Saturday, July 23, 2011

ಅನಂತ ಮೂರ್ತಿ ಅನಾಥರಾಗುತ್ತಿದ್ದಾರಾ?


ಕುಮಾರಸ್ವಾಮಿಗಳ ಉಪವಾಸವನ್ನು ಅಂತ್ಯಗೊಳಿಸಲು ಅನಂತಮೂರ್ತಿಗಳು ಹಣ್ಣಿನ ರಸವನ್ನು ಕುಡಿಸಿದ್ದು,ಕುಡಿಸುತ್ತಾ ಅನಂತಮೂರ್ತಿಗಳ ಮುಖದಲ್ಲಿ ಧನ್ಯತೆಯ ಭಾವವೊಂದನ್ನು ಕಂಡಿದ್ದು,ಕುಡಿದ ಕುಮಾರ ಸ್ವಾಮಿಗಳ ಮುಖದಲ್ಲೂ ದಾವಾಕ್ಕಿಂತಲೂ ಬೇರೆನೋ ಒಂದು ಗೋಚರಿಸಿದ್ದು ಮೊದಲಾದ ಘಟನಾವಳಿಗಳ ಸಂದರ್ಭದಲ್ಲಿ ಹಳೆಯ ಘಟನೆಯೊಂದು ನೆನಪಾಗುತ್ತದೆ.
ಅದು ಇದೇ ಕುಮಾರಸ್ವಾಮಿಗಳು ಮುಖ್ಯಮಂತ್ರಿಗಳಾಗಿದ್ದ ಸಮಯ.ಯಾವುದೋ ವಿಷಯವನ್ನೆತ್ತಿಕೊಂಡು ಇದೇ ಅನಂತಮೂರ್ತಿಗಳು ಸಭೆ-ಸಮಾರಂಭ-ಶ್ರಾದ್ಧ-ಮಾಧ್ಯಮಗಳಲ್ಲೆಲ್ಲಾ ಸರಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದರು.ಹೀಗಿರಲೊಂದು ದಿನ ರೇಗಿಹೋದ ಮುಖ್ಯಮಂತ್ರಿ ಕುಮಾರಸ್ವಾಮಿಗಳು "ಯಾರ್ರೀ ಈ ಅನಂತಮೂರ್ತಿ?ಅವರಾರೆಂದೇ ನನಗೆ ಗೊತ್ತಿಲ್ಲ.ಹೆಸರಂತೂ ಕೇಳೇ ಇಲ್ಲ"ಎಂದುಬಿಟ್ಟಿದ್ದರು.ಒರ್ವ ಜ್ಞಾನಪೀಠ ಪಡೆದ ಸಾಹಿತಿಗೆ ಇದಕ್ಕಿಂತ ಬೇರೆ ಅವಮಾನವುಂಟೇ?ಸ್ವಾಭಿಮಾನಿಯೊಬ್ಬನಿಗೆ ಅದು ಜೀವನಪೂರ್ತಿ ಕೊರಗಲೆಂದೇ ಇರುವ ಮಾತಾಗಿ ಉಳಿದುಹೋಗುತ್ತದೆ.ಅನಂತಮೂರ್ತಿಗಳೂ ನೊಂದುಕೊಂಡರು."ನಾನು ಜ್ಞಾನಪೀಠ ಪಡೆದ ಸಾಹಿತಿ,ಮುಖ್ಯಮಂತ್ರಿಗಳಿಗೆ ನಾನಾರೆಂದು ಗೊತ್ತಿಲ್ಲದೇ ಇಲ್ಲ"ಎಂದು ನೋವಿನಿಂದ ಹೇಳಿಕೊಂಡಿದ್ದರು.ಈಗ ಅದೆಲ್ಲಾ ಆಗಿ ಸರಿಯಾಗಿ ನಾಲ್ಕು ವರ್ಷವೂ ಆಗಿಲ್ಲ.ಆಗಲೇ ಎಷ್ಟೆಲಾ್ಲ ಬದಲಾವಣೆಗಳು!"ಯಾರವನು?" ಎಂದವರಿಗೇ ಹಣ್ಣಿನ ರಸ ಕುಡಿಸಲು ಬಂದರಲ್ಲ ಅನಂತಮೂರ್ತಿಗಳು.ಅಂದು ಕುಮಾರಸ್ವಾಮಿಗಳು ಪಾತಾಳದಷ್ಟು ಕೀಳಾಗಿ ಮೂರ್ತಿಗಳನ್ನು ಅವಮಾನಿಸಿದ್ದು ಇಷ್ಟುಬೇಗ ಮರೆತುಹೋಯಿತೇ?ಎಲಾ ಜೀವವೇ!?ಸಾಹಿತಿಯ ಸಂವೇದನೆ ಅವಮಾನವನ್ನು ನಿರ್ಲಕ್ಷಿಸಿತು ಎಂದುಕೊಳ್ಳುವುದೇ?
ಅಂತೂ ಮೊನ್ನೆಯ ಘಟನೆ ಕೇವಲ ರಾಜಕೀಯದ ಒಂದು ಸಂಗತಿಯಾಗದೆ ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಗತಿಯೂ ಆಗಿ ದಾಖಲಾಯಿತು.ಏಕೆಂದರೆ ಕನ್ನಡದ ಮೊದಲಿನ ಸಾಹಿತಿಗಳಾರೂ ಅನಂತಮೂರ್ತಿಯ ಮಟ್ಟಕ್ಕೆ ಇಳಿದಿರಲಿಲ್ಲ.ಅಂಥದ್ದನ್ನು ಪರಮ ಅಸಹ್ಯ ಎಂದೇ ಬಹುತೇಕ ಸಾಹಿತಿಗಳು ಅಂದುಕೊಳ್ಳುತ್ತಿದ್ದರು.ಆದರೆ ಅನಂತಮೂರ್ತಿಗಳು ಮಾತ್ರ ವಿಭಿನ್ನವಾಗಿರಲು ಪ್ರಯತ್ನಿಸುತ್ತಾರೆ.ವಿಚಿತ್ರವಾಗಿ ತೋರುತ್ತಾರೆ.ಇದೊಂದೇ ಅಲ್ಲ .ಇನ್ನೊಮ್ಮೆಯೂ ಹಾಗೇ ಆಗಿತ್ತು.2009ರಲ್ಲಿ ಇದೇ ಅನಂತಮೂರ್ತಿಗಳು ಆರ್.ವಿ.ದೇಶಪಾಂಡೆಯವರೊಡಗೂಡಿ ಕೆ.ಪಿ.ಸಿ.ಸಿ ಕಛೇರಿಗೆ ಹೋಗಿ ಕಾಂಗ್ರೆಸ್‌ ಪಕ್ಷದ ವೆಬ್‌ಸೈಟ್‌ ಅನ್ನು ಅನಾವರಣಗೊಳಿಸಿದ್ದರು.ಸಾಹಿತಿಯೊಬ್ಬನಿಗೆ ಇದೆಲ್ಲದರ ಉಸಾಬರಿ ಯಾಕೆ?ವೆಬ್‌ಸೈಟ್‌ ಅನಾವರಣಗೊಳಿಸಿದ್ದೇ ಅಲ್ಲದೆ ಕಾಂಗ್ರೆಸನ್ನು ಮೆಚ್ಚಿಸಲು ಭಾಷಣವೊಂದನ್ನು ಮಾಡಿ "ಬಾಬರಿ ಮಸೀದಿ ಧ್ವಂಸ,ಮಂಗಳೂರಿನ ಕೋಮುಗಲಭೆಗಳು,ಗುಜರಾತಿನ ನರಮೇಧ ಇಂಥ ದುರಾಚಾರಗಳಿಂದ ದೇಶವನ್ನು ರಕ್ಷಿಸಬಲ್ಲ ಅಖಿಲಭಾರತ ಪಕ್ಷವೆಂದರೆ ಕಾಂಗ್ರೆಸ್‌ ಒಂದೇ "ಎನ್ನುತ್ತಾ ಮುಖವನ್ನು ಮೊರದಗಲ ಮಾಡಿಕೊಂಡಿದ್ದರು.ಅದಾದ ಕೆಲದಿನಗಳಲ್ಲಿ ರಾಜ್ಯಸಭೆಗೆ ಕಾಂಗ್ರೆಸಿನ ಅಭ್ಯರ್ಥಿ ಮೂರ್ತಿಗಳಂತೆ ಎಂಬ ಸುದ್ಧಿ ಹರಡಿತ್ತು.ಇವನ್ನೆಲ್ಲಾ ನೋಡಿದರೆ ಅನಂತಮೂರ್ತಿಗಳು ಯಾರು ಕರೆದರೂ ,ಎಲ್ಲಿಗೆ ಬೇಕಾದರೂ ಹೋಗುವ ಪುರುಸೋತ್ತಿನ ಸಾಹಿತಿ ಎನಿಸುವುದಿಲ್ಲವೇ?ಸಾಹಿತಿಗಳಿಗೆ ರಾಜಕೀಯ ಒಲವುಗಳಿರುವುದು ಸಹಜ.ಹಾಗೆ ಒಲವಿದ್ದವರಲ್ಲಿ ಅನಂತಮೂರ್ತಿಗಳು ಮೊದಲಿನವರೇನೂ ಅಲ್ಲ.ಆದರೆ ಸಾಹಿತ್ಯಕ್ಕಿಂತಲೂ ರಾಜಕೀಯವನ್ನೆ ತುಡಿದು,ಹಾತೊರೆದು,ಹಸಿದು ಕೂತವರಲ್ಲಿ ಮಾತ್ರ ಅನಂತಮೂರ್ತಿಗಳು ಮೊಟ್ಟಮೊದಲನೆಯವರು.ಅವರ ಎಲ್ಲ ಆಮಾತು,ವರ್ತನೆಗಳಲ್ಲಿ ಸೀಟಿನ ಜೊಲ್ಲು ಇರುವುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಅನಂತಮೂರ್ತಿಗಳು "ಅವಸ್ಥೆ"ಎಂಬ ಕಾದಂಬರಿಯೊಂದನ್ನು ಬರೆದಿದ್ದಾರೆ.ರಾಜಕಾರಣದ ಒಳಸುಳಿಗಳನ್ನು ಚಿತ್ರಿಸಿದ ಅವಸ್ಥೆಯಲ್ಲಿ ಖ್ಯಾತ ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡರನ್ನು ಹೋಲುವ ಪಾತ್ರವೊಂದನ್ನು ಅವರು ಚಿತ್ರಿಸಿದ್ದರು.ಅಂದರೆ ಅಂದು ಅನಂತಮೂರ್ತಿಗಳು ಕಂಡುಕೊಂಡಿದ್ದ ಸಾಹಿತ್ಯಕ್ಕೆ , ಮಾತಿಗೆ ಒಂದು ಸಿದ್ಧಾಂತದ ಬಲವೂ ಇದೆಯೆಂದಾಯಿತು. ಅಂಥವರು ಯಾವ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಕುಮಾರಸ್ವಾಮಿಗಳಿಗೆ ಗುಟುಕು ನೀಡಿದರು?"ಲೋಹಿಯಾ ನನ್ನವರು" ಎಂದು ಲೇಖನ ಬರೆಯುವ ಮೂರ್ತಿಗಳು ಉಪವಾಸಾಂತ್ಯಕ್ಕೆ ಜ್ಯೂಸುಕುಡಿಸುವಾಗ ಲೋಹಿಯಾರನ್ನು ಮರೆತೇಬಿಟ್ಟರು.ಹೀಗೆ ಬದುಕು ಮತ್ತು ಬರಹಗಳ ನಡುವೆ ವೈರುಧ್ಯಗಳೇ ಎದ್ದು ಕಾಣುವಾಗ ಅವರ ಸಾಹಿತ್ಯವನ್ನು ಗಟ್ಟಿ ಎಂದು ಒಪ್ಪಿಕೊಳ್ಳುವುದು ವಿಮರ್ಶಾ ಮನಸ್ಸುಗಳಿಗೆ ಕಷ್ಟವಾಗುತ್ತದೆ.ಕುಮಾರಸ್ವಾಮಿಗಳ ಉಪವಾಸವನ್ನು ಅಂತ್ಯಗೊಳಿಸಲು ಅನಂತಮೂರ್ತಿಗಳು ಹೋಗಿದ್ದರಲ್ಲಿ ತಪ್ಪಿಲ್ಲ ಎಂದುಕೊಂಡರೂ ಕೂಡ ಅನಂತಮೂರ್ತಿಗಳ ಘನತೆ ಹೆಚ್ಚುವುದೇ ಇಲ್ಲ.ಏಕೆಂದರೆ ಕೆಲವು ತಿಂಗಳ ಹಿಂದೆ ಅದೇ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಜನರು ಅಣ್ಣಾಹಜಾರೆಗೆ ಬೆಂಬಲ ಸೂಚಿಸಿ ಉಪವಾಸ ಕೂತಾಗ ಅನಂತಮೂರ್ತಿಗಳು ಅತ್ತ ತಲೆಹಾಕಿ ಕೂಡ ಮಲಗಿರಲಿಲ್ಲ.ಆ ಉಪವಾಸ ಮುಖ್ಯವಾಗದಿದ್ದವರಿಗೆ ಈ ಉಪವಾಸ ಹೇಗೆ ಮುಖ್ಯವಾಯಿತು?ಕುಮಾರಸ್ವಾಮಿಗಳ ಆರೋಗ್ಯದ ಕಾಳಜಿ ವಹಿಸಿ ಧಾವಿಸಿ ಬಂದವರಿಗೆ ವಯೋವೃದ್ಧ ಅಣ್ಣಾಹಜಾರೆಯವರ ಆರೋಗ್ಯ ನೆನಪಿಗೆ ಬರಲಿಲ್ಲವೇ?ಕುಮಾರಸ್ವಾಮಿಗಳೇನಾದರೂ ಮೂರ್ತಿಗಳಿಗೆ ತೀರಿಸುವುದೋ ಒಪ್ಪಿಸುವುದೋ ಬಾಕಿಯಿತ್ತೆ?ಆನಂತಮೂರ್ತಿಗಳೆಂದರೆ ಹಾಗೆಯೇ .ಯಾವ ಉಪವಾಸ ಹೆಚ್ಚು ಬೆಲೆಬಾಳುತ್ತದೋ ಅತ್ತಲೇ ಅವರ ಸಹವಾಸ.ಇಲ್ಲದಿದ್ದರೆ ಅವರು ಅದೇ ಹೊತ್ತಲ್ಲಿ ಗದಗಿನ ಕೃಷಿಭೂಮಿಯನ್ನು ಪೋಸ್ಕೋ ಕಂಪೆನಿಗೆ ಕೊಡುವುದನ್ನು ವಿರೋಧಿಸಿ ಉಪವಾಸ ಕೂರುತ್ತಿದ್ದರು.ಚಳವಳಿ ಸಂಘಟಿಸುತ್ತಿದ್ದರು.ಮಂಗಳೂರಿನ ಎಂ.ಎಸ್‌.ಇ. ಝಡ್‌ ವಿರುದ್ಧ ಧ್ರವನಿ ಎತ್ತುತ್ತಿದ್ದರು.ಉಡುಪಿಯ ನಾಗಾರ್ಜುನ ವಿಧ್ಯುತ್‌ ಸ್ಥಾವರವನ್ನು ವಿರೋಧಿಸಿ ಹೇಳಿಕೆ ನೀಡುತ್ತಿದ್ದರು.ನದಿ ತಿರುವನ್ನು ವಿರೋಧಿಸಿ ಪಾದಾಯಾತ್ರೆಯನ್ನೇ ಮಾಡುತ್ತಿದ್ದರು.ಪ.ಘಟ್ಟವನ್ನು ಉಳಿಸಿ ಎಂದು ಹುಯಿಲೆಬ್ಬಿಸುತ್ತಿದ್ದರು.ಆದರೆ ಅನಂತಮೂರ್ತಿಗಳಿಗೆ ಅವಾವುವೂ ಮುಖ್ಯವಲ್ಲ .ಏಕೆಂದರೆ ಅವುಗಳಿಂದ ರಾಜಕೀಯವಾಗಿ ಲಾಭವಿಲ್ಲ.ಬದಲಿಗೆ ದೊಡ್ಡಮನುಷ್ಯರನ್ನು ಎದುರು ಹಾಕಿಕೊಳ್ಳಬೇಕು.ಹಾಗಾಗಿ ಇಪ್ಪತ್ತು ದಿನಗಳಿಂದ ಗ್ರೆಗರಿ ಪತ್ರಾವೋ ಎಂಬ ಮಂಗಳೂರಿನ ರೈತ ಮಾಡುವ ಉಪವಾಸಕ್ಕಿಂತ ಎರಡು ದಿನದಿಂದ ಶಾಮಿಯಾನದಡಿಯಲ್ಲಿ ಮಾಡಿದ ಉಪವಾಸವೇ ಅನಂತಮೂರ್ತಿಗಳಿಗೆ ಮುಖ್ಯವಾಗಿಬಿಡುತ್ತದೆ.ಅಷ್ಟಕ್ಕೂ ರಾಜ್ಯದ ಎಲ್ಲಾ ಚಳವಳಿಗಳಿಗೆ ಅನಂತಮೂರ್ತಿಗಳೇ ವಾರಿಸುದಾರರಾಗಬೇಕೆಂದೇನೂ ಇಲ್ಲ.ಆದರೆ ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ಭಾಗವಹಿಸುವ ಜ್ಞಾನಪೀಠಿಗಳ ವರ್ತನೆಯ ಬಗ್ಗೆ ಪ್ರಶ್ನೆಗಳೇಳುತ್ತವೆ.ರಾಜಕೀಯ ಒಲವುಗಳಿದ್ದ ಸಾಹಿತಿಗಳ ಹೋರಾಟಗಳು ನೆನಪಿಗೆ ಬರುತ್ತವೆ.ಶಿವರಾಮ ಕಾರಂತರು ಮತ್ತು ಅಡಿಗರಲ್ಲಿದ್ದ ಹೋರಾಟದ ಕೆಚ್ಚನ್ನು ಜನ ಇಂದೂ ನೆನಪು ಮಾಡಿಕೊಳ್ಳುತ್ತಾರೆ.ಅದೇ ಹೊತ್ತಲ್ಲಿ ಹೋರಾಟಗಾರರಂತೆ ಕಾಣುವ ಅನಂತಮೂರ್ತಿಗಳು ಎಡೆಬಿಡಂಗಿಗಳಂತೆ ಕಂಡುಬರುತ್ತಾರೆ.
ಅನಂತ ಮೂರ್ತಿಗಳ ಒಂದು ಪ್ರಸಿದ್ದ ಹೇಳಿಕೆಯಿದೆ."ಕೆಟ್ಟ ಸಾಹಿತ್ಯ ಒಳ್ಳೆಯ ರಾಜಕೀಯವಾಗಲಾರದು"ಎಂದು.ಅವರು ಸಾಹಿತ್ಯವನ್ನು ರಾಜಕೀಯದಿಂದ ಬೇರ್ಪಡಿಸುವುದೇ ಇಲ್ಲ ಎಂಬುದಕ್ಕೆ ಇನ್ನೇನು ಉದಾಹರಣೆ ಬೇಕು?ಆದರೆ ಅವರು ಕೆಟ್ಟ ರಾಜಕೀಯ ಸಾಹಿತ್ಯಕ್ಕೆ ಪೂರಕ ಎಂದು ಅಂದುಕೋಂಡಿದ್ದರೋ ಏನೋ.ಹೀಗೆ ಏನೇನೋ ಹೇಳಿಬಿಡುವುದು ಅವರ ಜಾಯಮಾನ. "ನಾನು ಶಿಸ್ತಿನಲ್ಲಿ ಬೆಳೆದವನೇ ಅಲ್ಲ.ಹಿಂದೆ ಮೇಷ್ಟ್ರಾಗಿದ್ದಾಗ ಪಾಠಮಾಡಿದವನೂ ಅಲ್ಲ.ಸಭೆಗಳಲ್ಲಿ ತಯಾರಿ ಮಾಡಿ ಮಾತಾಡಿದವನೂ ಅಲ್ಲ.ನಿಂತ ಕಾಲಮೇಲೆ ಪುಣ್ಯವಶಾತ್‌ ಹೊಳೆಯುತ್ತಾ ಹೋಗುವುದನ್ನು ಹೇಳುವ ಸ್ವಭಾವ ನನ್ನದು.ಸತತ ನಾನಿರುವುದೇ ಹೀಗೆ.ಸತತ ನಾನು ತೊಡಗಿಸಿಕೊಂಡಿರುವಂತೆ ಮಾಡುವ ಸಂಗತಿಗಳೇ ಕೆಲವೊಮ್ಮೆ ನಾನು ಮಾಡಿದ ಪಾಠ."ಎನ್ನುವ ಅನಂತಮೂರ್ತಿಗಳ ಮಾತಿನಲ್ಲಿನ್ನು ಯಾವ ಅಧಿಕೃತತೆಯನ್ನು ನಿರೀಕ್ಷಿಸಬಹುದು?ಹಾಗೆಯೇ ನಿಂತಕಾಲಮೇಲೆ ಅವರು ಉಪವಾಸಾಂತ್ಯಕ್ಕೆ ಶರಭತ್ತು ಕುಡಿಸಿಬಿಟ್ಟರೇ ಎಂದು ಅವರನ್ನು ಯಾರೂ ಕೇಳಬಾರದು.ಕೇಳಿದರೆ ಅವರು ಕೋಮುವಾದಿಗಳಾಗುವರು.ನಕ್ಸಲ್‌ ಅನುಕಂಪ ಹೊಂದಿರುವುದು ಅನಂತಮೂರ್ತಿಗಳ ಹಲವು ಗುಣಗಳಲ್ಲಿ ಒಂದು ಗುಣ.ನಕ್ಸಲ್‌ ಎನ್‌ಕೌಂಟರ್‌ಗಳನ್ನು ಖಂಡಿಸುವವರು ಅನಂತಮೂರ್ತಿಗಳು.ಇಂಥವರು ಅದು ಹೇಗೆ ಕೋಟಿಗಟ್ಟಲೆ ಶೇಖರಿಸಿಟ್ಟುಕೊಂಡ ಕುಮಾರಸ್ವಾಮಿಗಳ ಬೆಂಬಲಕ್ಕೆ ನಿಂತುಬಿಡುತ್ತಾರೆ?ನಕ್ಸಲರನ್ನು ಬೆಂಬಲಿಸಿ ಬಂಡವಾಳಶಾಹಿಗಳನ್ನು ಸಾಯಬೇಡಿ ಎನ್ನುವುದು ಜಗತ್ತಿನ ಹೊಸದೊಂದು ಸಿದ್ದಾಂತವೇ ಸರಿ.ಅದರ ಕರ್ತೃ ಅನಂತಮೂರ್ತಿಗಳೇ.ತಮ್ಮ ಕವನದಲ್ಲಿ -ಕಥೆಯಲ್ಲಿ-ಕಾದಂಬರಿಯಲ್ಲಿ ಲೋಹಿಯಾ,ಗಾಂಧಿ ಮೊದಲಾದವರನ್ನು ಯತೇಚ್ಛ ತರುವ ಅನಂತಮೂರ್ತಿಗಳು ಪ್ರಾಮಾಣಿಕರೇ ಆಗಿದ್ದರೆ,ಸಮಾಜವಾದಿ ಸಿದ್ಧಾಂತಕ್ಕೆ ನಿಷ್ಠರೇ ಆಗಿದ್ದರೆ ಒಂದು ಚಳವಳಿಯನ್ನು ಕೈಯಾರೆ ಅಂತ್ಯ ಮಾಡುತ್ತಿರಲ್ಲಿಲ್ಲ.ವಾಸ್ತವವಾಗಿ ಕುಮಾರಸ್ವಾಮಿಗಳ ಆರೋಪದಲ್ಲಿ ಅನಂತಮೂರ್ತಿಗಳಿಗೆ ಸ್ಪಷ್ಟತೆ ಇದ್ದಿದ್ದೇ ಆಗಿದ್ದರೆ ಆ ಹೋರಾಟವನ್ನು ಒರ್ವ ಸಮಾಜವಾದಿ ಮತ್ತಷ್ಟು ಬೆಳೆಸುತ್ತಿದ್ದ.ಆದರೆ ಎಲ್ಲವೂ ಯಾರದ್ದೋ ಕೃಪಾಪೋಷಿತ ನಾಟಕಮಂಡಳಿಯಾಗಿರುವಾಗ ನಾಟಕ ಬರೆಯುವ ಇವರೇನು ಮಾಡಿಯಾರು? ಜ್ಞಾನಪೀಠಿಗಳೊಬ್ಬರು ಹೀಗೆಲ್ಲಾ ವರ್ತಿಸುವಾಗ ಸಾಹಿತ್ಯಾಸಕ್ತರಿಗಷ್ಟೆ ಅಲ್ಲ ಸಾಹಿತ್ಯದ ಗಂಧಗಾಳಿ ಇಲ್ಲದವರಿಗೂ ಹೇಸಿಗೆಯೆನಿಸುವುದು ಸುಳ್ಳಲ್ಲ.ಬಹುತೇಕ ಸಾಹಿತ್ಯಾಸಕ್ತರು ಈಗಾಗಲೇ ಅನಂತಮೂರ್ತಿಗಳತ್ತ ಭ್ರಮನಿರಸನವನ್ನು ಹೊಂದಿದ್ದಾರೆ.ಗೊಂದಲದ ,ಗೋಜಲುಗೋಜಲಾದ ಹೇಳಿಕೆಗಳು ಅವರನ್ನು ಜನರು ಮತ್ತು ಸಾಹಿತ್ಯದಿಂದ ಇನ್ನಷ್ಟು ದೂರ ಮಾಡುತ್ತಿದೆ. ಬರ್ಟೋಲ್‌ ಬ್ರೆಕ್ಟ್ ಎಂಬ ಜರ್ಮನ್‌ ನಾಟಕಕಾರ ನನಗೆ ಪ್ರೇರಣೆ ಎನ್ನುವ ಅನಂತಮೂರ್ತಿಗಳು ಆತ ರಿಲ್ಕ್ ಗೆ ಸಮನಾದವನು ಎನ್ನುವಾಗ ಕನ್ನಡಿಗರಿಗೆ ಏನೇನೂ ಅರ್ಥವಾಗುವುದಿಲ್ಲ.ಇನ್ನು ಇಂಗ್ಲಿಷ್‌ ಸಾಹಿತ್ಯಾಸಕ್ತರಿಗಂತೂ ಅದು ಬೇಕಾಗಿಯೂ ಇಲ್ಲ.ಆದರೆ ಕೆಲವು ಎಡೆಬಿಡಂಗಿಗಳಿಗೆ, ಅಪಾರ ಕೀಳರಿಮೆಯಿಂದ ಬಳಲುವವರಿಗೆ ಅನಂತ ಹೇಳಿಕೆಗಳು ಪವಿತ್ರನಾದದಂತೆ ಕೇಳುತ್ತವೆ.ಇಂಥ ಅನಂತಮೂರ್ತಿಗಳು ನೆಲದ ಸೊಗಡಿನ ಬಗ್ಗೆ ಮಾತಾಡಿದರೆ ಬೆಲೆಯೇನು ಬಂತು?ಅಲ್ಲದೆ ಮೂರ್ತಿಗಳೆಂದೂ ಜನರ ಅಂತರಂಗಕ್ಕೆ ಹತ್ತಿರವಾದವರೇ ಅಲ್ಲ."ಬೆಂಗಳೂರಿನ ನನ್ನ ಮನೆ ಇರುವ ಆರ್‌.ಎಂ.ವಿ ಬಡಾವನೆಯಲ್ಲಿ ನೈಕಿ ಶೂ ಧರಿಸಿ ವಾಕ್‌ ಹೋಗುತ್ತಾ ಇರುವಾಗ"ಎಂದೂ "ಡಬ್ಲ್ಯು.ಎಚ್‌.ಆಡನ್‌ ಎಂಬ ಕವಿ ಬರೆದ ಒಂದು ಕವನವನ್ನು ನಾನು ಓದಿ ಮೆಚ್ಚಿಕೊಂಡಾಗ"ಎಂದೂ "ಬಾಡ್‌ ಬರಿ ಪೈಪ್‌ ಸೇದುತಾ್ತ ತನ್ನ ಟೈಪ್‌ರೈಟರ್‌ ಎದುರು ಕೂತು ಹೇಳಿದ್ದು ನೆನಪಾಗುತ್ತದೆ"ಎಂದೂ ನಿರಂತರ ಹೇಳುವ ಅನಂತಮೂರ್ತಿಗಳು ಕನ್ನಡ ಸಾಹಿತ್ಯಾಸಕ್ತರನ್ನು ದಡ್ಡರೆಂದುಕೊಂಡಿದಾದರೋ ಏನೋ.ಇಂದು ನೈಕಿ ಶೂ ಧರಿಸುವುದು,ಇಂಗ್ಲಿಷ್‌ ಸಾಹಿತ್ಯವನ್ನು ಅನಂತಮೂರ್ತಿಗಳ ಮಾರ್ಗದರ್ಶನವಿಲ್ಲದೆ ಓದುವವರೂ ತುಂಬಾ ಇದ್ದಾರೆ.ಹೀಗೆ ಮಾತಿನಲ್ಲಿ ಅಹಂ,ಆದರೆ ಅದನ್ನು ಕಾಣಿಸಿಕೊಳ್ಳದೆ ಉಳಿಸಿಕೊಳ್ಳುವ ನಾಜೂಕುತನ ಮತ್ತು ಗೊತ್ತಿಲ್ಲದೇ ಹೊರಬಂದುಬಿಡುವ ದೌರ್ಬಲ್ಯ,ಪ್ರತಿಷ್ಠೆಯ ಬೆನ್ನುಹತ್ತುವ ,ನುಸುಳಲು ಮಾತಿನ ಮೊರೆಹೋಗುವ ,ಸಾಹಿತ್ಯದಲ್ಲಿ ಗೊಂದಲ ಹುಟ್ಟಿಸುವ ,ತನಗಾಗದವರನ್ನು ಹೀನಾಮಾನ ತೆಗಳುವ ಅನಂತ ಮೂರ್ತಿಗಳು ರಾಜಕೀಯದ ನಡುವೆ ಕಾಣಿಸಿಕೊಂಡೇ ಹಾಸ್ಯಾಸ್ಪದರಾಗಿಹೋದವರು.ಅವರೊಂದು ಕಡೆ ಬರೆದಿದ್ದು ನೆನಪಾಗುತ್ತದೆ,"ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ,ಕಟ್ಟಕಡೆಯ ನದಿಗೆ ವಿಷ ಇಕ್ಕಿದ ನಂತರ,ಕಟ್ಟಕಡೆಯ ಮೀನನ್ನು ಹಿಡಿದ ನಂತರ ನಿನಗೆ ಗೊತಾ್ತಗುತ್ತದೆ,ಹಣವನ್ನು ತಿನ್ನಲಾಗುವುದಿಲ್ಲವೆಂದು"ಕುಮಾರಸ್ವಾಮಿಗಳ ಮುಂದೆ ಕೂತು ಬಂದವರಿನ್ನು ಇದನ್ನು ಯಾರಿಗೆ ಹೇಳಬಲ್ಲರು?"ಬಿಜೆಪಿಯಲ್ಲಿ ಸಾತ್ವಿಕವಾದ ವಾಜಪೇಯಿ ಮುಖ,ಕ್ರೂರವಾದ ಮೋದಿ ಮುಖ.ಇನ್ನೂ ಕ್ರೂರವಾದ ತೊಗಾಡಿಯಾ ಮುಖ ಇದೆ"ಎಂದು ಆರೋಪಿಸುವ ಮೂರ್ತಿಗಳು ಕಾಂಗ್ರೆಸಿನ,ಜೇಡಿಎಸ್ಸಿನ ಕರಾಳ ಮುಖಗಳ ,ನರಿಬುದ್ಧಿಗಳ ಬಗ್ಗೆ ಚಕಾರವೆತ್ತುವುದಿಲ್ಲ.ದಿನ ಹೋದಂತೆ ಅನಂತಮೂರ್ತಿಗಳು ವಿಚಿತ್ರವಾಗುತ್ತಿದ್ದಾರೆ.ಅನಾಥರಾಗುತ್ತಿದ್ದಾರೆಯೇ ಎಂಬ ಸಂಶಯವೂ ಬರುತ್ತಿದೆ.ತನ್ನ ಹಿಂದೆ ಯಾರೂ ಇಲ್ಲದಾಗ ಕಂಡಕಂಡವರ ಬೆನ್ನು ಹತ್ತುವ ಮಟ್ಟಕ್ಕಿಳಿದರಲ್ಲಾ ಎಂದು ಬೇಸರವಾಗುತ್ತಿದೆ.ಎಷ್ಟಾದರೂ ಸಾಹಿತಿಗಳಲ್ಲವೇ?ಇಂಗ್ಲಿಷಿನಿಂದ ಒಂದಿಷ್ಟನ್ನು ತಂದವರಲ್ಲವೇ?ಹೊಡಕೊಂಡಿದ್ದೋ ಪಡಕೊಡಿದ್ದೋ ಜ್ಞಾನಪೀಠವೇ ತಾನೇ?ಮೊದಲೆಲ್ಲಾ ಏನಾದರೂ ಒಂದನ್ನು ಬರೆಯುತ್ತಿದ್ದರು ಪಾಪ.

No comments: