಮೂತ್ರ ಮಾಡುವಂತೆ ಅಲ್ಲಿ ಯಾರೂ ಮೂತ್ರ ಮಾಡುವುದಿಲ್ಲ. ಏಕೆಂದರೆ ಅವು ಜನರೇ ಬಿಡಿಸಿದ ಚಿತ್ರಗಳು. ಮುಖ್ಯವಾಗಿ  ಹೈಸ್ಕೂಲು ಮಕ್ಕಳು ಬಿಡಿಸಿದ ಚಿತ್ರಗಳು. ಮಕ್ಕಳು ನಗರದ ಗೋಡೆಗಳಲ್ಲಿ ತಮಗಿಷ್ಟವಾದ  ಚಿತ್ರಗಳನ್ನು ಅಲ್ಲಿ ಬಿಡಿಸಬಹುದು. ಹೆಸರು-ವಿಳಾಸ ಬರೆದುಕೊಳ್ಳಬಹುದು. ಪ್ರತಿಯಾಗಿ ಸ್ಥಳಿಯಾಡಳಿತ ಚಿತ್ರವೊಂದಕ್ಕೆ ೬೦೦ ರೂಗಳನ್ನು ಮಕ್ಕಳಿಗೆ ಕೊಡುತ್ತದೆ. ಮಕ್ಕಳು ಬಿಡಿಸಿದ ಚಿತ್ರಗಳನ್ನು ಪೋಷಕರು ಹೆಮ್ಮೆಯಿಂದ ಆಲ್ಬಮ್ ಮಾಡಿಟ್ಟುಕೊಳ್ಳುತ್ತಾರೆ. ಬಾವನಗರ, ಜಾಮ್‌ನಗರದಿಂದ ಬಂದ ನೆಂಟರಿಗೆ ಮಕ್ಕಳು ಬಿಡಿಸಿದ ಚಿತ್ರಗಳನ್ನು ತೋರಿಸಲು ಕರೆದೊಯ್ಯುತ್ತಾರೆ. ಆ ಚಿತ್ರಕ್ಕೆ ಅಪಚಾರವಾಗದಂತೆ ನಿಗಾ ವಹಿಸುತ್ತಾರೆ. ನಗರಕ್ಕೆ ನಗರವೂ ಸುಂದರವಾಯಿತು, ಮಕ್ಕಳಿಗೂ ಖುಷಿಯಾಯಿತು, ನಾಗರಿಕ ಪ್ರಜ್ನೆಯೂ ಜಾಗೃತವಾಯಿತು. ಇದಕ್ಕೆ ವಿಶೇಷ ತಲೆಯೇನೂ ಬೇಕಾಗಿರಲಿಲ್ಲ. ಪಾಲಿಸಿ ಮಟ್ಟದಲ್ಲೂ ಚರ್ಚೆ ನಡೆಯಬೇಕಾಗಿರಲಿಲ್ಲ. ನಾಯಕನೊಬ್ಬನ ಸ್ವಚ್ಛ ನಿರ್ಧಾರ ಇಡೀ ಸಮಾಜವನ್ನೇ ಸ್ವಚ್ಛಗೊಳಿಸಿತು. ಇಂಥ ನಾಯಕನಿಂದ ಸಂಪೂರ್ಣ ಗುಜರಾತ್ ಇತರ ರಾಜ್ಯಗಳಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಇಡೀ ದೇಶವೇ ಮತ್ತೊಂದು ಗುಜರಾತ್ ಆಗಬಾರದೇ ಎನಿಸುತ್ತದೆ.
ಗುಜರಾತಿನ ಜನಕ್ಕೆ ಮೋದಿ ರಾಜ್ಯದ ಅಭಿವೃದ್ಧಿಯ ತರುವಾಯವೂ ಇಷ್ಟವಾಗುತ್ತಾರೆ. ಏಕೆಂದರೆ ಮೋದಿ ಮಧ್ಯಮ ವರ್ಗದ ನಾಡಿಮಿಡಿತವನ್ನು ಬಲ್ಲವರು. ಮೇಲಾಗಿ ಮೋದಿ ಕೂಡಾ ಗ್ರಾಮೀಣ ಹಿನ್ನಲೆಯವರು. ಗ್ರಾಮೀಣ ವಿದ್ಯಾಭ್ಯಾಸ ಹೊಂದಿದವರು. ಎಲ್ಲಕ್ಕೂ ಹೆಚ್ಚಾಗಿ ಅವರು ಪ್ರಾಮಾಣಿಕರು. ರಾಜ್ಯದ ಬಗ್ಗೆ ಕನಸುಳ್ಳವರು. ಹಾಗಾಗಿ ಮೋದಿ ಗಾಲ್ ಸ್ಟಿಕ್ ಹಿಡಿದಾಗಲೂ  ಎಡೆಬಿಡಂಗಿಯಂತೆ ಕಾಣುವುದಿಲ್ಲ. ಬಡ ಮತ್ತು ಮದ್ಯಮವರ್ಗದ ಜನರತ್ತ ಹೋದರೂ ಮುಖ್ಯಮಂತ್ರಿ ಜನರಿಗೆ ಅನ್ಯಗ್ರಹ ಜೀವಿಯಂತೆ ಕಾಣುವುದಿಲ್ಲ. ಜನರು ಅಲ್ಲಿ ಅಹವಾಲನ್ನು ಅರ್ಪಿಸಲು ಪ್ರಾಯಾಸ  ಪಡಬೇಕಿಲ್ಲ. ಏಕೆಂದರೆ ಮೋದಿಯಲ್ಲಿ ಮಾನವೀಯತೆಯಿದೆ. ಕಷ್ಟಕ್ಕೆ ಕರಗುವ ಹೃದಯವಿದೆ.
ಒಮ್ಮೆ ಹೀಗಾಯಿತು.
ಅನಿಕೇತನೆಂಬ ೧೦ ವರ್ಷದ ದಲಿತ  ಬಾಲಕ ಕ್ಯಾನ್ಸರಿನಿಂದ ಬಳಲುತಿದ್ದ. ಕಳೆದ ಎರಡು ವರ್ಷಗಳಿಂದ ಕರ್ಣಾವತಿಯ(ಅಹಮದಾಬಾದ್) ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ. ತನ್ನ ಜರ್ಜರಿತ ದೇಹದ ಕಾರಣ ಅನಿಕೇತ ಶಾಲೆಗೆ ಹೋಗುವ ಭಾಗ್ಯವನ್ನೇ ಕಳೆದುಕೊಂಡಿದ್ದ. ಆದರೆ ಈತನಲ್ಲಿ ಕನಸುಗಳು ಇಂಗಿಹೋಗಿರಲಿಲ್ಲ. ತಾನೊಬ್ಬ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆಯನ್ನು ಈ ಪುಟ್ಟ ಬಾಲಕ ಕಾಯಿಲೆಯ ಜೊತೆಗೇ ಇಟ್ಟುಕೊಂಡಿದ್ದ. ಒಂದು ದಿನ ಅನಿಕೇತ ಆಸ್ಪತ್ರೆಗೆ ಬರುತ್ತಿದ್ದ ಸಂಘಟನೆಯ ಕಾರ್ಯಕರ್ತರಿಗೆ ತನ್ನ ಅಭಿಲಾಷೆಯನ್ನು ತಿಳಿಸಿದ. ಆ ಸಂಘಟನೆಯವರು ಅನಿಕೇತನ ಬಯಕೆಯನ್ನು ಮುಖ್ಯಮಂತ್ರಿ ಮೋದಿಯವರಿಗೆ ಮುಟ್ಟಿಸಿದರು. ಅನಿಕೇತನ ಪೂರ್ವಪರಗಳನ್ನು ತಿಳಿದ ಮೋದಿಯವರು ತತ್ ಕ್ಷಣವೇ ಅನಿಕೇತನನ್ನು ಒಂದು ದಿನದ ಮಟ್ಟಿಗೆ ನಗರದ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದರು. ಆ ಒಂದು ದಿನ ಅನಿಕೇತ ಇಡೀ ನಗರ ಪ್ರದಕ್ಷಿಣೆ ಮಾಡಿದ. ಕೆಲವು ಕೇಸುಗಳನ್ನು ಆಲಿಸಿದ. ನಗರದ ನಾಲ್ಕು ಠಾಣೆಗಳಿಗೆ ಭೇಟಿ ಕೋಟ್ಟ. ಬಾಲಭಾಷೆಯಲ್ಲಿ ಪೊಲೀಸರೊಂದಿಗೆ ಮಾತಾಡಿದ.
ಇನ್ನೊಮ್ಮೆ ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಪದಕ ವಿಜೇತೆ ಲಜ್ಜಾ ಗೋಸ್ವಾಮಿ ಎಂಬ ಬಾಲಕಿಯ ಮನೆಗೆ ಸಾಕ್ಷಾತ್ ಮುಖ್ಯಮಂತ್ರಿಯೇ ಹೋಗಿಬಿಟ್ಟಿದ್ದರು. ಅದೂ ಆನಂದ ಜಿಲ್ಲೆಯ ಗ್ರಾಮೀಣ ಭಾಗದ ಜಿತೋಡಿಯಾ ಎಂಬ ಕುಗ್ರಾಮಕ್ಕೆ. ಹೇಳದೇ ಬಂದ ಮುಖ್ಯಮಂತ್ರಿಯನ್ನು ನೋಡಿ ಗ್ರಾಮಸ್ಥರು ಪುಳಕಗೊಂಡರು. ಮೋದಿ ಲಜ್ಜಾಳಿಗೆ ನಿನಗೇನು ಬೇಕು ಎಂದು ಕೇಳಿದರು. ಮುಖ್ಯಮಂತ್ರಿಗಳು ಮನೆಗೆ ಬಂದ ಆಘಾತದಿಂದ ಆಕೆ ಹೊರಬಂದಿರಲಿಲ್ಲ. ಆಕೆ ಏನನ್ನೂ ಕೇಳಲಿಲ್ಲ. ಕೊನೆಗೆ ಮೋದಿ ಮನೆಯಲ್ಲೇ ಐದು ಲಕ್ಷ ರೂಗಳನ್ನು ಕೊಟ್ಟು  ರೈಫಲ್ ತೆಕೋ ಎಂದಿದ್ದರು.
ಇತ್ತೀಚೆಗೆ ಬೈಠಕ್‌ವೊಂದರಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು ಜನರ ನಡುವೆ ಜಮಖಾನಾದಲ್ಲೇ ಕೂತಿದ್ದರು. ಶಿಕ್ಷಣ ಮಂತ್ರಿಗಳು ಅವರನ್ನು ಮುಂದಿನ ಸಾಲಿಗೆ ಕರೆತಂದರು ಎಂಬ ಸಚಿತ್ರ ವರದಿಗಳು ಪತ್ರಿಕೆಗಳಲ್ಲಿ ಬಂದವು. ಒಬ್ಬ ರಾಜಕಾರಣಿ ಇಷ್ಟವಾಗಲು ಇಷ್ಟು ಸಾಕಾಗುತ್ತವೆ. ನಮ್ಮ ಸುತ್ತಲೂ ಗಂಟು ಮೋರೆ ಹಾಕಿರುವ, ವೇದಿಕೆಯಲ್ಲಿ ನಿದ್ರೆ ಮಾಡುವ , ಅಬ್ಬರಿಸುವ ರಾಜಕಾರಣಿಗಳೇ ತುಂಬಿರುವಾಗ ಮೋದಿ ಹೇಗೆ ತಾನೇ ಇಷ್ಟವಾಗದೆ ಇದ್ದಾರು? ಮುಳ್ಳಿನ ಚಮಚದಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಕೇಕು ತಿನ್ನಿಸುವವರೂ ಇರುವಾಗ ಬುದ್ದಿಮಾಂದ್ಯ ಮಕ್ಕಳನ್ನು ತನ್ಮಯತೆಯಿಂದ ಅಪ್ಪಿಕೊಳ್ಳುವ ಮೋದಿ ಇಷ್ಟವಾಗದೇ ಹೇಗಿದ್ದಾರು? ಇಲ್ಲಿ ಪಾದ ಪೂಜೆ ಅಪೇಕ್ಷಿಸುವ ಮಂತ್ರಿಗಳು, ಅಂಥವರಿಂದ ಫಲ ಪಡೆಯಲೆಂದೇ ಹುಟ್ಟಿರುವ ವಿವಿಧ ವೇಷಧಾರಿಗಳನ್ನು ನೋಡುತ್ತಿರುವಾಗ ವಂದಿಮಾಗದರಿಲ್ಲದ, ಸದಾ ಎಚ್ಚರದ, ಬಿಸ್ಮಾರ್ಕನನ್ನೋದುವ ಮೋದಿ ಕಾಡುತ್ತಾರೆ. ಮೋದಿಯನ್ನು ಇಷ್ಟಪಡಲಾರದವರು ಇನ್ನಾರನ್ನೂ ಇಷ್ಟಪಡಲಾರರು ಎನಿಸುತ್ತದೆ.

Wednesday, October 24, 2012

ಅರವತ್ತೆರಡರ ಎಡವಟ್ಟು ಐವತ್ತಾದರೂ ಆಪತ್ತು

ಮಾದೇಯಂಡ ಎಸ್. ಬೆಳ್ಯಪ್ಪನವರು. ಉತ್ತರ ಕೊಡಗಿನ ಬಲ್ಲಮಾವಟಿ ಗ್ರಾಮದವರು. ಮೇಜರ್ ಜನರಲ್ ಆಗಿ ನಿವೃತ್ತರಾದ ಹಿರಿಯ ಸೇನಾಧಿಕಾರಿಗಳು. ವಿಶಿಷ್ಟ ಮತ್ತು ಅತಿ್ವಿಶಿಷ್ಟ  ಸೇವಾ ಪದಕ ಪಡೆದವರು. ೧೯೬೨ ರ ಇಂಡೋ-ಚೀನಾ ಯುದ್ದ, ೧೯೭೧ರ ಇಂಡೋ-ಪಾಕ್ ಯುದ್ದ,೧೯೬೭ರಲ್ಲಿ ಗಾಜಾ ಪಟ್ಟಿಯಲ್ಲಿ ನಡೆದ ವಿಶ್ವವಿಖ್ಯಾತ "ಸಿಕ್ಸ್ ಡೇಸ್ ವಾರ್ " ಮತ್ತು ೧೯೮೭-೮೮ರಲ್ಲಿ ಶ್ರೀಲಂಕಾದಲ್ಲಿ ನಡೆದ ಐಟಿಕೆ ಎಫ್ ಪಡೆಗಳಲ್ಲಿ ಪಾಲ್ಗೊಂಡವರು. ಈಗ ಅವರಿಗೆ ೭೧ ವರ್ಷ. ಬೆಂಗಳೂರಿನ ವಿವೇಕನಗರದ ತಮ್ಮ ಮನೆಯಲ್ಲಿ ಕುಳಿತು ತಮ್ಮ ೨೧ನೇ ವಯಸ್ಸಿನ ಅನುಭವವನ್ನು  ಅವರು ಹೇಳುತ್ತಿದ್ದರು.
"ನನಗಾಗ ೨೧ ತುಂಬಿ ೨೨ ನಡೆಯುತ್ತಿತ್ತು. ಸೈನ್ಯಕ್ಕೆ ಸೇರಿ ಇನ್ನೂ ಮೂರು ತಿಂಗಳು ಕೂಡಾ ಆಗಿರಲಿಲ್ಲ. ಪಂಜಾಬಿನ ಒಂದನೇ ಸಿಕ್ಖ್ ಲೈಟ್ ಇನ್ಫೆಂಟ್ರಿಯಲ್ಲಿ  ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದೆ. ಒಂದು ದಿನ ನಮ್ಮ ಕೇಂದ್ರಕ್ಕೆ ಸಂದೇಶವೊಂದು ಬಂತು. ಚೀನಾದ ಪಿಎಲ್ ಎ ಸೇನೆ ಭಾರತಕ್ಕೆ ನುಗ್ಗಿದೆಯೆಂದೂ, ಸಾಕಷ್ಟು ಮುಂದುವರಿದಿದೆಯೆಂದೂ ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದೂ ,ಅದಕ್ಕೆ ನಾವೆಲ್ಲರೂ ತುರಾತುರಿಯಲ್ಲಿ ಸಿದ್ಧರಾಗಬೇಕೆಂದೂ ಅದರಲ್ಲಿ ತಿಳಿಸಲಾಗಿತ್ತು. ಮುನ್ನುಗ್ಗುತ್ತಿದ್ದ ಚೀನಾ ಚೀನಾ ಸೇನೆಯನ್ನು ಅವು ಇದ್ದಲ್ಲೇ ತಡೆಯಬೇಕೆಂದು ನಮಗೆ ಆದೇಶ ಬಂತು. ನನಗೋ ಸಣ್ಣ ವಯಸ್ಸು. ಸೇನೆಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ಯುದ್ದಕ್ಕೆ ಹೋಗುತ್ತಿರುವ ಸಂತೋಷ. ಇದು ದೇವರೇ ನನಗೆ ಕೊಟ್ಟ ಅವಕಾಶ ಎಂದು ಭಾವಿಸಿದ್ದೆ. ಅದೇ ಹೊತ್ತಲ್ಲಿ ಮನೆಯಿಂದ ಕಾಗದ ಬಂತು " ಕಾವೇರಮ್ಮೆ,ಇಗ್ಗುತ್ತಪ್ಪರೇ ನಿನಗೆ ಈ ಅವಕಾಶವನ್ನು ಒದಗಿಸಿದ್ದಾರೆ. ಜಯಶಾಲಿಯಾಗಿ ಬಾ. ಬಲ್ಲಮಾವಟಿಗೆ, ಮಾದೇಯಂಡ ಕುಟುಂಬಕ್ಕೆ ಹೆಸರು ತಾ" ಎಂದು  ಅಪ್ಪ-ಅಮ್ಮ ಬರೆದಿದ್ದರು. ಆ ಆಶೀರ್ವಾದ ನನ್ನಲ್ಲಿ ಮತ್ತಷ್ಟು ಹುರುಪು ತಂದಿತ್ತು. ಕೆಲವೇ ದಿನಗಳಲ್ಲಿ ನಮ್ಮ ಪಡೆ ಬೊಂಬ್ಡಿಲಾ ಎಂಬಲ್ಲಿಗೆ ತೆರಳಿತು. ಅದಾಗಲೇ ಚೀನಾ ಸೇನೆ ತವಾಂಗ್ ವರೆಗೂ ಮುಂದುವರಿದಿತ್ತು. ನಾವು ೧೩೦೦೦ ಅಡಿ ಎತ್ತರದಲ್ಲಿ ಸೆಣಸಬೇಕಿತ್ತು. ನಮಗಾದರೋ ಅಂಥ ಪ್ರತಿಕೂಲ ವಾತಾವರಣದಲ್ಲಿ ತರಬೇತಿ ಇರಲಿಲ್ಲ. -೩೦ ಡಿಗ್ರಿಯಷ್ಟು ಶೀತ, ಗಂಟೆಗೆ ೧೦೦ ಕಿ.ಮೀ ವೇಗದಲ್ಲಿ ಬೀಸುತ್ತಿರುವ ಶೀತಗಾಳಿ. ಇಂಥ ಪ್ರದೇಶಗಳಲ್ಲಿ ಯುದ್ಧ ಮಾಡಲು ವಿಶೇಷ ತರಬೇತಿಯನ್ನು ನೀಡಲಾಗಿರುತ್ತದೆ. ಹಲವು ತಿಂಗಳಿಗಳವರೆಗಾದರೂ ನಮ್ಮ  ಸೈನಿಕರು ಅಂಥ ಪರಿಸ್ಥಿತಿಯಲ್ಲಿ ದೇಹವನ್ನು ಒಡ್ಡಿಕೊಳ್ಳಬೇಕಿರುತ್ತದೆ. ಆದರೆ ನಾವು ಏಕಾಏಕಿ ಪಂಜಾಬಿನಿಂದ  ಹೊರಟುಬಂದವರು. ಚೀನಿ ಸೈನಿಕರಿಗಿಂತ ನಾವು ಅಲ್ಲಿನ ಹವಾಮಾನಕ್ಕೆ ಥರಗುಟ್ಟಿಹೋದೆವು. ನಮ್ಮಲ್ಲಿ ಧೈರ್ಯ-ಆತ್ಮವಿಶ್ವಾಸವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ನಮ್ಮಲ್ಲಿ ಇನ್ನೂ ೩೦೭ ರೈಫಲ್‌ಗಳಿತ್ತು. ಆದರೆ ಚೀನಿಯರ ಬಳಿ ಆಗಿನ ಕಾಲದಲ್ಲಿ ಅತ್ಯಾಧುನಿಕವಾದ ಆಟೋಮ್ಯಾಟಿಕ್ ರೈಫಲ್‌ಗಳಿದ್ದವು.ಅವರ ಆರ್ಟಿಲರಿ ಬಲವಾಗಿತ್ತು ಎನ್ನುವುದಕ್ಕಿಂತಲೂ ಅವರು ವಾತಾವರಣವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದರು ಎನ್ನುವುದೇ ಸರಿ. ಏಕೆಂದರೆ ಅವರು ವಾತಾವರಣವನ್ನು ಎದುರಿಸುವ ವಿಶೇಷ ತರಬೇತಿಯನ್ನು ಪಡೆದಿದ್ದರು. ಸದೇಹವನ್ನು ವಾತಾವರಣಕ್ಕೆ ಒಗ್ಗಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದರು. ಇತ್ತ ನಮ್ಮಲ್ಲಿ ರೇಡಿಯೋ ವ್ಯವಸ್ಥೆಯೂ ಸರಿ ಇರಲಿಲ್ಲ. ಬೆಟ್ಟಗಳಲ್ಲಿ ಅವು ಕೆಲಸ ಮಾಡುತ್ತಲೇ ಇರಲಿಲ್ಲ. ಹೀಗೆ ಅವರಿಗೂ ನಮಗೂ ಸಾಕಷ್ಟು ಅಂತರವಿತ್ತು. ಈ ಕಾರಣದಿಂದ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿದರೂ ಪರಿಸ್ಥಿತಿಯ ಕೈಗೊಂಬೆಗಳಾಗಿದ್ದರು. ನಮ್ಮ ಕಮಾಂಡರ್ ನಮಗೆ ಹಿಂದಕ್ಕೆ ಬರುವಂತೆ ಆದೇಶಿಸಿದರು. ನಾವು ಹಿಂದೆ ಹಿಂದೆ ಬಂದಂತೆ ಅವರು ಮುಂದುಮುಂದಕ್ಕೆ ಬಂದರು. ನನ್ನಂತೆ ಕನಸು ಕಟ್ಟಿಕೊಂಡ ಹುಡುಗರು  ಆ ಶೀತ ಪ್ರದೇಶದಲ್ಲಿ ಕಣ್ಣೀರಿಟ್ಟರು. ನಾವು ಪರಸ್ಪರ ಮಾತಾಡುವುದನ್ನೇ ಬಿಟ್ಟುಬಿಟ್ಟೆವು. ಮನಸ್ಸು  ನೊಂದಿತ್ತು. ಎದೆ ಭಾರಭಾರವಾಗಿತ್ತು. ಏಕೆಂದರೆ ನನ್ನ ಅಪ್ಪ-ಅಮ್ಮನ ಆಶೀರ್ವಾದ ಫಲಿಸಲಿಲ್ಲವಲ್ಲಾ ಎಂಬ ದುಖ ಉಮ್ಮಳಿಸಿ ಬರುತ್ತಿತ್ತು. ನನ್ನ ಮೊದಲ ಯುದ್ಧದ ವೀರಾವೇಶದ ಕಥೆಯನ್ನು ನಾನು ಬಲ್ಲಮಾವಟಿಯ ಗೆಳೆಯರಲ್ಲಿ ಹೇಳಬೇಕೆಂದುಕೊಂಡಿದ್ದೆ.ಮನೆಗೆ ಏನೆಂದು ಕಾಗದ ಬರೆಯಲಿ ಎಂದುಕೊಳ್ಳುತ್ತಲೇ ಬೇಸರವಾಗುತ್ತಿತ್ತು. ನನ್ನ ಮಾದೇಯಂಡ ಕುಟುಂಬಸ್ಥರು ಮನೆಗೆ ಬಂದು "ಮೋಂವಂಡ ಕಾಗದ ಬಾತಾ?" (ಮಗನ ಕಾಗದ ಬಂತಾ?) ಎಂದು ಕೇಳಿಯೇ ಕೇಳುತ್ತಿರುತ್ತಾರೆ ಎಂಬುದು ನನಗೆ ಗೊತ್ತಿತ್ತು."
ಮಿಲಿಟರಿಯವರು ಭಾವುಕರಾಗುವುದು ಅಪರೂಪ. ಆದರೂ ೧೯೬೨ರ ಸ್ಥಿತಿಯನ್ನು ವಿವರಿಸುತ್ತಾ ಹಲವು ನಿವೃತ್ತ ಯೋಧರು ಭಾವುಕರಾಗುತ್ತಾರೆ. ೫೦ ವರ್ಷದ ಹಿಂದಿನ ಘಟನೆಯನ್ನು ನೆನಪಿಕೊಳ್ಳುತ್ತಾ ಬೆಳ್ಯಪ್ಪನವರು " ನಿಜ ಅದು ಆಗಬಾರದಾಗಿತ್ತು. ಅದನ್ನು ನಾನು ಸೋಲು ಎನ್ನುವುದಿಲ್ಲ. ನಮ್ಮ ಕೊರತೆಯನ್ನು ಅವರು ಸಮರ್ಥವಾಗಿ ಬಳಸಿಕೊಂಡರು ಅಷ್ಟೆ. ಆದರೆ ೬೨ ಅನಂತರ ಒಂದು ಉಪಕಾರವಾಯಿತು. ನಮ್ಮ ಸರಕಾರಕ್ಕೆ ಬುದ್ಧಿ ಬಂತು. ಆರ್ಮಿ ಎಚ್ಚೆತ್ತುಕೊಂಡಿತು. ನಮ್ಮ ದೇಶ ಯುದ್ದವೇ ಮಾಡುವುದಿಲ್ಲ. ನಮ್ಮನ್ನಾರೂ ಆಕ್ರಮಿಸುವುದೇ ಇಲ್ಲ, ನಮಗೆ ಸೈನ್ಯವೇ ಬೇಡ ಂದುಕೊಂಡವರಿಗೆ ಸತ್ಯದ ಅರಿವಾಯಿತು. ೬೨ರ ಅನಂತರ ಸೈನ್ಯಕ್ಕೆ ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳು,ಸಲಕರಣೆಗಳು  ಬಂದವು. ಪರ್ವತ ಪ್ರದೇಶಗಳಲ್ಲಿ, ಎಲ್ಲಾ ಹವಾಮಾನಗಳಲ್ಲಿ ಬಳಸಬಹುದಾದ ರಸ್ತೆಗಳು ಸಿದ್ಧವಾದವು. ಮೌಂಟನ್ ವಾರ್ ಫೇರ್ ಗೆ ಹೆಚ್ಚಿನ ಒತ್ತು ನೀಡಲಾಯಿತು. ಕೆಲವೇ ವರ್ಷಗಳ ಅನಂತರ ಅದರ ಲಾಭವನ್ನು ನಾವು ಪಡೆದೆವು.ಸ್ವತಃ ನಾನೇ ೬೫ರ ಪಾಕಿಸ್ಥಾನ ಯುದ್ಧದಲ್ಲಿ , ೭೧ರ ಬಾಂಗ್ಲಾ ವಿಮೋಚನೆಯಲ್ಲಿ ಭಾಗವಹಿಸಿ ಅದರ ಅನುಭವವನ್ನು ತಿಳಿದಿದ್ದೇನೆ. ೬೨ರ ಘಟನೆಯ ಅನಂತರ ಸುಧಾರಿಸಿಕೊಂಡ ನೀತಿಗಳಿಂದ ನಮ್ಮ ಆರ್ಮಿಗೆ ವಿಶ್ವಾದ್ಯಂತ  ಹೆಸರು ಬಂತು. ಅಮೆರಿಕಾದಂಥ ದೇಶವೂ ನಮ್ಮ ಮೌಂಟನ್ ವಾರ್ ಫೇರ್ ನ ಬಗ್ಗೆ ಚಕಿತರಾದರು. ೬೨ರ ಪಾಠದಿಂದ ನಾವು ಇಂದು ಸಿಯಾಚಿನ್ ನಂಥ ಜಾಗದಲ್ಲಿ ಬೇಸ್ ಅನ್ನು ಹೊಂದಿದ್ದೇವೆ"
ಹಾಗಾದರೆ ಈ ಸೌಲಭ್ಯಗಳು ೬೨ರಲ್ಲೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಕೇಳಿದಾಗ ಬೆಳ್ಯಪ್ಪನವರು "ಇತಿಹಾಸವೇ ಬದಲಾಗುತ್ತಿತ್ತು. ಕೇವಲ ಧೈರ್ಯ-ಆತ್ಮ ವಿಶ್ವಾಸಗಳಿಂದ ಯುದ್ಧ ಗೆಲ್ಲಲಾಗದು ಎಂಬುದನ್ನು ನಾವು ಕಲಿತೆವು. ಇಂದೂ ಆಷ್ಟೇ ಚೀನಾದ ಬಳಿ ಭಾರತಕ್ಕಿಂತ ಪ್ರಬಲ ಸೈನ್ಯ ಮತ್ತು ಸಲಕರಣೆಗಳಿವೆ ಎಂಬ ಆತ್ಮವಿಶ್ವಾಸ ಮತ್ತು ಧೈರ್ಯವಿದೆ. ಅದೇ ವಿಶ್ವಾಸದಿಂದ,೬೨ರ ಗುಂಗಿನಿಂದ ಭಾರತವನ್ನು ಮುಟ್ಟಿದರೆ ಚೀನಾ ಕೈಸುಟ್ಟುಕೊಳ್ಳುವುದು ಖಂಡಿತಾ" ಎನ್ನುವರು.
೬೨ರಲ್ಲಿ  ಏಕೆ ಹೀಗಾಯಿತು? ಅದಕ್ಕೆ ಕಾರಣರಾದವರು ಯಾರು ಎಂಬುದನ್ನು ಬೆಳ್ಯಪ್ಪನವರು ಹೇಳಿದರು.
" ಜನರಲ್ ತಿಮ್ಮಯ್ಯ ಮತ್ತು ಕಾರ್ಯಪ್ಪಜ್ಜನವರ ಮಾತು ಕೇಳಿದ್ದರೆ ಹೀಗಾಗುತ್ತಿರಲಿಲ್ಲ. ಇಬ್ಬರೂ ಆಗ ನಿವೃತ್ತರಾಗಿದ್ದರು. ಆದರೆ ತಾವು ಕಟ್ಟಿದ ಸೇನೆಯ ಮೇಲಿನ ಪ್ರೀತಿಯಿಂದ ನಿವೃತ್ತರಾಗಿರಲಿಲ್ಲ. ಸಾಕಷ್ಟು ಮೊದಲೇ ಕಾರ್ಯಪ್ಪಜ್ಜ ನೆಹರೂರವರನ್ನು ಭೇಟಿ ಮಾಡಿ ಗಡಿಗಳನ್ನು ಬಲಪಡಿಸುವ ಬಗ್ಗೆ ಮಾತಾಡಿದ್ದರು. ನಾವು ಸಾಕಷ್ಟು ಹಿಂದೆ ಇದ್ದೇವೆ ಎಂದು ಅಜ್ಜ ಹೇಳಿದರೂ ಸರಕಾರ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಲೇ ಇಲ್ಲ. ಸಿನ್ನು ತಿಮ್ಮಯ್ಯನವರು ಸೇನೆಯ ನವೀಕರಣಕ್ಕೆ ಪಟ್ಟ ಪ್ರಯತ್ನಗಳು ಇಡೀ ದೇಶಕ್ಕೇ ತಿಳಿದಿದೆ. ತಿಮ್ಮಯ್ಯನವರು ಕೇಳಿದ್ದು ಸೈನ್ಯದ ಮೂಲಭೂತ ಆವಶ್ಯಕತೆಗಳನ್ನು. ಬೆಟ್ಟಕ್ಕೆ ರಸ್ತೆ, ಬೆಟ್ಟ ಹತ್ತುವ ವಾಹನ, ಸೈನಿಕರಿಗೆ ಸಲಕರಣೆಗಳನ್ನು ಮಾತ್ರ. ಸರಕಾರ ಅದನ್ನೂ ಪೂರೈಸಲಿಲ್ಲ. ನೆಹರೂ ಮತ್ತು ಕೃಷ್ಣ ಮೆನನ್‌ರ ಸಮ್ಮುಖದಲ್ಲಿ ತಿಮ್ಮಯ್ಯನವರು ತಮ್ಮ ಅಭಿಪ್ರಾಯಗಳನ್ನು, ಬೇಡಿಕೆಗಳನ್ನು ಮಂಡಿಸುತ್ತಿದ್ದಾಗ  ಕೃಷ್ಣ ಮೆನನ್ ಅದನ್ನು ಕೇಳಿ ನಕ್ಕರಂತೆ. ಱಬೆಟ್ಟದಲ್ಲಿ ಯುದ್ಧವೇ ನಡೆಯುವುದಿಲ್ಲ. ಈ ತಿಮ್ಮಯ್ಯನವರಿಗೆ ವಿನಾ ಕಾರಣ ಸಂಶಯ"  ಎಂದಿದ್ದರು.  ಇದು ಆಗ ಸುದ್ಧಿಯಾಗಿತ್ತು. ನೆಹರೂರವರಿಗೂ ಕೂಡಾ ಕೃಷ್ಣ ಮೆನನ್‌ರವರ ಮಾತುಗಳೇ ಸರಿ ಎಂದು ಎನಿಸಿತ್ತು. ತಿಮ್ಮಯ್ಯನವರು ವ್ಯಸನ ಪಟ್ಟುಕೊಂಡರು. ಕೊನೆಗೆ ತಿಮ್ಮಯ್ಯನವರು ನೇಫಾ, ಲಢಾಕ್ ಭಾಗದಲ್ಲಾದರೂ ಮೌಂಟನ್ ವಾರ್ ಫೇರ್ ಬಗ್ಗೆ ಗಮನ ಹರಿಸೋಣ ಎಂದರು. ಆಗ ನೆಹರೂ "ನಮ್ಮ ಶತ್ರು ಪಾಕಿಸ್ಥಾನ, ಚೀಚಾವಲ್ಲ" ಎಂದಿದ್ದರು. ಪಂಚಶೀಲ ತತ್ತ್ವ ಎಂಬ ಪಾಠವೇ ನಮಗೆ ಶಾಲೆಯಲ್ಲಿತ್ತು. ನೆಹರೂ ಹಿಂದೂ ಚೀನಿ ಬಾಯ್‌ಬಾಯ್ ಎಂದರು ಎಂದು ರೇಡಿಯೋ, ಮೇಷ್ಟುಗಳೆಲ್ಲಾ ಹೇಳುತ್ತಿದ್ದರು. ಅವೆಲ್ಲಾ ನನ್ನ ೨೧ ವಯಸ್ಸಿಗೇ ಪ್ರತ್ಯಕ್ಷ ಅನುಭವಕ್ಕೆ ಬಂದಿತ್ತು. ಜನರಲ್ ತಿಮ್ಮಯ್ಯ, ಕಾರ್ಯಪ್ಪಜ್ಜರ ಮಾತನ್ನು ಕೇಳಿದ್ದಿದ್ದರೆ ನಮ್ಮ ಸೇನೆ ೬೨ರಲ್ಲೇ ವಿಶ್ವವಿಖ್ಯಾತವಾಗುತ್ತಿತ್ತು. ನಾವು ಸೋಲುತ್ತಿರಲಿಲ್ಲ. ನಮ್ಮ ನೆಲ ಕಳೆದುಹೋಗುತ್ತಿರಲಿಲ್ಲ. "
ಹಾಗಾದರೆ ೬೨ರ ಸೋಲಿಗೆ ನೇರವಾಗಿ ನೆಹರೂರನ್ನೇ ಹೊಣೆ ಮಾಡಿದರೆ ತಪ್ಪೇನು ಎಂದು ಆ ಮಹಾಯೋಧರನ್ನು  ಪ್ರಶ್ನಿಸಿದರೆ ಅವರು ಯೋಧರಂತೆಯೇ ಉತ್ತರಿಸಿದರು. " ಪ್ರತೀಯೊಂದು ದೇಶಕ್ಕೂ ತನ್ನದೇ ಆದ ವಾರ್ ಫೇರ್ ಎಂಬುದಿರುತ್ತದೆ.ಹಾಗೆ ನಮ್ಮ ದೇಶದ ರಾಷ್ಟ್ರೀಯ ಗುರಿ, ಅಭಿವೃದ್ಧಿಯ ಕಲ್ಪನೆಯ ಬಗ್ಗೆ ನೆಹರೂಗೆ ತನ್ನದೇ ಆದ ಕಲ್ಪನೆಗಳಿದ್ದವು. ನಿಜ ನಾವು ಆಕ್ರಮಣ ಮಾಡುವವರಲ್ಲ.  ನಮ್ಮ ಹಿಂದೂ ರಾಷ್ಟ್ರ ಶಾಂತಿಯ ನಾಡು. ಅಷ್ಟಕ್ಕೆ ಸೈನ್ಯದ ಆವಶ್ಯಕತೆಯೇ ಇಲ್ಲವೆಂದಲ್ಲ. ಸೈನ್ಯ ಕೂಡ ಆಕ್ರಮಣ ಶೀಲ ತುಕಡಿಯಲ್ಲ. ಇಂದಿಗೂ ಸೈನ್ಯದ ಬಗ್ಗೆ ಅಂಥ ತಪ್ಪು ಕಲ್ಪನೆಗಳು ಹಲವರಲ್ಲಿದೆ. ಹೇಗೆ ಕೃಷಿ ಮತ್ತು ಕೈಗಾರಿಕೆಗಳು ದೇಶದ ಅಭಿವೃದ್ಧಿಯ ಪ್ರತೀಕಗಳೋ ಹಾಗೆಯೇ ಸೇನೆ ಕೂಡಾ ದೇಶದ ಅಭಿವೃದ್ಧಿಯ ಪ್ರತೀಕಗಳು.ಒಂದು ದೇಶದ ಬಲಿಷ್ಠ ಸೈನ್ಯ ಆ ದೇಶದ ಗೌರವದ ಚಿಹ್ನೆ. ಪಂಚಶೀಲ ತತ್ತ್ವ ಕೂಡಾ ಮಹಾನ್ ಚಿಂತನೆ."
ಯೋಧ ಯೋಧನಿಗೆ ತಕ್ಕಂತೆ ಮಾತಾಡುತ್ತಾನೆ. ಅದರ ಅರಿವಿಲ್ಲದ ರಾಜಕಾರಣಿ ಅವನ ಯೋಗ್ಯತೆಗೆ ತಕ್ಕಂತೆ ಮಾತಾಡುತ್ತನೆ. ಹೀಗೆ ರಾಜಕಾರಣದಿಂದ ಉಂಟಾದ ಎಡವಟ್ಟನ್ನು ಇಂದಿಗೂ ಸರಿಪಡಿಸಲು ಸಾಧ್ಯವಾಗಿಲ್ಲ. ಬೆಳ್ಯಪ್ಪನವರೇನೋ ಸಾಮರಿಕ ದೃಷ್ಟಿಯಿಂದ ೬೨ ಅನ್ನು ವಿವರಿಸಿದರು. ಆದರೆ ಆತ್ಮ ಗೌರವದ ದೃಷ್ಟಿಯೇನಾಯಿತು? ಬಲಿದಾನಿಯಾದ ೧೩೮೨ ಜನ ಯೋಧರ ಜೀವದ ಬೆಲೆಯೇನು? ಅಂಗವಿಕಲರಾದ ಸಾವಿರಾರು ಯೋಧರ ಕುಟುಂಬಗಳ ನೋವಿಗೆ ಹೊಣೆ ಯಾರು? ಕಳೆದುಕೊಂಡ ೯೦೦೦೦ ಚ.ಕಿ.ಮೀ ನೆಲ, ದೇಶದ ಜನರು ಅನುಭವಿಸಿದ ನೋವು, ಹತಾಶೆ, ಮಾನಸಿಕ ಕಿರಿಕಿರಿಗಳಿಗೆ ಕಾರಣರಾದವರು ಯಾರು? ಬಲ್ಲಮಾವಟಿಯ ಮಾದೇಯಂಡ ಕುಟುಂಬದ ಯೋಧನ ಹೆತ್ತವರ ಆಶೀರ್ವಾದವನ್ನು ವಿಫಲಗೊಳಿಸಿದವರಾರು?
ಇವೆಲ್ಲವೂ ನಡೆದು ಇದೀಗ ಅರ್ಧ ಶತಮಾನವೇ ಕಳೆದುಹೋಗಿದೆ. ಅಕ್ಟೋಬರ್ ೨೦ ಬಂದರೆ  ಚೀನಾದವರ ಮೊದಲ ಗುಂಡು ನಮ್ಮತ್ತ ಹಾರಿ ೫೦ ವರ್ಷಗಳಾಗುತ್ತವೆ. ಬಮ್ಲಾ, ತಾಂಗ್ಲಾ, ಚಿಪ್‌ಚಾಪ್ ಕಣಿವೆ, ಗಲ್ವಾನ್ ಕಣಿವೆ, ಪಾಂಗೊಂಗ್‌ತ್ಸೋ ಮತ್ತು ಚುಸೂನ್ ಕಣಿವೆಗಳು ಈ ೫೦ ವರ್ಷದಲ್ಲಿ  ಮತ್ತೊಂದು ಕಥೆಯನ್ನು ಹೇಳುತ್ತಿವೆ. ಭಾರತದ್ದೇ ನೆಲ ಗಿಲ್ಗಿಟ್, ಬಾಲ್ಟಿಸ್ಥಾನ್‌ಗಳಲ್ಲಿ ರಸ್ತೆ ನಿರ್ಮಿಸುತ್ತಿರುವ ಚೀನಾ ೫೦ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸುತ್ತಿದೆ. ಅರುಣಾಚಲ, ಹಿಮಾಚಲಗಳಲ್ಲಿ ಕೃತಕ ನೆರ ಹುಟ್ಟಿಸುವ , ಬ್ರಹ್ಮಪುತ್ರಾವನ್ನೇ ಬತ್ತಿಸುವ ಚೀನಾ ಇನ್ನೂ ಕದನ ವಿರಾಮವನ್ನು ಘೋಷಿಸಿಲ್ಲವೇ ಎಂದುಕೊಳ್ಳುತ್ತಿರುವಾಗಲೇ ಎತ್ತಲೆತ್ತಲೂ ಚೀನಾ ಸರಕುಗಳು ಬಂದು ಬೀಳುತ್ತಿವೆ. ಮೆ.ಜ. ಹೇಳದೇ ಇರುವುದು ಮತ್ತಷ್ಟು ಇದೆ ಎನಿಸುತ್ತದೆ. ಅದೇ ಗಡಿ, ಅದೇ ಚೀನಾ, ಬೀಜಿಂಗ್‌ನಲ್ಲಿ ಅದೇ ಸಣ್ಣ ಕಣ್ಣಿನ ಕುಳ್ಳಪಿ ಎಲ್ ಎ, ದೆಹಲಿಯಲ್ಲಿ ಅದೇ ನೆಹರೂ ಕುಟುಂಬ ಎಲ್ಲರೂ ೫೦ ವರ್ಷಗಳ ತರುವಾಯವೂ ಹಾಗೆಯೇ ಇದ್ದಾರೆ. ಅದಕ್ಕೇ ಹೆದರಿಕೆಯಾಗುತ್ತದೆ. ತಿಮ್ಮಯ್ಯನವರು ಸ್ವರ್ಗಸ್ಥರಾದರಲ್ಲಾ ಎಂದು ಬೇಸರವಾಗುತ್ತದೆ. ಕಾರ್ಯಪ್ಪಜ್ಜ ಇರಬೇಕಿತ್ತು ಎನಿಸುತ್ತದೆ.

Wednesday, October 10, 2012

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

ಕೇರಳದ ತ್ರಿಶೂರ್ ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು, ಫ್ಲೆಕ್ಸ್‌ಗಳು, ಬ್ಯಾನರ್ ಗಳು. ಈ ಬ್ಯಾನರ್ ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ "ಬೇಕಾಗಿದ್ದಾರೆ" ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು. ಮೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.  ಇದು ಕಮ್ಯುನಿಷ್ಟರ ಪ್ರಾರಬ್ಧ , ಸಾಯಲಿ ಎನ್ನುವಂತೆಯೂ ಇಲ್ಲ . ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ  ಕಾಮ್ರೆಡ್‌ಗಳು, ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.
ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು, ಆರ್ಮಿಯಂತೆ ಸಮವಸ್ತ್ರ ಧರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು "ಕರಾಚಿಯಾ?" ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್ ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು "ಶಹೀದ್ ಭಗತ್ ಸಿಂಗ್ ವೇದಿಕೆ" ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ , ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ  ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್  ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದಲೇ ಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್ ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.
ನಾಳೆಯೇ ಭಗತ್‌ಸಿಂಗ್ ಜಯಂತಿ. ನಾಳೆ ಭರಪೂರ ನಾಟಕಗಳು ನಡೆಯುವುದು, ರೌಡಿಗಳನ್ನು ಸಾಕಿದವರ , ಮಕ್ಕಳನ್ನು ಕೊಂದವರ ಸಂಘಟನೆಗಳು, ಜಾತಿಯ ಹೆಸರಲ್ಲಿ ರೋಲ್‌ಕಾಲ್ ಮಾಡುವವರು , ವಿವಿಗಳ ಪ್ರೊಫೆಸರ್‌ಗಳೆಲ್ಲ ನಾಳೆ ಇಂತದ್ದೇ ಮಾತನ್ನು ಆಡುತ್ತಾರೆ. ವರ್ಗ ಸಂಘರ್ಷ ಮತ್ತು ಭಗತ್ ಸಿಂಗ್ ಎಂದು ವಿಚಾರ ಮಂಡಿಸುತ್ತಾರೆ. ಕಾಮ್ರೆಡ್ ಭಗತ್ ಸಿಂಗ್ ಇಂದಿನ ಪ್ರಸ್ತುತತೆ ಎಂದು ತಲೆದೂಗುತ್ತಾರೆ. ೧೯೩೧ರಿಂದಲೇ ಹೀಗೆ ಹೇಳುತ್ತಲೇ ಕೆಲವರು ಕುಟುಕು ಜೀವ ಉಳಿಸಿಕೊಂಡಿದ್ದಾರೆ. ನಿಜ, ಕಾಚಿಗುಡ -ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಇಲಿ ಕೂಡ ಹೈದರಾಬಾದು -ಬೆಂಗಳೂರು ಎಂದು ಸಂಚರಿಸುತ್ತದೆ. ಮಂಗಳೂರು ಹಡಗಿನಲ್ಲಿ ಕೂತು ಕಾಗೆ ಪಕ್ಷಿಗಳೂ ಆಸ್ಟ್ರೇಲಿಯಾಕ್ಕೆ ಹೋಗುತ್ತವೆ. ಆದರೆ ಹೋಗುವ ವಿಧಾನ ಅದಲ್ಲವಲ್ಲ. ಭಗತ್‌ಸಿಂಗ್‌ನನ್ನು ಕಮ್ಯುನಿಸ್ಟ್ ತತ್ತ್ವದ ಸಂಘಟನೆಗಳು ಮಾಡಿಕೊಂಡದ್ದು ಕೂಡ ಹಾಗೆಯೆ. ವಾಸ್ತವಾಗಿ ಹಾಗಿಲ್ಲದಿರುವ ಭಗತ್‌ಸಿಂಗ್‌ನನ್ನು ಬಳಸಿಕೊಂಡು ಅವರು ಪ್ರಯಾಣ ಮಾಡುತ್ತಿದ್ದಾರೆ. ಆ ಅನಿವಾರ್ಯತೆ ಅವರಿಗಿದೆ. ಕಮ್ಯುನಿಸ್ಟರಂತೆಯೂ ಕಾಣಬಹುದಾದ ಭಗತ್ ಸಿಂಗ್‌ನನ್ನು "ಸಂಪೂರ್ಣ ಕಮ್ಯುನಿಸ್ಟ್ " ಎಂದು ಬಣ್ಣ ಬಳಿಯುವ ಕೆಲಸವನ್ನು ಇವರು ಅರ್ಧ ಶತಮಾನದಿಂದ ಮಾಡುತ್ತಾ ಬಂದರು. ಇಂದೂ ಮಾಡುತ್ತಾರೆ. ನಾಳೆ ಅವರ ಜಯಂತಿಯಂದೂ ಮಾಡುತ್ತಾರೆ.
ಹಾಗಾದಾರೆ ಭಗತ್ ಸಿಂಗ್ ಯಾರು? ವಾಸ್ತವವಾಗಿ ಅವನೇನಾಗಿದ್ದ?
ಭಗತ್ ಸಿಂಗ್ ಕನಸುಗಾರ. ಸದಾ ರಾಷ್ಟ್ರ ಧ್ಯಾನಿ. ಆತ ಜನ್ಮದಾತ ಕ್ರಾಂತಿಕಾರಿ. ಬ್ರಿಟಿಷ್ ಕ್ರೌರ್ಯವನ್ನು ಕಣ್ಣಾರೆ ಕಂಡವನು.ಅದನ್ನು ಕಂಡವರು ದೇಶವನ್ನು, ಸ್ವಾತಂತ್ರ್ಯವನ್ನು ಹೇಗೆ ಸ್ವೀಕರಿಸಬೇಕೋ ಹಾಗೆಯೇ ಸ್ವೀಕರಿಸಿದವನು. ತಂದೆ ಮತ್ತು ಚಿಕ್ಕಪ್ಪಂದಿರ ಸಂಸ್ಕಾರವನ್ನು ಪಡೆದ ಭಗತ್ ಸಿಂಗ್ ಕ್ರಾಂತಿಕಾರಿಯಲ್ಲದೆ ಬೇರೇನೂ ಆಗುವಂತಿರಲಿಲ್ಲ. ಹಾಗಾಗಿ ತೊದಲು ಮಾತಾಡುತ್ತಿದ್ದ ಭಗತ್‌ಗೆ ಹೊಲದಲ್ಲಿ ಬಂದೂಕು ನೆಟ್ಟುಬೆಳೆಸುವ ಮನಸಾಗುತ್ತದೆ. ಜಲಿಯನ್ ವಾಲಾಭಾಗ್‌ನ ಪವಿತ್ರ ಮಣ್ಣನ್ನು ಶೀಷೆಯಲ್ಲಿ ತುಂಬಿಟ್ಟು ಪೂಜಿಸಬೇಕು, ಆ ಮಣ್ಣನ್ನು ಮರೆಯಬಾರದು ಎಂಬ ಕೆಚ್ಚು ಹುಟ್ಟುತ್ತದೆ. ಹೀಗೆ ಭಗತ್ ಗೆ ಬಾಲ್ಯದಲ್ಲೇ ದೇಶದ ಮುಕ್ತಿ, ಸ್ವಯಂ ಆಡಳಿತದ ಕಲ್ಪನೆ ಹರಳುಗಟ್ಟಿರುತ್ತದೆ. ಮುಂದಿನದೆಲ್ಲವೂ ಇತಿಹಾಸ. ಕ್ರಾಂತಿಕಾರಿಗಳ ಸಂಪರ್ಕ, ಚಂದ್ರಶೇಖರ ಆಜಾದರ ಒಡನಾಟ,  ನೌಜವಾನ್ ಸಭಾಗಳ ಮೂಲಕ ಕೈಗೊಂಡ ಕ್ರಾಂತಿಕಾರಿ ಚಟುವಟಿಕೆಗಳು, ಭೂಗತ ಸಂಪರ್ಕಗಳು,ಲಾಹೋರ್ ಬಾಂಬ್ ಪ್ರಕರಣಗಳ ಮೂಲಕ ಬ್ರಿಟಿಷ್ ಆಡಳಿತಕ್ಕೆ ತಲೆನೋವಾಗುತ್ತಾನೆ. ಇಂಥ ಕ್ರಾಂತಿಕಾರಿ ಕಾಮ್ರೆಡನೇ? ಅಥವಾ ರಾಷ್ಟ್ರೀಯವಾದಿಯೇ? ಇಂದು ಭಗತ್ ಸಿಂಗರನ್ನು ಕಾಮ್ರೆಡ್ ಎನ್ನುವವರು ಅಂದಿನ ಕಾಮ್ರೆಡ್‌ಗಳೆಲ್ಲಾ ಚಳವಳಿಯ ಸಮಯದಲ್ಲಿ ಏನೇನು ಮಾಡುತ್ತಿದ್ದರು ಎಂಬುದನ್ನು ಅಪ್ಪಿತಪ್ಪಿಯೂ ಉಲ್ಲೇಖಿಸುವುದಿಲ್ಲ. ಬ್ರಿಟಿಷರ ಹುಚ್ಚು ಕಾಯ್ದೆಗಳಿಗೆಲ್ಲಾ ಅಂದಿನ ಕಮ್ಯುನಿಸ್ಟ್ ಕಾಮ್ರೆಡ್‌ಗಳು ಬೆಂಬಲವನ್ನೇಕೆ ಸೂಚಿಸಿದ್ದರು ಎಂಬುದಕ್ಕೂ ಇಂದು ಅವರಲ್ಲಿ ಉತ್ತರಗಳಿಲ್ಲ. ಅವರೆಲ್ಲರ ಪ್ರಕಾರ ಭಗತ್ ಸಿಂಗ್ ಒಬ್ಬ ಕಾಮ್ರೆಡ್ ಅಷ್ಟೆ. ಅದು ಅವರ ಇಂದಿನ ಆವಶ್ಯಕತೆ ಮತ್ತು ಅವಕಾಶವಾದಿತನ.  ಅಂದು ದೇಶಕ್ಕೆ ದೇಶವೇ ಸ್ವದೇಶಿ, ಸ್ವಾತಂತ್ರ್ಯ ಎಂದು ಚಳವಳಿಗೆ ಧುಮುಕಿದ್ದಾಗ ಆಕಳಿಸುತ್ತಾ ಕಾಲಕಳೆಯುತ್ತಿದ್ದ  ಇವರಿಗೆ ಇಂದು ಹೋರಾಟದಲ್ಲಿ ಪಾಲು ಕೇಳಲು ಸಿಕ್ಕಿದ್ದು ಭಗತ್ ಸಿಂಗ್. ಅವರ ಸ್ವಾರ್ಥಕ್ಕೆ ವಿನಾ ಕಾರಣ ಭಗತ್ ಇಂದು ಕಾಮ್ರೆಡನಾಗಬೇಕಾಗಿದೆ.
ಮಹಾತ್ಮರನ್ನು ಅವರಿರುವಂತೆ ಒಪ್ಪಿಕೊಳ್ಳಬೇಕು. ಯಾವಾಗಲೂ ಮಹಾತ್ಮರನ್ನು ವಿಮರ್ಶಿಸಲು ಹಲವು ದಾರಿಗಳಿರುತ್ತವೆ. ವಿಮರ್ಶಿಸಿದಾಗ ಅವರು ಹಲವು ಆಗಿ ಕಾಣುತ್ತಾರೆ. ಹಾಗೆ ಭಗತ್ ಸಿಂಗನನ್ನು ನೋಡಿದರೆ ಅವರು ಏಕ ಕಾಲಕ್ಕೆ ಹಲವು ಆಗಿ ಕಾಣುತ್ತಾರೆ. ಒಂದು ಕೋನದಿಂದ ಅವರು ಬಿಸಿರಕ್ತದ ಯುವಕ. ಹಾಗಾದರೆ ಆತನ ಕೃತ್ಯವೆಲ್ಲವೂ ಎಡವಟ್ಟಿನದ್ದೇ? ಇನ್ನೊಂದು ಕೋನದಿಂದ ಅವರು ಸಂಘಟಕ. ಆದ್ದರಿಂದ ಅವರು ಕೇವಲ ಭಾಷಣ-ಪ್ರವಾಸ ಮಾಡಿಕೊಂಡಿದ್ದ ವ್ಯಕ್ತಿ ಮಾತ್ರ ಆಗುವರೇ? ಇನ್ನೊಂದು ಕೋನದಿಂದ ಭಗತ್‌ಸಿಂಗ್ ರಕ್ತಕ್ರಾಂತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದವರು. ಹಾಗಾದರೆ ಅವರನ್ನು ಕ್ರೂರಿ ಎನ್ನುವುದೇ?  ರೈತರು-ಕಾರ್ಮಿಕರು ಸಂಘಟಿತರಾಗಬೇಕು, ಬ್ರಿಟಿಷ್ ಸಾಮ್ರಾಜ್ಯದ ಬೇರುಗಳಿರುವುದೇ ಇಲ್ಲಿ ಎಂದು ಭಗತ್ ಸಿಂಗ್ ಸದಾ ಹೇಳುತ್ತಿದ್ದರು. ಹಾಗಾದರೆ ಅವರನ್ನು ಕೇವಲ ರೈತ , ಕಾರ್ಮಿಕ ಮುಖಂಡ  ಎಂದು ಸೀಮಿತಗೊಳಿಸಿಬಿಡುವುದೇ?  ದುರದೃಷ್ಟದಿಂದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಪಾಡು ಕೂಡಾ ಹೀಗೆಯೇ. ಕಾಲಕ್ರಮದಲ್ಲಿ ಅವರು ಬಹುಕೋನದಿಂದ ಚರ್ಚಿಸಲ್ಪಟ್ಟರು. ಸ್ವಾತಂತ್ರ್ಯಾನಂತರ ಅವರನ್ನು ವಿಮರ್ಶಿಸುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ ಎಂದೇ ಹೇಳಬೇಕು. ಹೀಗೆ ಚರ್ಚಿಸುತ್ತಾ, ವಿಮರ್ಶೆಗೆ ಒಳಪಡುತ್ತಾ ಗಾಂಧಿ ಪ್ಯೂರ್ ಇಂದಿರಾ ಕಾಂಗ್ರೆಸೇ ಆಗಿ ಹೋಗಿ ಇಂದು ಯುಪಿಎಯ ಆಸ್ತಿಯೂ ಆಗಿಹೋದದ್ದಿದೆ.  ಸಾವರ್ಕರ್ ಕೋಮುವಾದಿ ಆಗಿಹೋದರು. ನೇತಾಜಿ ಬೋಸ್ ನಾಜಿಯಾಗಿ ಹೋದರು. ಎಷ್ಟೋ ಯುವ ಕ್ರಾಂತಿಕಾರಿಗಳು ದಾರಿತಪ್ಪಿದ ಯುವಕರಾಗಿಹೋದರು. ಹಾಗೆ ಭಗತ್ ಸಿಂಗ್ ಕೂಡಾ ಕಾಮ್ರೆಡ್ ಆಗಿಹೋದ.
ಯಾವ ಬಾಯಿಂದ ತಾನೇ ಭಗತ್ ಸಿಂಗನನ್ನು ಕಾಮ್ರೆಡ್ ಎನ್ನುವರೋ ಏನೋ. ದೇಶಕ್ಕೊಸ್ಕರ ಮನೆ ಬಿಟ್ಟ, ದೇಶಕ್ಕೊಸ್ಕರ ಸಮಾನ ಮನಸ್ಕರನ್ನು ಜೊತೆಕಟ್ಟಿಕೊಂಡ , ತಾಯಿ ಭಾರತಿಯ ಬೇಡಿ ಕಳಚುತ್ತೇನೆ ಎಂದ , ವಂದೇ ಮಾತರಂ ಎಂದು ಧೈರ್ಯದಿಂದ ಘೋಷಿಸಿದ  ಭಗತ್ ಹೇಗೆ ಸ್ವಾಮಿ ರೌಡಿ ಕಮ್ಯುನಿಸ್ಟನಾಗಬಲ್ಲ?  ಭಗತ್ ಸಿಂಗ್ ಸೋಷಿಯಲಿಸ್ಟ್ ಸ್ಟೇಟ್‌ನ ಕಲ್ಪನೆ ಮಾಡಿದ್ದರು. ಅವರದ್ದು ಸಮಾಜವಾದಿ ಚಿಂತನೆಯಾಗಿತ್ತು. ಸರಿ. ಅವರು ತಮ್ಮ ಸಹ ಕ್ರಾಂತಿಕಾರಿಗಳಿಗೆ ರಷ್ಯನ್ ಕ್ರಾಂತಿಯ , ಟರ್ಕಿಯ ಕ್ರಾಂತಿಯ ಉದಾಹರಣೆಗಳನ್ನು ಕೊಡುತ್ತಿದ್ದರು ಎಂಬುದೆಲ್ಲವೂ ಸರಿ. ಇಷ್ಟಿದ್ದ ಮಾತ್ರಕ್ಕೆ ಅವರು ಕಾಮ್ರೆಡ್ ಆಗಿದ್ದರು ಎಂದರ್ಥವೇ? ಅವರ ರಷ್ಯನ್ ಕ್ರಾಂತಿಯ ಕಲ್ಪನೆ, ಪ್ರೇರಣೆ, ಸಮಾಜವಾದಿ ಚಿಂತನೆ ಎಲ್ಲವೂ ನಡೆದಿದ್ದು  ಭಾರತವನ್ನು ದುರುಳರೂ, ಕ್ರೂರಿಗಳೂ, ಲೂಟಿಕೋರರೂ ಆಳುತ್ತಿದ್ದ ಹೊತ್ತಿನಲ್ಲಿ. ಅಂಥವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಬೇಕಿತ್ತು. ಬ್ರಿಟಿಷರು ಹೆದರುವಂತಹ ತತ್ತ್ವವನ್ನೇ ಅವರೆದುರು ಇಡಬೇಕಿತ್ತು.  ಅದು ಜಗತ್ತಿನ ಪ್ರತೀ ಕ್ರಾಂತಿಯ ತತ್ತ್ವ.  ಇಂಥ ತತ್ತ್ವವನ್ನು ಭಗತ್ ಮಂಡಿಸದೇ ಹೋಗಿದ್ದರೆ ಅವರೂ ಕೂಡಾ ಇತರರಂತೆ ಉಪವಾಸ ಕೂರಬೇಕಿತ್ತು. ದುಂಡುಮೇಜಿನ ಪರಿಷತ್ತಿಗೆ ಅಲೆದಾಡುತ್ತಾ ಇರಬೇಕಿತ್ತು.  ಅದು ಕ್ರಾಂತಿಯಾಗುತ್ತಿರಲಿಲ್ಲ.  ದಪ್ಪ ಚರ್ಮದ ಕೋಣದ ಮಂದೆಯ ಮುಂದೆ ನಿಂತು ಅವು ಹೋಗಬೇಕಾದ ದಾರಿ ಎಲ್ಲಿದೆ ಎಂದು ಯಾರೂ ಭಾಷಣ ಮಾಡುವುದಿಲ್ಲ.  ಮಾಂಸಾಹಾರಿ ಪ್ರಾಣಿಗೆ ಹಸಿ ಹುಲ್ಲನ್ನು ತಿನ್ನಿಸಬಹುದು ಎಂದು ಯಾರೂ ಕೂಡಾ ಕನಸು ಕಾಣುವುದೂ ಇಲ್ಲ.  ಹಾಗಾಗಿ ಭಗತ್ ಹಾಗೆ ಮಾಡಲಿಲ್ಲ.  ಬ್ರಿಟಿಷರು ಹೆದರುತ್ತಿದ್ದ ರಷ್ಯನ್ ಕ್ರಾಂತಿಯ ಗುಮ್ಮನಿಂದ ಅವರನ್ನು ಓಡಿಸಲು ನೋಡಿದರು.  ಅಷ್ಟಕ್ಕೆ ಅವರು ಕಮ್ಯುನಿಷ್ಟರಾಗುವರೇ? ಒಂದು ವೇಳೆ ಅವರು ರಷ್ಯನ್, ಟರ್ಕಿ ಕ್ರಾಂತಿಯ ದಾರಿಯನ್ನು ಬೋಧಿಸಲಿಲ್ಲ ಎಂದಿಟ್ಟುಕೊಳ್ಳೋಣ. ಇನ್ನೇನು ತಾನೇ ಮಾಡಬೇಕಿತ್ತು? ಮಂತ್ರಿಗಳು, ಸರದಾರರು, ಸೇನಾಪತಿಗಳು, ಕಾಲ್ದಳ, ಅಶ್ವಬಲ, ಗಜಪಡೆಗಳನ್ನು ಕಟ್ಟಿ ಸಮರ ಸಾರಲಾಗುತ್ತಿತ್ತೇ? ಕ್ರಾಂತಿಯ ತಂತ್ರಗಳನ್ನು ಯಾರೂ ವಿಮರ್ಶಿಸಲಾಗದು. ವಿಮರ್ಶಿಸಲೂಬಾರದು. ಏಕೆಂದರೆ ಆ ಕ್ರಾಂತಿಯ ಒಟ್ಟು ಉದ್ದೇಶ ದೇಶ. ದೇಶ. ದೇಶ. ಸಾವರ್ಕರ್ ಅಂಡಾಮಾನ್ ಜೈಲಿನಿಂದ ಹೊರಬಂದಾಗಲೂ ಉಪಯೋಗಿಸಿದ್ದು ಆ ತಂತ್ರವನ್ನೇ. ನೇತಾಜಿ ಜರ್ಮನಿಯ ಸಂಗ ಬೆಳೆಸಿದ್ದೂ ಈ ತಂತ್ರದಿಂದಲೇ.  ಜರ್ಮನಿಯ ಸಂಪರ್ಕ ಬೆಳೆಸಿದ ನೇತಾಜಿಯ ಗುರಿ ಭಾರತವಾಗಿತ್ತು. ಹಾಗೆಯೇ ರಷ್ಯನ್ ಕ್ರಾಂತಿಯನ್ನು ಉಲ್ಲೇಖಿಸುತ್ತಿದ್ದ ಭಗತ್ ಸಿಂಗರ ಗುರಿಯೂ ಭಾರತವಾಗಿತ್ತು.  ಹೇಗೆ ನೇತಾಜಿಯನ್ನು ನಾಜಿ ಎನ್ನಲು ಸಾಧ್ಯವಿಲ್ಲವೂ ಹಾಗೆಯೇ ಭಗತ್ ಸಿಂಗನನ್ನು ಕಾಮ್ರೆಡ್ ಎನ್ನಲೂ ಸಾಧ್ಯವಿಲ್ಲ. ಭಗತ್ ಸಿಂಗರು ೧೯೨೫-೨೬ರ ಆಸುಪಾಸಿನಲ್ಲೊಮ್ಮೆ ನಾಗಪುರಕ್ಕೆ ತೆರಳಿದ್ದರು. ಡಾ.ಹೆಡಗೇವಾರರ ನಿಕಟವರ್ತಿಯಾಗಿದ್ದ ಭಾವೂಜಿ ಕಾವ್ರೆಯವರನ್ನು ಭಗತ್ ಸಿಂಗ್ ಭೇಟಿಯಾಗಿದ್ದರು. ಅನಂತರ ಕಾವ್ರೆಯವರು ಭಗತ್‌ನನ್ನು ಡಾಕ್ಟರ್‌ಜಿಯವರಿಗೆ ಪರಿಚಯ ಮಾಡಿಸಿದ್ದರು. ಆಗ ತಾನೇ ಆರೆಸ್ಸೆಸ್ಸ್ ಜನಿಸಿತ್ತು. ಅದರ ಕಾರ್ಯವ್ಯಾಪ್ತಿ ಇನ್ನೂ ವಿಸ್ತರಿಸಿರಲಿಲ್ಲ. ತೀರಾ ಸಣ್ಣ ಸಂಘಟನೆ.ಅಂಥ ಸಂಘಟನೆಯ ಪರಿಕಲ್ಪನೆಯನ್ನು ನೋಡಿ ಭಗತ್ ಸಿಂಗ್ ಡಾಕ್ಟರ್‌ಜಿಯವರೊಂದಿಗೆ " ಇಂಥ ಹಿಂದೂ ಯುವಕರ ಸಂಘಟನೆಯಿಂದ ದೇಶ ಮತ್ತಷ್ಟು ಬಲಶಾಲಿಯಾಗುವುದು. ಶಕ್ತಿ ಬರುವುದು" ಎಂದಿದ್ದರು. ಹಾಗಾದರೆ ಭಗತ್ ಸಿಂಗ್ ಆರೆಸ್ಸೆಸ್ ಎಂದು ಅರ್ಥವೇ? ಇಂಥ ಮಾತನ್ನು ಹೇಳುವ ಭಗತ್ ಸಿಂಗ್ ಎಂದಾದರೂ ರಷ್ಯದ ಮಳೆಗೆ ಭಾರತದಲ್ಲಿ ಕೊಡೆ ಹಿಡಿಯುವ ಕಾಮ್ರೆಡರಾಗಬಲ್ಲರೇ?
ಲಾಹೋರ್ ಅಸೆಂಬ್ಲಿ ಬಾಂಬ್ ಸ್ಪೋಟ ಪ್ರಕರಣದ ಅನಂತರ ಭಗತ್ ಸಿಂಗ್ ಜೈಲೊಳಗಿಂದಲೇ ಸತ್ಯಾಗ್ರಹ ಹೂಡಿದರು. ಅದು ದೇಶಾದ್ಯಂತ ಜನಜಾಗೃತಿಗೆ ಕಾರಣವಾಯಿತು.  ದೇಶದ ವಿವಿಧ ಜೈಲುಗಳಿಂದ ರಾಜಕೀಯ ಖೈದಿಗಳ ಬೇಡಿಕೆಗಾಗಿ ಸತ್ಯಾಗ್ರಹ ಪ್ರಾರಂಭವಾದವು. ಆ ಸಂದರ್ಭದಲ್ಲಿ  ಬೃಹತ್ ಪ್ರಮಾಣದಲ್ಲಿ ಸಾಧುಸಂತರೂ ಕೂಡಾ ಭಗತ್ ಗೆ ಬೆಂಬಲ ಸೂಚಿಸಿದ್ದರು. ಒಂದು ವೇಳೆ ಭಗತ್ ಕಾಮ್ರೆಡನೇ ಆಗಿದ್ದರೆ ಈ ಕಾವಿಧಾರಿ ಸಂನ್ಯಾಸಿಗಳು ಬೆಂಬಲ ಸೂಚಿಸುತ್ತಿದ್ದರು ಎಂದು ಅನಿಸುವುದೇ?  ಭಗತ್ ಸಿಂಗ್ ಜೈಲಲ್ಲಿದ್ದಾಗ ಮಾರ್ಕ್ಸ್ ನ ಜೀವನವನ್ನು ದಾಸ್ ಕ್ಯಾಪಿಟಲ್ಲನ್ನೂ ಒದುತ್ತಾ ಸಮಯ ಕಳೆಯುತ್ತಿದ್ದರು ಎಂದು ಕೆಲವು ಕಮ್ಯುನಿಸ್ಟ್ ಬರಹಗಾರರು ಬರೆದಿದ್ದಾರೆ. ಆದರೆ ಭಗತ್ ಸಿಂಗ್ ಭಗವದ್ ಗೀತೆಯನ್ನೂ ಓದಿದ್ದರಲ್ಲಾ, ಜೈಲಲ್ಲೂ ಓದುತ್ತಿದ್ದರಲ್ಲಾ? ನೇಣಿಗೇರುವ ದಿನದಂದೂ ಗೀತಾ ಪಾರಾಯಣ ಮಾಡಿದ್ದರಲ್ಲಾ ಅದಕ್ಕೇನನ್ನಬೇಕು? ಅಲ್ಲದೆ ಭಗತ್ ಸಿಂಗ್ ಸ್ವಾಮಿ ವಿವೇಕಾನಂದರನ್ನೂ ಉಲ್ಲೇಖಿಸುತ್ತಿದ್ದರು ಎಂದು ಸಹ ಕ್ರಾಂತಿಕಾರಿಗಳೇ ಹೇಳಿದ ಉಲ್ಲೇಖಗಳಿವೆಯಲ್ಲಾ .
 ಭಗತ್ ನನ್ನು ಕಾಮ್ರೆಡ್ ಮಾಡುವ ದಾರಿಯಲ್ಲಿ ಕಮ್ಯನಿಸ್ಟರು ಹಲವು ಎಡವಟ್ಟುಗಳನ್ನು ಮಾಡಿಕೊಂಡಿರುವುದು ಕಾಣುತ್ತದೆ.
೧೯೨೮ರಲ್ಲಿ ಸೈಮನ್ ಸಮಿತಿ ಭಾರತಕ್ಕೆ ಬಂತು.ದೇಶಾದ್ಯಂತ "ಸೈಮನ್ ಗೋಬ್ಯಾಕ್" ಚಳವಳಿ ನಡೆಯಿತು. ಲಾಹೋರಿನಲ್ಲಿ ನಡೆದ ಅಂಥ ಒಂದು ಬೃಹತ್ ಚಳವಳಿಯಲ್ಲಿ ಲಾಠಿ ಚಾರ್ಜ್ ನಡೆಯಿತು. ಮಹಾನ್ ನಾಯಕ, ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸುತ್ತಿದ್ದ ಲಾಲ್-ಬಾಲ್-ಪಾಲ್ ರಲ್ಲೊಬ್ಬರಾದ ಲಾಲಾ ಲಜಪತರಾಯ್   ಅವರಿಗೆ ಮಾರಣಾಂತಿಕ ಪೆಟ್ಟು ಬಿತ್ತು. ಆ ಪೆಟ್ಟಿನಿಂದಲೇ ಲಾಲಾಜಿ ಕೆಲವೇ ದಿನಗಳಲ್ಲಿ ಮೃತರಾದರು.  ಈ ಘಟನೆ ಭಗತ್ ಸಿಂಗ್ ಮನದಲ್ಲಿ ಎಷ್ಟೊಂದು ಆಳದಲ್ಲಿ ಗಾಯವನ್ನು ಉಂಟುಮಾಡಿತ್ತೆಂದರೆ ಸೇಡು ತೀರಿಸಿಕೊಳ್ಳುವವರೆಗೆ  ನೆಮ್ಮದಿಯನ್ನೇ ಕಳಕೊಂಡರು. ಯಾವ ಲಾಲಾಜಿ ಭಗತ್ ನಂಥ ಯುವಕರಿಗೆ  ದೇವಸಮಾನರಾಗಿದ್ದರೋ , ಯಾವ ಲಾಲಾಜಿಯಿಂದ ಭಗತ್ ಉಗ್ರ ಸ್ವದೇಶಿ ತತ್ತ್ವವನ್ನು ಕಲಿತಿದ್ದರೋ ಅಂಥ ಲಾಲಾಜಿಯನ್ನು ಕೊಂದ ಪೊಲೀಸನ ಬಲಿಗೆ ಅಡಿ ಇಟ್ಟೇ ಬಿಟ್ಟರು. ಒಂದು ವೇಳೆ ಆತ ಕಾಮ್ರೆಡ್ ಆಗಿದ್ದರೆ...? ಎಲ್ಲಿಯ ಉಗ್ರ ಸ್ವದೇಶಿ ತತ್ತ್ವ? ಎಲ್ಲಿಯ ವಿದೇಶಿ ಬೀಜದ ಕಾಮ್ರೆಡ್‌ತನ?
ಭಗತ್ ಸಿಂಗ್ ದೇಶದ ಆಸ್ತಿಯೇ ಹೊರತು ಕಮ್ಯುನಿಸ್ಟರ ಸ್ವತ್ತಲ್ಲ. ಹೀಗೆಲ್ಲಾ ಇದ್ದ ಭಗತ್ ಸಿಂಗ್ ಕಮ್ಯುನಿಸ್ಟ್ ಆಗಲು ಸಾಧ್ಯವೇ ಇರಲಿಲ್ಲ. ಕಮ್ಯುನಿಸ್ಟರೂ ಕೂಡಾ ಭಗತ್ ಸಿಂಗ್‌ನನ್ನು ದೇಶಭಕ್ತನೆಂದು ಹೇಳಿಕೊಳ್ಳಬಹುದು. ಆದರೆ ಕಾಮ್ರೆಡ್ ಎಂದು ಹೇಳಲು ಹಕ್ಕಿಲ್ಲ. ೨೦೦೫ ರಲ್ಲಿ ಎ.ಆರ್. ರೆಹಮಾನ್ ರಂಗ್ ದೇ ಬಸಂತಿ ಹಾಡಿಗೆ ಹೊಸ ರಾಗ ಜೋಡಿಸುವವರೆಗೂ  ಈ ಕಮ್ಯುನಿಸ್ಟರಿಗೆ  ಆ ಹಾಡು ಗೊತ್ತಿತ್ತು ಎಂಬುದೇ ಸಂಶಯ.

Tuesday, October 9, 2012

ಇದು ತುರ್ತುಪರಿಸ್ಥಿತಿಯಲ್ಲದೆ ಹಾಲಿನ ಹೊಳೆಯ ಲಕ್ಷಣವೇ?

ವೈದ್ಯಕೀಯದಲ್ಲಿ ಮರೆಗುಳಿತನವೂ ಒಂದು ಕಾಯಿಲೆ. ಆ ಕಾಯಿಲೆಗೆ ಮರೆಯಬಾರದ್ದು ಮತ್ತು ಮರೆಯಬೇಕಾದ್ದು ಎಂಬ ಹಂಗಿಲ್ಲ. ಎಲ್ಲವೂ ಮರೆತುಹೋಗುತ್ತದೆ. ಮಂಕು ಕವಿದಿರುತ್ತದೆ. ಭಾರತೀಯರಿಗೆ ಕವಿದಿದ್ದು ಅಂಥಾ ಒಂದು ಮಂಕು,ಕಾಯಿಲೆ ಎನಿಸುತ್ತದೆ. ಅದು ಕಾಯಿಲೆ ಬಂದಿದೆ ಎಂದೂ ಕೂಡಾ ನಂಬಲಾರದಂತಹಾ ಕಾಯಿಲೆ. ಒಪ್ಪಲಾಗದಂತಹಾ ಕಾಯಿಲೆ. ಹಾಗಾಗಿ ಭಾರತೀಯರು ಎಲ್ಲವನ್ನೂ ಮರೆತುಬಿಡುತ್ತಾರೆ. ಶತಮಾನಗಳ ಹಿಂದೆ ಮುಸಲ್ಮಾನರು ಹಿಡಕೊಂಡು ಒದ್ದಿದ್ದು. ಕತ್ತರಿಸಿದ್ದು, ಮತಾಂತರಿಸಿದ್ದು, ಸುಟ್ಟಿದ್ದು, ಒಡೆದಿದ್ದನ್ನೆಲ್ಲವನ್ನೂ ಅವರು ಮರೆತಿದ್ದಾರೆ. ಪೋರ್ಚುಗೀಸರು, ಡಚ್ಚರು, ಫ್ರಂಚರು, ಬ್ರಿಟೀಷರು ಬಂದ ಕಾರಣಗಳನ್ನು , ದೋಚಿದ್ದನ್ನು, ಹಿಂಸಿಸಿದ್ದನ್ನು ಮರೆತಿದ್ದಾರೆ. ದೇಶ ಒಡೆಯಲು ಏನು ಕಾರಣವಾಗಿತ್ತು ಎಂಬುದನ್ನು ಮರೆತಿದ್ದಾರೆ. ಜನ ಕಾಂಗ್ರೆಸನ್ನು ಒಪ್ಪಿಕೊಂಡ ಕಾರಣವನ್ನು ಅದೇ ಜನ ಕ್ರಮೇಣ ಮರೆತರು. ೬೦ರ ದಶಕದಲ್ಲಿ ನೆಹರೂ ದೇಶಕ್ಕೇನು ಮಾಡಿದರು ಎಂಬುದನ್ನು , ೭೦ರ ದಶಕದಲ್ಲಿ ಇಂದಿರಾ ಏನು ಮಾಡಿದರು ಎಂಬುದನ್ನು, ೮೦ರ ದಶಕದಲ್ಲಿ ರಾಜೀವ್ ದೇಶಕ್ಕೇನು ಮಾಡಿದರು ಎಂಬುದನ್ನು  ಜನ ಅದೇ ತೀವ್ರತೆಯಲ್ಲಿ ನೆನಪು ಮಾಡಿಕೊಳ್ಳಲಾರರು. ಅದು ಮರೆಗುಳಿ ಕಾಯಿಲೆಯ ಚಿಹ್ನೆಗಳು. ಅಥವಾ ಕಾಯಿಲೆ ಇಲ್ಲದಿದ್ದರೂ ಕಾಯಿಲೆಗ್ರಸ್ಥರಂತೆ ನಟಿಸುವ ಬುದ್ಧಿಗಳು. ಸಾಮರ್ಥ್ಯವೇ ಇಲ್ಲದಿದ್ದ ಮೇಲೆ ಏನಾದರೂ ಮಾಡಲೇಬೇಕಲ್ಲಾ? ಒಟ್ಟಾರೆ ಅವೆಲ್ಲವೂ ಪ್ರಜ್ನೆಗೆ ಪೊರೆ ಬೆಳೆದ ಮಾನಸಿಕತೆ ಎಂಬುದಂತೂ ಸತ್ಯ. 
ಭಾರತೀಯರಲ್ಲಿ ಇನ್ನೂ ಒಂದು ವರ್ಗವಿದೆ. ಅವರು ಮರೆತುಹೋಗುವುದಿಲ್ಲ. ಜಪ್ಪಯ್ಯ ಎಂದರೂ ಮರೆಯುವ ಪ್ರಶ್ನೆಯೇ ಇಲ್ಲ.  ಅಂಥವರು ಕೆಲವು ಕಾಲಘಟ್ಟದಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಕೆಲವರು ಅಶೋಕನು ಸಾಲುಮರಗಳನ್ನು ನೆಟ್ಟನು ಎಂಬುದನ್ನೇ ನೆನಪಿಸಿಕೊಂಡು ಪುಳಕಗೊಳ್ಳುತ್ತಿರುತ್ತಾರೆ. ಇನ್ನು ಕೆಲವರು ನೆಹರೂ ಮಾಡಿದ ಹಾದರವನ್ನು ಇಂದಿಗೂ ಬಯ್ಯುತ್ತಾ ಇರುತ್ತಾರೆ. ಇನ್ನು ಕೆಲವರು ಇಂದಿರಾ ಕಾಲದ ತುರ್ತುಪರಿಸ್ಥಿತಿ ಮತ್ತು ತಮ್ಮ ಯೌವ್ವನ ಕಾಲವನ್ನು ಪ್ರತೀ ಮಾತಿನಲ್ಲಿ ಸಿಡಿಸುತ್ತಾ ಇರುತ್ತಾರೆ. ಆ ತುರ್ತುಪರಿಸ್ಥಿಯ ಗುಂಗಿನಲ್ಲೇ ಇರುವವರಿಗೆ ಹೊಸ ತುರ್ತುಪರಿಸ್ಥಿತಿ ಅನುಭವಕ್ಕೆ ಬರುವುದಿಲ್ಲ. ಅದರ ಗುಂಗಿನಲ್ಲೇ ಇರುವವರಿಗೆ ತುರ್ತುಪರಿಸ್ಥಿಯ ಭಿನ್ನ ದಾರಿಗಳು ಹೊಳೆಯುವುದೇ ಇಲ್ಲ. ಏಕೆಂದರೆ ಅವೆರಡರ ಸ್ವರೂಪವೇ ಬೇರೆ . ಪರಿಣಾಮವೂ ಬೇರೆ, ತೀವ್ರತೆಯೂ ಬೇರೆ. ಆದರೆ ತುರ್ತುಪರಿಸ್ಥಿತಿ ತುರ್ತುಪರಿಸ್ಥಿತಿಯೇ.
ಹಾಗಾಗಿ ಮರೆಗುಳಿತನವೂ ರೋಗವೇ. ಮರೆಯಲಾಗದ್ದೂ ರೋಗವೇ.
ಒಮ್ಮೆ ಚಿಂತಿಸಿ. ಅಂದು ಇಂದಿರಾ ಹೇರಿದ ತುರ್ತುಪರಿಸ್ಥಿತಿಗೂ ಇಂದು ಸೋನಿಯಾ ಹೇರದೇ ಉಂಟಾದ ತುರ್ತುಪರಿಸ್ಥಿತಿಗೂ ಏನು ವ್ಯತ್ಯಾಸವಿದೆ? ಹೇಳಬೇಕೆಂದರೆ ಅಮದು ಎಲ್ಲವೂ ನೇರಾನೇರಾ ನಡೆದಿತ್ತು. ಇಂದಿರಾ ಕೈಯಲ್ಲಿ ಅಧಿಕಾರವಿತ್ತು. ಅಧಿಕಾರ ಬಲದಿಂದಲೇ ಇಂದಿರಾ ಎಲ್ಲರನ್ನೂ ಬಗ್ಗುಬಡಿದಿದ್ದಳು. ಮತ್ತು ಎಲ್ಲರೂ ಅವರ ಕಾಲ ಕೆಳಗೆ ಅಡ್ಡ ಬಿದ್ದಿದ್ದರು. ಆದರೆ ಇಂದು? ಎಲ್ಲವೂ ವ್ಯತಿರಿಕ್ತವಾಗಿ ನಡೆಯುತ್ತಿದೆ. ಅಧಿಕಾರವಿದ್ದವರು ಕೂಡಾ ಅಧಿಕಾರವಿಲ್ಲದವರ ಕಾಲಿಗೆ ಉಧೋ ಎಂದು ಬೀಳುತ್ತಿದೆ. ಇನ್ನು ಕೆಲವರು ಬಿಕರಿಯಾಗಿದ್ದಾರೆ. ಅಂದಿನಂತೆ ಇಂದೂ ಕೂಡಾ ಮಾಧ್ಯಮಗಳ ಮೇಲೆ ಕಾಕದೃಷ್ಟಿ ಇದೆ. ಅಂದಿನಂತೆಯೇ ಕೆಲವು ಮಾಧ್ಯಮಗಳು ಖರೀದಿಸಲ್ಪಟ್ಟಿವೆ.  ಅಂದಿನಂತೆ ಇಂದೂ ಪ್ರಬಲ ಮಾಧ್ಯಮಗಳ ಮೇಲೆ ನಿಷೇಧಗಳು ಬಿದ್ದಿವೆ. ಆಶ್ಚರ್ಯ ಎನಿಸಿದರೂ ಇದು ಸತ್ಯ.  ಕಾಂಗ್ರೆಸ್ ಮತ್ತು ಯುಪಿಎಗಳ ಘನಾಂಧಾರಿ ಕೆಲಸಗಳ ಬಗ್ಗೆ ಇಂದು ನವಮಾಧ್ಯಮವೆಂದು ಕರೆಯಲ್ಪಡುವ ಸೋಷಿಯಲ್ ನೆಟ್‌ವರ್ಕ್ ಸೈಟುಗಳಲ್ಲಿ ಚರ್ಚೆ ನಡೆಸುವಂತಿಲ್ಲ. ಹಗರಣಗಳಿಗೆ ಸಂಬಂಧಪಟ್ಟ ವಿಡಿಯೋ ಹಾಕುವಂತಿಲ್ಲ. ಅಂದರೆ ಜನಜಾಗೃತಿ ಆಗಬಾರದು. ಅಂದು ಇಂದಿರಾ ಅಪೇಕ್ಷೆ ಕೂಡಾ ಅದೇ ಆಗಿತ್ತು. ಅಂದು ಮತ್ತು ಇಂದು, ಅಂದಿನ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದ ಹೆಗ್ಗಳಿಕೆ ಕಾಂಗ್ರೆಸಿನದು. ಎಲ್ಲವನ್ನೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಾಡಬಹುದು ಎಂದು ತೋರಿಸಿಕೊಟ್ಟವರು ಈ ಕಾಂಗ್ರೆಸಿನವರು ( ಮುಂದುವರಿಸಿದವರು ಹಲವರು). ಇಂಥ ವಿಷೇಧಗಳೆಲ್ಲಾ ಮುಸ್ಲಿಂ ದೇಶಗಳಲ್ಲಿ ಮಾತ್ರ ಇರುತ್ತವೆ. ಅವು ತಮಗೆ ಸಹನೀಯವಲ್ಲದ ವಿಡಿಯೋ, ಲೇಖನ ಮತ್ತು ಸುದ್ಧಿಗಳನ್ನು ನಿಷೇಧಿಸುತ್ತಾರೆ  ಎಂದು ತಿಳಿದಿದ್ದವರಿಗೆ ನಾವೂ ಕೂಡಾ ಮುಸ್ಲಿಮ್ ದೇಶಗಳ ಮಾನಸಿಕತೆಯಂತೆಯೇ ಎಂದು ತೋರಿಸಿಕೊಟ್ಟವರು ಕಾಂಗ್ರೆಸಿಗರು.ಹಾಗಾಗಿ ಸೋನಿಯಾ ಗಾಂಧಿಯ ಪೂರ್ವ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಸಿಗುವುದಿಲ್ಲ. ರಾಬರ್ಟ್ ವಾಧ್ರಾನ ಹಗರಣಗಳ ಮುಂದುವರಿದ ಮಾಹಿತಿಯನ್ನು ಮಾಧ್ಯಮಗಳು ಬಿತ್ತರಿಸುವುದಿಲ್ಲ. ಇದು ಇಂದಿರಾ ಕಾಲದ ತುರ್ತುಪರಿಸ್ಥಿತಿಗಿಂತ ಭಿನ್ನವೇ?
ಇಂದಿರಾ ಗಾಂಧಿಯ ಸರ್ವಾಕಾರಿ ಧೋರಣೆಯನ್ನು ಬಿಟ್ಟರೆ ಆಕೆ ಲೆಕ್ಕ ಹಾಕಲು ಬಾರದಷ್ಟು  ಸೊನ್ನೆಗಳನ್ನು ಹೊಂದಿರುವ ಹಗರಣಗಳನ್ನೇನು ನಡೆಸಿರಲಿಲ್ಲ. ತನ್ನ ವಿರೋಧಿಗಳೂ ದುರ್ಗೆ ಎಂದು ಹೊಗಳುವಂತೆ  ಕೆಲವೆಡೆ ಆಡಳಿತ ನಡೆಸಿದ್ದರು. ಆದರೆ ಸೋನಿಯಾ? ಆಕೆ ಎಲ್ಲವನ್ನೂ ಮಾಡಿದರು. ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಕಂಡುಬಂದ ದೊಡ್ಡ ದೊಡ್ಡ ಹಗರಣಗಳಲ್ಲೆಲ್ಲಾ ಆಕೆಯ ಹೆಸರು ಕೇಳಿಬಂದಿದೆ. ಒಂದರ ಅನಂತರ ಮತ್ತೊಂದು. ಒಂದು ಮರೆಯುವ ಮೊದಲೇ ಇನ್ನೊಂದು ಹಲವು ಸೊನ್ನೆಗಳ ಹಗರಣಗಳು ನಡೆಯುತ್ತಲೇ ಇವೆ. ೨ ಜಿ ನಡೆದಿದ್ದು ಹಾಗೆಯೇ , ಇಂದು ಜೀಜಾಜಿ ( ಅಳಿಯಂದ್ರು) ಹಗರಣ ಕಾಣುತ್ತಿರುವುದೂ ಹಾಗೆಯೇ.
ಮಿತಿಮೀರಿದ ಸಂಪತ್ತು ಸಂಗ್ರಹ, ಸಂಶಯಾಸ್ಪದವಾಗಿ ಆಸ್ತಿ ಖರೀದಿ, ಬಡ್ಡಿಯೇ ಇಲ್ಲದೆ ಸಾಲ ಪಡೆದಿರುವುದು ಮತ್ತು ಬೃಹತ್ ರಿಯಲ್ ಎಸ್ಟೇಟ್ ಸಂಸ್ಥೆಗಳೊಂದಿಗೆ ನಿಕಟವಾದ, ಸಂದೇಹ ಹುಟ್ಟಿಸುವ ಸಂಬಂಧ. ಇವು ಸಮಸ್ತ ಕಾಂಗ್ರೆಸಿಗರ ನೆಚ್ಚಿನ ಅಳಿಯ ರಾಬರ್ಟ್ ವಾಧ್ರಾನ ಪ್ರೊಫೈಲ್. ಈತ ಏಕಾಏಕಿ ಐಶ್ವರ್ಯ ಬಂದ ಒಂದು ಕಾಲದ ಅಲ್ಪ. ಸೋನಿಯಾ ಅಳಿಯನೆಂಬ ಕಾರಣಕ್ಕೆ ದೇಶದ ಕಾಂಗ್ರೆಸಿಗರೆಲ್ಲರ ಡೊಗ್ಗು ಸಲಾಮು ಇವನಿಗೂ ಬೀಳುವುದು. ಆ ಡೊಗ್ಗು ಸಲಾಮುಗಳಿಂದಲೇ ಈ ರಾಬರ್ಟ್ ಕಾಂಗ್ರೆಸ್ ಆಡಳಿತದ ರಾಜ್ಯಗಳಿಂದ ಏಕರೆಗಟ್ಟಲೆ ಭೂಮಿಯನ್ನು ಖರೀದಿಸಬಲ್ಲ. ಈತ ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಬಲ್ಲ. ಏಕೆಂದರೆ ಈತ ಸೋನಿಯಾ ಅಳಿಯ. ಪ್ರಿಯಾಂಕಳ ಗಂಡ. ಏನಾದರೂ ಪ್ರಶ್ನೆ ಕೇಳಿದರೆ ಉತ್ತರ ಹೇಳುವ ಬದಲು ಪ್ರಶ್ನೆಗಳೇ ಅರ್ಥವಾಗದ ರಾಹುಲ್ ಗಾಂಧಿ ಮಾಡಬೇಕಾದ ಕೆಲಸವನ್ನು ನೆಹರೂ ಕುಟುಂಬಕ್ಕಾಗಿ ಈ ವಾಧ್ರಾ ಮಾಡುತ್ತಿದ್ದಾನೆ.  ಈತ ಅತ್ತೆ ಮನೆಯ ಇಂಗಿತವನ್ನು ತಿಳಿದುಕೊಂಡು ಸಂಪಾದನೆಗೆ ಇಳಿದಿರುವ ಅಳಿಮಯ್ಯ. ಈ ಕಾರಣದಿಂದ ಕಳೆದ ಮೂರು ವರ್ಷಗಳಲ್ಲಿ ರಾಜಾಸ್ಥಾನದ ಬಿಕಾನೇರ್ ಮತ್ತು ಜೈಸೆಲ್ಮೇರ್ ಸುತ್ತಮುತ್ತ ೩೧೧ ಜಮೀನನ್ನು ವಾಧ್ರಾ ಸಂಪಾದಿಸುತ್ತಾನೆ. ಇವು ಒಂದಾನೊಂದು ಕಾಲದಲ್ಲಿ ರಜಪೂತ ರಾಜರ ಆಸ್ತಿಗಳು! ಕೋಟೆ ಕಟ್ಟಿದವರ ಆಸ್ತಿಗಳನ್ನು ಅಳಿದ ಮೇಲೆ ಯಾರ್ಯಾರು ಅನುಭವಿಸಿಬಿಡುತ್ತಾರೆ ನೋಡಿ. ಅಲ್ಲದೆ ಕಳೆದ ೪ ವರ್ಷಗಳಿಂದಲೂ ಈತನ ಆಸ್ತಿ ಏರುತ್ತಲೇ ಇದೆ. ಈ ಅವಧಿಯಲ್ಲಿ ಈತ ೩೧ ಆಸ್ತಿಗಳನ್ನು ದೆಹಲಿ ಮತ್ತು ಹರ್ಯಾಣದ ಸುತ್ತಮುತ್ತ ಖರೀದಿಸುತ್ತಾನೆ. ಕಳೆದ ಮೂರು ವರ್ಷದಲ್ಲಿ ಈತ ತನ್ನ ಬಳಿಯಿದ್ದ ೫೦ ಲಕ್ಷ ರೂಗಳನ್ನು ೩೦೦ ಕೋಟಿ ರೂಗಳನ್ನಾಗಿ ಮಾಡಿಕೊಂಡಿದ್ದನೆಂದರೆ ಇವನು ಅದೆಂಥಾ "ಗಟ್ಟ್ಟಿಗ" ಅಳಿಯನಾಗಿರಬಹುದು?
ಅಳೆದೂ ಅಳೆದೂ ಕೊಡುವ ಸರಕಾರಗಳೇ ಇರುವಾಗ ಈ ಅಳಿಯ ಕೈಚಾಚಿ ತೆಗೊಂಡಿರದೇ ಇದ್ದಾನೆಯೇ? ಸರಕಾರಗಳೇ ಹೀಗಿದ್ದಮೇಲೆ ಇನ್ನು ಕೇಳುವವರಾರು? ಹೋದಲ್ಲಿ ಬಂದಲ್ಲಿ ಅತ್ತೆ, ಭಾವರ ಜೊತೆ ಕಾಣಿಸಿಕೊಳ್ಳುವ, ಗಾಂಧಿ ಸಮಾಧಿಗೆ ಕಾಂಗ್ರೆಸಿಗರೊಂದಿಗೆ ಹೋಗಿ ಕೂತು ಬರುವ ಈತನ ಖದರಿಗೆ ಪುಡಾರಿಗಳು ತಲೆಬಾಗದೇ ಇದ್ದಾರೆಯೇ? ಹಾಗೆ ತಲೆಬಾಗದೆ ಇದ್ದರೆ ಅವರು ಕಾಂಗ್ರೆಸಿಗರು  ಹೇಗಾದಾರು? 
ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗುವವರೆಗೂ ರಾಬರ್ಟ್ ವಾಧ್ರಾ "ದೊರೆ" ಯಾಗಿರಲಿಲ್ಲ. ಇವರಿಬ್ಬರೂ ಮೊದಲು ಅಂತಾರಾಷ್ಟ್ರೀಯ ಕಳ್ಳ ಒಟ್ಟಾವಿಯೋ ಕ್ವಾಟ್ರೋಚ್ಛಿಯ ಮನೆಯಲ್ಲಿ ಭೇಟಿಯಾದರು ಎಂದು ಕೆಲವರು ಹೇಳುತ್ತಾರೆ. ಇದ್ದರೂ ಇರಬಹುದು ಎನಿಸುತ್ತದೆ. ಏಕೆಂದರೆ ಕಳ್ಳರ ಮನೆಯಲ್ಲಿ ಕಳ್ಳರೇ ಇರುತ್ತಾರೆ, ಸೇರುತ್ತಾರೆ ಎಂಬುದು ನಾಣ್ಣುಡಿ.  ಅನಂತರ ಈ ರಾಬರ್ಟ್‌ನ ಅದೃಷ್ಟ ಖುಲಾಯಿಸಿತು. ನೆಹರೂ ಕುಟುಂಬದ ಅಳಿಯ ಹೇಗೆಲ್ಲಾ ವರ್ತಿಸಬಹುದೋ  ಹಾಗೆಲ್ಲಾ  ವರ್ತಿಸಿದ. ತನಗಾಗದವರನ್ನು ವ್ಯವಸ್ಥಿತವಾಗಿ ಮುಗಿಸಿದ. ಇಷ್ಟೆಲ್ಲಾ ಆದರೂ ಭಾರತದಲ್ಲಿ ಆತ ಸಾಮಾನ್ಯ ನಾಗರಿಕ. ಆದರೆ ಅದಕ್ಕೂ ಹೆಚ್ಚಿನದು ಆತನಿಗಿಲ್ಲಿ ಸಲ್ಲುತ್ತದೆ. ಭಾರತ ಸರಕಾರದ special protection group act-1998 ವಾಧ್ರಾನಿಗೆ ಲಾಗೂ ಆಗುವುದಿಲ್ಲ. ಅಥವಾ ಆತ ಅದನ್ನು ಪರಿಗಣಿಸುವುದೂ ಇಲ್ಲ. ವಿಮಾನ ನಿಲ್ದಾಣದಲ್ಲಿ ಆತ ರಾಷ್ಟ್ರಪತಿಗಳಂತೆ, ಪ್ರಧಾನ ಮಂತ್ರಿಗಳಂತೆ , ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳ ನ್ಯಾಯಾಶರಂತೆ  ತಪಾಸಣೆ ಇಲ್ಲದೆ ಹಾದು ಹೋಗಬಲ್ಲ. ಎಲ್ಲವೂ ಅಳಿಯ ಎಂಬ ಒಂದೇ ಕಾರಣಕ್ಕೆ. 
ವಾಧ್ರಾನ ಹಗರಣಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿದ್ದಂತೆಯೇ ಕಾಂಗ್ರೆಸಿನವರು ತುಂಬಾ ನೊಂದುಕೊಂಡರು. ಸಾಕ್ಷಾತ್ ಕಾಂಗ್ರೆಸಿನ ವಕ್ತಾರರೇ  ಕ್ಯಾಮರಾ ಮುಂದೆ ಬಂದು ಸ್ಪಷ್ಟೀಕರಣ ಕೊಟ್ಟರು. ಕೇಂದ್ರದ ಉಚ್ಚ ನಾಯಕರಾದ ಶರತ್ ಪವಾರ್, ಜೈರಾಮ್ ರಮೇಶ್, ಚಿದಂಬರಂ, ದಿಗ್ವಿಜಯ್ ಸಿಂಗ್, ಸಿಬಲ್‌ಗಳು ತುರಾತುರಿಯಲ್ಲಿ ಹೇಳಿಕೆಗಳನ್ನು  ನೀಡಿದರು. ಎಲ್ಲರೂ ವಾಧ್ರಾನನ್ನು ಸಮರ್ಥಿಸಿಕೊಂಡರು. ಇತ್ತ ಕರ್ನಾಟಕದಲ್ಲಿ ಕಾವೇರಿ ನೀರಿನ ವಿವಾದ ತೀವ್ರವಾಗುತ್ತಿದ್ದ ಹೊತ್ತಿನಲ್ಲೇ ಅವೆಲ್ಲವನ್ನೂ ಮರೆತು ರಾಜ್ಯಪಾಲರು ವಾಧ್ರಾನ ಪರವಾಗಿ ಮಾತಾಡುತ್ತಾರೆ.
ಇವೆಲ್ಲವೂ ತುರ್ತುಪರಿಸ್ಥಿತಿಯ ಲಕ್ಷಣಗಳಲ್ಲವೇನು? ದೇಶವೇನು ನೆಹರೂ ಕುಟುಂಬದ ಜಹಗೀರೇ? ಒಮ್ಮೆ ನೆನಪು ಮಾಡಿಕೊಳ್ಳಿ, ಟಾಟಾದವರು ಬಿಲಿಯಾಪತಿಗಳಾಗಲು ಬರೋಬ್ಬರಿ ೧೦೦ ವರ್ಷಗಳನ್ನು ತೆಗೆದುಕೊಂಡರು. ಅಂಬಾನಿಯವರ ಶ್ರೀಮಂತಿಕೆ ದೇಶಕ್ಕೆ ಗೊತ್ತಾಗಲು ಅರ್ಧ ಶತಮಾನವೇ ಬೇಕಾಯಿತು. ಆದರೆ ವಾಧ್ರಾ ಮೂರೇ ಮೂರು ವರ್ಷದಲ್ಲಿ ಲಕ್ಷಗಳನ್ನು ನೂರಾರು ಕೋಟಿಗಳನ್ನಾಗಿ ಮಾಡಿಬಿಡುತ್ತಾನೆ. ಅದು ಅಳಿಯನ ಮಹಿಮೆ! ಇಂಥ ಅಳಿಯಂದಿರನ್ನು ಕಣ್ಣ ಮುಂದಿಟ್ಟುಕೊಂಡು ಪ್ರಧಾನ ಮಂತ್ರಿಗಳು " ಹಣ ಮರದಲ್ಲಿ ಬೆಳೆಯುವುದಿಲ್ಲ", "ಮೂವತ್ತೈದು ರೂಪಾಯಿ ಇರುವವರಾರೂ ಬಡವರಲ್ಲ" ಎಂದು ಆಲಾಪಿಸುತ್ತಾರೆ. ಪರಿಸರ ಸಚಿವರು " ದೇಶದಲ್ಲಿ ಶೌಚಾಲಯಗಳಿಗಿಂತ ಹೆಚ್ಚಿಗೆ ದೇವಸ್ಥಾನಗಳಿವೆ" ಎನ್ನುತ್ತಾರೆ. ಚಿದಂಬರಂ " ವಾಧ್ರಾರ ಬಗ್ಗೆ ತನಿಖೆ ಇಲ್ಲ" ಎಂದು ಹೇಳುತ್ತಾರೆ. ಇವೆಲ್ಲವೂ ದೇಶದಲ್ಲಿ ತುರ್ತುಪರಿಸ್ಥಿತಿಯಲ್ಲದೆ  ಹಾಲಿನ ಹೊಳೆ ಹರಿಯುವ ಲಕ್ಷಣವೇ? ಎಲ್ಲಾ ಪ್ರಶ್ನೆಗಳ ಹಿಂದೋಡಿದರೆ ಕೊನೆ ಮುಟ್ಟುವುದು ಸೋನಿಯಾರ ಬಳಿಗೆಯೇ. ಇವರನ್ನು ಇಂದಿಗೂ ಕಾಂಗ್ರೆಸಿಗರು ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಾಗಮಾಡಿದ ಮಹಾತಾಯಿ ಎಂದೇ ಗೌರವಿಸುತ್ತಾರೆ.   ಮನಮೋಹನ ಸಿಂಗರಂಥಾ ಪ್ರಧಾನ ಮಂತ್ರಿ ಇರುವುದಾದರೆ ಸೋನಿಯಾಳ ತ್ಯಾಗವೂ ಲಾಭದಾಯಕವೇ ಆಯಿತಲ್ಲಾ.
ಹಾಗಾಗಿ ಈ ತುರ್ತುಸ್ಥಿಯ ಹಿಂದಿಗಿಂತಲೂ ಭಿನ್ನ. ಭೀಕರ.

ಇಂಗ್ಲೆಂಡ್ ಪಾಲಾಯಿತು ಕೋಹಿನೂರ್ ಮಣಿ: ಕೋಟಿ ವ್ಯಯಿಸಿದ ಕಾಂಗ್ರೆಸ್ ರಾಣಿ

ಅಬ್ದುಲ್ಲಾ ಬಿನ್ ಅಬ್ದುಲ್ ಅಜೀಜ್
ಸೌಧಿ ಅರೇಬಿಯಾದ ರಾಜ. ಸಂಪತ್ತು ೨೧ ಬಿಲಿಯನ್ ಅಮೆರಿಕನ್ ಡಾಲರ್. ತನ್ನ ದೇಶದ ಶೇ. ೨೦ರಷ್ಟು ತೈಲ ಬಾವಿಗಳ ಒಡೆತನ ಈತನದ್ದು. ಈತ ವಿಶ್ವದ ಅತ್ಯಂತ ಶ್ರೀಮಂತ ರಾಜಕಾರಣಿ.
ಹಸನಲ್ ಬೋಲ್ಖಾಯ್
ಬ್ರುನಿಯ ಸುಲ್ತಾನ. ಬ್ರುನಿಯ ಬಹುಪಾಲು ತೈಲಬಾವಿ ಹಾಗೂ ಅನಿಲ ಸ್ಥಾವರಗಳು ಈತನ ಒಡೆತನದಲ್ಲಿವೆ. ಈತನ ಸಂಪತ್ತು ೨೦ ಬಿಲಿಯನ್ ಅಮೆರಿಕನ್ ಡಾಲರ್. ಈತನ ಅರಮನೆ ವಿಶ್ವದ ಅತ್ಯಂತ ದೊಡ್ಡ ಅರಮನೆಗಳಲ್ಲಿ ಒಂದು. ಅದರ ವಿಸ್ತೀರ್ಣವೇ ೨,೧೫೨,೭೮೨ ಚದರ ಅಡಿಗಳು. ದುಬಾರಿ ಕಾರು ಸಂಗ್ರಹಿಸುವ ಖಯಾಲಿಯಿರುವ ಈ ಸುಲ್ತಾನನ ಬಳಿ ವಿಶ್ವದ ವಿವಿಧ ಬ್ರ್ಯಾಂಡ್‌ಗಳ ೭೦೦೦ಕ್ಕೂ ಅಧಿಕ ಕಾರುಗಳ ಸಂಗ್ರಹವಿದೆ. ಈತ ವಿಶ್ವದ ಎರಡನೆಯ ಶ್ರೀಮಂತ  ರಾಜಕಾರಣಿ.
ಮೈಖಲ್ ಬೂಮ್‌ಬರ್ಗ್
ಈತ ನ್ಯೂಯಾರ್ಕಿನ ಮೇಯರ್. ಸಂಪತ್ತು ೧೮.೧ಬಿಲಿಯನ್ ಅಮೆರಿಕನ್ ಡಾಲರ್. ಈತ ಬೂಮ್‌ಬರ್ಗ್ ಎಲ್.ಪಿ ಎಂಬ ಸಂಸ್ಥೆಯ ಮಾಲಿಕ ಮತ್ತು ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾನೆ. ಈತ ವಿಶ್ವದ ಮೂರನೆಯ ಶ್ರೀಮಂತ ರಾಜಕಾರಣಿ.
ನಾಲ್ಕನೆಯವರು ನಮ್ಮ ಭಾರತದವರು. ಆದರೆ ಭಾರತೀಯರು ಹೆಮ್ಮೆ ಪಡುವಂಥವರಲ್ಲ.
ಸೋನಿಯಾ ಗಾಂಧಿ. ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷೆ. ಸ್ವಾಭಿಮಾನಹೀನ ಜನರ ಪಾಲಿನ ಪರಮೋಚ್ಛ ನಾಯಕಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ವಿಧವೆ ಪತ್ನಿ. ಇವರ ಶ್ರೀಮಂತಿಕೆಯನ್ನು "ಫೋರ್ಬ್ಸ್"ಪತ್ರಿಕೆ  ಪ್ರಕಟಿಸಿಲ್ಲ. ಚುನಾವಣೆಯ ಸಮಯದಲ್ಲಿ ಆಕೆಯೇ ಘೋಷಿಸಿಕೊಂಡ ಸಂಪತ್ತಿನ ಪ್ರಕಾರ ಅವರ ಬಳಿ ಇರುವುದು ಎರಡೇ ಎರಡು ಕೋಟಿ ರೂಗಳು. ಅದರಲ್ಲಿ ಕಾರಿಲ್ಲ. ಮನೆಗೆಲಸಕ್ಕೂ ಆಳಿಲ್ಲ. ಆಕೆಗೆ ಆಕೆಯೇ ಸೇವಕಿ. ಹಾಗಾಗಿ ಜನಸೇವೆಯೇ ಜನಾರ್ದನ ಸೇವೆ ಎಂಬಿತ್ಯಾಧಿ ಪ್ರಚಾರವನ್ನು ಅವರು ಭರಪೂರ ನಡೆಸಿದ್ದರು. ಆದರೆ ಪ್ರತಿಷ್ಠಿತ "ಬ್ಲಿಟ್ಜ್" ಪತ್ರಿಕೆ ಮಾತ್ರ ಆಕೆಯನ್ನು ವಿಶ್ವದ ೪ನೇ ಶ್ರೀಮಂತ ರಾಜಕಾರಣಿ ಎಂದು ಹೇಳುತ್ತದೆ. ಸೌಧಿ ಅರೇಬಿಯಾ, ಬ್ರುನಿಯ ದೊರೆಗಳು ಮತ್ತು ನ್ಯೂಯಾರ್ಕಿನ ಮೇಯರ್ ಅನಂತರ ಅತ್ಯಂತ ಶ್ರೀಮಂತ ರಾಜಕಾರಣಿಯ ಪಟ್ಟ ಭಾರತಕ್ಕೆ ಒದಗಿ ಬಂದಿದೆ. ಈ ಪಟ್ಟ ಯುಎಇ ಯ ಸುಲ್ತಾನನಿಗೂ ಸಿಕ್ಕಿಲ್ಲ ! ಬ್ಲಿಟ್ಜ್ ಪತ್ರಿಕೆ ಹೀಗೆ ಬರೆಯುತ್ತದೆ "ಸೋನಿಯಾ ಗಾಂಧಿ ರಿಯಲ್ ಎಸ್ಟೇಟ್‌ಗಳಲ್ಲಿ, ಟೆಲಿಕಮ್ಯುನಿಕೇಶನ್ ರಂಗಗಳಲ್ಲಿ  ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅವರ ವ್ಯವಹಾರವಿದೆ. ಹಲವು ವಿದೇಶಿ ಬ್ಯಾಂಕುಗಳಲ್ಲಿ ಅವರು ಹಣ ಹೂಡಿಕೆ ಮಾಡಿದ್ದಾರೆ. ಅವರ ಸಂಪತ್ತು ಏನಿದ್ದರೂ ೧೯ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ  ಕಡಿಮೆಯಿಲ್ಲ"
ಸಾರ್ಥಕವಾಯಿತು ಭಾರತ! ಧನ್ಯಳಾದಳು ಭಾರತ ಮಾತೆ. 
ಮಣ್ಣು ಹೊತ್ತೋ, ನಿದ್ರೆಗೆಟ್ಟೋ ಅಥವಾ ದೇಶಕಟ್ಟಲೆಂದೋ ದುಡಿದು ಮಾಡಿದ ಹಣ ಇದಲ್ಲ. ದೇಶವನ್ನೇ ನುಂಗಿ ನೀರುಕುಡಿಯಲು ನಿಂತವರ ಸಂಪತ್ತು. ಈ ಸಂಪತ್ತು ಇಡೀ ದೇಶದ ನಿದ್ರೆ ಕೆಡಿಸುತ್ತಿದೆ. ಮಾತ್ರವಲ್ಲ ದೇಶ ಅರೆಹೊಟ್ಟೆಯಲ್ಲಿ ಮಲಗುವಂತೆ ಮಾಡುತ್ತಿದೆ.  ಈ ಸಂಪತ್ತು ದೇಶದ ಸಂಪತ್ತನ್ನು ಕಿತ್ತುಕೊಂಡಿದ್ದು ಮಾತ್ರವಲ್ಲ ದೇಶವನ್ನೇ ನರಳಿಸುತ್ತಿದೆ.  ಹಳೆಯ ಇಸವಿಗಳಿಂದಲೂ ನಮ್ಮನ್ನು ವಿದೇಶಿಯರು ದೋಚುತ್ತಾ ಬಂದರು. ಪರ್ಷಿಯಾದಿಂದ ಜನರು ಬಂದರು , ದೋಚಿ ಹೋದರು. ಇರಾನಿನಿಂದ ಬಂದರು, ದೋಚಿದರು. ಅಫಘಾನದಿಂದ ಬಂದರು, ದೋಚಿದರು. ಇಂಗ್ಲೆಂಡ್, ಪೋರ್ಚುಗೀಸ್, ಡೆನ್ಮಾರ್ಕಿನಿಂದ ಬಂದವರೂ ದೋಚಿದರು.  ಅವರೆಲ್ಲರೂ ದೋಚಲೆಂದೇ ಭಾರತಕ್ಕೆ ಬಂದವರು. ಆದರೆ ಇಟಲಿಯೊಂದು ಮಾತ್ರ ಬಂದಿರಲಿಲ್ಲ. ಯೂರೋಪಿನ ಅದೊಂದು ಕೊರಗನ್ನು ಇಂದು ಅಂಟೋನಿಯೋ ಮೈನೋ ಎಂಬ ಸೋನಿಯಾ ಗಾಂಧಿ ತುಂಬಿದ್ದಾರೆ.
ಬ್ಲಿಟ್ಜ್ ಪತ್ರಿಕೆ ಸುಖಾಸುಮ್ಮನೆ ಸೋನಿಯಾ ಶ್ರೀಮಂತಿಕೆಯನ್ನು ಬರೆಯಲಿಲ್ಲ. ಅದು ಸ್ವಿಜರ್ ಲ್ಯಾಂಡಿನ "ಸ್ವಿಜರ್ ಇಲ್ಲಸ್ಟ್ರೇಟ್" ಎಂಬ ಜನಪ್ರೀಯ ಒಂದು ವರದಿಯನ್ನು ಉಲ್ಲೇಖಿಸಿತ್ತು. ೧೯೯೧ರ ನವೆಂಬರ್ ೧೯ರಂದು ಈ ಪತ್ರಿಕೆ ಸ್ವಿಸ್ ಬ್ಯಾಂಕಿನಲ್ಲಿ ಹೂಡಿದ ಮೂರನೇ ಜಗತ್ತಿನ (third world) ವ್ಯಕ್ತಿಗಳ ಪಟ್ಟಿಯನ್ನು ಬಹಿರಂಗಪಡಿಸಿತ್ತು. ಆ ಪಟ್ಟಿಯಲ್ಲಿ ರಾಜೀವ್ ಗಾಂಧಿಯವರ ಹೆಸರೂ ಇತ್ತು.  ರಷ್ಯದ ಗುಪ್ತಚರ ಸಂಸ್ಥೆ ಕೆ.ಜಿ.ಬಿ ವರದಿಯಾಧಾರದಲ್ಲಿ ತನಿಖಾವರದಿ ಮಾಡಿದ ಆ ಪತ್ರಿಕೆ "ರಾಜೀವ್ ಗಾಂಧಿಯ ವಿಧವೆ ಪತ್ನಿ ಸೋನಿಯಾ ಮೊದಲಿನಿಂದಲೂ ಗುಪ್ತ ಖಾತೆಯಲ್ಲಿರುವ ೨.೫ ಬಿಲಿಯನ್ ಫ್ರಾನ್ಸ್ (೨.೨ ಬಿಲಿಯನ್ ಅಮೆರಿಕನ್ ಡಾಲರ್)  ಅನ್ನು ನಿಯಂತ್ರಿಸುತ್ತಿದ್ದಾರೆ. ಈ ೨.೨ ಬಿಲಿಯನ್ ಹಣ ತಮ್ಮ ಅಪ್ರಾಪ್ತ ಮಗನ ಹೆಸರಲ್ಲಿದ್ದು , ೧೮೮೮ರಲ್ಲಿ ಪ್ರಾಪ್ತ ವಯಸ್ಕನಾದ ನಂತರ ಆತನ ಸುಪರ್ದಿಗೆ ಹೋಗಲಿದೆ"  ಎಂದು ಹೇಳಿತು.
ಇದನ್ನು ಉಲ್ಲೇಖಿಸುತ್ತಾ ಬ್ಲಿಟ್ಜ್ " ಸ್ವಿಸ್ ಬ್ಯಾಂಕ್ ಎಂದಿಗೂ ಹಣವನ್ನು ಸುಮ್ಮನೆ ಇಟ್ಟುಕೊಳ್ಳುವುದಿಲ್ಲ. ಅದು ವಿವಿಧ ಕ್ಷೇತ್ರಗಳಲ್ಲಿ ಹಣವನ್ನು ತೊಡಗಿಸುತ್ತಿರುತ್ತದೆ. ಒಂದು ವೇಳೆ ಸೋನಿಯಾ ಗಾಂಧಿಯವರ ೨.೨ ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು  ಅಂದರೆ ೧೦,೦೦೦ ಕೋಟಿ ರೂಗಳನ್ನು ಸ್ವಿಸ್ ಬ್ಯಾಂಕ್ ದೀರ್ಘಾವಧಿ ಯೋಜನೆಗಳಲ್ಲಿ ತೊಡಗಿಸಿದ್ದಿದ್ದರೆ ೨೦೦೯ರ ವೇಲೆಗೆ ಈ ಹಣ ೯.೪೪ ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ೪೨,೩೪೫ ಕೋಟಿ ರೂ ಗಳಾಗಿಬಿಡುತ್ತಿದ್ದವು. ಒಂದು ವೇಳೆ ಸ್ವಿಸ್ ಬ್ಯಾಂಕ್ ಆ ೨.೨ ಬಿಲಿಯನ್ ಡಾಲರನ್ನು ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಹೂಡಿದ್ದರೆ ೨೦೦೯ರ ವೇಳೆಗೆ ಆ ಹಣ ೧೨.೯೭ ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ೫೮,೩೬೫ ಕೋಟಿ ರೂಗಳಾಗುತ್ತಿತ್ತು. ಒಂದು ವೇಳೆ ಸ್ವಿಸ್ ಬ್ಯಾಂಕ್ ೫೦:೫೦ ಲೆಕ್ಕಾಚಾರದಲ್ಲಿ ದೀರ್ಘಾವಧಿಯ ಬಾಂಡ್ ಮತ್ತು ದೀರ್ಘಾವಧಿಯ ಷೇರುಗಳಲ್ಲಿ ಈ ಹಣವನ್ನು ವಿನಿಯೋಗಿಸಿದ್ದರೂ ೨೦೦೮ರ ವೇಳೆಗೆ ಆ ಹಣ ೧೧.೧೯ ಬಿಲಿಯನ್ ಡಾಲರಾದರೂ ಆಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಏನೇ ಆದರೂ ಇಂದಿಗೆ ಆ ಹಣ ಏನಿಲ್ಲವೆಂದರೂ ೮೪,೦೦೦ ಕೋಟಿ ರೂಗಳಂತೂ ಆಗಿಯೇ ಆಗುತ್ತಿತ್ತು"  ಎನ್ನುತ್ತದೆ.
ಈ ಹಣದಿಂದ ಭಾರತದಲ್ಲಿ ಏನೆಲ್ಲಾ ಆಗಿಬಿಡುತ್ತಿತ್ತು ಎನ್ನುವುದೂ ಒಂದು ಅಧ್ಯಯನದ ವಸ್ತುವೇ.  ಅಂದಿನ ೧೦,೦೦೦ ಕೋಟಿಗಳಿಂದಲೇ ಹಲವು ಮೂಲಭೂತ ಆವಶ್ಯಕತೆಗಳು ಪೂರೈಕೆಯಾಗುತ್ತಿತ್ತು. ಇಂದಿನ ಹಲವು ಸಮಸ್ಯೆಗಳು ಅಂದೇ ಕ್ಲಿಯರ್ ಆಗಿಬಿಡುತ್ತಿತ್ತು.  ಎಲ್ಲವೂ ಇತ್ತು. ಹಣವೂ ಇತ್ತು. ಅಧಿಕಾರವೂ ಇತ್ತು. ಆದರೆ ನಾಯಕರು ಮಾತ್ರ ಇರಲಿಲ್ಲ.  ಇದ್ದ ನಾಯಕರು ತಿಜೋರಿಯನ್ನೇ ವಿದೇಶಕ್ಕೆ ಕೊಂಡೊಯ್ಯಲಾರಂಭಿಸಿದರೆ ದೇಶ ಕೊಂಪೆಯಾಗದೆ ಇನ್ನೇನಾದೀತು?  ಇದುವರೆಗೆ ಹಲವರು ನೆಹರೂ ವಂಶ ಇತಿಹಾಸದುದ್ದಕ್ಕೂ  ಲವ್ ಮಾಡಿದರೂ ದೇಶಕ್ಕೇನೂ ಕಮ್ಮಿ ಮಾಡಲಿಲ್ಲ ಎಂದೇ ತಿಳಿದುಕೊಂಡಿದ್ದಾರೆ.  ಹಾಗಾದರೆ ಈ ಕೋಟಿ ಹಣಗಳೇನು? ದೋಚಿದ್ದೇ ಅಲ್ಲವೇ? ಪಾಪ ದೇಶ ಪ್ರೇಮಿಗಳಿನ್ನೂ ಕೋಹಿನೂರ್ ವಜ್ರ ಹೋಯಿತು, ಮಯೂರ ಸಿಂಹಾಸನವನ್ನು ಆಂಗ್ಲರು ಕದ್ದರು ಎಂದು ಮರುಕ ಪಡುತ್ತಲೇ ಇದ್ದಾರೆ. ಆದರೆ ಸೋನಿಯಾ ದೋಚಿದ ಸಾವಿರಾರುಗಟ್ಟಲೆ ಕೋಟಿಗಳನ್ನು ಲೆಕ್ಕ ಹಾಕಿದರೆ ಇಟಲಿಯ ಮುಂದೆ ಬ್ರಿಟಿಷರು ದೋಚಿದ್ದು ಏನೇನೂ ಇಲ್ಲವೆಂದೇ ಭಾಸವಾಗುತ್ತದೆ.
ಹರ್ಯಾಣದ ಹಿಸ್ಸಾರ್ ಮೂಲದ ಅರ್ ಟಿ ಐ ಹೋರಾಟಗಾರ ರಮೇಶ್ ಶರ್ಮಾ ಮಾಹಿತಿಯೊಂದನ್ನು ಪಡೆದರು. ಅದರ ಪ್ರಕಾರ ಸೋನಿಯಾ ಗಾಂಧಿ ಕಳೆದ ಮೂರು ವರ್ಷದಲ್ಲಿ ಮಾಡಿದ ವಿದೇಶ ಪ್ರವಾಸದ ವೆಚ್ಚ ಕೇವಲ ೧೮೮೦ ಕೋಟಿ ರೂ! ಈ ಮೊತ್ತವನ್ನು ಯಾರೂ ಅಂಕೆಗಳಲ್ಲಿ ಬರೆದು ಸೊನ್ನೆಗಳನ್ನು ಸೇರಿಸುವ ಸಾಹಸವನ್ನು ಮಾಡಲಾರರು. ಹೀಗೆ ಸುಲಭದಲ್ಲಿ ಓದಲಾಗದಷ್ಟು ಸೊನ್ನೆಗಳಿರುವ ಮೊತ್ತವನ್ನು ವೆಚ್ಚ ಮಾಡಿದವರು  ಸರಕಾರವನ್ನೇ ನಿಯಂತ್ರಿಸುತ್ತಿರುವ ಇಟಲಿ ಮಹಿಳೆ. ಅದೂ ಭಾರತದ ಹಣವನ್ನು .ಬಹುಶಃ ಇಷ್ಟು ದುಭಾರಿ ಪ್ರವಾಸವನ್ನು ಭಾರತದ ಯಾವ ವಿದೇಶಾಂಗ ಸಚಿವರೂ ಮಾಡಿರಲಿಕ್ಕಿಲ್ಲ. ವ್ಯಾಟಿಕನ್ನಿನ ಪೋಪರೂ ಮಾಡಿರಲಿಕ್ಕಿಲ್ಲ. ಸೋನಿಯಾ ಮಾಡಿದ ಯಾತ್ರೆಗಳೆಲ್ಲವೂ ಸರಕಾರಿ ಯಾತ್ರೆಗಳಲ್ಲ. ಸರಕಾರಿ ಯಾತ್ರೆಯನ್ನು ಕೈಗೊಳ್ಳುವ ಸ್ಥಾನಮಾನವೂ ಸೋನಿಯಾರದಲ್ಲ.  ಒಂದು ವೇಳೆ ಸರಕಾರವೇ ಸರಕಾರವೇ ಕಾಲಿಗೆ ಅಡ್ಡ ಬಿದ್ದು " ಪ್ರವಾಸ ಗೈಯಬೇಕು ಮಹಾದೇವಿಯವರು" ಎಂದು ಬೇಡಿಕೊಂಡಿದ್ದರೂ ಅದರಿಂದ ದೇಶಕ್ಕಾದ ಲಾಭವಾದರೂ ಏನು?  ಸೋನಿಯಾ ಗಾಂಧಿ ಒಬ್ಬ ಸಂಸದೆ.  ಒಬ್ಬ ಸಂಸದೆ ಅಷ್ಟೊಂದು ವಿದೇಶಿ ಯಾತ್ರೆ ಮಾಡುವ ಆವಶ್ಯಕತೆಯನ್ನಂತೂ ಸಂಸತ್ತು ನೀಡಿಲ್ಲ. ಸೋನಿಯಾ ೮ ಬಾರಿ ತಮ್ಮ ರೋಗಿಷ್ಠ ತಾಯಿಯ ಆರೋಗ್ಯ ತಪಾಸಣೆಗೆಂದು ನ್ಯೂಯಾರ್ಕ್ ಪ್ರವಾಸ ಮಾಡಿದ್ದರು. ಆ ೮ ಬಾರಿಯೂ ಅವರು ನ್ಯೂಯಾರ್ಕ್‌ನ ದುಬಾರಿ ಹಿಲ್ಟನ್ ಹೊಟೇಲಿನಲ್ಲಿ ೪ ಸ್ಯೂಟ್‌ಗಳಲ್ಲಿ ತಮ್ಮ ವಂದಿಮಾಗಧರೊಂದಿಗೆ ಉಳಿದುಕೊಂಡಿದ್ದರು. ಇಟಲಿಯಿಂದ ತಂದ ಹಣದಲ್ಲಿ ಅವರು ಎಲ್ಲೇ ಉಳಿದುಕೊಂಡಿರಲಿ ಆದರೆ ಪ್ರತೀ ಬಾರಿಯೂ ಹಿಲ್ಟನ್ ಹೊಟೇಲನ್ನು ಅಮೆರಿಕಾದ ಭಾರತೀಯ ರಾಯಭಾರ ಕಛೇರಿ ಕಾಯ್ದಿರಿಸುತ್ತಿತ್ತು. ಪಕ್ಷವೊಂದರ ಅಧ್ಯಕ್ಷರಿಗೆ ಇಂಥ ಶಿಷ್ಟಾಚಾರದ ಅವಶ್ಯಕತೆ ಮತ್ತು ಅವಕಾಶವೂ ಇಲ್ಲ. ಅದು ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೆ ಮಾತ್ರ ಒದಗುವ ಸವಲತ್ತುಗಳು. ಆದರೆ ಸೋನಿಯಾ ಅವರಿಬ್ಬರಿಗೆ ಸಿಗುವ ಸವಲತ್ತುಗಳನ್ನೆಲ್ಲಾ ಪಡೆದುಕೊಂಡರು. ಹಾಗಾಗಿ ಮೂರು ವರ್ಷದಲ್ಲಿ ಸೋನಿಯಾ ಪ್ರವಾಸ ವೆಚ್ಚ ೧೮೮೦ ಕೋಟಿ ರೂ. !
ಪ್ರಧಾನಮಂತ್ರಿಗಳು ಹಣ ಮರದಲ್ಲಿ ಬೆಳೆಯುವುದಿಲ್ಲ ಎಂದು ಹೇಳುತ್ತಾರೆ.  ಸೊನ್ನೆ ಹಾಕಿದರೆ ಓದಲಾಗದ ಈ ೧೮೮೦ ಕೋಟಿಗಳನ್ನು ನೋಡಿದರೆ ಹಣದ ಮರವೇನಾದರೂ ಇದ್ದರೂ ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೂ ದೇಶದ ಬೊಕ್ಕಸದಲ್ಲಿ ಹಣವಿಲ್ಲ. ಅಡಿಗೆ ಅನಿಲಕ್ಕೆ ಸಬ್ಸಿಡಿಯಿಲ್ಲ. ಪೆಟ್ರೋಲ್-ಡೀಸೆಲ್ ದರ ಕಡಿಮೆಯಾಗಿಲ್ಲ. ದಿನನಿತ್ಯದ ವಸ್ತುಗಳೆಲ್ಲವೂ ದುಬಾರಿ ವಸ್ತುಗಳು. ಸೋನಿಯಾ ಪ್ರವಾಸವೇ ಇಷ್ಟು ಕೋಟಿಗಳಾದರೆ ಇನ್ನೇನು ತಾನೇ ಆಗಲು ಸಾಧ್ಯ? ಈ ಹಣದಿಂದ ಪುಟ್ಟ ದೇಶವನ್ನೇ ಖರೀದಿಸಬಹುದಿತ್ತಲ್ಲವೇ?
ಲೆಕ್ಕಾ ಹಾಕುತ್ತಾ ಹೋದಂತೆ ಮುಗಿದುಹೋದ ಗಾಂಧಿ-ಶಾಸ್ತ್ರಿ ಜಯಂತಿಗಳು, ಇನ್ನು ಮುಗಿಯಬೇಕಾಗಿರುವ ಗಣರಾಜ್ಯ ಉತ್ಸವಗಳೆಲ್ಲವೂ ನೆನಪಾಗುತ್ತವೆ. ಒಂದೆಡೆ ಸರಳತೆಯನ್ನು ಬೋಧಿಸಿದ ಗಾಂಧಿ, ಇನ್ನೊಂದೆಡೆ ಸರಳತೆಯೇ ದುಬಾರಿಯಾಗದೆ ಬದುಕಿದ ಶಾಸ್ತ್ರಿ. ಗಣರಾಜ್ಯ ಉತ್ಸವದಂದು ಪ್ರದರ್ಶಿಸಲ್ಪಡುವ ಶಸ್ತ್ರಾಸ್ತ್ರಗಳು, ಸ್ತಬ್ದ ಚಿತ್ರಗಳು-ಇವೆಲ್ಲವೂ ಸುಳ್ಳು ಎಂದು ಭಾಸವಾಗುತ್ತದೆ. ಏಕೆಂದರೆ ಅವೆಲ್ಲವೂ ಪ್ರದರ್ಶಿಸಲ್ಪಡುವ ವೈಭವಗಳು. ಟೂರು ಮಾಡಿದ ೧೮೮೦ ಕೋಟಿ ಅಲ್ಲಿ ಕಾಣುವುದಿಲ್ಲ. ಇದೊಂದು ವ್ಯವಸ್ಥಿತ ದರೋಡೆ ಎಂದೂ ಆಗ ಅನಿಸುವುದಿಲ್ಲ.
 ಈ ಕೋಟಿಗಳನ್ನು ಕೆಲವು ನಿಶ್ಚಿತ ರಂಗಗಳಲ್ಲಿ ತೊಡಗಿಸಿದ್ದಿದ್ದರೆ ವರ್ಷದೊಳಗೆ ಭಾರತ ಸೂಪರ್ ಪವರ್ ಆಗಿಬಿಡುತ್ತಿತ್ತು. ಒಂದೊಂದು ಜಿಲ್ಲೆ , ಒಂದೊಂದು ಊರಿಗೂ ಕೋಟಿಗಟ್ಟಲೆ ಹಣ ಸಿಗುತ್ತಿತ್ತು. ಎರಡು ದಶಕಗಳವರೆಗೆ ಸಾಮಾನ್ಯ ಜನರೂ ತೆರಿಗೆ ಪಾವತಿ ಮಾಡಲೇ ಬೇಕಿರಲಿಲ್ಲ. ಪೆಟ್ರೋಲ್-ಡೀಸೆಲ್‌ಗಳ ಬೆಲೆಯೇ ಏರುತ್ತಿರಲಿಲ್ಲ. ಒಬ್ಬರ ಪ್ರವಾಸದ ವೆಚ್ಚವೇ ಇಷ್ಟಿರಬೇಕಾದರೆ ಸಂಪತ್ತು ಇನ್ನೆಷ್ಟಿರಬಹುದು?
ಕೆಲವು ವರ್ಷಗಳ ಹಿಂದೆ ಮಂಗಳೂರು ಉಲ್ಲಾಳದ ಮಾಜಿ ಶಾಸಕ, ಕಾಂಗ್ರೆಸ್‌ನ ಸಜ್ಜನ ನಾಯಕ ಇದಿನಬ್ಬನವರು ಮಾತನಾಡುತ್ತಾ ಕುಳಿತಿದ್ದರು. ಕಾಂಗ್ರೆಸ್‌ನ ತ್ಯಾಗಗುಣ, ಬಲಿದಾನಗಳನ್ನು ಹೇಳಿದ್ದರು. " ನೆಹರೂ ಕುಟುಂಬ ಎಂದರೆ ಏನು? ತಮ್ಮ ವಾಸದ ಮನೆ ಆನಂದ ಭವನವನ್ನೇ ದೇಶಕ್ಕೆ ದಾನ ಮಾಡಿದ ಮಹಾನ್ ಕುಟುಂಬ ಅದು " ಎನ್ನುತ್ತಾ ಭಾವುಕರಾದರು.  ಎಂಥೆಂಥವರನ್ನು ಕಾಂಗ್ರೆಸ್ ಮರಳು ಮಾಡಿದೆ, ನಂಬಿಸಿದೆ ಎನಿಸಿತ್ತು. ಇಂದು ಇದಿನಬ್ಬನವರಿಲ್ಲ. ೧೮೮೦ ಕೋಟಿಯ ಸಂಗತಿಯನ್ನು  ಕೇಳಿದ್ದರೆ ಅವರೂ ಗಾಂಧಿವಾದದ ಸಮಾಧಿ ಮಾಡಿದರು ಎನ್ನುತ್ತಿದ್ದರು.
ದಶಕದ ಹಿಂದೆ ಮೋದಿ ಮುಖ್ಯಮಂತ್ರಿಗಳಾಗಿದ್ದಾಗ ಬಂದ ಉಡುಗೋರೆಗಳನ್ನು ಹರಾಜಿಗಿಟ್ಟರು. ಉಡುಗೋರೆಗಳು ಗುಜರಾತಿಗೆ ಸಲ್ಲಬೇಕು ಎಂದರು. ಆದರೆ ಸೋನಿಯಾ ಸೊನ್ನೆಗಳ ಪರಿವೆಯೇ ಇಲ್ಲದಂತೆ ಕೋಟಿಗಳನ್ನು ಖರ್ಚುಮಾಡುತ್ತಾರೆ. ಈ ಕೋಟಿಗಳನ್ನು ಉಲ್ಲೇಖಿಸುತ್ತಾ ಮೋದಿಯವರು " ಈ ಮೊತ್ತ ಗುಜರಾತಿನ ಭಾವನಗರ, ಜಾಮ್‌ಜನರ, ಜುನಾಗಢ ಮತ್ತು ರಾಜ್‌ಕೋಟ್‌ಗಳ ಒಟ್ಟು ಬಜೆಟ್‌ನ ಮೊತ್ತ" ಎಂದರು.
ಇದುವರೆಗಿನ ದಾಳಿಕೋರರೆಲ್ಲಾ ಇಲ್ಲಿ ದೋಚುವುದರೊಂದಿಗೆ ದೇಶದೊಳಗೊಂದು ದೇಶಕಟ್ಟುವ ಹುನ್ನಾರ ನಡೆಸಿದರು. ಆದರೆ ಯಾವ ವಿದೇಶಿ ಶಕ್ತಿಗೂ ಶಾಶ್ವತ ತಳವೂರಲು ಸಾಧ್ಯವಾಗಲೇ ಇಲ್ಲ. ಅವರೆಲ್ಲರಿಗೂ ದೋಚಿದ್ದಷ್ಟೇ ಗಿಟ್ಟಿತ್ತು. ಆದರೆ ಇಂದು ದೇಶದೊಳಗೆ ದೇಶವಲ್ಲ, ದೇಶವೇ ವಿದೇಶವಾಗುವ ಹಾದಿಯಲ್ಲಿದೆ. ಇಂಗ್ಲಿಷರು, ಪ್ರಂಚರು, ಡಚ್ಚರಿಂದ ಸಾಧ್ಯವಾಗದ ಕಾರ್ಯ ಇಟಲಿಯಿಂದ ಸಾಧ್ಯವಾಗುತ್ತಿದೆಯೇನೋ ಅನಿಸುತ್ತದೆ.

Wednesday, August 22, 2012

ನುಸುಳುಕೋರರಲ್ಲ:ದಾಳಿಕೋರರು

ಕೆಲವರ್ಷಗಳ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಅಸ್ಸಾಂ ಚಲೋ ಚಳವಳಿಯನ್ನು ಸಂಘಟಿಸಿದ್ದರು. ಅಸ್ಸಾಂನಲ್ಲಿ ತೀವ್ರಗೊಂಡಿರುವ ಬಾಂಗ್ಲಾ  ವಲಸಿಗರ ನುಸುಳುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರಾದ್ಯಂತ ಕಾರ್ಯಕರ್ತರು ಚಿಕನ್ ನೆಕ್ ಪ್ರದೇಶದಲ್ಲಿ ರಾಲಿ ನಡೆಸಿದ್ದರು. ಕರ್ನಾಟಕದಿಂದಲೂ ಅಸ್ಸಾಂಗೆ ಕಾರ್ಯಕರ್ತರು ತೆರಳಿದ್ದರು.  ಅಸ್ಸಾಂ-ಬಾಂಗ್ಲಾ ಗಡಿಯ ಚಿತ್ರಗಳನ್ನು ಅವರು ಸೆರೆಹಿಡಿದು ತಂದಿದ್ದರು. 
 ಚಿತ್ರಗಳನ್ನು ನೋಡಿದಾಗ ವ್ಯವಸ್ಥೆಯ ಕ್ರೋಧವೂ, ಅಸಹಾಯಕತೆಯೂ, ಭಯವೂ, ಅಪಾಯದ ಮುನ್ಸೂಚನೆಗಳೆಲ್ಲವೂ ಏಕಕಾಲಕ್ಕೆ ಉಂಟಾಗುತ್ತಿದ್ದವು.  ಹಲವೆಡೆ ಬೃಹತ್ತಾದ  ಮುಳ್ಳಿನ ಬೇಲಿಗಳು. ಆದರೆ ಅಲ್ಲಲ್ಲಿ ಮನುಷ್ಯರು ಸಲೀಸಾಗಿ ಹೋಗಬಲ್ಲಷ್ಟು  ನಿರಾಯಾಸದ ದಾರಿಗಳು. ಇನ್ನು ಹಲವೆಡೆಗಳಲ್ಲಿ ಒಂದು ಕಾಲು ದಾರಿಯೇ ಅಂತಾರಾಷ್ಟ್ರೀಯ ಗಡಿ ರೇಖೆ. ಇನ್ನೊಂದೆಡೆ ಪುಟ್ಟ ನದಿ. ಸಲೀಸಾಗಿ ದೋಣಿಯಲ್ಲಿ ಸಾಗಿದರೆ ವಿದೇಶ ಮುಟ್ಟಬಹುದಿತ್ತು. ಇನ್ನು ಹಲವೆಡೆಯಂತೂ ಸರಿಯಾಗಿ ಗಡಿರೇಖೆಯ ಮಧ್ಯದಲ್ಲೇ ಮನೆಯೊಂದಿತ್ತು. ಅಡುಗೆ ಮನೆ ಭಾರತದಲ್ಲಿದ್ದರೆ, ಬಚ್ಚಲು ಮನೆ ಬಾಂಗ್ಲಾದಲ್ಲಿತ್ತು. ಆದರೂ ಇವರು ಬಾಂಗ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ದಿಡ್ಡಿ ಬಾಗಿಲಿನಂತೆ ದೊಡ್ಡದೊಂದು ಬಾಗಿಲು. ಅದಾಗಲೇ ಆ ಬಾಗಿಲಿನಲ್ಲಿ ಒಂದನ್ನು ಮುರಿದು ಸೈಕಲ್‌ಗಳಲ್ಲಿ ನುಸುಳುತ್ತಿರುವ ಬಾಂಗ್ಲ್ಲಾವಾಸಿಗಳು. ಇನ್ನೊಂದು ಚಿತ್ರದಲ್ಲಿ ನೆಪಮಾತ್ರಕ್ಕೆ ಒಂದು ಚೆಕ್‌ಪೋಸ್ಟ್. ಅಲ್ಲಿ ಸೋಮಾರಿಯಂತೆ ಕುಳಿತಿರುವ ಒಬ್ಬ ಗಡಿಭದ್ರತಾಪಡೆಯ ಸಿಬ್ಬಂದಿ. ಅವನ ಸುತ್ತಲೂ ಆಚೆಗೂ ಈಚೆಗೂ ಸರಂಜಾಮುಗಳನ್ನು ಹೊತ್ತು ಗಡಿ ದಾಟುತ್ತಿರುವ ಜನರು.
ಆ ಚಿತ್ರಗಳು ಸ್ವತಂತ್ರ, ಸಾರ್ವಭೌಮ ಭಾರತದ ಮತ್ತೊಂದು ಮುಖವನ್ನು ತೋರಿಸುತ್ತಿದ್ದವು.  ನಮ್ಮ ಪ್ರಜಾಪ್ರಭುತ್ವ ತನ್ನ ಗಡಿಗೆ ಕೊಟ್ಟಿರುವ ಮಹತ್ತ್ವವನ್ನು ಅವು ಮೂಕವಾಗಿ ಹೇಳುತ್ತಿದ್ದವು.
ಹಾಗಾಗಿ ಬಾಂಗ್ಲಾ ವಲಸಿಗರನ್ನು  ದಾಳಿಕೋರರು ಎಂದು ಕರೆಯುವುದೇ ಲೇಸು ಎನಿಸುತ್ತದೆ. ಅವರಾರೂ ಅಂತಾರಾಷ್ಟ್ರೀಯ ಗಡಿಯನ್ನು  ನುಸುಳಿ, ಹಾರಿ, ವ್ಯವಸ್ಥೆಗೆ ಮಣ್ಣೆರಚಿ ಬಂದವರಲ್ಲ. ಒಂದು ದಾಪುಗಾಲು ಹಾಕಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಪರ ರಾಷ್ಟ್ರದಲ್ಲಿ ಸ್ವರಾಷ್ಟ್ರಕ್ಕಿಂತಲೂ ವೈಭವದ, ನೆಮ್ಮದಿಯ ಬದುಕು ಬದುಕುತ್ತಿರುವವರು.
ಬಾಂಗ್ಲಾದಿಂದ ಬಂದ ಈ ಒರಟು ಜನರ ಮುಖ್ಯ ಕಸುಬು ಕಳ್ಳಸಾಗಾಣಿಕೆ. ಮುಖ್ಯವಾಗಿ ಗಾಂಜಾ ಕೃಷಿ ಮತ್ತು ಸರಬರಾಜು. ಬ್ರಹ್ಮಪುತ್ರಾ ಮುಖಜ ಭೂಮಿಯಲ್ಲಿ ಗಾಂಜಾ ಕ್ರಷಿ ನಡೆಸುವವರು ಬಾಂಗ್ಲಾದಿಂದ ಬಂದು ಭಾರತದ ಆಯಕಟ್ಟಿನ ಜಾಗದಲ್ಲಿ ನೆಲೆಸಿರುವವರು. ಹೀಗೆ ಬೆಳೆದ ಗಾಂಜಾವನ್ನು ಬಾಂಗ್ಲಾಕ್ಕೆ , ಅನಂತರ ಬರ್ಮಾಕ್ಕೆ, ಅಲ್ಲಿಂದ ಥಾಯ್ಲಾಂಡ್, ಸಿಂಗಾಪುರ ಮೊದಲಾದೆಡೆ ಸಾಗಿಸಲು ಮತ್ತು ಸಮಸ್ತ ಭಾರತಕ್ಕೆ ಸಾಗಿಸಲು ವ್ಯವಸ್ಥಿತ ತಂಡವೇ ಕಾರ್ಯಚರಿಸುತ್ತಿದೆ. ಹಾಗಾದರೆ ಭಾರತ ಇಂತಹ ಘಾತಕರಿಗಿರುವ ಧರ್ಮಛತ್ರವೇ?ಇದೇ ರೀತಿ ಭಾರತದಿಂದ ನಾಣ್ಯಗಳ ಸಂಗ್ರಹ ಮತ್ತು ಖರೀದಿ ಬಾಂಗ್ಲಾ ಮುಸ್ಲಿಮರ ಮತ್ತೊಂದು ದಂಧೆ. ಭಾರತದಲ್ಲಿ ಇಂದು ನಾಣ್ಯಗಳ ಅಭಾವ ತಲೆದೋರಿರುವುದಕ್ಕೆ ಈ ಮುಸ್ಲಿಮರು ಕಾರಣರೇ ಹೊರತು ಖಂಡಿತಾ ಆರ್.ಬಿ.ಐ ಅಲ್ಲ. ಈ ನಾಣ್ಯಗಳನ್ನು ಬಾಂಗ್ಲಾಕ್ಕೆ ಕಳುಹಿಸಿ, ಕರಗಿಸಿ ಶೇವಿಂಗ್ ಬ್ಲೇಡುಗಳನ್ನು ತಯಾರಿಸುವುದು ಒಂದು ಉದ್ಯಮ.  ಮಾರುಕಟ್ಟೆ ಭಾರತ. ಭಾರತ ಬಾಂಗ್ಲಾ ದೇಶಿಯರ ಪಾಲಿಗೆ ಪುಕ್ಕಟೆ ಮಾರುಕಟ್ಟೆಯಾಗಬೇಕೆ?  ಹೀಗೆಯೇ  ಬಾಂಗ್ಲಾ ಗಡಿಯಲ್ಲಿ  ಭಾರತದ ವಿವಿಧ ಜಾತಿಗಳ ಗೋತಳಿಗಳು ಮೇಯುತ್ತಾ ಮೇಯುತ್ತಾ ಬಾಂಗ್ಲಾದ ಕಸಾಯಿಖಾನೆಗೆ ಸೇರುತ್ತವೆ. ಬಾಂಗ್ಲಾ ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡುತ್ತದೆ. ಭಾರತವನ್ನು ಕದ್ದು ಬದುಕುವ ಬಾಂಗ್ಲಾ ಮುಸ್ಲಿಮರು ನುಸುಳುಕೋರರೇ? ದಾಳಿಕೋರರೇ?
ಸದ್ಯದ ವಿದ್ಯಮಾನಗಳು ಏಕಾ ಏಕಿ ನಡೆದುದಲ್ಲ ಎಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ. ಭಾರತದಲ್ಲೂ ಇವರ ‘ಸಹೋದರರು’ ಬಹಿರಂಗವಾದದ್ದು ಮಾತ್ರ ಹೊಸ ಬೆಳವಣಿಗೆ.

ದೇಶಕ್ಕೆ ವಲಸಿಗರ ಚಿಂತೆ: ಪ್ಲಾಂಟರುಗಳಿಗೆ ಆಳಿನ ಚಿಂತೆ

ದೇನು ತುಂಬಾ ಹಳೆಯ ಸಂಗತಿಯಲ್ಲ. ಅಸ್ಸಾಂನಲ್ಲಿ ನೆಲೆಸಿದ್ದ ಬಾಂಗ್ಲಾ ಮುಸಲ್ಮಾನನೊಬ್ಬ ಯಾವುದೋ ಕ್ರಿಮಿನಲ್  ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಆತ ಅಸ್ಸಾಂ ಬಿಟ್ಟಿದ್ದ . ಹೀಗೆ ಊರು ಬಿಟ್ಟಿದ್ದ ಅಸ್ಮತ್  ಅಲಿ ಎಂಬಾತನನ್ನು ಹುಡುಕಲು  ಅಸ್ಸಾಮಿ
ನಿಂದ ಗುಪ್ತಚರ ಇಲಾಖೆಯ ಸಿಬ್ಬಂದಿಗಳು ಜಾಡು ಹಿಡಿದು ನೇರವಾಗಿ ಕರ್ನಾಟಕದ ಕೊಡಗಿಗೆ ಬಂದರು.  ಕೊಡಗಿನ  ದೊಡ್ಡ ಪ್ಲಾಂಟರುಗಳ ತೋಟವನ್ನೆಲ್ಲಾ  ಜಾಲಾಡಿದರು. ಎಂಥಾ ಕ್ರಿಮಿನಲನೋ? ಎಲ್ಲಿಂದೆಲ್ಲಿಯ ಸಂಬಂಧವೋ ಎನ್ನುವುದು ತಿಳಿಯಲಿಲ್ಲ. ಆದರೆ ಕೊಡಗಿನ ಕಾಫಿ ತೋಟಕ್ಕೂ ಬಾಂಗ್ಲಾ ವಲಸಿಗ ಅಸ್ಸಾಂ ಮುಸ್ಲಿಮರಿಗೂ ನೇರಾನೇರ ಸಂಪರ್ಕವಿದೆ ಎಂಬ ಸಂಗತಿ ಒಳಗೊಳಗೇ ಇದ್ದಿದ್ದು ಮಾತ್ರ ಬಹಿರಂಗವಾಗಿತ್ತು.
ಇತ್ತೀಚೆಗೆ ಕೊಡಗಿನ ಅಮ್ಮತ್ತಿ-ಹೊಸೂರು ಪ್ರದೇಶದ ದೊಡ್ಡ ಪ್ಲಾಂಟರ್ ಒಬ್ಬರು ಆಳುಗಳಿಗೆ  ಸಂಬಳ ಕೊಡಲು ಎರಡು ದಿನ ತಡವಾಯಿತು.  ಇದರಿಂದ  ಸಿಟ್ಟಿಗೆದ್ದ ಆಳುಗಳು ತೋಟದ ಗೇಟನ್ನೇ ಸ್ಪೋಟಿಸಿದರು! ಕಾಫಿ ತೋಟದ  ಆಳುಗಳು ಸ್ಪೋಟವನ್ನೂ  ನಡೆಸುತ್ತಾರೆ. ಆಗಲೂ ಜನರು ಬಾಂಗ್ಲಾ ವಲಸೆಯ ಬಗ್ಗೆ ಮಾತಾಡಿಕೊಂಡರು.  ಇನ್ನೊಮ್ಮೆ ನಾಪೋಕ್ಲು  ಪರಿಸರದ  ಮಸೀದಿಯಲ್ಲಿ ಹಬ್ಬದ ಉಡುಗೊರೆಯಾಗಿ ಕಾಫಿ ತೋಟದ ಮುಸಲ್ಮಾನರಿಗೆ  ಸ್ಥಳೀಯ ಮುಸಲ್ಮಾನರು ಟೋಪಿ ಮತ್ತು ಬುರ್ಖಾಗಳನ್ನು ವಿತರಿಸಿದರು. ಎಲ್ಲಿಂದಲೋ ಬಂದ ಆಳುಗಳಿಗೆ ಇನ್ನೆಲ್ಲಿನದೋ ಊರಿನ ಮಸೀದಿಯಿಂದ ಟೋಪಿ ವಿತರಣೆ! ಆಗಲೂ ಜನ ‘ಇವರೆಲ್ಲಾ ದೇಶ ಇಡುವುದುಂಟಾ?’ ಎಂದು ಮಾತಾಡಿಕೊಂಡಿದ್ದರು.  ಕಳೆದ ವರ್ಷ ತಲಕಾವೇರಿ, ಭಾಗಮಂಡಲಕ್ಕೆ ಹೋಗುವ ದಾರಿಯಲ್ಲಿ ಸಿಗುವ ಚೇರಂಬಾಣೆ ಎಂಬ ಸಣ್ಣ ಊರೊಂದಕ್ಕೆ ೮೦ ಜನ   ಅಸ್ಸಾಂ ಮೂಲ ಎಂದು ಹೇಳಿಕೊಂಡು ಒಂದು ವರ್ಷವಿದ್ದು ಹೋದರು ಎಂಬುದನ್ನು ಕೆಲವರು ಇಂದಿಗೂ ಭೀತಿಯಿಂದ ಮಾತಾಡಿಕೊಳ್ಳುತ್ತಿದ್ದಾರೆ. ಉರಿಯುತ್ತಿರುವ ಅಸ್ಸಾಂ, ಅದರ ಕಿಡಿಗಳು  ದೇಶಾದ್ಯಂತ ಹೊತ್ತಿಕೊಳ್ಳುತ್ತಿರುವ ಸಂದರ್ಭದಲ್ಲಿ  ಪ್ರಜ್ಞಾವಂತರು ಈ ಎಲ್ಲಾ ಘಟನೆಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಬೆಚ್ಚಿ ಬೀಳುತ್ತಿದ್ದಾರೆ.
ಅವರ ಭೀತಿಗೂ ನ್ಯಾಯಯುತವಾದ ಕಾರಣವಿದೆ. ಗುಪ್ತಚರ ಇಲಾಖೆಯ ಪ್ರಕಾರ ಕೊಡಗಿನಲ್ಲಿ ೧೦ರಿಂದ ೧೪ ಸಾವಿರದಷ್ಟು ಬಾಂಗ್ಲಾ ವಲಸಿಗರಿದ್ದಾರೆ. ಎಲ್ಲರೂ ಕೊಡಗಿನ ಕಾಫಿ ತೋಟಗಳಲ್ಲಿ ,ಕಟ್ಟಡ  ಗುತ್ತಿಗೆದಾರರ ಬಳಿ  ಕೂಲಿಗಳಾಗಿದ್ದಾರೆ ಎಂಬುದನ್ನು ಗುಪ್ತಚರ ಇಲಾಖೆ ತಿಳಿಸಿತು. ಕಳೆದ ೫ ವರ್ಷಗಳಿಂದ ಇದರ ಸೇರ್ಪಡೆಯಾಗುತ್ತಿದ್ದರೂ ಈಗಿನ ೨ ವರ್ಷಗಳಿಂದ ಇದು ಬಹಿರಂಗವಾಗುತ್ತಿದೆ ಎಂಬುದು ಗಮನಾರ್ಹ ಅಂಶ.  ಮಡಿಕೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು “ಅಸ್ಸಾಂ, ಬಿಹಾರ ಎಂದು ಹೇಳಿಕೊಂಡು ಬರುವ ಎಲ್ಲಾ  ತೋಟದ ಕೂಲಿಗಳ ಬಳಿ ಸ್ಥಳೀಯ ಆಡಳಿತ ಕೊಟ್ಟಿದೆ ಎನ್ನಲಾದ ಪರಿಚಯ ಪತ್ರವೊಂದಿರುತ್ತದೆ. ಬಹುತೇಕ ಪರಿಚಯ ಪತ್ರಗಳ ಮೂಲ ಅಸ್ಸಾಮಿನ ಶಿಲ್ಲಾಂಗ್ ಎಂದಿರುತ್ತದೆ ” ಎನ್ನುತ್ತಾರೆ. ಆ ಗುರುತಿನ ಪತ್ರವೂ  ಒಂದು ಸೋಜಿಗ.
ಒಂದು ಪರಿಚಯ ಪತ್ರ ಹೀಗಿದೆ.
 ಆರಂ‘ದಲ್ಲಿ ‘ರತ ಸರಕಾರದ ಲಾಂಛನ. ಅದರ ಕೆಳಗೆ Govt. of GAONBURHA  ಎಂಬ ಬರಹ. ಭಾರತ ಸರಕಾರದ ಲಾಂಛನದ ಕೆಳಗೆ ಹೆಸರು ಕೇಳಿಲ್ಲದ ದೇಶವೋ, ಊರೋ, ಪಂಚಾಯತಿಯೋ ಏನೂ ತಿಳಿಯದು. ದೇಶದ ಎಲ್ಲಾ  ರಾಜ್ಯಗಳಿಗೂ ಅವುಗಳದ್ದೇ ಆದ ಲಾಂಛನಗಳಿರುತ್ತವೆ. ಆದರೆ ಇಲ್ಲಿ ಮಾತ್ರ ಅದಿಲ್ಲ. GAONBURHA  ಎಂಬುದೇ  ಒಂದು ದೇಶ. ಅದರ ಕೆಳಗೆ ಹೀಗೊಂದು ವಿಳಾಸ.
MD. ABDUL REHMAN
VILL CHENIBARI
PO RANI PUKURI
MOUZA - SH AYANABARI
P.S.DHULA
Dist. DARRANG (ASSAM)
ಈ ವಿಳಾಸದ ವ್ಯಕ್ತಿಯನ್ನು  ಪರಿಚಯ ಮಾಡಿ ಈತನ ವರ್ತನೆ ಉತ್ತಮ ಎಂದು ಬರೆದು ಕಳಿಸಿದವನು M.D HABIBAR REHMAN, S/O ABDUL JALIL  ಎಂಬ ಪಂಚಾಯತಿ ಸದಸ್ಯ ಇಂಥ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪಡೆದವರೆಲ್ಲರೂ ಸಮೀವುಲ್ಲಾ , ಜಾಫರ್, ಅತಾವುಲ್ಲಾಖಾನ್, ಮುಜಾಫರ್ , ಶರೀಫ್ ಹೆಸರಿನವರು. ಇವರೆಲ್ಲರೂ ಕೊಡಗಿನ ದೊಡ್ಡ ಧಣಿಗಳ ತೋಟದಲ್ಲಿ ಕೆಲಸಕ್ಕೆ ಸೇರುತ್ತಾರೆ. ಕಳೆದುಹೋಗುತ್ತಾರೆ. ಸ್ಥಳೀಯ ಮಸೀದಿಗಳು ಇಂದು  ಟೋಪಿ, ಬುರ್ಖಾ ಕೊಟ್ಟವರು ನಾಳೆ ಮನೆಕಟ್ಟಿ ಕೊಡಲಾರರು ಎಂದೇನೂ ಹೇಳದಿರಲಾಗುವುದಿಲ್ಲ.
ಮಡಿಕೇರಿಯ ನಾಗರಿಕರು ಇನ್ನಷ್ಟು ಹೇಳುತ್ತಾ ಹೋದರು. ಕೆಲವು ದಾಖಲೆಗಳನ್ನು ತೋರಿಸಿದರು. ವಿಪರ್ಯಾಸವೆಂದರೆ  ಅದೇ ಚೇರಂಬಾಣೆ  ಎಂಬ ಸಣ್ಣ ಊರಿನ ಬ್ಯಾಂಕೊಂದರಿಂದ  ದೊಡ್ಡ ಮೊತ್ತದ ಹಣ ಅಸ್ಸಾಮಿನ ಜಾಕೀರ್  ಹುಸೇನ್ ಎಂಬ  ವೈದ್ಯನೊಬ್ಬನಿಗೆ ಸಂದಾಯವಾಗುತ್ತಿದೆ. ಈತ ಕಾಫಿ ತೋಟಕ್ಕೆ ಕೂಲಿಯಾಳುಗಳನ್ನು ಕಳುಹಿಸುವ  ದಂಧೆ ನಡೆಸುವವನು. ಒಬ್ಬ ಆಳಿಗೆ ತಲಾ ಎರಡೂವರೆ ಸಾವಿರ ರೂಪಾಯಿ ಸಂದಾಯ ಮಾಡಿದರೆ  ಒಬ್ಬನನ್ನು ಮುಂಗಡ ಕಾಯ್ದಿರಿಸಿದಂತೆ. ಇಂಥ  ಆಳುಗಳನ್ನು ಅಸ್ಸಾಂನಿಂದ ಕಳುಹಿಸುವ  ಏರ್ಪಾಡು ಆತನದ್ದು. ರೈಲು ನಿಲ್ದಾಣದಿಂದ  ಕರೆತರುವ  ವ್ಯವಸ್ಥೆ  ಸ್ಥಳೀಯ ದಲ್ಲಾಳಿಗಳದ್ದು. ಕೇವಲ ೧೦೦ರಿಂದ ೧೫೦ ರೂ.ಗೆ ದಿನಗೂಲಿಗೆ ಸಿಕ್ಕುವ ಈ ಕೂಲಿಯಾಳುಗಳಿಗೆ  ಕೊಡಗಿನಲ್ಲಿ  ಬೇಡಿಕೆ ಹೆಚ್ಚು. ದೊಡ್ಡ ಪ್ಲಾಂಟರುಗಳಿಗೆ ಉಳಿದೆಲ್ಲವೂ ಗೌಣ. ಆಳೊಂದೇ ಪ್ರಧಾನವಾದ್ದರಿಂದ   ಸಮಸ್ಯೆಗಳು ಮತ್ತೊಂದು  ಮಗ್ಗುಲಿಗೆ  ಹರಡಿಕೊಂಡಿದೆ. ಹಾಗಾಗಿ ಕೊಡಗಿನ  ದೊಡ್ಡ ಪ್ಲಾಂಟೇಶನ್‌ಗಳಿರುವೆಡೆಯಲ್ಲೆಲ್ಲಾ  ಬಾಂಗ್ಲಾ ವಲಸಿಗರು  ತುಂಬಿದ್ದಾರೆ. ಸಿದ್ದಾಪುರ  ಮತ್ತು   ಪಾಲಿಬೆಟ್ಟ  ಸುತ್ತಮುತ್ತ, ಸುಂಟಿಕೊಪ್ಪ, ಬೆಟ್ಟಗೇರಿ, ದ.ಕೊಡಗಿನ  ಕುಟ್ಟಾ, ಭಾಗಮಂಡಲದ ಸುತ್ತಮುತ್ತಲೆಲ್ಲಾ  ತೋಟದ ಕೆಲಸಗಾರರು ಎಂದರೆ   ಒರಟೊರಟಾಗಿ ಕಾಣುವ ಬಾಂಗ್ಲಾ ಮುಸಲ್ಮಾನರೇ.
ಇದೇಕೆ ಹೀಗೆ? ಬಾಂಗ್ಲಾ ಆಳುಗಳೇಕೆ ಇಲ್ಲಿನ ತೋಟಗಳಿಗೆ ಬರುತ್ತಾರೆ ಎಂಬುದಕ್ಕೆ ಪೂರ್ವರಂಗವನ್ನು ಗಮನಿಸಲೇ ಬೇಕು.
ಶತಮಾನಗಳ ಹಿಂದೆ ಕೊಡಗಿನಲ್ಲಿ ಬ್ರಿಟಿಷರು  ಕಾಫಿ ಪ್ಲಾಂಟೇಶನ್‌ಗಳನ್ನು ಪ್ರಾರಂಭಿಸುವಾಗ ನಂಬಿಕೊಂಡಿದ್ದು ಕೊಡಗಿನ  ಬುಡಕಟ್ಟು ಜನಾಂಗಗಳಾದ ಕುರುಬರು  ಮತ್ತು ಎರವರನ್ನು. ಇದು ಇತ್ತೀಚಿನ ೨೦ ವರ್ಷಗಳ ಹಿಂದಿನವರೆಗೂ ನಡೆದುಕೊಂಡು ಬಂದಿತ್ತು.
ಹಾಗಾಗಿ  ದೊಡ್ಡಪ್ಲಾಂಟರುಗಳ ತೋಟದಲ್ಲೆಲ್ಲಾ  ಸಾಲುಸಾಲು ಲೈನ್ ಮನೆಗಳು,  ಬಾವಿಗಳಿವೆ ಮತ್ತು ಹಾಡಿಗಳಿಗೆ  ಸಮೀಪವಿರುವ ಪ್ರದೇಶಗಳಲ್ಲೇ ದೊಡ್ಡ ದೊಡ್ಡ ಪ್ಲಾಂಟೇಶನ್‌ಗಳಿವೆ. ಯಾವಾಗ ಪುನರ್ವಸತಿ ಹೆಸರಿನಲ್ಲಿ ಈ ಬುಡಕಟ್ಟುಗಳನ್ನು  ಕಾಡಿನಿಂದ ಒಕ್ಕಲೆಬ್ಬಿಸುವ ಕೆಲಸ ಆರಂಭವಾಯಿತೋ ಆಗಿನಿಂದ ಈ ತೋಟಗಳಿಗೆ ಕೂಲಿಯಾಳುಗಳ ಸಮಸ್ಯೆ ಕಾಡಲಾರಂಭಿಸಿತು.  ಜೊತೆಗೆ ಲೈನ್‌ಮನೆಗಳಲ್ಲಿದ್ದ ಆಳುಗಳು  ತೋಟದ ಕೆಲಸವನ್ನು ಬಿಟ್ಟು ಪೇಟೆ ಸೇರಲಾರಂಭಿಸಿದರು. ಹೀಗೆ ನೋಡನೋಡುತ್ತಲೇ ಕಾಫಿ ತೋಟದ ಶ್ರಮದಾಯಕ ಕೆಲಸಕ್ಕೆ ಕೂಲಿ ವಿಪರೀತ ಹೆಚ್ಚಿತು. ಪೇಟೆಯ ಕಾಲೋನಿಗಳ ಕಾರ್ಮಿಕರನ್ನು ಮುಸಲ್ಮಾನ್ ದಳ್ಳಾಳಿಗಳು ಜೀಪುಗಳಲ್ಲಿ ಬೇರೆ  ಊರುಗಳಿಗೆ ಕಳುಹಿಸಿ ಕಾರ್ಮಿಕರ ಅಸಮತೋಲನ ಸೃಷ್ಟಿಸುವ ಕೆಲಸವನ್ನೂ ಆರಂಭಿಸಿದರು. ಇದರಿಂದ  ದೊಡ್ಡ ತೋಟದಲ್ಲಿ ಅರೇಬಿಕಾ  ಕಾಫಿ ಬೆಳೆಸುವ, ವರ್ಷಪೂರ್ತಿ ಕೆಲಸವನ್ನು ಅಪೇಕ್ಷಿಸುವ ತೋಟಗಳಿಗೆ ಕೆಲಸಗಾರರ ಅಭಾವ ತೀವ್ರವಾಗಿ ಬಾಧಿಸಿತು. ಆಗ ಅದರ ಲಾಭವನ್ನು  ಪಡೆದುಕೊಂಡಿದ್ದೇ ಮುಸಲ್ಮಾನ ದಲ್ಲಾಳಿಗಳು. ಆದರೆ ಸ್ಥಳೀಯ ದಲ್ಲಾಳಿಗಳಿಗೆ ದೂರದ ಅಸ್ಸಾಂನ ದಲ್ಲಾಳಿಗಳ ಪರಿಚಯವಾಗಿದ್ದು ಹೇಗೆ?  ಇವರೆಲ್ಲರೂ ಸೋದರರೇ? ಎಂದು ಕೇಳಿದರೆ ಕೋಮುವಾದದ  ಪ್ರಶ್ನೆಗಳಾಗಿಬಿಡುತ್ತವೆ.
ರಾಯರ್ ಫ್ಯಾಮಿಲಿಗಳ ದೊಡ್ಡ ಪ್ಲಾಂಟರುಗಳಿಗಂತೂ ಇದಾವುದರ ಪರಿವೆ ಇರುವುದಿಲ್ಲ. ತನ್ನ ತೋಟದ ಕೆಲಸ ಆಗಬೇಕಷ್ಟೇ ಎಂಬ ಭಾವನೆ. ಹಾಗಾದರೆ ದೇಶದ ಸ್ಥಿತಿ! ವಿಚಿತ್ರವೆಂದರೆ ಈ ರಾಯಲ್ ಫ್ಯಾಮಿಲಿಗಳಿಗೆ  ಕಾರ್ಯಪ್ಪ, ತಿಮ್ಮಯ್ಯರುಗಳೆಂದರೆ ವಿಪರೀತ ಹೆಮ್ಮೆ. ಅವರು ಯಾರ ವಿರುದ್ಧ ಹೋರಾಡಿ ದೇಶ ಬಿಟ್ಟು ಓಡಿಸಿದರೋ ಅವರನ್ನೇ ಈ ಪ್ಲಾಂಟರಗಳು ತಮ್ಮ ತೋಟಗಳಿಗೆ ಬಿಟ್ಟುಕೊಂಡಿದ್ದಾರೆ. ಇದು ಘೋರ ಅಣಕವಷ್ಟೇ ಅಲ್ಲ. ಮಹಾವಿಕೃತಿ.
ಬ್ರಿಟಿಷರ ಕಾಲ ನೆನಪಾಗುತ್ತದೆ. ೧೯ನೇ ಶತಮಾನದ ಆರಂಭದಲ್ಲಿ ಅಸ್ಸಾಮಿನ ಚಹಾತೋಟಗಳಲ್ಲಿ ಕೆಲಸ ಮಾಡಲು ಇಂದಿನ ಕೊಡಗಿನಂತೆ ಅಂದೂ  ಬಂಗಾಳಿ ಮಾತಾಡುವ ಮುಸಲ್ಮಾನರನ್ನು ತಂದು ಕೂರಿಸಿದ್ದರು. ಇಂದು ಅದೇ ಮುಸಲ್ಮಾನರು ಸ್ಥಳೀಯರಾಗಿ ಬಾಂಗ್ಲಾ ವಲಸಿಗರಿಗೆ ಸಹಕಾರ ನೀಡುತ್ತಿದ್ದಾರೆ. ಅಂದು ಬ್ರಿಟಿಷರು  ಮಾಡಿದ್ದನ್ನೇ ಇಂದು ಕೊಡಗಿನ ಪ್ಲಾಂಟರುಗಳು ಮಾಡುತ್ತಿದ್ದಾರೆ.  ಈಗಾಗಲೇ ಸಣ್ಣ ಜಿಲ್ಲ್ಲೆಯಲ್ಲಿ ಹದಿನಾಲ್ಕು  ಸಾವಿರ ಬಾಂಗ್ಲಾದೇಶಿಯರು ಇದ್ದಾರೆ ಎಂದರೆ ಮುಂದಿನ ದಿನಗಳಲ್ಲಿ  ಪರಿಸ್ಥಿತಿ ಏನಾಗಲಿದೆ? ವಿಪರ್ಯಾಸವೆಂದರೆ ಕೊಡಗಿನಲ್ಲಿ  ಪ್ರಬಲ ಮೂಲ ನಿವಾಸಿಗಳೆಂದು ಕರೆಯಲ್ಪಡುವ  ಕೊಡವರ ಸಂಖ್ಯೆ ೧ ಲಕ್ಷವೂ ಇಲ್ಲ. ದಿನೇ ದಿನೇ ಅವರ ಸಂಖ್ಯೆ ಕುಸಿಯುತ್ತಿದೆ. ಆದರೆ ಕೇವಲ ನಾಲ್ಕೈದು ವರ್ಷದಲ್ಲಿ ಬಾಂಗ್ಲಾದವರ ಸಂಖ್ಯೆಯೆ ಹದಿನಾಲ್ಕು ಸಾವಿರ! ಅಲ್ಲದೆ ಕೊಡಗಿನ  ಇತರ ಮೂಲ ನಿವಾಸಿಗಳಾದ ಅಮ್ಮಕೊಡವ, ಮಲಯ, ಮೇದ, ಹೆಗ್ಗಡೆ, ಪಣಿಕರ ಸಂಖ್ಯೆಗಿಂತಲೂ ಇವರ ಸಂಖ್ಯೆಯೇ ಹೆಚ್ಚು! ಎಲ್ಲವೂ ದೊಡ್ಡ ಪ್ಲಾಂಟರುಗಳ ಮಹಿಮೆ. ಅಂದು ಬ್ರಿಟಿಷರ ಜೊತೆ ಪಾರ್ಟಿ ಮಾಡುತ್ತಾ ಮೋಜು  ಮಾಡಿ ಇಂದು ರಾಯಲ್ ಕುಳಗಳಾಗಿರುವ ಇವರು ಇಂದೂ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಜಮ್ಮಾ ಆಸ್ತಿ ಮತ್ತು ವಿಶೇಷ ಶಸ್ತ್ರ  ಕಾಯಿದೆಯ ಅಹಂಕಾರದಿಂದ ಬೀಗುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಶೇ. ೨೧ರಷ್ಟು  ಮುಸಲ್ಮಾನರು ತುಂಬಿದ್ದಾರೆ. ಕುಸಿಯುತ್ತಿರುವ  ಸ್ಥಳೀಯರು, ಏರುತ್ತಿರುವ ವಿದೇಶಿ ಪೀಳಿಗೆಯವರ ಪ್ರವಾಹ ಇದೇ ರೀತಿ ಏರಿದರೆ  ಅವರನ್ನು ರಕ್ಷಿಸಲು ಜಮ್ಮಾ ಹಕ್ಕು ಇರುವುದಿಲ್ಲ. ಗೋಡೆಯಲ್ಲಿ  ತೂಗು ಹಾಕಿದ ಕೋವಿಯೂ ಇರುವುದಿಲ್ಲ.  ತೋಟವೂ  ಇರುವುದಿಲ್ಲ ಎಂಬ ಸಂಗತಿಯನ್ನು ಅರಿತುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.  ಏಕೆಂದರೆ ಯಾವ ಪ್ಲಾಂಟರನೂ ಇದುವರೆಗೆ ಎಚ್ಚೆತ್ತುಕೊಂಡಿಲ್ಲ. ಪೊಲೀಸರಿಗೆ ಸುದ್ದಿ ಮುಟ್ಟಿಸಿಲ್ಲ. ಇನ್ನು ಒಂದು ದಿಗ್ಭ್ರಮೆ  ಹುಟ್ಟಿಸುವ ಸಂಗತಿ ಎಂದರೆ ಟಾಟಾದವರ ತೋಟಗಳಲ್ಲೂ ಇವರು ನುಸುಳಿದ್ದಾರೆ ಎನ್ನುವುದು.  ದೊಡ್ಡವರಿಗೆ ತೋಟದ ಚಿಂತೆ, ಉಳಿದವರಿಗೆ  ದೇಶದ ಚಿಂತೆ. ದೇಶ  ಕೊಳ್ಳೆ ಹೊಡೆದರೆ ಇವರ ತೋಟ ಉಳಿದೀತೇ? “ಕತ್ತಿ-ಕೋವಿಯನ್ನಿಟ್ಟು ಸುಮ್ಮನೆ  ನಾವು ಪೂಜಿಸುತ್ತಿಲ್ಲವೇ?” ಎಂಬುದು ಕೇವಲ ಹಾಡು ಅಲ್ಲ.  ಅದು ಕೊಡಗಿನ ಪ್ಲಾಂಟರುಗಳ  ಮನಸ್ಥಿತಿ ಎಂಬುದು ಇದೀಗ ಅರಿವಾಗುತ್ತಿದೆ.
ಇವೆಲ್ಲವೂ ಮುಂಬರುವ ಅಪಾಯದ   ಪೂರ್ವಸೂಚನೆಯನ್ನು  ತರುತ್ತಿದೆ. ಅತ್ತ ಬೆಂಗಳೂರಿನಲ್ಲಿ ಸಾವಿರಾರು ಅಸ್ಸಾಮೀಯರು ಊರು ಬಿಟ್ಟರು. ಆದರೆ ಬಾಂಗ್ಲಾ ದೇಶಿಯರು?  ಬಾಂಗ್ಲಾ ವಲಸಿಗರಿಗಾಗಿ ಮಂಗಳೂರಿನಲ್ಲಿ ಹಣ ಸಂಗ್ರಹವಾಗುತ್ತದೆ. ಮುಂಬೈ, ಉತ್ತರ ಪ್ರದೇಶಗಳಲ್ಲಿ ದಂಗೆಗಳು ನಡೆಯುತ್ತದೆ. ಬೆಂಗಳೂರಿನ  ಶಾಂತಿ ಸಭೆಯಲ್ಲಿ ಸೇರಿದಾಗಲೂ ಮುಸ್ಲಿಂ ಮುಖಂಡರಿಗೆ ‘ಹೊಸದಿಗಂತ’ದ ಬಗ್ಗೆ ವಿಪರೀತ ಕೋಪ ಬರುತ್ತದೆ. ಬಾಂಗ್ಲಾ ವಲಸೆಯ ಬಗ್ಗೆ ಚರ್ಚಿಸುವಾಗಲೂ ಅಲ್ಲಿ ಪುಂಡರಸನೊಬ್ಬನ ಪ್ರಸ್ತಾಪವಾಗುತ್ತದೆ. ಆದರೆ ನಮ್ಮ ಪ್ಲಾಂಟರ್ ಗಳು? ಮನೆಯಲ್ಲೂ ಇಂಗ್ಲಿಷ್ ಮಾತಾಡುತ್ತಾರೆ. ಲೇಬರ್ ಪ್ರಾಬ್ಲಂ ಎನ್ನುತ್ತಾರೆ. ಕಾಫಿಯ ರೇಟಿನ ಬಗ್ಗೆ  ಚರ್ಚಿಸುತ್ತಾರೆ. ಸಂಜೆ ಕ್ಲಬ್‌ಗಳಿಗೆ ಹೋಗುತ್ತಾರೆ.  ಜೀವನಪೂರ್ತಿ ಅಹಂಕಾರ ಪಡುತ್ತಲೇ ಒಂದು ದಿನ ಸತ್ತು ಹೋಗುತ್ತಾರೆ.
ತೋಟ ಕೆಲಸಕ್ಕೆ ಬಂದ ಬಾಂಗ್ಲಾದವರ ಈ ಪ್ರಮಾಣ ಮತ್ತು ಅವರಿಗೆ ಟೋಪಿ ಮತ್ತು ಬುರ್ಖಾ ಕೊಟ್ಟ ಸ್ಥಳೀಯರ ಉತ್ಸಾಹಗಳನ್ನು ನೋಡಿದರೆ ದೊಡ್ಡ ಪ್ಲಾಂಟರುಗಳಿಗೂ, ಸಣ್ಣ ಪ್ಲಾಂಟರುಗಳಿಗೂ, ಪ್ಲಾಂಟರುಗಳಲ್ಲದವರೆಲ್ಲರಿಗೂ ಕೂಡ ಇನ್ನು ನೆಮ್ಮದಿಯ  ಸಾವೂ ಕೂಡ ಇಲ್ಲವೆಂದೇ ಯಾಕೋ ಅನಿಸುತ್ತಿದೆ. ಅಪಶಕುನ ಅನಿಸುತ್ತಿದೆ. ಶಿಲಾಯುಗದ ಜನರು ನೆನಪಾಗುತ್ತಿದ್ದಾರೆ.

Tuesday, August 14, 2012

ಮಾಲೆಗೆ ಮುತ್ತೊಂದಾಯಿತು ಇನ್ನೇಕೆ ಅಪಸ್ವರದ ಆಲಾಪ?

ಕೊಡಗು. ಅದಕ್ಕೆ ನಾನಾ ಹೆಸರುಗಳು. ವಿವಿಧ ಬಿರುದಾವಳಿಗಲು. ಕ್ರೋಢ ದೇಶ, ಮತ್ಸ ದೇಶ, ಗಂಧರ್ವ ಲೋಕ, ಕರ್ನಾಟಕದ ಸ್ವಿಜರ್ ಲ್ಯಾಂಡ್, ದಕ್ಷಿಣದ ಕಾಶ್ಮೀರ... ಇನ್ನೂ ಎಷ್ಟೆಷ್ಟೋ. ಕಂಡು ಹೊಗಳಿದವರು ಇಟ್ಟ ಹೆಸರುಗಳು, ಬಂದವರು ಹೊಳೆದಾಗ ಕರೆದ ನಾಮಗಳೆಲ್ಲವೂ ಇದಕ್ಕೆ ಅನ್ವರ್ಥವಾದವು. ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಕೊಡಗು ಎಂದರೆ ಒಂದು " ದೇಶ" ವೇ. ಇದು ಸಣ್ಣ ಪ್ರದೇಶವೊಂದಕ್ಕೆ ಸಿಕ್ಕಬಹುದಾದ ಅತ್ಯಚ್ಛ ಗೌರವ.  ದೇಶದೊಳಗಿದ್ದೂ ದೇಶವಾಗುವ  ತಾದ್ಯಾತ್ಮ. ಒಂದರೊಳಗೆ ಎರಡಾಗದೆ ಒಂದೇ ಆಗಿರುವ ತತ್ತ್ವಶಾಸ್ತ್ರ.  ವಿಚಿತ್ರ ಎಂದರೆ ಇಂದಿಗೂ ಹಳಬರು ಮೈಸೂರನ್ನು ರಾಜ್ಯ ಎಂದು ಕರೆದರೆ ಕೊಡಗನ್ನು ದೇಶ ಎಂದೇ ಸಂಭೋಧಿಸುತ್ತಾರೆ.  ಹೀಗೆ ಕೊಡಗು ರಾಜ್ಯವಾಗಿದ್ದರೂ ರಾಜ್ಯವಾಗದೇ ದೇಶದ ಪುಟ್ಟ- ಸುಂದರ ಕೂಸಿನಂತೆ ಜನಮನದಲ್ಲಿ ನಿಂತಿದೆ.
ಲಿಂಗಾಯತ ಅರಸರ ಕಾಲದಲ್ಲಿ ಕೂಡ ಕೊಡಗು ದಕ್ಷಿಣ ಕನ್ನಡದ ಸುಳ್ಯದವರೆಗೆ ವ್ಯಾಪಿಸಿದ್ದ ಸಂಸ್ಥಾನವೇ. ಅನಂತರ ಬ್ರಿಟಿಷರ ತೆಕ್ಕೆಗೆ ಬಂದಾಗಲೂ ಕೊಡಗನ್ನು ಅವರು ವಿಶೇಷ ಆಸ್ಥೆಯಿಂದ ಸಲಹಿದ್ದರು. ಟೈನಿ ಮಾಡಲ್ ಸ್ಟೇಟ್ ಎಂದು ಪ್ರೀತಿಯಿಂದ ಕರೆದರು. ಅನಂತರದ ಸ್ವತಂತ್ರ ಭಾರತವಾದಾಗ "ಸೀ" ಸಂಸ್ಥಾನವಾಗಿತ್ತು ಮತ್ತು ಅನಂತರ ಭಾಷಾವಾರು ಪ್ರಾಂತ ರಚನೆಯ ಹೊತ್ತಲ್ಲಿ  ಅಂದರೆ ೧೯೫೬ ರಲ್ಲಿ  ಯಾವ ಕಾರಣ ದಿಂದಲೂ ಕೊಡಗು ಪ್ರತ್ಯೇಕ ರಾಜ್ಯವಾಗುವ ಲಕ್ಷಣಗಳಿಲ್ಲವೆಂದೋ ಅಥವಾ ಕರ್ನಾಟಕ ಮಾತೆಯ ಕೊರಳ ಮಾಲೆಗೆ ಮುತ್ತೊಂದು ಇಲ್ಲದೆ ಸರವಾಗದು ಎಂಬ ಕಾರಣಕ್ಕೋ ಕೊಡಗು ಕರ್ನಾಟಕದಲ್ಲಿ ವಿಲೀನವಾಯಿತು. ಏನೇ ಆದರೂ ವಿಲೀನ ಸಂಪೂರ್ಣವಾಗಿ ಭಾರತದ ಏಕತೆ, ಸಾರ್ವಭೌಮತೆ, ಅಖಂಡತೆಯ ತಳಹದಿಯಲ್ಲಿ ನಡೆಯಿತು. ಮತ್ತು ಎಲ್ಲವೂ ಸುಸೂತ್ರವಾಗಿಯೇ ನಡೆಯಿತು. ಒಂದು ವೇಳೆ ವಿಲೀನಕ್ಕೆ ಅಡ್ಡಿಪಡಿಸಿದ್ದರೆ  ಸೈನಿಕ ಬಲದ ಮೂಲಕವಾದರೂ ಕೊಡಗು ಮೈಸೂರು ಸಂಸ್ಥಾನಕ್ಕೆ ಸೇರಲೇ ಬೇಕಿತ್ತು. ಏಕೆಂದರೆ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆ.
 ಹೀಗೆ ಕೊಡಗು ಮೈಸೂರು ಪ್ರಾಂತಕ್ಕೆ ಸೇರಿ, ಮುಂದೆ ಮೈಸೂರು ಕರ್ನಾಟಕವಾಗಿ, ಕರ್ನಾಟಕದಲ್ಲಿ ರಾಜಕಾರಣಗಳು ಶುರುವಾಗಿ, ಆ ರಾಜಕಾರಣಕ್ಕೆ ಮೂರು ಅಸೆಂಬ್ಲಿ ಸೀಟುಗಳು ಸಿಕ್ಕಿ . ಲಕ್ಷಾಂತರ ಕೊಡಗಿನವರು ಇದರಿಂದ ಕರ್ನಾಟಕದಲ್ಲಿ ಸೇರಿ , ಎಲ್ಲವೂ ಸರಿಯಾಗಿ ಅನಂತರವೂ ಕೊಡಗನ್ನು ಜನ " ದೇಶ" ಎಂದೇ ಕರೆಯುತ್ತಿದ್ದ ಹೊತ್ತಿನಲ್ಲೇ ಅಪಸ್ವರವೊಂದು ಕೇಳಿಬರತೊಡಗಿತು.  ಅದೇ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ.
 ಎಲ್ಲವೂ ಮುಗಿದಿತ್ತು. ಇತಿಹಾಸದ ಭಾರಗಳಾವುವೂ ಇರಲಿಲ್ಲ. ಯಾವ ಬಂಧನವೂ ಇರಲಿಲ್ಲ. ಅಸಲು ಜನರಿಗೆ ಯಾರ ಆಡಳಿತದಲ್ಲೂ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಅಲ್ಲದೆ ನ್ಯಾಯವಾಗಿ ರಾಜ್ಯವನ್ನು ಕೇಳುವಂಥ ಯಾವ ತಾರ್ಕಿಕ  ಸಂಗತಿಗಳೂ ಇರಲಿಲ್ಲ. ಒಂದು ಹುಂಬತನ , ಪ್ರತ್ಯೇಕ ಅಸ್ತಿತ್ವದ ವಿತಂಡವಾದಗಳು, ಭಾವನೆಗಳನ್ನು  ಬಲವಂತವಾಗಿ ಕೆರಳಿಸುವ ಈ ಬೇಡಿಕೆಯಲ್ಲಿ ವಿಶೇಷವಾದ ಸಂವೇದನೆಯೊಂದರ ಸೆಲೆಯಿತ್ತೇ ಎಂದರೆ ಅದೂ ಇಲ್ಲ. ವಿಲೀನದ ಅನಂತರ ಕೊಡಗಿನ ಜನರಿಗಾದರೋ " ಈ ಕರ್ನಾಟಕದಲ್ಲಿ ಬದುಕುವುದು ದುಸ್ತರ" ಎಂಬ ವೇದನೆ ಇತ್ತೇ ಎಂದರೆ ಅದೂ ಕೂಡಾ ಇಲ್ಲವೇ ಇಲ್ಲ. ವಿಶಾಲ ಕರ್ನಾಟಕದಲ್ಲಿ ಪುಟ್ಟ ಕೊಡಗು ವಿಲೀನವಾದ ಅನಂತರ ಕೊಡಗಿಗೆ ಪ್ರಯೋಜನಗಳೇ ಕಂಡುಬಂದವು. ಮೀಸಲಾತಿಯ ಬಂಧವಿಲ್ಲದೆ ಹಲವಾರು ಜನರು ಕರ್ನಾಟಕದಲ್ಲಿ ಉದ್ಯೋಗಗಳನ್ನು ಕಂಡುಕೊಂಡರು. ಕೊಡಗಿನ ದನಿ ವಿಶಾಲ ಕರ್ನಾಟಕದಲ್ಲಿ  ಪ್ರತಿದನಿಸಿತು. ಅದುವರೆಗೆ ರಾಜಮನೆತನಗಳ ಸರ್ವಾಕಾರಿ ಧೋರಣೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಮತಾಂಧತೆ ಮತ್ತು ಬ್ರಿಟೀಷ್ ಕಲೆಕ್ಟರ್‌ಗಳ ನಾಜೂಕುತನಗಳ ನಡುವೆ ಬದುಕಬೇಕಾಗಿದ್ದ ಅನಿವಾರ್ಯತೆಗಳು, ಮಾನಸಿಕ ಗುಲಾಮಗಿರಿ, ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದ ನಾಯಕರು- ಪಾಳೇಗಾರರು ವೊದಲಾದವರಿಂದ ಜನ ನಿರಾಳತೆಯನ್ನು ಅನುಭವಿಸಿದ್ದು  ಈ ಕರ್ನಾಟಕದಿಂದಲೇ. ಸ್ವತಂತ್ರ ಭಾರತದಲ್ಲಿ ಬ್ರಿಟೀಷ್ ಆಳರಸರ ಮೋಜಿನ ತಾಣವಾಗಿದ್ದ ಕೊಡಗನ್ನು ದೇಸೀತನಕ್ಕೆ ತರಬೇಕಿದ್ದರೆ ಅದನ್ನು ಮೈಸೂರಿಗೇ ಸೇರಿಸಬೇಕಿತ್ತು ಮತ್ತು ಹಾಗೆ ಪ್ರತ್ಯೇಕವಾಗಿಡುವುದು ಮತ್ತಷ್ಟು ಅಪಾಯಕಾರಿಯಾಗುತ್ತಿತ್ತು. ಹೀಗೆ ವಿಲೀನದ ತರುವಾಯ ಕೊಡಗು ಪ್ರಬಲ ಕರ್ನಾಟಕದ ಶಕ್ತಿಯನ್ನು ತಾನೂ ಗಳಿಸಿಕೊಂಡು ಪ್ರಬಲ ಜಿಲ್ಲೆಯಾಗಿ ಬೆಳೆಯಿತು. ಇದರಲ್ಲಿ ಕೊಡಗು ಕಳೆದುಕೊಂಡುದೇನೂ ಇರಲಿಲ್ಲ.
ಕೊಡಗಿನ ಪ್ರತ್ಯೇಕತೆಯ ಅಧ್ಯಯನ ಮಾಡಿದ ಯಾರಿಗೇ ಆದರೂ "ಪ್ರತ್ಯೇಕ ರಾಜ್ಯ" ದ ಕೂಗಿನ ಹಿಂದಿನ ಅವೈಜ್ನಾನಿಕತೆಯ ಅರಿವಾಗುತ್ತದೆ. ಏಕೆಂದರೆ ಇಲ್ಲಿ ಕೊಡವ ಭಾಷೆಯ ಮಾತಾಡುವ ಕೊಡವ, ಅಮ್ಮ ಕೊಡವ, ಹೆಗ್ಗಡೆ, ಐರಿ, ಮಡಿವಾಳ, ನಾಯಂದ, ಕೊಯವ, ಕುಡಿಯ, ಮೇದ, ಕೆಂಬಟ್ಟಿ ಎಂಬ ದಲಿತ ಪಂಗಡಕ್ಕೆ ಸೇರಿದ ಜನಾಂಗದವರಿದ್ದಾರೆ. ಆದರೆ ಪ್ರತ್ಯೇಕತೆಯ ಹಿಂದಿನ ಭಾವದಲ್ಲಿ ಇವರೆಲ್ಲರೂ ಸೇರಿಲ್ಲ.  ಅಂದರೆ ಜಾತಿ ಆಧಾರಿತವಾದ ರಾಜ್ಯದ ಕಲ್ಪನೆ.  ಭಾರತ ಪ್ರಜಾಪ್ರಭುತ್ವವಾಗಿದ್ದು, ದಿಲ್ಲಿಯಲ್ಲಿ ರಾಜರು ಅಳಿದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಜಾರಿಗೊಂಡಿದ್ದು ಇರುವಾಗಲೇ ಇಲ್ಲಿ ಜಾತಿಯ ಹೆಸರಲ್ಲಿ ರಾಜ್ಯದ ಕಲ್ಪನೆ!  ಇದನ್ನು ವಿಚಿತ್ರವೆನ್ನಬೇಕೋ ವಿಪರ್ಯಾಸವೆನ್ನಬೇಕೋ?  ಅಂಥವರನ್ನು ನಗಾಡಿ  ಬಿಟ್ಟುಬಿಡಬೇಕೋ ಅಥವಾ ಈಗಲೇ ಬಾಲ ಸುಟ್ಟು ತುಂಡರಿಸಬೇಕೋ ಎನ್ನುವುದೇ ಗೊಂದಲವಾಗುತ್ತದೆ. ಇವೇ ಅಲ್ಲದೆ ಕೊಡಗಿನ ಜೀವ ತುಂಬಿದ , ದೇಶದಲ್ಲೇ ಕೊಡಗು ಗುರುತಿಸುವಂತೆ ಮಾಡಿದ ಕೊಡವೇತರ ಜನಾಂಗಗಳೂ ಇವೆ. ಆದ್ದರಿಂದ ಅರಸೊತ್ತಿಗೆಯ ಕಾಲದಿಂದಲೇ ಇಲ್ಲಿ ಸಂಸ್ಕೃತಿ ಮತ್ತು ಸಮಾಜದ ಹೊಸ ರೂಪವೊಂದು ಕೊಡಗಿನಲ್ಲಿ ಜನ್ಮ ತಾಳುತ್ತಾ ಬಂದಿತ್ತು. ಬ್ರಿಟೀಷ್ ಆಳ್ವಿಕೆಯಲ್ಲಿ ಅಲ್ಲಲ್ಲಿ ವ್ಯಾಪಕಗೊಂಡ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರು, ಶಿವಾಚಾರದ ಲಿಂಗಾಯತರು, ಅರೆ ಭಾಷೆಯ ಗೌಡರು, ಪಾಲೆಯರು, ಮಲೆಯರು, ಕುರುಬರು, ಅನಾದಿಯಿಂದಲೂ ಕೊಡವರ ಹಿಂಭಾಲಕರಾಗಿ , ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಭಾಳಿ ಬದುಕಿ ಇಂದು ಅವನತಿಯ ಅಂಚಿನಲ್ಲಿರುವ ಎರವರು  ಎಲ್ಲರೂ ಕೊಡಗಿನ ಅವಿಭಾಜ್ಯ ಅಂಗಗಳೇ. ಎಲ್ಲರೂ ಕೊಡಗಿನ ಜನರೇ. ಬಹುಭಾಷೆ, ಬಹುಸಂಸ್ಕೃತಿಯ ಮೇಳೈಕೆಯ ಸಂಸ್ಕೃತಿಯ ಅಪರೂಪದ ಕೊಡಗಿನಲ್ಲಿ ಈ ಎಲ್ಲಾ ಜನಾಂಗಗಳಿಗೆ ತನ್ನದೇ ಆದ ಐತಿಹಾಸಿಕ ಹಿನ್ನಲೆಗಳಿವೆ. ಈ ಎಲ್ಲಾ ಸಂಸ್ಕೃತಿಗಳು ಬ್ರಿಟೀಷರ ಕಾಲದಿಂದಲೂ , ಅರಸರ ಕಾಲದಿಂದಲೂ ಅನಂತರ " ಸೀ" ಸಂಸ್ಥಾನದ ಕಾಲದಿಂದಲೂ ಸಾಮರಸ್ಯದಿಂದಲೇ ಇದ್ದವರು. ಆದರೆ ಕೊಡಗು ಕರ್ನಾಟಕಕ್ಕೆ ಸೇರಿದ ಮೇಲೆ ಈ ಕೊಡವೇತರರೆಲ್ಲರೂ ಕೊಡವರನ್ನು ದಬ್ಬಾಳಿಕೆ ಮಾಡುವವರು ಎಂದೇಕಾಯಿತು? ಕರ್ನಾಟಕಕ್ಕೆ ಸೇರಿದ ಮೇಲೆ ಕೊಡವರ ಸಂಸ್ಕೃತಿ ಕೆಟ್ಟುಹೋಯಿತಂತೆ ಎಂದು ಭಾಷಣ ಮಾಡುವವರು ಇಂದಿಗೂ ಸಿಗುತ್ತಾರೆ.  ಹೀಗೆ ಭಾಷಣ ಮಾಡುವವರು ವರ್ಷಕ್ಕೊಮ್ಮೆ ಜನಾಂಗದ ಒಗ್ಗಟ್ಟಿನ ನೆಪದಲ್ಲಿ  ಇಸ್ಪ್ಪೇಟಾಟದ ಜೂಜು ಏರ್ಪಡಿಸುತ್ತಾರೆ.  ಇಂಥ ಶೋಕಿಗಳು ಸಂಸ್ಕೃತಿಗೆ ಮಾರಕ ಎನ್ನುವ ಮಾತನ್ನು ಯಾರೂ ಆಡುತ್ತಿಲ್ಲ.
 ತಮ್ಮ ಸಂಸ್ಕೃತಿಯ ಪತನವಾಯಿತು ಎಂದು ಅರಚುವ ಮಂದಿ ಕೊಡಗಿನ ಸಂವೇದನೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನಾಂಗವೊಂದಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವುದಾದರೆ  ಉಳಿದ ಜನಾಂಗಕ್ಕೂ ಅವರವರ ಆಚಾರ ವಿಚಾರಗಳು , ಸಂಸ್ಕೃತಿಗಳು ಇದ್ದೇ ಇರುತ್ತವಲ್ಲ. ಹಾಗಾದರೆ ಅವರ ಹೆಸರಲ್ಲೂ ರಾಜ್ಯಗಳ ಬೇಡಿಕೆ ಇಡಬಹುದೇ?
ಜಾತಿಗಾಗಿ ರಾಜ್ಯ. ಆ ಜಾತಿ ಎಂದರೆ ಕೇವಲ ಜಾತಿಯಲ್ಲ. ಅದು ಧರ್ಮ. ಅದು ಖಂಡಿತಾ ಹಿಂದೂ ಧರ್ಮವಲ್ಲ  ಎಂದು ವಾದಿಸುವ ವಿಚಿತ್ರ ಜನರು ಇನ್ನೂ ಇದ್ದಾರೆ. ಕೊಡವರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂಬ ಕೂಗು ಬೇರೆ. ರಾಜಕೀಯ ಪ್ರಾತಿನಿಧ್ಯವನ್ನು ಜಾತಿ ಲೆಕ್ಕಾಚಾರದಲ್ಲಿ ಸಂವಿಧಾನ ಮಾಡಿಲ್ಲ, ಅಂಥದ್ದರ ಬಗ್ಗೆ ಮಾತಾಡಲೂ ಬಾರದು ಎಂಬ ನಾಚಿಕೆಯೇ ಇಲ್ಲದೆ  ಕೆಲವರು  ಗಂಟಲು ಹರಿಯಬಿಡುವುದು ಇಂದೂ ನಿಂತಿಲ್ಲ. ಕೇಳಿದವರಿಗೇ ನಾಚಿಕೆಯೆನಿಸಬೇಕು ಎಂಬಷ್ಟು  ಕಠೋರತೆಗಳು.  ಇವೆಲ್ಲಕ್ಕೂ ಅವರಲ್ಲಿ ಚಿಲ್ಲರೆಚಿಲ್ಲರೆಯಾದ ಉತ್ತರಗಳು ಸಿದ್ಧವಿರುತ್ತವೆ. " ಕೊಡವ ಎಂದರೆ ಹಿಂದೂ ಧರ್ಮದ ಪವಿತ್ರ ಶಾಖೆಯಲ್ಲವೇ?" ಎಂದರೆ "ಯಾರೆಂದರು ಹಾಗೆಂದು ? ನಾವು ವಿದೇಶದಿಂದ ಬಂದವರು. ದ್ರಾವಿಡರಲ್ಲ ಆರ್ಯರು" ಎಂಬ ಕುಸಿದುಹೋದ ವಾದವನ್ನು ಮಂಡಿಸುತ್ತಾರೆ. "ದಬ್ಬಾಳಿಕೆ ಯಾರು ಮಾಡುತ್ತಿದ್ದಾರೆ? " ಎಂದರೆ "ಕರ್ನಾಟಕದವರು" ಎಂದು ಅಬ್ಬರಿಸುತ್ತಾರೆ.
  ಇಂದು ಪ್ರತ್ಯೇಕ ರಾಜ್ಯದ ಅಬ್ಬರದಲ್ಲಿ ಮುಳುಗಿದ್ದ ಹಲವರಿಗೆ ಜ್ನಾನೋದಯವಾಗಿದೆ. ಆದರೆ ಸಂಪೂರ್ಣ ದನಿ ಹೂತುಹೋಗಿಲ್ಲ.  ಏಕೆಂದರೆ ಭಾವನೆಗಳನ್ನು ಅರಳಿಸುವ ಕೆಲಸವನ್ನು ಮಾಡುವವರು ತೆಪ್ಪಗಿದ್ದಾರೆ. ಮತ್ತು ಕಲ್ಯಾಣ ಮಂಟಪಗಳನ್ನು ಕಟ್ಟಿಸುತ್ತಿದ್ದಾರೆ. ಆದ್ದರಿಂದ ಭಾವನೆಗಳನ್ನು ಕೆರಳಿಸುವವರು ಯುವ ಪೀಳಿಗೆಯನ್ನು ಕೆರಳಿಸುತ್ತಿದ್ದಾರೆ. ಇದು ಮುಂದೊಂದು ದಿನಕ್ಕೆ ಅಪಾಯ ಕಟ್ಟಿಟ್ಟದ್ದು ಎನ್ನುವುದರಲ್ಲಿ ಸಂದೇಹವಿಲ್ಲ. ಕೊಡಗಿನಲ್ಲಿ  ಎಲ್ಲರೂ ಪ್ರತ್ಯೇಕ ರಾಜ್ಯವನ್ನಾಗಲೀ ಅಥವಾ ಸ್ವಾಯತ್ತೆಯನ್ನಾಗಲೀ ಬೆಂಬಲಿಸುವವರಿಲ್ಲ. ಕೊಡವರಲ್ಲೂ ಎಲ್ಲರೂ ಪ್ರತ್ಯೇಕತಾವಾದಿಗಳಲ್ಲ. ಚಿಂತಕರು, ಸಮಾಜದ ಬಗ್ಗೆ ಕನಸ್ಸು ಕಂಡವರಿಗೆ ಹೃದಯ ವೈಶಾಲ್ಯವಿದೆ. ವೈಚಾರಿಕ ಜಾಗೃತಿಯಿದೆ. ಅವೆಲ್ಲವೂ ಇಲ್ಲದವರು ಅವೆಲ್ಲವೂ ಅರ್ಥವಾಗದವರು ಅಸಹನೆ ಬೆಳೆಸಿಕೊಂಡಿದ್ದಾರೆ.
ತನ್ನದಲ್ಲದರ ಬಗೆಗಿನ ಅಸಹನೆಗಳು ಕೂಡಾ ತೀವ್ರವಾದ ಅಪಾಯವನ್ನು ಹೊತ್ತಿರುತ್ತವೆ.  ಇಂದಿನ ರಾಜಕಾರಣದ ಹೊಲಸುತನ, ಸಿಕ್ಕವರಿಗೆ ಸಿಕ್ಕ ಸೀರುಂಡೆ, ಸಿಗದವರ ನಾಲಗೆಯಲ್ಲಿ ಬುಳುಬುಳನೆ ಬರುವ ಆಸೆಯ ನೀರುಗಳಿಗೆ ಭಾವನೆಗಳೂ ಸಿದ್ಧಾಂತಗಳಂತೆ ಕಂಡುಬಿಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿ ಇಂದು ಕೊಡಗಿನಲ್ಲಿ ಪರಿಸರ ರಕ್ಷಿಸಲು ಯುನೆಸ್ಕೋ ಬಂದಾಗ " ನೀವಾರು ಬರಲು"ಎಂದು ಅಬ್ಬರಿಸುತ್ತಾರೆ. ಅಕ್ರಮ ಮರಳು ದಂದೆಯಲ್ಲೂ "ನಮ್ಮವರು ತಾನೇ" ಎಂಬ ಸಮಜಾಯಿಷಿ ಹುಟ್ಟಿಕೊಳ್ಳುತ್ತವೆ. ಜನಾಂಗದಲ್ಲಿ ವೈಚಾರಿಕ ಕೊರತೆಯಿದೆಯಲ್ಲವೇ ಎಂಬುದೂ ಅರಿವಿಗೆ ಬಾರದೇ ಹೋಗುತ್ತಿದೆ. ಜನಾಂಗದ ಒಗ್ಗಟ್ಟಿನ ಹೆಸರಲ್ಲಿ ಇಸ್ಪೇಟಾಟವೂ ನಡೆದರೆ ತಪ್ಪೇನು ಎನ್ನಿಸಲಾರಂಭಿಸುತ್ತದೆ.
ವಿಚಿತ್ರ ಎನಿಸುತ್ತದೆ. ಇಂಥ ತೀವ್ರತರವಾದ ಭಾವನೆಗಳವರು ಕೇಳುತ್ತಿರುವುದು  ರಾಷ್ಟ್ರವನ್ನಲ್ಲವಲ್ಲ, ರಾಜ್ಯವನ್ನು ತಾನೇ ಎಂದುಕೊಳ್ಳುವಂತೆಯೂ ಇಲ್ಲ. ಏಕೆಂದರೆ ತನ್ನದಲ್ಲದರ ಬಗೆಗೆ ತೀವ್ರವಾದ ಅಸಹನೆಯನ್ನು ಹೊಂದಿರುವ ಯಾವ ಬೇಡಿಕೆಯೂ ಈಡೇರಬಾರದು. ರಾಜ್ಯವಷ್ಟೇ ಅಲ್ಲ ಒಂದು ಗರಿಕೆಯನ್ನೂ ಹಾಗೆ ಯಾರೂ ಪಡೆದುಕೊಳ್ಳಲು ಸಾಧ್ಯವಾಗಬಾರದು.
 ಪತ್ರಕರ್ತ ಪಿ.ಟಿ. ಬೋಪಣ್ಣನವರ " ಕೊಡಗು ರಾಜ್ಯದ ಉದಯ- ಪತನ " ಪುಸ್ತಕವನ್ನೋದುವಾಗ ಈ ಸಂಗತಿಗಳೆಲ್ಲವೂ ಉಲ್ಲೇಖವಾಗಲಿಲ್ಲವಲ್ಲ ಎನಿಸಿತ್ತು.

ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದು ರಿ.


  "ನೆಹರೂ ನಿವೃತ್ತರಾಗುವುದಿಲ್ಲ" ಎಂಬ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವನವೊಂದಿದೆ. ಎಷ್ಟೇ ವರ್ಷ  ಪ್ರಧಾನಿಯಾದರೂ ಇನ್ನೂ ಅಧಿಕಾರವನ್ನು ಬಿಟ್ಟುಕೊಡದ ನೆಹರೂ ನಿಲುವನ್ನು  ಆ ಕವನದಲ್ಲಿ ವ್ಯಂಗ್ಯ ಮಾಡಲಾಗಿತ್ತ್ತು. ಆ ಪರಿಸ್ಥಿತಿಯೂ ಹಾಗೆಯೇ ಇತ್ತು. ಏಕೆಂದರೆ ಕಾಂಗ್ರೆಸಿನಲ್ಲಿ ಎಲ್ಲರೂ ಸೊಂಟ ಬಿದ್ದುಹೋದವರೂ ಕಣ್ಣು ಮಂಜಾದವರೂ ಕೈ ನಡುಗುವವರೂ ಹೆಚ್ಚಾಗುತ್ತಲೇ ಇದ್ದರು. ಸ್ವಾತಂತ್ರ್ಯ ಹೋರಾಟದ ಪ್ರಭಾವಳಿಯಿಂದ  ಯಾರೂ ಕೂಡ ನಿವೃತ್ತರಾಗುವ ಯೋಚನೆಯನ್ನೇ ಬಿಟ್ಟುಬಿಟ್ಟಿದರು. ಪ್ರಮುಖವಾಗಿ ನೆಹರೂಗೇ ಆ ಯೋಚನೆ ಇರಲಿಲ್ಲ.
ಕಾಂಗ್ರೆಸ್ ಎಂದರೆ ಹಾಗೆಯೇ.
ಅಲ್ಲಿ ಇಂದಿಗೂ ಯಾರೂ ಬೇಗನೆ ನಿವೃತ್ತರಾಗುವುದಿಲ್ಲ.  ಆದರೆ ಬೇಗನೆ ನಾಯಕರುಗಳು  ಹುಟ್ಟಿ ಬಿಡುತ್ತಾರೆ. ರಾತ್ರೋರಾತ್ರಿ ಯುವನಾಯಕರು ಉದಿಸಿಬಂದುಬಿಡುತ್ತಾರೆ. ಕಾಂಗ್ರೆಸಿನ ಮತ್ತೊಂದು ಗುಣವೆಂದರೆ ಅದರ ಕೃಪಾಕಟಾಕ್ಷವಿದ್ದರೆ ಯಾರೂ ಕೂಡ ನಿವೃತ್ತರಾಗುವುದಿಲ್ಲ. ಕಾಂಗ್ರೆಸಿನಲ್ಲಿ ಅವರೆಲ್ಲರಿಗೂ ಒಂದಲ್ಲಾ ಒಂದು ಸ್ಥಾನವಿದೆ. ಮುದುಕ ರಾಜೇಂದ್ರ ಸಾಚಾರ್ ನ್ಯಾಯಮೂರ್ತಿಯಾಗಿ ನಿವೃತ್ತರಾದರೂ ಕಾಂಗ್ರೆಸಿನ ಪ್ರಕಾರ ನಿವೃತ್ತರಾಗಲಿಲ್ಲ, ೮೦ ವರ್ಷದ ಎನ್.ಡಿ.ತಿವಾರಿ ಸಕ್ರೀಯ ರಾಜಕಾರಣದಿಂದ ನಿವೃತ್ತರಾದರೂ ರಾಜಭವನದೊಳಗೆ ಸೇರಿ ಮಾಡಬಾರದ್ದನ್ನು ಮಾಡಿದರು.ಇದೀಗ ಇನ್ನೊಬ್ಬರಿದ್ದಾರೆ. ದಿಲೀಪ್ ಪಡಗಾಂವ್‌ಕರ್. ದೇಶದ ಖ್ಯಾತ ಪತ್ರಕರ್ತರು ಎಂದುಕೊಂಡವರು. ಅವರು ಇಂದು ಪತ್ರಿಕೋದ್ಯಮದಿಂದ ನಿವೃತ್ತರಾಗಿದ್ದಾರೆ. ಆದರೆ  ಕಾಂಗ್ರೆಸಿನಿಂದ ನಿವೃತ್ತರಾಗಿಲ್ಲ. ಏಕೆಂದರೆ ಸರಕಾರ ಅವರ ನೇತೃತ್ವದಲ್ಲಿ ತ್ರಿಸದಸ್ಯ ತಂಡವೊಂದನ್ನು ರಚಿಸಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ  ವರದಿಯೊಂದನ್ನು  ಕೇಳಿತ್ತು. ೨೦೧೦ರ ಅಕ್ಟೋಬರ್ ನಲ್ಲಿ ರಚನೆಯಾದ ಈ ಸಂವಾದಕಾರರ ತಂಡದಲ್ಲಿ   ದಿಲೀಪ್ ಪಡಗಾಂವ್‌ಕರ್, ರಾಧಾಕುಮಾರ್ ಮತ್ತು ಎಂ.ಎಂ. ಅನ್ಸಾರಿ ಎಂಬ ಮೂವರು ಸದಸ್ಯರಿದ್ದರು. ಈ ತ್ರಿಸದಸ್ಯರ ತಂಡ ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು. ಕೇಂದ್ರ ಸರಕಾರ  ಸಂಸತ್ ಅಧಿವೇಶನದ ಅವಧಿಯನ್ನು ತಪ್ಪಿಸಿ ಚರ್ಚೆಯಿಂದ ತಪ್ಪಿಸಿಕೊಂಡಿತು. ಏಕೆಂದರೆ ವರದಿಯಲ್ಲಿ ಉಲ್ಲೇಖಿತ  ಅಂಶಗಳು ಮತ್ತು ಬೇಡಿಕೆಗಳು  ಯಾವ ಸಾಚಾರ್ ವರದಿಗಿಂತಲೂ, ಯಾವ ಹುರಿಯತ್ ನ  ಅಶಯಕ್ಕಿಂತಲೂ ಭಿನ್ನವಾಗಿರಲಿಲ್ಲ. ೧೮೦ ಪುಟಗಳ ಆ ವರದಿಯ ಯಾವ ಭಾಗವನ್ನು ನೋಡಿದರೂ  ಅಭಾರತೀಕರಣವೇ ಕಾಣುತ್ತದೆ. ಅಂದರೆ ತ್ರಿಸದಸ್ಯರ ತಂಡಕ್ಕೆ ಕಾಶ್ಮೀರ ಇನ್ನೂ ಅರ್ಥ ಆಗಿಯೇ ಇಲ್ಲ ಎಂಬ ಸಂಗತಿ ಎದ್ದು ಕಾಣುತ್ತದೆ. ಏಕೆಂದರೆ,
 ಜಮ್ಮು ಮತ್ತು ಕಾಶ್ಮೀರವನ್ನು ದಕ್ಷಿಣ ಏಷ್ಯಾದ ಹೆಬ್ಬಾಗಿಲು ಎಂಬ ಅರ್ಥದಲ್ಲೇ ಇಡೀ ವರದಿ ಸಾಗುತ್ತದೆ.
ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ಭಾರತದಿಂದ ಸಂಪೂರ್ಣ ಹೊರಗಿರುವ ಅಂಗ ಎಂಬ ಭಾವನೆಯಲ್ಲೇ ಎಲ್ಲಾ ಚರ್ಚೆ, ಮಾತುಕತೆ, ಅಧ್ಯಯನ, ಶೋಧ ನಡೆದಿದೆ.

  • ಭಯೋತ್ಪಾದಕರ ಕುಟುಂಬಗಳಿಗೆ ಮರುಗಿದಷ್ಟು ಈ ತಂಡ ಕಾಶ್ಮೀರಿ ಪಂಡಿತರ ಬಗ್ಗೆ ಮರುಗಿಲ್ಲ. ಇತರ ಆಯೋಗ , ಸಮಿತಿಗಳು ಹೇಳಿರುವಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಆಶಯವನ್ನು ಇದು ವ್ಯಕ್ತಪಡಿಸಿದೆ.
  • ತ ೧೯೯೪ರ ಭಾರತದ ಪಾರ್ಲಿಮೆಂಟು ಪಾಸು ಮಾಡಿದ ನಿರ್ಣಯವನ್ನು  ಈ ವರದಿ ಮರೆತುಹೋಗಿದೆ.
  • ಶಿಯಾಗಳ ಸಂಖ್ಯೆ ಹೆಚ್ಚಿರುವ ಕಣಿವೆ ಭಾಗದತ್ತಲೇ ಎಲ್ಲಾ ಅನುಕಂಪಗಳು ಹರಿದು ಬಂದಿವೆ. ಬೌದ್ಧರು ಹೆಚ್ಚಿರುವ ಲೇಹ್ ಮತ್ತ್ತು ಲಡಾಕ್ ಪ್ರದೇಶಗಳ ಮೇಲೆ ಹೆಚ್ಚು ಒತ್ತು ನೀಡಿಲ್ಲ.
  •  ತಂಡ ಸಮಾಜದ ವಿವಿಧ ಸ್ತರಗಳ ಜನರನ್ನು ಭೇಟಿ ಮಾಡಿರಬಹುದು. ಆದರೆ ಜಮ್ಮು ಮತ್ತು ಕಾಶ್ಮೀರದ ಇತಿಹಾಸವನ್ನೇ ತಿಳಿದಿಲ್ಲ. ಏಕೆಂದರೆ ವರದಿಯಲ್ಲಿ ಒಂದು ಕಡೆ "ನೆಲದ ಮೇಲಿನ ಭಾವುಕತೆ" ಎಂಬ ಪದಪ್ರಯೋಗ ನಡೆದಿವೆ. ಇದು ಇತಿಹಾಸದ ಅರಿವಿಲ್ಲದವರ ಮಾತುಗಳೆಂಬುದು ಸ್ಪಷ್ಟ.
  • ಸಂವಿಧಾನದ ೩೭೦ನೇ ವಿಧಿಯಲ್ಲಿರುವ ತಾತ್ಕಾಲಿಕ ಪದವನ್ನು ಕಿತ್ತೊಗೆಯಬೇಕು ಎಂಬ ವಿಚಿತ್ರವಾದ ಸಲಹೆಯನ್ನು ಮಾಡಿದೆ. ಸಂಪೂರ್ಣ ದೇಶವೇ ಸಂವಿಧಾನದಲ್ಲಿ ೩೭೦ ಎಂಬ ವಿಧಿಯೇ ಬೇಡ ಎಂದು ಕಿರುಚುತ್ತಿರುವಾಗ ಈ ಮೂವರು ಮಾತ್ರ  ೩೭೦ರ ವಿಧಿಯನ್ನು ಶಾಶ್ವತಗೊಳಿಸಬೇಕು ಎಂದಿದೆ.
  •  ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಿರುವ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹುದ್ದೆಗಳನ್ನು ಬಿಟ್ಟು  ಎಲ್ಲಾ  ಹುದ್ದೆಗಳನ್ನು  ಉರ್ದು ಭಾಷೆಯಲ್ಲಿ ಹೆಸರಿಸಬೇಕು  ಎಂದು ವರದಿ ಹೇಳುತ್ತದೆ.
  •  ಪಾರ್ಲಿಮೆಂಟ್ ಜಮ್ಮು-ಕಾಶ್ಮೀರಕ್ಕೆ ಇನ್ನ್ನೂ ಹೆಚ್ಚಿನ ವಿಶೇಷ ಸ್ಥಾನಮಾನವನ್ನು ನೀಡತಕ್ಕದ್ದು  ಎನ್ನುವ ಹಂಬಲ  ಈ  ವರದಿಯದ್ದು.
  •  ಸದ್ಯ ಎಲ್ ಓ ಸಿ  ಎಂದು ಕರೆಯಲಾಗುವ  ರೇಖೆಯಲ್ಲಿ  ಮುಕ್ತ ವ್ಯಾಪಾರ, ಮುಕ್ತ ಸಂಚಾರಕ್ಕೆ  ಅನುವು ಮಾಡುವುದರ  ಮೂಲಕ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಬಹುದು ಎಂದು ವರದಿ ಹೇಳುತ್ತದೆ ಮತ್ತು ಎಲ್ ಓ ಸಿ  ಯ ಬಗೆಗಿನ ವಿವಾದಗಳ ಬಗೆ ಹೇಳಲು ಹೋಗಿಲ್ಲ.
  •  ಭಾರತದ ನೆಲವೇ ಆಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನ್ ಭಾಗಗಳು ನೆಹರೂ ನೀತಿಯಿಂದ  ಮತ್ತು  ಪಾಕ್‌ನ ಆಕ್ರಮಣಕಾರಿ ನೀತಿಯಿಂದ "ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ" ಆಗಿರುವುದು  ದೊಡ್ಡ ಪ್ರಮಾದ. ಆದರೆ ವರದಿಯಲ್ಲಿ  "ಪಾಕ್ ಆಕ್ರಮಿತ" ಎನ್ನುವಲ್ಲೆಲ್ಲಾ "ಪಾಕ್ ಆಡಳಿತದ ಕಾಶ್ಮೀರ" ಎಂದು ಉಲ್ಲೇಖಿಸಿದೆ.  ಸಂವಾದಕಾರರ ತಂಡಕ್ಕೆ ಈ ಅಧಿಕಾರ ಕೊಟ್ಟವರಾರು?
  •  ಜಮ್ಮು ಮತ್ತು ಕಾಶ್ಮೀರ  ದಕ್ಷಿಣ ಮತ್ತು ಮಧ್ಯ ಏಷ್ಯಾದ ನಡುವಿನ ಸೇತುವೆ ಎನ್ನುವ ಸಂವಾದಕಾರರ ತಂಡ, ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು  ಮರೆಯಲು ಕಾರಣವೇನು?
ಹೀಗೆ ಹುಚ್ಚುಚ್ಚಾಗಿ ಸಾಗುವ ವರದಿಯನ್ನು ನೋಡಿದರೆ ಮತ್ತು ಈ ಮೂವರು ಸಂವಾದಕಾರರ ಮುಖವನ್ನು  ನೋಡಿದರೆ ಇವರು ಮೂರುನಾಲ್ಕು  ವರ್ಷಗಳ ಕಾಲ ಭರ್ಜರಿ ಗಮ್ಮತ್ತಿನ ಜೀವನವನ್ನು ನಡೆಸಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಮೂವರು ಸದಸ್ಯರ ತಂಡ ಒಂದು ಪೀಠವೂ ಅಲ್ಲ, ಆಯೋಗವೂ ಅಲ್ಲ. ಒಂದು ಸಂವಾದಕಾರರ ತಂಡ ಮಾತ್ರ . ಪ್ರವಾಸ ಮಾಡಿ, ಮಾತನಾಡಿ   ಕೊಟ್ಟ ವರದಿ. ಅಂದರೆ ಇದು ಸಂವಿಧಾನಾತ್ಮಕ  ಚೌಕಟ್ಟಿನಲ್ಲಿ ರಚನೆಯಾದದ್ದಲ್ಲ. ಆದರೆ ಸಂವಿಧಾನದ  ಬೇರುಗಳನ್ನೇ ಈ ಮೂವರು ಅಲ್ಲಾಡಿಸಿದ್ದಾರೆ. ಏಕೆಂದರೆ ವರದಿಯ  ಪ್ರತೀ ಪದದಲ್ಲೂ ಭಾರತದ ಸಂವಿಧಾನ, ಸಾರ್ವಭೌಮತೆಯನ್ನು , ಘನತೆಯನ್ನು ದಿಕ್ಕರಿಸಿದ  ವಾಸನೆಗಳಿವೆ. ಉದಾಹರಣೆಗೆ  ಭಾರತದ  ಸಂವಿಧಾನ ಯಾವ ರಾಜ್ಯಗಳಿಗೂ ಪರಮಾಧಿಕಾರವನ್ನು ಕೊಟ್ಟಿಲ್ಲ.  ಆದರೆ ವರದಿಯ ಸಲಹೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಪರಮಾಧಿಕಾರ ಕೊಡುವ ಅರ್ಥದ ಸಲಹೆಗಳಿವೆ. ೧೯೯೪ರ  ಫೆಬ್ರವರಿ  ೨೨ರಂದು  ಭಾರತೀಯ ಸಂಸತ್ತು ಒಕ್ಕೊರಲಿನಿಂದ 
  • ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ  ಭಾರತದ ಅವಿಭಾಜ್ಯ  ಅಂಗವಾಗಿದೆ. ಈ ಭಾಗದ ಮೇಲೆ ನಡೆಯುವ ಯಾವುದೇ ಅತಿಕ್ರಮಣ, ಭಾರತ ವಿರೋಧಿಯಾಗಿದ್ದು, ಭಾರತ ಅದನ್ನು ವಿರೋಧಿಸುತ್ತದೆ.ಭಾರತ ತನ್ನ ಸಾರ್ವಭೌಮತೆ, ಸಮಗ್ರತೆಗಳನ್ನು ರಕ್ಷಿಸಿಕೊಳ್ಳಲು ಎಲ್ಲಾ ಕ್ರಮಗಳನ್ನ್ನು ಕೈಗೊಳ್ಳುತ್ತದೆ.
  •  ಪಾಕಿಸ್ಥಾನ ತಕ್ಷಣವೇ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಚಟುವಟಿಕೆಗಳನ್ನು ನಿಲ್ಲಿಸುವುದು.
  •   ತನ್ನ ಆಂತರಿಕ ಆಡಳಿತದ ಮೇಲೆ ಹಸ್ತಕ್ಷೇಪ ಮಾಡುವ  ಯಾವುದೇ ಶಕ್ತಿಗಳನ್ನು  ಭಾರತ ಸಹಿಸುವುದಿಲ್ಲ.
ಎಂಬ ನಿರ್ಣಯವನ್ನು ಪಾಸು ಮಾಡಿತು. ಭಾರತದ ಇತಿಹಾಸದಲ್ಲಿ ಇದೊಂದು ಮಹತ್ತ್ವದ ಸಂದರ್ಭ. ಈ ನಿರ್ಣಯದ ಮೂಲಕ ಉತ್ತರಭಾಗದ "ಪಾಕ್ ಆಕ್ರಮಿತ ಕಾಶ್ಮೀರ" ಎಂಬುದನ್ನೇ ಭಾರತ ಅಲ್ಲಗಳೆಯಿತು. ಆದರೆ ಈ ಮೂವರು ಅದನ್ನು "ಪಾಕ್ ಆಡಳಿತದ ಕಾಶ್ಮೀರ" ಎಂದರು. ಸಂವಿಧಾನವಿರೋಧಿಯಲ್ಲವೇ? ಅಂಥ ವರದಿಯನ್ನು ಸಂವಾದಕಾರರ ತಂಡ ಕೇಂದ್ರ ಸರ್ಕಾರಕ್ಕೇ ಕೊಡುವ ಧೈರ್ಯ ಹೇಗೆ ಮಾಡಿತು? ಕೊಟ್ಟರೂ ಕೇಂದ್ರ ಸರಕಾರಕ್ಕೇನೂ ಅದರಿಂದ ಆಘಾತವಾಗಿಲ್ಲವೇಕೆ? ನಿವೃತ್ತರಿಗೆ ಕೆಲಸ ವಹಿಸಿದಾಗಲೇ ಕೇಂದ್ರದ ಬಳಿ ವರದಿಯ ಕರಡು ಪ್ರತಿಗಳಿದ್ದವೋ ಏನೋ. ಇನ್ನು ೩೭೦ ನೇ ವಿಧಿಯಲ್ಲಿ "ತಾತ್ಕಾಲಿಕ" ಎಂದು ಇರುವ ಪದವನ್ನು ತೆಗೆಯಬೇಕು ಎನ್ನುವವರನ್ನು ಭಾರತೀಯರು ಎಂದು ಹೇಳಲೇಬೇಕೆನಿಸುವುದಿಲ್ಲ. ಏಕೆಂದರೆ ಅಲ್ಲೆಲ್ಲೋ ಪಾಕಿಸ್ಥಾನದ ಆಡಳಿತಗಾರನೂ ಹೇಳುವುದೂ ಅದನ್ನೇ. ಕಣಿವೆಯಲ್ಲಿ ಕಲ್ಲೆಸೆಯುವವನು ಹೇಳುವುದೂ ಅದನ್ನೇ. ಅದನ್ನೇ ಈ ಮೂವರು ಹೇಳಿದರೆ ಅವರನ್ನು  ಭಾರತೀಯರು ಎಂದು ಕರೆಯಬೇಕೆನಿಸುವುದಿಲ್ಲ. ೩೭೦ರ ವಿಚಿತ್ರವಾದ ವಿಧಿಯಿಂದ ಭಾರತ ಅನುಭವಿಸಿದೆಷ್ಟಿದೆ? ಒಮ್ಮೆ ಜಮ್ಮು ಮತ್ತು ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಭಕ್ಷಿ ಗುಲಾಮ್ ಮಹಮ್ಮದ್ ಅವರು ಪಂಜಾಬಿನ ಅಮೃತಸರದಿಂದ ವಾಲ್ಮೀಕಿ ಸಮುದಾಯದ ೭೫ ಕುಟುಂಬಗಳನ್ನು ಜಮ್ಮುವಿಗೆ ಕರೆಸಿಕೊಂಡರು. ನಗರದ ಸ್ವಚ್ಛತೆಗಾಗಿ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಇಂದು ಆ ಕುಟುಂಬದ  ಮೂರನೇ ಪೀಳಿಗೆ ಕಣ್ಣು ತೆರೆದಿದೆ. ವಿದ್ಯಾವಂತರಾಗಿದ್ದಾರೆ. ಯುವಕರು ವೈದ್ಯಕೀಯ, ಇಂಜಿನಿಯರಿಂಗ್, ಸಿ.ಎ ಮಾಡಿಕೊಂಡಿದ್ದಾರೆ. ಆದರೆ ಅವರಾರಿಗೂ  ರಾಜ್ಯದಲ್ಲಿ ಸರಕಾರಿ ಕೆಲಸ ಸಿಗುವಂತಿಲ್ಲ. ಏಕೆಂದರೆ ೩೭೦ರ ವಿಧಿಯ ಪ್ರಕಾರ ಅವರು ಅಲ್ಲಿನ ನಾಗರಿಕರಲ್ಲ. ಅವರು ಭಾರತೀಯರಾದರೂ ಜೆ ಆಂಡ್ ಕೆ ಯವರಲ್ಲ. ೩೭೦ರ ವಿಧಿಯ ಪ್ರಕಾರ ಆ ಯುವಕರು ಸರಕಾರದ ಅಡಿಯಲ್ಲಿ ಕಸಗುಡಿಸಬಹುದಷ್ಟೇ. ಪಡಗಾಂವ್‌ಕರರ ತಂಡಕ್ಕೆ ಇದಾವುದೂ ಗೊತ್ತೇ ಆಗಲಿಲ್ಲ. ಅಲ್ಲದೆ ಕಳೆದ ೨೦೦೨ರಲ್ಲಿ ನಡೆದ ಮತದಾರ ಕ್ಷೇತ್ರಗಳ ವಿಂಗಡಣೆಯಲ್ಲಿ ದೇಶಾದ್ಯಂತ ಬದಲಾವಣೆಯಾದರೂ ಜಮ್ಮು ಮತ್ತು  ಕಾಶ್ಮೀರದಲ್ಲಿ ವಿಂಗಡಣೆ ನಡೆಯಲಿಲ್ಲ. ಏಕೆಂದರೆ ಆರ್ಟಿಕಲ್ ನಂಬರ್ ೩೭೦! ಚುನಾವಣೆಗಳ ಸಂದರ್ಭದಲ್ಲಿ ಅಭಿಮನ್ಯುವಿನಂತೆ ವರ್ತಿಸುವ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಮಾತ್ರ ನರಸತ್ತ ವೀರ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಮೋಚ್ಛ ರಾಜ್ಯಪಾಲರನ್ನು ನೇಮಿಸುವ "ವಿಪರೀತ" ದ ಸಲಹೆಯನ್ನೂ  ಈ ವರದಿ ಮಾಡಿದೆ. ಹೀಗಿರುವ ಜಮ್ಮು ಮತ್ತು ಕಾಶ್ಮೀರವು single unit ಆಗಿರಬೇಕು ಎಂದು ಪುಕ್ಕಟೆ ಸಲಹೆಯನ್ನು ಅದು ಮಾಡುತ್ತದೆ. ವರದಿಯಲ್ಲಿ ಇರುವುದೆಲ್ಲವೂ ಇಂಥ ಪುಕ್ಕಟೆ ಸಲಹೆಗಳೇ.ಸಂಪೂರ್ಣ ವರದಿ ಸಲಹೆಗಳಿಂದ ತುಂಬಿಹೋಗಿದೆ. ಹೆದರಿಕೆಯಾಗುವುದು ಇಂಥ ಪುಕ್ಕಟೆ ಸಲಹೆಗಳಿಂದಲ್ಲ. ಅದನ್ನು ಚಾಚೂ ತಪ್ಪದೆ ಪಾಲಿಸಿಬಿಡುವ ತುಘಲಕ್ ಮಂಡೆಯ ಸರಕಾರಗಳಿಂದ.
ಸ್ವತಂತ್ರವಾಗಿ ಅಲೋಚನೆ ಮಾಡುವ ಯಾರಿಗೇ ಆದರೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ಅರಿವಾಗುತ್ತದೆ. ಸಮಸ್ಯೆ ಯಾರಿಂದ ಮತ್ತು ಎಲ್ಲೆಲ್ಲಿದೆ ಎಂಬುದು ನಿಚ್ಚಳವಾಗುತ್ತವೆ. ಆದರೆ ಸರಕಾರಗಳಿಗೆ ಮಾತ್ರ ಇನ್ನೂ ವರದಿಯನ್ನು ತರಿಸಿ, ಅನುಷ್ಠಾನದ ಹೆಸರಿನಲ್ಲಿ ಕಲ್ಲೆಸೆಯುವವರನ್ನು ಬಾಂಬ್ ಎಸೆಯುವಂತೆ ಮಾಡುವ ಬಯಕೆ. ಜಮ್ಮು ಮತ್ತು ಕಾಶ್ಮೀರವನ್ನು ಮತ್ತಷ್ಟು ದೂರ ಮಾಡುವ ಹುನ್ನಾರ. ಅದಕ್ಕೆ ನಿವೃತ್ತರ ಸಹಾಯ ಬೇರೆ.
ಈ ನಿವೃತ್ತರಾದರೂ ಎಂಥವರು?
ಈ ಪಡಗಾಂವ್‌ಕರ್ ೨೦೦೫ರಲ್ಲಿ  ಅಮೆರಿಕಾದಲ್ಲಿ ನಡೆದ ಎರಡು ದಿನಗಳ ಸಮ್ಮೇಳನವೊಂದರಲ್ಲಿ  ಭಾಗವಹಿದ್ದವರು. ಆ ಸಮ್ಮೇಳನದ ರೂವಾರಿ ಮೊನ್ನೆ ತಾನೇ ಬಂಧಿತನಾದ ಕಾಶ್ಮೀರಿ ಪ್ರತ್ಯೇಕತಾವಾದಿ ಮತ್ತು ಐ.ಎಸ್.ಐ. ಏಜೆಂಟ್ ಗುಲಾಮ್ ನಬಿ ಫಾಯಿ. ಈ ಫಾಯಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ಗತಿ ಕಾಣಿಸುವ ಅಗತ್ಯವಿದೆ. ಆದರೆ ಪಡಗಾಂವಕರನಿಗೆ? ಸಂವಾದಕ್ಕೆ ಕಳುಹಿಸಿದ ಸರಕಾರಕ್ಕೆ?
ಅಷ್ಟಕ್ಕೂ ಈ ಸಂವಾದಕಾರರೆಂದರೆ ಏನು ಎಂಬುದೇ ಅರ್ಥವಾಗುವುದಿಲ್ಲ. ನಮಗೆಲ್ಲರಿಗೂ ಪೀಠಗಳು, ಆಯೋಗಗಳು ಗೊತ್ತಿವೆ. ಜಮ್ಮು ಮತ್ತು ಕಾಶ್ಮೀರದಂತಹ ಸೂಕ್ಷ್ಮವೂ ಮಹತ್ತ್ವವೂ ಆದ ಸಂಗತಿಗೆ ಸಂವಾದಕಾರರು! ಈ ವರದಿಯನ್ನು ನೋಡಿದರೆ ಇವರು ತಿರುಗಾಡಲು ಹೋದ ಪ್ರವಾಸಿಗರು ಎಂದೇ ಅನಿಸುತ್ತದೆ. ಈ ಮೂವರನ್ನು ನೋಡಿದರೆ ಅವರು ಮೋಜನ್ನೂ ಮಾಡಿದರು ಎಂದೂ ಅನಿಸುತ್ತದೆ.
ಟೂರು ಹೋದವರಿಂದ ಯಾರೂ ವರದಿಯನ್ನು ಬರೆಸಿಬಿಡಬಾರದುರಿ.

ಸಮಾಜ ಸುಧಾರಣೆಯೋ? ಸಾಮ್ರಾಜ್ಯ ವಿಸ್ತರಣೆಯೋ?


ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾ ಎಂಬ ಹೆಸರನ್ನು ಕೇಳುವಾಗಲೇ ಎಂಥವರೂ ಒಮ್ಮೆಲೇ ಅಂದಾಜು ತಪ್ಪುತ್ತಾರೆ.  ಅದು ಭಾರತ ಸರಕಾರದ ಜೈಲು ಇಲಾಖೆಯೇನೋ ಎಂಬ ಸಂಶಯ ಬರುತ್ತದೆ. ಆದರೆ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾದ ಚಹರೆಯೇ ಬೇರೆ. ಅದೊಂದು ಎನ್ ಜಿ ಒ. ಕ್ರಿಶ್ಚಿಯನ್ ಎನ್ ಜಿ ಒ. . ದೇಶಾದ್ಯಂತದ ಎಲ್ಲಾ ಜೈಲುಗಳಿಗೆ ಲಗ್ಗೆ ಇಟ್ಟಿರುವ ಸಂಸ್ಥೆ. ಜೈಲು ಹಕ್ಕಿಗಳ ಮನಪರಿವರ್ತನೆಯ ಹೆಸರಲ್ಲಿ ಮತಪರಿವರ್ತನೆ ಮಾಡುವ ನಾಜೂಕಯ್ಯಗಳ ಸಂಘಟನೆ. ಹೀಗೆ ಕ್ರಿಸ್ತನ ಹೆಸರಿನಲ್ಲಿ ಮಾರಾಟ ಮಳಿಗೆಯನ್ನಿಟ್ಟ  ಈ ಸಂಘಟನೆಯಲ್ಲಿ  ಸಾವಿರಾರು ಕಾರ್ಯಕರ್ತರಿದ್ದಾರೆ. ನನ್‌ಗಳಿದ್ದಾರೆ. ಪಾದ್ರಿಗಳಿದ್ದಾರೆ. ಎಂದಿನಂತೆ ಎಲ್ಲಾ ಎನ್ ಜಿ ಒ.  ಗಳಲ್ಲಿರುವಂತೆ ಶೋಕಿಯ, ಬಾಬ್ ಹ್ಯಾರಿನ , ಕುರುಚಲು ಫ್ರಂಚ್ ಗಡ್ಡದ  ಜನರೂ ಇದ್ದಾರೆ.  ಇವರೆಲ್ಲರೂ ದಿನಂಪ್ರತಿ ಮುಂಜಾನೆಯಾಗುತ್ತಲೇ ಏಸು ದೇವನ ಸಂದೇಶವನ್ನು ಹೊತ್ತು ಜೈಲುಪಾಲಾಗುತ್ತಾರೆ. ಕಳ್ಳರು, ಸುಳ್ಳರು ಎಲ್ಲರನ್ನೂ ಪ್ರಾರ್ಥಿಸುವಂತೆ ಮಾಡುತ್ತಾರೆ. ಜೈಲಿನಲ್ಲಿ ಏಕತಾನತೆ, ಖಿನ್ನತೆ, ಜಡತ್ವ, ಮಾನಸಿಕ ವೇದನೆ ಮೊದಲಾದವನ್ನು ಅನುಭವಿಸುತ್ತಿರುವ ಖೈದಿಗಳನ್ನು ಸುಲಭವಾಗಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಅಷ್ಟಕ್ಕೆ ಈ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾದ ಮೊದಲ ಕಾರ್ಯ ಪೂರ್ಣಗೊಳ್ಳುತ್ತದೆ.  ಮುಂದೆ ಜೈಲಿನಿಂದ ಬಿಡುಗಡೆಯಾಗುವ ಖೈದಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲೂ ಇಲ್ಲಿ ವ್ಯವಸ್ಥೆಗಳಿವೆ. ಬೆಂಗಳೂರಿನಲ್ಲಿ ಒಂದು ಆಶ್ರಮವೇ ಇವರಿಗೋಸ್ಕರ ಇದೆ. ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ "ಮನಪರಿವರ್ತನೆ"ಯಾಗಿ ಹ್ಯಾರಿ ಆದ ಹರೀಶ ನಂಥವರಿಗೆ ಆಯಾಯ ಜಿಲ್ಲೆಗಳಲ್ಲಿನ ಮಿಷನರಿ, ಚರ್ಚುಗಳನ್ನು ಆರಿಸಿಕೊಳ್ಳಲು ಅವಕಾಶವಿದೆ. 
ಹಾಗಾದರೆ ಜನರ ಒಡನಾಡಿ ಎಂದುಕೊಲ್ಳುವ ಎನ್ ಜಿ ಒ. ಗಳ ಅಸಲು ಸ್ವರೂಪವೇನು? ಸಮಾಜ ಸುಧಾರಣೆಯ ಹೆಸರಿನಲ್ಲಿ ಅವು ಮಾಡುತ್ತಿರುವುದೇನು? ಹಾಗಾದರೆ ಮತಾಂತರಕ್ಕಿರುವ ಹಲವು ತಂತ್ರಗಳಲ್ಲಿ ಎನ್ ಜಿ ಒ.  ಕೂಡಾ ಒಂದು ತಂತ್ರವೇ? ಮತಾಂತರವಲ್ಲದಿದ್ದರೆ ಹೀಗೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವುದು ಏಕೆ?  ಅಲ್ಲಿ ಪಾದ್ರಿ, ನನ್, ನಿಲುವಂಗಿ, ಶಿಲುಭೆಗಳೇಕೆ? ಈ ಪ್ರಿಸನ್ ಮಿನಿಷ್ಟ್ರೀ ಆಫ್ ಇಂಡಿಯಾ ಎಂಬುದು ಇಂಥ ಕ್ರಿಶ್ಚಿಯನ್ ಎನ್ ಜಿ ಒ.  ಗಳಿಗೆ ಒಂದು ಉದಾಹರಣೆಯೇ ಹೊರತು ಅಂಥದ್ದೇನೂ ಇಂದು ಅಪರೂಪವಲ್ಲ. ಎಲ್ಲೆಲ್ಲಿ ಮತಾಂತರ ಪ್ರತ್ಯಕ್ಷವಾಗಿ ನಡೆಯಲು ಸಾಧ್ಯವಿಲ್ಲವೋ, ಎಲ್ಲೆಲ್ಲಿ  ಮಿಷನರಿಗಳಿಗೆ ನೇರ ಪ್ರವೇಶ ಪಡೆಯಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಅವು ಪ್ರವೇಶಿಸುವುದು ಎನ್ ಜಿ ಒ.  ಎಂಬ ಮುಖವಾಡವನ್ನು ಹೊತ್ತುಕೊಂಡೇ. ಹೀಗೆ ಸಾವಿರಾರು ಎನ್ ಜಿ ಒ.  ಗಳು ಭಾರತದ ದಲಿತ ಕೇರಿಗಳಿಗೆ ನುಗ್ಗಿವೆ. ಹೆಚ್‌ಐವಿ ಎಂದು ಕೂಗಿವೆ. ಲೈಂಗಿಕ ಕಾರ್ಯಕರ್ತೆಯರಿಗೆ ಆಪ್ತವಾಗಿವೆ. ಅಂಗವೈಕಲ್ಯವಿರುವ ಮಕ್ಕಳತ್ತ ಸಾಗಿವೆ.  ವಿಚಿತ್ರ ಎಂದರೆ ಮಿಷನರಿ ಅಥವಾ ಮತೀಯ ಮುಖವನ್ನು ಹೊತ್ತಾಗ ನಡೆಯದ ಕೆಲಸ ಎನ್ ಜಿ ಒ.  ಗಳಿಂದ ಸಾಧಿತವಾಗುತ್ತಿದೆ. ಎನ್ ಜಿ ಒ.  ಗಳದ್ದು ಸಾಮಾಜಿಕ ಸುಧಾರಣೆಯ ಕೆಲಸ. ಆದರೆ ಈ ಎನ್ ಜಿ ಒ. ಗಳದ್ದು ಮಾತ್ರ ಮತಪರಿವರ್ತನೆಯ ಜೊತೆಗೆ ಇನ್ನಿತರ ಉಪವೃತ್ತಿಗಳು.  ಭಾರತದಲ್ಲಿ ಅಪಾರವಾದ ಕೀಳರಿಮೆಯಿಂದ ಬಳಲುತ್ತಿರುವ ಮಧ್ಯಮ ವರ್ಗ ಎಂಬ ಭ್ರಹತ್ ಪಂಗಡ ಇಂಥ ಎನ್ ಜಿ ಒ.  ಗಳನ್ನು ಸುಲಭವಾಗಿ ನಂಬಿಬಿಡುತ್ತದೆ. ಒಂದು ವೆಬ್ ಸೈಟಲ್ಲಿ ಬರೆದಿರುವುದೇ  ಅಂತಿಮವೂ ಪ್ರಶ್ನಾತೀತವೂ ಎಂದುಕೊಳ್ಳುವ ಈ ವರ್ಗ ಯಾವಾಗ ಹೆಚ್ಚಿತೋ ಅಂದಿನಿಂದಲೇ  ಇಂಥ ಎನ್ ಜಿ ಒ. ಗಳೂ ಹೆಚ್ಚತೊಡಗಿದವು. 
 ದೆಹಲಿ ಮೂಲದ India policy foundation ಎಂಬ ಸಂಸ್ಥೆ ಈ ಬಗೆ ಅಧ್ಯಯನವೊಂದನ್ನು ಮಾಡಿದೆ.  ೨೦೦ದಿಂದೀಚೆಗೆ ಭಾರತದಲ್ಲಿ ಹೆಚ್ಚುತ್ತಿರುವ ಕ್ರಿಶ್ಚಿಯನ್ ಚಟುವಟಿಕೆಗಳನ್ನು ಅದು ತಿಳಿಸುತ್ತದೆ. ಮತ್ತು ಹಲವು ಗಂಭೀರ ಪ್ರಶ್ನೆಗಳನ್ನೂ ಭವಿಷ್ಯದ ಬಗೆಗಿನ ಚಿಂತೆಯನ್ನೂ ಈ ಅಧ್ಯಯನ ವರದಿ ಉಂಟುಮಾಡುತ್ತದೆ. ವಿವಿಧ ಸರಕಾರಿ ವೆಬ್‌ಸೈಟುಗಳು, ಸರಕಾರದ ಹೇಳಿಕೆ ಮತ್ತು ಸುತ್ತೋಲೆಗಳು, ಕ್ರಿಶ್ಚಿಯನ್ ಸಂಘಟನೆಗಳ ಪ್ರಕಟಣೆ ಮತ್ತು ಅವುಗಳ ಅಧಿಕೃತ ವೆಬ್‌ಸೈಟುಗಳು, ಮಾಧ್ಯಮಗಳ ವರದಿಗಳು, ತಜ್ನರ ಅಧ್ಯಯನ ಮತ್ತು ಸಂಶೋಧನಾ ವರದಿಗಳು , ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ತಯಾರಿಸಿರುವ ಈ ವರದಿ ಭಾರತದಲ್ಲಿ ಚರ್ಚುಗಳ ಕಾರ್ಯವೈಖರಿ ಮತ್ತು ಎನ್ ಜಿ ಒ. ಗಳ ನಡುವಿನ ನಿಗೂಢ ಸಂಬಂಧವನ್ನು ಸವಿವರವಾಗಿ ತಿಳಿಸುತ್ತವೆ. 
ಈ ಅಂಕಿ ಅಂಶಗಳನ್ನೇ ಗಮನಿಸಿ.
 
  • ಭಾರತದಲ್ಲಿ ಕ್ಯಾಥೋಲಿಕ್ ಚರ್ಚ್ ಕ್ರಿಶ್ಚಿಯನ್ನರಲ್ಲೇ ಅತ್ಯಂತ ಪ್ರಭಾವಿ ಸಂಘಟನೆ. ಈ ಸಂಘಟನೆ ದೇಶದಲ್ಲಿ ೭೬೫೦ ಪ್ರಾಥಮಿಕ ಶಾಲೆಗಳನ್ನು, ೪೫೬೯ ಪ್ರೌಢ ಶಾಲೆಗಳನ್ನು,೧೪೯೪ ಹೈಯರ್ ಸೆಕೆಂಡರಿ ಶಾಲೆಗಳನ್ನು, ೩೨೧ ಕಾಲೇಜು  ಮತ್ತು ೮೬೫ ವಿವಿಧ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತದೆ. 
  •  The church of south india(CSI) ಕೂಡಾ ೨೦೦೦ ಶಾಲೆಗಳು, ೧೩೦ ಕಾಲೇಜುಗಳು ಮತ್ತು ೧೦೪ ಆಸ್ಪತ್ರೆಗಳು, ೫೦ಕ್ಕೂ ಹೆಚ್ಚಿನ ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಕಲ್ಪಗಳು , ಅಷ್ಟೇ ಸಂಖ್ಯೆಯ ಯುವ ತರಬೇತಿ ಸಂಸ್ಥೆಗಳು , ೫೦೦ ಹಾಸ್ಟೆಲ್ ಗಳನ್ನು ನಡೆಸುತ್ತಿವೆ.   
  •  The church of north India(CNI) ಮತ್ತೊಂದು ಚರ್ಚ್ ಸಂಘಟನೆ ಅಥವಾ ಒಕ್ಕೂಟ ೯ ನರ್ಸಿಂಗ್ ಶಾಲೆಗಳು, ೨೫೦ಕ್ಕೂ ಅಕ ವಿವಿಧ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳನ್ನು , ೬೫ಕ್ಕೂ ಅಕ ಆಸ್ಪತ್ರೆಗಳನ್ನು ನಡೆಸುತ್ತಿದೆ.   
  •  Seventh day Adventist ಎಂಬ ಇನ್ನೊಂದು ಕ್ರೈಸ್ತ ಒಕ್ಕೂಟ ೨೨೬ ಶಾಲೆಗಳು ಮತ್ತು ೫ ಕಾಲೇಜುಗಳನ್ನು ನಡೆಸುತ್ತಿದೆ.
ಈ ಎಲ್ಲ ಅಂಕಿ ಅಂಶಗಳನ್ನು ಗಮನಿಸಿದಾಗ, ನಮ್ಮ ಸುತ್ತಮುತ್ತಲೂ ಅದರ ಮೂರ್ತ ರೂಪ ಕಂಡಾಗ ನಮ್ಮ ಮಧ್ಯಮವರ್ಗದ ಮಾನಸಿಕತೆ " ಏನೇ ಆಗಲಿ ಅವರ ಕಾಳಜಿಯನ್ನು ಕೊಂಡಾಡಲೇಬೇಕು" ಎಂದು ಪುಳಕಗೊಳ್ಳುತ್ತದೆ. "ನಮ್ಮ ಸಂನ್ಯಾಸಿಗಳು! ಅಬ್ಬಾ ಕಳ್ಳರು" ಎಂಬ "ನಾಗರಿಕ ಪ್ರಜ್ನೆ"ಯೂ  ಜಾಗೃತವಾಗಿಬಿಡುವುದುಂಟು. ಆದರೆ ಅಸಲು ವಿಷಯದ ಬಗ್ಗೆ ಒಂದಂಗುಲವೂ ಮುಂದಕ್ಕೆ ಆಲೋಚನೆಯನ್ನು ಮಾಡಲಾರರು. ವಿಷಯವೇನೆಂದರೆ ಕ್ಯಾಥೋಲಿಕ್ ಚರ್ಚಿನ ಬಿಷಪರನ್ನು ನೇರವಾಗಿ ವ್ಯಾಟಿಕನ್ನಿನ ಪೋಪರೇ ಆಯ್ಕೆ ಮಾಡುತ್ತಾರೆ. ಇನ್ನುಳಿದ ಒಕ್ಕೂಟಗಳ ಬಿಷಪ್‌ಗಳೂ ಕೂಡಾ ವಿದೇಶಿ ಸಲಹೆಗಳ ಮೇರೆಗೇ ನೇಮಕವಾಗುತ್ತಾರೆ. ಹಾಗಾಗಿ  ಬಿಷಪರು ನೇರವಾಗಿ ವಿದೇಶಿ ಪೋಪರಿಗೆ ನಿಷ್ಠರು ಮತ್ತು ಬದ್ದರು.  ಈ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಕರೂ ಕೂಡಾ ಬಿಷಪರೇ . ಹೀಗೆ ವಿದೇಶಿ ಮಂಡೆಯಿಂದ ಸ್ವದೇಶದಲ್ಲಿ ಕೈಗೊಳ್ಳುವ ಕಾರ್ಯವನ್ನು ಸ್ವದೇಶಿ ಕಾರ್ಯ ಎಂದೇ ಕರೆಯಬೇಕೇ ಎನ್ನುವಲ್ಲಿ ಗೊಂದಲಗಳು ಏರ್ಪಡುವುದೇ ಇಲ್ಲ. ಪೋಪ್ ನಿಷ್ಠ ಬಿಷಪರು ಭಾರತ ನಿಷ್ಠ ಕಾರ್ಯವನ್ನು ಮಾಡುವರು ಎಂದು ಹೇಳಲೂ ಆಗಲಾರದು. ಏಕೆಂದರೆ ಅಂದೊಮ್ಮೆ ಇದೇ ಪೋಪರು" ಹುಲುಸಾದ ಕುಯಿಲಿಗೆ ಭಾರತ ಅತ್ಯಂತ ಪ್ರಶಸ್ತ ನೆಲ" ಎಂದವರಲ್ಲವೇ?  ಭಾರತದ ಬಿಷಪರೂ ಭಾರತ ನಿಷ್ಠರೇ, ಅವರೂ ಇಲ್ಲಿನ ನೆಲಕ್ಕೆ ನಿಷ್ಠರಾದವರೇ ಎನ್ನುವಂತೆಯೂ ಇಲ್ಲ. ಏಕೆಂದರೆ ಅಂಥ ನಿಷ್ಠತೆ ಪೋಪ್ ವಿರೋಧಿಯಾಗುವ ಸಂಭವವಿದೆ. ಅಲ್ಲದೆ ಬಿಷಪರೂ " ಹುಲುಸಾದ ಕುಯಿಲಿಗೆ" ತೊಡಗಿಕೊಳ್ಳದಿದ್ದರೆ ಪೋಪರ ಶಿಷ್ಯರಾಗಲು ಹೇಗೆ ತಾನೇ ಸಾಧ್ಯ?
ಹೀಗೆ ಭಾರತದಲ್ಲಿ ಕ್ರೈಸ್ತಮತ ಸಂಘಟನೆಗಳು ಸುಲಭವಾಗಿ ಸಮಾಜ ಸುಧಾರಣೆಯ ಪಟ್ಟವನ್ನು ಹೊತ್ತುಕೊಂಡುಬಿಡುತ್ತವೆ. ಒಂದೊಮ್ಮೆ ಯುರೋಪಿನಲ್ಲಿ ರಾಜ್ಯದೊಳಗಿನ ರಾಜ್ಯವಾಗಿದ್ದ ಚರ್ಚು ಭಾರತದಲ್ಲಿ ಕಳೆದ ೧೦ ವರ್ಷಗಳ ಅನಂತರ ತೀವ್ರವಾಗಿ ವಿವಿಧ ರೂಪಗಳಿಂದ ತನ್ನ ಹಿಡಿತವನ್ನು ಸಾಸುತ್ತಿದೆ.  ತಮಿಳುನಾಡಿನ ಕೂಡಕುಳಂ ಅಣುವಿದ್ಯುತ್ ಸ್ಥಾವರವನ್ನು ವಿರೋಧಿಸುವವರೆಗೆ ಕ್ರಿಶ್ಚಿಯನ್ ಎನ್ ಜಿ ಒ ಗಳು  ಕೋರೆ ಮೂಡಿಸಿಕೊಂಡಿವೆ. ನಾಳೆ ಇವರು ಅಗ್ನಿ ಕ್ಷಿಪಣಿಯನ್ನು, ರಷ್ಯಾ ನಿರ್ಮಿತ ಹಡಗುಗಳನ್ನು, ಹೆಚ್‌ಎಎಲ್ ವಿಮಾನಗಳನ್ನೂ ವಿರೋಧಿಸಲಾರರೆಂದು ಹೇಗೆ ನಂಬಬೇಕು?  ಎನ್ ಜಿ ಒ ಗಳಿಗೆ ಹರಿದುಬರುವ ಕೋಟಿಕೋಟಿ ರೂ.ಗಳು ಹಾಗೆ ಮಾಡುತ್ತವೆ.   ಅಷ್ಟಕ್ಕೂ ಇವುಗಳಿಗೆ ಎಲ್ಲಿಂದ ಹಣ ಹರಿದುಬರುತ್ತದೆ? ಯಾರು ತರಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಈ ಅಧ್ಯಯನ ವರದಿಯಲ್ಲಿ ಧಿಗ್ಭ್ರಮೆ ಹುಟ್ಟಿಸುವ ಮಾಹಿತಿಗಳಿವೆ. ಏಕೆಂದರೆ ಒರ್ವ ಬಿಷಪರೇ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್‌ಗಳಿಗೆ ಬರೆದ ಪತ್ರದ ಸಾಕ್ಷಿಯನ್ನು ಈ ವರದಿ ಲಗತ್ತಿಸಿದೆ. ಹೀಗೆ ಅಮೆರಿಕಾ ಮತ್ತು ಯುರೋಪಿಯನ್ ಯೂನಿಯನ್ ಗಳ ಹಣದಿಂದ ಬದುಕುವ ಈ ಎನ್ ಜಿ ಒ ಗಳು ಭಾರತದ ನೀತಿನಿಯಮಗಳಿಗೆ ಬದ್ದರಾಗಿ ಬದುಕುತ್ತವೆ ಎಂದು ಬಿಳಿಬಿಳಿಯಾದ ಕುರುಚಲು ಗಡ್ಡದ  ಕೋಟು, ಸೂಟು ಧರಿಸುವ ಶ್ರೀಮಂತ ಆದರೆ ಇನ್ನೂ ಮಧ್ಯಮವರ್ಗದ ಮಾನಸಿಕತೆ ಇರುವ ಜನ ಹೇಳಬಹುದೇ ಹೊರತು ಸಮಾಜದೊಳಗೆ ಮಗುವಾಗಿ ಬದುಕುವ ನರಮನುಷ್ಯನಿಗೆ ನಂಬಲು ಸಾಧ್ಯವಾಗುವುದಿಲ್ಲ.
Gospel for asia ಎಂಬ ವೆಬ್‌ಸೈಟೊಂದಿದೆ. ಭಾರತದಿಂದ ಈ ಜಾಲತಾಣವನ್ನು ನೋಡಿದರೆ ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡ ಚಿತ್ರ ಮತ್ತು ಅದರ ಕೆಳಗೆ ಮಕ್ಕಳ ಪೌಷ್ಠಿಕತೆ, ಭವಿಷ್ಯ, ಶಿಶು ಮರಣ ಮೊದಲಾದ ಸಂಗತಿಗಳ ಬಗ್ಗೆ ಪ್ರಸ್ತಾಪವಿದೆ. ಆದರೆ ಅದೇ ವೆಬ್‌ಸೈಟನ್ನು  ವಿದೇಶದಿಂದ ನೋಡಿದರೆ  ಅಲ್ಲಿರುವುದೆಲ್ಲವೂ " ಸುವಾರ್ತೆ"ಗಳು!  ಏಕೆ ಈ ನಾಟಕ? ವಿದೇಶದಿಂದ ಮತಪ್ರಚಾರಕ್ಕಾಗಿ  ಹಣತರುವುದು ಮತ್ತು ಭಾರತದಲ್ಲಿ ಕಾಳಜಿಯ ಮುಖ ಹೊತ್ತು ಅದನ್ನು ಅನುಷ್ಠಾನ ಮಾಡುವುದು.  ಏನೇನು ಪವಾಡಗಳು ನಡೆಯುವುದೋ ಗೊತ್ತಿಲ್ಲ. ಆದರೆ ಈ ವೆಬ್‌ಸೈಟಿನಲ್ಲಂತೂ ಪವಾಡವೋ ಪವಾಡ!
ಮತ್ತೊಂದು ಇಂಗ್ಲೆಂಡ್ ಮೂಲದ action aid ಸಂಘಟನೆ ಭಾರತದ ಮಕ್ಕಳಿಗೆ ಶೌಚಾಲಯವಿಲ್ಲ, ಪೌಷ್ಟಿಕ ಆಹಾರವಿಲ್ಲ ಎಂಬ ನೆಪವೊಡ್ಡಿ ಭಾರತದ ಕ್ರಿಶ್ಚಿಯನ್ ಎನ್ ಜಿ ಒ ಗಳಿಗೆ ಹಣ ಸರಬರಾಜು ಮಾಡುತ್ತದೆ. ಮತಪ್ರಚಾರಕ್ಕೆ ಶೌಚಾಲಯವೂ ಪ್ರಮುಖ ಸರಕು ಎನ್ನುವುದು ಹೇಸಿಗೆಯ ಸಂಗತಿಯಾದರೂ ಇದು ಸತ್ಯ.
ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ೨೦೦೬೧೧ ರ ಅವಯಲ್ಲಿ  north Karnataka Jesuit educational and charitable socityಎಂಬ ಎನ್ ಜಿ ಒ ರೂ .೨೩೬ ಕೋಟಿ ವಿದೇಶಿ ದೇಣಿಗೆಯನ್ನೂ, children fund inc ಎಂಬ ಎನ್ ಜಿ ಒ  ೧೭೪ ಕೋಟಿ  ರೂಗಳನ್ನೂ, the church council for child and youth care ಕೂಡಾ ೧೭೪ ಕೋಟಿ ವಿದೇಶಿ ದೇಣಿಗೆಯನ್ನು ಪಡೆದಿದೆ ಎಂದು ಈ ವರದಿ ತಿಳಿಸುತ್ತದೆ.ಈ ಅವಧಿಯಲ್ಲಿ ಕರ್ನಾಟಕದ ಒಟ್ಟು ೧೫೦ ವಿವಿಧಕ್ರಿಶ್ಚಿಯನ್ ಎನ್ ಜಿ ಒ ಗಳು ೨೧೮೫   ಕೋಟಿ ರೂ.ಗಳನ್ನು ಪಡೆದಿವೆ. ಈ ಮೊತ್ತ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಾವಯವ ಕೃಷಿ, ಬಿತ್ತನೆ ಬೀಜ, ರೈತರಿಗೆ ಪರಿಹಾರಗಳಿಗೆ ಮೀಸಲಿರಿಸಿದ ಮೊತ್ತಕ್ಕಿಂತ ಹೆಚ್ಚು!ಇದೇ ಅವಧಿಯಲ್ಲಿ ಬೆಂಗಳೂರಿನ ೧೦೪ ಎನ್ ಜಿ ಒ ಗಳಿಗೆ ೧೬೨೨ ಕೋಟಿ, ಮಂಗಳೂರಿನ ೯ ಎನ್ ಜಿ ಒ ಗಳಿಗೆ ೬೫ ಕೋಟಿ, ಮೈಸೂರಿನ ೧೦ ಎನ್ ಜಿ ಒ ಗಳಿಗೆ ೫೭ ಕೋಟಿ ರೂ ವಿದೇಶಿ ಹಣ ಹರಿದುಬಂದಿದೆ. ಈ ಕೋಟಿ ಹಣದಿಂದ ಯಾರ ಭಾಳು ಬಂಗಾರವಾಗಿದೆ? ಎಷ್ಟು ಜಾತ್ಯತೀತವಾಗಿ ಬಳಕೆಯಾಗಿದೆ ಎಂದು ಕಾಣುವುದೇ ಇಲ್ಲ.  ಏಕೆಂದರೆ ಆ ಹಣದಲ್ಲಿ ಪಾರದರ್ಶಕತೆಯಿಲ್ಲ. ಮತಾಂತರಗಳು ಹಾಗೆಲ್ಲಾ ನಡೆಯುದೇ ಇಲ್ಲ. ಇಂಥ ಮೊತ್ತದಿಂದ ಕೆಲವು ಚರ್ಚುಗಳು ಮತ್ತು ಎನ್ ಜಿ ಒ ಗಳು ರಿಯಲ್ ಎಸ್ಟೇಟ್ ದಂಧೆಯನ್ನು ನಡೆಸುತ್ತಿರುವುದೇನೂ ಇಂದು ಅಪರೂಪವಲ್ಲ.
 ಈ ಹಣದ ಹಿಂದಿರುವ ಕಪಟ ಉದ್ದೇಶ, ತಣ್ಣಗಿನ ಕ್ರೌರ್ಯ, ಮೆಲ್ಲಮೆಲ್ಲನೆ ತನ್ನ ಬಾಹುಗಳನ್ನು ಚಾಚಿಕೊಳ್ಳುವ ರಕ್ಕಸತನ, ತನ್ನದಲ್ಲದರ ಬಗೆಗಿನ ತೀವ್ರವಾದ ಅಸಹನೆಗಳು ಈ ವಿಷಯವನ್ನು  ಏನಾದರೂ ಮಾಡಿಕೊಂಡು ಸಾಯಲಿ ಎಂದುಬಿಡುವ ಹಾಗಿಲ್ಲ.  ಇಂದು ಕೋಟಿ ಭಾಳುವ ಎನ್ ಜಿ ಒ  ಗಳು ಜೈಲಿಗೆ ನುಗ್ಗಿವೆ. ಈ ಕೋಟಿಯ ಹರಿವು ಮುಂದೆ ಎಲ್ಲೆಲ್ಲಿಗೆ ನುಗ್ಗಿಸುವವೋ? ಹೀಗೆ ಆ ವರದಿಯನ್ನು ನೋಡುತ್ತಾ ಹೋದಂತೆ ಒಂಟಿ ಪಯಣಿಗನನ್ನು ಯಾರೋ ಹಿಂಬಾಲಿಸುತ್ತಿರುವಂತೆ ಭಾಸವಾಗುತ್ತದೆ.  ಇದು ಸಮಾಜ ಸುಧಾರಣೆಯೋ? ಸಾಮ್ರಾಜ್ಯ ವಿಸ್ತರಣೆಯೋ? ಎಂಬ ಗೊಂದಲ ಕಾಡುತ್ತದೆ. 

ಅಧಿಕಾರ ಇವರಿಗಿಲ್ಲ ! ಇದ್ದವರೇನು ಮಾಡುತ್ತಿದ್ದರು?

" ಯತ್ರ ನಾರ್ಯಸ್ತು ಪೂಜ್ಯತೇ ತತ್ರ ದೇವತಾ" ಎಂದು ಭಾರತೀಯ ವೇದ ಪುರಾಣಗಳು ಹೇಳಿವೆ. ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. " ಯತ್ರ ನಾರ್ಯಸ್ತು .." ಅನ್ನೇ ವಿಶ್ಲೇಷಿಸುತ್ತಾ ಸಮಸ್ತ ಸ್ತ್ರೀಸಂಕುಲವನ್ನೇ ವಿಶ್ಲೇಷಿಸಬಹುದು. ಅದು ಹಿಂದೂ ಚಿಂತನೆ  ಸ್ತ್ರೀಯರಿಗೆ ಕೊಟ್ಟ ಸ್ಥಾನ. ಅಂದರೆ ಸ್ತ್ರೀ ನಿಸಂಶಯವಾಗಿ ಪೂಜಾರ್ಹಳು.  ಸೃಷ್ಟಿಯ ಹುಟ್ಟೇ ಸ್ತ್ರೀ ಎಂಬ ಶಕ್ತಿಯಿಂದಾಯಿತು ಎಂಬ ನಂಬಿಕೆ ಹಿಂದುಗಳದ್ದು. ಹಾಗಾಗಿ ವೊನ್ನೆ ಮಂಗಳೂರಿನ ಪಡೀಲಿನಲ್ಲಿ ಹೊಡೆದಿದ್ದು ಸಮ್ಮತವಲ್ಲ ಎಂದೇ ಎಂಥವರಿಗೂ ಅನಿಸುತ್ತದೆ.
 ಯತ್ರ ನಾರ್ಯಸ್ತು ನೆಲೆಯಲ್ಲೇ ಗಮನಿಸಿದರೆ ಅಲ್ಲಿ ಸ್ತ್ರೀಯರಿಗೆ ಹೊಡೆಯಲಿಲ್ಲ , ಪೂಜಿಸಲಾಗಿತ್ತು ಎಂದೇ ಇಟ್ಟುಕೊಳ್ಳೋಣ.  ಅಂಥ ಜಾಗದಲ್ಲಿ ದೇವರು ನೆಲೆಸುತ್ತಿದ್ದನೇ? ಪೂಜಾರ್ಹವಲ್ಲದ  ಜಾಗದಲ್ಲಿದ್ದ ಸ್ತ್ರೀಯರನ್ನು ಪೂಜಿಸಬೇಕೇ? ನೋಡಿದವರಿಗೆ ಭೋಗಾರ್ಹ ಎಂದು ಕಂಡುಬಂದ ಸ್ತ್ರೀಯನ್ನೂ ಪೂಜಿಸಬೇಕೇ? ಎಂಬ ಪ್ರಶ್ನೆಗಳು ತತ್ತ್ವ ಜಿಜ್ನಾಸೆಗೆ ಸಂಬಂಧಿಸಿದವುಗಳು. ಹಾಗಾಗಿ ಸುಲಭವಾಗಿ ಅವು ಅರ್ಥವಾಗವು. ಉತ್ತರವೂ ಹೊಳೆಯಲಾರದು. ಆದ್ದರಿಂದ ಅಂಥ ಸ್ಥಿತಿಯಲ್ಲಿ ತತ್ ಕ್ಷಣದ ಸ್ಪಂದನವೇ ಪ್ರಧಾನವಾಗಿಬಿಡುತ್ತವೆ. ಮೊನ್ನೆ ನಡೆಯಬಾರದ್ದು ನಡೆದಿದ್ದು ಹಾಗೆಯೇ. ಎಲ್ಲರೂ ಹೊಡೆದಿದ್ದು ತಪ್ಪು ಎಂದಿದ್ದಾರೆ.  ಹಾಗಾದರೆ ಈ ಸ್ಥಿತಿಯಲ್ಲಿ ಮತ್ತೇನು ಮಾಡಬಹುದಿತ್ತು ಎನ್ನುವುದರಲ್ಲೇ ಸಮಸ್ಯೆಯ ಎಲ್ಲಾ ಬೇರುಗಳು ನಿಂತಿವೆ. ಪುರುಷನ ತಪ್ಪನ್ನು ನೇರಾನೇರ ಖಂಡಿಸಬಹುದು. ದಂಡಿಸಲೂ ಬಹುದು. ಆದರೆ ಪುರುಷ ಸಮಾನ ಸ್ತ್ರೀಯು ತಪ್ಪನ್ನೇ ಮಾಡಲಾರಳು . ಮಾಡಿದರೂ ಆಕೆ ದಂಡನೆಯಿಂದ ಹೊರತಾದವಳು ಎನ್ನುವುದಾದರೆ ಮಾತ್ರ ಹೋಮ್ ಸ್ಟೇ ಪ್ರಕರಣವನ್ನು ಮಾಧ್ಯಮಗಳ ದಿಕ್ಕಿನಲ್ಲಿ ವಿಶ್ಲೇಷಿಸಬಹುದು.
ಆದರೆ ಸತ್ಯಕ್ಕೆ ಮಾಧ್ಯಮಗಳೇ ಅಂತಿಮ ಪ್ರಮಾಣಗಳಲ್ಲವಲ್ಲ.
ಕೆಲವು ಘಟನೆಗಳನ್ನು ಸಮಾಜ ನೋಡುವ ದೃಷ್ಟಿಯೇ ವಿಚಿತ್ರ. ಅಥವಾ ಸಮಾಜ ಆ ಮಾನಸಿಕತೆಗೆ  ಒಗ್ಗಿಕೊಂಡಿರುವುದೇ  ಹಾಗೆಯೋ ಗೊತ್ತಿಲ್ಲ.  ಅದೇ ಪಕ್ಕದ ಮನೆಯಲ್ಲಿ ಶಿವಾಜಿ ಹುಟ್ಟಬೇಕೆಂಬ ಮಾನಸಿಕತೆ. ಹೋಮ್ ಸ್ಟೇಯಲ್ಲಿ ವಿಚಿತ್ರ ಉಡುಪಿನಲ್ಲಿದ್ದ ಹೆಣ್ಣುಮಕ್ಕಳು ನಮ್ಮ ಮನೆಯವರಲ್ಲವಲ್ಲ ಎಂಬ ಮಾನಸಿಕತೆ. ಯಾವ ಅಣ್ಣ ತಮ್ಮಂದಿರು, ಅಪ್ಪ ಅಮ್ಮಂದಿರು, ಗಂಡಂದಿರು  ಹೋಮ್ ಸ್ಟೇ ಎಂಬ  ಮಲಗುವ ಮನೆಯಲ್ಲಿ  ತಮ್ಮ ಮನೆಯ ಹೆಣ್ಣುಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಎಲ್ಲರೂ ತಮ್ಮ ಮನೆಯ ಹೆಣ್ಣುಗಳು ಆ ಸ್ಥಿತಿಯಲ್ಲಿದ್ದಿದ್ದರೆ ಎರಡು ಭಾರಿಸುವವರೇ.  ಅಲ್ಲಿ ನೈತಿಕತೆ, ಮೌಲ್ಯಗಳು ಲೆಕ್ಕಕ್ಕೆ ಬರಲಾರವು. ಆದರೆ ಅದೇ ಘಟನೆಗೆ , ಅದೇ ಕಾರಣಕ್ಕೆ  ಮತ್ತೊಬ್ಬರು ಭಾರಿಸುವುದನ್ನು ಒಪ್ಪಲಾರರು. ಮೌಲ್ಯಗಳು ಯಾವತ್ತೂ ಕವಲು ದಾರಿಯಲ್ಲಿ ಸಾಗುತ್ತವೆ ಎನ್ನುವುದು ಇದಕ್ಕೇ ಏನೋ.
ಹಿಂದಿನ ಪಬ್ ದಾಳಿಯ ಘಟನೆಯಿರಬಹುದು, ಇಂದಿನ ಹೋಮ್ ಸ್ಟೇ ಘಟನೆಯಿರಬಹುದು. ಮಂಗಳೂರಿನಂತಹ ಬುದ್ಧಿವಂತರ ನೆಲದಲ್ಲಿ ಒಂದು ಪ್ರಶ್ನೆ ಸದಾ ಕಾಡುತ್ತದೆ. ನಿರಂತರ ರಾಜಕೀಯ ಮೇಲಾಟಗಳು, ಚಳವಳಿಗಳನ್ನು ಹುಟ್ಟುಹಾಕಿದ ಈ ನೆಲದಲ್ಲಿ ಭಾಷಣಕ್ಕೆ ಬಂದು ಹೋಗುವವರಿಗೇನೂ ಕಡಿಮೆಯಿಲ್ಲ. ಮಾನವ ಹಕ್ಕುಗಳು, ಮತೀಯ ನಾಯಕರು, ವಿದೇಶಿ ಪ್ರತಿನಿಧಿಗಳು, ಸಮಾಜದ ನೀತಿ ನಿರೂಪಣೆಯ ಗುತ್ತಿಗೆಯನ್ನು ತಾವೇ ಸ್ವತಃ ಹಿಡಿದಿದ್ದೇವೆ ಎಂಬವರೆಲ್ಲರೂ ಇಲ್ಲಿಗೆ ಬಂದು  ತೀವ್ರವಾಗಿ ಮಾತನಾಡಿ ಕರೆನೀಡಿ, ಖಂಡನೆ ಮಾಡಿ ಹೋಗುತ್ತಾರೆ. ಆ ಕರೆ , ಖಂಡನೆ ಗಳಲ್ಲಿ " ಜಾಗೃತ ಸಮಾಜ ನಿರ್ಮಾಣವಾಗಬೇಕು" ಎಂದೂ , "ಮೌಲ್ಯಯುತ ಸಮಾಜ ಕಟ್ಟಬೇಕು"ಎಂದೂ " ಗಾಂಧಿ ಕಂಡ ಕನಸ್ಸುಗಳು ಇಲ್ಲಿ ಸಾಕಾರವಾಗಬೇಕು" ಎಂದೂ ಭರಪೂರ ಉಲ್ಲೇಖಗಳಿರುತ್ತವೆ. ಆದರೆ ಮೊನ್ನೆಯ ಘಟನೆಯ ತರುವಾಯ " ಜಾಗೃತ ಸಮಾಜ ಎಂದರೇನು ?" ಎಂಬ ಬಗ್ಗೆಯೇ ಸಂಶಯವನ್ನು ಹುಟ್ಟಿಸುತ್ತದೆ. ಸಮಾಜದಲ್ಲಿ ಅನೈತಿಕತೆ, ಅನಾಚಾರಗಳು ನಡೆಯಬಾರದು, ನಡೆದರೆ ಅಂಥದ್ದನ್ನು ತಡೆಯಬೇಕು ಎಂದಾದರೆ ಹೋಮ್ ಸ್ಟೇಯಲ್ಲಿ ನಡೆದಿದ್ದನ್ನು ನಡೆದರೆ ತಪ್ಪೇನು? ಕುಸಿಯುತ್ತಿರುವ ಮೌಲ್ಯಗಳು ಕಣ್ಣಮುಂದಿರುವಾಗ ಕೈಕಟ್ಟಿ ಕುಳಿತಿರುವುದು ಜಾಗೃತ ಸಮಾಜದ ಲಕ್ಷಣವೇ? ಹಿಂದೂ ಸಂಸ್ಕಾರ ಹೊಂದಿರುವವರಿಗಂತೂ ನಾಟಕೀಯ ಬದುಕಿನಲ್ಲಿ ತರಬೆತಿಯಿರುವುದಿಲ್ಲ. ಕೆಟ್ಟದ್ದು ಎಲ್ಲಿದ್ದರೂ , ಎಲ್ಲಿ ನಡೆದರೂ ಅದನ್ನು ತಡೆಯಬೇಕು. ಒಳ್ಳೆಯದು ಎಲ್ಲೆಲ್ಲಿಂದಲಾದರೂ ಇಲ್ಲಿಗೆ ಬರಬೇಕು ಎನ್ನುವ ಹಿಂದೂ ಸಂಸ್ಕೃತಿ ಕೆಟ್ಟದ್ದನ್ನು ತಡೆಯದಿರಲು ಸಾಧ್ಯವೇ ಇಲ್ಲ.
ಹದಿಹರೆಯದವರ ಪಾನಗೋಷ್ಠಿ, ಅರೆಬೆತ್ತಲೆ ವಸ್ತ್ರ ಧರಿಸಿ  ಸ್ತ್ರೀಪುರುಷರು ಸಾಮಿಪ್ಯದಿಂದಿರುವುದು ರೇವ್ ಪಾರ್ಟಿಯೇ ಆಗಲಿ, ಬರ್ತ್ ಡೇ ಪಾರ್ಟಿಯೇ ಆಗಲಿ ಒಂದು ಹೊತ್ತು ದೀಪ ಹಚ್ಚುವ ಯಾವ ಮನೆಯವನಿಗೇ ಆಗಲಿ ಸರಿ ಎಂದು ಕಾಣಲಾರದು. ದೈವ-ಭೂತದೆದುರು ಭಯ ಭಕ್ತಿಯಿಂದ ಕೈಮುಗಿದು ನಿಲ್ಲವ ಸಂಸ್ಕೃತಿಯ ಕರಾವಳಿಗನಿಗಂತೂ ಅದು ಸರಿ ಎಂದು ಕಾಣುವುದೇ ಇಲ್ಲ.
ಅಂಥ ಮಂಗಳೂರು ಇಂದು ತನ್ನ ಸಂಸ್ಕೃತಿಯನ್ನು ಬಲಿಕೊಡಲಾರೆ ಎಂದಾಗ, ತನ್ನ ನೆಲವನ್ನು ಅಪವಿತ್ರಗೊಳಿಸಲಾರೆ ಎಂದಾಗ, ಸೊಗಡನ್ನು ಕಳೆದುಕೊಳ್ಳಲಾರೆ ಎಂದಾಗ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಿತ್ತದೆ.  ಮಂಗಳೂರಿನಲ್ಲಿ ಎಲ್ಲಾ ಅನಿಷ್ಠಗಳು ಕಂಡುಬರಲಾರಂಭಿಸಿದ್ದು  ಈಗ್ಗೆ ಒಂದೆರಡು ದಶಕಗಳ ಅನಂತರ. ಖ್ಯಾತ ಶೈಕ್ಷಣಿಕ ಕೇಂದ್ರವಾಗಿ ಬೆಳೆದುನಿಂತ ಮಂಗಳೂರಿಗೆ ವಿದೇಶ ಮತ್ತು ಹೊರ ರಾಜ್ಯಗಳಿಂದ ಶ್ರೀಮಂತ ವಿದ್ಯಾರ್ಥಿಗಳು ಬರಲಾರಂಭಿಸಿದರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಮಂತರ ಮಕ್ಕಳು ದಾಖಲಾದರು.   ಶ್ರೀಮಂತಿಕೆಯ ಶೋಕಿಗೆ ತಕ್ಕಂತೆ ನಗರ ಬೆಳೆಯಲಾರಂಭಿಸಿತು. ಜೊತೆಗೆ ಮಾಧಕ ವಸ್ತುಗಳ ಜಾಲವೂ  ಪಬ್ ಸಂಸ್ಕೃತಿಯೂ ಬೆಳೆಯುತ್ತಾ ಬಂತು. ಹೀಗೆ ಅನೈತಿಕ ಚಟುವಟಿಕೆಗಳು ಒಂದೊಂದಾಗಿ ಕಾಣಿಸಿಕೊಳ್ಳಲಾರಂಭಿಸಿದವು. ಒಂದೆಡೆ ಇಷ್ಟೆಲ್ಲಾ ನಡೆಯುತ್ತಿರುವಾಗಲೇ ಜಾಗೃತ ಸಮಾಜವೊಂದು ಸಮುದ್ರ ಪಾಲಾಗಿರಲಿಲ್ಲ. ಹಾಗಾಗಿ ದೇವ- ದಾನವ ಸಂಘರ್ಷದಂತೆ ಹಲವು ಹೋರಾಟಗಳು ಆಗಾಗ್ಗೆ ನಡೆದವು.  ಅಂಥ ಹೋರಾಟಗಳಿಗೆ ಅನೈತಿಕತೆಯ ಸಮರ್ಥಕರು "ತಾಲೀಬಾನೀಕರಣ"ಎಂಬ ಹೆಸರನ್ನಿಟ್ಟರು.  ನಿಜದ ತಾಲೀಬಾನಿಗಳ ಉಪಟಳವನ್ನು ಮರೆಮಾಚಲು ಇವರಿಗೆ ಹಿಂದುಗಳನ್ನು ತಾಲೀಬಾನಿಗಳೆಂದು ಕರೆಯಬೇಕಾಗಿದ್ದ ಅನಿವಾರ್ಯತೆಯೂ ಇತ್ತು. ಹೋಮ್ ಸ್ಟೇಯ ಘಟನೆ ಅದಕ್ಕೊಂದು ಉದಾಹರಣೆಯೇ ಹೊರತು  ಅದೇನೂ ಮೊದಲಲ್ಲ. 
ಕಥೆ ಇಷ್ಟೆಲ್ಲಾ ಇರುವಾದ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂಬ ವ್ಯವಧಾನ, ಮೂಲ ಪ್ರಜ್ನೆ ಮಾಧ್ಯಮಗಳಿಗೆ ಮತ್ತು ಬುದ್ಧಿಜೀವಿ ವರ್ಗಕ್ಕೆ ಬರದೇ ಹೋದುದು ವಿಪರ್ಯಾಸ. ಗೆಳೆಯರೆಲ್ಲರೂ ಕೂಡಿ ಪ್ರವಾಸ ಹೋಗುವುದಕ್ಕೂ ಕೋಣೆಯೊಳಗೆ ಕೂತು ಕುಡಿಯುವುದಕ್ಕೂ ವ್ಯತ್ಯಾಸವಿಲ್ಲವೇನು?  ಎಲ್ಲವೂ ಬಹಿರಂಗವಾಗುವಂತಹ ಬಟ್ಟೆಯನ್ನು ತೊಟ್ಟು " ನಮ್ಮಲ್ಲಿ ಅಶ್ಲೀಲತೆಯ ಭಾವನೆಗಳಿಲ್ಲ" ಎನ್ನುವುದೂ ಒಂದೇ ಈಚಲು ಮರದಡಿಯಲ್ಲಿ ಕೂತು " ಮಜ್ಜಿಗೆ ಮಾತ್ರ ಕುಡಿದೆ" ಎನ್ನುವುದೂ ಒಂದೇ ಅಲ್ಲವೇ? ದಾಳಿ ಮಾಡಲು ಇವರೆಲ್ಲಾ ಯಾರು ಎಂಬ ಪ್ರಶ್ನೆ ಬಾಣದಂತೆ ತೂರಿ ಬರುತ್ತಿದೆ. ಜಾಗೃತ ಸಮಾಜ ದಾಳಿ ಮಾಡದೆ ಇನ್ನೇನು ಮಾಡಬೇಕು? ದಾಳಿ ಮಾಡುವ ಜನರು ನಿದ್ರಿಸುತ್ತಿದ್ದರೆ ಮತ್ತೇನು ಮಾಡಬೇಕು? ಅಸಲು ಈ ಹೋಮ್ ಸ್ಟೇ ಅನಧಿಕೃತ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ಹೋಮ್ ಸ್ಟೇ ಗಳಿಗೆಂದೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಕೆಲವು ನೀತಿ ನಿರೂಪಣೆಗಳನ್ನು   ಮಾಡಿದೆ. ಈ ಹೋಮ್ ಸ್ಟೇ  ಆ ನೀತಿನಿರೂಪಣೆಗಳಿಂದ ನುಣುಚಿಕೊಂಡುದುದಾಗಿದೆ. ಕಾನೂನು ಪ್ರಕಾರ ಅಂಥ ಅನಧಿಕೃತ ಹೋಮ್ ಸ್ಟೇಗಳಲ್ಲಿ ನಡೆಯುವ ಚಟುವಟಿಕೆಗಳು ಅನೈತಿಕ ಎನಿಸಿಕೊಳ್ಳುತ್ತವೆ. ಅಲ್ಲದೆ ದಂಪತಿಗಳಲ್ಲದ ಹದಿಹರೆಯದವರು ರೂಮು ಹಿಡಿಯುವುದು ಕೂಡಾ ಅನೈತಿಕ. ಕಳೆದ ಎಷ್ಟೋ ತಿಂಗಳಿಂದ ಇಂಥ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ದಾಳಿ ಮಾಡುವವರು ಮಾಡಲಿಲ್ಲವೇಕೆ? ಹಾಗಾದರೆ ಅವರೂ ಅನೈತಿಕವನ್ನು ಪೋಷಿಸಿದರು ಎಂದು ಅರ್ಥವಲ್ಲವೇ? ಮಂಗಳೂರಿನಲ್ಲಿ ಇನ್ನೂ ಅರುವತ್ತಕ್ಕೂ ಹೆಚ್ಚಿನ ಹೋಮ್ ಸ್ಟೇಗಳಿವೆ. ಅವುಗಳಲ್ಲಿ ಬಹುತೇಕ ನೊಂದಾಯಿತವಲ್ಲದವೇ. ಈ ಮಾಫಿಯಾ ಎಷ್ಟೊಂದು ವ್ಯಾಪಕವಾಗಿದೆಯೆಂದರೆ ರಾಜ್ಯದ ಸಾವಿರಾರು ನೊಂದಾಯಿತ ಹೋಮ್ ಸ್ಟೇಗಳಲ್ಲಿ  ಅಕ್ರಮ ಮದ್ಯ, ವೈಶ್ಯಾವಾಟಿಕೆಗಳು ಭರದಿಂದ ನಡೆಯುತ್ತಿರುವ ಸುದ್ಧಿಗಳು ಕೇಳಿಬರುತ್ತವೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು ಎರಡು ಸಾವಿರ ಅನಧಿಕೃತ ಹೋಮ್ ಸ್ಟೇ ಗಳಿವೆ. ಆದರೆ ಕಾನೂನು ಬದ್ದವಾಗಿ ಇರುವವು ಕೇವಲ ೧೬೧.  ಅದರ ಬಗೆ ಯಾಕೆ ಖಾಕಿಯ ಖದರಿಲ್ಲ? ಹಾಗಾದರೆ ಪರಿಸ್ಥಿತಿಯ ಭೀಕರತೆ ಎಷ್ಟಿರಬಹುದು? ಕಾನೂನಿನ ಚೌಕಟ್ಟಿನಿಂದ ನುಸುಳುವ ಎಲ್ಲಾ ಕಾರ್ಯಗಳು ಅಕ್ರಮ ಎಂದಾಗುವಾಗ ಅಂಥ ಹೋಮ್ ಸ್ಟೇ ನಲ್ಲಿ ನಡೆಯುವುದು ಸಕ್ರಮ ಹೇಗಾಗುತ್ತದೆ? 
 ಆ ಪಾರ್ಟಿಯಲ್ಲಿ ಕೇವಲ ಬೀರುಗಳು ಮಾತ್ರ ಸಿಕ್ಕವಂತೆ. ಬೀರು ಅಮಲು ಪದಾರ್ಥವಲ್ಲದ ಕಾರಣ ಪಾರ್ಟಿಯಿಂದ ತೊಂದರೆ ಏನಿಲ್ಲವಂತೆ.  ಆದರೆ ಬೀರಿನಲ್ಲಿರುವ ಆಲ್ಕೋಹಾಲಿಕ್ ಅಂಶಗಳ ಪ್ರಮಾಣ ೪ ರಿಂದ ೮ ಶೇಕಡಾ!  ಇಷ್ಟು  ಅಮಲು ಮತ್ತೇನೋ ಒಂದರ ಘಮಲು ಉಂಟುಮಾಡುವುದಕ್ಕೆ ಸಾಕಾಗಬಲ್ಲದು ಎಂದು ವೈದ್ಯಕೀಯ ಹೇಳುತ್ತದೆ.  " ಅಲ್ಲಿ ಕಾಂಡೋಂ ಸಿಗಲಿಲ್ಲವಲ್ಲ " ಎನ್ನುವುದು ಮತ್ತೊಂದು ಹೆಗಲು ಮುಟ್ಟಿ ನೋಡಿಕೊಳ್ಳುವ  ರೀತಿಯೇ ಸರಿ. ಏಕೆಂದರೆ ದಾಳಿ ನಡೆಸಿದವರಾರೂ ಅಲ್ಲಿ ಕಾಂಡೋಂ ನ ಸಂಗತಿಯನ್ನು ಪ್ರಸ್ಥಾಪಿಸಿರಲಿಲ್ಲ. ಆದರೂ ಟಿ.ವಿ ಗಳಲ್ಲಿ ಕಾಂಡೋಂ ವಿಷಯ ಚರ್ಚೆಯಾಗುತ್ತಿತ್ತು.  ಸ್ತ್ರೀವಾದದ ಮುಖವಾಡ ಹೊತ್ತವರು ಇಂಥ  ಅನಗತ್ಯ ಸಂಗತಿಗಳನ್ನು ಉಲ್ಲೇಖಿಸುವ ಉಲ್ಲೇಖವೇನು?  ಒಂದು ವೇಳೆ ಕಾಂಡೋಂ ಅಲ್ಲಿ ಸಿಕ್ಕಿದ್ದರೂ ಕೂಡಾ ಅದು ಅನೈತಿಕ ಲೈಂಗಿಕತೆಯನ್ನು  ನೈತಿಕ ಮಾಡುವ  ಶಕ್ತಿಯನ್ನೇನೂ ಹೊದಿರುತ್ತಿರಲಿಲ್ಲ.
 ಆದರೂ ಟಿವಿಯಲ್ಲಿ  ಎಲ್ಲರೂ ಸರದಿಯಂತೆ ಬಂದುಹೋದರು.  ಮಹಿಳಾವಾದಿಗಳು ಮದ್ದೂರು ಘಟನೆಯನ್ನು ಮರೆತು ಮೇಕಪ್ ಮಾಡಿಕೊಂಡು  ಬಯ್ಯಲು ಬಂದರು. ತಾವೇ ತೀರ್ಪು ಕೊಟ್ಟರು.  ಕಾಂಗ್ರೆಸಿನವರಂತೂ  ಬಿಜೆಪಿಯ ಮೇಲಿನ ದ್ವೇಷಕ್ಕೆ ಸಮಸ್ತ ಹಿಂದೂ ಸಂಘಟನೆಗಳನ್ನೆಲ್ಲಾ  ಜರೆದರು. ಬಬ್ಲಿ ಬಬ್ಲಿಯಾಗಿ ಮಾತಾಡಲು ಹೆಣಗಿ ತಮ್ಮ  ಸ್ವಂತಿಕೆಯನ್ನೇ ಮರೆತುಹೋದಂತಿರುವ ಅನೇಕ ಆಂಕರ್‌ಗಳು ಮಹಾ ವ್ಯಕ್ತಿಗಳೆಂಬಂತೆ ಮುಖಭಾವ ಸೃಷ್ಟಿಸಿಕೊಂಡರು. ಘಟನೆಗೆ ಮತ್ತೊಂದು ಮುಖವೂ ಇದೆಯೆಂಬುದೇ ಇವರಿಗೆ ಗೊತ್ತಾಗಲಿಲ್ಲ. ಇವರಲ್ಲಿ ಬಹುತೇಕರಿಗೆ  ಕಾಶ್ಮೀರ, ಅಸ್ಸಾಂಗಳು ಎಲ್ಲಿವೆಯೆಂಬುದೇ ಗೊತ್ತಿರಲಿಕ್ಕಿಲ್ಲ. ಇನ್ನು ಎಷ್ಟೋ ಸಾವಿರ ವರ್ಷಗಳ ಹಿಂದೂ ಸಂಸ್ಕೃತಿ  ಹೇಗೆ ತಾನೇ ಗೊತ್ತಿರಲು ಸಾಧ್ಯ?   
ದಾಳಿ ಮಾಡಿದವರು ಯಾರೇ ಇರಲಿ  ಅದಕ್ಕೆ ಅವರು ಮಾತ್ರ ಕಾರಣರಲ್ಲ ಎಂಬುದು ಸುಸ್ಪಷ್ಟ.  ಈ ನೆಪದಲ್ಲಿ ಹಿಂದೂ ಸಂಘಟನೆಗಳನ್ನು ತೆಗಳುವುದೇ ಘಟನೆಗೆ ಖಂಡನೆಯ ಮಾರ್ಗವಲ್ಲ.  ಹಿಂದೂ ಜಾಗರಣ ವೇದಿಕೆಯಾಗಲೀ, ಭಜರಂಗದಳವಾಗಲೀ , ಇತರ ಯಾವುದೇ ಹಿಂದೂ ಸಂಘಟನೆಯಾಗಲೀ ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಹೆಮ್ಮಕ್ಕಳ ಮೇಲಿನ ಅತ್ಯಾಚಾರಗಳನ್ನೆಲ್ಲಾ ವಿರೋಧಿಸುತ್ತಾ, ಅದರ ವಿರುದ್ಧ ಟೊಂಕ ಕಟ್ಟಿ ನಿಂತಿರುವ  ಸಂಘಟನೆ. ಅದು  ಜಗತ್ತಿಗೆ ಹೆಚ್ಚು ಗೊತ್ತಿಲ್ಲದಿರುವುದು ಈ ಸಂಘಟನೆಗಳ ತಪ್ಪಲ್ಲ.  ಅದನ್ನು ತಿಳಿದುಕೊಳ್ಳದಿರುವುದು  ಬುದ್ಧಿಜೀವಿಗಳ ಸಮಸ್ಯೆ.
ಮಗಳಿಗೆ ಅರೆಬಟ್ಟೆ ತೊಡಲು ಹೇಳಿ, ಹುಡುಗರೊಂದಿಗೆ ಕುಡಿದು ಅಪರಾತ್ರಿಯಲ್ಲಿ ಮನೆಗೆ ಬಾರಮ್ಮಾ ಎನ್ನುವ ಅಪ್ಪ ಅಮ್ಮಂದಿರು ಯಾರಾದರೂ ಭಾರತದಲ್ಲಿರುವರೇ  ಎಂಬುದೇ ಸದ್ಯ ಕಾಡುವ ಪ್ರಶ್ನೆಯಾಗಿದೆ.