ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಮೊನ್ನೆ ತಾನೇ ನಕ್ಸಲ್ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಿನಾಯಕ ಸೇನನಿಗೆ ಜಾಮೀನು ಸಿಕ್ಕಿದೆ. ನ್ಯಾಯಾಂಗದ ಒಂದು ಅಂಗ ಅಪರಾಧಿ ಎಂದು ಘೋಷಿಸಿ ಜೈಲಿಗಟ್ಟಿದರೆ ಅದೇ ವಿನಾಯಕ ಸೇನನನ್ನು ಸುಪ್ರೀಂಕೋರ್ಟು ಜಾಮೀನು ನೀಡಿ ಹೊರಗೆ ಕಳುಹಿಸಿದೆ. ಇದೊಂಥರಾ ಮಾಯೆ! ತನ್ನೊಳಗೆ ಇಲ್ಲದ ಸಹಮತದ ಬಹಿರಂಗ ಪ್ರಕಟೀಕರಣ. ಛತ್ತೀಸ್‌ಗಢದ ಕೋರ್ಟು ಯಾವುದನ್ನು ಅಪರಾಧ ಎಂದುಬಣ್ಣಿಸಿತ್ತೊ ಅದನ್ನು ಸುಪ್ರೀಂಕೋರ್ಟು ಛೀಮಾರಿ ಹಾಕಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಭಾರತೀಯ ಕಾನೂನುಗಳ ಬಗ್ಗೆ ಗೌರವ ಮೂಡುವುದಾದರೂ ಹೇಗೆ? ಹೈಕೋರ್ಟಿನದ್ದು ಸರಿಯೋ ಸುಪ್ರೀಂಕೋರ್ಟಿನದ್ದು ಸರಿಯೋ ಎಂಬ ಗೊಂದಲ ಸಾಮಾನ್ಯನಿಗೆ ಮೂಡದಿರಲು ಹೇಗೆ ಸಾಧ್ಯ? ಇಂಥ ಗೊಂದಲದ ಸೃಷ್ಟಿ ಸಾಧುವೋ?
ಇಲ್ಲಿ ಕಾನೂನುಗಳು ಕೇವಲ ಹಗ್ಗಜಗ್ಗಾಟ ನಡೆಸಿಲ್ಲ. ನಕ್ಸಲ ವಿನಾಯಕ ಸೇನನನ್ನು ಬಿಡುಗಡೆಗೊಳಿಸಿದ ಸುಪ್ರಿಂಕೋರ್ಟು “ಹೇಗೆ ಗಾಂಧಿ ಪುಸ್ತಕವನ್ನು ಇಟ್ಟುಕೊಂಡವನನ್ನು ಗಾಂಧಿವಾದಿ ಎಂದು ಹೇಳಲು ಸಾಧ್ಯವಿಲ್ಲವೋ ಹಾಗೆ ನಕ್ಸಲ್ ಪುಸ್ತಕವನ್ನು ಇಟ್ಟುಕೊಂಡವನನ್ನು ನಕ್ಸಲ್ ಬೆಂಬಲಿತ ಎಂದೂ ಹೇಳಲಾಗುವುದಿಲ್ಲ" ಎಂಬ ಮಹಾಭಯಂಕರ ಹೇಳಿಕೆಯನ್ನು ನೀಡಿದೆ. ಈ ಹೇಳಿಕೆಯ ಮೂಲಕ ಘನ ನ್ಯಾಯಾಲಯವೊಂದು ತನಗರಿವಿಲ್ಲದಂತೆ ಗಾಂಧಿ ಮತ್ತು ನಕ್ಸಲ್
ಸಮೀಕರಣದಲ್ಲಿ ತೊಡಗಿದೆ. ಮತ್ತೇನು...? ಗಾಂಧಿ ಸಾಹಿತ್ಯ ಇಟ್ಟುಕೊಂಡವನನ್ನು ಗಾಂಧೀವಾದಿ ಎಂದು ಖಂಡಿತಾ ಹೇಳಲಾಗುವುದಿಲ್ಲ. ಯಾವ ಪುಸ್ತಕ ಇಟ್ಟುಕೊಂಡರೂ ಹಾಗೇ ಹೇಳಲು ಸಾಧ್ಯವಾಗುವುದಿಲ್ಲ. ಬೋಸರು, ತಿಲಕರು, ಜೆ.ಪಿ. ವಿನೋಬಾ ಯಾರದ್ದೇ ಆಗಲಿ. ಅವೆಲ್ಲವೂ ಒಂದು ಸಿದ್ಧಾಂತಗಳು. ಭಾರತೀಯ ನೆಲೆಯ ತತ್ವಗಳು. ಅಷ್ಟಕ್ಕೂ ಅವು ನಿಷೇಧಿತವಲ್ಲ. ವಿಚಾರಗಳಲ್ಲಿ ವಿರೋಧವಿದ್ದರೂ ಸಿದ್ದಾಂತಗಳ ಅಧ್ಯಯನಕ್ಕೆ ಚೌಕಟ್ಟಿಲ್ಲ. ಕಮ್ಯುನಿಸ್ಟ್ ಕಚೇರಿಯಲ್ಲಿ
ಚಿಂತನಗಂಗಾ ಇಟ್ಟುಕೊಂಡರೆ ಕಮ್ಯೂನಿಸ್ಟರೇನೂ ಆರೆಸ್ಸೆಸ್ ಆಗುವುದಿಲ್ಲ. ಹಾಗೆ ಭಾವಿಸುವುದೂ ತಪ್ಪು. ಆದರೆ ನಕ್ಸಲ್ ಸಾಹಿತ್ಯ...? ಯಾವುದು ದೇಶದಲ್ಲಿ ನಿಷಿದ್ಧವೋ, ಯಾವುದು ಮನೆ ಹಾಳೋ , ಯಾವುದು ಭಯಾನಕವೋ, ಯಾವುದು ಅಪರಾಧವೋ ಅಂಥದನ್ನು ಇಟ್ಟುಕೊಳ್ಳುವುದು ಅಮಾಯಕತನವೇ? ಗಾಂಧಿ ಪುಸ್ತಕ ವ್ಯವಸ್ಥೆಗೆ ಸೆಡ್ಡು ಹೊಡೆಯುವ ಪುಸ್ತಕವಲ್ಲ. ಆದರೆ ವಿನಾಯಕಸೇನ್ ಇಟ್ಟುಕೊಂಡಿದ್ದ ನಕ್ಸಲ್ ಸಾಹಿತ್ಯ ಕಾನೂನು ಕಟ್ಟುವ ವಿಚಾರಧಾರೆಯದ್ದೇ? ಭಾರತದ
ಸುಪ್ರೀಂಕೋರ್ಟು ದುರದೃಷ್ಟವೆಂಬಂತೆ ನಕ್ಸಲ್ ಸಾಹಿತ್ಯವನ್ನು ಹಾಗೆ ಭಾವಿಸಿಕೊಂಡು ಬಿಟ್ಟಿದೆ. ಅಷ್ಟಕ್ಕೂ ನಕ್ಸಲ್ ಸಾಹಿತ್ಯದಂತಹ ನಿಷೇಧಿತ ಸಾಹಿತ್ಯದ ಮುಟ್ಟುಗೋಲು ಮತ್ತು ಇಟ್ಟುಕೊಂಡವನ ಬಂಧನಕ್ಕೆ ಕಾರಣಗಳು ಕಾನೂನಿನಲ್ಲೇ ಇವೆ. ಗಾಂಧಿ ಸಾಹಿತ್ಯದ ಮುಟ್ಟುಗೋಲಿಗೆ ಕಾನೂನಿನಲ್ಲಿ ಅವಕಾಶಗಳಿಲ್ಲ. ಆದರೂ ಕಾನೂನು ಏನೇನೋ ಬಡಬಡಿಸಿಬಿಟ್ಟಿದೆ. ವ್ಯವಸ್ಥೆಯ ಬಗ್ಗೆ ಕನಸು ಕಂಡ ಶಾಂತಿದೂತ ಗಾಂಧಿ ಮತ್ತು ವ್ಯವಸ್ಥೆಗೆ ಕಿಚ್ಚು ಹಚ್ಚುವ ನಕ್ಸಲ್
ಬಗ್ಗೆ ಕೋರ್ಟು ಕೊಟ್ಟ ಹೇಳಿಕೆಯ ಹಿಂದೆ ಎಷ್ಟೊಂದು ಗಂಭೀರ ಅರ್ಥಗಳಿವೆ.
ವಿನಾಯಕ ಸೇನ್. ಒಂದು ಸುಂದರ ಬಂಗಾಳಿ ಹೆಸರು. ಸಾಮಾಜಿಕ ಕಾರ್ಯಕರ್ತನಾಗಬಲ್ಲ ಪ್ರತಿಭೆ, ಸಂಘಟನಾ ಚಾತುರ್‍ಯ ಎಲ್ಲವೂ ಇದ್ದ ಅಧ್ಯಯನಶೀಲ ಮಕ್ಕಳ ವೈದ್ಯ.ಆದರೆ ಇಷ್ಟರಿಂದಲೇ ಒಬ್ಬನನ್ನು ಅಳೆಯಲಾಗುವುದಿಲ್ಲ. ಇವಿಷ್ಟು ಒಬ್ಬ ವ್ಯಕ್ತಿಯ ಚಿತ್ರಣವನ್ನು ಕೊಡಬಹುದು. ಆದರೆ ವ್ಯಕ್ತಿತ್ವದ ಚಿತ್ರಣವನ್ನು ಕೊಡಲಾರದು. ತಲೆಗೆ ಹತ್ತಿದ ವಿದ್ಯೆ ವಿನಾಯಕ ಸೇನರನ್ನು ಕಾಡು ನುಗ್ಗುವಂತೆ ಮಾಡಿತಾದರೂ ಆತ ಕಾಡಿನಲ್ಲಿ ಮಾಡಿದ್ದೇ ಬೇರೆ. ಓರ್ವ ವೈದ್ಯ ಮಾಡುವ
ಕೆಲಸವನ್ನು ಬಿಟ್ಟು ಬೇರೆ ಎಲ್ಲವನ್ನೂ ವಿನಾಯಕ ಸೇನ್ ಮಾಡಿದರು. ಮದ್ದು ಕೊಡುವುದು ಬಿಟ್ಟು ಕ್ರಾಂತಿಯ ಪಾಠ ಮಾಡಿದರು. ಉಳ್ಳವರು ಇಲ್ಲದವರ ಹೋಲಿಕೆ ಮಾಡಿ ಉತ್ಪೇಕ್ಷೆಯಿಂದ ಬೋಧಿಸಿದರು. ಶಾಲೆ ತೆರೆಯುವುದು ಬಿಟ್ಟು ಬಂದೂಕಿಗೆ ಫಂಡ್ ತಂದರು. ಸರಕಾರಿ ಶಾಲೆಗಳನ್ನು ವಿರೋಧಿಸಿದರು. ಇಂಥ ವಿನಾಯಕ ಸೇನ್ ಬಹುಬೇಗ ನಾಡಿನ ನಕ್ಸಲರಾಗಿ ಬೆಳೆದರು. ಬುದ್ಧಿಜೀವಿಗಳಿಗೆ ಆರಾಧ್ಯವಾಗುತ್ತಿದ್ದರು. ಇಂಥ ನಕ್ಸಲ ಬಂಧನಕ್ಕೊಳಗಾದಾಗ ಇಡೀ ದೇಶದ ಬುದ್ಧಿಜೀವಿ
ವರ್ಗವೆಲ್ಲಾ ಎದ್ದು ನಿಂತು ಸೇನ್‌ಗೆ ಬೆಂಬಲ ಸೂಚಿಸಿದರು. ೮೦ಕ್ಕೂ ಅಧಿಕ ದೇಶಗಳ ಸಾಹಿತಿಗಳು, ಬುದ್ಧಿಜೀವಿಗಳು. ವಿಶ್ವಾದ್ಯಂತದ ೨೨ ಮಂದಿ ನೊಬೆಲ್ ಪಾರಿತೋಷಕ ವಿಜೇತರೆಲ್ಲರೂ, ಭಾರತದ ಮಾಧ್ಯಮಗಳೆಲ್ಲವೂ ಬೊಬ್ಬಿರಿದು ವಿನಾಯಕ ಅಮಾಯಕನೆಂದೂ ಮಾನವಹಕ್ಕಿನ ಪ್ರತಿಪಾದಕನೆಂದೂ ಬಿಂಬಿಸಿದರು. ಜೀವಾವಧಿ ಶಿಕ್ಷೆಗೊಳಗಾದಾಗಲೂ ಸೇನ್ ಒಂದು ರೀತಿಯ ಇಮೇಜ್ ಬೆಳೆಸಿಕೊಂಡೇ ಜೈಲು ಸೇರಿದರು. ಏಕೆಂದರೆ ಈ ಸೇನ್ ನಕ್ಸಲ್ ಕಾರುಬಾರುಗಳನ್ನು
ವ್ಯವಸ್ಥಿತವಾಗೇ ಮಾಡುತ್ತಿದ್ದವನು . ಅದಕ್ಕಾಗಿ ಆತ ಆರಿಸಿಕೊಂಡದ್ದು ಪಿಯುಸಿಎಲ್ ಎಂಬ ಸಂಘಟನೆಯೊಂದನ್ನು. ಈ ಪಿಯುಸಿಎಲ್ ಹೇಗೆಂದರೆ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಾ ನಕ್ಸಲ್ ಬೆಂಬಲಿಸುವ ಖತರ್‌ನಾಕ್ ಸಂಘಟನೆ. ಮಾನವ ಹಕ್ಕುಗಳು ಮತ್ತು ಹಾಸ್ಯಾಸ್ಪದವೆನಿಸುವ ಜಾತ್ಯತೀತತೆಯ ನೆರಳಲ್ಲಿ ಅದು ಕಾರ್ಯಾಚರಿಸುತ್ತದೆ. ಇವರೊಂಥರಾ ನಾಡಲ್ಲಿರುವ ನಕ್ಸಲರಂತೆ. ಇವರು ಬಂದೂಕು ಹಿಡಿಯಲಾರರು. ಅಲ್ಲದೆ ಸಾಹಿತಿಗಳು ಬೇರೆ. ನಕ್ಸಲ್ ಸಿದ್ಧಾಂತ
ಓದಿಕೊಂಡು ವೈಚಾರಿಕವಾಗಿ ಮಾತಾಡಬಲ್ಲವರು ಮತ್ತು ಪೆನ್ನನ್ನೇ ಗನ್ನು ಎಂದು ಪರಿಭಾವಿಸಿರುವ ಡಯಾಬಿಟಿಸ್ ಹೊಂದಿರುವ ಮಂದಿಗಳು. ಇವರು ವಿದೇಶಗಳ ಚಳವಳಿಯ ಕಾವಿಗೆ ಪುಳಕಗೊಳ್ಳುವವರು. ವಿನಾಯಕ ಸೇನ್ ಕೂಡ ಈ ಸಂಘಟನೆಯ ಸಕ್ರಿಯ ಕಾರ್ಯಕರ್ತ ಮತ್ತು ಅದರ ಅಖಿಲ ಭಾರತೀಯ ಉಪಾಧ್ಯಕ್ಷ ಮತ್ತು ಛತ್ತೀಸ್‌ಗಢದ ಪ್ರಧಾನ ಕಾರ್ಯದರ್ಶಿ. ಇಂಥ ಹಿನ್ನೆಲೆಯ ವಿನಾಯಕ ಸೇನ್‌ಗೆ ಕಾಡಿನ ನಕ್ಸಲ್ ನಾಯಕ ನಾರಾಯಣ ಸಾನ್ಯಾಲ್ ಎಂಬವನೊಟ್ಟಿಗೆ ಸಂಬಂಧವಿತ್ತು. ಆತನಿಗೆ
ಹಣಕಾಸು ಒದಗಿಸುವ ಪಿಯೂಶ್‌ಗುಹಾ ಎಂಬ ಉದ್ಯಮಿಯಿಂದ ಸೇನ್ ಕಾಡಿಗೆ ಹಣ ಸರಬರಾಜು ಮಾಡುತ್ತಿದ್ದ. ಮತ್ತೊಬ್ಬ ನರಹಂತಕ ನಕ್ಸಲ ಮದನ್‌ಲಾಲ್ ಬಂಜಾರೆಯೊಂದಿಗೆ ಕೂಡ ಒಡನಾಟ ಇಟ್ಟುಕೊಂಡಿದ್ದ ಈ ವಿನಾಯಕ. ಇವನ ಮೇಲೆ ನಿಗಾ ಇಟ್ಟಿದ್ದ ಕಾನೂನು ಕಳೆದ ಡಿಸೆಂಬರ್ ೨೪ರಂದು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಛತ್ತೀಸ್‌ಗಢದ ವಿಶೇಷ ರಕ್ಷಣಾ ಕಾಯ್ದೆ (ಇಖPಖಅ) ಮತ್ತು ಭಾರತೀಯ ದಂಡಸಂಹಿತೆಯ ೧೨೧ಎ ಮತ್ತು ೧೨೪ರನ್ವಯ ಬಂಧಿಸಿ ಮಾಡಬೇಕಾಗಿರುವುದನ್ನೇ
ಮಾಡಿತು. ದೇಶಾದ್ಯಂತ ಪ್ರತಿಭಟನೆಗಳಾದವು ಮತ್ತು ಛತ್ತೀಸ್‌ಗಢದ ನ್ಯಾಯಾಲಯ ಕೂಡ ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಅಡಿಶನಲ್ ಮತ್ತು ಜಾಮೀನು ಅರ್ಜಿಯನ್ನು ತಿರಸ್ಕರಸಿ ಅಡಿಶನಲ್ ಮತ್ತು ರಾಯ್‌ಪುರ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಅನಂತರ ಸೇನ್ ಸುಪ್ರಿಂಕೋರ್ಟಿಗೆ ಮರು ಅರ್ಜಿ ಸಲ್ಲಿಸಿದರು. ಈಗ ಹೀಗಾಗಿದೆ. ಪ್ರಶ್ನೆಗಳು ಎದ್ದಿವೆ. ಯಾವ ಕಾನೂನು ದೇಶದ್ರೋಹವೋ ಯಾವುದು ನಕ್ಸಲ್ ಎಂದು ಬಿಂಬಿಸುವುದೋ ಯಾವುದು
ಅಪರಾಧವನ್ನು ಪುಷ್ಟೀಕರಿಸುವುದೋ ಅದು ರಾಯ್‌ಪುರ ಅಡಿಶನಲ್ ಮತ್ತು ಜಿಲ್ಲಾ ನ್ಯಾಯಾಲಯದ ಪಾತ್ರ ಮಾತ್ರವೋ? ಸುಪ್ರಿಂಕೋರ್ಟಿನದ್ದು ಅಲ್ಲವೋ? ಅವೆರಡೂ ಒಂದೇ ಆಗಿದ್ದರೆ ಸುಪ್ರಿಂಕೋರ್ಟು ಏಕೆ ಹೀಗೆ ತೀರ್ಪು ಕೊಡುತ್ತಿತ್ತು. ನಿಜವಾಗಿಯೂ ವಿನಾಯಕ ಸೇನ್ ಅಮಾಯಕನಾಗಿದ್ದರೆ ಅದೇ ಸುಪ್ರಿಂ ಕೋರ್ಟು ಹೇಳುವ ಕಾನೂನುಗಳು ಜಿಲ್ಲಾ ಮತ್ತು ಅಡಿಶನಲ್ ಮಟ್ಟದಲ್ಲಿ ಆತನನ್ನು ಹೇಗೆ ಅಪರಾಧಿ ಎಂದು ಘೋಷಿಸಿತ್ತು?
ಕೋರ್ಟಿನ ತೀರ್ಪನ್ನು ಹಾಗೆಲ್ಲಾ ಪ್ರಶ್ನಿಸಬಾರದು ಎಂಬ ನಿಯಮಗಳಿವೆ. ತೀರ್ಪು ಎಂದರೆ ವೇದವಾಕ್ಯ ಎಂಬ ನಂಬಿಕೆಯಿದೆ. ಆದರೆ ಹೇಗೆ ತಾನೇ ಒಪ್ಪಿಕೊಳ್ಳುವುದು? ಮೊನ್ನೆ ಜಾಮೀನು ನೀಡುತ್ತಾ ಕೋರ್ಟು “ನಕ್ಸಲ್‌ಬಗೆಗಿನ ಅನುಕಂಪ ನಕ್ಸಲ್ ಬೆಂಬಲ ಅಲ್ಲ" ಎಂದು ಹೇಳಿತು. ಕೋರ್ಟಿನ ಈ ಎಲ್ಲಾ ಹೇಳಿಕೆಗಳು ಇನ್ನೇನನ್ನೋ ಲೆಕ್ಕ ಹಾಕಲು ಆರಂಭಿಸಿಬಿಡುತ್ತವೆ. ಹಾಗಾದರೆ ಪ್ರಜ್ಞಾಸಿಂಗ್‌ರನ್ನು ಯಾವ ಆಧಾರದಲ್ಲಿ ಬಂಧಿಸಲಾಯಿತು? ಕೇವಲ ಸಂದೇಹ ಒಂದು
ಪ್ರಕರಣವನ್ನು ನಿರ್ಧರಿಸಲಾರದು ಎಂಬ ಕೋರ್ಟಿನ ಈ ಹೇಳಿಕೆ ಯಾಕೆ ಪ್ರಜ್ಞಾ ಸಿಂಗ್ ವಿಷಯದಲ್ಲಿ ಗಣನೆಗೆ ಬರಲಿಲ್ಲ್ಲ? ಹಾಗೆಯೇ ಇಂದ್ರೇಶ್ ಕುಮಾರರನ್ನು ಯಾವ ಆಧಾರದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು? ಹಿಂದೂ ಹೆಸರಿನ ವ್ಯಕ್ತಿ ಬಾಂಬ್‌ಸ್ಫೋಟದಲ್ಲಿ ಸಂಶಯಾಸ್ಪದ ಎಂದು ಕಂಡುಬಂದಲ್ಲಿ ಅವನು ನೇರ ಆರೆಸ್ಸೆಸ್ ಆಗಿಬಿಡುವುದೇಕೆ? ಇಂದ್ರೇಶ್‌ಕುಮಾರರ ಒಂದು ಮೊಬೈಲ್ ನಂಬರ್ ಯಾರದೋ ಕೈಯಲ್ಲಿ ಇರುವುದು ಎಟಿಎಸ್‌ಗೆ ಅಪರಾಧವಾಗಿ ಕಾಣುವುದೇಕೆ?
ಸಂಸತ್ತಿನ ಮೇಲೆ ದಾಳಿ ಮಾಡಿದ ಅಫ್ಜಲ್ , ಮುಂಬೈ ದಾಳಿಯ ಕಸಬರನ್ನು ಸತ್ಕಾರ ಮಾಡುತ್ತಿರುವುದೇಕೆ? ಅವರೇನೂ ಕೇವಲ ಸಂದೇಹಿತ ವ್ಯಕ್ತಿಗಳಲ್ಲವಲ್ಲಾ. ಇವರ ಪ್ರಕರಣದಲ್ಲೂ ಕೋರ್ಟು ಇದೇ ತರದ ತೀರ್ಪು ನೀಡುವುದೇ? ಸಂಸತ್ ಭವನದ ದಾಳಿಯಲ್ಲಿ ಯಾರೂ ಸಾಯಲಿಲ್ಲ ಎಂಬ ಕಾರಣಕ್ಕೆ ಅಫ್ಜಲ್ ಗುರು ಸಾಚಾ ಎಂದು ಕೋರ್ಟು ಹೇಳುವುದೇ? ಉಗ್ರತನವನ್ನು ಕಸಬನ ತಲೆಗೆ ತುಂಬಿಸಲಾಗಿದೆಯಷ್ಟೇ. ಆದರೆ ವಾಸ್ತವವಾಗಿ ಆತ ಅಮಾಯಕ ಎಂದಂತೆ ಇದೆ ಕೋರ್ಟಿನ ಹೇಳಿಕೆಗಳು.
ಕೋರ್ಟಿನ ಇಂಥ ವರ್ತನೆಯನ್ನು ಗಮನಿಸಿ ಹೇಳಬೇಕೆಂದರೆ ವಿನಾಯಕ ಜೈಲಲ್ಲಿ ಭೇಟಿ ಮಾಡುತ್ತಿದ್ದ ನಾರಾಯಣ ಸಾನ್ಯಾಲ್ , ಮದನ್‌ಲಾಲ್ ಬಂಜಾರೆ ಮತ್ತು ಬಿಕೋಶ್ ಭಟ್ಟಾಚಾರ್ಯರನ್ನೂ ಅಮಾಯಕ ಎಂದು ಬಿಡುಗಡೆ ಮಾಡಬೇಕೆಂಬ ಅರ್ಥ ಬರಲಿಲ್ಲವೇ? ಏಕೆಂದರೆ ಕೋರ್ಟಿನ ಪ್ರಕಾರ ವಿನಾಯಕ ಸೇನ್ ನಕ್ಸಲನಲ್ಲ. ಓರ್ವ ಸಾಮಾಜಿಕ ಕಾರ್ಯಕರ್ತ, ಸತ್ಪ್ರಜೆ. ಅಂಥವನ ಸಂಪರ್ಕದ ಇವರೆಲ್ಲರೂ ಸತ್ಪ್ರಜೆಗಳೇ ಆಗಬೇಕಲ್ಲವೇ?
ಕೋರ್ಟು ಹೇಳಿದ ಒಂದಂತೂ ನಿಜ. ಗಾಂಧಿ ಪುಸ್ತಕ ಇಟ್ಟುಕೊಂಡವರೆಲ್ಲರೂ ಗಾಂಧಿವಾದಿಗಳಾಗುವುದಿಲ್ಲ. ಜೊತೆಗೆ ಗಾಂಧಿ ಹೆಸರು ಇಟ್ಟುಕೊಂಡವರಿಗೂ ಗಾಂಧಿಗೂ ಸಂಬಂಧ ಇರಬೇಕು ಎಂದೇನಿಲ್ಲ.ಅಷ್ಟರಮಟ್ಟಿಗೆ ಕೋರ್ಟಿನ ತೀರ್ಪು ಗೌರವಾರ್ಹ.
No comments:
Post a Comment