Friday, January 7, 2011

ಬಂದಾದ ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು..

ಬೆಲೆ ಏರಿಕೆಯ ವಿರುದ್ಧ ಕರೆ ನೀಡಿದ್ದ ಭಾರತ ಬಂದ್ ಯಶಸ್ವಿಯಾಗಿತ್ತು. ಯಶಸ್ವಿಯಾಗಿತ್ತು ಎಂದರೆ, ಬಸ್ಸುಗಳು ಓಡಾಟ ನಡೆಸದೆ ನಿಂತಿದ್ದವು. ಅಂಗಡಿಗಳು ಮುಚ್ಚಿದ್ದವು. ಉಳ್ಳವರು ತಂತಮ್ಮ ವಾಹನಗಳಲ್ಲಿ ತೊಂದರೆ ಇಲ್ಲದೆ ಸಾಗುತ್ತಿದ್ದರೆ, ಇಲ್ಲದವರು ಬಸ್ಸುಗಳಿಲ್ಲದೆ ತೊಂದರೆ ಅನುಭವಿಸಿದರು. ದಿನದ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಜನಕ್ಕೆ ಬಂದ್ ಕೂಡ ಬೆಲೆ ಏರಿಕೆಯಂತೆ ಬಿಸಿ ತಟ್ಟಿತ್ತು. ಅಂಥ ಬಂದ್ ನ ದಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದ ಮಂಗಳೂರಿನಲ್ಲಿ ಅದೊಂದು ಕೊಠಡಿ ಮಾತ್ರ ತೆರೆದಿತ್ತು. ಆ ತೆರೆದ ಅಂಗಡಿಯಂತಿದ್ದ ವೇದಿಕೆಯೊಂದರಲ್ಲಿ ನರಪೇತಲನಂತಿರುವ ಜೀವವೊಂದು ಮಲಗಿತ್ತು. ಯಾವ ಕೋನದಿಂದ ನೋಡಿದರೂ ಭಾರತೀಯ ರೈತನಂತೆಯೇ ಕಾಣುತ್ತಿದ್ದ ಕುರುಚಲು ಗಡ್ಡದ, ಸೊರಗಿದ ಮುಖದ, ಸಾಕಷ್ಟು ಬಳಲಿದ್ದ ಅವರ ಪರಿಚಯವನ್ನು ವೇದಿಕೆಯಲ್ಲಿದ್ದ ಫಲಕ ಹೇಳುತ್ತಿತ್ತು. ಅವರು ಗ್ರೆಗರಿ ಪತ್ರಾವೋ. ಅವರು ದ. ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವದಿಯ ಉಪವಾಸ ಕೂತಿದ್ದರು. ಏಕೆಂದರೆ ಅವರು ಕೃಷಿಕರಾಗಿದ್ದರು. ಕೃಷಿ ಮಾಡಿದ್ದರು. ಉತ್ತಿದ್ದರು. ಬಿತ್ತಿದ್ದರು. ಅದಕ್ಕಾಗಿ ಅತ್ತಿದ್ದರು.

ಗ್ರೆಗರಿ ಪತ್ರಾವೋ ಉಪವಾಸ ಪ್ರಕರಣದ ಕಾರಣ ಕೂಡ ತುಂಬಾ ಹಳೆಯದೇನಲ್ಲ. ಇದೇ ೨೦೧೦ರಲ್ಲಿ ನಡೆದ ಘಟನೆ ಅವರನ್ನು ಇಂದು ಊರೆಲ್ಲಾ ಮುಚ್ಚಿದ್ದಾಗ ಬೀದಿಯಲ್ಲಿ ಬಿದ್ದುಕೊಳ್ಳುವಂತೆ ಮಾಡಿದೆ. ವಾಸ್ತವವಾಗಿ ಅವರು ಇದೇ ಎಪ್ರಿಲ್ ನಿಂದಲೇ ಬೀದಿಗೆ ಬಂದಿದ್ದರು. ರೈತನಾಗಿದ್ದ ತಪ್ಪಿಗೆ ಬದುಕಲ್ಲಿ ಸೋತಿದ್ದರು. ಬ್ರಿಟಿಷ್ ಇಂಡಿಯಾದಲ್ಲಿ ನಡೆಯುತ್ತಿದ್ದ ಘಟನೆಗಳ ಪುನರಾವರ್ತನೆ ಎಪ್ರಿಲ್ ೨೮ರ ಮುಂಜಾನೆ ಗ್ರೆಗರಿ ಪತ್ರಾವೋರವರ ಬದುಕಲ್ಲೂ ನಡೆಯಿತು.

ಗ್ರೆಗರಿ ಮಂಗಳೂರು ತಾಲೂಕು ಕಳವಾರು ಗ್ರಾಮದ ಓರ್ವ ಆದರ್ಶ ಕೃಷಿಕ. ವರ್ಷಕ್ಕೆ ಮೂರು ಬೆಳೆ ಬೆಳೆಯುವ ಫಲವತ್ತಾದ ೧೪.೨೭ ಎಕ್ರೆ ಭೂಮಿಯಲ್ಲಿ ಭತ್ತ, ಅಡಿಕೆ, ತೆಂಗು, ವೆನಿಲಾ, ಗೇರು, ಬಾಳೆ, ವೀಳ್ಯ, ತರಕಾರಿಗಳನ್ನು ಬೆಳೆಸಿಕೊಂಡು, ಜಾನುವಾರುಗಳನ್ನು ಸಾಕಿಕೊಂಡು ೭೬ ವರ್ಷದ ತನ್ನ ತಾಯಿ, ತಮ್ಮಂದಿರು, ಅಕ್ಕನ ಮಕ್ಕಳೊಂದಿಗೆ ತನ್ನ ೩೫೦ ವರ್ಷ ಹಳೆಯದಾದ ಮನೆಯಲ್ಲಿ ಸುಖದಿಂದ ಬದುಕುತ್ತಿದ್ದರು. ಗ್ರಾಮ ಪಂಚಾಯತಿ ಚುನಾವಣೆಗೂ ಸ್ಪರ್ಧಿಸಿ ಉಪಾಧ್ಯಕ್ಷರೂ ಆಗಿದ್ದರು. ವಿಶೇಷ ಎಂದರೆ ತನ್ನ ೧೪ ಚಿಲ್ಲರೆ ಎಕರೆ ಭೂಮಿಯನ್ನು ಸಂಪೂರ್ಣ ಸಾವಯವ ಕೃಷಿ ಭೂಮಿಯಾಗಿ ಪರಿವರ್ತಿಸಿ ಊರಿನಲ್ಲೇ ಗಮನ ಸೆಳೆದಿದ್ದರು. ಸಾವಯವ ಎಂದರೆ ಕಿಂಚಿತ್ತೂ ರಸಗೊಬ್ಬರ ಹಾಕದೆ ಜಮೀನನ್ನು ಅತ್ಯಂತ ಸಹಜವಾಗಿ, ಆರೋಗ್ಯವಾಗಿ ಕಾಪಾಡಿಕೊಂಡು ಬಂದ ಸೃಜನಶೀಲ ಕೃಷಿಕ ಗ್ರೆಗರೀ ಪತ್ರಾವೋ. ಹೇಳಬೇಕೆಂದರೆ ಮುಖ್ಯಮಂತ್ರಿಗಳ ಸಾವಯವ ರೈತನ ಮನೆಯ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಹ ಮನೆ, ಜಮೀನು ಈ ರೈತನದಾಗಿತ್ತು. ಹೀಗೆ ಮಣ್ಣಿನಿಂದ ಹೊನ್ನು ತೆಗೆಯುತ್ತಿದ್ದ ಗ್ರೆಗರಿ ಕುಟುಂಬಕ್ಕೆ ಕಷ್ಟವೆಂಬುದಿರಲಿಲ್ಲ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತೆ ಬದುಕುತ್ತಿದ್ದ ಇವರಿಗೆ ಕಂಟಕವಾಗಿದ್ದು ಕೊನೆಗೂ ಅದೇ ಭೂಮಿ.

ಈ ರೈತನ ಪಾಲಿಗೆ ಯಮನಂತೆ ಎರಗಿದ್ದು ಕರಾವಳಿಯನ್ನೇ ನುಂಗಿ ನೀರು ಕುಡಿಯಲು ಸಿದ್ಧವಾಗಿರುವ ಅದೇ ಎಂಎಸ್‌ಇಝಡ್. ಕರಾವಳಿಯ ರೈತರ ಪಾಲಿಗೆ ದುಃಸ್ವಪ್ನವಾಗಿರುವ ಎಂಎಸ್‌ಇಝಡ್. ಅನ್ನದ ಬಟ್ಟಲನ್ನು ಕಿತ್ತು ವಿಷವನ್ನು ತಯಾರಿಸುವ, ಕಾಣದ ಧಣಿಗಳಿಗೆ ನೆಲವನ್ನು ಕಿತ್ತುಕೊಡುವ ಅಕ್ಟೋಪಸ್. ಹೀಗೆ ವಿಶೇಷ ಅರ್ಥ ವಲಯಕ್ಕೆ, ಅದೊಡ್ಡುವ ಆಮಿಷಕ್ಕೆ ಒಳಗಾಗಿ ಹಲವಾರು ರೈತರು ತಮ್ಮ ಭೂಮಿ ಒಪ್ಪಿಸಿದ್ದಾಗ, ಕಳಕೊಂಡಾಗ ಗ್ರೆಗರಿ ಪತ್ರಾವೋ ಕುಟುಂಬ ಭೂಮಿ ಬಿಟ್ಟುಕೊಡಲು ಒಪ್ಪದೆ ಎಂಎಸ್‌ಇಝಡ್‌ನ ಒತ್ತಡ-ಆಮಿಷಗಳನ್ನು ತಿರಸ್ಕರಿಸಿತು. ಅದರ ವಿರುದ್ಧ ಕಾನೂನು ರೀತಿಯ ಹೋರಾಟಗಳನ್ನು ನಡೆಸುತ್ತಾ ಬಂದ ಪತ್ರಾವೋ ಕುಟುಂಬ ಹಲವು ಬೇಡಿಕೆಗಳನ್ನಿಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂತಿತು.

ರೈತನೇ ರಾಷ್ಟ್ರದ ಬೆನ್ನೆಲುಬು ಎನ್ನುವ ದೇಶದಲ್ಲಿ ಇದು ತೀರಾ ಸಾಧಾರಣ ಮಟ್ಟದ, ತೀರಾ ಮಾನವೀಯವಾದ ಬೇಡಿಕೆ. ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ, ಸಾವಯವ ರೈತನ ಮನೆಯಲ್ಲಿ ವಾಸ್ತವ್ಯ ಮಾಡುವ ಸರಕಾರ ಇದರ ಬಗ್ಗೆ ಆರಂಭದಲ್ಲಿ ಗಮನ ಹರಿಸಲಿಲ್ಲ. ಕೊನೆಗೂ ಸರಕಾರ ಆಶ್ವಾಸನೆಯನ್ನು ನೀಡಿದೆ. ಆದರೆ ದುಷ್ಟ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳುವ ಮಾತನಾಡಿಲ್ಲ. ಎಮ್.ಎಸ್.ಇ.ಝಡ್ ನ ತಂಟೆಗೆ ಹೋಗಿಲ್ಲ. ಅಂದರೆ ಇನ್ನಷ್ಟು ಮನೆಗಳು ಉರುಳಲಾರದು ಎಂಬುದಕ್ಕೆ ಸರಕಾರ ಗ್ಯಾರಂಟಿಯನ್ನು ಕೊಡಲಿಲ್ಲ. ಒಂದೆಡೆ ನೇಗಿಲಯೋಗಿಯ ಹಾಡಿಗೆ ಡ್ರಮ್‌ಬಡಿಸಿ, ಹಾಡಿಸಿ, ಕುಣಿಸಿ, ಸಾವಯವ ರೈತನ ಮನೆಯಲ್ಲಿ ತಂಗುವವರು ಎಂಎಸ್‌ಇಝಡ್ ನ ಬಗ್ಗೆ ಖಡಕ್ ನಿಲುವನ್ನು ತಾಳಿಲ್ಲ.

ಪತ್ರಾವೋ ಬೇಡಿಕೆ ದೇಶದ ಸಮಸ್ತ ರೈತ ಸಮುದಾಯದ ಬೇಡಿಕೆ. ದಮನಿತ ರೈತರ ದನಿಗೆ ಪತ್ರಾವೋ ಉಪವಾಸ ಒಂದು ಸಂಕೇತ.

No comments: