ಭಾರತೀಯ ಪರಂಪರೆಯ ಹಿರಿಮೆ ಮತ್ತು ವೈeನಿಕತೆಗೆ ಎಷ್ಟೊಂದು ಸಾಕ್ಷಿಗಳೆಂದರೆ ಅವು ಕಾಲದ ನಡೆಯಲ್ಲಿ ವಿರಮಿಸಲೇ ಇಲ್ಲ.ಕಾಲ ವಿರಮಿಸದಿದ್ದರೆ ಜಗತ್ತಿನ ಇತರ ಸರಕುಗಳೂ ವಿಶ್ರಮಿಸಿಬಿಟ್ಟರೆ ಹೇಗೆ ಎನ್ನುವಂತೆ ಭಾರತೀಯತ್ವದ ಪರಂಪರೆ ಬೆಳೆಯುತ್ತದೆ.ಮೌಲ್ಯಗಳನ್ನು ,ಆದರ್ಶಗಳನ್ನು ಕೊಡುತ್ತಾ ಸಾಗುತ್ತದೆ.ಬದುಕಿನ ಪಯಣವೂ ಸಾಗುವುದು ಕೂಡಾ ಹೀಗೆಯೇ.ಮನುಷ್ಯ ಜೀವನವೆಂದರೆ ಭಾರತೀಯತ್ವದಲ್ಲಿ ಸುಮ್ಮನೆ ಬದುಕುವುದಲ್ಲ.ಒಂದು ಪರಂಪರೆಯನ್ನು ಬೆಳೆಸುವುದು.ಸಂಪ್ರದಾಯವೊಂದರಲ್ಲಿ ಜೋಡಿಕೊಳ್ಳುವುದು ಮತ್ತು ಅದರ ಆದರ್ಶದಲ್ಲಿ ತಾನೂ ಭಾಗಿಯಾಗುವುದು.ಅದಕ್ಕಾಗಿ ಬಂದುದೇ ನಾಲ್ಕು ಪುರುಷಾರ್ಥಗಳು.ಒಂದಕ್ಕೊಂದು ಪೂರಕವಾಗಿ.ಒಂದರ ಅನಂತರ ಇನ್ನೊಂದಾಗಿ. ಅದುಬದುಕುಸಾರ್ಥಕ್ಯದತ್ತ ಸಾಗುವ ನಡೆ.ಮತ್ತೊಂದು ನಾಲ್ಕು ಆಶ್ರಮಗಳು.ಬ್ರಹ್ಮಚರ್ಯ,ಗ್ರಹಸ್ಥ,ವಾನಪ್ರಸ್ಥ,ಸಂನ್ಯಾಸ-ಇವು ಕೂಡಾ ಬದುಕನ್ನು ಮೌಲ್ಯಗಳ ಪರಂಪರೆಗೆ ಒಡ್ಡಿಕೊಂಡು ಖಾಸಗೀ ಜೀವನವನ್ನು ಸಾಮಾಜಿಕಗೊಳಿಸುವ ಒಂದು ವೈeನಿಕ ಸೂತ್ರ,ಬಂಧ.ಸಂನ್ಯಾಸವೆಂದರೆ ಅದಕ್ಕೂ ಒಂದು ಕಾಲ,ಅದಕ್ಕೂ ಒಂದು ಯೋಗ್ಯತೆ,ಪಕ್ವತೆ.ಅದು ಅಂತಿಮ ಸ್ಥಿತಿ.ಅದಕ್ಕೆ ಆದರದ್ದೇ ಆದ ಕಟ್ಟುನಿಟ್ಟುಗಳು,ಕಟ್ಟಳೆಗಳು,ಕಟ್ಟುಪಾಡುಗಳು.ಎಲ್ಲೆಂದರಲ್ಲಿ,ಹೇಗೆಂದರೆ ಹೇಗೆ ಆದನ್ನು ಸ್ವೀಕರಿಸುವಂತಿಲ್ಲ.ಏಕೆಂದರೆ ಸಂನ್ಯಾಸ ಅಂತಿಮ ಆಶ್ರಮ.ಕಾಲದ ನಡೆಯಲ್ಲಿ ಅದರೊಟ್ಟಿಗೆ ಸಾಗುವ ಬದುಕಿನ ವಿನ್ಯಾಸ.ಬದುಕು ಸಾರ್ವಜನಿಕಗೊಳ್ಳುವ ಅವಧಿ.
ಸಂನ್ಯಾಸವೆಂದರೆ ಆದುವರೆಗಿನ ಎಲ್ಲವನ್ನೂ ತ್ಯಜಿಸುವುದು.ಮನೆ ಇಲ್ಲದಿರುವುದು.ಆಕಾಂಕ್ಷೆಗಳ ಹಂಗಿಲ್ಲದೆ,ತನ್ನವರೆಂಬ ಕಟ್ಟುಪಾಡುಗಳಿಲ್ಲದೆ,ಜಗವೇ ತನ್ನದೆಂಬಂತೆ ತಿರುಗುವುದು. ಹೇಳಬೇಕೆಂದರೆ ತಿರುಗಾಟವೇ ಸಂನ್ಯಾಸ.ಪಕ್ವವಾದವನು ಸ್ಥಾವರವಾದರೆ ಮೌಲ್ಯಗಳ ಪ್ರಚಾರ,ಹಂಚಿಕೆ ಹೇಗೆ ಸಾಧ್ಯ?ಜಂಗಮವೇ ಸಂನ್ಯಾಸಕ್ಕೆ ಹೇಳಿ ಮಾಡಿಸಿದ ವಿಧಾನ.ಎಲ್ಲಿಯೂ ನಿಲ್ಲದೆ,ಎಲ್ಲಿಗೂ ಅಂಟಿಕೊಳ್ಳದೆ ಅನಿಕೇತನವಷ್ಟೇ ಅಲ್ಲದೆ ಚೇತನವೂ ಆಗುವ ಪ್ರಭಾವಳಿ ಸಂನ್ಯಾಸಿಯದ್ದು.ಸಂನ್ಯಾಸದ್ದು.ಬೇಡಿ ತಿನ್ನುವ ಸಂನ್ಯಾಸಿ ಜಂಗಮನೇ ಆಗಬೇಕೆ ಹೊರತು ಸ್ಥಾವರವಾಗಿಬಿಡಬಾರದು.ಸಂನ್ಯಾಸದ ಮೂಲೋದ್ದೇಶಕ್ಕೆ ವ್ಯತಿರಿಕ್ತವಾಗಬಾರದು.
ಸಂನ್ಯಾಸ ಮತ್ತು ಸಂನ್ಯಾಸದ ಗುಂಪು ಎಂದು ಕರೆಯಲಾಗುವ ಮಠಗಳ ಬಗ್ಗೆ ಬೌದ್ಧರ ಕಾಲದಿಂದ ವಿವರಗಳು ಸಿಗುತ್ತವಾದರೂ ಅದಕ್ಕೂ ಹಿಂದೆ ಅಂದರೆ ಪುರಾಣ ಕಾಲದಲ್ಲೂ ಸಂನ್ಯಾಸದ ಕುರುಹುಗಳು ಕಾಣಸಿಗುತ್ತವೆ.ರಾಜಾಡಳಿತದಲ್ಲಿ ರಾಜಧರ್ಮವನ್ನು ಬೋಧಿಸುತ್ತಿದ್ದವರು,ಆಮಾತ್ಯರಾಗಿದ್ದವರು,ಸಾಮ್ರಾಜ್ಯಕ್ಕೆ ಮೂಲ ಸೆಲೆಯಾಗಿದ್ದವರು,ವರ ಕೊಟ್ಟವರು,ಶಾಪ ಕೊಟ್ಟವರೆಲ್ಲರೂ ಸಂನ್ಯಾಸಿಗಳೇ.ಅಂದಿಗೆ ಅವರೇ ಗುರುಗಳು,ಆಚಾರ್‍ಯರು,ಋಷಿಗಳು.ಅವರಿಲ್ಲದೆ ಸಮಾಜದಲ್ಲಿ ಯಾವುದೂ ನಡೆಯುತ್ತಿರಲ್ಲಿಲ್ಲ ಎಂಬಷ್ಟರಮಟ್ಟಿಗೆ ಅವರು ಪ್ರಭಾವಿಗಳೂ ಆಗಿದ್ದರು.ಪ್ರತಿ ಯಶಸ್ವೀ ಮನುಷ್ಯನ ಹಿಂದೆ ಸಂನ್ಯಾಸಿ ಇರುತಿದ್ದ.ಹಕ್ಕಬುಕ್ಕರ ಹಿಂದೊಬ್ಬ ವಿದ್ಯಾರಣ್ಯ,ಚಂದ್ರಗುಪ್ತ ಮೌರ್ಯರ ಹಿಂದೊಬ್ಬ ಚಾಣಕ್ಯ-ಹೀಗೆ ಪುರಾಣೇತಿಹಾಸಗಳು ಸಂಪೂರ್ಣ ಸಂನ್ಯಾಸಮಯವೇ.ಪರಿತ್ಯಕ್ತ,ಪರಿವ್ರಾಜಕ ಮನುಷ್ಯರಿಂದ ಬ್ರಹತ್ ಸಾಮ್ರಾಜ್ಯಗಳು,ಸಾಮ್ರಾಟರುಗಳು ನಿರ್ಮಾಣವಾಗುತ್ತಿದ್ದರು.ಇದೊಂದು ವಿಚಿತ್ರ ಮತ್ತು ಆಶ್ಚರ್ಯ.ಇದರೆಡೆಯಲ್ಲೇ ಸಮಾಜ ಎನ್ನುವ ಜನಸಮುದಾಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದವು.ಇದೇ ಸಂನ್ಯಾಸದ ಕೊಡುಗೆ.
ಪ್ರಸ್ತುತ ಸಂಚಿಕೆಯಲ್ಲಿ ಸಂಶೋಧನಾ ಲೇಖನವೊಂದನ್ನು ಪ್ರಕಟಿಸಿದ್ದೇವೆ.ಬೌದ್ಧರ ಕಾಲದ ಅನಂತರ ಸಂನ್ಯಾಸ ಬೆಳೆದುಬಂದ ಪರಿಯನ್ನು ಚರ್ಚಿಸಿದ್ದೇವೆ.ಬದ್ದನ ಅನಂತರದ ಅನುಯಾಯಿಗಳ ಪಂಗಡಗಳೇನೇ ಇರಲಿ ಭಾರತೀಯ ಸಂನ್ಯಾಸಕ್ಕೆ ಒಂದು ಚೌಕಟ್ಟನ್ನು ವಿಧಿಸಿದವರು ಬೌದ್ಧರೇ ಎಂಬುದರಲ್ಲಿ ಎರಡು ಮಾತಿಲ್ಲ.ಮುಂದಿನ ಎಲ್ಲಾ ಭಾರತೀಯ ಪಂಥಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೌದ್ಧ ಸಂನ್ಯಾಸ ಚಿಂತನೆಯನ್ನು ತನ್ನದಾಗಿಸಿಕೊಂಡಿರಬಹುದು.ಹೀಗೆ ಭಾರತದ ಧಾರ್ಮಿಕ-ಸಾಂಸ್ಕೃತಿಕ-ಆಧ್ಯಾತ್ಮಿಕ ಲೋಕದ ತಾಯಿಬೇರಾಗಿ ಸಂನ್ಯಾಸವನ್ನು ಇಂದು ಗುರುತಿಸಬಹುದು.
ಕಾಲದ ನಡೆ ಬದಲಾವಣೆಯನ್ನು ಬಲವಂತದಿಂದಲಾದರೂ ಮಾಡುತ್ತದೆ ಎಂಬುವುದಕ್ಕೆ ಮಠಮಂದಿರಗಳು,ಸಂನ್ಯಾಸಿಗಳೂ ಮುಂದೆ ಸಾಕ್ಷಿಯಾದರು.ಒಂದು ಕಾಲದಲ್ಲಿ ಪರಿತ್ಯಕ್ತ ಜೀವನ ನಡೆಸಿದ ಸಂನ್ಯಾಸಿಗಳೆಂಬ ಪರಿವ್ರಾಜಕರು ಕ್ರಮೇಣ ಸ್ಥಾವರವಾಗತೊಡಗಿದರು.ಕಾವಿ ಉಡುವುದೊಂದೇ ಸಂನ್ಯಾಸದ ಅರ್ಹತೆ ಎಂಬ ಭಾವ ತಿಳಿದವರು ಇಂದೂ ಇದ್ದಾರೆ.ಮನೆ ಇಲ್ಲದಿರುವಿಕೆಯ ಪರಿತ್ಯಕ್ತರಾದ ಸಂನ್ಯಾಸಿಗಳು ಮಠವನ್ನೆ ಮನೆಯಾಗಿ ಮಾರ್ಪಡಿಸಿಕೊಂಡಿದ್ದು ಇಂದು ಅಪರೂಪದ ಸಂಗತಿಯಾಗಿ ಉಳಿದಿಲ್ಲ.ಏನೇ ಇದ್ದರೂ ಅಂಥವುಗಳು ಇಂದೂ ಸಮಾಜಕ್ಕೆ ಗುರುವಾಗುವ ಅರ್ಹತೆಯನ್ನು ,ಛಾಪನ್ನು ಇಟ್ಟುಕೊಂಡಿದೆ.
No comments:
Post a Comment