ಒಂದುಸಂವತ್ಸರಕಳೆದಿದೆ.ಮತ್ತೊಂದುಸಂವತ್ಸರಮರಳಿದೆ.ಅನುಕಾಲದಂತೆ.ಯುಗ-ಆದಿಯಂತೆ ಇನ್ನೂ ಆಗುತ್ತಿದೆ.ಅದೇ ಪ್ರಕ್ರಿಯೆ ಆಗಿ ಆಗಿ ಆ ಶಬ್ದ ಕ್ಲೀಷೆಯಾಗುವಷ್ಟು ಬಳಕೆಯಾಗಿದ್ದರೂ ‘ಹೊಸ ವರುಷ,ಹೊಸ ಹರುಷ’ಎಂಬ ಕವಿವಾಣಿಗೆ ಅನುಕಾಲವೂ ಎಲ್ಲಿಲ್ಲದ ಅರ್ಥ ಬಂದುಬಿಡುವುದು ಮಾಮೂಲು.ಬೇವು-ಬೆಲ್ಲ,ಒಂದಿಷ್ಟು ವಿಶೇಷಾಂಕಗಳು,ಹಳೆಯದರ ಮೆಲುಕು,ಹೊಸತರ ನಿರೀಕ್ಷೆ ಮಾಡುತ್ತಾ ಯುಗಾದಿ ಕಳೆದೇ ಹೋಗುತ್ತದೆ.ಅನಂತರದೆಲ್ಲಾ ಸಂವತ್ಸರಗಳ ಹಂಗಿಲ್ಲದ ಅವೇ ದಿನಗಳು.ಹರುಷವಿದ್ದರೂ ನೋವೇ ಇದ್ದರೂ ಅವು ಯುಗಾದಿ-ಸಂವತ್ಸರಗಳಮರೆವಿನ ಗಳಿಗೆಗಳು.ಪುನಃ ಅವೆಲ್ಲವೂ ನಮಗೆ ನೆನಪಾಗುವುದು ಒಂದು ಸಂವತ್ಸರ ಮುಗಿಯುವ ಹೊತ್ತಿನಲ್ಲಿ.ಹೊಸ ಯುಗಾದಿ ಬರುವ ಹೊತ್ತಿನಲ್ಲಿ.ಈಗ ನೆನಪಾಗುತ್ತಿರುವುದೂ ಅದೇ.ಅಂಥದ್ದೇ.ಅಷ್ಟಕ್ಕೂ ಹೇಳಬೇಕೆಂದರೆ ಇದೀಗ ಖರನಾಮ ಸಂವತ್ಸರವನ್ನು ಒಪ್ಪಿಕೊಂಡಿರುವ ನಮಗೆ ಯಾವುದೂ ಹೊಸದಲ್ಲ.ಮರುಕ್ಷಣ ಎಲ್ಲವೂ ಹಳೆಯದೇ.ಇದೀಗ ತಾನೇ ಹುಟ್ಟಿರುವುದೆಲ್ಲವೂ ಹೊಸತಾಗಿಯೇ ತೋರಿವುದು.ಈ ಯುಗಾದಿ ಆಚರಣೆಯ ಹಿಂದೆ ಒಂದು ಅದ್ಭುತ ಮನಶಾಸ್ತ್ರವಿರುವುದು.ಮನುಷ್ಯನ ಚಿಂತನೆಗೆ ಒಂದು ರೂಪು ಕೊಡಲು ಹೊಸತು,ಹಳೆಯದರ ಚಿಂತನೆ ಬಂದಿರುವುದೋ ಏನೋ.ಪ್ರಕೃತಿಯ ಬದಲಾವಣೆಗೆ ಹೊಸತನ್ನು ಕಲ್ಪಿಸಿ ಬದುಕಿಗೂ ಹೇಳಿರಬಹುದೋ ಏನೋ.ಇರಲಿ,ಹೊಸತು ಎಂದಾಗ ಹಳಿಯಬಾರದು.ಯುಗಾದಿ ಹೊಸತನಕ್ಕೆ ಪರ್ವವೆಂದಾಗ ಒಪ್ಪಿಕೊಳ್ಳದಿರಬಾರದು.ಹೀಗೆ ಹೊಸತರ ಪರಿಕಲ್ಪನೆಯ ಸುತ್ತ ಪ್ರಶ್ನೆಗಳು ಆರಂಭವಾಗಿಬಿಡುತ್ತವೆ.ಏಕೆಂದರೆ ಇದೇ ಸಂವತ್ಸರ ಎಂದುಕೊಂಡು ಜಗ ಹೊಸತರ ಹೆಸರಲ್ಲಿ ಏನೇನೋ ಮಾಡಿಬಿಟ್ಟಿವೆ.ಬದಲಾವಣೆಗೆ ಹಾತೊರೆದು ಇದ್ದುದನ್ನು ಕೆಡವಿದೆ.ಅಭಿವೃದ್ದಿ ಎಂಬ ಹೆಸರಿಗೆ ಎಷ್ಟೊಂದು ತಂತ್ರಗಳು.ಸಾಕ್ಷಾತ್ ಕಾಲಪುರುಷನ ಆಟದಂತೆ ಭಾಸವಾಗುತ್ತದೆ.ಹಾಗಿರುವಾಗ ಈ ಸಂವತ್ಸರದಲ್ಲೂ ಹೊಸತು ಎನ್ನುವಾಗ ಭಯವಾಗುತ್ತದೆ.ಪ್ರಕೃತಿ ನಿತ್ಯನೂತನ ಎಂದು ಹೇಳುತ್ತಲೇ ಪ್ರಕೃತಿಯ ನಾಶ,ಪರಂಪರೆಯ ಪರ್ವ ಎನ್ನುತ್ತಲೇ ಅದೇ ದಿನ ಹಲವು ಗಂಡಾಂತರಗಳಿಗೆ ಅಡಿಗಲ್ಲು ಇತ್ತೀಚಿನ ಕೆಲವು ಸಂವತ್ಸರಗಳಲ್ಲಿ ಯುಗಾದಿಯ ಆಚರಣೆ ಆರಂಭವಾಗುತ್ತಿರುವುದನ್ನು ನಾವು ನೋಡಿದ್ದೇವೆ.ಶುರುವಾಗುವ ಶುಭ ಪಯಣದಲ್ಲಿ ಆತಂಕದ ಛಾಯೆಗಳು.
ಇಂಥ ಒಂದು ಶುಭ ಯುಗಾದಿಯಲ್ಲಿಯೇ ನಾವು ಎಲ್ಲವನ್ನೂ ಒಪ್ಪಿಕೊಂಡಿದ್ದೆವು.globe is flate ಎನ್ನುತ್ತಾ ಸಪಾಟು ಭೂಮಿಯೆಂದೂ ಅಲ್ಲಿನದೆಲ್ಲವೂ ಇಲ್ಲಿನದೂ ಎಂದೂ,ಅದನ್ನು ನಂಬಿ ನಡೆಯುವ ವಿಶ್ವದೊಳಗೆ ನಾವು ಒಂದಾಗಿಹೋಗಿದ್ದೆವು.ಕೃಷಿ ಬಿಟ್ಟು ಪಟ್ಟಣ ಸೇರಿದ್ದೆವು.ಅಥವಾ ನಮ್ಮ ಪೂರ್ವಿಜರು ಕೆಟ್ಟು ಪಟ್ಟಣ ಸೇರಿದ್ದರು.ಪರಿಣಾಮವಾಗಿ ಇಂದು ನಮ್ಮ ನೆನಪುಗಳೆಲ್ಲವೂ ನಮ್ಮ ಹಳ್ಳಿಗಳಲ್ಲಿವೆ.ಹಳ್ಳಿ ನೆನಪನ್ನು ಕೆದಕದೆ ನಮ್ಮ ಬಾಲ್ಯದ ಬದುಕುಗಳು ನೆನಪಾಗುವುದಿಲ್ಲ.ಮಧುರತೆ ಸ್ಫುರಣವಾಗುವುದಿಲ್ಲ.ಆದರೆ ಇಂದಿಗೂ ದಿನನಿತ್ಯ ಪಟ್ಟಣ ಸೇರುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.ಏಕೆಂದರೆ ಅಲ್ಲಿ ಕೃಷಿ ಎಂಬುದು ಕೆಟ್ಟಿದೆ.ಪತಂಗದಂತೆ ಎತ್ತಲೋ ಸಾಗುತ್ತಿದ್ದಾರೆ.ಹಳ್ಳಿ ಇಂದು ಮಹತ್ತ್ವಾಕಾಂಕ್ಷೆಯಿಂದ ಬದುಕಬಲ್ಲ ತಾಣವಾಗಿ ಉಳಿದಿಲ್ಲ ಎಂಬ ಭಾವನೆ ಹಲವರದ್ದು.ಒಂದರ್ಥದಲ್ಲಿ ಅದು ನಿಜ ಕೂಡ.ಆದರೆ ವಿಶ್ವ ತಿಳಿದಿರುವ ಮಹತ್ತ್ವಾಕಾಂಕ್ಷೆಗಿಂತಲೂ ಹೊರತಾದ,ಮಹತ್ತ್ವದಾದ ಒಂದು ಸಂಗತಿ ಪಟ್ಟಣಗಳಲ್ಲಿಯೂ ಇಲ್ಲವೆನ್ನುದನ್ನೂ ಒಪ್ಪಲೇಬೇಕು.ಕೃಷಿ ಮಾಡಿದವನು ಇಂದು ನೆಮ್ಮದಿ ಕಾಣಲಾರ ಎಂಬುದು ನಿಜವಿರಬಹುದು.ಬೀಜಕ್ಕೂ ಕೊರತೆ,ಅಡಿಗಡಿಗೆ ತಾಪತ್ರಯ,ಸರಕಾರವಂತೂ ರೈತನನ್ನು ಸಾಲಗಾರನಾಗಿ ಮಾಡಲೆಂದೇ ಅಧಿಕಾರಕ್ಕೇರಿದಂತೆ ವರ್ತಿಸಿದೆ,ವರ್ತಿಸುತ್ತಿದೆ.ಇನ್ನು ರೈತ ನೆಮ್ಮದಿ ಕಾಣುವುದು ಹೇಗೆ?ಆ ಜಂಜಾಟಗಳ ನಡುವಯೇ ಬಿತ್ತಬೇಕು,ಬೆಳೆಯಬೇಕೆಂದರೆ ಹೇಗೆ?ರೈತ ಪಟ್ಟ ಪಾಡು ರೈತನಿಗೇ ಗೊತ್ತು.ಆತನೆಂದೂ ತನ್ನ ಮಗ ತನ್ನಂತಾಗಬೇಕೆಂದು ಬಯಸಲಾರ. ಖರನಾಮ ಸಂವತ್ಸರದ ಈ ಹೊತ್ತಿನಲ್ಲಿ ಗಂಭೀರವಾಗಿ ಯೋಚಿಸಬೇಕಾದ ಸಂಗತಿ ಇದು.ಏಕೆಂದರೆ ಕೃಷಿ ಬಿಟ್ಟು ಪಟ್ಟಣ ಸೇರಬೇಕೆಂಬ ತುಡಿತ ಹೊಂದಿರುವ ಬಹುದೊಡ್ಡ ವರ್ಗವೊಂದು ಇಂದು ನಮ್ಮ ಮುಂದಿದೆ.ರೈತನ ಮಗನಿಂದು ವಿಧ್ಯಾವಂತ,ಪಟ್ಟಣ ಸೇರಬೇಕೆಂಬುದೇ ಆತನ ಆಕಾಂಕ್ಷೆ.ಹೆದರಬೇಕಾದುದೇಕೆಂದರೆ ಅಲ್ಲಿ ಯುಗಾದಿ ಆಚರಿಸಲು ಆತನಿಗೆ ಪುರುಸೊತ್ತಿರುವುದಿಲ್ಲ.
ಪರಿಸ್ಥಿತಿ ಭಯಾನಕತೆಯ ಹಂತವನ್ನು ಮುಟ್ಟಿದೆ ಎನಿಸುತ್ತದೆ.ಏಕೆಂದರೆ ಮುಖ್ಯ ಆಧಾರಸ್ತಂಭವೇ ಶಿಥಿಲಗೊಂಡಿದೆ.ಅನ್ನ ನೀಡುವವನೇ ಅನ್ನ ಬೆಳೆಸುತ್ತಿಲ್ಲ. ಆತ ಯುಗಾದಿ ಆಚರಿಸದೆ ಉಳಿದವರು ಉಣ್ಣುವಂತಿಲ್ಲ.ಹೊಟ್ಟೆಬಾಕ ಪಟ್ಟಣದ ಒಡಕ್ಕೆ ಬೇಕಾಗಿರುವ ಅದೆಷ್ಟೋ ಟನ್ನು ಅನ್ನವನ್ನು ಅದೆಲ್ಲಿಂದಲೋ ತರಬೇಕಾದ ಪರಿಸ್ಥಿತಿ.ಇದೆಲ್ಲಾ ಹೆಚ್ಚುಕಾಲ ನಡೆಯುವುದಿಲ್ಲ.ಕಾಲವೊಂದು ಚಕ್ರದಂತೆ ಎಂದರಿವಾಗುವ ಹೊತ್ತು ಬರಬಹುದು.ಆದರೆ ಅಷ್ಟರವರೆಗೆ...
ಎಂದಿನಂತೆ ಯುಗಾದಿ ವಿಶೇಷವನ್ನು ಕಟ್ಟಿಕೊಡುತ್ತ್ತಿದ್ದೇವೆ.ಭೂ ಸಂಬಂಧಿ ಚರ್ಚೆಯನ್ನು ಕೈಗೊಂಡಿದ್ದೇವೆ.ಒಂದು ಕಾಯಿದೆಯ ಸುತ್ತ ಪರಿಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ.ಇದರಲ್ಲಿ ಓದುಗರೂ ಪಾಲ್ಗೊಳ್ಳಬೇಕೆಂಬುದು ನಮ್ಮ ಅಪೇಕ್ಷೆ.
ಖರನಾಮ ಸಂವತ್ಸರ ಎಲ್ಲರಿಗೂ ಒಳಿತನ್ನು ತರಲಿ.
No comments:
Post a Comment