Tuesday, August 14, 2012

ಮಾಲೆಗೆ ಮುತ್ತೊಂದಾಯಿತು ಇನ್ನೇಕೆ ಅಪಸ್ವರದ ಆಲಾಪ?

ಕೊಡಗು. ಅದಕ್ಕೆ ನಾನಾ ಹೆಸರುಗಳು. ವಿವಿಧ ಬಿರುದಾವಳಿಗಲು. ಕ್ರೋಢ ದೇಶ, ಮತ್ಸ ದೇಶ, ಗಂಧರ್ವ ಲೋಕ, ಕರ್ನಾಟಕದ ಸ್ವಿಜರ್ ಲ್ಯಾಂಡ್, ದಕ್ಷಿಣದ ಕಾಶ್ಮೀರ... ಇನ್ನೂ ಎಷ್ಟೆಷ್ಟೋ. ಕಂಡು ಹೊಗಳಿದವರು ಇಟ್ಟ ಹೆಸರುಗಳು, ಬಂದವರು ಹೊಳೆದಾಗ ಕರೆದ ನಾಮಗಳೆಲ್ಲವೂ ಇದಕ್ಕೆ ಅನ್ವರ್ಥವಾದವು. ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿಗೂ ಕೊಡಗು ಎಂದರೆ ಒಂದು " ದೇಶ" ವೇ. ಇದು ಸಣ್ಣ ಪ್ರದೇಶವೊಂದಕ್ಕೆ ಸಿಕ್ಕಬಹುದಾದ ಅತ್ಯಚ್ಛ ಗೌರವ.  ದೇಶದೊಳಗಿದ್ದೂ ದೇಶವಾಗುವ  ತಾದ್ಯಾತ್ಮ. ಒಂದರೊಳಗೆ ಎರಡಾಗದೆ ಒಂದೇ ಆಗಿರುವ ತತ್ತ್ವಶಾಸ್ತ್ರ.  ವಿಚಿತ್ರ ಎಂದರೆ ಇಂದಿಗೂ ಹಳಬರು ಮೈಸೂರನ್ನು ರಾಜ್ಯ ಎಂದು ಕರೆದರೆ ಕೊಡಗನ್ನು ದೇಶ ಎಂದೇ ಸಂಭೋಧಿಸುತ್ತಾರೆ.  ಹೀಗೆ ಕೊಡಗು ರಾಜ್ಯವಾಗಿದ್ದರೂ ರಾಜ್ಯವಾಗದೇ ದೇಶದ ಪುಟ್ಟ- ಸುಂದರ ಕೂಸಿನಂತೆ ಜನಮನದಲ್ಲಿ ನಿಂತಿದೆ.
ಲಿಂಗಾಯತ ಅರಸರ ಕಾಲದಲ್ಲಿ ಕೂಡ ಕೊಡಗು ದಕ್ಷಿಣ ಕನ್ನಡದ ಸುಳ್ಯದವರೆಗೆ ವ್ಯಾಪಿಸಿದ್ದ ಸಂಸ್ಥಾನವೇ. ಅನಂತರ ಬ್ರಿಟಿಷರ ತೆಕ್ಕೆಗೆ ಬಂದಾಗಲೂ ಕೊಡಗನ್ನು ಅವರು ವಿಶೇಷ ಆಸ್ಥೆಯಿಂದ ಸಲಹಿದ್ದರು. ಟೈನಿ ಮಾಡಲ್ ಸ್ಟೇಟ್ ಎಂದು ಪ್ರೀತಿಯಿಂದ ಕರೆದರು. ಅನಂತರದ ಸ್ವತಂತ್ರ ಭಾರತವಾದಾಗ "ಸೀ" ಸಂಸ್ಥಾನವಾಗಿತ್ತು ಮತ್ತು ಅನಂತರ ಭಾಷಾವಾರು ಪ್ರಾಂತ ರಚನೆಯ ಹೊತ್ತಲ್ಲಿ  ಅಂದರೆ ೧೯೫೬ ರಲ್ಲಿ  ಯಾವ ಕಾರಣ ದಿಂದಲೂ ಕೊಡಗು ಪ್ರತ್ಯೇಕ ರಾಜ್ಯವಾಗುವ ಲಕ್ಷಣಗಳಿಲ್ಲವೆಂದೋ ಅಥವಾ ಕರ್ನಾಟಕ ಮಾತೆಯ ಕೊರಳ ಮಾಲೆಗೆ ಮುತ್ತೊಂದು ಇಲ್ಲದೆ ಸರವಾಗದು ಎಂಬ ಕಾರಣಕ್ಕೋ ಕೊಡಗು ಕರ್ನಾಟಕದಲ್ಲಿ ವಿಲೀನವಾಯಿತು. ಏನೇ ಆದರೂ ವಿಲೀನ ಸಂಪೂರ್ಣವಾಗಿ ಭಾರತದ ಏಕತೆ, ಸಾರ್ವಭೌಮತೆ, ಅಖಂಡತೆಯ ತಳಹದಿಯಲ್ಲಿ ನಡೆಯಿತು. ಮತ್ತು ಎಲ್ಲವೂ ಸುಸೂತ್ರವಾಗಿಯೇ ನಡೆಯಿತು. ಒಂದು ವೇಳೆ ವಿಲೀನಕ್ಕೆ ಅಡ್ಡಿಪಡಿಸಿದ್ದರೆ  ಸೈನಿಕ ಬಲದ ಮೂಲಕವಾದರೂ ಕೊಡಗು ಮೈಸೂರು ಸಂಸ್ಥಾನಕ್ಕೆ ಸೇರಲೇ ಬೇಕಿತ್ತು. ಏಕೆಂದರೆ ಏಕತೆ, ಸಾರ್ವಭೌಮತೆ ಮತ್ತು ಸಮಗ್ರತೆ.
 ಹೀಗೆ ಕೊಡಗು ಮೈಸೂರು ಪ್ರಾಂತಕ್ಕೆ ಸೇರಿ, ಮುಂದೆ ಮೈಸೂರು ಕರ್ನಾಟಕವಾಗಿ, ಕರ್ನಾಟಕದಲ್ಲಿ ರಾಜಕಾರಣಗಳು ಶುರುವಾಗಿ, ಆ ರಾಜಕಾರಣಕ್ಕೆ ಮೂರು ಅಸೆಂಬ್ಲಿ ಸೀಟುಗಳು ಸಿಕ್ಕಿ . ಲಕ್ಷಾಂತರ ಕೊಡಗಿನವರು ಇದರಿಂದ ಕರ್ನಾಟಕದಲ್ಲಿ ಸೇರಿ , ಎಲ್ಲವೂ ಸರಿಯಾಗಿ ಅನಂತರವೂ ಕೊಡಗನ್ನು ಜನ " ದೇಶ" ಎಂದೇ ಕರೆಯುತ್ತಿದ್ದ ಹೊತ್ತಿನಲ್ಲೇ ಅಪಸ್ವರವೊಂದು ಕೇಳಿಬರತೊಡಗಿತು.  ಅದೇ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ.
 ಎಲ್ಲವೂ ಮುಗಿದಿತ್ತು. ಇತಿಹಾಸದ ಭಾರಗಳಾವುವೂ ಇರಲಿಲ್ಲ. ಯಾವ ಬಂಧನವೂ ಇರಲಿಲ್ಲ. ಅಸಲು ಜನರಿಗೆ ಯಾರ ಆಡಳಿತದಲ್ಲೂ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಅಲ್ಲದೆ ನ್ಯಾಯವಾಗಿ ರಾಜ್ಯವನ್ನು ಕೇಳುವಂಥ ಯಾವ ತಾರ್ಕಿಕ  ಸಂಗತಿಗಳೂ ಇರಲಿಲ್ಲ. ಒಂದು ಹುಂಬತನ , ಪ್ರತ್ಯೇಕ ಅಸ್ತಿತ್ವದ ವಿತಂಡವಾದಗಳು, ಭಾವನೆಗಳನ್ನು  ಬಲವಂತವಾಗಿ ಕೆರಳಿಸುವ ಈ ಬೇಡಿಕೆಯಲ್ಲಿ ವಿಶೇಷವಾದ ಸಂವೇದನೆಯೊಂದರ ಸೆಲೆಯಿತ್ತೇ ಎಂದರೆ ಅದೂ ಇಲ್ಲ. ವಿಲೀನದ ಅನಂತರ ಕೊಡಗಿನ ಜನರಿಗಾದರೋ " ಈ ಕರ್ನಾಟಕದಲ್ಲಿ ಬದುಕುವುದು ದುಸ್ತರ" ಎಂಬ ವೇದನೆ ಇತ್ತೇ ಎಂದರೆ ಅದೂ ಕೂಡಾ ಇಲ್ಲವೇ ಇಲ್ಲ. ವಿಶಾಲ ಕರ್ನಾಟಕದಲ್ಲಿ ಪುಟ್ಟ ಕೊಡಗು ವಿಲೀನವಾದ ಅನಂತರ ಕೊಡಗಿಗೆ ಪ್ರಯೋಜನಗಳೇ ಕಂಡುಬಂದವು. ಮೀಸಲಾತಿಯ ಬಂಧವಿಲ್ಲದೆ ಹಲವಾರು ಜನರು ಕರ್ನಾಟಕದಲ್ಲಿ ಉದ್ಯೋಗಗಳನ್ನು ಕಂಡುಕೊಂಡರು. ಕೊಡಗಿನ ದನಿ ವಿಶಾಲ ಕರ್ನಾಟಕದಲ್ಲಿ  ಪ್ರತಿದನಿಸಿತು. ಅದುವರೆಗೆ ರಾಜಮನೆತನಗಳ ಸರ್ವಾಕಾರಿ ಧೋರಣೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಮತಾಂಧತೆ ಮತ್ತು ಬ್ರಿಟೀಷ್ ಕಲೆಕ್ಟರ್‌ಗಳ ನಾಜೂಕುತನಗಳ ನಡುವೆ ಬದುಕಬೇಕಾಗಿದ್ದ ಅನಿವಾರ್ಯತೆಗಳು, ಮಾನಸಿಕ ಗುಲಾಮಗಿರಿ, ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದ ನಾಯಕರು- ಪಾಳೇಗಾರರು ವೊದಲಾದವರಿಂದ ಜನ ನಿರಾಳತೆಯನ್ನು ಅನುಭವಿಸಿದ್ದು  ಈ ಕರ್ನಾಟಕದಿಂದಲೇ. ಸ್ವತಂತ್ರ ಭಾರತದಲ್ಲಿ ಬ್ರಿಟೀಷ್ ಆಳರಸರ ಮೋಜಿನ ತಾಣವಾಗಿದ್ದ ಕೊಡಗನ್ನು ದೇಸೀತನಕ್ಕೆ ತರಬೇಕಿದ್ದರೆ ಅದನ್ನು ಮೈಸೂರಿಗೇ ಸೇರಿಸಬೇಕಿತ್ತು ಮತ್ತು ಹಾಗೆ ಪ್ರತ್ಯೇಕವಾಗಿಡುವುದು ಮತ್ತಷ್ಟು ಅಪಾಯಕಾರಿಯಾಗುತ್ತಿತ್ತು. ಹೀಗೆ ವಿಲೀನದ ತರುವಾಯ ಕೊಡಗು ಪ್ರಬಲ ಕರ್ನಾಟಕದ ಶಕ್ತಿಯನ್ನು ತಾನೂ ಗಳಿಸಿಕೊಂಡು ಪ್ರಬಲ ಜಿಲ್ಲೆಯಾಗಿ ಬೆಳೆಯಿತು. ಇದರಲ್ಲಿ ಕೊಡಗು ಕಳೆದುಕೊಂಡುದೇನೂ ಇರಲಿಲ್ಲ.
ಕೊಡಗಿನ ಪ್ರತ್ಯೇಕತೆಯ ಅಧ್ಯಯನ ಮಾಡಿದ ಯಾರಿಗೇ ಆದರೂ "ಪ್ರತ್ಯೇಕ ರಾಜ್ಯ" ದ ಕೂಗಿನ ಹಿಂದಿನ ಅವೈಜ್ನಾನಿಕತೆಯ ಅರಿವಾಗುತ್ತದೆ. ಏಕೆಂದರೆ ಇಲ್ಲಿ ಕೊಡವ ಭಾಷೆಯ ಮಾತಾಡುವ ಕೊಡವ, ಅಮ್ಮ ಕೊಡವ, ಹೆಗ್ಗಡೆ, ಐರಿ, ಮಡಿವಾಳ, ನಾಯಂದ, ಕೊಯವ, ಕುಡಿಯ, ಮೇದ, ಕೆಂಬಟ್ಟಿ ಎಂಬ ದಲಿತ ಪಂಗಡಕ್ಕೆ ಸೇರಿದ ಜನಾಂಗದವರಿದ್ದಾರೆ. ಆದರೆ ಪ್ರತ್ಯೇಕತೆಯ ಹಿಂದಿನ ಭಾವದಲ್ಲಿ ಇವರೆಲ್ಲರೂ ಸೇರಿಲ್ಲ.  ಅಂದರೆ ಜಾತಿ ಆಧಾರಿತವಾದ ರಾಜ್ಯದ ಕಲ್ಪನೆ.  ಭಾರತ ಪ್ರಜಾಪ್ರಭುತ್ವವಾಗಿದ್ದು, ದಿಲ್ಲಿಯಲ್ಲಿ ರಾಜರು ಅಳಿದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಜಾರಿಗೊಂಡಿದ್ದು ಇರುವಾಗಲೇ ಇಲ್ಲಿ ಜಾತಿಯ ಹೆಸರಲ್ಲಿ ರಾಜ್ಯದ ಕಲ್ಪನೆ!  ಇದನ್ನು ವಿಚಿತ್ರವೆನ್ನಬೇಕೋ ವಿಪರ್ಯಾಸವೆನ್ನಬೇಕೋ?  ಅಂಥವರನ್ನು ನಗಾಡಿ  ಬಿಟ್ಟುಬಿಡಬೇಕೋ ಅಥವಾ ಈಗಲೇ ಬಾಲ ಸುಟ್ಟು ತುಂಡರಿಸಬೇಕೋ ಎನ್ನುವುದೇ ಗೊಂದಲವಾಗುತ್ತದೆ. ಇವೇ ಅಲ್ಲದೆ ಕೊಡಗಿನ ಜೀವ ತುಂಬಿದ , ದೇಶದಲ್ಲೇ ಕೊಡಗು ಗುರುತಿಸುವಂತೆ ಮಾಡಿದ ಕೊಡವೇತರ ಜನಾಂಗಗಳೂ ಇವೆ. ಆದ್ದರಿಂದ ಅರಸೊತ್ತಿಗೆಯ ಕಾಲದಿಂದಲೇ ಇಲ್ಲಿ ಸಂಸ್ಕೃತಿ ಮತ್ತು ಸಮಾಜದ ಹೊಸ ರೂಪವೊಂದು ಕೊಡಗಿನಲ್ಲಿ ಜನ್ಮ ತಾಳುತ್ತಾ ಬಂದಿತ್ತು. ಬ್ರಿಟೀಷ್ ಆಳ್ವಿಕೆಯಲ್ಲಿ ಅಲ್ಲಲ್ಲಿ ವ್ಯಾಪಕಗೊಂಡ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ನರು, ಶಿವಾಚಾರದ ಲಿಂಗಾಯತರು, ಅರೆ ಭಾಷೆಯ ಗೌಡರು, ಪಾಲೆಯರು, ಮಲೆಯರು, ಕುರುಬರು, ಅನಾದಿಯಿಂದಲೂ ಕೊಡವರ ಹಿಂಭಾಲಕರಾಗಿ , ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಭಾಳಿ ಬದುಕಿ ಇಂದು ಅವನತಿಯ ಅಂಚಿನಲ್ಲಿರುವ ಎರವರು  ಎಲ್ಲರೂ ಕೊಡಗಿನ ಅವಿಭಾಜ್ಯ ಅಂಗಗಳೇ. ಎಲ್ಲರೂ ಕೊಡಗಿನ ಜನರೇ. ಬಹುಭಾಷೆ, ಬಹುಸಂಸ್ಕೃತಿಯ ಮೇಳೈಕೆಯ ಸಂಸ್ಕೃತಿಯ ಅಪರೂಪದ ಕೊಡಗಿನಲ್ಲಿ ಈ ಎಲ್ಲಾ ಜನಾಂಗಗಳಿಗೆ ತನ್ನದೇ ಆದ ಐತಿಹಾಸಿಕ ಹಿನ್ನಲೆಗಳಿವೆ. ಈ ಎಲ್ಲಾ ಸಂಸ್ಕೃತಿಗಳು ಬ್ರಿಟೀಷರ ಕಾಲದಿಂದಲೂ , ಅರಸರ ಕಾಲದಿಂದಲೂ ಅನಂತರ " ಸೀ" ಸಂಸ್ಥಾನದ ಕಾಲದಿಂದಲೂ ಸಾಮರಸ್ಯದಿಂದಲೇ ಇದ್ದವರು. ಆದರೆ ಕೊಡಗು ಕರ್ನಾಟಕಕ್ಕೆ ಸೇರಿದ ಮೇಲೆ ಈ ಕೊಡವೇತರರೆಲ್ಲರೂ ಕೊಡವರನ್ನು ದಬ್ಬಾಳಿಕೆ ಮಾಡುವವರು ಎಂದೇಕಾಯಿತು? ಕರ್ನಾಟಕಕ್ಕೆ ಸೇರಿದ ಮೇಲೆ ಕೊಡವರ ಸಂಸ್ಕೃತಿ ಕೆಟ್ಟುಹೋಯಿತಂತೆ ಎಂದು ಭಾಷಣ ಮಾಡುವವರು ಇಂದಿಗೂ ಸಿಗುತ್ತಾರೆ.  ಹೀಗೆ ಭಾಷಣ ಮಾಡುವವರು ವರ್ಷಕ್ಕೊಮ್ಮೆ ಜನಾಂಗದ ಒಗ್ಗಟ್ಟಿನ ನೆಪದಲ್ಲಿ  ಇಸ್ಪ್ಪೇಟಾಟದ ಜೂಜು ಏರ್ಪಡಿಸುತ್ತಾರೆ.  ಇಂಥ ಶೋಕಿಗಳು ಸಂಸ್ಕೃತಿಗೆ ಮಾರಕ ಎನ್ನುವ ಮಾತನ್ನು ಯಾರೂ ಆಡುತ್ತಿಲ್ಲ.
 ತಮ್ಮ ಸಂಸ್ಕೃತಿಯ ಪತನವಾಯಿತು ಎಂದು ಅರಚುವ ಮಂದಿ ಕೊಡಗಿನ ಸಂವೇದನೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನಾಂಗವೊಂದಕ್ಕೆ ಪ್ರತ್ಯೇಕ ರಾಜ್ಯ ಬೇಕು ಎನ್ನುವುದಾದರೆ  ಉಳಿದ ಜನಾಂಗಕ್ಕೂ ಅವರವರ ಆಚಾರ ವಿಚಾರಗಳು , ಸಂಸ್ಕೃತಿಗಳು ಇದ್ದೇ ಇರುತ್ತವಲ್ಲ. ಹಾಗಾದರೆ ಅವರ ಹೆಸರಲ್ಲೂ ರಾಜ್ಯಗಳ ಬೇಡಿಕೆ ಇಡಬಹುದೇ?
ಜಾತಿಗಾಗಿ ರಾಜ್ಯ. ಆ ಜಾತಿ ಎಂದರೆ ಕೇವಲ ಜಾತಿಯಲ್ಲ. ಅದು ಧರ್ಮ. ಅದು ಖಂಡಿತಾ ಹಿಂದೂ ಧರ್ಮವಲ್ಲ  ಎಂದು ವಾದಿಸುವ ವಿಚಿತ್ರ ಜನರು ಇನ್ನೂ ಇದ್ದಾರೆ. ಕೊಡವರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂಬ ಕೂಗು ಬೇರೆ. ರಾಜಕೀಯ ಪ್ರಾತಿನಿಧ್ಯವನ್ನು ಜಾತಿ ಲೆಕ್ಕಾಚಾರದಲ್ಲಿ ಸಂವಿಧಾನ ಮಾಡಿಲ್ಲ, ಅಂಥದ್ದರ ಬಗ್ಗೆ ಮಾತಾಡಲೂ ಬಾರದು ಎಂಬ ನಾಚಿಕೆಯೇ ಇಲ್ಲದೆ  ಕೆಲವರು  ಗಂಟಲು ಹರಿಯಬಿಡುವುದು ಇಂದೂ ನಿಂತಿಲ್ಲ. ಕೇಳಿದವರಿಗೇ ನಾಚಿಕೆಯೆನಿಸಬೇಕು ಎಂಬಷ್ಟು  ಕಠೋರತೆಗಳು.  ಇವೆಲ್ಲಕ್ಕೂ ಅವರಲ್ಲಿ ಚಿಲ್ಲರೆಚಿಲ್ಲರೆಯಾದ ಉತ್ತರಗಳು ಸಿದ್ಧವಿರುತ್ತವೆ. " ಕೊಡವ ಎಂದರೆ ಹಿಂದೂ ಧರ್ಮದ ಪವಿತ್ರ ಶಾಖೆಯಲ್ಲವೇ?" ಎಂದರೆ "ಯಾರೆಂದರು ಹಾಗೆಂದು ? ನಾವು ವಿದೇಶದಿಂದ ಬಂದವರು. ದ್ರಾವಿಡರಲ್ಲ ಆರ್ಯರು" ಎಂಬ ಕುಸಿದುಹೋದ ವಾದವನ್ನು ಮಂಡಿಸುತ್ತಾರೆ. "ದಬ್ಬಾಳಿಕೆ ಯಾರು ಮಾಡುತ್ತಿದ್ದಾರೆ? " ಎಂದರೆ "ಕರ್ನಾಟಕದವರು" ಎಂದು ಅಬ್ಬರಿಸುತ್ತಾರೆ.
  ಇಂದು ಪ್ರತ್ಯೇಕ ರಾಜ್ಯದ ಅಬ್ಬರದಲ್ಲಿ ಮುಳುಗಿದ್ದ ಹಲವರಿಗೆ ಜ್ನಾನೋದಯವಾಗಿದೆ. ಆದರೆ ಸಂಪೂರ್ಣ ದನಿ ಹೂತುಹೋಗಿಲ್ಲ.  ಏಕೆಂದರೆ ಭಾವನೆಗಳನ್ನು ಅರಳಿಸುವ ಕೆಲಸವನ್ನು ಮಾಡುವವರು ತೆಪ್ಪಗಿದ್ದಾರೆ. ಮತ್ತು ಕಲ್ಯಾಣ ಮಂಟಪಗಳನ್ನು ಕಟ್ಟಿಸುತ್ತಿದ್ದಾರೆ. ಆದ್ದರಿಂದ ಭಾವನೆಗಳನ್ನು ಕೆರಳಿಸುವವರು ಯುವ ಪೀಳಿಗೆಯನ್ನು ಕೆರಳಿಸುತ್ತಿದ್ದಾರೆ. ಇದು ಮುಂದೊಂದು ದಿನಕ್ಕೆ ಅಪಾಯ ಕಟ್ಟಿಟ್ಟದ್ದು ಎನ್ನುವುದರಲ್ಲಿ ಸಂದೇಹವಿಲ್ಲ. ಕೊಡಗಿನಲ್ಲಿ  ಎಲ್ಲರೂ ಪ್ರತ್ಯೇಕ ರಾಜ್ಯವನ್ನಾಗಲೀ ಅಥವಾ ಸ್ವಾಯತ್ತೆಯನ್ನಾಗಲೀ ಬೆಂಬಲಿಸುವವರಿಲ್ಲ. ಕೊಡವರಲ್ಲೂ ಎಲ್ಲರೂ ಪ್ರತ್ಯೇಕತಾವಾದಿಗಳಲ್ಲ. ಚಿಂತಕರು, ಸಮಾಜದ ಬಗ್ಗೆ ಕನಸ್ಸು ಕಂಡವರಿಗೆ ಹೃದಯ ವೈಶಾಲ್ಯವಿದೆ. ವೈಚಾರಿಕ ಜಾಗೃತಿಯಿದೆ. ಅವೆಲ್ಲವೂ ಇಲ್ಲದವರು ಅವೆಲ್ಲವೂ ಅರ್ಥವಾಗದವರು ಅಸಹನೆ ಬೆಳೆಸಿಕೊಂಡಿದ್ದಾರೆ.
ತನ್ನದಲ್ಲದರ ಬಗೆಗಿನ ಅಸಹನೆಗಳು ಕೂಡಾ ತೀವ್ರವಾದ ಅಪಾಯವನ್ನು ಹೊತ್ತಿರುತ್ತವೆ.  ಇಂದಿನ ರಾಜಕಾರಣದ ಹೊಲಸುತನ, ಸಿಕ್ಕವರಿಗೆ ಸಿಕ್ಕ ಸೀರುಂಡೆ, ಸಿಗದವರ ನಾಲಗೆಯಲ್ಲಿ ಬುಳುಬುಳನೆ ಬರುವ ಆಸೆಯ ನೀರುಗಳಿಗೆ ಭಾವನೆಗಳೂ ಸಿದ್ಧಾಂತಗಳಂತೆ ಕಂಡುಬಿಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಹಾಗಾಗಿ ಇಂದು ಕೊಡಗಿನಲ್ಲಿ ಪರಿಸರ ರಕ್ಷಿಸಲು ಯುನೆಸ್ಕೋ ಬಂದಾಗ " ನೀವಾರು ಬರಲು"ಎಂದು ಅಬ್ಬರಿಸುತ್ತಾರೆ. ಅಕ್ರಮ ಮರಳು ದಂದೆಯಲ್ಲೂ "ನಮ್ಮವರು ತಾನೇ" ಎಂಬ ಸಮಜಾಯಿಷಿ ಹುಟ್ಟಿಕೊಳ್ಳುತ್ತವೆ. ಜನಾಂಗದಲ್ಲಿ ವೈಚಾರಿಕ ಕೊರತೆಯಿದೆಯಲ್ಲವೇ ಎಂಬುದೂ ಅರಿವಿಗೆ ಬಾರದೇ ಹೋಗುತ್ತಿದೆ. ಜನಾಂಗದ ಒಗ್ಗಟ್ಟಿನ ಹೆಸರಲ್ಲಿ ಇಸ್ಪೇಟಾಟವೂ ನಡೆದರೆ ತಪ್ಪೇನು ಎನ್ನಿಸಲಾರಂಭಿಸುತ್ತದೆ.
ವಿಚಿತ್ರ ಎನಿಸುತ್ತದೆ. ಇಂಥ ತೀವ್ರತರವಾದ ಭಾವನೆಗಳವರು ಕೇಳುತ್ತಿರುವುದು  ರಾಷ್ಟ್ರವನ್ನಲ್ಲವಲ್ಲ, ರಾಜ್ಯವನ್ನು ತಾನೇ ಎಂದುಕೊಳ್ಳುವಂತೆಯೂ ಇಲ್ಲ. ಏಕೆಂದರೆ ತನ್ನದಲ್ಲದರ ಬಗೆಗೆ ತೀವ್ರವಾದ ಅಸಹನೆಯನ್ನು ಹೊಂದಿರುವ ಯಾವ ಬೇಡಿಕೆಯೂ ಈಡೇರಬಾರದು. ರಾಜ್ಯವಷ್ಟೇ ಅಲ್ಲ ಒಂದು ಗರಿಕೆಯನ್ನೂ ಹಾಗೆ ಯಾರೂ ಪಡೆದುಕೊಳ್ಳಲು ಸಾಧ್ಯವಾಗಬಾರದು.
 ಪತ್ರಕರ್ತ ಪಿ.ಟಿ. ಬೋಪಣ್ಣನವರ " ಕೊಡಗು ರಾಜ್ಯದ ಉದಯ- ಪತನ " ಪುಸ್ತಕವನ್ನೋದುವಾಗ ಈ ಸಂಗತಿಗಳೆಲ್ಲವೂ ಉಲ್ಲೇಖವಾಗಲಿಲ್ಲವಲ್ಲ ಎನಿಸಿತ್ತು.

No comments: