Friday, July 6, 2012

ಪ್ರಭುತ್ವ, ನಾಯಕ ಮತ್ತು ನಾಳಿನ ದೇಶ


ದೇಶ ಪ್ರಜಾತಂತ್ರ ಗಣರಾಜ್ಯವಾಗಿ ಆರು ದಶಕಗಳು ದಾಟಿದವು. ಒಂದು ಸಂಗತಿಯನ್ನು ಮನಪೂರ್ವಕ ಅನುಭವಿಸಲು, ಸಂಪೂರ್ಣ ತಿಳಿದುಕೊಳ್ಳಲು ಇದು ತುಸು ದೀರ್ಘವೇ ಆದಂಥ ಅವ. ಆದರೆ ಇಂದು ಪ್ರಜಾಪ್ರಭುತ್ವವನ್ನು "ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗಾಗಿ" ಎಂದು ಎಷ್ಟೇ ಬೊಬ್ಬೆಹೊಡೆದರೂ ಯಾಕೋ ಮನಸ್ಸಿನೊಳಗಿಂದ "ಹೌದು" ಎನ್ನುವಂಥ ಉತ್ತರ ಬರಲಾರದು. ಇಂದಷ್ಟೇ ಅಲ್ಲ, ಕಳೆದ ಆರು ದಶಕಗಳಿಂದಲೂ ಅಂಥ ಉತ್ತರ ಬಂದಿದ್ದು ಕಡಿಮೆಯೇ. ಆದರೆ ಎಲ್ಲರೂ ಪ್ರಜಾಪ್ರಭುತ್ವದಿಂದ ಸಂತುಷ್ಟರಾದಂತೆ ನಾಟಕವಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲೂ ನಾಟಕವಾಡಲೇ ಬೇಕು. ಅದೂ ತನ್ನ ಮೇಲಿನ ನಿಂದೆಯನ್ನು  ಸಹಿಸುವುದಿಲ್ಲ. ಅದೂ ಕೂಡಾ ಪ್ರಜೆಗಳನ್ನು ಶಿಕ್ಷಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಕ್ಷಿಪ್ರ ಬೆಳವಣಿಗೆಗಳು ಸಂಭವಿಸಬಹುದು. ಹಾಗಾಗಿ "ಇಲ್ಲ ಪ್ರಜಾಪ್ರಭುತ್ವವೆಂದರೆ ಹಾಗಿಲ್ಲ" ಎನ್ನುವಂತಿಲ್ಲ. ಹಾಗಂದರೆ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸಿದ ಅಪಾಯ ಎದುರಾಗಿಬಿಡುತ್ತದೆ. ಸರ್ವಾಧಿಕಾರದ ಪರ ಎಂಬ ಆರೋಪ ಬಂದುಬಿಡುತ್ತದೆ. ಇನ್ನೂ ಮುಂದುವರಿದರೆ "ಅಫಿಮ್" ನವರು ಎನ್ನುವ ಆಪಾದನೆಗಳೂ ಬಂದುಬಿಡಬಹುದು. ಇವಿಷ್ಟನ್ನು ಬಿಟ್ಟರೆ ಪ್ರಜಾಪ್ರಭುತ್ವವನ್ನು ಪರಿಶೀಲಿಸುವ ಸಾಮಾನ್ಯನಿಗೆ  ಪರ್ಯಾಯವಾದ ದಾರಿಯೊಂದು  ಎದುರಾಗುವುದಿಲ್ಲ. ಮತ್ತು ಆತ ಪರ್ಯಾಯವಲ್ಲದ, ಪ್ರಜಾಪ್ರಭುತ್ವದ ನಾಡಿಯನ್ನು ಮೀಟಬಲ್ಲ ಸಂಗತಿಯ ಬಗ್ಗೆ ಯೋಚಿಸಲು ಹೋಗುವುದಿಲ್ಲ. ಹಾಗಾಗಿ ಪ್ರಜೆಗಳು, ಪ್ರಜೆಗಳಿಂದ ಎಂಬ ಪ್ರಪಂಚ ಸದಾ ಒಣಒಣವಾಗಿ , ಸಂಪೂರ್ಣ ನಾಟಕಕಾರರ ಜಗತ್ತಾಗಿ ಮುಂದುವರಿಯುತ್ತದೆ. ಅದು ಪ್ರಜಾಪ್ರಭುತ್ವದ ಎಡವಟ್ಟೋ ಅಥವಾ ಆಚರಣೆಯ ಹೊತ್ತಲ್ಲಿ ಆದ ಆವಾಂತರಗಳೋ ಗೊತ್ತಿಲ್ಲ. ಆದರೆ ಒಟ್ಟು ಪ್ರಜಾಪ್ರಭುತ್ವ ಭಾರತದಲ್ಲಂತೂ ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡದ , ಪ್ರಜೆ ಎಂಬ ಸ್ಥಾನ ಒಂಚೂರೂ ಮೇಲೆ ಹೋಗದ, ಸದಾ ಬಲಿಪಶುವಾಗುವ , ತನ್ನದೇನೂ ನಡೆಯದ, ಹೊರಬರಲಾಗದ, ಅದರೊಳಗೇ ಬಂಯಾಗುವ, ಆಡಳಿತದ ಆಗುಹೋಗುಗಳು ಅರಿವಾಗದ, ಒಂದಿಷ್ಟು ಜನರ ವಿಜ್ರಂಭಣೆಯಾಗಿರುವುದಂತೂ ಸತ್ಯ. ಹೀಗಿರುತ್ತಾ "ಪ್ರಜೆಗಳು ಪ್ರಜೆಗಳಿಗಾಗಿ..." ಎನ್ನುವ ಮಂತ್ರ ಜಪಿಸುವುದು ಆತ್ಮವಂಚನೆಯೇ ಸರಿ. ವಿಪರ್ಯಾಸವೆಂದರೆ ಇಂದು ಭಾರತದ ಬಹುಪಾಲು ಜನರು ಆತ್ಮವಂಚಕರೇ.
ಕಾರಣಗಳಿವೆ. ಭಾರತೀಯ ಮನಸ್ಸುಗಳಿಗೆ  ಈ ನಾಟಕೀಯವಾದ ಬದುಕಿಗಿಂತ ಮತ್ತೇನೋ ಒಂದರ ತುಡಿತವಿದೆ. ತನ್ನ ಜೀವನ ವಿಧಾನ, ಪದ್ದತಿ, ಆಚರಣೆ, ಸಂಸ್ಕೃತಿ, ಸಂಸ್ಕಾರಗಳು ಆತನಲ್ಲಿ ಮತ್ತೇನೋ ಒಂದರ ಆಲೋಚನೆಯನ್ನು ಮೂಡಿಸುತ್ತದೆ. ಅದು ಪ್ರಜೆಗಳು, ಪ್ರಜೆಗಳಿಂದ ಎಂಬಂಥ  ಒಣ ಒಣವಾದ ಸಿದ್ಧಾಂತವಲ್ಲ. ಅದು ಪ್ರಜೆಗಳು ನರಳುವಂಥಾದ್ದೂ ಅಲ್ಲ. "ಅಫಿಮಿನ" ಜನರು ಕಂಡ ಕನಸ್ಸಿನಂಥಾದ್ದೂ ಅಲ್ಲ. ಅದು ಬೇರೆಯೇ ಆದುದು. ಆ ಕಾರಣಕ್ಕೆ ಇಂದಿನ ಆಧುನಿಕವೆಂಬ ಪ್ರಜಾಪ್ರಭುತ್ವದಲ್ಲಿ ಕೂತು ಆಡಳಿತವನ್ನು ಮೈದುಂಬಿಕೊಳ್ಳಲು  ಆತ ಇತಿಹಾಸದ ಬೆನ್ನು ಹತ್ತುತ್ತಾನೆ. ಮರ ಕಡಿದು ರಸ್ತೆ ಮಾಡಲೆಂದೇ ಇಲಾಖೆಗಳು ಇರುವ ಹೊತ್ತಿನಲ್ಲಿ ಮಾರ್ಗ ಬದಿಯಲ್ಲಿ ಸಾಲು ಮರಗಳನ್ನು ನೆಡಿಸಿದ ಅಶೋಕ  ಪುಳಕ ತರುತ್ತಾನೆ. ರೂಪಾಯಿ ಮೌಲ್ಯಗಳು ಕುಸಿಯುಯುತ್ತಾ  ಹೋಗುತ್ತಿರುವಾಗ ಚಂದ್ರ ಗುಪ್ತ ಮೌರ್ಯನ ಆಡಳಿತ ಹೇಗಿರಬಹುದು ಎಂಬುದನ್ನು ಮನಸ್ಸು ಲೆಕ್ಕ ಹಾಕುತ್ತದೆ. ಅಣೆಕಟ್ಟುಗಳ ಎತ್ತರದ ವಿವಾದ , ಆದರೂ ನೀರಿಲ್ಲದೆ ಬಸವಳಿಯುವ ಬಯಲಸೀಮೆಯ ಕಥೆಯ ನಡುವೆ ಕೃಷ್ಣದೇವರಾಯನ ಕಾಲದ ನೀರಿನ ತಂತ್ರಗಳು ನೆನಪಿಗೆ ಬಂದು ಇದ್ದರೆ ಇಂಥ ಪ್ರಭುತ್ವವಿರಬೇಕು ಎಂದು ಇಂದಿಗೆ ವರ್ಜ್ಯವಾದ ಸರ್ವಾಧಿಕಾರದ ಕಾಲವನ್ನು ನೆನೆಯುತ್ತದೆ. ಇದೂ ಕೂಡಾ ಒಂದು ವಿಚಿತ್ರ. ಸದ್ಯ ನಡೆಯುತ್ತಿರುವುದು ಸಂಕಟ, ನಡೆದುಹೋದುದು ಯಾವತ್ತೂ ಸಂತಸ ಎಂಬ ಮಾಮೂಲು ತತ್ತ್ವಕ್ಕಿಂತಲೂ ಇದು ಭಿನ್ನ. ನಡೆದುಹೋದುದನ್ನು ಮನುಷ್ಯ ಕೇವಲ ನೆನಪು ಮಾಡಿಕೊಳ್ಳಬಹುದು. ಆದರೆ ಇಲ್ಲಿ ನಡೆದುಹೋದ ಹಳೆಯ ಸಂಗತಿಗಳನ್ನೇ ಮನಸ್ಸು ಬಯಸುತ್ತದೆ. ಅದು ಸದ್ಯದ ಪ್ರಭುತ್ವದ ಬಿಡುಗಡೆಯ ಬಯಕೆ ಮತ್ತು ಉದ್ದಾರದ ಆಸೆ.
 ಆ ಎರಡು ಪ್ರಭುತ್ವಗಳ ನಡುವಿನ ಮಧ್ಯಮ ಮಾರ್ಗವೊಂದಿದೆ. ಅದೇ ಹಿಂದುತ್ವ. ಹಿಂದೂ ರಾಜಧರ್ಮ. ಇತ್ತೀಚೆಗೆ ರಾ. ಸ್ವ. ಸಂಘದ ಸರಸಂಘಚಾಲಕರು ಹಿಂದೂ ರಾಷ್ಟ್ರದಲ್ಲಿ ಹಿಂದೂ ಒಲವಿರುವ ವ್ಯಕ್ತಿಯೇ ಪ್ರಧಾನಿಯಾಗಬೇಕು ಎಂದಿದ್ದು ಇದೇ ಅರ್ಥದಲ್ಲಿರಬೇಕು. ಏಕೆಂದರೆ ಪ್ರಭುತ್ವಕ್ಕೆ ಒಂದು ವಿಚಿತ್ರವಾದ ಗುಣವಿದೆ. ರಾಜನೇ ಆಳಲಿ, ಗುಲಾಮನೇ ಪ್ರಭುತ್ವದ ಚಿಕ್ಕಾಣಿ ಹಿಡಿಯಲಿ ಎರಡೂ ಪರಿಸ್ಥಿತಿಗಳಲ್ಲಿ ಅಪಾಯಗಳ ಸಂಬವವಿರುತ್ತದೆ. ಅಧಿಕಾರವೆಂಬುದು ಅಂಥಾದ್ದು. ಆದರೆ ಸಂಸ್ಕೃತಿ, ಸಂಸ್ಕಾರಗಳು ಒರ್ವ ವ್ಯಕ್ತಿಯನ್ನು ನಿರ್ಮಾಣ ಮಾಡುವುದರಿಂದ ಆತ ಅಧಿಕಾರವನ್ನೂ ವ್ಯವಸ್ಥಿತವಾಗಿ ಸರಿದೂಗಿಸಿಕೊಂಡುಹೋಗಬಲ್ಲ. ಆ ಸಂಸ್ಕೃತಿ, ಸಂಸ್ಕಾರಗಳೇ ಹಿಂದುತ್ವ. ಅದು ಭಾರತವನ್ನು ಇನ್ನೂ ಅಳಿಯದೇ ಉಳಿದಿರುವಂತೆ ಮಾಡಿದೆ.  ಅದರ ಕಣಗಳು ಇಲ್ಲದೇ ಇರುತ್ತಿದ್ದರೆ ಇಂದು ಯಾವ ಸಂವಿಧಾನ, ಯಾವ ಕಾನೂನುಗಳ ತರುವಾಯವೂ ಭಾರತ ಭಾರತವಾಗಿ ಉಳಿಯುತ್ತಿರಲಿಲ್ಲ. ಅಲ್ಲಿ ಎಲ್ಲದಕ್ಕೂ ಉತ್ತರವಿದೆ. ಭಾರತವನ್ನು ಭಾರತವಾಗಿ ಉಳಿಸಬಲ್ಲ ತಾಕತ್ತಿದೆ. ಇಲ್ಲದಿದ್ದರೆ ನಿರಂಕುಶ ಮತಿಗಳ ಪುರಾತನ ಅರಸರಾದರೂ ಇಂದು ಯಾಕಾಗಿ ನೆನಪಾಗಬೇಕು? ಆ ಎಲ್ಲಾ ಅರಸರ ರಾಜಧರ್ಮ, ಧರ್ಮಾಡಳಿತದ ಪ್ರಭುತ್ವಗಳು ಈ ಕಾರಣಕ್ಕಾಗಿಯೇ ಇಂದಿಗೂ ನಮಗೆ ನೆನಪಾಗುತ್ತವೆ.
ಏನೇನಾಗಿಹೋಯಿತು ಈ ಆರು ದಶಕಗಳಲ್ಲಿ? ಸೋಷಿಯಲಿಷ್ಟರೆಂಬ ಜನರು ಬಂದುಹೋದರು. ತಾವೇ ಬುದ್ಧಿಜೀವಿಗಳೆಂದು ಮೆರೆದರು. "ಇಂಡಿಯಾ ದೇಶ" ವನ್ನು ಪಾಶ್ಚಾತ್ಯ ರೀವಾಜಿಗೆ ತರುವೆವೆಂದು ಪಣತೊಟ್ಟು ನಿಂತರು. ಸ್ವಾತಂತ್ರ್ಯ ಬಂದ ಎಳವೆಯಲ್ಲಿ ನೆಹರೂರಂಥವರು " ನಾವೊಂದು ರಾಷ್ಟ್ರವನ್ನು ಕಟ್ಟುತ್ತಿದ್ದೇವೆ" ಎಂದೂ ಉದ್ಗರಿಸಿದರು. ಇನ್ನೂ ಜೀವಂತವಿದ್ದ ಭಾರತ ಅವರಾರಿಗೂ ನೆನಪಿಗೆ ಬರಲಿಲ್ಲ. ಇದೊಂದು ಬಲಿಷ್ಠ ರಾಷ್ಟ್ರವಾಗಿತ್ತೆಂಬುದೂ ಅವರಿಗೆಲ್ಲಾ ಮರೆತೇ ಹೋಗಿತ್ತು. ಏಕೆಂದರೆ ಕೃಷ್ಣನೆಂದ ಪ್ರಜ್ನಾವಾದದ ವಿಸ್ಮೃತಿಯಲ್ಲಿ  ನೆಹರೂ ಮುಳುಗಿಹೋಗಿದ್ದರು. ತಾನು ಹಿಂದುವಾಗಿ ಹುಟ್ಟಿದ್ದು ತೀರಾ " ಆಕಸ್ಮಿಕ" ಎಂದಿದ್ದರು. ಇಂಥ ಪ್ರಭುವನ್ನು  ಹೊಂದಿದ ದೇಶ ಆರು ದಶಕಗಳ ತರುವಾಯ  ಮುಟ್ಟಬಾರದ ಸ್ಥಿತಿಯನ್ನು  ಮುಟ್ಟಿದೆ ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಹಾಗಾದರೆ ಕಾರಣ ಮತ್ತು ಪರಿಹಾರಗಳಲ್ಲಿ ನಿಚ್ಚಳತೆ ಇದೆ. ಹಿಂದೂ ಎನ್ನುವುದು ಅಸಹ್ಯ ಎಂಬುವವನಿಂದ ಆದ ಎಡವಟ್ಟುಗಳನ್ನು ನೀಗಿಸುವುದು  ಹಿಂದೂ ಎಂದು ಹೆಮ್ಮೆ  ಪಡುವವನಿಂದ ಮಾತ್ರವೇ ಸಾಧ್ಯ ಎನ್ನುವುದು ಸಹಜ ತರ್ಕ. ಇದೇ ಸರಸಂಘಚಾಲಕರ ಮಾತಿನ ಮತಿತಾರ್ಥವಿರಬೇಕು.
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಪ್ರಭುತ್ವ ನಮ್ಮ ಜನರ ಸಾಂಸ್ಕೃತಿಕ ಬದುಕಿನ ಬೇರುಗಳಿಗೆ , ನೆಮ್ಮದಿ ತರುವ ನಂಬಿಕೆಗಳಿಗೆ ಆಘಾತವನ್ನೇ ಮಾಡುತ್ತಲೇ ಬಂದಿತು.ಮೊದಲಿಗೆ ದೇವರನ್ನು ಧಿಕ್ಕರಿಸಿದರು. ರಾಜಧರ್ಮವನ್ನು ಕೋಮುವಾದ ಎಂದರು. ಅಫಿಮನ್ನು ಉದಾಹರಿಸುವವರು  ಧರ್ಮವನ್ನು ಮತೀಯ ಮತ್ತು ಕೋಮು ಎಂಬ ನೆಲೆಗಳಲ್ಲೇ ಅರ್ಥೈಸಿದರು. ರಾಜಕೀಯದ ಆಟಾಟೋಪಗಳಿಗೆಬೇಕಾಗಿ ಧರ್ಮವನ್ನು ಅಸ್ಪೃಶ್ಯವಾಗಿಯೇ ಇಡಲಾಯಿತು. ಮುಂದೆ ಕಾಲ ಓಡಿದಂತೆ ಅಫಿಮಿನ ಮಾತನಾಡುವ ಕೆಂಪು ಕಮ್ಯುನಿಷ್ಠರು ತಮ್ಮ ರಂಗನ್ನು ಕಳೆದುಕೊಳ್ಳಲಾರಂಭಿಸಿದರು. ಕಾಂಗ್ರೆಸ್ ಅದರ ಸ್ಥಾನವನ್ನು ತುಂಬಿತು.ಸೆಕ್ಯುಲರಿಸಂ ಹೆಸರಿನ ಹೊಸ ಆತ್ಮ ವಂಚನೆ ಎಗ್ಗಿಲ್ಲದೆ ನಡೆಯಿತು. ಹಿಂದೂ ಬಲಿಯಾದ, ತಾನು ಹಿಂದುವೆಂಬ ಒಂದೇ ಕಾರಣಕ್ಕೆ ಬಲಿಯಾದ. ಎಲ್ಲವೂ ಪ್ರಜೆಗಳು ಪ್ರಭುಗಳು ಎಂಬ ಸಿದ್ದಾಂತದ ಅಡಿಯಲ್ಲೇ ನಡೆದವು. ಹಾಗಾದರೆ ಪರಿಹಾರ ಹಿಂದೂ ವ್ಯಕ್ತಿಯ ಚುಕ್ಕಾಣಿಯಿಂದಲೇ ಅಲ್ಲವೇ?
ಕಾಲದ ಚಲನಶೀಲಗುಣವೇ ಅಂಥದ್ದು. ಎಷ್ಟೇ ನಾಗಾಲೋಟದ ಯುಗದಲ್ಲೂ ನೆನಪುಗಳು ಗರಿಗೆದರಲೇ ಬೇಕು. ಗರಿಗೆದರುವುದಷ್ಟೇ ಅಲ್ಲ , ಕಳೆದುಹೋದುದನ್ನು ಹುಡುಕಲೇ ಬೇಕು. ಅದು ಆರೋಗ್ಯವಂತ ಲಕ್ಷಣ. ಈ ಹೊತ್ತಲ್ಲಿ ನೆನಪುಗಳನ್ನು ಅಳಿಸುವ ರಕ್ಕಸೀ ಗುಣ ಪ್ರಜಾಪ್ರಭುತ್ವದಲ್ಲೇ ನಡೆದರೆ ಅದಕ್ಕಿಂತಲೂ ನೆನಪುಗಳನ್ನು ಅರಸುವ ಸರ್ವಾಧಿಕಾರವೇ ಲೇಸು ಎನಿಸುತ್ತದೆ. ಇಂದು ಭಾರತದಲ್ಲಿ ನೆನಪುಗಳನ್ನು ಅಳಿಸುವ ಕಾರ್ಯ ನಡೆಯುತ್ತಿದೆ. ಸಾಂಸ್ಕೃತಿಕ ಕುರುಹುಗಳು ಮತೀಯವಾಗುತ್ತಿವೆ. ಇಂದು ಪ್ರಭುತ್ವಕ್ಕೆ  ಭಾರತದ ಸಮಾಧಿಯಲ್ಲಿ ಇಂಡಿಯಾ ಕಟ್ಟುವ ಕನಸ್ಸುಗಳೇ ತುಂಬಿವೆ. ಆದರೆ ಆರೋಗ್ಯವಂತ ಮನಸ್ಸುಗಳು ನೆನಪುಗಳನ್ನು ಹುಡುಕುತ್ತಿವೆ. ನನಸು ಮಾಡಲು ಹಾತೊರೆಯುತ್ತಿದೆ. ಆದ್ದರಿಂದ ಬಾಂಬೆ ಮುಂಬೈ ಆಗುತ್ತಿದೆ. ಮದರಾಸು ಚೆನ್ನೈ ಆಗುತ್ತಿದೆ. ಉಪಗ್ರಹ ಉಡಾವಣೆಗೆ  ಮುನ್ನ ಪೂಜೆಗಳು ನಡೆಯುತ್ತಿವೆ. ವಿಜ್ನಾನಿಗಳು ನೆಟ್ಟ ಪೈರಿನ ಗದ್ದೆಗಳಲ್ಲಿ ಬೆರ್ಚಪ್ಪಗಳು ನಿಂತಿರುತ್ತವೆ. ಇದೇ ಅಳಿಯದೇ ಉಳಿದಿರುವ ಮಾನಸ ಭಾರತದ ಲಕ್ಷಣ.
ಮಾನ್ಯ ಸರಸಂಘಚಾಲಕರ ಆಶಯದೊಳಗೆ ಪಯಣಿಸಿದರೆ ಇವೆಲ್ಲವೂ ಒಂದೊಂದಾಗಿ ಎದುರಾಗುತ್ತಾ ಹೋಗುತ್ತವೆ. ಪ್ರಭುಗಳ ಒಳನೋಟಗಳು, ಆಳಿದವರ ಪ್ರಜ್ನಾವಾದಗಳು, ಸಂಸ್ಕೃತಿಯ ಚಹರೆಗಳು, ತುಡಿಯುವ ಮನಗಳು ಸುತ್ತಲೂ ಕಾಣುತ್ತವೆ. ಎಲ್ಲಾ ಎಡವಟ್ಟುಗಳಿಗೆ ಹಿಂದೂ ಮನದ ನಾಯಕ  ಪರಿಹಾರರೂಪದಲ್ಲಿ ಕಾಣುತ್ತಾನೆ. ಆತ ಪ್ರಜ್ವಲಿಸುವ ಭಾರತದ ಧ್ರುವತಾರೆಯಂತೆ, ಇನ್ನೂ ಪೂರ್ತಿ ಅಳಿಯದ ಗುಲಾಮತನದ ಶತ್ರುವಿನಂತೆ, ಪ್ರಜೆಗಳ ಪ್ರಭುವಾಗುವ , ಕೊಂಚ ಜಿಗುಟಿನ, ಕೊಂಚ ಒರಟಿನ  ವಿಕ್ರಮಾಧಿತ್ಯನಂತೆ ಕಾಣುತ್ತಾನೆ. ಹಿಂದೂ ನಾಯಕನಿರುವುದು ಹಾಗೆಯೇ. ಇಂದು ಭಾರತಕ್ಕೆ ಬೇಕಾಗಿರುವುದೂ ಅಂಥವನೇ.

1 comment:

Badarinath Palavalli said...

ಪ್ರಜಾ ಪ್ರಭುತ್ವ ಮತ್ತು ದೇಶದ ಸಮಸ್ಯೆಯ ಹಲ ಮಜಲುಗಳನ್ನು ತೆರೆದಿಟ್ಟ ಉತ್ತಮ ಲೇಖನ.

ಅಫೀಮರು ಎಂದರೆ ಏನು ಇದೋಮ್ದು ನನಗೆ ಅರ್ಥವಾಗಲಿಲ್ಲ ಸಾರ್.

ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.