ಅದು ಸ್ವಾತಂತ್ರ್ಯ ಪೂರ್ವದ ಒಂದು ಘಟನೆ.
ಅಮರ ಸೇನಾನಿ ಜನರಲ್ ತಿಮ್ಮಯ್ಯನವರು ಆಗ ಇನ್ನೂ ಬ್ರಿಗೇಡಿಯರ್. ಆಗಷ್ಟೇ ಅವರಿಗೆ ಅಲಹಾಬಾದಿನಿಂದ ಸಾಂಡಿಮಾನ್ ಎಂಬಲ್ಲಿಗೆ ವರ್ಗವಾಗಿತ್ತು. ಅಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ಹಾಕಿ ಪಂದ್ಯಾವಳಿಯೊಂದು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವುದರಲ್ಲಿತ್ತು. ತಿಮ್ಮಯ್ಯನವರ ಉಸ್ತುವಾರಿಯಲ್ಲಿದ್ದದ್ದು ೧೯ನೇ ಹೈದರಾಬಾದಿನ ದುರ್ಬಲ ತಂಡ. ಎಲ್ಲಾ ತಂಡದವರು ಹೈದರಾಬಾದ್ ತಂಡವನ್ನು ಗೇಲಿ ಮಾಡಿಕೊಂಡು ನಗಾಡುತ್ತಿದ್ದರು. " ಟ್ಯಾಂಕರುಗಳನ್ನು ತಂದುಬಿಡಿ , ಗೋಲು ತುಂಬಿಸಿಕೊಂಡು ಹೋಗಬಹುದು" ಎಂದು ತಮಾಷೆ ಮಾಡುತ್ತಿದ್ದರು. ಇನ್ನೂ ಒಂದು ತಲೆಬಿಸಿಯೆಂದರೆ ಹೈದರಾಬಾದು ತಂಡಕ್ಕೆ ಮೊದಲ ಎದುರಾಳಿಯೇ ಆಗಿನ ಕಾಲಕ್ಕೆ ಅತ್ಯಂತ ಪ್ರಬಲ ತಂಡವೆಂದೂ, ಹುಲಿಗಳು ಎಂದೂ ಹೆಸರುವಾಸಿಯಾಗಿದ್ದ ಪಂಜಾಬಿನ ಸಿಕ್ಖ್ ರೆಜಿಮೆಂಟಿನ ತಂಡ. ಹೈದರಾಬಾದ್ ತಂಡಕ್ಕೆ ಕೋಚ್ ಆಗಿದ್ದ ತಿಮ್ಮಯ್ಯನವರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಇನ್ನೇನು ಕೆಲವೇ ದಿನ. ಸಿಕ್ಖ್ ರೆಜಿಮೆಂಟಿನವರಂತೂ ೨೦ ರಿಂದ ೩೦ ಗೋಲುಗಳ ಅಂತರದ ಗೆಲುವಿನ ಲೆಕ್ಕಾಚಾರದಲ್ಲಿ ಅದಾಗಲೇ ತೊಡಗಿಬಿಟ್ಟಿದ್ದರು. ಆದರೆ ತಿಮ್ಮಯ್ಯನವರು ಸಾಕ್ಷಾತ್ ಯುದ್ದರಂಗಕ್ಕೆ ಹೊರಟ ಸ್ಥೈರ್ಯದೊಂದಿಗೆ ಚಿಂತನೆಯಲ್ಲಿ ತೊಡಗಿದರು. ಅಚಾನಕ್ಕಾಗಿ ಕೊಡವ ಯೋಧರ ಪಟ್ಟಿಯನ್ನು ಮಾಡಲಾರಂಭಿಸಿದರು. ಎಲ್ಲರನ್ನೂ ಒಟ್ಟು ಸೇರಿಸಿದರು. ಸ್ವತಃ ಮೈದಾನಕ್ಕಿಳಿದು ತರಬೇತುಗೊಳಿಸಿದರು. ಪಂದ್ಯದ ಮುನ್ನಾದಿನದ ಸಂಜೆ ತಂಡದ ಆಟಗಾರರಿಗೆ " ನಿಂಗಳ ಗೆದ್ದಿತ್ ಕಾಂಬಿ" ( ಗೆದ್ದ ಮೇಲೆ ನಿಮ್ಮನ್ನು ಕಾಣುತ್ತೇನೆ) ಎಂದು ತೆರಳಿದರು. ೧೯ ನೇ ಹೈದರಾಬಾದಿನ ತಂಡ ತಿಮ್ಮಯ್ಯನವರ ನಿರೀಕ್ಷೆಯಂತೆಯೇ ೩-೨ ಗೋಲುಗಳಿಂದ ಹುಲಿಗಳನ್ನು ಮಣಿಸಿತ್ತು. ಸಿಕ್ಖರಂಥಾ ದೃಢಕಾಯದ , ಅತ್ಯಂತ ಆಟಗಾರರೇ ಪಂದ್ಯದ ಅನಂತರ " ತಿಮ್ಮಯ್ಯಸಾಬ್ , ಆಪ್ ನೇ ಕ್ಯಾ ಕಿಯಾ?" ಎಂದು ಪ್ರಶ್ನಿಸಿದರು. ಆಗ ತಿಮ್ಮಯ್ಯನವರು " ವೋ ಕುರ್ಗೀಸ್ ಹೈ. ಲಡನೇ ಕೇಲಿಯೇ ವೋ ಪೈದಾ ಹೋಗಯಾ ಹೈ" ಎಂದು ಉತ್ತರಿಸಿದ್ದರು. ಏಕೆಂದರೆ ತಿಮ್ಮಯ್ಯನವರಿಗೆ ಕೊಡವರ ಯೋಧತನದ ಮತ್ತು ಕೊಡವರ ಹಾಕಿಯ ಮೇಲಿನ ಭಕ್ತಿಯ ಬಗ್ಗೆ ವಿಶ್ವಾಸವಿತ್ತು. ಸ್ವತಃ ತಿಮ್ಮಯ್ಯನವರಿಗೆ ಮಡಿಕೇರಿಯ ಸೆಂಟ್ರಲ್ ಸ್ಕೂಲಿನಲ್ಲಿ ತಾವು ಪಡೆದ ಹಾಕಿ ತರಬೇತಿ ಮತ್ತು ಬ್ರಿಟೀಷ್ ತರಬೇತುದಾರರೇ ಕೊಡಗಿನ ಆಟಗಾರರತ್ತ ಇಟ್ಟಿದ್ದ ಧೈರ್ಯದ ನೆನಪು ಇನ್ನೂ ಮರೆತಿರಲಿಲ್ಲ.
ಹಾಕಿಯನ್ನು ಕೊಡಗಿನ ಜನ ಆರಾಸಿಕೊಂಡು ಬಂದ ಮತ್ತು ಅದನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡು ಬಂದ ಇಂಥ ಪ್ರೇರಣಾದಾಯಿ ಉದಾಹರಣೆಗಳೆಷ್ಟೋ ಸಿಗುತ್ತವೆ. ಕೊಡಗಿನಲ್ಲಿ ಹಾಕಿ ಜನಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾದ ಸಂಗತಿಯೆಂದರೆ ಹಾಕಿಯನ್ನು ಅರ್ಥೈಸಿಕೊಳ್ಳದೆ ಕೊಡಗನ್ನು ಅರ್ಥೈಸಿಕೊಳ್ಳಲಾಗದು. ಕೊಡಗಿನ ದಮನಿಯನ್ನು ತಿಳಿಯಬೇಕೆಂದರೆ ಹಾಕಿ ಎಂಬ ಕ್ರೀಡೆಯ ಹಿಂದೋಡಲೇ ಬೇಕು. ಕೊಡಗಿನ ಇತಿಹಾಸ, ಅದರ ಏರಿಳಿತ, ಜನರ ಸಂಸ್ಕೃತಿ, ಅವರ ಮಾನಸಿಕತೆ, ಕೊಡವರ ಯೋಧತನದ ಹಿಂದೆ ಕಂಡೂ ಕಾಣದಂತೆ ಹಾಕಿಯ ಕಥೆ ಬೆರೆತುಕೊಂಡಿದೆ. ಒಂದು ಪುಟ್ಟ ಜಿಲ್ಲೆ, ಒಂದು ಸಣ್ಣ ಸಮುದಾಯ ಕ್ರೀಡೆಯೊಂದನ್ನು ಈ ಪರಿಯಲ್ಲಿ ಹಚ್ಚಿಕೊಳ್ಳಬಹುದೇ ಎಂಬ ಅಚ್ಚರಿಗೂ ಕೊಡಗು ಸಾಕ್ಷಿಯಾಗಿ ನಿಲ್ಲುತ್ತದೆ. ಕೊಡಗಿನ ಜನ ಹಾಕಿಯನ್ನು ಕೇವಲ ಆಸ್ವಾದಿಸಿಕೊಂಡು ಕೂರಲಿಲ್ಲ. ಭಾರತೀಯ ಹಾಕಿಗೆ ತಮ್ಮ ಲ್ಲಿಂದ ಅಮೂಲ್ಯ ರತ್ನಗಳನ್ನು ಕೊಟ್ಟಿತು. ಅದೂ ಬಹು ದೀರ್ಘ ಸಮಯದವರೆಗೆ. ಅದರಲ್ಲೂ ಮುಖ್ಯವಾಗಿ ಕೊಡವರಂತೂ ಹಾಕಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಕಾವೇರಿಯಲ್ಲಿ ನೀರು ಸಾಕಷ್ಟು ಹರಿದರೂ, ಜನಜೀವನ ಗುರುತು ಹಿಡಿಯಲಾರದಷ್ಟು ಬದಿಗೆ ಮಗ್ಗುಲು ಬದಲಿಸಿದರೂ ಕೊಡವರಲ್ಲಿ ಬದಲಾಗದೆ ನಿಂತ ಒಂದೇ ಒಂದು ಸಂಗತಿ ಎಂದರೆ ಹಾಕಿ. ಬ್ರಿಟಿಷ್ ಅವಯಲ್ಲೂ ಕೊಡಗು ಭಾರತೀಯ ಹಾಕಿಯ ನರ್ಸರಿ ಶಾಲೆಯೇ. ೨೦೧೨ರಲ್ಲೂ ಅದು ಭಾರತೀಯ ಹಾಕಿಯ ನರ್ಸರಿ ಶಾಲೆಯೇ.
೧೮೬೧ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟೀಷರು ತಮ್ಮ ವಸಹಾತುಗಳಿಗೆಲ್ಲಾ ಕೊಂಡೊಯ್ದರು. ಕೆಲವೆಡೆ ಜನ ಅದನ್ನು ಸ್ವೀಕರಿಸಲಿಲ್ಲ. ಆದರೆ ಭಾರತದಲ್ಲಿ ಅದು ತುಂಬಾ ಜನಪ್ರಿಯವಾಯಿತು. ಬ್ರಿಟಿಷರ ನೆಚ್ಚಿನ ರಾಜ್ಯಗಳಲ್ಲಿ ಅದು ಪ್ರಬಲ ಕ್ರೀಡೆಯಾಗಿಯೂ ಬೆಳೆಯಿತು. ಮುಖ್ಯವಾಗಿ ಬ್ರಿಟಿಷರು ಹಾಕಿಯನ್ನು ತಮ್ಮ ಸೇನೆಯಲ್ಲಿ ಅಳವಡಿಸಿದರು. ಸೈನ್ಯದಲ್ಲಿ ಹಾಕಿ ಕ್ಲಬ್‌ಗಳು ಸ್ಥಾಪನೆಯಾದವು. ಆರಂಭದಲ್ಲಿ ಕಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಹಾಕಿ ಬೇರೂರುತ್ತಾ ಬಂದರೂ ಹಾಕಿ ಭಾರತದಲ್ಲಿ ಬಲವಾಗಿ ಬೇರೂರಲು ಸಾಧ್ಯವಾಗಿದ್ದು ಕೊಡಗಿನಲ್ಲಿ. ಬ್ರಿಟಿಷರ ನೆಚ್ಚಿನ ಟೈನಿ ಮಾಡಲ್ ಸ್ಟೇಟ್ ಎಂಬ ಕೊಡಗಿನ ಮಡಿಕೇರಿಗೆ ಹಾಕಿ ೧೮೮೫-೮೬ರ ಹೊತ್ತಿನಲ್ಲಿ ಕಾಲಿಟ್ಟಿತು. ಯುರೋಪಿನಿಂದ ತರಿಸಿದ ಚೆಂಡು ಮತ್ತು ಸ್ಟಿಕ್‌ಗಳು ಇಲ್ಲಿ ಈ ಪರಿಯಲ್ಲಿ ಮೋಡಿ ಮಾಡುತ್ತವೆ ಎಂದು ಯಾವ ಬ್ರಿಟೀಷ್ ಅಕಾರಿಯೂ ಅಂದುಕೊಂಡಿರಲಿಲ್ಲ. ಆದರೆ ನೋಡ ನೋಡುತ್ತಲೇ ಹಾಕಿಯ ಕಲರವ ಮಡಿಕೇರಿಯಿಡೀ ತುಂಬಿಹೋಯಿತು. ಅನಂತರ ಅದು ದಕ್ಷಿಣಕ್ಕೂ ಇಳಿಯಿತು. ಸಣ್ಣ ಪಟ್ಟಣಗಳು, ದೂರದ ಊರುಗಳಲ್ಲೂ ಹಾಕಿಯೋ ಹಾಕಿ. ದನಗಾಹಿ ಬಾಲಕರೂ ಹಾಕಿ ಆಡತೊಡಗಿದರು. ಮನೆಯ ಅಂಗಳವೂ ಮಕ್ಕಳ ಆಟದ ಮೈದಾನವಾಯಿತು. ಬಿದಿರಿನ ಬೊಡ್ಡೆಗಳು, ಸೀಬೇಕಾಯಿ ಮರದ ಕೊಕ್ಕೆಗಳು, ಮರದ ಚೆಂಡುಗಳು , ಉರುಟಿನ ಕಾಯಿಗಳೆಲ್ಲವೂ ಬಾಲು ಸ್ಟಿಕ್ಕುಗಳಾದವು. ಇನ್ನೊಂದೆಡೆ ಕೊಡಗಿನ ಯುವಕರು ಸೈನ್ಯಕ್ಕೆ ಸೇರತೊಡಗಿದರು. ಈ ಮೂಲಕ ಆಧುನಿಕ ಹಾಕಿಯ ಪಟ್ಟುಗಳು ಊರೊಳಗೆ ಬರತೊಡಗಿದವು. ಟ್ರಾನ್ಸಿಸ್ಟರುಗಳು ಹಾಕಿಯನ್ನು ಅಪ್‌ಡೇಟ್ ಮಾಡಿದವು. ದೊಡ್ಡವರು ಪುಟ್ಟ ಮಗುವಿನ ಕೈಗೆ ಪುಟ್ಟ ಸ್ಟಿಕ್ಕನ್ನು ಕೊಟ್ಟರು. ಹೀಗೆ ಗೊತ್ತಾಗದಂತೆಯೇ ಹಾಕಿಯನ್ನು ಕೊಡವ ಪದ್ದತಿಯ ಒಂದು ಅಂಗವೆಂದೇ ಜನ ಭಾವಿಸತೊಡಗಿದರು. ಹಾಕಿ ಆಡಲು ಭಾರದವ ಕೊಡವನೇ ಅಲ್ಲ ಎಂದು ಜನ ಆಡಲು ಭಾರದವನನ್ನು ಹಂಗಿಸಿದರು. ಇಂದಿಗೂ ಕೊಡವರಿಗೆ ಹಾಕಿಯ ಪರಂಪರೆಯ ಬಗ್ಗೆ ಎಷ್ಟೊಂದು ಕಾಳಜಿಯೆಂದರೆ ಬಹುತೇಕ ಕೊಡವರ ಮನೆಗಳಲ್ಲಿ ಇದು ತಂದೆಯವರು ಆಡುತ್ತಿದ್ದ ಸ್ಪ್ರಿಂಗ್ ಸ್ಟಿಕ್ ಎಂದೋ ,ಇದು ತಾತನವರು ಆಡುತ್ತಿದ್ದ ವುಡನ್ ಸ್ಟಿಕ್ ಎಂದೋ ತೋರಿಸುತ್ತಾರೆ. ಕಾರ್ಯಪ್ಪಜ್ಜನವರೇ ಹಾಕಿಗೆ ಮರಳಾಗಿದ್ದರು. ನಮ್ಮಪ್ಪ ಕಾರ್ಯಪ್ಪಜ್ಜನ ಹಾಕಿ ಆಟವನ್ನು ಕಣ್ಣಾರೆ ಕಂಡಿದ್ದರು ಎಂದು ಹೇಳುವ ಅಯ್ಯನವರು ಇಂದೂ ಅಲ್ಲಲ್ಲಿ ಸಿಗುತ್ತಾರೆ. ಅಂದಿನ ಸೆಂಟ್ರಲ್ ಸ್ಕೂಲಿನಲ್ಲಿ ಹೆಡ್ ಮಾಷ್ಟರಾಗಿದ್ದ ಹ್ಯಾರಿಸ್ ಎಂಬವರು ಕಾರ್ಯಪ್ಪಜ್ಜನವರಿಗೆ ಒಂದು ಹಾಕಿ ಸ್ಟಿಕ್ಕನ್ನು ಕಾರ್ಯಪ್ಪಜ್ಜನಿಗೆ ಕೊಟ್ಟಿದ್ದರಂತೆ. ಮುಂದೆ ಕಾರ್ಯಪ್ಪಜ್ಜ ದೇಶದ ಮಹಾದಂಡನಾಯಕರಾದ ಮೇಲೂ ಆ ಸ್ಟಿಕ್ಕನ್ನು ಅಪ್ಯಾಯಮಾನದಿಂದ ಇಟ್ಟುಕೊಂಡಿದ್ದರಂತೆ, ಆ ಸ್ಟಿಕ್ಕಿನಲ್ಲಿ ಅವರು ಹೆಚ್ಚು ಆಟವಾಡುತ್ತಿರಲಿಲ್ಲವಂತೆ, ಹ್ಯಾರಿಸ್ ಕೊಟ್ಟ ಸ್ಟಿಕ್ಕನ್ನು ಮುಟ್ಟಿ ಹೊಸ ಸ್ಟಿಕ್ಕು ಹಿಡಿದು ಮೈದಾನಕ್ಕಿಳಿಯುತ್ತಿದ್ದರಂತೆ ಎಂದೆಲ್ಲಾ ಮಾತಾಡುವವರು ಕೊಡಗಿನಲ್ಲಿ ಕಾಣಸಿಗುತ್ತಾರೆ. ಮ್ಯಾನ್ ಎಂಬ ಬ್ರಿಟೀಷರ ಕಾಫಿ ಪ್ಲಾಂಟರನೊಬ್ಬ ಹಾಕಿಯ ಹುಚ್ಚಿನಿಂದ ಏಕರೆಗಟ್ಟಲೆ ಕಾಫಿ ತೋಟವನ್ನು ಬೋಳು ಮಾಡಿ ಮೈದಾನವನ್ನೇ ಮಾಡಿಬಿಟ್ಟಿದ್ದ. ಇಂದಿಗೂ ಆ ಮೈದಾನ ಮಡಿಕೇರಿಲ್ಲಿ ಮ್ಯಾನ್ಸ್ ಕಾಂಪೌಂಡ್ ಹೆಸರಿನಲ್ಲಿ ಸಾವಿರಾರು ಹಾಕಿಯ ಪ್ರತಿಭೆಗಳನ್ನು ತಯಾರು ಮಾಡುತ್ತಿದೆ. ಮ್ಯಾನ್ ಎಂಬ ಬ್ರಿಟೀಷನ ಕನಸ್ಸು ದಿನೇ ದಿನೇ ನನಸಾಗುತ್ತಲೇ ಇದೆ. ಬ್ರಿಟೀಷ್ ಕಾಲಾವಧಿಯಲ್ಲಿ ಪ್ರತೀ ರವಿವಾರ ಈ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದವಂತೆ. ಕೊಡವರನ್ನು ಕರೆಸಿಕೊಂಡು ಬ್ರಿಟೀಷರು ತಂಡಗಳನ್ನು ಕಟ್ಟುತ್ತಿದ್ದರಂತೆ. ಎಸ್ಟೇಟ್ ಮಾಲಿಕರೂ , ದೂರದ ಪ್ರಾಂತಗಳ ಅಧಿಕಾರಿಗಳೂ ಹಾಕಿ ನೋಡಲು ಮಡಿಕೇರಿಗೆ ಬರುತ್ತಿದ್ದರಂತೆ. ಬ್ರಿಟೀಷ್ ಆಡಳಿತ ಮುಗಿಯುತ್ತಾ ಬಂದಂತೆ ಹಾಕಿ ಕೊಡಗಿನಲ್ಲಿ ಮತ್ತಷ್ಟು ಬಲವಾಗತೊಡಗಿತು. ಅದಾಗಲೇ ಭಾರತೀಯ ತಂಡದಲ್ಲಿ ಹಲವು ಕೊಡಗಿನ ಯುವಕರು ಪ್ರತಿನಿಧಿಸಿ ಹೆಸರು ಗಳಿಸಿದ್ದರು. ೧೯ ನೇ ಶತಮಾನದ ಕೊನೆಯ ಭಾಗದಲ್ಲಿ ಪಟ್ಟಡ ಸೋಮಯ್ಯ ಎಂಬ ಮಹಾನ್ ಆಟಗಾರರೊಬ್ಬರು ಎತ್ತಿನ ಗಾಡಿಯಲ್ಲಿ ತಂಡವನ್ನು ಕಟ್ಟಿಕೊಂಡು ಬೆಂಗಳೂರಿನ ದಂಡು ಪ್ರದೇಶದ ತಂಡದೆದುರು ಆಡಲು ಹೋಗುತ್ತಿದ್ದರು ಎಂದು ಖ್ಯಾತ ಸಂಶೋಧಕರಾದ ಬಾಚರಣಿಯಂಡ ಅಪ್ಪಣ್ಣ ನವರು ಹೇಳುತ್ತಾರೆ. ಕೂರ್ಗ್ ಹಾಕಿ ಅಸೋಷಿಯೇಶನ್ನಿನ ಮಾಜಿ ಅಧ್ಯಕ್ಷರಾದ ಕಲಿಯಂಡ ನಾಣಯ್ಯನವರು " ನಾನು ೪೦ ವರ್ಷ ಸತತವಾಗಿ ಹಾಕಿ ಆಡಿದ್ದೇನೆ. ಭಾರತೀಯ ಹಾಕಿ ತಂಡದ ನಾಯಕರಾಗಿದ್ದ ಗೋವಿಂದ, ಖ್ಯಾತ ಫಾವರ್ಡ್ ಆಟಗಾರ ಅಮ್ಮಂಡ ವಾಸು ಅವರೊಂದಿಗೆ ನಾನು ಕಡಂಗಮರೂರು ಯೂತ್ ಕ್ಲಬ್ ತಂಡಕ್ಕೆ ಆಡಿದ್ದೇನೆ" ಎಂದು ಹೇಳುತ್ತಾ ಪುಳಕಗೊಳ್ಳುತ್ತಾರೆ.
೧೯೦೮ರಲ್ಲಿ ಹಾಕಿ ಒಲಂಪಿಕ್ಸ್‌ಗೆ ಸೇರ್ಪಡೆಯಾದ ಮೇಲಂತೂ ಹಾಕಿ ಜನಪ್ರಿಯತೆಯ ಉತ್ತುಂಗಕ್ಕೇರಿತು. ಪದಕಗಳ ಮೇಲೆ ಪದಕಗಳು, ಕಪ್‌ಗಳ ಮೇಲೆ ಕಪ್‌ಗಳನ್ನು ಗೆಲ್ಲತೊಡಗಿದಂತೆ ಕೊಡಗಿನಲ್ಲೂ ಕ್ಲಬ್ ಟೀಮುಗಳು ಶುರುವಾದವು. ೧೯೫೦ರ ದಶಕದಲ್ಲಿ ಸ್ಥಾಪನೆಯಾದ ವಾಂಡರರ್ಸ್, ಯಂಗ್‌ಸ್ಟಾರ್ಸ್ ಮಡಿಕೇರಿ, ಸ್ಪೋರ್ಟಿಂಗ್ ಮಡಿಕೇರಿ, ಟೀಚರ್ಸ್ ಟೀಮ್ ಗಳು ದೇಶದ ಖ್ಯಾತ ಹಾಕಿ ತಂಡಗಳೆನಿಸಿದ್ದವು. ಕೂರ್ಗ್ ಟೀಚರ್ಸ್ ತಂಡವಂತೂ ಕೊಡಗಿನ ಉಪಾದ್ಯಾಯರೇ ಕಟ್ಟಿಕೊಂಡ, ಅತಿರಥ ಮಹಾರಥರ ಒಂದು ಪ್ರಬಲ ತಂಡ. ಈ ತಂಡದ ಕಪ್ತಾನ ನಾಯಡ ವಾಸು ನಂಜಪ್ಪನವರ ಕಂಚಿನ ಕಂಠ ಮತ್ತು ಮೀಸೆಯನ್ನು ನೋಡಿಯೇ ಎದುರಾಳಿ ತಂಡ ಅರ್ಧ ಸೋತುಹೋಗುತ್ತಿತ್ತು ಎಂಬ ದಂತೆಕಥೆಗಳು ಇಂದಿಗೂ ಪ್ರಚಲಿತವಿದೆ. ಟೀಚರ್ಸ್ ಟೀಮಿನ ಒರ್ವ ಪ್ರಮುಖ ಆಟಗಾರ ೮೫ ವರ್ಷದ ಬಾಚರಣಿಯಂಡ ನಾಣಯ್ಯನವರು " ಮದರಾಸಿನಲ್ಲಿ ಶ್ರೀಲಂಕಾ ವಿರುದ್ಧ ೧೨ ಗೋಲು ಭಾರಿಸಿದ್ದೆ" ಎಂದು ಪಕಪಕನೆ ನಗುತ್ತಾರೆ.
ಕೊಡಗಿನ ಹಾಕಿಯ ವೈಭವವೆಂದರೆ ಭಾರತೀಯ ಹಾಕಿಯದ್ದೇ ವೈಭವದ ವರ್ಣನೆಗಳು. ಆದರೆ ಭಾರತೀಯ ಹಾಕಿ ಅನಂತರದ ವರ್ಷಗಳಲ್ಲಿ ಹಲವು ಏಳುಬೀಳುಗಳನ್ನು ಕಂಡಿತು. ಆದರೆ ಕೊಡಗಿನಲ್ಲಿ ವೈಭವ ಮರೆಯಾಗಲೇ ಇಲ್ಲ. ಕೌಟುಂಬಿಕ ಹಾಕಿ ಉತ್ಸವವಂತೂ ಮಹಿಳೆಯರನ್ನೂ ಮೈದಾನಕ್ಕಿಳಿಸಿತು. ಹಾಕಿಯನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಮನೆಮನೆಯಲ್ಲೂ ಐದಾರು ಆಟಗಾರರು ಹುಟ್ಟಿದರು. ಇಂದಿಗೂ ಕೊಡವರ ಐದು ಮನೆಗೊಂದರಂತೆ ಕನಿಷ್ಟ ಒಬ್ಬರಾದರೂ ವೃತ್ತಿಪರ ಆಟಗಾರರು ಸಿಗುತ್ತಾರೆ. ಹಾಕಿಯ ಆರಾಧನಾ ಪರಂಪರೆ ಇತರ ಜನಾಂಗಗಳಿಗೂ ಹರಡಿದೆ. ಮುಂಬರುವ ಲಂಡನ್ ಒಲಂಪಿಕ್‌ನ ಸಂಭವನೀಯರ ಪಟ್ಟಿಯಲ್ಲಿ ೮ ಜನ ಕೊಡಗಿನ ಆಟಗಾರರೇ ಆಗಿರುವುದು ವೈಭವದ ಉಳಿಕೆಗೆ ಸಾಕ್ಷಿಯಲ್ಲದೆ ಮತ್ತೇನು? " ಮಾಳೆಯಂಡ ಮುತ್ತಪ್ಪನವರಿಂದ ಸಣ್ಣುವಂಡ ಉತ್ತಪ್ಪ ನವರವರೆಗೆ ಭಾರತೀಯ ತಂಡದಲ್ಲಿ ಆಡಿದ ಕೊಡಗಿನವರೆಷ್ಟು ಮಂದಿ ನಾಣಯ್ಯನವರೇ" ಎಂದು ಹಾಕಿ ತಜ್ಞ ಕಲಿಯಂಡ ನಾಣಯ್ಯನವರನ್ನು ಕೇಳಿದರೆ " ಲೆಕ್ಕ ಸಿಗಲಾರದು. ಅಂದಾಜು ಕೂಡ ಮಾಡಲಾಗದು " ಎನ್ನುತ್ತಾರೆ.
ಹಾಕಿ ನಾಡು ಕೌತುಕದ ಬುಟ್ಟಿಯಲ್ಲವೇ?

No comments:
Post a Comment