Tuesday, March 27, 2012

ತಾಜ್‌ಮಹಲನ್ನು ಒರೆಸಬಹುದು ಗಂಗೆಯನ್ನು ಸೋಸಲಾಗುವುದೇ?


ಕೊಡವರ ಮನೆಯ ಮದುವೆಯಲ್ಲಿ ಇಂದಿಗೂ ಒಂದು ಪದ್ದತಿಯಿದೆ.
ಮೂಹೂರ್ತ ಮುಗಿದು ಹೆಣ್ಣಿನ ಕಡೆಯವರು ಗಂಡಿಗೆ ಹೆಣ್ಣನ್ನು ಒಪ್ಪಿಸಿದ ಅನಂತರ ಗಂಡು ಆಕೆಯನ್ನು ತನ್ನ ಮನೆಗೆ ಕೊಂಡೊಯ್ಯುತ್ತಾನೆ. ಮೊಟ್ಟ ಮೊದಲು ಗಂಡನ ಮನೆಹತ್ತುವ ಹೆಣ್ಣು ಮೊದಲು ತನ್ನ ಮನೆಯ ಬಾವಿಗೆ ಪೂಜೆ ಮಾಡಬೇಕು. ಪೂಜಿಸಿದ ಬಾವಿಯಿಂದ ನೀರನ್ನು ತಾನೇ ಸೇದಿ ಮನೆಗೆ ತರಬೇಕು. ಅದಕ್ಕೆ ಹೆಸರೇ "ಗಂಗಾಪೂಜೆ". ಪದ್ದತಿ ಏನೇ ಇರಲಿ. ಆದರೆ ಹೆಸರೇ ಸೋಜಿಗ ! ಎಲ್ಲಿಯ ಬಾವಿ? ಎಲ್ಲಿಯ ಗಂಗೆ? ಅದಲ್ಲದೆ ಇವರು ಕಾವೇರಿಯನ್ನೇ ಕುಲದೇವಿ ಎಂದುಕೊಳ್ಳುವವರು. ಆದರೂ ನೀರು ಎಂದರೆ ಇವರಿಗೆಲ್ಲಾ ಗಂಗೆಯೇ.ಇನ್ನೇನು ಪ್ರಾಣ ಹೋಗುವುದರಲ್ಲಿದೆ ಎಂಬಲ್ಲಿ ಕೂಡ ಕೊಡವರು ಬಾಯಿಗೆ ನೀರು ಬಿಡಲು ಕಾವೇರಿ ತೀರ್ಥವನ್ನು ಇಟ್ಟುಕೊಂಡರೂ "ಗಂಗೆಯನ್ನು ಬಾಯಲ್ಲಿ ಬಿಡಿ" ಎಂಬ ಗಡಿಬಿಡಿಯನ್ನು ಶುರುಮಾಡುತ್ತಾರೆ. ಇನ್ನು ಮಲೆನಾಡಿನ ಹಳ್ಳಿಗಳಿಗೆ ಹೋದರಂತೂ "ಲೇ , ಇವಳೇ ಬಂದವರಿಗೆ ಗಂಗೋದಕ ತಾ" ಎಂದು ಹೇಳುವುದು ಮಾಮೂಲಿನ ಸಂಗತಿ. ಹಾಗೆ ತರುವ ಗಂಗೋದಕವೇನೂ ಗಂಗೆಯ ನೀರಲ್ಲ. ಒಮ್ಮೊಮ್ಮೆ ಅದು ಮಿನರಲ್ ನೀರು ಬಿಸಿಲೇರಿಯೂ ಆಗಿದ್ದದರೂ ಆತಿಥ್ಯದ ನೀರೆಂದೂ ಗಂಗೆಯೇ. ಇದು ಕೇವಲ ಒಂದೆರಡು ಪ್ರದೇಶಗಳ ಕಥೆಯಲ್ಲ. ದೇಶಾದ್ಯಂತ ನೀರು ಎಂದರೆ ಗಂಗೆ. ಗದ್ದೆಗೆ ಹರಿಸುವ ನೀರಿನಿಂದ ಹಿಡಿದು ಅರ್ಚಕರು ಉದ್ದರಣೆಯಿಂದ ಕೊಡುವ ತೀರ್ಥವೆಲ್ಲವೂ ಗಂಗೆಯೇ. ನೀರಿಗೆ ಪಾಪನಾಶಿನಿ ಎಂಬ ಹೆಸರು ಬಂದಿದ್ದೇ ಈ ಗಂಗೆಯಿಂದ ಎನ್ನಬಹುದು. ಅದು ಭಾರತದ ಜನರು ನೀರಿಗೆ ಕೊಟ್ಟ ಬೆಲೆ. ಗಂಗೆಯ ಮೇಲಿನ ಭಕ್ತಿಯೂ ಹೌದು. ಹೀಗೆ ನೀರು ಮತ್ತು ಗಂಗೆಯ ಮೀಮಾಂಸೆಯನ್ನು ಮಾಡುತ್ತಾ ಹೋಗಬಹುದು. ಭಾರತದ ನೀರುಗಳೆಲ್ಲವೂ ಗಂಗಾಮಯವಾಗಿದ್ದು. ಗಂಗೆ ಸರ್ವಾಂತರ್ಯಾಮಿಯಾಗಿದ್ದು, ಪುಣ್ಯವತಿಯಾಗಿದ್ದು,ದೇಶದ ಪಾಲಿನ ಜೀವನ್ಮಾತೆಯಾಗಿದ್ದು, ಆಸ್ತಿಕರ ಮುಕ್ತಿದಾತೆಯಾಗಿದ್ದು, ಸಮಸ್ತ ಹಿಂದುಗಳ ಪಾಲಿನ ಶ್ರದ್ದಾಮಾತೆಯಾಗಿದ್ದರ ಹಿಂದೆ ಗಂಗೆ ಎಂಬ ದೇವಿಯಿದ್ದಾಳೆ.
ಗಂಗೆ ಆಸ್ತಿಕರ ಪಾಲಿನ ಅಮ್ಮ. ಆಕೆಯನ್ನು ನಿರಾಕಾರಮಯೀ ಎಂದರೂ ವೇದಗಳಲ್ಲಿ, ಪುರಾಣಗಳಲ್ಲಿ ಆಕೆ ರೂಪ ತಳೆದ ದೇವತೆ. ಗಂಗಾದೇವಿಯ ಅಪ್ಪ ಮೇರು. ಆತ ಸಾಕ್ಷಾತ್ ಹಿಮಾಲಯದ ರಾಜನಂತೆ. ಗಂಗೆ ಚೆಲುವಿಯಂತೆ. ಒಮ್ಮೆ ಆಕೆಯ ಬಾಲ್ಯದಲ್ಲಿ ದೇವರಾಜ ಇಂದ್ರ ತಣ್ಣನೆಯ ನೀರಿನಿಂದ ದೇವಲೋಕವನ್ನು ತಣಿಸಲು ಗಂಗೆಯನ್ನು ಬೇಡಿಕೊಂಡಿದ್ದನಂತೆ ಎಂಬ ಕಥೆಯೊಂದಿದೆ. ಇಂಥದ್ದೇ ಕಥೆಗಳು ರಾಮಾಯಣದ ಬಾಲಕಾಂಡದಲ್ಲಿ , ಮಹಾಭಾರತದ ಅರಣ್ಯಕಾಂಡದಲ್ಲಿ ಕಂಡುಬರುತ್ತವೆ. ಭಾರತದ ಯಾವುದೇ ಕಾಲವನ್ನು ನೋಡಿದರೂ ಗಂಗೆಯ ಉಲ್ಲೇಖವಿಲ್ಲದೆ ಇರುವುದಿಲ್ಲ. ಗಂಗೆ ಇಲ್ಲದೆ ಲೋಕವೇ ಇಲ್ಲ. ಗಂಗೆ ಇಲ್ಲದೆ ನಾಗರಿಕತೆಯೇ ಇಲ್ಲ. ವರಕವಿ ಬೇಂದ್ರೆಯನ್ನೇ ಗಂಗೆ ಕಾಡದೇ ಇರಲಿಲ್ಲ. ಇಂಥ ಗಂಗೆ ವಿಶ್ವದ ಶ್ರೇಷ್ಠವೂ ಶ್ರೀಮಂತವೂ ಆದಂಥ ಜನಾಂಗವೊಂದಕ್ಕೆ ನೀರುಣಿಸಿದಾಕೆ. ಸಾಕಿ ಸಲಹಿದಾಕೆ. ಸನಾತನ ಪರಂಪರೆಯನ್ನು ಪೋಷಿಸಿದಾಕೆ. ಹಿಂದೂ ಧರ್ಮದ ಶಾಖೆಗಳಾದ ಎಲ್ಲಾ ವಿದ್ಯೆಗಳೂ ಗಂಗಾತಟದಲ್ಲೇ ಹರಳುಗಟ್ಟಿದವು. ನೂರಾರು ಸಂತರು ಗಂಗಾತೀರದಲ್ಲಿ ಬೀಡುಬಿಟ್ಟು ಲೋಕಕಲ್ಯಾಣದ ವೃತವನ್ನು ಕೈಗೊಂಡಿದ್ದರು. ಹಾಗಾಗಿ ಒರ್ವ ಹಿಂದು ಭಾರತದ ಭೌಗೋಳಿಕ ಭೂಪಟದಲ್ಲಿ ಕಾಣುವ ಭಾಗಿರಥಿ ಎಂಬ ಹೊನಲನ್ನೂ ಮುಂದೆ ಸಿಗುವ ಅಲಕನಂದಾವನ್ನೂ ನೋಡಿ ಗಂಗಾ ಎಂದೇ ಪುಳಕಗೊಳ್ಳುತ್ತಾನೆ. ಗೋಮುಖ-ಗಂಗೋತ್ರಿ-ಉತ್ತರಕಾಶಿ ಹೆಸರುಗಳನ್ನು ಕೇಳಿದಾಗ ಆತನಿಗೆ ಪಾವನಗಂಗೆಯೇ ನೆನಪಿಗೆ ಬರುತ್ತದೆ.ಇಂದು ಹಿಂದೂ ತನ್ನ ಜೀವಮಾನದ ಆದಮ್ಯ ಬಯಕೆ ಕಾಶಿ ಯಾತ್ರೆ ಮಾಡಬೇಕೆಂದಿದ್ದರೆ ಅದಕ್ಕೆ ಗಂಗೆಯೇ ಮೂಲ ಕಾರಣ. ಗಂಗೆಯ ಅಸ್ತಿತ್ವದಿಂದಲೇ ವಿಶ್ವನಾಥ. ಗಂಗೆಯಿಂದಲೇ ಹರಿದ್ವಾರ. ಹಿಂದೂ ಸಂಸ್ಕೃತಿ ಬೆಳೆಯುತ್ತಾ, ಸಂಸ್ಕೃರಣೆಗೆ ಒಳಪಡುತ್ತಾ ಬಂದಲ್ಲೆಲ್ಲಾ ಗಂಗೆಯ ಪದಚಿಹ್ನೆಗಳು ಗೋಚರವಾಗುತ್ತವೆ.
ಇನ್ನು ಭಾರತಕ್ಕೆ ಬಂದ ಪ್ರವಾಸಿಗರ ಕಥನವನ್ನು ನೋಡಿದರಂತೂ ಗಂಗೆಯನ್ನು ಉಲ್ಲೇಖಿಸದವರು ತೀರಾ ಕಡಿಮೆ.ಮೆಗಾಸ್ತನೀಸನು " ಈ ಗಂಗಾ ನದಿ ಮೂಲದಲ್ಲಿ ಮೂವತ್ತು ಮಜಲು (?) ಅಗಲವಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಹರಿದು ಇದು "ಗಂಗರಿದೀ" ಎಂಬ ನಾಡಿನ ಬಳಿ ಸಮುದ್ರವನ್ನು ಸೇರುತ್ತದೆ. ಇದು ಜಲಪ್ರಯಾಣಕ್ಕೆ ಯೋಗ್ಯವಾಗಿದೆ. ಇಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಈ ಗಂಗರಿದೀ ಎಂಬ ನಾಡಿನಲ್ಲಿ ಅತ್ಯಂತ ಭಾರಿಯಾದ ಆನೆಗಳ ಸೈನ್ಯವಿದೆ.ಈ ಕಾರಣದಿಂದ ಯಾವ ರಾಜನೂ ಈ ರಾಜ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅಲೆಕ್ಸಾಂಡರನು ಇಡೀ ಏಷ್ಯಾ ದೇಶವನ್ನು ಗೆದ್ದರೂ ಗಂಗರಿದಿಯ ಮೇಲೆ ಯುದ್ಧಕ್ಕೆ ಹೋಗಲಿಲ್ಲ. ಏಕೆಂದರೆ ಅವನು ಗಂಗರಿದಿಯ ಲ್ಲಿ ನಾಲ್ಕು ಸಾವಿರ ಆನೆಗಳಿವೆ ಎಂದು ಕೇಳಿ ಮುಂದಕ್ಕೆ ಹೋಗುವ ಆಲೋಚನೆಯನ್ನೇ ಕೈಬಿಟ್ಟನು" ಎಂದು ಬರೆಯುತ್ತಾನೆ. ಇಲ್ಲಿ ಮೆಗಸ್ತಾನೀಸನು ಹೇಳಿರುವ ಗಂಗರಿದೀ ಎಂಬ ನಾಡು ನಂದಸಂತತಿಯವರು ಕ್ರಿ.ಪೂ. ೩೬೪ ರಿಂದ ೩೨೪ ರವರೆಗೆ ಆಳುತ್ತಿದ್ದ ನಾಡೆಂದೂ ಅಲೆಕ್ಸಾಂಡರನು ದಂಡಯಾತ್ರೆ ಬಂದಿದ್ದಾಗ. ಆ ಸಂತತಿಯ ಕೊನೆಯ ಅರಸನು ರಾಜ್ಯವಾಳುತ್ತಿದ್ದನೆಂದೂ ಅವನು ಶೇಖರಿಸಿದ ಅಪಾರ ನಿಧಿಯ ಕಾರಣದಿಂದ ಆತನಿಗೆ "ಧನ ನಂದ" ಎಂಬ ಹೆಸರು ಬಂದಿತ್ತೆಂದೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಹೀಗೆ ಗಂಗೆಯ ಹಿಂದೋಡಿದರೆ ಪುರಾಣಗಳು ಮಾತ್ರವಲ್ಲ ಇತಿಹಾಸದ ಹೊಸಬೆಳಕೊಂದು ಗೋಚರವಾಗುತ್ತಾ ಹೋಗುತ್ತವೆ. ನದಿಯೊಂದು ಸಮಾಜದ ಮೇಲೆ ಬೀರಿರುವ ಪರಿಣಾಮಕ್ಕೆ ಗಂಗೆ ಸೋದಾಹರಣ ಉದಾಹರಣೆಯಂತೆ ಭಾಸವಾಗುತ್ತವೆ. ಇಬನ್ ಬಟುಟಾ ಎಂಬ ಮೊರಾಕ್ಕೋದ ಪ್ರವಾಸಿ ಹೀಗೆ ಬರೆಯುತ್ತಾನೆ "ಗಂಗಾನದಿಯ ಸರಾಸರಿ ಅಗಲ ನೂರು ಮಜಲು(?) ಸರಾಸರಿ ಆಳ ೨೦ ಆಳು. ಈ ನದಿಯೂ ಇನ್ನೊಂದು ನದಿಯೂ ಸೇರುವ ಸ್ಥಳದಲ್ಲಿ ಪಾಟಲೀಪುತ್ರ ಎಂಬ ನಗರವಿದೆ" . ಸುಮಾರು ೧೩ನೇಶತಮಾನದಲ್ಲಿ ಭಾರತಕ್ಕೆ ಬಂದ ಈತ ಗಂಗಾನದಿಗೆ ಹಿಂದೂಗಳು ತೀರ್ಥಯಾತ್ರೆ ಹೋಗುತ್ತಾರೆ. ಅದನ್ನು ಪುಣ್ಯದದ ನದಿಯೆಂದು ಭಾವಿಸುತ್ತಾರೆ ಎನ್ನಲು ಮರೆಯುವುದಿಲ್ಲ. ನಿಕೋಲೋ ಡಿಕೋಟಿ ಎಂಬ ಇನ್ನೊಬ್ಬ ವಿದೇಶ ಪ್ರವಾಸಿ "ಗಂಗಾ ನದಿ ಎಷ್ಟೊಂದು ದೊಡ್ಡದೆಂದರೆ ಅದರ ಮಧ್ಯದಲ್ಲಿ ನಿಂತುಕೊಂಡರೆ ದಡವೇ ಕಾಣುವುದಿಲ್ಲ. ಕೆಲವು ಕಡೆ ಇದು ೧೫ ಮೈಲಿ ಅಗಲವಿದೆ" ಎಂದು ಬರೆಯುತ್ತಾನೆ. ವಿದೇಶಿ ಪ್ರವಾಸಿಗರ ಈ ಎಲ್ಲಾ ಉಲ್ಲೇಖವನ್ನು ನೋಡಿದರೆ ಭಾರತವನ್ನು ಪರಿಚಯಿಸುವ ಪ್ರಮುಖ ಲ್ಯಾಂಡ್ ಮಾರ್ಕ್ ಗಂಗೆಯೇ ಎನ್ನುವುದು ತಿಳಿಯುತ್ತದೆ. ಒಬ್ಬ ಪಾಶ್ಚಾತ್ಯ ಇತಿಹಾಸಕಾರ ಫ್ರಾನ್ಸಿನ ನೆಪೋಲಿಯನ್ನನ ಗುಣಗಾನ ಮಾಡುತ್ತಾ " ಗಂಗಾದಿಂದ ನೈಲ್‌ವರೆಗೂ ಇವನ ಹೆಸರು ಹರಡಿತ್ತು" ಎಂದು ಬಣ್ಣಿಸುತ್ತಾನೆ. ಹಾಗಾದರೆ ಪಾಶ್ಚಾತ್ಯರಿಗೆ ಭಾರತವೆಂದರೆ ಗಂಗೆಯೇ ಎಂಬುದಕ್ಕೆ ಇನ್ನೇನು ಪುರಾವೆಗಳ ಅಗತ್ಯವಿದೆ. ಗಂಗೆ ಇಲ್ಲದ ಭಾರತ ನಾಗರಿಕತೆಗಳ ತೊಟ್ಟಿಲಾಗುತ್ತಿರಲಿಲ್ಲ. ಗಂಗೆ ಇಲ್ಲದೆ ಭಾರತ ವಿಶ್ವಕ್ಕೆ ಬೆಳಕು ನೀಡುತ್ತಿರಲಿಲ್ಲ. ಗಂಗೆ ಇಲ್ಲದ ಭಾರತ ವಿಶ್ವವನ್ನು ತನ್ನತ್ತ ಸೆಳೆಯುತ್ತಿರಲಿಲ್ಲ. ಇದು ಜೀನದಿಯಷ್ಟೇ ಅಲ್ಲ. ದೇಶದ ರಾಷ್ಟ್ರೀಯ ನದಿ.
ಇಂಥ ಗಂಗೆ ಭಗೀರಥ ಭುವಿಗೆ ತಂದಲ್ಲಿಂದ ದೇಶಕ್ಕೆ ನೀರುಡಿಸುತ್ತಾ ಪೂಜಿಸಿಕೊಳ್ಳುತ್ತಾ ಹರಿಯುತ್ತಿದ್ದಳು. ತನ್ನ ತಟದ ರಾಜಕೀಯ ಸ್ಥಿತ್ಯಂತರಗಳಿಗೆ ಗಂಗೆ ಸಾಕ್ಷಿಯಾಗುತ್ತಾ ಹರಿದಳು. ಮೌನವಾಗಿ ಆಲಿಸಿದಳು, ತಣಿಸಿದಳು, ಹರಸಿದಳು, ಲೋಕನಿಯಮಕ್ಕೆ ಬದ್ದವಾಗಿ ಕೊನೆಗೆ ಸಾಗರ ಸೇರಿದಳು.ಸ್ವಾತಂತ್ರ್ಯ ಪೂರ್ವದವರೆಗೂ ಹೀಗೆ ಹರಿಯುತ್ತಾ ಬಂದ ಗಂಗೆ ಸ್ವಾತಂತ್ರ್ಯ ಬಂದ ತಕ್ಷಣ ಭೀತಳಾದಳು. ಸಗರನ ಮಕ್ಕಳಿಗೆ ಸದ್ಗತಿ ಒದಗಿಸಿದ ಗಂಗೆ, ಶರಶೈಯೆಯ ಭೀಷ್ಮನಿಗೆ ಕೊನೆ ಗುಟುಕು ನೀಡಿದ ಗಂಗೆ ಭೀತಳಾಗಲು ಕಾರಣರಾರು?
ಇನ್ನಾರು ಇರಲು ಸಾಧ್ಯ?ಅದೇ ಓಲ್ಡ್ ಕಾಂಗ್ರೆಸ್. ರಾಷ್ಟ್ರದ ಸಕಲ ಭೀತಿಗೂ ಏಕೈಕ ಕಾರಣವಾದ ಓನ್ಲಿ ಒನ್ ಕಾಂಗ್ರೆಸ್. ಅದೇ ನೆಹರೂ, ಅದೇ ವಂಶಾವಳಿ, ಅದೇ ಹಾದರ, ಅದೇ ಎಡವಟ್ಟು ಗಳು ಗಂಗೆಗೂ ಅದರ ಬಿಸಿ ತಟ್ಟಿತು. ಸ್ವಾತಂತ್ರ್ಯ ಬಂದಾಗಿತ್ತು. ಕುಳಿತ ಕುರ್ಚಿಯಲ್ಲಿ ಏನೋ ಒಂದನ್ನು ಮಾಡಬೇಕಿತ್ತು. ಅದಕ್ಕಾಗಿ ನೆಹರೂ ಸಮಾಜವಾದ ಎಂದರು. ರಷ್ಯಾಪ್ರಣೀತ ಆರ್ಥಿಕತೆ ಎಂದು ಸಿಗರೇಟಿನ ಹೊಗೆಯಲ್ಲೇ ನಕ್ಷೆ ರಚಿಸಿಬಿಟ್ಟರು. ಅದುವರೆಗೆ ಗಂಗಾತಟದಲ್ಲಿ ಭಾರತದ ಸುಮಾರು ಶೇ. ೫೦ರಷ್ಟು ಪ್ರಮಾಣದ ರೈತರು ಹಸಿರು ಬೆಳೆಯುತ್ತಿದ್ದರು. ನೆಹರೂ ಅವರನ್ನೆಲ್ಲಾ ಒಕ್ಕಲೆಬ್ಬಿಸಿದರು. ಕಾರ್ಖಾನೆಗಳಿಗೆ ಪ್ರಾಶಸ್ತ್ಯ ಕೊಡಲಾಯಿತು. ಗಂಗಾತಟದ ಬಯಲು, ಸಮೃದ್ಧ ನೀರು ನೋಡಿದ ಯೋಜಕರು ಇದು ತಕ್ಕ ಸ್ಥಳ ಎಂದೇ ನಿರ್ಧರಿಸಿಬಿಟ್ಟರು. ಇನ್ನುಳಿದುದೆಲ್ಲಾ ಹೊಗೆ, ತ್ಯಾಜ್ಯ, ಕಸ-ಕಡ್ಡಿ ಮಾತ್ರ. ನೆಹರೂ ಅಷ್ಟಕ್ಕೇ ನಿಲ್ಲಲಿಲ್ಲ.ಗಂಗೆಯಿಂದ ದೇಶ ಬೆಳಗಿಸಬೇಕಿತ್ತು. ಉತ್ತರದಲ್ಲಿ ಗಂಗಾಮೂಲದ ಸಮೀಪದಲ್ಲೇ ಅಣೆಕಟ್ಟುಗಳನ್ನು ಕಟ್ಟಿದರು. ಗಂಗೆ ರಭಸದಿಂದ ಹರಿಯುವ ಮನೇರಿ ಎಂಬಲ್ಲಿ ಮತ್ತು ಅದರ ಅನಂತರ ಸಿಗುವ ತೇಹ್ರೀ ಎಂಬಲ್ಲಿ ನದಿಯನ್ನು ಕೊಂಚ ತಿರುಗಿಸಿ ಧುಮುಕಿಸಿ ಬೆಳಕು ಸೃಷ್ಟಿಸಲಾಯಿತು. ಗಂಗೆಯೇನೋ ಇಳಿದುಬಂದಳು. ಆದರೆ ಮುಂದೆಂದೂ ಆಕೆ ಆ ಪ್ರದೇಶಗಳ ಚರಾಚರಗಳನ್ನು ತಣಿಸಲಿಲ್ಲ. ಕಾಂಗ್ರೆಸಿಗರು ಆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದರು. ಸೂಕ್ಷ್ಮ ಗಂಗೆಯಲ್ಲಿ ಸ್ಪೋಟಗಳಾದವು. ಇಂದು ನೆಹರೂ ಇಲ್ಲ. ಅವರಿಗೆ ಸಗರನ ಮಕ್ಕಳಂತೆ ಸದ್ಗತಿ ಸಿಕ್ಕಿರುವುದೂ ಸಂಶಯವೇ. ಆದರೆ ಮುಂದೆ ವೊಮ್ಮಗ ರಾಜೀವ್ ಗಾಂಧಿ ಕೊಳಕು ಗಂಗೆಯನ್ನು ಮತ್ತೆ ಶುಭ್ರ ಸಲಿಲ ಮಾಡುವೆ ಎಂಬಂತೆ ಪೋಸುಕೊಟ್ಟರು.ಏಕೆಂದರೆ ಗಂಗೆ ಇವಳೇ ಏನು ಎಂಬಷ್ಟು ಬದಲಾಗಿಹೋಗಿದ್ದಳು. ಎಲ್ಲವೂ ರಾಜೀವ್ ಅಜ್ಜನ ಫಲ. ೧೯೮೪ ರಲ್ಲಿ ಇದೇ ರಾಜೀವ್ ಗಾಂಧಿ ಗಂಗಾ ಕಾರ್ಯಪಡೆ ಯನ್ನು ಸ್ಥಾಪಿಸಿದರು. ಕೋಟಿಗಟ್ಟಲೆ ಹಣವನ್ನು ಸುರಿದರು. ವಿಪರ್ಯಾಸ ಎಂದರೆ ಈ ಕಾರ್ಯಪಡೆಗೆ ತನ್ನ ಕಾರ್ಯದ ಬಗೆಯೇ ತಿಳುವಳಿಕೆ ಇರಲಿಲ್ಲ. ಎಡವಟ್ಟು ಮಂತ್ರಿಗಳು " ಗಂಗೆಯ ಮಾಲಿನ್ಯಕ್ಕೆ ಅವ್ಯವಸ್ಥಿತ ಘಾಟಿಗಳೇ ಮೂಲ ಕಾರಣ" ಎಂದು ಘೋಷಿಸಿ ಘಾಟಿಗಳ ಆಧುನೀಕರಣ ಮಾಡಲಾಯಿತು. ಹಲವು ಘಾಟ್‌ಗಳು ಸ್ವರೂಪ ಬದಲಿಸಿಕೊಂಡವು. ಇದಕ್ಕೆಂದೇ ವಾರಣಾಸಿ ಯೋಜನೆಯನ್ನು ಜಾರಿಗೆ ತರಲಾಯಿತು. ಗಂಗೆ ಮತ್ತಷ್ಟು ಕೊಳಕಾಗಿ ಹರಿದಳು.ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಮಾತ್ರ ಪೋಲಾಯಿತು. ಈ ಸಾವಿರ ಕೋಟಿಗೆ " ಗಂಗೆಗೆ ಮಾಡುವ ಅವಮಾನ , ಅನೈರ್ಮಲ್ಯ ರಾಷ್ಟ್ರಕ್ಕೆ ಮಾಡುವ ಅವಮಾನ"ಎಂದು ಘೋಷಿಸಲು ಸಾಧ್ಯವಾಗಲಿಲ್ಲ.ಹೀಗೆ ರಾಜೀವ್ ಗಾಂಧಿಗೂ ಕೂಡ ಅಜ್ಜನಿಗೆ ಸದ್ಗತಿ ಒದಗಿಸಲು ಸಾಧ್ಯವಾಗಲಿಲ್ಲ.
ಗಂಗಾ ಮಾಲಿನ್ಯದ ಬಗ್ಗೆ ಕೆಲವು ವರದಿಗಳನ್ನು ನೋಡಿದರೆ ಧಿಗ್ಭ್ರಮೆಯಾಗುತ್ತದೆ. ೧೯೯೮ರ ಮಾನವಾಭಿವೃದ್ಧಿ ವರದಿಯ ಪ್ರಕಾರ ೨೯ ನಗರಗಳು, ೭೦ ಪಟ್ಟಣಗಳು ಮತ್ತು ಸಾವಿರಾರು ಗ್ರಾಮಗಳು ಗಂಗಾತೀರದಲ್ಲಿವೆ. ಇವುಗಳಿಂದ ಪ್ರತೀವರ್ಷ ಗಂಗೆಗೆ ೧೩ಬಿಲಿಯನ್ ಲೀಟರ್‌ನಷ್ಟು ಕೊಳಚೆ ನೇರವಾಗಿ ಗಂಗೆಗೆ ಸೇರುತ್ತಿದೆ. ಇದಲ್ಲದೆ ೨೬೦ ಮಿಲಿಯನ್ ಲೀಟರ್‌ನಷ್ಟು ಕಾರ್ಖಾನೆಗಳ ಗಟ್ಟಿಯಾದ ತ್ಯಾಜ್ಯ ಗಂಗೆಯನ್ನು ತುಂಬಿಸುತ್ತಿದೆ. ಅವುಗಳಲ್ಲಿ ೬ಮಿಲಿಯನ್ ಟನ್ನುಗಳಷ್ಟು ರಾಸಾಯನಿಕಗಳು ಮತ್ತು ೯೦೦೦ ಟನ್ನುಗಳಷ್ಟು ಕೀಟನಾಶಕಗಳಿವೆ. ೨೦೦೭ರಲ್ಲಿ ವರ್ಲ್ಡ್ ವೈಲ್ಡ್ ಲೈಫ್ ಫೌಂಡೇಶನ್ ನ ಅಧ್ಯಯನ ವರದಿಯ ಪ್ರಕಾರ ವಿಶ್ವದ ಮೊದಲ ಹತ್ತು ಮಾಲಿನ್ಯಕಾರಕ ಮತ್ತು ಅಪಾಯಕಾರಕ ವಾತಾವರಣದ ನದಿಗಳಲ್ಲಿ ಗಂಗೆ ಮೊದಲ ಸ್ಥಾನದಲ್ಲಿದೆ.ಸದ್ಯಕ್ಕಂತೂ ಗಂಗೆ ಶುದ್ಧವಾಗುವ ಯೋಜನೆಗಳು ಕಾಣುತ್ತಿಲ್ಲ. ಈಗ ಭಾರತ ಸರಕಾರದ ಅಧೀನದಲ್ಲಿರುವ National Ganga river basin authority(NGRBA) ಎಂಬ ಮಂಡಳಿಯೊಂದಿದೆ.ಇದರಲ್ಲಿ ಅಧಿಕಾರಿಗಳದ್ದೇ ಆಟಾಟೋಪ. ಸರಕಾರಕ್ಕೆ ಇದು ಇದೆಯೋ ಸತ್ತಿದೆಯೋ ಎಂಬುದು ಗೊತ್ತಿಲ್ಲ. ಇನ್ನು ಅಧಿಕಾರಿಗಳು ಒಂದಿಷ್ಟು ವಿದ್ಯಾರ್ಥಿಗಳಿಂದ ಸರ್ವೆ ಮಾಡಿಸಿ "ಗಂಗಾ ತಟದ ಅಭಿವೃದ್ಧಿಗೆ ಪರಿಸರ ಸ್ನೇಹಿ ಮಾರ್ಗಗಳು" ಎಂಬ ವರದಿಯನ್ನಷ್ಟೇ ಸಿದ್ಧಪಡಿಸಬಹುದು. ಗಂಗೆ ನಾರುತ್ತಲೇ ಇರಬೇಕು. ಸ್ವಾಮಿ ನಿಗಮಾನಂದರಂತಹವರು ಬಲಿದಾನಮಾಡುತ್ತಲೇ ಇರಬೇಕು.
ಒಂದು ವೇಳೆ ಭಗೀರಥನ ಜಾಗದಲ್ಲಿ ಘೋರಿಯೋ ಘಜನಿಯೋ, ಬಾಬರನೋ ಇದ್ದಿದ್ದರೆ, ಗಂಗೆ ಅರೇಬಿಯಾದಲ್ಲೇನಾದರೂ ಹುಟ್ಟಿ ಇತ್ತ ಹರಿದು ಬರುವಂತಿದ್ದರೆ ಸರಕಾರಗಳು ನದಿಪಾತ್ರದುದ್ದಕ್ಕೂ ಉದ್ಯಾನವನ್ನೇ ನಿರ್ಮಿಸಿಬಿಡುತ್ತಿದ್ದರು.ಕೆಲವರ್ಷಗಳ ಹಿಂದೆ ತಾಜ್‌ಮಹಲಿನ ಬಿಳುಪಿಗೆ ಧಕ್ಕೆಯಾಗುವುದೆಂದು ಯಮುನಾತಟದ ಕಾರ್ಖಾನೆಗಳನ್ನು ಮುಚ್ಚಿಸಲಾಗಿತ್ತು.
ತಾಜ್‌ಮಹಲನ್ನು ಒರೆಸಬಹುದು. ಆದರೆ ಗಂಗೆಯನ್ನು ಸೋಸಲಾಗುವುದಿಲ್ಲವಲ್ಲ.

No comments: