Tuesday, March 6, 2012

ಟ್ವೀಟಿನ ಪೆಟ್ಟಿನ ಬಾಸುಂಡೆ


ಸ್ವಾತಂತ್ರ್ಯಪೂರ್ವದಲ್ಲೇನೋ ಸರ್ವಾಧಿಕಾರವಿತ್ತು. ಜನರ ದನಿ ಉಡುಗಿತ್ತು. ಅಕಾರಶಾಹಿ ವಿಜೃಂಭಿಸಿತ್ತು, ಅದಕ್ಕಾಗೇ ಚಳವಳಿಗಳು ನಡೆಯಿತು,ಸ್ವಾತಂತ್ರ್ಯ ಪ್ರಾಪ್ತವಾಯಿತು ಎಂಬೆಲ್ಲಾ ಕಥೆಗಳನ್ನು ಕೇಳಿ, ಓದಿ, ಕಲಿತು ದೇಶ ಕಟ್ಟಿದ್ದೂ ಆಯಿತು. ಆದರೆ ಸ್ವಾತಂತ್ರ್ಯ ಬಂದ ಮೇಲಾದರೂ ಆಗಿದ್ದೇನು? ಪ್ರಜಾಪ್ರಭುತ್ವದಲ್ಲಿ ಕಂಡಿದ್ದೇನು? ಮಹಾಮಹಾ ಗಡಿತಂಟೆಗಳೇ ಜನರ ಅರಿವಿಗೆ ಬಾರದೆ ನಾಲ್ಕು ಗೋಡೆಗಳ ಮಧ್ಯದಲ್ಲಿ ನಿಶ್ಚಯವಾಗಿ ಬಿಡುತ್ತಿದ್ದವು. ಹಗರಣಗಳಂತೂ ದೇಶಕ್ಕೆ ಬಹಿರಂಗವಾಗುವ ಸಂದರ್ಭವಂತೂ ಬರುತ್ತಲೇ ಇರಲಿಲ್ಲ. ಕೊನೆಗೊಮ್ಮೆ ಅದು ಬಹಿರಂಗವಾದರೂ ಜನರು ಏನೂ ಮಾಡುವಂತಿರಲಿಲ್ಲ. ಹಾಗಾಗಿ ಪ್ರಜಾಪ್ರಭುತ್ವವೂ ಒಂಥರಾ ಸರ್ವಾಧಿಕಾರದ ನೆರಳಲ್ಲೇ ಬಸವನ ಹುಳದಂತೆ ತೆವಳುತ್ತಿತ್ತು. ಆದ್ದರಿಂದ ಪಿರಂಗಿ ಕೋವಿ ಕೊಂಡುಕೊಳ್ಳುವ ನೆಪದಲ್ಲಿ ಹಣ ತಿಂದಾಗ, ವಿದೇಶಿ ರಾಷ್ಟ್ರ ಸಾವಿರಾರು ಚ. ಕಿ.ಮೀ ನೆಲವನ್ನು ನುಂಗಿದಾಗ, ಪ್ರಧಾನ ಮಂತ್ರಿಗಳೇ ಸಂಶಯಾಸ್ಪದವಾಗಿ ಸತ್ತಾಗಲೆಲ್ಲಾ ನಾಗರಿಕ ದನಿ ಹೊರಡಿಸಲಾಗದೇ ಇದ್ದುಬಿಟ್ಟರು. ನೆಹರೂ ರಂಥವರು ರಾಷ್ಟ್ರ ನಾಯಕರೂ ಆಗಿಬಿಟ್ಟರು. ಇಂಥ ಸಂದರ್ಭಗಳಲೆಲ್ಲಾ ನಮಗೆ ರಾಷ್ಟ್ರ ನಾಯಕರ ಪೌರುಷಗಳು ಕಾರಣ ಎನಿಸುವುದಿಲ್ಲ. ನಾಗರಿಕರ ದೌರ್ಬಲ್ಯ ಎಂದೂ ಎನಿಸುವುದಿಲ್ಲ. ಅಸಹಾಯಕತೆ ಮತ್ತು ಅವಕಾಶಗಳ ಕೊರತೆ ಮಾತ್ರ ಕಾಣುತ್ತದೆ. ಹಾಗಾಗಿ ಯಾವುದೋ ರಾಷ್ಟ್ರದ, ಯಾವನೋ ಒಬ್ಬನ ಹೆಸರು ಭೋಪಾಲ್ ಅನಿಲ ದುರಂತದೊಟ್ಟಿಗೆ ಕೇಳಿಬಂದಾಗ, ಯಾವನೋ ಮಂತ್ರಿ ರಾಷ್ಟ್ರ ಪುರುಷ ಕ್ರಾಂತಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದಾಗ, ಇನ್ನಾವುದೋ ಪತ್ರಿಕೆ ದುಷ್ಟಕೂಟದ ಪಾದಪೂಜೆ ಮಾಡಿದಾಗ, ಯಾವುದೋ ಮಂತ್ರಿ ಸುಳ್ಳುಸುಳ್ಳೇ ಮಾತಾಡಿದಾಗ ಇದೇ ಪ್ರಜಾಪ್ರಭುತ್ವ ದೇಶದ ನಾಗರಿಕ ಸುಮ್ಮನೇ ಇರುತ್ತಿದ್ದ. ಮಿಸುಕಾಡಲೇ ಇಲ್ಲ. ತೆಪ್ಪಗಿರುವುದೇ ಮೂಲಭೂತ ಕರ್ತವ್ಯ ಎಂಬಂತೆಯೇ ಇದ್ದ. ಹಾಗಿದ್ದ ನಾಗರಿಕನಲ್ಲಿ ಕನಸುಗಳಿಲ್ಲದೇ ಇರಲಿಲ್ಲ. ಆಕ್ರೋಶಗಳಿಲ್ಲದೇ ಇರಲಿಲ್ಲ.
ಹೇಗೆ ತಾನೇ ಅವಕಾಶವಿತ್ತು?ನಾಗರಿಕ ದನಿಯಾಗಲು ಕೆಂಬಾವುಟವೊಂದೇ ಸಂಕೇತ ಎನ್ನುವವರೇ ಇರುವಾಗ, ರಾಷ್ಟ್ರೀಯವಾದಿಗಳ ದಮನ ನಿರಂತರ ನಡೆಯುತ್ತಿರುವಾಗ ಹೇಗೆ ತಾನೇ ಚಳವಳಿಗಳು ಸುಲಭವಾಗಿ ಚಲಿಸುತ್ತಿದ್ದವು? ಸುದೈವವೆಂದರೆ ಕೆಲವೇ ವರ್ಷಗಳಲ್ಲಿ ಕೆಂಬಾವುಟ ಹರಿದೇ ಹೋಯಿತು. ಈ ನಡುವೆ ರಾಷ್ಟ್ರೀಯತೆಯ ವೇದಿಕೆಯಲ್ಲಿ ಹಲವು ಸಂಘಟನೆಗಳು ಜನರ ದನಿಯಾದರೂ ಆ ಸಂಘಟನೆಗಳನ್ನು ನಿಂದಿಸುವ, ಅಪಪ್ರಚಾರದ ಸುಳಿಯೊಳಗೆ ಹಾಕಿ ಕಲಕುವ ಮಾರ್ಗವನ್ನು ದುರ್ಮಾರ್ಗಿಗಳು ನಡೆಸಲಾರಂಭಿಸಿದರು. ಮಾಧ್ಯಮರಂಗದಲ್ಲಿ , ವಿಶ್ವವಿದ್ವಾಲಯಗಳಲ್ಲಿ, ಉನ್ನತ ಅಕಾರಿ ಸ್ತರಗಳಲ್ಲಿ ಅಂಥವರೇ ತುಂಬಿದರು. ಬುದ್ಧಿಜೀವಿಗಳು ತಯಾರಾದರು. ಅವರಿಗೆ ಎದುರಾಡುವವರೇ ಇಲ್ಲದಾದರು. ಇದ್ದರೂ ಅವರನ್ನು ಲೆಕ್ಕಿಸದೆ , ಪಲಾಯನದ ತಂತ್ರಗಾರಿಕೆ ಮತ್ತು ನುಣುಚಿಕೊಳ್ಳುವ ಗುಣದಿಂದ ಬುದ್ಧಿಜೀವಿಗಳು ಬಚಾವಾಗುತ್ತಿದ್ದರು.
ಆದರೆ ಎಷ್ಟು ದಿನ ಈ ಪಲಾಯನ? ಇದೀಗ ಬುದ್ಧಿಜೀವಿಗಳೂ ಸೋಲುತ್ತಿದ್ದಾರೆ.ಅಷ್ಟೇ ಅಲ್ಲದೆ ಕ್ಷಮೆಯನ್ನೂ ಕೇಳುತ್ತಿದ್ದಾರೆ. ಹೆದರುತ್ತಲೂ ಇದ್ದಾರೆ. ಮತಿ ಇಲ್ಲದವರಿಗೆ ಬಹುತೇಕ ಗತಿಯೂ ಇರುವುದಿಲ್ಲ. ಅದನ್ನು ಹೊಸಪೀಳಿಗೆ ಅರ್ಥಮಾಡಿಕೊಂಡಿದೆ. ಅವರು ತಮ್ಮ ದನಿಯನ್ನು ಇಂದು ಎತ್ತುತ್ತಿದ್ದಾರೆ. ಅದಕ್ಕಾಗಿ ತಂತ್ರಜ್ನಾನವನ್ನು ಬಳಸಿಕೊಂಡಿದ್ದಾರೆ. ಇದುವರೆಗೆ ಕೋಮುವಾದಿಗಳು ಎಂದು ಜರೆದು ದನಿಯನ್ನು ಲೆಕ್ಕಿಸದೆ ಅಡಿಯಿಡುತ್ತಿದ್ದ ಉದ್ದಟರೂ ಮೈ ಎಲ್ಲಾ ಕಣ್ಣಾಗಿ ಎಚ್ಚರದಿಂದ ಇರುವಂತಾಗಿದೆ. ಹೀಗೆ ಯುವಜನರ ದನಿಯಾಗಿ, ಖೂಳರ ಭಯವಾಗಿ, ಹಲವು ಆಧುನಿಕ ಚಳವಳಿಗಳಿಗೆ ದಿಕ್ಕಾಗಿ ನಿಂತಿರುವುದು ನವಮಾಧ್ಯಮವೆಂದೇ ಪರಿಗಣಿಸಲಾಗುತ್ತಿರುವ ಟ್ವಿಟ್ಟರ್ ಎಂಬ ಚಿಲಿಪಿಲಿ.
ಟ್ವಿಟ್ಟರ್ ಅರ್ಧ ಶತಮಾನದ ಜನರ ಬೇಗುದಿಗೆ ದನಿಯಾಗಿ ನಿಂತಿದೆ ಎಂದರೆ ತಪ್ಪಿಲ್ಲ. ಮೊದಲೆಲ್ಲಾ ಸಾಮಾಜಿಕ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸದೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಭಾರತದ ಮಾಧ್ಯಮರಂಗ, ಅಧಿಕಾರ ವರ್ಗಗಳು ಟ್ವಿಟ್ಟರ್ ನ ಕಾರಣದಿಂದ ಅನಿವಾರ್ಯವಾಗಿಯಾದರೂ ಚಳವಳಿಗಳನ್ನು ಬೆಂಬಲಿಸುವಂತಾಗಿದೆ. ಇಂಟರ್ ನೆಟ್ಟಿನ ಚರ್ಚಾತಾಣವೆಂದೂ ಅಭಿಪ್ರಾಯ ಹಂಚಿಕೆಯ ಜಾಗವೆಂದೂ ಮುಕ್ತ ಅಭಿವ್ಯಕ್ತಿಯ ಮಾಧ್ಯಮವೆಂದೂ ಹೇಳಬಹುದಾದ ಈ ಟ್ವಿಟ್ಟರ್ ದೇಶದಲ್ಲಿ ಮೌನವಾಗಿ ಮಾಡಿದ ಕಾರ್ಯ ನಿಜವಾಗಿಯೂ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವೇ. ಅಧುನಿಕ, ಇಂಗ್ಲಿಷ್ ಬಲ್ಲ, ದೊಡ್ಡ ಉದ್ಯೋಗದ ಜನರೂ ರಾಷ್ಟ್ರ ಕಾರ್ಯದಲ್ಲಿ ಪಾಲುದಾರರಾಗಬಹುದು ಎಂಬುದನ್ನು ಟ್ವಿಟ್ಟರ್ ಪ್ರಮಾಣೀಕರಿಸಿತು. ಮಾಧ್ಯಮ ಲೋಕದಲ್ಲಿ ಟ್ವಿಟ್ಟರ್ ಎಷ್ಟೊಂದು ಪ್ರಭಾವಿ ಎಂದರೆ ಭಾರತದ ವಿವಿಧ ಕ್ಷೇತ್ರಗಳ ಆಗುಹೋಗುಗಳ ಬಗ್ಗೆ ಟ್ವಿಟ್ಟರ್ ಕಾವಲು ಕಾಯುತ್ತದೆ. ದೇಶದ ಯಾವುದೇ ಸಂಗತಿಯೂ ಅಲ್ಲಿ ಚರ್ಚೆಯಾಗುತ್ತದೆ. ಚರ್ಚಿತ ಎಲ್ಲಾ ವಿಷಯವೂ ಹೊಸ ಹೊಳಪಿನಿಂದ ಟ್ರೆಂಡ್ ಒಂದನ್ನು ಹುಟ್ಟುಹಾಕುತ್ತವೆ. ಟ್ವಿಟ್ಟರ್ ಯಾವ ದೊಣ್ಣೆನಾಯಕನನ್ನೂ ತರಾಟೆಗೆ ತೆಗೆದುಕೊಳ್ಳದೆ ಬಿಡದು. ಒಂದು ವೇಳೆ ಭಾರತದಲ್ಲಿ ಟ್ವಿಟ್ಟರ್ ಅಷ್ಟೊಂದು ಬಳಕೆಯಲ್ಲಿಲ್ಲದ ಐದಾರು ವರ್ಷಗಳ ಹಿಂದೆ ೩ಜಿ ಹಗರಣವೋ ಕಾಮನ್‌ವೆಲ್ತ್ ಹಗರಣವೋ ಬೆಳಕಿಗೆ ಬಂದಿರುತ್ತಿದ್ದರೆ ಸುರೇಶ್ ಕಲ್ಮಾಡಿಯೂ ರಾಜಾ, ಕನಿಮೋಳಿಗಳು ಜೈಲುಪಾಲಾಗುವುದೂ ಸಂಶಯವಿತ್ತು ಎನ್ನಬಹುದು. ಟ್ವಿಟ್ಟರ್ ಇಂದು ಸುದ್ಧಿಮೂಲವಾಗಿ , ಜ್ನಾನದ ಮೂಲವೂ ಆಗಿ ಇತರ ಮಾಧ್ಯಮಗಳಿಗಿಂತ ದಿನೇ ದಿನೇ ಜನಪ್ರೀಯವಾಗುತ್ತಿದೆ. ಇತರ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳೂ ಕೂಡ ಟ್ವಿಟ್ಟರನ್ನು ಹೊರಗಿಟ್ಟು ನಡೆಯಲಾರದಂಥ ವಾತಾವರಣ ಇಂದು ಸೃಷ್ಟಿಯಾಗಿದೆ. ಜನರ ದನಿಯ ತಾಕತ್ತು ನಿಧಾನವಾಗಿಯಾದರೂ ಪ್ರಧಾನವಾಗುತ್ತಿದೆ. ಜನರ ದನಿಯಾಗಲು ಕೇವಲ ೧೪೦ ಅಕ್ಷರಗಳು ಸಾಕಾಗಬಲ್ಲವು ಎಂಬುದಕ್ಕೆ ಉದಾಹರಣೆಗಳೆಷ್ಟಿವೆ.
ಕಳೆದ ನವೆಂಬರ್ ೯ರಂದು ಸಿಎನ್‌ಎನ್-ಐಬಿಎನ್ ಚಾನಲ್ಲಿನಲ್ಲಿ ಸಾಗರಿಕಾ ಘೋಷ್ ನಡೆಸಿಕೊಡುವ "ಫೇಸಿಗ್ ದಿ ನೇಷನ್" ಕಾರ್ಯಕ್ರಮ ಪ್ರಸಾರವಾಯಿತು. ಇದೊಂದು ನೇರಪ್ರಸಾರವೆಂದೂ ಅತಿಥಿಗಳು ಸಾಕ್ಷಾತ್ ದೇಶವನ್ನೇ ಎದುರಿಸುತ್ತಾರೆಂದೂ ಆ ಕಾರ್ಯಕ್ರಮದ ಬಗ್ಗೆ ಇಂದಿಗೂ ಅಂತೆಕಂತೆಗಳಿವೆ. ಅಂದೂ ಕೂಡ ಎಂದಿನ ಅಂಥ ಅಂತೆಕಂತೆಗಳನ್ನು ಹೊತ್ತುಕೊಂಡೇ ಕಾರ್ಯಕ್ರಮ ಪ್ರಸಾರವಾಯಿತು."ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಧಾರ್ಮಿಕ ನಾಯಕರ ಪಾತ್ರ" ಕುರಿತು ಸಾಗರಿಕಾ ಮೂರ್ನಾಲ್ಕು ಜನರನ್ನು ಸ್ಟುಡಿಯೋಕ್ಕೆ ಕರೆಸಿ ಪ್ಯಾನೆಲ್ಲಿನಲ್ಲಿ ಕೂರಿಸಿದ್ದಳು. ಶ್ರೀ ಶ್ರೀ ರವಿಶಂಕರ ರನ್ನೂ ಕ್ಯಾಮರಾದಲ್ಲಿ ತೋರಿಸಿ ನೇರಸಂಪರ್ಕದಲ್ಲಿದ್ದಾರೆ ಎಂದು ಘೋಷಿಸಿದಳು. ಅಲ್ಲಿಂದ ಸಾಗರಿಕಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸಿಡಿಸತೊಡಗಿದಳು. ಸಾಗರಿಕಾಳ ಪ್ರಶ್ನೆಗಳಿಗೆ ರವಿಶಂಕರರ ಉತ್ತರದಲ್ಲೇನೋ ಎಡವಟ್ಟಿದೆ ಎಂದು ಸೂಕ್ಷ್ಮ ವೀಕ್ಷಕರಿಗೆ ಅನಿಸಲಾರಂಭಿಸಿತು. ಆದರೆ ಕೆಲವು ವಿಮರ್ಶಕರು ಮಾತ್ರ "ಅಬ್ಬಾ ಸಾಗರಿಕಾ" ಎಂದರು. ಆದಾದ ಕೆಲವೇ ಹೊತ್ತಿನಲ್ಲಿ ಟ್ವಿಟ್ಟರಿನಲ್ಲಿ ಸಂದೇಶವೊಂದು ಪ್ರಕಟವಾಯಿತು. ರವಿಶಂಕರರ ಅನುಯಾಯಿಯೊಬ್ಬರು "ಈ ಹೊತ್ತಿನಲ್ಲಿ ರವಿಶಂಕರರು ನೇರಪ್ರಸಾರದಲ್ಲಿಲ್ಲ. ಇದು ರೆಕಾರ್ಡು ಸಂದರ್ಶನ " ಎಂದು ಟ್ವೀಟ್ ಮಾಡಿದರು. ಅದನ್ನು ಸಾಗರಿಕಾ ಮತ್ತು ಚಾನಲ್ ಖಂಡತುಂಡವಾಗಿ ನಿರಾಕರಿಸಿತು. ಪಟ್ಟುಬಿಟದ ಟ್ವೀಟ್ ಮಾಡುವ ಯುವಕರು ಬೆಂಬಿಡದೆ ಬಾಣ ಹೂಡಿದರು. ಕೊನೆಗೆ ಸಾಗರಿಕಾ ಕ್ಷಮೆಯಾಚಿಸಲೇ ಬೇಕಾಯಿತು. ಆದರೂ ಬೆಂಬಿಡದ ಟ್ವಿಟ್ಟರ್ ಚಾನಲಿನಲ್ಲೇ ಕ್ಷಮೆ ಯಾಚಿಸಬೇಕೆಂದು ಹಠ ಹಿಡಿದವು. ಗತ್ಯಂತರವಿಲ್ಲದೆ ಚಾನಲ್ ಕ್ಷಮೆ ಯಾಚನೆ ಮಾಡಿತು. ಇಂಥ ಸಾಧನೆ ಸಾಧ್ಯವಾಗಿದ್ದು ಕೇವಲ ಟ್ವಿಟ್ಟರ್ ನಿಂದ. ದಶಕಗಳಷ್ಟು ಕಾಲ ಆನೆ ನಡೆದಿದ್ದೇ ದಾರಿ ಎಂಬಂತಾಡುತ್ತಿದ್ದವರು ಹಳ್ಳಕ್ಕೆ ಬಿದ್ದಿದ್ದರು. ಕಾರಣ ಟ್ವಿಟ್ಟರ್. ಇಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಏನೆಂದರೆ ಏನನ್ನೂ ಪ್ರಸಾರಮಾಡಿ ಶೋಕಿ ಮಾಡಲಾಗುವುದಿಲ್ಲ. ಕಾರಣ ಟ್ವಿಟ್ಟರ್. ಟ್ವಿಟ್ಟರ್ ಗಳ ಪ್ರವಾಹದಿಂದ ಮಾಧ್ಯಮಗಳು ನಿಜಕ್ಕೂ ಹೆದರುತ್ತಿವೆ. ಬರ್ಖಾ ದತ್ ಳಂತವಳೇ ಮೈಯೆಲ್ಲಾ ಕಣ್ಣಾಗಿರುತ್ತಾಳೆ. ಒಮ್ಮೆ ದಿಗ್ವಿಜಯ ಸಿಂಗರನ್ನು streetfighting rajput ಎಂದು ಹೊಗಳಿದ ಸಾಗರಿಕಾ ಘೋಷ್ ಮತ್ತು ಅವಳ ಪತಿ ರಾಜದೀಪ್ ಸರದೇಸಾಯಿ ಯನ್ನು ಟ್ವಿಟ್ಟರ್ ಗಳು ಅಟ್ಟಾಡಿಸಿಕೊಂಡು ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದವು. ಟ್ವಿಟ್ಟರ್ ಗಳ ಈ ದಾಳಿಯಿಂದ ಹೈರಾಣಾದ ಸಾಗರಿಕಾ " internet hindus are like swarms of bees. They come swarming after you at any mention of Modi, muslims or Pakistan " ಎಂದು ನುಡಿದಿದ್ದಳು. ಇಂದು ಬುದ್ದಿಜೀವಿ ತಂತ್ರಗಳು ಅಮಾಯಕರ ಮೇಲೆ ನಡೆಯಬಹುದೇ ಹೊರತು ವಿದ್ಯಾವಂತರ ಮೇಲೆ ನಡೆಯಲಾರವು ಎಂಬುದನ್ನು ಟ್ವಿಟ್ಟರ್ ತೋರಿಸಿಕೊಟ್ಟಿದೆ. ಮಾರ್ಕ್ಸ್‌ವಾದಿಗಳ ಆಟಾಟೋಪ ಭಾರತದಲ್ಲಿನ್ನು ಕಿಂಚಿತ್ತೂ ನಡೆಯದು ಎಂಬ ಎಚ್ಚರಿಕೆಯನ್ನು ಟ್ವಿಟ್ಟರ್ ನೀಡಿದೆ. ರಾಷ್ಟ್ರೀಯವಾದದ ಸ್ಪಷ್ಟ ಧ್ವನಿಯಾಗಿ ಟ್ವಿಟ್ಟರ್ ಉಲಿಯುತ್ತಿದೆ. ಮಾಧ್ಯಮವನ್ನೂ , ಪ್ರಧಾನಮಂತ್ರಿಗಳನ್ನೂ ಪ್ರಶ್ನಿಸಬಹುದು ಎಂಬುದನ್ನು ಟ್ವಿಟ್ಟರ್ ತೋರಿಸಿಕೊಟ್ಟದೆ. ರಾಡಿಯಾ ಟೇಪ್ ಹಗರಣ ರಾಷ್ಟ್ರಾದ್ಯಂತ ಚರ್ಚೆಯಾಗಲು ಕಾರಣವಾಗಿದ್ದು ಇದೇ ಟ್ವಿಟ್ಟರ್ ಎಂದರೆ ಜನರ ದನಿಗಿರುವ ಶಕ್ತಿಯನ್ನು ಅಂದಾಜಿಸಬಹುದು. ಜನಲೋಕ ಪಾಲ ಮತ್ತು ಅಣ್ಣಾಹಜಾರೆ ಚಳವಳಿಗಳಿಗೆ ಕಾವು ಕೊಟ್ಟಿದ್ದು ಇದೇ ಟ್ವಿಟ್ಟರ್. ಅಷ್ಟೇ ಅಲ್ಲದೆ ನ್ಯಾಯಾಂಗವೂ ಕೂಡ ಟ್ವಿಟ್ಟರನ್ನು ಗಂಭೀರವಾಗಿ ಪರಿಗಣಿಸುತ್ತದೆ. ದೇಶಾದ್ಯಂತ ಒಂದು ಟ್ರೆಂಡ್ ಅನ್ನು ಸೃಷ್ಟಿಮಾಡುವ ಟ್ವಿಟ್ಟರನ್ನು ಲಘುವಾಗಿ ಪರಿಗಣಿಸಲಾಗದು ಎಂದು ಕಾನೂನು ತಜ್ನರೇ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತ ವರದಿ ಸೋರಿಕೆಯಾದಾಗ ಅದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನವರ ಉಲ್ಲೇಖವಿಲ್ಲದೇ ಇದ್ದಾಗ ಅದನ್ನು ಗುರುತಿಸಿ ಸುದ್ಧಿಯಾಗಿಸಿದ್ದು ಯಾವುದೋ ನಂಬರ್ ವನ್ ಚಾನಲ್ ನವರಲ್ಲ. ಬರೀ ಒಂದು ಟ್ವೀಟ್ ಎನ್ನುವುದನ್ನು ಮರೆಯಬಾರದು. ಸುದ್ಧಿ ಮೂಲವಾಗಿಯೂ ಟ್ವಿಟ್ಟರ್ ಮಾಧ್ಯಮ.
ಐಶ್ವರ್ಯ ರೈಗರ್ಭಿಣಿಯಾಗಿದ್ದಾಳೆ ಎಂದು ಅಮಿತಾಬ್ ಬಚ್ಚನ್ ಕೂಡ ಪತ್ರಿಕಾಗೋಷ್ಟಿ ಮಾಡಲಸಾರ. ಊರೆಲ್ಲಾ ತಿಳಿಯಬೇಕು ಎಂದುಕೊಳ್ಳುವುದೂ ಸರಿಯಾಗದು. ಇಂಥ ಸಮಯದಲ್ಲಿ ಅಮಿತಾಬ್ ನಾನು ತಾತನಾಗುತ್ತಿದ್ದಾನೆ ಎಂಬ ಖುಷಿಯನ್ನು ಹೇಳಲು ವೇದಿಕೆಯಾಗಿದ್ದು ಟ್ವಿಟ್ಟರ್ ನಿಂದ. ಕಳೆದ ವರ್ಷ ಮುಂಬೈಯಲ್ಲಿ ಸ್ಪೋಟ ಸಂಭವಿಸಿದಾಗ ಕೇವಲ ಟ್ವಿಟ್ಟರ್ ಮಾಹಿತಿಯಿಂದಲೇ ಯುವಕರು ಆಸ್ಪತ್ರೆಗಳಿಗೆ ಧಾವಿಸಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದನ್ನು ಮರೆಯಲು ಹೇಗೆ ಸಾಧ್ಯ.ಇನ್ನು ಎಲ್ಲೂ ಸಿಗದ ಸುದ್ದಿಗಳು ಟ್ವಿಟ್ಟರ್ ನಲ್ಲಿ ಸಿಗುತ್ತವೆ. ಮುಖ್ಯವಾಹಿನಿಗಳ ಕೋಳಿಗಳಿಂದಲೇ ಬೆಳಗಾಗುತ್ತವೆ ಎಂಬ ಭ್ರಮೆಯನ್ನು ಇಂದು ಯಾರೂ ಹೊತ್ತುಕೊಂಡಿಲ್ಲ. ಉತ್ತರಪ್ರದೇಶದಲ್ಲಿ ನಕಲಿ ಮತಯಂತ್ರಗಳು ಪತ್ತೆಯಾಗಿದ್ದು, ಓರಿಸ್ಸಾದಲ್ಲಿ ನೂರಾರು ಜನ ಹಿಂದುಗಳು ಮರಳಿ ಮಾತ್ರಧರ್ಮಕ್ಕೆ ಬಂದಿದ್ದು, ಗಿಲ್ಗಿಟ್-ಬಾಲ್ಟಿಸ್ಥಾನದ ಆಗುಹೋಗುಗಳು, ಲವ್ ಜಿಹಾದಿನ ಕರಾಳ ಹಸ್ತಗಳು ಟ್ವಿಟ್ಟರ್ ನಲ್ಲಿ ಕಾಣಸಿಗುತ್ತವೆ. ಜೊತೆಗೆ ಕೆಲವು ಪ್ರಶ್ನೆಗಳಿಗೆ ಉತ್ತರವನ್ನೂ ಟ್ವಿಟ್ಟರ್ ಕೊಡುತ್ತವೆ. ಬಟ್ಟೆ ಅಂಗಡಿಯಲ್ಲಿ ಹೊಸಬಟ್ಟೆ ತೊಡಿಸಿ ನಿಲ್ಲಿಸಿರುವ ಫೈಬರ್ ಗೊಂಬೆಯಂತೆ ಕಾಣುವ ಶಾರುಕ್ ಖಾನನು ವಿಡಿಯೋ ಗೇಮಿನಂತೆ ಕಾಣುವ ಸಿನಿಮಾವನ್ನು ನಿರ್ಮಿಸಿದಾಗ ಚಾನೆಲ್‌ಗಳೇಕೆ ಆತನನ್ನು ಕರೆಸಿ ಗಂಟೆಗಟ್ಟಲೆ ಮಾತಾಡಿಸುತ್ತವೆ? ಬಾಲಿವುಡ್ಡಿನ ಹಿಂದೂ ನಟರೆಲ್ಲಾ ಗೆಲ್ಲಲು ಕಷ್ಟಪಡುತ್ತಾರೆ ಏಕೆ? ಕುನಾಲ್ ಕೇಮು ಎಂಬ ಅದ್ಬುತ ಯುವನಟ ಏನಾದ? ರಣ್ ಸಿನಿಮಾವನ್ನು ಯಾವ ಮಾಧ್ಯಮಗಳೂ ಏಕೆ ಚರ್ಚೆಗೆ ಒಳಪಡಿಸುವುದಿಲ್ಲ? ಮುಂತಾದ ಕುತೂಹಲವನ್ನು ತಣಿಸುತ್ತದೆ. ಜೀನ್ಸ್ ಹಾಕಿದ ಹುಡುಗಿಯೂ ಇಲ್ಲಿ ಅಖಂಡ ಭಾರತದ ಬಗ್ಗೆ ಧೈರ್ಯವಾಗಿ ಮಾತಾಡುತ್ತಾಳೆ. ತೀಕ್ಷ್ಣವಾದ, ಕೆಲವೊಮ್ಮೆ ಒರಟಾದ, ಕುಹಕದ, ಕೌತುಕದ ಟ್ವೀಟ್‌ಗಳು ಮುಟ್ಟುವಲ್ಲಿಗೆ ಮುಟ್ಟಿರುತ್ತವೆ. ಟ್ವೀಟ್ ಎಂಬ ಪೆಟ್ಟು ಬೀಳುವಲ್ಲಿಗೆ ಬೀಳುತ್ತದೆ. ಟ್ವೀಟ್ ನ ಪೆಟ್ಟಿಗೆ ಬಾಸುಂಡೆ ಬರಿಸಿಕೊಂಡವರು ಉಜ್ಜಿಕೊಳ್ಳುತ್ತಿದ್ದಾರೆ.

No comments: