ನಾಯಕರುಹೇಗಿರುತ್ತಾರೆ? ನಾಯಕತ್ವ ಹೇಗೆ ರೂಪು ಪಡೆಯುತ್ತದೆ ಎಂಬ ಎರಡು ಪ್ರಶ್ನೆಗಳು ಅವುಗಳ ಗುಣಮಟ್ಟ ಮತ್ತು ಕಾರ್ಯವೈಖರಿಯ ಉತ್ತರಗಳೂ ಹೌದು. ಈ ಹಿನ್ನೆಲೆಯಲ್ಲಿ ಈ ಸಂಚಿಕೆಯನ್ನು ರೂಪಿಸಿದ್ದೇವೆ. ಎಂಥೆಂಥವರೋ ನಾಯಕ ಗಣವನ್ನು ಕಂಡ ದೇಶ ಇದು. ಅಲ್ಲೇ ಇಂದು ಎಂಥೆಂಥದ್ದೋ ವಿಪರ್ಯಾಸಗಳನ್ನು ದೇಶ ನೋಡುತ್ತಿದೆ. ಅದೂ ನಾಯಕರ ಮುಖಾಂತರ. ಆ ಕಾರಣಕ್ಕೆ ನಾಯಕತ್ವವನ್ನು ಪರಿಚರ್ಚಿಸಲು ಇದು ಸೂಕ್ತ ಸಮಯ.
ಸಮಾಜವೊಂದು ಬೃಹತ್ ಶಕ್ತಿ. ಅದೊಂದು ಸಮೂಹ. ಸಮೂಹವೊಂದು ತನ್ನಿಂದ ತಾನೇ ಚಲಿಸಲಾರದು. ಚಲನೆಗೊಳಪಡಿಸಲು ಒಂದು ಗುರಿ ಇರಬೇಕು. ಅದಕ್ಕೊಬ್ಬ ಗುರಿಕಾರ ಇರಬೇಕು. ಹಾಗಾಗಿ ಸಮಾಜರಥದ ಸಾರಥಿಯಾಗಿ ನಾಯಕನನ್ನು ಒಪ್ಪಿಕೊಳ್ಳುವ ಪರಂಪರೆ ಬಹುತೇಕ ಎಲ್ಲಾ ಸಮಾಜದ್ದು. ಆದರೆ ಕಾಲದ ಭರದಲ್ಲಿ ವಿಕೃತಿಗೊಳ್ಳದೆ ಇದ್ದುದ್ದು ಯಾವುದಿದೆ? ಕಾಲದ ಭರದಲ್ಲಿ ನಾಯಕನೂ ಅರ್ಥ ಪಲ್ಲಟಗೊಂಡ. ಕಂಡೆಕ್ಟರನು ಕುಡಿದಿದ್ದರೆ ಸಹಿಸಿಕೊಳ್ಳಬಹುದಿತ್ತೇನೋ.ಆದರೆ ಇಲ್ಲಿ ಡ್ರೈವರನಿಗೇ ಅಮಲೇರಿತ್ತು.ಪರಿಣಾಮ ಸಮಾಜವೂ ದಿಕ್ಕು ತಪ್ಪಿತು. ಹೀಗೆ ಅನಿವಾರ್ಯತೆಗಾಗಿ ಅಸಂಬಂಧವೆನಿಸಿದವುಗಳೆಲ್ಲವೂ ನಾಯಕನ ಬಿಂಬದಲ್ಲಿ ಸಮಾಜರಥದ ಸಾರಥಿಗಳಾದರು.
ಕೆಲವು ಸಂದರ್ಭಗಳು ಉತ್ತಮ ನಾಯಕನನ್ನು ರೂಪಿಸಿದವು. ಆಕ್ರಮಣವನ್ನು ಅಟ್ಟುವ ಬಲ ಮತ್ತು ಇಚ್ಛಾ ಶಕ್ತಿಗಳೇ ಒಂದು ಕಾಲದ ನಾಯಕರ ಗುರಿ ಮತ್ತು ನಾಯಕತ್ವದ ಮಾನದಂಡವೂ ಆಗಿತ್ತು.ಒಂದರ್ಥದಲ್ಲಿ ಹೇಳಬೇಕೆಂದರೆ ಪರಕೀಯ ಆಳ್ವಿಕೆಯಲ್ಲಿ, ನಿರಂಕುಶತೆಯಡಿಯಲ್ಲಿ ಹೊರಬಂದ ನಾಯಕರು ಅತಿ ಹೆಚ್ಚು ಇಚ್ಛಾ ಶಕ್ತಿಯನ್ನ್ನೂ ಕಾಳಜಿಯನ್ನೂ ಹೊಂದಿರುವುದೂ ಗಮನ ಸೆಳೆಯುತ್ತದೆ. ಅಂಥ ಬಹಳಷ್ಟು ಮಹಾಪುರುಷರನ್ನು ದೇಶ ಕಂಡಿದೆ. ಗ್ರೀಕರ ವಿರುದ್ಧ ಎದ್ದ ನಾಯಕತ್ವ, ಸಾಮ್ರಾಜ್ಯಗಳನ್ನು ಸಂಚಯಿಸಿದ ನಾಯಕತ್ವ, ಮೊಗಲರ ವಿರುದ್ಧ ಹೋರಾಡಿದ ನಾಯಕತ್ವ, ಅನಂತರ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಾಯಕತ್ವಗಳು ದಾಸ್ಯದ ಕಾಲದಲ್ಲಿ ಸ್ವಾಭಿಮಾನವನ್ನು ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದವು. ದಾಸ್ಯ ಕಳೆಯಿತು. ಪ್ರಜಾಪ್ರಭುತ್ವವೇ ಬಂತು. ದಾಸ್ಯದ ಕಾಲದಲ್ಲಿ ನಾಯಕತ್ವವನ್ನು ಗಾಂಧಿಯ ಕೈಗೆ ಕೊಟ್ಟ ಜನತೆ ಗಾಂಧೀ ಅನಂತರ ಯಾರು ಎಂಬ ಪ್ರಶ್ನೆಗೆ ಬಿದ್ದದ್ದೇ ದೇಶದ ನಾಯಕತ್ವದ ದಿಕ್ಕು ತಪ್ಪತೊಡಗಿತು. ಏಕೆಂದರೆ ಸರಳತೆಯನ್ನು, ಅಂಹಿಸೆಯನ್ನು, ಧರ್ಮವನ್ನು, ರಾಮರಾಜ್ಯವನ್ನು ಬೋಧಿಸಿದ ಗಾಂಧಿಯೇ ಸ್ವತಃ ನಾಯಕತ್ವದ ವ್ಯಾಖ್ಯಾನದ ದಿಕ್ಕು ತಪ್ಪಿಸಿ ಬಿಟ್ಟರು. ನೆಹರೂ ಕೈಗೆ ಆಡಳಿತದ ಚುಕ್ಕಾಣಿ ವಹಿಸಿಕೊಟ್ಟುಬಿಟ್ಟರು, ಅಲ್ಲಿಂದ ದೇಶ ಮಂತ್ರಿಗಳನ್ನ್ನೂ ನಾಯಕರೆಂದು ಬಲವಂತವಾಗಿ ಒಪ್ಪಿಕೊಳ್ಳುವ ಮಾನಸಿಕತೆಯನ್ನು ಬೆಳೆಸಿಕೊಂಡರು. ಅದು ಎಷ್ಟು ಮುಂದುವರಿಯಿತೆಂದರೆ ಚುನಾವಣೆಗೆ ಸ್ಪರ್ಧಿಸುವವನ್ನು ನಾಯಕರೆಂದು ಒಪ್ಪಿಕೊಳ್ಳುವ ಹಂತಕ್ಕೆ ನಾವು ಬಂದೆವು. ನಾವು ಇಂದು ಕಾಣುತ್ತ್ತಿರುವ ಸಮಾಜದ ಅನಿಷ್ಟಗಳೆಲ್ಲದರ ಮೂಲ ಧಾತು ಅಲ್ಲಿಂದಲೇ ಶುರುವಾಗುತ್ತವೆ. ಪರಿಣಾಮ ಪರಿಸ್ಥಿತಿ ಇಂದು ಹೀಗಿದೆ. ಇಂದು ನಾಯಕರ ಮೇಲೆ ಭಕ್ತಿ ಮೂಡುತ್ತಿಲ್ಲ. ಏಕೆಂದರೆ ವಾಸ್ತವವಾಗಿ ಅವರೆಲ್ಲರೂ ನಾಯಕರೇ ಅಲ್ಲ. ನಾಯಕರ ಮೇಲೆ ಗೌರವವೂ ಮೂಡುತ್ತಿಲ್ಲ. ಕಾಣುತ್ತಿರುವುದೆಲ್ಲವೂ ನಾಟಕರಂಗ. ನಾಯಕರು ಶುದ್ಧವಾಗಿಲ್ಲ. ಅವರು ಕೇವಲ ಚುನಾವಣಾ ಕೇಂದ್ರಿತ ಉದ್ಯಮಿಗಳು ಮಾತ್ರ. ಇನ್ನೆಲ್ಲಿ ದೇಶ-ಧರ್ಮ, ಇನ್ನೆಲ್ಲಿಯ ನೈತಿಕತೆ, ಮೌಲ್ಯ? ನಾಯಕ ಬೇಲಿಯೂ ಹೌದು, ಹೊಲವೂ ಹೌದು. ಇಂದೇನಾಗಿದೆಯೆಂದರೆ ಬೇಲಿ ಹೊಲ ಮೇಯುತ್ತಿದೆ. ಹೊಲ ಬೇಲಿಗೆ ಇಂಬು ನೀಡುತ್ತಿದೆ.
ಅಂಥ ಪರಿಸ್ಥಿತಿಯಲ್ಲಿ ಒಬ್ಬ ಅಣ್ಣಾ ಹಜಾರೆ ರಾಷ್ಟ್ರ ನಾಯಕರಂತೆ ಕಂಡುಬರುತ್ತಾರೆಯೇ ಹೊರತು ಚುನಾವಣೆಯಲ್ಲಿ ಹಣ ಚೆಲ್ಲಿ ಅಬ್ಬರದ ಪ್ರಚಾರದಿಂದ ಜಯಿಸಿ ಬಂದವರಲ್ಲ. ಅಂಥವರ ಕೈಯಲ್ಲಿ ಅಧಿಕಾರವಿರಬಹುದು. ಆದರೆ ಮನಪೂರ್ವಕ ಗೌರವ ನೀಡಬೇಕೆನಿಸುವುದಿಲ್ಲ. ಸ್ವಾತಂತ್ರ್ಯಪೂರ್ವದ ಘಟನಾವಳಿಗಳನ್ನೇ ಗಮನಕ್ಕೆ ತೆಗೆದುಕೊಳ್ಳಬಹುದು. ಅಂದೂ ಚುನಾವಣೆಗಿಳಿದ್ದವು. ಕೆಲವು ಸ್ವಾತಂತ್ರ್ಯ ಹೋರಾಟಗಾರರೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರಾರೂ ಇಂದು ನೆನಪಿಲ್ಲ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸದ ಗಾಂಧಿ, ತಿಲಕರು ನೆನಪಿನಲ್ಲಿ ಉಳಿಯುತ್ತಾರೆ. ಮುಂದೊಂದು ದಿನ ಇಂದು ನಾಯಕರ ಪೋಷಾಕಿನಲ್ಲಿ ಕಾಣಿಸಿಕೊಳ್ಳುವವರೆಲ್ಲರೂ ಮರೆತು ಹೋಗುತ್ತಾರೆ. ಅಮೃತ ಶಿಲೆಗಳ ಶಿಲಾನ್ಯಾಸಗಳಲ್ಲಿ ಹೆಸರೊಂದಿರುತ್ತದೆ. ಹಜಾರೆಯಂಥವರು ನೆನಪಾಗುತ್ತಾರೆ. ದಾಸ್ಯಕ್ಕಿಂತಲೂ ಸ್ವಪ್ರಭುತ್ವದ ಕಾಲದಲ್ಲೇ ನಾಯಕರ ಅಗತ್ಯತೆ ಹೆಚ್ಚು ಎನ್ನುವ ವಾಸ್ತವದ ಸತ್ಯ ಇದರೆಡೆಯಲ್ಲಿ ಕಾಡುತ್ತದೆ. ನಾಯಕತ್ವ ಎಂಬ ಸಂವೇದನೆ ದಾಸ್ಯದ ಕಾಲದಲ್ಲಿಯೇ ಉಳಿದು ಹೋಯಿತು ಎಂಬ ವಾಸ್ತವದ ಸಂಗತಿಯನ್ನೂ ಮರೆಯುವಂತಿಲ್ಲ. ಅದನ್ನು ದಾಸ್ಯಕಾಲದ ಉಡುಗೊರೆ ಎನ್ನುವ ಹಾಗಿಲ್ಲವಲ್ಲ. ಆದರೆ ಸ್ವಪ್ರಭುತ್ವದ ಕೊರತೆ ಎಂದು ನಿಸ್ಸಂಶಯವಾಗಿ ಹೇಳಬಹುದು.
No comments:
Post a Comment