ಹೊರರಾಜ್ಯಗಳಲ್ಲಿ ಅದು ದೊಡ್ಡ ಸುದ್ಧಿಯಾಗದಿದ್ದರೂ ಕೂಡ ಅದು ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ಮರೆಯಲಾಗದ ದಿನವೆಂಬುದಂತೂ ಸತ್ಯ. ಫೆಬ್ರವರಿ ೨ನೇ ತಾರೀಖಿನಂದು ಭಾರತದ ಪ್ರಮುಖ ದಿನಪತ್ರಿಕೆಗಳಲ್ಲೊಂದಾದ ಟೈಮ್ಸ್ ಆಫ್ ಇಂಡಿಯಾ ಕೇರಳವನ್ನು ಪ್ರವೇಶಿಸಿತ್ತು. ಅದೂ ಬರೋಬ್ಬರಿ ಒಂಭತ್ತು ಆವೃತ್ತಿಗಳೊಂದಿಗೆ. ಒಂದು ಪತ್ರಿಕೆ ಹಲವು ಆವೃತ್ತಿಗಳನ್ನು ಆರಂಭಿಸುವುದು ಪ್ರಮುಖ ವಿಷಯವಾಗಿಲ್ಲದೇ ಇರಬಹುದು. ಆದರೆ ಕೇರಳದಂಥಾ ಪುಟ್ಟದಾದ, ಮಲಯಾಳಿ ಭಾಷಿಗರ ರಾಜ್ಯದಲ್ಲಿ ಭ್ರಹತ್ ಪ್ರಮಾಣದಲ್ಲಿ ಪ್ರವೇಶಿಸಿದೆ ಎಂದಾಗ ಅಚ್ಚರಿಯಾಗದೇ ಇರದು. ಹಾಗಾಗಿ ಇಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕಿಂತಲೂ ಕೇರಳ ಮುಖ್ಯವಾಗಿ , ಕೇರಳವೇ ಗಮನಿಸಬೇಕಾದ ಸಂಗತಿಯಾಗಿ ಕಾಣುತ್ತದೆ.
ಟೈಮ್ಸ್ ಆಫ್ ಇಂಡಿಯಾ ಆವೃತ್ತಿ ಆರಂಭಿಸಿದ್ದು ಕೇರಳದ ಪ್ರಮುಖ ದಿನಪತ್ರಿಕೆಯಾದ ಮಾತೃಭೂಮಿಯ ಸಹಯೋಗದೊಂದಿಗೆ. ಮಾತೃಭೂಮಿಯಾದರೋ ಸಮಾನತೆ, ಸಮಾಜವಾದ ಎಂದೆಲ್ಲಾ ಪ್ರತಿಪಾದಿಸುತ್ತಾ ಬಂದ ಪುರಾತನ ಪತ್ರಿಕೆ. ಟೈಮ್ಸ್ ಆಫ್ ಇಂಡಿಯಾ ಬಂಡವಾಳಶಾಹಿ ಮತ್ತು ವ್ಯಾಪಾರಿ ಬುದ್ಧಿಯ ಯಶಸ್ವೀ ಪತ್ರಿಕೆ. ಇವೆರಡನ್ನೂ ತುಲನೆ ಮಾಡಿದರೆ ಎರಡೂ ಭಿನ್ನ ಕೋನದ, ಭಿನ್ನ ಭಾವದವುಗಳು. ತತ್ತ್ವ ಸಿದ್ಧಾಂತದ ವಿಷಯದಲ್ಲಿ ಇವು ಒಂದು ಬೆಟ್ಟದ ನೆಲ್ಲಿಕಾಯಿಯಾದರೆ ಇನ್ನೊಂದು ಸಮುದ್ರದ ಉಪ್ಪು. ಆದರೂ ಟೈಮ್ಸ್ ಆಫ್ ಇಂಡಿಯಾ ಕೇರಳಕ್ಕೆ ಕಾಲಿಡಲು ಮಾತೃಭೂಮಿ ಕೈಜೋಡಿಸಿತು. ಎಲ್ಲಾ ಒಂಭತ್ತು ಆವೃತ್ತಿಗಳನ್ನು ತನ್ನ ಮುದ್ರಣಾಲಯದಲ್ಲೇ ಅಚ್ಚುಹಾಕಲು ಒಪ್ಪಿಕೊಂಡಿತು. ವೊದಲ ಮೂರು ತಿಂಗಳು ಮಾತೃಭೂಮಿಯ ಓದುಗರಿಗೆ ಟೈಮ್ಸ್ ಆಫ್ ಇಂಡಿಯಾ ಉಚಿತವೆಂದು ಘೋಷಿಸಿತು. ಇನ್ನೂ ವಿಶೇಷವೆಂದರೆ ಟೈಮ್ಸ್ ಆಫ್ ಇಂಡಿಯಾವನ್ನು ರಾಜ್ಯಾದ್ಯಂತ ಹಂಚುವ ಹೊಣೆಯನ್ನೂ ಮಾತೃಭೂಮಿ ಹೊತ್ತುಕೊಂಡಿತು. ಇದೆಲ್ಲಾ ಹೊರನೋಟಕ್ಕೆ ವ್ಯಾಪಾರಿ ಬುದ್ದಿಯೆಂದು ಹೇಳಬಹುದು. ಆದರೆ ಟೈಮ್ಸ್ ಆಫ್ ಇಂಡಿಯಾ ಕೇರಳಕ್ಕೆ ವಿಶಾಲ ಪ್ರಮಾಣದಲ್ಲಿ ಕಾಲಿಟ್ಟ ಉದ್ದೇಶವೇನು? ಹೇಳಿ ಕೇಳಿ ಅದು ಜಾಹೀರಾತು ಪ್ರಧಾನವಾದ ಪತ್ರಿಕೆ. ಕೇರಳದಲ್ಲಿ ಅಂಥಾ ಜಾಹೀರಾತು ನೀಡಬಲ್ಲ ಉದ್ಯಮಗಳೂ ಇಲ್ಲ. ಇದ್ದರೂ ಅವು ಕೊಡುವಂಥಾ ಜಾಯಮಾನದವೂ ಅಲ್ಲ. ತನ್ನ ಪೇಯ್ಡ್ ನ್ಯೂಸುಗಳು, ರಂಗುರಂಗಿನ ಸುದ್ಧಿಗಳಿಂದ ಓದುಗರನ್ನು ಸೆಳೆಯುವ ತಂತ್ರಗಾರಿಕೆಯನ್ನೇ ಮಾಡುವ ಪತ್ರಿಕೆ ಇದೆಲ್ಲಾ ಸತಾಯಗತಾಯ ನಡೆಯದ ಕೇರಳದಲ್ಲಿ ಏಕಾಏಕಿ ಒಂಭತ್ತು ಆವೃತ್ತಿಗಳನ್ನು ಆರಂಭಿಸುವುದೆಂದರೇನು? ಜಾಹೀರಾತನ್ನೇ ಕಾಲಕಸದಂತೆ ಕಾಣುವ ಕೇರಳ ಪತ್ರಿಕೋದ್ಯಮದ ನಡುವೆಯೂ ಇದೇನಿದು ಟೈಮ್ಸ್ ಆಫ್ ಇಂಡಿಯಾದ ಕರಾಮತ್ತು ಎಂದು ಚಿಂತಿಸಿದರೆ ಅದು ಮುಟ್ಟುವುದು ಕೇರಳವೆಂದರೆ ಹಾಗೆಯೇ ಎಂಬಲ್ಲಿಯವರೆಗೆ.
ಬೇರೆಡೆ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಆಧಾರಸ್ತಂಭ, ಕಾವಲುನಾಯಿ ಎಂಬುದು ಹೌದೇ ಎಂಬುದೆಲ್ಲಾ ಗೊತ್ತಿಲ್ಲ. ಗೊತ್ತು ಮಾಡಿಕೊಳ್ಳಲು ಹೊರಡುವುದು ತಲೆ ಕೆಡಿಸಿಕೊಳ್ಳುವ, ಭ್ರಮನಿರಸನ ಮಾಡಿಕೊಳ್ಳುವ ವಹಿವಾಟುಗಳೆಂಬುದೂ ಸರಿಯೇ. ಆದರೆ ಕೇರಳದಲ್ಲಿ ಮಾತ್ರ ಪತ್ರಿಕೋದ್ಯಮವೆಂದರೆ ಸಮಾಜದ ಆಧಾರಸ್ತಂಭವೇ. ಲವಲವಿಕೆಯ , ತೀಕ್ಷ್ಣ ಕಾವಲು ನಾಯಿಗಳೇ. ಅಥವಾ ಅದಕ್ಕಿಂತ ಒಂದು ಹೆಜ್ಜೆ ಮುಂದೆಯೇ. ಪತ್ರಿಕೆಗಳೆಂದರೆ ಅಲ್ಲಿ ಕೇವಲ ಕಾಗದದ ಹಾಳೆಗಳಲ್ಲ. ಅದು ಸಮಾಜ ರೂಪಿಸುವ ಭ್ರಹತ್ ಜಗತ್ತುಗಳು. ಚಿಂತನೆಗೆ ಸಾಣೆ ಹಿಡಿಯುವ ಸರಕುಗಳು. ಪತ್ರಿಕೆಗಳಿಲ್ಲದೆ ಮಲಯಾಳಿಗಳ ವ್ಯಾಖ್ಯಾನ ಸಾಧ್ಯವಿಲ್ಲ. ಮಲಯಾಳಿಗಳನ್ನು ವಿವರಿಸುವಾಗ ಪತ್ರಿಕೆಗಳನ್ನು ಮಧ್ಯ ತರದಿರಲು ಸಾಧ್ಯವೇ ಇಲ್ಲ. ಆಧುನಿಕ ಯುಗದಲ್ಲಿ ಕೇರಳವನ್ನು ರೂಪಿಸಿದ್ದೇ ಪತ್ರಿಕೆಗಳು. ಮಲಯಾಳಿಗಳ ದುಡಿಮೆಗೆ, ಅವರ ಶ್ರಮಕ್ಕೆ, ಸೌಜನ್ಯಕ್ಕೆ, ಕಠೋರವಾದ ಸಿದ್ಧಾಂತನಿಷ್ಠೆಗೆ, ಅದರ ಬಗೆಗಿನ ಬದ್ದತೆಗೆ, ಹೋರಾಟದ ಬದುಕಿಗೆ ದಿಕ್ಕುಕೊಟ್ಟಿದ್ದೇ ಪತ್ರಿಕೆಗಳು. ಕೇರಳದ ಜನ ಪತ್ರಿಕೆಯನ್ನು ಕೇವಲ ಕೊಂಡು ಓದಲಿಲ್ಲ. ಅದನ್ನು ಮನದಲ್ಲಿ ಪ್ರತಿಷ್ಠಾಪಿಸಿಯೇಬಿಟ್ಟರು. ಹಾಗಾಗಿ ಇಂದಿಗೂ ಕೇರಳದ ಜನಜೀವನವನ್ನು ರೂಪಿಸುವಲ್ಲಿ ಪತ್ರಿಕೆಗಳದ್ದು ಅತ್ಯಂತ ಪ್ರಮುಖ ಪಾತ್ರ. ಓದುಗರೇ ತಮ್ಮ ಜೀವಾಳ ಎಂಬುದು ಅಲ್ಲಿನ ಪತ್ರಿಕೆಗಳಿಗೂ ಅರಿವಾಗಿವೆ. ಆದ್ದರಿಂದ ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆ ಏಕಕಾಲಕ್ಕೆ ಒಂಭತ್ತು ಆವೃತ್ತಿಗಳನ್ನು ಆರಂಭಿಸುತ್ತದೆ. ಮಾತೃಭೂಮಿಯಂಥ ಪತ್ರಿಕೆ ಅದಕ್ಕೆ ಕೈಜೋಡಿಸುತ್ತದೆ. ಜನ್ಮಭೂಮಿಯಂಥ ತಪಸ್ವೀ ಪತ್ರಿಕೆ ಕೂಡಾ ಟೈಮ್ಸ್ ಆಫ್ ಇಂಡಿಯಾವನ್ನು ಸ್ವಾಗತಿಸುತ್ತಾ "ಮಂಗಳಂ ನೇರುನ್ನು"( ಕೇರಳಕ್ಕೆ ಸ್ವಾಗತ) ಎಂದು ಸಂಪಾದಕೀಯವನ್ನು ಬರೆಯುತ್ತದೆ. ಬರುತ್ತಿರುವ ಹೊಸ ಪತ್ರಿಕೆ ತನ್ನ ಅಸ್ತಿತ್ವಕ್ಕೆ ಸಂಚಕಾರ ಎಂದು ಕೇರಳದ ಯಾವ ಪತ್ರಿಕೆಯೂ ಬಗೆಯಲಿಲ್ಲ. ಪರಸ್ಪರ ಕೆಸರೆರಚಾಡಿಕೊಳ್ಳಲಿಲ್ಲ. ಇದು ಕೇರಳದ ಪತ್ರಿಕೋದ್ಯಮದ ವಿಶೇಷತೆ. ಜನರನ್ನು ರೂಪಿಸಲು ತೊಡಗುವ ಪತ್ರಿಕೆಗಳು ವೊದಲು ತಾನು ಆದರ್ಶಮಯವಾಗಿರಬೇಕು ಎಂಬಂತೆ ಕೇರಳದ ಪತ್ರಿಕೆಗಳು ನಡೆದುಕೊಳ್ಳುತ್ತವೆ. ಕೇರಳೇತರರಿಗೆ ಇದೆಲ್ಲಾ ಒಂದು ಬಿಡಿಸಲಾಗದ ಒಗಟಿನಂತೆ ಭಾಸವಾಗುತ್ತದೆ.
ಕೇರಳವೆಂದರೆ ಹಾಗೆಯೇ. ತತ್ತ್ವ ಸಿದ್ಧಾಂತಗಳಲ್ಲಿ ಎಷ್ಟೇ ಕಠೋರತೆಗಳಿರಲಿ ಪತ್ರಿಕೋದ್ಯಮವೆಂದಾಗ ಎಲ್ಲರೂ ಒಂದಾಗುವುದು ಅಲ್ಲಿನ ಗುಣ. ಪತ್ರಿಕೆಗಳ ನಡುವೆ ತೀವ್ರ ಪೈಪೋಟಿಯಿದ್ದರೂ ತನ್ನ ಓದುಗರು ತನಗಿದ್ದೇ ಇದ್ದಾರೆ ಎನ್ನುವ ಕಾರ್ಯವೂ ಇರುವುದು ಕೇರಳದ ವಿಶೇಷ. ಅಲ್ಲಿನ ಒಂದೊಂದು ಪತ್ರಿಕೆಗಳದ್ದೂ ಒಂದೊಂದು ರೋಚಕ ಇತಿಹಾಸ. ಸಮಾಜ ಪರಿವರ್ತನೆಯ ಕಾರ್ಯಗಳಲ್ಲಿ ಅವುಗಳ ಕಾರ್ಯ ಸುದೀರ್ಘ. ಪತ್ರಿಕೆಗಳು ಏನೆಲ್ಲಾ ಮಾಡಬಹುದೋ ಅವೆಲ್ಲವನ್ನೂ ಅಲ್ಲಿನ ಪತ್ರಿಕೆಗಳು ಮಾಡುತ್ತಿವೆ. ಕೇರಳದ ಪ್ರಮುಖ ಸಾಮಾಜಿಕ ಚಳವಳಿಗಳೆಂದು ಇಂದಿಗೂ ನೆನಪಿಸಿಕೊಳ್ಳುವ ವೈಕುಮ್ ಸತ್ಯಾಗ್ರಹ ಮತ್ತು ಗುರುವಾಯೂರು ಸತ್ಯಾಗ್ರಹಗಳು ನಡೆದಿದ್ದು ಪತ್ರಿಕೆಗಳ ಮೂಲಕವೇ. ಹೇಗೆ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾ ಸಂಪಾದಕರು ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಜೈಲು ಸೇರಿದರೋ ಹಾಗೆಯೇ ಸ್ವಾತಂತ್ರ್ಯಾನಂತರದಲ್ಲೂ ಭಾಗವಹಿಸಿ ಜೈಲು ಸೇರಿದ ಹಲವು ಪತ್ರಿಕಾ ಸಂಪಾದಕರನ್ನು ಕೇರಳದಲ್ಲಿ ನೋಡಬಹುದು. ಕೇರಳದಲ್ಲಿ ಇಂದು ಅಸ್ಪೃಶ್ಯತೆ ತೊಲಗಿರುವುದಕ್ಕೆ, ದಲಿತರು ದೇವಾಲಯ ಪ್ರವೇಶಿಸಿರುವುದಕ್ಕೆ ಕಾರಣ ಪತ್ರಿಕೆಗಳು. ಜನರನ್ನು ವೈಚಾರಿಕವಾಗಿ ಜಾಗೃತರನ್ನಾಗಿಸಿದ್ದು ಪತ್ರಿಕೆಗಳು.
ಕೇರಳವನ್ನು ಬಹುಕೋನದಿಂದ ವ್ಯಾಖ್ಯಾನಿಸಬಹುದು. ಒಂದೆಡೆ ಅದು ದೇವರ ನಾಡು. ಪರಮ ಆಸ್ತಿಕರೂ ಹೇರಳ ದೇವಸ್ಥಾನಗಳೂ ಇರುವಂತೆಯೇ ಕೇರಳದಲ್ಲಿ ನಾಸ್ತ್ತಿಕರ ಪ್ರಮಾಣವೂ ಹೆಚ್ಚಿದೆ. ಈ ಮನೋಧರ್ಮವನ್ನು ಉಂಟುಮಾಡಿದ್ದು ಪತ್ರಿಕೆಗಳೆಂಬುದರಲ್ಲಿ ಸಂದೇಹವೇ ಇಲ್ಲ. ಹಾಗೆಯೇ ರಾಷ್ಟ್ರೀಯವಾದಿಗಳ ಪ್ರಮಾಣ ಹೆಚ್ಚಿರುವಂತೆಯೇ ಮಾರ್ಕ್ಸ್‌ವಾದಿಗಳ ಪ್ರಮಾಣವೂ ಕೇರಳದಲ್ಲಿ ವಿಪರೀತವಿದೆ. ಈ ಭಾವನೆಯನ್ನು ಉಂಟುಮಾಡುವಲ್ಲೂ ಪತ್ರಿಕೆಗಳ ಪಾತ್ರ ಇಲ್ಲದೇ ಇಲ್ಲ. ಆಯಾಯ ವಿಚಾರಧಾರೆಯನ್ನು ಸದಾ ಜೀವಂತವಿರಿಸುತ್ತಾ ಬರುತ್ತಿರುವುದು ಕೇರಳದ ಪತ್ರಿಕೆಗಳ ಲಕ್ಷಣ. ಜನರೂ ತಮ್ಮ ವಿಚಾರಧಾರೆಗಳಿಗೆ ಪತ್ರಿಕೆಗಳ ವೊರೆ ಹೋಗುವುದು ಇನ್ನೂ ವಿಶೇಷ. ಈ ಎಲ್ಲಾ ಕಾರಣಗಳಿಂದ ಕೇರಳದಲ್ಲಿ ಪತ್ರಿಕೆಗಳು ಜನರಲ್ಲಿ ಓದುವ ಅಭಿರುಚಿಯನ್ನು ಹೆಚ್ಚಿಸಿವೆ ಎನ್ನುವುದಕ್ಕಿಂತಲೂ ಪ್ರಬುದ್ದ ಓದುಗರನ್ನು ಸೃಷ್ಟಿಸಿದೆ ಎನ್ನುವುದೇ ಸಮಂಜಸ.
ಕೆಲ ತಿಂಗಳ ಹಿಂದೆ ಇಂಡಿಯಾ ಟುಡೇ ಸಮೀಕ್ಷೆಯೊಂದನ್ನು ನಡೆಸಿತ್ತು. ಭಾರತದ ಟಾಪ್ ಹತ್ತು ಪತ್ರಿಕೆ ಓದುವ ನಗರಗಳಾವುವು ಎಂಬುದನ್ನು ಹುಡುಕುತ್ತಾ ಸಾಗಿತ್ತು. ಅದುವರೆಗೆ ಮುಂಬೈ, ದೆಹಲಿ, ಚೆನ್ನೈ ವೊದಲಾದ ಮಹಾನಗರಗಳೇ ಪತ್ರಿಕೋದ್ಯಮದ ಆಯಕಟ್ಟಿನ ಪ್ರದೇಶಗಳು ಎಂದು ತಿಳಿದಿದ್ದವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಭಾರತದ ಟಾಪ್ ೧೦ ಪತ್ರಿಕೆ ಓದುವ ನಗರಗಳೆಲ್ಲವೂ ಕೇರಳ ರಾಜ್ಯದವಾಗಿದ್ದವು. ಕಣ್ಣೂರು, ಚೆಂಗನಚೇರಿಯಂಥಾ ಮೂಲೆಯ ನಗರಗಳೂ ಆ ಪಟ್ಟಿಯಲ್ಲಿದ್ದವು. ಆ ಎಲ್ಲಾ ನಗರಗಳಲ್ಲಿ ಪ್ರತೀ ೧೦೦೦ ಜನರಲ್ಲಿ ಸರಾಸರಿ ೯೦೦ ಜನರು ಪತ್ರಿಕೆ ಓದುವವರಾಗಿದ್ದರು. ಕೇವಲ ಎರಡೂವರೆ ಕೋಟಿ ಜನಸಂಖ್ಯೆಯಿರುವ ಕೇರಳದಲ್ಲಿ ೨೮ ಕೋಟಿ ಹಿಂದಿ ಮಾತಾಡುವ ಜನಸಂಖ್ಯೆಗಿಂತಲೂ ೬ ಕೋಟಿ ತಮಿಳು ಮತ್ತು ಬಂಗಾಳಿ ಮಾತಾಡುವ ಜನರ ಸಂಖ್ಯೆಗಿಂತಲೂ ಹೆಚ್ಚಿನ ಓದುಗರಿದ್ದಾರೆ ಎಂಬುದು ವಿಚಿತ್ರವಾದರೂ ಸತ್ಯದ ಸಂಗತಿ. ಹಾಗಾಗಿ ಕೇರಳದಲ್ಲಿ ಕಾಲಿಟ್ಟ ಯಾವ ಪತ್ರಿಕೆಯೂ ಸೋಲುವುದಿಲ್ಲ. ಜಾಹೀರಾತಿನ ಹಿಂದೋಡದ, ಅದರ ಹಂಗಿಲ್ಲದ ಪತ್ರಿಕೆಗಳೂ ಇಲ್ಲಿ ಹಲವು ಆವೃತ್ತಿಗಳೊಂದಿಗೆ ಲಕ್ಷಗಟ್ಟಲೆ ಪ್ರಸರಣದಿಂದ ನಡೆಯುತ್ತವೆ. ಜಿಲ್ಲಾ ಕೇಂದ್ರದಿಂದ ನಡೆಯುವ ಹಲವು ಪತ್ರಿಕೆಗಳೂ ಕೂಡ ಇಲ್ಲಿ ಲಕ್ಷಕ್ಕಿಂತ ಹೆಚ್ಚಿನ ಪ್ರಸರಣದಿಂದ ಬದುಕುತ್ತವೆ. ಕೇರಳದಲ್ಲಿ ೧೬ ಲಕ್ಷ ಪ್ರಸರಣದ ಮಲಯಾಳ ಮನೋರಮಾವೂ ೧೨ ಲಕ್ಷ ಪ್ರಸರಣದ ಮಾತೃಭೂಮಿಯೂ ಮತ್ತು ೪.೫ ಲಕ್ಷ ಪ್ರಸರಣದ ದೇಶಾಭಿಮಾನಿಯಷ್ಟೆ ಸುಮಾರು ಎರಡು ಲಕ್ಷ ಪ್ರಸರಣದ ಜನ್ಮಭೂಮಿಯೂ ಪ್ರಬಲ ಪತ್ರಿಕೆಯಾಗಿ ನಿಂತಿವೆ. ಇಲ್ಲಿ ಪ್ರಸರಣ ಸಖ್ಯೆಯಾಧಾರದಲ್ಲಿ ಪತ್ರಿಕೆಗಳು ಎಂದೂ ಮೇಲು ಕೀಳು ಭಾವನೆಯನ್ನು ಅನುಭವಿಸುವುದಿಲ್ಲ. ತಮ್ಮ ಕಾಳಜಿ, ನಿಷ್ಠೆ, ಸಾಮಾಜಿಕ ಬದ್ದತೆಗಳಿಂದ ಜನರು ಪತ್ರಿಕೆಗಳನ್ನು ಅಳೆಯುತ್ತಾರೆ. ಈ ಕಾರಣದಿಂದ ಕೇರಳದಲ್ಲಿಂದು ಒಟ್ಟು ೧೧೪೦ ಮಲಯಾಳಂ ಪತ್ರಿಕೆಗಳಿವೆ. ಒಟ್ಟು ೭೬,೬೦,೦೦೦ ಓದುಗರಿದ್ದಾರೆ. ಲಾರಿಗೆ ಲೋಡ್ ಮಾಡುವ ಕೂಲಿಯಾಳು ಕೂಡ ಕನಿಷ್ಠ ಎರಡು ಪತ್ರಿಕೆಗಳನ್ನು ಕೊಂಡು ಓದುತ್ತಾನೆ. ಅಷ್ಟಕ್ಕೂ ಇದಕ್ಕೆಲ್ಲಾ ಮಲಯಾಳ ಭಾಷಾಭಿಮಾನದ ಕಾರಣ ಎನ್ನುವಂತೆಯೂ ಇಲ್ಲ. ಇಲ್ಲಿನ ಆಂಗ್ಲ ಮತ್ತು ತಮಿಳು ಪತ್ರಿಕೆಗಳೂ ಕೂಡ ಜನರ ಮಾನಸವನ್ನು ನಿರ್ಧರಿಸುವ ಶಕ್ತಿ ಹೊಂದಿರುವಂಥವುಗಳೇ. ಅಲ್ಲದೆ ಪಯೋನಿಯರ್ ಪತ್ರಿಕೆ ವೊಟ್ಟಮೊದಲು ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಕೊಚ್ಚಿನ್ ನಿಂದ. ವೀಕ್‌ನಂಥ ಪತ್ರಿಕೆಗಳನ್ನು ಹೊರಡಿಸುತ್ತಿರುವುದೇ ಮಲಯಾಳಿಗಳು ಎನ್ನುವುದು ಅವರ ಗಟ್ಟಿಗತನಕ್ಕೆ ಸಾಕ್ಷಿ. ಇವನ್ನೆಲ್ಲಾ ನೋಡಿದರೆ ಕೇರಳ ಪತ್ರಿಕೋದ್ಯಮದ ಕಾಶಿಯೇ ಹೌದೆಂದು ಎನಿಸುತ್ತದೆ. ಕೇವಲ ಮಾಧ್ಯಮ ಸಾಕ್ಷರತೆಗೆ ಮಾತ್ರವಲ್ಲದೆ ಪತ್ರಿಕೆ ಕಟ್ಟವುದರಲ್ಲೂ ಕೇರಳಿಗರು ದೇಶದಲ್ಲೇ ಮುಂಚೂಣಿಯಲ್ಲಿರುವವರು. ಇಲ್ಲಿ ಮಠವೊಂದು ಕೂಡ ಪತ್ರಿಕೆಯನ್ನು ಆರಂಭಿಸಬಹುದು ಮತ್ತು ಅದು ೫೦ ಸಾವಿರಕ್ಕಿಂತ ಹೆಚ್ಚಿನ ಪ್ರಸರಣವನ್ನು ಹೊಂದಬಹುದು ಎಂಬುದನ್ನು ಸಾಸಿ ತೋರಿಸಿಕೊಟ್ಟ ಉದಾಹರಣೆಯಿದೆ. ಒಂದೇ ಪತ್ರಿಕೆಯಲ್ಲಿ ಎರಡು ಭಾಷೆಗಳಲ್ಲಿ ಸುದ್ಧಿಗಳನ್ನು ಹೊರಡಿಸಬಹುದು ಮತ್ತು ಅದನ್ನೂ ಜನರು ಓದಬಲ್ಲರು ಎಂಬುದನ್ನೂ ತೋರಿಸಿಕೊಟ್ಟವರು ಕೇರಳಿಗರು.
ಸುಮಾರು ಏಳು ವರ್ಷಗಳ ಹಿಂದೆ ಕೇರಳದಲ್ಲಿ ಕೊಕಾಕೋಲಾ ಪಾನೀಯ ಉತ್ಪಾದನಾ ಸ್ಥಾವರವೊಂದು ಆರಂಭವಾಗಿತ್ತು. ಕೆಲವೇ ತಿಂಗಳುಗಳಲ್ಲಿ ಅದನ್ನು ಎತ್ತಂಗಡಿ ಮಾಡಲಾಗಿತ್ತು. ಅದಕ್ಕೆ ಭಾರೀ ಜನಾಂದೋಲನವೇನೂ ನಡೆದಿರಲಿಲ್ಲ. ಅದರ ಹಿಂದೆ ಬಿದ್ದ ಪತ್ರಿಕೆಗಳು ಅದನ್ನು ಹೊರದಬ್ಬಲು ಇನ್ನಿಲ್ಲದಂತೆ ಕಾಡಿದವು. ಕೊಕಾಕೋಲಾ ಹಲವು ಪತ್ರಿಕೆಗಳಿಗೆ ಆಮಿಷದ ಬಲೆಯನ್ನು ಬೀಸಿತು. ಅವೆಲ್ಲವನ್ನೂ ಮೀರಿನಿಂತ ಪತ್ರಿಕೆಗಳು ಇನ್ನೆಂದೂ ಕೇರಳದಲ್ಲಿ ಕೊಕಾಕೋಲಾಕ್ಕೆ ಜಾಗವಿಲ್ಲ ಎನ್ನುವಂತೆ ಓಡಿಸಿದವು. ಕೇರಳಕ್ಕೆ ದಕ್ಷಿಣ ರೈಲ್ವೆಯ ಕೇಂದ್ರ ಸ್ಥಾನ ಸಿಗಲು, ಪ್ರವಾಸೋದ್ಯಮವನ್ನು ಬೆಳೆಸಲು, ಕಡಲು ಅಭಿವೃದ್ಧಿಯಾಗಲು, ವಿಮಾನ ನಿಲ್ದಾಣ ಬರಲು, ಬಹುರಾಷ್ಟ್ರೀಯ ಕಂಪೆನಿಗಳು ಬರದಿರಲು, ನೌಕರರ ಹಿತರಕ್ಷಣೆಯನ್ನು ಕಾಪಾಡಲು ಕ್ರಾಂತಿಯನ್ನು ಮಾಡಿದವರು ಪತ್ರಿಕೆಗಳು. ಇಂದಿಗೂ ಕೇರಳದ ಬಹುತೇಕ ಪತ್ರಿಕೆಗಳು ಬಹುರಾಷ್ಟ್ರೀಯ ಕಂಪೆನಿಗಳ ಜಾಹೀರಾತನ್ನು ಪ್ರಕಟಿಸುವುದಿಲ್ಲ. ಇನ್ನು ಕೆಲವಂತೂ ಜಾಹೀರಾತುದಾರರು ಎಷ್ಟೇ ಮೊತ್ತ ಪಾವತಿಸಿದರೂ ಬೊಕ್ಕತಲೆಯಲ್ಲಿ ಕೂದಲು ಕೊನರಲಿದೆ, ಲೈಂಗಿಕತೆ ಉದ್ದೀಪಕವಾಗಲಿದೆ , ಚಿಟ್ ಫಂಡ್‌ಗಳಿಗೆ ಹಣ ಹೂಡಿರಿ ಎಂಬಂಥ ಜಾಹೀರಾತನ್ನು ಹಾಕಲಾರರು. ಆದರೆ ಮಾನಯ ನೆಲೆಯಲ್ಲಿ ಜಾಹೀರಾತುಗಳನ್ನು ಹಾಕಲು ಹಣದ ಮುಖವನ್ನೂ ನೋಡಲಾರರು. ಇವೆಲ್ಲಾ ಪೇಯ್ಡ್ ನ್ಯೂಸ್‌ಗಳ ಕಾಲದಲ್ಲಿ ಇನ್ನೂ ಅಸ್ತ್ತಿತ್ವದಲ್ಲಿದೆಯೇ ಎಂಬ ಚೋದ್ಯ ಕಾಡುತ್ತದೆ. ಆದರೆ ವಾಸ್ತವ ಸತ್ಯವನ್ನು ಪುಷ್ಟೀಕರಿಸುತ್ತದೆ. ಒಂದು ಪುರಾತನ ಪತ್ರಿಕೆಯಂತೂ ತನಗೆ ಲಕ್ಷಗಟ್ಟಲೆ ಪ್ರಸರಣವಿದ್ದರೂ ಇನ್ನೂ ಓಬಿಸಿ ಮಾನ್ಯತೆಗೆ ಅರ್ಜಿ ಸಲ್ಲಿಸುವ ಮನಸು ಮಾಡಿಲ್ಲ. ಓಬಿಸಿ ಪಟ್ಟಿಯಿಂದ ಸರಕಾರಿ ಜಾಹೀರಾತುಗಳ ಹಂಗಿಗೆ ಒಳಪಡಬಾರದೆಂಬ ನಿಷ್ಠುರತೆಯನ್ನು ಅದು ಇಂದಿಗೂ ಪಾಲಿಸಿಕೊಂಡು ಬಂದಿದೆ. ಜನಪ್ರಿಯ ದೈನಿಕ ಜನ್ಮಭೂಮಿಯ ಗಾಥೆಯಂತೂ ಇನ್ನೂ ರೋಚಕ. ಕರ್ಮಠ ಕಮ್ಯುನಿಷ್ಟರ, ಮತಾಂಧ ಶಕ್ತಿಗಳ ಅಬ್ಬರದ ನಡುವೆಯೂ ಪ್ರಬಲವಾಗಿ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಾ ಬರುತ್ತಿದೆ. ಈ ಪತ್ರಿಕೆಯ ಪ್ರಸರಣಕ್ಕೆ ರಾ.ಸ್ವ.ಸಂಘದ ಸ್ವಯಂಸೇವಕರೇ ಪ್ರಸರಣ ಜಾಲ. ಶಾಖಾ ಕೇಂದ್ರಗಳೇ ಪತ್ರಿಕಾ ಬಂಡಲ್‌ಗಳು ಬಂದು ಬೀಳುವ ತಾಣಗಳು. ಇದನ್ನು ಕೇವಲ ಮಾಧ್ಯಮ ಸಾಕ್ಷರತೆ ಎನ್ನಲಾಗುವುದೇ? ಕೇರಳದ ಊರೂರಲ್ಲಿ ಇಂಥ ಉದಾಹರಣೆಗಳೆಷ್ಟೋ ಕಾಣಸಿಗುತ್ತವೆ. ಕೊಟ್ಟಾಯಂ ಎನ್ನುವ "ಅಕ್ಷರ ನಗರಿ" , ಮಾಧ್ಯಮಲೋಕವೆಂದರೆ ಅದೇನೋ ಅಲೌಕಿಕ ಜಗತ್ತಲ್ಲ ಎಂಬಂತಿರುವ ಮಲಯಾಳಿಗಳು ಬೆರಗುಹುಟ್ಟಿಸುತ್ತಾರೆ.
ದಕ್ಷಿಣ ಕೊಡಗಿನ ಊರೊಂದಕ್ಕೆ ಶುಂಠಿ ಕೆಲಸಕ್ಕೆಂದು ಬಂದ ಕುಂಞೀರಾಮನ್ ಎರಡು ದಿನಕ್ಕೊಮ್ಮೆ ೩೦ ಕಿ.ಮೀ ದೂರದ ರಾಜಪೇಟೆಗೆ :ಜನ್ಮಭೂಮಿ" ಕೊಳ್ಳಲು ಹೋಗುತ್ತಿದ್ದರು. ಟೈಮ್ಸ್ ಆಫ್ ಇಂಡಿಯಾದ ಒಂಭತ್ತು ಆವೃತ್ತಿಗಳೂ ಕುಂಞೀರಾಮನ್ ನ ಓದಿನ ತಪಸ್ಸೂ ಒಟ್ಟು ಕೇರಳದ ಕಥೆಗೆ ರೂಪಕಗಳಂತೆನಿಸುತ್ತವೆ.

No comments:
Post a Comment