Thursday, April 7, 2011

ಕಣ್ಮನ ಸೆಳೆಯುವ ಕಕ್ಕಟ್ಟು ಪೊಳೆ


ಕೊಡಗು ಎಂದಾಗ ಮೊದಲು ನೆನಪಾಗುವುದೇ ಕಾಫಿತೋಟಗಳು.ಸುತ್ತಲೂ ಹಬ್ಬಿಕೊಂಡ ಸುಂದರ ಬೆಟ್ಟಗಳ ನಡುವೆ ಹುದುಗಿಕೊಂಡಂತಿರುವ ಬ್ರಿಟೀಷ್ ಕಾಲದ ತೋಟಗಳು,ಅವುಗಳ ನಡುವೆ ನೆಟ್ಟು ಬೆಳೆಸಿದ ಏಲಕ್ಕಿ, ಕಾಡುಮರಗಳಿಗೆ ಹಬ್ಬಿಸಿದ ಕರಿಮೆಣಸಿನ ಬಳ್ಳಿಗಳು,ಅವುಗಳೊಳಗೆ ಕಂಡೂ ಕಾಣದಂತಿರುವ ಅಪರೂಪದ ಜೀವವೈವಿಧ್ಯಗಳು... ಇವು ಕೊಡಗಿನ ಕಾಫಿ ತೋಟಗಳ ಬಗ್ಗೆ ಕಣ್ಣಿಗೆ ಕಟ್ಟುವ ಚಿತ್ರಣಗಳು.
ಹೀಗೆ ಕೊಡಗಿಗೂ ಕಾಫಿಗೂ ಶತಮಾನಗಳ ನಂಟಸ್ತನ.ಆದರೆ ಇಂಥ ಕಾಫಿ ನಾಡಿನಲ್ಲೊಂದು ಸುಂದರ,ವಿಶಾಲ ಟೀ ತೋಟವಿರುವುದು ಹಲವರಿಗೆ ತಿಳಿದಿಲ್ಲ.ಕೊಡಗಿನ ದಕ್ಷಿಣದ ತುತ್ತತುದಿಯಲ್ಲಿ ಹಸಿರ ಚಾಪೆಯಂತೆ ಹರಡಿರುವ ಈ ಟೀ ತೋಟ ಪ್ರಕೃತಿಯನ್ನು ಮಾತೆಯೆನ್ನಲು,ಆಕೆಯ ಸೀರೆಯ ಸೆರಗಿನ ಅಂಚು ಎನ್ನಲು ಒಂದು ಅದ್ಬುತ ರೂಪಕ. ಕೊಡಗಿನ ಮುಖ್ಯಪಟ್ಟಣ ಮಡಿಕೇರಿಯಿಂದ ೮೦ಕಿಮೀ ದೂರದಲ್ಲಿರುವ ಟೀ ತೋಟ ಟಾಟಾದವರ ಒಡೆತನದಲ್ಲಿದೆ.ವೀರಾಜಪೇಟೆ ತಾಲೂಕಿನ ಲವಲವಿಕೆಯ ಪಟ್ಟಣ ಗೋಣಿಕೊಪ್ಪದಿಂದ ನಾಗರಹೊಳೆ ಹೆದ್ದಾರಿಗುಂಟ ಸಾಗಿದರೆ ತಾವಳಗೇರಿ ಶೆಟ್ಟಿಗೇರಿ ಎಂಬೊಂದು ಊರು ಸಿಗುತ್ತದೆ.ಅಲ್ಲಿಂದ ಬಲಗಡೆಗೆ ತಿರುಗಿಕೊಂಡರೆ ದಾರಿಗೆದುರಾಗುವುದೆಲ್ಲಾ ಮತ್ತೊಂದು ಭಿನ್ನ ಲೋಕ.ಉತ್ತರದಿಂದ ದಕ್ಷಿಣದತ್ತ ವ್ಯಾಪಿಸಿರುವ ಬ್ರಹ್ಮಗಿರಿಬೆಟ್ಟಸಾಲುಗಳು,ಅನತಿದೂರದಲ್ಲೇ ಇರುವ ಇರ್ಪು ಜಲಪಾತ,ತಂಪು ಹವೆಯ ಅನುಭವವನ್ನು ಕೊಡುತ್ತಲೇ ರಸ್ತೆ ಕೊಡಗಿನ ಕೊನೆಯ ಊರು ಬಿರುನಾಣಿ ಮತ್ತು ತಲೆಪೂಕೊಳದತ್ತ ಮುಂದುವರಿಯುತ್ತದೆ.ಕೊಡಗಿನಲ್ಲಿ ಮರೆನಾಡ್ ಎಂದೇ ಕರೆಯಲ್ಪಡುವ ಈ ಬಿರುನಾಣಿಗೆ ಸಾಗುವ ಮಾರ್ಗದ ಇಕ್ಕಡೆಗಳಲ್ಲೂ ಹೂತೋಟದಂಥಾ ಟೀ ತೋಟ ಹರಡಿಕೊಂಡಿದೆ.ನಡುವೆ ಡಾಂಬರು ರಸ್ತೆ.ಬಿರುನಾಣಿಗೆ ಹೋಗಿಬರುವವರಿಗೆ ಅದು ನಿತ್ಯವೂ ಕಾವ್ಯಮಯ ರಹದಾರಿ.ಸುಮಾರು ಒಂದೂವರೆ ಕಿ.ಮೀ ವರೆಗಿನ ದಾರಿಯುದ್ದಕ್ಕೂ ಇದೇ ನೋಟ.ಕಣ್ಣು ಹಾಯಿಸಿದಷ್ಟು ದೂರದವರೆಗೆ ಹಸಿರೋ ಹಸಿರು.ಎಲ್ಲೂ ವಿಚಲಿತಗೊಳಿಸುವ ಅಡೆತಡೆಗಳಿಲ್ಲ.ಗುಡ್ಡಗಳು ಕೆಲವೆಡೆ ಏರಿವೆ.ಇನ್ನು ಕೆಲವೆಡೆ ತಗ್ಗಿದೆ.ಏರಿದಲ್ಲೂ ತಗ್ಗಿದಲ್ಲೂ ಎಲ್ಲೆಲ್ಲೂ ಸಪಾಟು,ಸಮತಟ್ಟು , ಒತ್ತೊತ್ತಾದ ಟೀ ಗಿಡಗಳು.ಹೀಗೆ ಇತ್ತೆಡೆಗಳಲ್ಲೂ ಟೀ ಗಿಡಗಳಿಗೆ ಆವರಣವೊದಗಿಸಿದಂತೆ ಬ್ರಹ್ಮಗಿರಿ ಬೆಟ್ಟಸಾಲುಗಳು ನಿಂತಿವೆ. ಕೆಲೆವೆಡೆ ಮುಟ್ಟಿದಂತೆನಿಸುತ್ತದೆ.ತೋಟದ ಉದ್ದಕ್ಕೂ ಜುಳುಜುಳು ಹರಿಯುವ ಕಕ್ಕಟ್ಟು ಹೊಳೆ (kkrಕಕ್ಕಟ್ಟ್ ಕಿತ್ತ್ ರಿವರ್).ಮರೆನಾಡಿನ ಎಲ್ಲೂ ಮೂಲೆಯಲ್ಲಿ ಹುಟ್ಟುವ ಕಕ್ಕಟ್ಟು ಹೊಳೆ ಟೀ ತೋಟಕ್ಕೆ ನೀರುಣಿಸಿ ವೈಯಾರದಿಂದ ಹರಿಯುತ್ತದೆ.ಗೋದೂಳಿಯ ಹೊತ್ತಿಗೆ ಹೊಳೆ ದಂಡೆಯಲ್ಲಿ ಹಿಂಡುಹಿಂಡು ಬಿಳಿಕೊಕ್ಕರೆಗಳು.ಕೊಡಗಿನಲ್ಲಷ್ಟೆ ಕಂಡುಬರುವ ಮೊಗರಕೋಳಿಗಳು ತಮ್ಮ ಬಣ್ಣದಿಂದಲೂ ಸ್ವರಗಳಿಂದಲೂ ಹೊಳೆಯೊಳಗಿನ ಬಂಡೆಗಳಿಂದಲೂ ಬಣ್ಣಬಣ್ಣಗಳ ಚಿಟ್ಟೆಗಳಿಂದಲೂ ಅದರಂಚಿನ ಬಾಗಿದ ವಾಟೆಗಳಿಂದಲೂ ಅಪರೂಪದ ಕೂವಲೆ ಎಂಬ ಎಲೆಗಳಿಂದಲೂ ಕಾಡು ಹೂವುಗಳಿಂದಲೂ ಪರಿಸರವನ್ನು ಪೂರ್ಣತ್ವಕ್ಕೇರಿಸಿದಂತೆನಿಸುತ್ತದೆ.ಇಲ್ಲಿಗೆ ವರ್ಷದ ಯಾವ ಹೊತ್ತಿಗೆ ಬಂದರೂ ಚೆಂದವೇ.ಆದರೆ ಮಳೆಗಾಲದಲ್ಲಿ ತಿರುಗಾಟ ಕಷ್ಟ.ಚಳಿಗಾಲದಲ್ಲಿ ಹೊಳೆಯಲ್ಲಿ ಇಳಿಯಬಹುದಾದಷ್ಟು ನೀರಿರುತ್ತವೆ.ಬರೋಬ್ಬರಿ ಒಂದುಸಾವಿರ ಏಕರೆ ವಿಸ್ತಾರದ ಈ ತೋಟದ ದೂರದ ಒಂದು ಮೂಲೆಯಲ್ಲಿ ಮೋಡಗಳೇ ತೋಟಗಳಿಗೆ ತೊಟ್ಟಿಕ್ಕುತ್ತಿವೆಯೋ ಎಂಬಂತಹ ವಾತಾವರಣ ವರ್ಷದ ಹಲವು ತಿಂಗಳುಗಳಲ್ಲಿರುತ್ತವೆ. ಇಲ್ಲಿನ ಸೂರ್ಯಾಸ್ತದ ಸನ್ನಿವೇಶ ಹೆಚ್ಚುಕಡಿಮೆ ಆಗುಂಬೆಯನ್ನು ನೆನಪಿಸಿದರೂ ಅದಕ್ಕಿಂತಲೂ ಭಿನ್ನ ಎನಿಸದಿರದು.ಮುಳುಗುವ ಕೆಂಪುಕೆಂಪು ಸೂರ್ಯ,ಶುರುವಾಗುವ ಕುಳಿರ್ಗಾಳಿ,ಮೋಡಗಳು ಮೂಡಿಸುವ ವರ್ಣಚಿತ್ತಾರ,ಪಾಳಿಗೆ ಬರಲು ಅಣಿಯಾಗುತ್ತಿರುವ ಮಂಜಿನ ಮಣಿಗಳು, ಬಿರುನಾಣಿಯತ್ತ ಓಡುತ್ತಿರುವ ಕೊನೆಯ ಬಸ್ಸು,ಗೋದಾಮಿನಲ್ಲಿ ಬೆನ್ನಿನ ಬುಟ್ಟಿಯನ್ನಿಳಿಸಿ ಮನೆಸೇರಲು ಹೊರಟ ಟೀ ತೋಟದ ಕಾರ್ಮಿಕರು,‘ಗ್ಲೇನ್ ಲೋರ್ನಾ ಟೀ ತೋಟ’ ಎಂಬ ಫಲಕದಲ್ಲಿ ಕೂತ ಕಿತ್ತಳೆ ಪಕ್ಷಿ,ದೂರದಲ್ಲೆಲ್ಲೋ ಊಳಿಡುತ್ತಿರುವ ನರಿ ...ಎಲ್ಲವನ್ನೂ ಅನುಭವಿಸುತ್ತಿರುವಾಗಲೇ ಕತ್ತಲಾಗಿರುತ್ತದೆ.ಸುತ್ತಾಲ ಪರಿಸರಕ್ಕೆಲ್ಲಾ ಮಂಪರು ಅನುಭವದ ಕಾವನ್ನೀಡುತ್ತದೆ.
ಹಲವು ದಶಕಗಳ ಕಾಲ ಕನ್ಸಾಲಿಡೇಟ್ ಕಾಫಿ(ಸಿ.ಸಿ)ಕಂಪೆನಿಯ ಕೈಯಲ್ಲಿದ್ದ ಈ ಟೀ ತೋಟ ಅನಂತರ ಟಾಟಾ ದ ಒಡೆತನಕ್ಕೆ ಬಂತು.ಒಡೆತನ ಯಾರದೇ ಆಗಿದ್ದರೂ ಇಲ್ಲಿನ ಜನರಿಗೆ ಟೀ ತೋಟ ತನ್ನದಲ್ಲದಂತೆ ಕಂಡದ್ದಿಲ್ಲ.ಕೊಡಗಿನ ಹೆಮ್ಮೆಯಾಗಿ, ದೃಶ್ಯಕಾವ್ಯವಾಗಿ ಅಂದಿನಿಂದಲೂ ಟೀ ತೋಟ ಜನರಲ್ಲಿ ಸೌಂದರ್ಯದ ಸಂವೇದನೆಯನ್ನು ಮೂಡಿಸಿದೆ. ಖಾಸಗಿ ಕಂಪೆನಿಯ ತೋಟವೆನ್ನುವಾಗ ಮೂಡುವ ಚಿತ್ರಣವೇ ಬೇರೆ.ರಕ್ತ ಚೆಲ್ಲಿದ,ನಿಟ್ಟುಸಿರುಗಳು ಸಮಾಧಿಯಾಗಿಹೋದ,ಭಯದ,ಭಂಡತನದ ಮುಳ್ಳುಬೇಲಿಯ ವಾಣಿಜ್ಯವಲಯಗಳು.ಆದರೆ ಇಂದೂ ಜನ ತಮ್ಮದಲ್ಲದ ಗ್ಲೇನ್‌ಲೋರ್ನಾ ತೋಟದಲ್ಲಿ ರೌಂಡ್ ಹೊಡೆದು ನೆಮ್ಮದಿ ಪಡೆಯುತ್ತಾರೆ. ಅಂಥ ಭಾಗ್ಯ ಎಷ್ಟು ತೋಟಗಳಿಗಿದೆ?ಟೀ ತೋಟದ ಪ್ರೊಫೈಲ್ ಇಷ್ಟಾದರೆ ಅದರ ಆಸುಪಾಸಿನ ಅನುಭಾವವೇ ಬೇರೆ. ದೇಶದ ಬೇರೆಲ್ಲಿಯೂ ಕಾಣಸಿಗದಂತಹ ಆಲಂದೆ,ಕುಳಮಾವು,ನೀಲಿಮರ,ಪಾಲೆ ಗಳಂಥ ಮರಗಳು.ದಟ್ಟ ಬಿದಿರು ಕಾಡುಗಳು,ಬೆಟ್ಟದೆಲ್ಲೆಡೆ ಸಮೃದ್ದವಾಗಿರುವ ಎಚ್ಚಿ ಎಂಬ ಹಣ್ಣುಗಿಡಗಳು,ನೆಲ್ಲಿಗೆ ಮರಗಳು.ಸೀಗೆ ಕಾಡುಗಳು.ಉದ್ದಬಾಲದ,ತುಂಟಜುಟ್ಟಿನ,ಮೊಂಡುಕೊಕ್ಕಿನ ಚಿತ್ರವಿಚಿತ್ರ ಪಕ್ಷಿಗಳ ಅಪರೂಪದ ತಾಣ ಮರೆನಾಡು ಅಭಿವೃದ್ಧಿಯ ಪರಿಭಾಷೆಯಲ್ಲಿ ‘ರಿಮೋಟ್’ ಪ್ರದೇಶವಾಗಿರಬಹುದು.ಅದರೆ ನಿಜವಾಗಿಯೂ ಅದು ಪ್ರಕೃತಿಯ ಖಜಾನೆ.

No comments: