Wednesday, January 11, 2012

ಆತ ಗೆದ್ದಿದ್ದರೆ ಇಲ್ಲೂ ಒಂದು ಅಲೆಕ್ಸಾಂಡ್ರಿಯಾ ಇರುತ್ತಿತ್ತು


ತಿಹಾಸ ಎಂದರೆ ಯಾವುದು ? ಇಲ್ಲಿಯವರೆಗೆ ನಡೆದುಹೋಗಿರುವ ರಾಷ್ಟ್ರೀಯ ವಿದ್ಯಮಾನಗಳೇ ? ಹಾಗಾದರೆ ನಮಗೆ ಭಾರತದ ವಿದ್ಯಮಾನಗಳೆಲ್ಲವೂ ಏಕೆ ಗೋಚರವಾಗುತ್ತಿಲ್ಲ ? ನಮ್ಮವರಿಗೆ ಇತಿಹಾಸದ ಪ್ರಜ್ಜೆಯೇ ಇರಲಿಲ್ಲವೇ ? ಹಲವೆಡೆ ನಮ್ಮ ಇತಿಹಾಸವನ್ನು ನಾವು ಓದುವಾಗ ಏಕೆ ಅವು ರೇಜಿಗೆಯಾಗುವಂತಿವೆ? ವಾಸ್ತವವಾಗಿ ಭಾರತ ಹಾಗಿತ್ತೇ ? ಇಲ್ಲದಿದ್ದರೆ ಅದಕ್ಕೆ ಪರದೆ ಎಳೆದವರಾರು ? ಬರಡು ಬರಡಾದ ಇತಿಹಾಸಗಳು ನಮ್ಮವರ ಬರಡು ಬರಡಾದ ಬದುಕಿನ ಸಂಕೇತಗಳೇ ?
ಪ್ರಶ್ನೆಗಳೇಳುತ್ತವೆ , ಆದರೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ ಏಕೆಂದರೆ ಅಮೆರಿಕಾದಂಥ ರಾಷ್ಟ್ರ ಎಲ್ಲೋ ಒಂದು ಕಡೆ ನಡೆಸಿದ ಹೋರಾಟವನ್ನೇ ರಾಷ್ಟ್ರದ ಸುವರ್ಣ ಅಧ್ಯಾಯ ಎಂದು ಕರೆದುಕೊಳ್ಳುತ್ತದೆ. ಚೀನಾದಂಥ ರಾಷ್ಟ್ರ ಶತ್ರುಗಳ ಭಯಕ್ಕೆ ದೇಶದ ಸುತ್ತಲೂ ಗೋಡೆ ಕಟ್ಟಿಕೊಂಡದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಇನ್ನಾವುದೋ ದೇಶದಲ್ಲಿ ಉದಿಸಿಬಂದ ಸರ್ವಾಧಿಕಾರಿಯ ಪರ್ವವೇ ಸುವರ್ಣ ಯುಗವಾಗಿ ಹೋಗುತ್ತದೆ. ಆದರೆ ಭಾರತದಂಥ ವಿಶಾಲ, ಬೃಹತ್ ಜನಸಂಖ್ಯೆಯಿರುವ ಪುರಾತನವಾದ ರಾಷ್ಟ್ರದಲ್ಲಿ ಅಂಥ ಸುವರ್ಣ ಯುಗಗಳು ಕಾಣುವುದೇ ಇಲ್ಲ ಏಕೆ ? ಸಂಘರ್ಷ ನಡೆದೇ ಇಲ್ಲವೇ? ಸೋಲೇ ಸತತವಾಯಿತೇ ? ಕೆಲವೊಮ್ಮೆ ಇದು ಸತ್ಯವಲ್ಲ ಎಂದು ತಿಳಿದೂ ತಿಳಿದೂ ಬಲವಂತದ ತಲೆದೂಗುವಿಕೆ ನಮಗೆ ಒಗ್ಗಿಹೋಗಿರುವಾಗ ಇತಿಹಾಸ ನಮಗೆ ನೆನಪಾಗಬೇಕು. ಗೆಲುವು ಹುಡುಕಬೇಕು. ಇಬ್ಬನಿಯ ನಡುವೆ ನುಸುಳುವ ಸೂರ್ಯ ರಶ್ಮಿಯಂತೆ ಅದು ಹೊಳೆಯಬೇಕು. ಕ್ರಮೇಣ ಅದು ಕಾರಿರುಳ ಪಟ್ಟಣಕ್ಕೆ ಚಂದಿರನ ಬಿಗಿದಂತೆ ಬೆಳಕು ನೀಡಬೇಕು. ದೇಶ ತಂಪಾಗಬೇಕು. ಆ ಭಾವನೆ ಗಟ್ಟಿಯಾಗಬೇಕು. ಏಕೆಂದರೆ ಭಾರತ ದುರ್ಬಲವಲ್ಲ. ಸೋಲೇ ನಿರಂತರವಾಗುವಷ್ಟು ಕೀಳಲ್ಲ.
ಹೇಗೆ ತಾನೆ ಸಾಧ್ಯ ? ಹುಲಿಯೊಟ್ಟಿಗೆ ಆಡಿ ಬೆಳೆದ ಭರತನೇ ಇಲ್ಲಿಯ ಹಿರಿಯ, ಗಾಂಢೀವ ಹಿಡಿದ ಅರ್ಜುನನೂ ಇಲ್ಲಿ ಭರತನೇ. ಇಂತಹ ಭರತನ ವಂಶದ ಭಾರತ ಗೆಲುವೇ ಕಾಣದೆ ನೆಲಕಚ್ಚುವುದೆಂದರೇನು? ಅಂಥವರ ವಂಶ ನಿರ್ವೀರ್ಯವಾಗುವುದು ಎಂದರೇನು? ವಿಪರ್ಯಾಸ ಎಂದರೆ ಹೇಳಬೇಕಾದುದನ್ನು ಆಧುನಿಕ ಭಾರತ ತನ್ನವರಿಗೆ ಹೇಳಲಿಲ್ಲ. ಹೇಳಿ ಗೆಲುವು ಧಕ್ಕಿಸಿಕೊಳ್ಳಲಿಲ್ಲ. ಪರಿಣಾಮ ಇಂದು ಏನಾಗಿದೆಯೆಂದರೆ ಸತ್ಯದ ಇತಿಹಾಸ ಗೋಚರವಾಗದೆ ಸಮಸ್ತ ದೇಶ ಗೊಂದಲದ ಗೂಡಿನಂತಿದೆ. ಸೋಲಿನ ಇತಿಹಾಸವನ್ನೇ ಕಲಿತೂ ಕಲಿತೂ ಕಲಿಸೀ ಕಲಿಸೀ ದೇಶವೇ ಸೋಲಿನ ಅಂಚಿಗೆ ಬಂದುಬಿದ್ದದನ್ನು ಇತ್ತೀಚಿನ ಶತಮಾನದಲ್ಲಿ ನಾವು ನೋಡಿದ್ದೇವೆ. ಬಾಹುಗಳು ಸ್ಫುರಣಗೊಳ್ಳದೆ ಬಾಹುಗಳಿದ್ದೂ ಇಲ್ಲದಂತಿದೆ. ಪರಿಣಾಮ ‘ಅಹಿಂಸಾ ಪರಮೋ ಧರ್ಮ’ವಾಗಿ ದೇಶ ಒಡೆದಿದೆ, ಶತ್ರು ದೇಶ ತನ್ನವರನ್ನು ಸಾವಿರಾರುಗಟ್ಟಲೆಯಲ್ಲಿ ಒಳ ನುಗ್ಗಿಸಿದಾಗಲೂ ದೇಶ ‘ನಿರ್ಲಿಪ್ತ ನೀತಿ’ಯನ್ನು ಅಳವಡಿಸಿಕೊಂಡದ್ದಿದೆ. ಕಾಶ್ಮೀರ ಹೊತ್ತಿ ಉರಿದದ್ದಿದೆ. ದೇಶದೊಳಗೊಂದು ದೇಶ ಹುಟ್ಟುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದದ್ದಿದೆ. ಪರದೇಶಿ ಕ್ರಿಕೇಟಿಗೂ ದೇಶ ಸಾಕಷ್ಟು ಅನುಭವಿಸಿದ್ದಿದೆ. Discovery of indiaದ ಪ್ರಭಾವಕ್ಕೆ ದೇಶ ಮೋಹಗೊಂಡು ‘ಗರೀಭಿ’ಯನ್ನು ಆಹ್ವಾನಿಸಿಕೊಂಡದ್ದಿದೆ. ಪಾಂಡವರಿಂದ ಪ್ರಥ್ವೀರಾಜನವರೆಗೆ ಎಲ್ಲೂ ಸೆರೆಸಿಕ್ಕದ ಇಂದ್ರಪ್ರಸ್ಥ, ಮಯ ನಿರ್ಮಿಸಿದ ಇಂದ್ರಪ್ರಸ್ಥ, ದಿಲ್ಲಿಯಾಗಿ ನರಳಿ, ಖಾಲಿಬಿದ್ದು, ಅನುಭವಿಸಿ ಹತ್ತನೇ ಜನಪಥ್‌ನೊಳಗೆ ಅಸ್ಮಿತೆಗಳನ್ನು ಬಲಿಕೊಟ್ಟು ಸ್ವದೇಶಿ ಜನರೇ ಇಟಾಲಿಯನ್ ಮಾರ್ಬಲ್ ನೆಕ್ಕುವ ಮಾನಸಿಕತೆ ನಿರ್ಮಾಣವಾದದ್ದಿದೆ. ಎಲ್ಲವೂ ಇತಿಹಾಸದ ಮರೆವಿನಿಂದ. ವಿಜಯದ ನೆನಪಿನ ಕೊರತೆಯಿಂದ.
ಅಲ್ಲಗಳೆಯಲಾರೆವಲ್ಲಾ ? ಅದಕ್ಕೆ ಸುವರ್ಣಯುಗಗಳ ಹುಡುಕಾಟ ನಡೆಸಬೇಕೆನಿಸುತ್ತದೆ. ನಲುವತ್ತೇಳಕ್ಕೆ ಸ್ವಾತಂತ್ರ್ಯ ಬಂತು ಎಂದು ಹಬ್ಬ ಮಾಡುವಾಗಲೂ ಸ್ವಾತಂತ್ರ್ಯ ಬಿಟ್ಟುಹೋದದ್ಯಾವಾಗ ಎಂದು ಚಿಂತಿಸೋಣವೆನಿಸುತ್ತದೆ. ಇತಿಹಾಸ ಮರೆತ ದೇಶವೊಂದು ಭವಿಷ್ಯದಲ್ಲಿ ಎಡವುತ್ತದೆ. ಎಡೆಬಿಡಂಗಿಯಾಗುತ್ತದೆ. ಖಡ್ಗ ಸನ್ಯಸ್ತವಾಗುತ್ತದೆ, ಬುದ್ಧಿ ಭ್ರಮಣೆಯಾಗುತ್ತದೆ ಎಂಬುದಕ್ಕೆ ಭಾರತ ಒಂದು ಯೋಗ್ಯ ಉದಾಹರಣೆಯಂತೆ ನಿಲ್ಲುವಾಗ ಸತ್ಯವಾವುದು ಎಂಬ ಕುತೂಹಲ ಇನ್ನಷ್ಟು ಹೆಚ್ಚಾಗುತ್ತದೆ.
ಭಾರತದ ಈ ಸ್ಥಿತಿಯನ್ನು ಅಂದೇ ಗುರುತಿಸಿದವರು ಸ್ವಾತಂತ್ರ್ಯ ವೀರ ಸಾವರ್ಕರರು. ಹಿಂದುತ್ವದ ಪ್ರಬಲ ಪ್ರತಿಪಾದನೆಯಿಂದಲೇ ಬ್ರಿಟಿಷರನ್ನು ವಿರೋಧಿಸಿ , ಸಾಕಷ್ಟು ಅನುಭವಿಸಿದ ಈ ಮಹಾನ್ ವ್ಯಕ್ತಿಯ ಚಿಂತನೆ, ಅಧ್ಯಯನ, ಚುರುಕಿನ ಅವರ ಶೋಧ ಗುಣ ಭಾರತದ ನೈಜ ಇತಿಹಾಸದ ಒಳ ಪ್ರವೇಶಿಸುತ್ತದೆ. ಅಲ್ಲಿಂದ ಸುವರ್ಣ ಯುಗವನ್ನು ಹೆಕ್ಕಿ ಕೊಡುತ್ತಾರೆ. ಭಾರತದ ನೆಲದಲ್ಲಿ ನಡೆದ ಕಿಂಚಿತ್ ಯಾವುದು ಬೃಹತ್ ಯಾವುದು ಎಂಬ ನೆಲೆಯಲ್ಲಿ ಅವರ ಇತಿಹಾಸ ಭಾರತವನ್ನು ಮಜಲು ಮಜಲಾಗಿ ಕಟ್ಟಿಕೊಡುತ್ತದೆ. ಶೌರ್ಯದ ಇತಿಹಾಸದ ಪ್ರತಿಪಾದನೆ ಮಾಡುತ್ತದೆ. ಆದರೆ ಆಧುನಿಕ ಭಾರತ ಅಂಥ ಸುವರ್ಣ ಅಧ್ಯಾಯಗಳನ್ನು ಕೋಮುವಾದವೆಂದು ಕರೆದು ಮೂಲೆಗುಂಪುಮಾಡಿತು. ಶೌರ್ಯದ ಇತಿಹಾಸ “ನಾವು ಊಟ ಬಿಟ್ಟದ್ದಕ್ಕೆ ಬ್ರಿಟಿಷರು ಭಾರತ ಬಿಟ್ಟರು" ಎಂದು ಹೇಳುವವರಿಗೆ ಇಷ್ಟವಾಗಿರಲಿಕ್ಕಿಲ್ಲ.
ಹೀಗೆ ಕ್ರಿ.ಪೂದ ಕಾಲದಿಂದಲೂ ಮಂಡನೆಯಾದ ಈ ಇತಿಹಾಸದಲ್ಲಿ ಹಲವು ಪರಾಕ್ರಮದ ಕಥೆಗಳಿವೆ. ಅಪರೂಪದ ಮಾಹಿತಿಗಳಿವೆ. ಅದರಲ್ಲಿ ಮುಖ್ಯವಾಗಿ ಕಂಡು ಬರುವುದು ವಿಶ್ವವಿಜೇತ ಸಿಕಂದರನ ಗರ್ವ ಭಂಗದ ಪ್ರಸಂಗ.
ಸಿಕಂದರ ಎಂದರೆ ಭಾರತಕ್ಕೆ ಮೊದಲ ಆಕ್ರಮಣ ಎಸಗಿದ ವಿದೇಶೀಯ. ಸಿಕಂದರ ಎಂದರೆ ಜಗತ್ತಿನ ಮಹಾನ್ ಮಹತ್ವಾಕಾಂಕ್ಷಿ, ಅಹಂಕಾರಿ, ಛಲಗಾರ. ಆ ಸಿಕಂದರ ಗ್ರೀಕಿನ ಅಲೆಕ್ಸಾಂಡರ.
ಕಿ.ಪೂ ೨೨೩ರಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಸಾಹಸಿ ಯುವಕರ ಒಂದು ಲಕ್ಷ ಕಾಲ್ದಳ, ಹದಿನೈದು ಸಾವಿರ ಅಶ್ವದಳವನ್ನು ಒಳಗೊಂಡು ನಿರಂತರ ಒಂದರ ಅನಂತರ ಮತ್ತೊಂದು ವಿಜಯವನ್ನು ಸಾಸುತ್ತಾ ಧಾಂಗುಡಿಯಿಡುತ್ತಿದ್ದ ಅಲೆಕ್ಸಾಂಡರ ಅಂದು ಜಗತ್ತಿನೆಲ್ಲೆಡೆಯಲ್ಲಿ ‘ದೇವ ಪುತ್ರ’ನೇ ಅಗಿದ್ದ. ಇವನ ದಂಡಯಾತ್ರೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಸಾವರ್ಕರರು ಅಂದಿನ ಕಾಲಮಾನದ ಭಾರತದ ಬಗ್ಗೆಯೂ ವಿವರಗಳನ್ನು ನೀಡುತ್ತಾರೆ. ಹಿಂದೂಕುಶ್ ಪರ್ವತದಾಚೆಯಿಂದ ಸಿಂಧೂ ನದಿಯ ದಡದ ಭಾರತೀಯ ರಾಜ್ಯಗಳಿಗೆ ಧಾಳಿ ನಡೆಸಿದ ಅಲೆಕ್ಸಾಂಡರ್ ಸಣ್ಣಪುಟ್ಟ ರಾಜ್ಯಗಳನ್ನು ಸೋಲಿಸಿದರೂ ಮರುಕ್ಷಣವೇ ಅವು ಅಲೆಗ್ಸಾಂಡರನ ಹಿಡಿತದಿಂದ ತಪ್ಪಿಸಿಕೊಳ್ಳಲು ಏಳುತ್ತಿದ್ದವು ಮತ್ತು ತಪ್ಪಿಸಿಕೊಳ್ಳುತ್ತಿದ್ದವು ಎಂದು ಬರೆಯುತ್ತಾರೆ.ಆತ ತಕ್ಷ ಶಿಲೆಯ ರಾಜ ಅಂಬುಜನನ್ನು ಮಣಿಸಿದೊಂದನ್ನು ಬಿಟ್ಟರೆ ಭಾರತದಲ್ಲಿ ಅಲೆಗ್ಸಾಂಡರನ ಸಾಧನೆ ಏನೂ ಇರಲಿಲ್ಲ ಎಂದೂ ಹೇಳುತ್ತಾರೆ. ಅಂಬುಜನ ಕಾಲದ ತಕ್ಷ ಶಿಲೆಯ ವರ್ಣನೆಯನ್ನು ಮಾಡುತ್ತಾ ಸಾವರ್ಕರರು “ಒಂದೆಡೆ ಅಲೆಕ್ಸಾಂಡರ್ ತಕ್ಷಶಿಲೆಯಲ್ಲಿ ಮುಂದುವರಿಯುತ್ತಿದ್ದಾಗ ಅದೇ ವಿದ್ಯಾಪೀಠದಲ್ಲಿ ಓರ್ವ ಮೇಧಾವಿ ಯುವಕನು ರಾಜನೀತಿ ಹಾಗೂ ಯುದ್ಧ ಶಾಸ್ತ್ರವನ್ನು ಅಭ್ಯಸಿಸುತ್ತಿದ್ದ. ಅವನೇ ಚಂದ್ರಗುಪ್ತ. ಅದೇ ವಿದ್ಯಾಪೀಠದ ಪ್ರಾಂಗಣದಲ್ಲಿ ವಿವಿಧ ಶಾಸ್ತ್ರ ಪಾರಂಗತನಾದ, ರಾಜನೀತಿ ದುರಂಧರನಾದ ಪ್ರೌಢ ಗುರುವೊಬ್ಬ ಶಿಕ್ಷಣ ನೀಡುತ್ತಿದ್ದ. ಅವನೇ ಚಾಣಕ್ಯ. ಧಾಳಿಯಿಂದ ಅಸ್ತವ್ಯಸ್ತಗೊಂಡಿದ್ದ ಆ ಪರಿಸ್ಥಿತಿಯಲ್ಲಿ ತೀರಾ ಸಾಮಾನ್ಯರಂತೆ ಕಾಣುತ್ತಿದ್ದ ಈ ಅಸಾಮಾನ್ಯ ವ್ಯಕ್ತಿಗಳನ್ನು ಅಂದು ಯಾರೂ ಗಮನಿಸಲಿಲ್ಲ" ಎಂದು ವಿವರಿಸುತ್ತಾರೆ. ಅನಂತರ ಅಲೆಕ್ಸಾಂಡರನ ಸೇನೆ ಪುರೂರವನ ಮೇಲೆ ನಡೆಸಿದ ಧಾಳಿ, ದಾರಿಯಲ್ಲಿ ಸಿಕ್ಕಿದ ದಂಡಮೀಸನೆಂಬ ಬ್ರಾಹ್ಮಣ, ಅಡಿಗಡಿಗೆ ಸಿಗುತ್ತಿದ್ದ ತತ್ವಜ್ನಾನಿಗಳು, ವೈದಿಕ ಮತಪಂಡಿತರು ಈ ಗ್ರೀಕ್‌ನನ್ನು ಆಶ್ಚರ್ಯಗೊಳಿಸಿತ್ತೆಂಬ ಗ್ರೀಕ್ ಬರಹಗಳೂ ಸಾವರ್ಕರರ ಇತಿಹಾಸದಲ್ಲಿವೆ. ಕೊನೆಗೆ ಮಗಧವನ್ನು ಸೋಲಿಸುವ ಭರದಲ್ಲಿ ಮುಂದಡಿಯಿಟ್ಟಾಗ ದಾರಿಯಲ್ಲಿದ್ದ ಮಾಳವ ಮತ್ತು ಕ್ಷುದ್ರಕ ಎಂಬೆರಡು ರಾಜ್ಯಗಳ ಸ್ವಾಭಿಮಾನಿ, ಶೂರ ಜನರಿಂದ ಎದುರಾದ ತಡೆ. ಪರಸ್ಪರ ಕಚ್ಚಾಡುತ್ತಿದ್ದರೂ ಸ್ವಧರ್ಮ ರಕ್ಷಣೆಗಾಗಿ ಅವೆರಡೂ ರಾಜ್ಯಗಳ ನಡುವೆ ಒಂದು ಸಾವಿರ ವೈವಾಹಿಕ ಸಂಬಂಧಗಳು ಏರ್ಪಟ್ಟವಂತೆ. ಇವೆಲ್ಲಾ ನೆಹರೂರ ಡಿಸ್ಕವರಿ ಆಫ್ ಇಂಡಿಯಾ ಪುಸ್ತಕದಲ್ಲಿ ಉಲ್ಲೇಖವಾಗಲಾರದು ಬಿಡಿ. ಆದರೆ ಅಲೆಕ್ಸಾಂಡರನ ನಿರ್ಣಾಯಕ ಕದನವನ್ನೇ ಏಕೆ ಮುಚ್ಚಿಡಲಾಯಿತು? ಗ್ರೀಕಿನ ತನ್ನ ಅರಮನೆಯಲ್ಲಿ ಅವನ ಮರಣವನ್ನು ಉಲ್ಲೇಖಿಸಿ ಸ್ವದೇಶಿ ವೀರರನ್ನು ಅಪಮಾನಿಸುವ ಕೃತ್ಯವೂ ಭಾರತೀಯ ಇತಿಹಾಸಕಾರರಿಂದಲೇ ನಡೆಯಿತೇಕೆ ?
ಏಕೆಂದರೆ ಅಲೆಕ್ಸಾಂಡರ್ ಮತ್ತು ಮಾಳವ-ಕ್ಷುದ್ರಕ ರಾಜ್ಯಗಳ ಸಂಯುಕ್ತ ಸೇನೆಗಳ ಯುದ್ಧವೇ ಅಲೆಕ್ಸಾಂಡರನ ನಿರ್ಣಾಯಕ ಕದನವಾಯಿತು. ಆ ಯುದ್ಧದಲ್ಲಿ ಓರ್ವ ಸಾಮಾನ್ಯ ಭಾರತೀಯನ ವಿಷಪೂರಿತ ಭಾಣವೊಂದಕ್ಕೆ ಅಲೆಕ್ಸಾಂಡರ್ ಗಂಭೀರ ಗಾಯಗೊಂಡ . ಸೇನೆ ಹಿಮ್ಮೆಟ್ಟಿತು. ಗ್ರೀಕಿಗೆ ಸಾಗುವ ದಾರಿಯಲ್ಲೇ ಅಲೆಗ್ಸಾಂಡರ ಸತ್ತ. ಈ ಪ್ರಸಂಗವನ್ನು ಸಾವರ್ಕರರು “ಆ ಸೈನಿಕನ ಬಾಣವನ್ನು ಶರವೆನ್ನೋಣವೇ ಅಥವಾ ಸ್ವಾಭಿಮಾನದ ಸಂಶೋಧನೆಯ ಮೂರ್ತ ಸ್ವರೂಪವೆನ್ನೋಣವೇ" ಎಂದು ಪ್ರಶ್ನಿಸುತ್ತಾರೆ.
ವಿಶ್ವ ಗೆಲ್ಲಲು ಬಂದ ಗ್ರೀಕನೊಬ್ಬ ಭಾರತದಲ್ಲಿ ಹೀನಾಯವಾಗಿ ಸೋತು, ದಾರಿಮಧ್ಯದಲ್ಲಿ ಸತ್ತ ಈ ಘಟನೆ ಭಾರತೀಯ ಇತಿಹಾಸದ ಸುವರ್ಣ ಅಧ್ಯಾಯವಲ್ಲದೆ ಮತ್ತೇನು ?
ಅಕಡಾಮಿಕ್ ಆಗಿ ಕಲಿತ ಇತಿಹಾಸಕಾರರಿಗೇಕೆ ಇದು ತಿಳಿಯುತ್ತಿಲ್ಲ? ಒಂದು ವೇಳೆ ಅವರೆಂದಂತೆ ಅಲೆಕ್ಸಾಂಡರ್ ಭಾರತವನ್ನು ಸೋಲಿಸುತ್ತಾ ಸಾಗಿದನೆಂದರೆ ಆತನ ವಿಜಯದ ಪ್ರತೀಕವಾದ ಅಲೆಗ್ಸಾಂಡ್ರಿಯಾ ಭಾರತದಲ್ಲೂ ಇರಬೇಕಿತ್ತಲ್ಲವೇ ? ವಿಶ್ವದ ಎಲ್ಲೆಡೆಯೂ ಕೇಳಿ ಬರುತ್ತಿರುವ Alexander the greatಹೇಳಿಕೆ ನಮಗಾರಿಗೂ ಪರಿಚಿತವಲ್ಲದ ವಾಕ್ಯವಾಗಿದೆಯೇಕೆ?
ಏನೇನು ಮಾಡಿಬಿಟ್ಟರು ನಮ್ಮ ಇತಿಹಾಸಕಾರರು .

No comments: