Tuesday, October 4, 2011

ಜಗತ್ತೇ ಜಾಹೀರಾತಿನ ಬುಟ್ಟಿ: ಜಗತೀಕರಣಕ್ಕೆ ಇನ್ನಾವ ಅಡ್ಡಿ?


೯೦ರ ದಶಕದಲ್ಲಿ ಜಗತ್ತು ಮಹಾನ್ ಸ್ಥಿತ್ಯಂತರಕ್ಕೆ ಒಳಪಟ್ಟಾಗ ಮೊದಲು ಕಣ್ಣಿಗೆ ಕಂಡಿದ್ದು ಆರ್ಥಿಕತೆ ಎಂಬ ಕೆರಳಿದ ಗೂಳಿ. ಅನಂತರ ಈ ಸ್ಥಿತ್ಯಂತರ ಆರ್ಥಿಕತೆಗೆ ಮಾತ್ರ ಸೀಮಿತವಾದುದಲ್ಲ ಎಂಬುದನ್ನು ಜಗತ್ತು ಬಹುಬೇಗ ಅರ್ಥಮಾಡಿಕೊಂಡಿತು. ಈ ಸ್ಥಿತ್ಯಂತರ ಅಡುಗೆ ಮನೆಯಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ ,ಕಿಂಡರ್ ಗಾರ್ಡನ್‌ನಿಂದ ಹಿಡಿದು ಯುನಿವರ್ಷಿಟಿಯವರೆಗೆ, ದಿನಸಿ ಅಂಗಡಿಗಳಿಂದ ಹಿಡಿದು ಕಾಣದ ಧಣಿಗಳ ಎಂ.ಎನ್.ಸಿಗಳ ವರೆಗೆ ಅದರ ಬಾಹುಗಳು ವ್ಯಾಪಿಸಿ ಕಾವೇರಿ ತಟದ ಬೋರೇಗೌಡನೂ ಅಮೇಜಾನ್ ತೀರದ ಟಾಮ್-ಡಿಕ್-ಹ್ಯಾರಿಗಳೆಲ್ಲರೂ ಒಂದೇ ಏಟಿಗೆ ತತ್ತರಿಸಿಹೋಗಿದ್ದರು. ಒಟ್ಟಿಗೇ ಸಾವರಿಸಿಕೊಂಡಿದ್ದರು. ಎಲ್ಲೆಲ್ಲೂ ಪ್ರವಾಹಕ್ಕೆ ವಿರುದ್ಧವಾಗಿ ಈಜಲು ಹೋದವರು ಒಂದೇ ತೆರನಾಗಿ ಮುಳುಗಿಹೋಗಿದ್ದರು. ಹೀಗೆ ಕದಡಿದ ವಿಶ್ವ ತಿಳಿತಿಳಿಯಾಯಿತು ಎಂದುಕೊಂಡಾಗ ಎಲ್ಲವೂ ಬದಲಾಗಿಹೋಗಿದ್ದವು. ಬೀದಿಗಳು ಬದಲಾಗಿದ್ದವು. ಮನುಷ್ಯ ವರ್ತನೆಗಳು ಬದಲಾಗಿದ್ದವು. ಕೆಲಸಗಳು ಬದಲಾದವು. ಬುದ್ದಿಗಳು ಬದಲಾಗಿದ್ದವು. ಎಲ್ಲವೂ ವ್ಯವಹಾರ. ಶುದ್ಧ ವ್ಯವಹಾರಗಳು ಎಲ್ಲೆಡೆ ವ್ಯಾಪಿಸಿದ್ದವು. ಇದ್ದದ್ದನ್ನು ಅಳಿಸಿಹಾಕಲು ಇಷ್ಟು ಸಾಕಲ್ಲ? ಈ ರೀತಿ ಬದಲಾದ ಪರಿಸ್ಥಿತಿಗೆ ವಿಧ್ವಾಂಸರು ಜಾಗತಿಕರಣ ಎಂಬ ಹೆಸರನ್ನು ಕೊಟ್ಟುಕೊಂಡರೂ ಬದಲಾದ ವಿಶ್ವಕ್ಕೆ ಮರುನಾಮಕರಣವಾಗಲಿಲ್ಲ.
ಇಂಥ ಪರಿಸ್ಥಿತಿಯ ಬಗ್ಗೆ ಜಗತ್ತಿನಲ್ಲಿ ಹಲವು ಸಾಹಿತ್ಯಗಳು ಒಮ್ಮೆಲೆ ಬಂದವು. ಅವು ದಿಗ್ಭ್ರಾಂತಿಯಿಂದ ಸೃಷ್ಟಿಯಾದ ಸಾಹಿತ್ಯಗಳು. ಏಕೆಂದರೆ ಆರ್ಥಿಕ ಧಾತುವಿನಿಂದ ಉಂಟಾದ ಸ್ಥಿತ್ಯಂತರ ಸಮಾಜವನ್ನು ಒಂದೇ ಸಮನೆ ಬದಲು ಮಾಡುತ್ತಿತ್ತು. ಇದನ್ನು ಪಾಶ್ಚಾತ್ಯ ವಿಧ್ವಾಂಸರು ಹಲವು ಕೋನಗಳಲ್ಲಿ ಸೆರೆಹಿಡಿದಿದ್ದಾರೆ. ಸರ್ವಕ್ಷೇತ್ರಗಳಿಂದಲೂ ಜಾಗತೀಕರಣದ ಸ್ವರೂಪವನ್ನೂ ಪರಿಣಾಮವನ್ನೂ ವಿಮರ್ಶಿಸಿದ್ದಾರೆ. ಜಗತ್ತೇ ಒಂದು ಜಾಹೀರಾತಿನ ಬುಟ್ಟಿಯಾಗಿರುವಾಗ ಅದನ್ನು ಮುಟ್ಟದೇ ತಾನೇ ಹೇಗಿರುವುದು? ಈ ನೆಲೆಯಲ್ಲಿ ಬಂದ ಹಲವಾರು ಪುಸ್ತಕಗಳಲ್ಲಿ ಒಂದು ಪುಸ್ತಕ ಅಲೆನ್ ಬೈರ್ನರ್ ಎಂಬಾತ ಬರೆದ ಸ್ಪೋರ್ಟ್ಸ್, ನೇಶನಲಿಸಂ, ಗ್ಲೋಬಲೈಸೇಶನ್ ; ಯುರೋಪಿಯನ್ ಅಂಡ್ ನಾರ್ಥ್ ಅಮೆರಿಕನ್ ಪರ್ಸ್ ಪೆಕ್ಟಿವ್ ಎಂಬ ಪುಸ್ತಕ. ಈ ಅಲೆನ್ ಬೈರ್ನರ್ ಎಂಬಾತ ಉತ್ತರ ಐರ್ಲೆಂಡ್ ನವನಂತೆ. ಆತ ಜೋರ್ಡಾನ್ ಟೌನ್ ಎಂಬಲ್ಲಿನ ಯುನಿವರ್ಷಿಟಿ ಆಫ್ ಅಲ್ಷ್ಟರ್ ನಲ್ಲಿ ಕ್ರೀಡೆ ಮತ್ತು ಅನ್ವಯಿಕ ವೈದ್ಯ ಶಾಸ್ತ್ರದ ಪ್ರೊಫೇಸರನಂತೆ. ಓದುಗರಿಗೆ ಇದೊಂದು ವಿಲಕ್ಷಣ ಪುಸ್ತಕದಂತೆನಿಸುತ್ತದೆ. ಕ್ರೀಡಾ ಜಗತ್ತಿನ ಮತ್ತೊಂದು ಲೋಕವನ್ನು ನೋಡುತ್ತಾ ಹೋಗುವಾಗ ವಿಲಕ್ಷಣತೆಯೇ ಮೊದಲು ಎದುರಾಗುವ ಆಗಂತುಕ ಎಂಬ ವಾಸ್ತವದೊಂದಿಗೆ ಇದರ ವಾಚನವನ್ನು ಆರಂಭಿಸಬೇಕು. ಕ್ರೀಡೆಯನ್ನು ಮೀಮಾಂಸಕ ದೃಷ್ಟಿಯಿಂದ ನೋಡಬೇಕಾದ ಸಂಬಂಧಕ್ಕೂ ಸಿದ್ದವಾಗಿರಬೇಕು. ಆದರೆ ಇಲ್ಲಿನ ಯಾವ ಸಂಗತಿಯನ್ನೂ ಅಪ್ರಸ್ತುತ , ಅವೈಜ್ಞನಿಕ ಎನ್ನುವ ಹಾಗಿಲ್ಲ. ಕ್ರೀಡೆ,ರಾಷ್ಟ್ರೀಯತೆ ಮತ್ತು ಜಾಗತೀಕರಣ ಈ ಮೂರು ಭಿನ್ನ ಭಿನ್ನ ನೆಲೆಯ ಬೇರೆ ಬೇರೆ ಸಂಗತಿಗಳು. ಪ್ರತ್ಯೇಕ ಪ್ರತ್ಯೇಕವಾಗಿ ನೋಡಿದರೆ ಅವವು ಮಹತ್ತ್ವದ ಸಂಗತಿಗಳೇ. ತನ್ನ ಹಾದಿಯಲ್ಲಿ ತಾನು ಪಯಣಿಸುವ ಪ್ರತ್ಯೇಕ ಹಳಿಗಳ ರೈಲುಗಳಂತೆ. ಆದರೆ ಈ ಮೂರನ್ನು ಜಾಗತೀಕರಣದ ಸಂದರ್ಭದಲ್ಲಿ ನೋಡಿದಾಗ ಅವು ಪರಸ್ಪರ ಅವಿನಾಭಾವಿಯೂ ಪೂರಕವಾದದೂ ಎಂದು ತಿಳಿಯುತ್ತದೆ. ಅಂದರೆ ಈ ಮೂರರ ಒಳಗೂ ಒಂದು ಸಮಾಜ, ಒಂದು ಜನಾಂಗ, ಒಂದು ಇತಿಹಾಸ, ಒಂದು ಪರಿಸ್ಥಿತಿ, ಒಂದು ಅವಸ್ಥೆ ಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಪುಸ್ತಕ ಕೂಡ ಇಂಥ ಸಂಗತಿಗಳನ್ನೇ ಬಿಚ್ಚಿಡುತ್ತಾ ಸಾಗುತ್ತದೆ.
ಕ್ರೀಡೆ ಮನುಷ್ಯನ ಚೈತನ್ಯ. ಅಥವಾ ಇನ್ನಾವುದೋ ಹೆಸರಿನ ಅಂತರಂಗದ ಪುಟಿತ. ಅಥವಾ ಮನೋರಂಜನೆಯ ಪ್ರಕಟೀಕರಣದ ಒಂದು ಮಾಧ್ಯಮ. ಅಥವಾ ಬಿಡುಗಡೆಯ ಮಾರ್ಗ. ಆಹಾರ ನಿದ್ರೆಗಳಂತೆ ಕ್ರೀಡೆಗಳಿಗೆ ಒಡ್ಡಿಕೊಳ್ಳದ ಮನುಷ್ಯನಿರಲಿಕ್ಕಿಲ್ಲ. ಒಡ್ಡಿಕೊಂಡಿಲ್ಲವೆಂದರೆ ಆತ ಮನುಷ್ಯನೇ ಅಲ್ಲ. ಕ್ರೀಡೆ ಮನುಷ್ಯನ ಸಹಜ ಬಯಕೆ. ವ್ಯಕ್ತಿ ಬೆಳೆದಂತೆ ಕ್ರೀಡೆ ಕೂಡ ಬೆಳೆಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಸಮುದಾಯವಾಗುತ್ತಾ ಹೋದಂತೆ ವ್ಯಕ್ತಿ ಕ್ರೀಡೆಯನ್ನು ಪ್ರೀತಿಸುತ್ತಾ ಹೋಗುತ್ತಾನೆ. ಈ ಪ್ರೀತಿಸುವಿಕೆ ಅಪ್ಪಟ ಭಾವನಾತ್ಮಕತೆ. ಅದು ಉದ್ದೀಪನ ಮತ್ತು ಪ್ರಚೋದಕ ಗುಣವುಳ್ಳದ್ದು. ಆದ್ದರಿಂದ ವಿಷಯವಿರುವುದೇ ಇಲ್ಲಿ. ಹಾಗೆಯೇ ರಾಷ್ಟ್ರೀಯತೆಯೆಂಬುದೂ ಕೂಡ. ಸಿದ್ಧಾಂತಗಳ ಚೌಕಟ್ಟು ಇರಲಿ ಅಥವಾ ಇಲ್ಲದಿರಲಿ ರಾಷ್ಟ್ರೀಯತೆಯ ಮೂಲ ತುದಿಯನ್ನು ಹುಡುಕಿದಾಗ ಅಲ್ಲಿ ಭಾವನಾತ್ಮಕತೆಗಳಿಲ್ಲದೇ ಇರುವುದಿಲ್ಲ. ಮತ್ತು ಆ ಭಾವುಕತೆಯ ಮತ್ತೊಂದು ತುದಿ ಭ್ರಹತ್ತಾಗಿ ಬೆಳೆದು ವಿಶಾಲ ವ್ಯಾಪ್ತಿಯನ್ನು ಬೆಳೆಸಿಕೊಂಡಿರುವುದನ್ನು ಕಾಣುತ್ತೇವೆ. ಕ್ರೀಡೆಯಂತೆ ರಾಷ್ಟ್ರೀಯತೆ ಕೂಡ ಸಾಮುದಾಯಿಕವಾಗಿ ಅತ್ಯಂತ ಪ್ರಬಲ ಸಂಗತಿ. ಅದೂ ಕೂಡ ಉದ್ದೀಪಕ, ದಿಕ್ಕು ತಪ್ಪಿದರೆ ಪ್ರಚೋದಕ. ಎರಡಕ್ಕೂ ಭಾವನೆಗಳೇ ಮೂಲಬೇರುಗಳು. ಹೀಗೆ ಕ್ರೀಡೆ ಮತ್ತು ರಾಷ್ಟ್ರೀಯತೆಗಳು ತಾವು ಪರಸ್ಪರ ಎದುರಾಗುವುದಕ್ಕೂ ಮುನ್ನವೇ ಬಾಧರಾಯಣ ನಂಟಸ್ಥನವೊಂದನ್ನು ಹೊಂದಿರುತ್ತದೆ. ಹಾಗಾದರೆ ಅವೆರಡೂ ಒಗ್ಗೂಡಿದಾಗ...? ಹೀಗೊಂದು ಸಮ್ಮಿಲನ ವಿಶ್ವದ ಹಲವು ಇತಿಹಾಸವನ್ನು ನಿರ್ಮಿಸಿದ್ದಿದೆ. ಕ್ರೀಡೆ ಗಡಿರೇಖೆಗಳ ಹಂಗಿಲ್ಲದೆ, ಯುದ್ದರಂಗಕ್ಕೆ ಧಾವಿಸದೆ, ಅಧಿಕಾರವನ್ನು ನಡೆಸದೆ, ಕಿರೀಟಗಳ ಹಂಗಿಲ್ಲದೆ, ಸಮಾಜವನ್ನು ಒಗ್ಗೂಡಿಸಬಲ್ಲದು ಎಂಬುದನ್ನು ಕೂಡ ಜಗತ್ತು ಗಮನಿಸಿದೆ. ಕೇವಲ ಭಾವನಾತ್ಮಕ ಪರಿಕಲ್ಪನೆಯೊಂದು ತತ್ತ್ವ ಸಿದ್ಧಾಂತಗಳ ಹುಟ್ಟಿಗೆ ನಾಂದಿಯಾಗಬಹುದು ಎಂಬುದನ್ನು ಕಂಡಿದ್ದೇವೆ. ಅದು ಕ್ರೀಡೆಯ ಗುಣ. ಹೀಗೆ ಪರಸ್ಪರ ಪೂರಕವಾಗಿರುವ ಸಂಗತಿಗಳು ಅಪಾಯಕರವೂ ಆಗಿರುತ್ತವೆನ್ನುವುದನ್ನೂ ಹೇಳಲು ಅಲೆನ್ ಬೈರ್ನರ್ ಮರೆಯುವುದಿಲ್ಲ. ಯುರೋಪಿನ ಮತ್ತು ಅಮೇರಿಕಾ ಖಂಡಗಳ ಕ್ರೀಡಾ ಇತಿಹಾಸವನ್ನು ಉಲ್ಲೇಖಿಸುವ ಅವರು ಆಯಾಯ ದೇಶಗಳ ರಾಷ್ಟ್ರೀಯತೆ ಮತ್ತು ಕ್ರೀಡಾಗುಣಗಳನ್ನು ಉದಾಹರಿಸುತ್ತಾರೆ. ವಿ ಹೇಟ್ ಇಂಗ್ಲೆಂಡ್ ಎನ್ನುತ್ತಲೇ ಕ್ರೀಡಾಂಗಣಕ್ಕಿಳಿಯುವ ಸ್ಕಾಟ್‌ಲ್ಯಾಂಡ್ ಆಟಗಾರರ ಮಾನಸಿಕತೆಯನ್ನೂ ರಾಷ್ಟ್ರೀಯತೆಯ ಹಂಗಿಲ್ಲದ ಕ್ಲಬ್ ತಂಡಗಳ ಬಗ್ಗೆಯೂ ಹೇಳುತ್ತಾರೆ. ಅಂತಿಮವಾಗಿ ಅವರ ಆಶಯವೆಂದರೆ ಜಾಗತೀಕರಣದ ಸಂದರ್ಭದಲ್ಲಿ ಈ ಎಲ್ಲಾ ಸಂಗತಿಗಳು ದಿಕ್ಕು ತಪ್ಪುತ್ತಿವೆ ಎನ್ನುವುದು. ಒಂದೇ ಮೂಲಧಾತುಗಳ ನ್ನು ಹೊಂದಿರುವ ಎರಡು ಸಂಗತಿಗಳು ತಮ್ಮ ಧ್ಯೆಯೋದ್ಧೇಶವನ್ನು ಮರೆತಿವೆ ಮತ್ತು ಜಾಗತೀಕರಣ ಕ್ರೀಡಾ ತತ್ತ್ವವನ್ನು ಮರೆಮಾಚಿಬಿಟ್ಟಿದೆ ಎಂಬ ಅಭಿಪ್ರಾಯ ಅಲೆನ್ ಬೈರ್ನರ್ ಅವರದ್ದು.
ಯುರೋಪು ಮತ್ತು ಅಮೆರಿಕಾಗಳ ಸಂಗತಿ ಹಾಗಿರಲಿ. ಕ್ರೀಡೆಗೇಕೆ ಸಿದ್ದಾಂತಗಳ ಚೌಕಟ್ಟುಗಳು ಎಂಬ ಅಭಿಪ್ರಾಯ ಬರುವ ಹೊತ್ತಿಗೆ ಕಪಿಲ್ ದೇವ್‌ನ ಭಾಷಣ ನೆನಪಾಗುತ್ತವೆ.ನಿಜಕ್ಕೂ ಏನು ತಪ್ಪಿತ್ತು ಕಪಿಲನ ಭಾಷಣದಲ್ಲಿ?ಭಾರತೀಯ ಕ್ರಿಕೆಟ್ ತಂಡದ ಇಂಗ್ಲೆಂಡ್ ತಂಡದ ಪ್ರವಾಸದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿಯನ್ನು ಪ್ರಾಮಾಣಿಕ ಕ್ರೀಡಾಭಿಮಾನಿಯೊಬ್ಬ ಒಪ್ಪಬಹುದೇ? ತೆಂಡೂಲ್ಕರನ ೧೦೦ನೇ ಶತಕದ ಮುಂದೆ ತಂಡದ ಪ್ರದರ್ಶನವೇ ಗೌಣವಾಗುವುದಾದರೆ ಇದೆಂಥಾ ಕ್ರೀಡೆ? ಎಂಥಾ ಅಭಿಮಾನ? ತೆಂಡೂಲ್ಕರ ಅದೆಷ್ಟೇ ಮಹಾನ್ ಆಟಗಾರನಿರಬಹುದು. ಆದರೆ ತಂಡದೊಳಗೆ ಆತನೂ ಒಬ್ಬ ಸದಸ್ಯ. ತಂಡವಿಲ್ಲದೆ ತೆಂಡೂಲ್ಕರನಿಲ್ಲ. ಆದರೆ ತೆಂಡೂಲ್ಕರನಿಲ್ಲದೆಯೂ ತಂಡವಿರಬಹುದು ಎಂಬುದು ಸಾಮಾನ್ಯವಾದ ಅಭಿಪ್ರಾಯವಲ್ಲವೇ? ಕ್ರೀಡೆಯಲ್ಲಿ ವ್ಯಯಕ್ತಿಕ ಅಂಕಿ ಅಂಶಗಳೇ ಕ್ರೀಡೆಗಳಿಗಿಂತ ಶ್ರೇಷ್ಠವಾಗುವುದರ ಹಿಂದೆ ಅಲೆನ್ ಬೈರ್ನರನ ವಾದವಿದೆ. ಜಾಗತೀಕರಣದ ನೆರಳಿದೆ. ಅಷ್ಟಕ್ಕೂ ಭಾರತದಲ್ಲಿ ಕ್ರಿಕೇಟು ಇಷ್ಟೊಂದು ಅಬ್ಬರದಿಂದ ನಿಲ್ಲಲಾರಂಭಿಸಿರುವುದು ಇದೇ ಜಾಗತೀಕರಣದ ಅನಂತರವೇ. ಸಭ್ಯರ ಆಟವಾಗಿದ್ದ ಕ್ರಿಕೇಟು ಇಂದು ಎಲ್ಲಾ ಹುಳುಕುಗಳನ್ನು ಹೊತ್ತುಕೊಂಡಿರುವುದಕ್ಕೆ ಜಾಗತೀಕರಣವನ್ನು ದೂರದೆ ವಿಧಿಯಿಲ್ಲ. ಏಕೆಂದರೆ ಜಗತ್ತೇ ಜಾಹಿರಾತಾಗುವ ಕಾಲದಲ್ಲಿ ಕ್ರಿಕೆಟ್ ಗೆಲ್ಲುವ ಕುದುರೆ. ಅಲೆನ್ ಬೈರ್ನರನ ವಾದವೆಷ್ಟು ಪ್ರಸ್ತುತವೆಂದು ಸಾಭೀತುಪಡಿಸಲು ಕ್ರಿಕೆಟ್ ಒಂದೇ ಸೋದಾಹರಣ ಉದಾಹರಣೆಯಾಗಿ ನಿಲ್ಲಬಲ್ಲದು. ಏಕೆಂದರೆ ಕ್ರಿಕೆಟ್ ದೇಶವೊಂದರ ಧರ್ಮವಾಗುತ್ತದೆ. ಆಟಗಾರ ದೇವರಾಗುತ್ತಾನೆ. ಕೃಷಿ ಮಂತ್ರಿ ಕ್ರಿಕೆಟ್ ಮಂತ್ರಿಯಾಗುತ್ತಾನೆ. ಊಟಕ್ಕಿಲ್ಲದ ಬಾಂಗ್ಲಾ-ಕಿನ್ಯಾಗಳು ಹುಚ್ಚೆದ್ದು ಕ್ರಿಕೆಟನ್ನು ಆರಾಧಿಸುತ್ತದೆ. ರಕ್ತಪಾತವಾಗುವ ಸಿಲೋನು ಆಟಗಾರರನ್ನು ರಾಜಭವನದಲ್ಲಿ ಸಮ್ಮಾನಿಸುತ್ತದೆ. ಆಟಗಾರನೊಬ್ಬನ ಹೇಳಿಕೆಯನ್ನು ಸರಕಾರ ಕೂಡ ಶ್ರದ್ದೆಯಿಂದ ಆಲಿಸುತ್ತದೆ. ಇದ್ದ ಬದ್ದ ಕ್ರೀಡೆಗಳನ್ನು ಅದು ನುಂಗಿ ನೀರು ಕುಡಿಯುತ್ತದೆ. ಶ್ರೀಮಂತಿಕೆಯ ಅಮಲು, ಅದರಿಂದುಂಟಾಗುವ ಹುನ್ನಾರಗಳೆಲ್ಲವೂ ಇಂದೂ ಕ್ರಿಕೆಟನ್ನು ಸಭ್ಯರ ಆಟವಾಗಿಟ್ಟಿಲ್ಲ. ತೆರಿಗೆ ಕಟ್ಟದ ಆಟಗಾರ ಎಷ್ಟೇ ಸೆಂಚುರಿ ಬಾರಿಸಿದರೆ ತಾನೇ ಏನು? ಜಾಳುಜಾಳಾಗಿ ಸಾಗುವ ಅಲೆನ್ ಅವರ ಪುಸ್ತಕ ಸುಲಭವಾಗಿ ಅರ್ಥವಾಗದಿದ್ದರೂ ಕ್ರಿಕೆಟ್ ಎಂಬುದು ಅರ್ಥವಾದರೆ ಕ್ರೀಡೆ-ರಾಷ್ಟ್ರೀಯತೆ ಮತ್ತು ಜಾಗತೀಕರಣ ಗಳ ಬಾದರಾಯಣ ಸಂಬಂಧ ಸುಲಭವಾಗಿ ಅರ್ಥವಾಗುತ್ತದೆ. ಜಗತ್ತೇ ಜಾಹೀರಾತುಗಳ ಬುಟ್ಟಿಯಾಗಿರುವಾಗ ಜಾಗತೀಕರಣಕ್ಕೆ ಬೇರೆ ವ್ಯಾಖ್ಯಾನಗಳು ಬೇಕೇ?

No comments: