Tuesday, November 29, 2011

ಅವರು ಕರೆಯದೇ ಬಂದರು; ಇವರು ಕರೆಯೋಲೆಯೊಂದಿಗೇ ಬಂದರು


ಕೆಲವು ಇತಿಹಾಸಗಳು ಸೃಷ್ಟಿಯ ಅಸ್ತಿತ್ವ ಇರುವವರೆಗೂ ಮರೆಯಾಗಲಾರವು ಮತ್ತು ಮರೆಯಲೂಬಾರದು.
ದಕ್ಷಿಣ ಏಷ್ಯಾದ ಸಿಂಧ್ ನಾಚೆಯ ಭಾರತವೆನ್ನುವ ದೇಶ ಪಾಶ್ಚಾತ್ಯರಿಗೆ ಮೊದಲಿನಿಂದಲೂ ಕಣ್ಣುಕುಕ್ಕುವ ದೇಶವೇ. ಪ್ರಾಚೀನದಿಂದಲೂ ಭಾರತ ಅವರ ಕಣ್ಣಿಗೆ ಮಾಯಾನಗರಿಯೇ. ಕನಸ್ಸಿನ ಭೂಮಿಯೇ. ಏಕೆಂದರೆ ಭಾರತ ಅವೆಲ್ಲಕ್ಕಿಂತ ಶ್ರೀಮಂತವೂ ಅವರೆಲ್ಲಾ ಅಗತ್ಯಗಳನ್ನೂ ಕನಸುಗಳನ್ನೂ ಪೂರೈಸಬಲ್ಲ ಅಕ್ಷಯಪಾತ್ರೆಯೂ ಆಗಿತ್ತು. ಆ ದೇಶಗಳ ಸಪ್ಪೆ ಸಾರಿಗೆ ಕರಿಮೆಣಸಿನ ರುಚಿಯನ್ನು ಒದಗಿಸಲು, ಏಲಕ್ಕಿಯ ಘಮವನ್ನು ಸೂಸಲು, ಅತ್ಯುತ್ಕೃಷ್ಟ ಕುಸುರಿಕಲೆಯ ಕಂಬಳಿಯನ್ನು ಹೊದೆಯಲು, ಮನಸಿಗೆ ಮುದ ನೀಡಲು,ಬದುಕನ್ನು ಆನಂದದಾಯಕವಾಗಿಡಲು ಅವರೆಲ್ಲರಿಗೆ ಭಾರತವನ್ನು ಬಿಟ್ಟು ಬೇರೆ ದೇಶಗಳಿರಲಿಲ್ಲ. ಇಲ್ಲಿನ ಎಲ್ಲವೂ ಶ್ರೀಮಂತವೇ. ಆಟಕ್ಕುಂಟು ಲೆಕ್ಕಕಿಲ್ಲ ಎಂಬಂಥ ಯಾವ ಸರಕೂ ಇಲ್ಲಿರಲಿಲ್ಲ. ಇರುವುದೆಲ್ಲವೂ ಇಲ್ಲಿ ಸಮೃದ್ಧ, ಯತೇಚ್ಛ ಮತ್ತು ಸಂಪೂರ್ಣವಾದ ಸರಕುಗಳೇ. ಬಿಸಿಲಿನಿಂದ ಒಣಗಿಯೂ ಹಿಮದಿಂದ ಒದ್ದೆಒದ್ದೆಯಾಗಿಯೂ ಇರುವ ದೇಶಗಳಿಗೆ ಭಾರತದ ಸರಕುಗಳ ಆವಶ್ಯಕತೆಯಿತ್ತು. ಅದಾಗಲೇ ಇಲ್ಲಿನ ಶ್ರೀಮಂತಿಕೆಗಳು ಅವರಿವರ ಕಣ್ಣಿಗೆ ಬೀಳಲಾರಂಭಿಸಿತ್ತು. ಕೋಳಿಮೊಟ್ಟೆಯಿಂದ ಹಿಡಿದು ಮುತ್ತುರತ್ನಗಳವರೆಗೂ ಸಕಲ ಸರಕುಗಳು ಸಂತೆಯ ಕಟ್ಟೆಯಲ್ಲಿ ವ್ಯಾಪಾರವಾಗುತ್ತವೆ ಎಂಬುದೂ ಕುಂಬಳಕಾಯಿ ಎಂಬುದಿದೆಯೆಂದೂ ಅದನ್ನು ರುಚಿಕಟ್ಟಾಗಿ ತಿನ್ನಬಹುದೆಂದೂ ತಿಳಿಯುತಿದ್ದಂತೆಯೇ ಪಾಶ್ಚಾತ್ಯರಿಗೆ ಭಾರತಕ್ಕೊಂದು ಸಮುದ್ರ ಮಾರ್ಗವನ್ನು ಶೋಧಿಸದೆ ಇರಲಾಗಲಿಲ್ಲ. ಹಾಗೆ ವಾಸ್ಗೊಡಗಾಮ ಬಂದಿದ್ದೂ ಜಾಮೋರಿನ್ ಆಶ್ರಯ ಕೊಟ್ಟಿದ್ದೂ ಆತ ವ್ಯಾಪಾರವನ್ನು ಆರಂಭಿಸಿದ್ದೂ ಸಪ್ಪೆ ನಾಲಿಗೆಯ ಬಿಳಿಯರಿಗೆ ಮತ್ತಷ್ಟು ರುಚಿ ಹತ್ತಿದ್ದು ಎಲ್ಲವೂ ಇತಿಹಾಸ.
ಅನಂತರ ಶುರುವಾಗಿದ್ದು ಶುದ್ಧ ವ್ಯಾಪಾರ. ಭಾರತದ ಮಸ್ಲಿನ್ ಬಟ್ಟೆಗಳು, ಸಾಂಬಾರ ಪದಾರ್ಥಗಳು, ನೇಯ್ಗೆಯ ವಸ್ತುಗಳು ಇಲ್ಲಿನ ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಯುರೋಪಿಗೆ ರಪ್ತಾಗಲಾರಂಭಿಸಿತು. ಯುರೋಪಿನಿಂದ ಇಲ್ಲಿಗೆ ಗಹನವಾದುದು ಏನೇನು ಬಂದಿಳಿಯಿತೋ ಎಂಬುದು ಗೊತ್ತಾಗಲಿಲ್ಲ. ಆದರೆ ನಮ್ಮ ಸರಕುಗಳು ಶ್ರೀಮಂತ ಎಂಬ ಅರಿವು ಭಾರತೀಯರಿಗೆ ಕ್ರಮೇಣ ಆಗಿದ್ದಂತೂ ಸತ್ಯ. ಇಂಥ ಒಂದು ಭಾವನೆ ಮೂಡುವುದನ್ನೇ ಕಾಯುತಿದ್ದ ವ್ಯಾಪಾರಿಗಳು ಒಬ್ಬರಾದ ಮೇಲೊಬ್ಬರಂತೆ ಧಾಂಗುಡಿಯಿಟ್ಟರು.ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಬಂದರು. ಪರಸ್ಪರ ಕಿತ್ತಾಡಿಕೊಂಡರು. ಎಲ್ಲವೂ ವ್ಯಾಪಾರಕ್ಕಾಗಿ . ಇಲ್ಲಿಯ ಸರಕುಗಳಿಗಾಗಿ. ಕೊನೆಗೆ ಬ್ರಿಟಿಷರೊಬ್ಬರು ಉಳಿದುಕೊಂಡರು. ಇಲ್ಲಿಯ ಹತ್ತಿಯನ್ನು ಕೊಂಡೊಯ್ದರು. ಅಲ್ಲಿ ಬಟ್ಟೆ ಮಾಡಿದರು. ಪುನಃ ಇಲ್ಲಿಗೇ ತಂದು ಮಾರಾಟವನ್ನೂ ಮಾಡಿದರು. ಭಾರತದ ಸೆಣಬು, ಕಬ್ಬುಗಳಿಗೂ ಇದೇ ಗತಿಯಾಯಿತು. ಭಾರತದ ಹಳ್ಳಿಯ ರೈತನ ಬೆವರಿನಿಂದ ಮಾಂಚೆಸ್ಟರ್ -ಲಿವರ್ ಪೂಲ್‌ಗಳು ಬೆಳೆದವು. ನೋಡನೋಡುತ್ತಲೇ ಭಾರತ ಬರಿದಾಗುವ ಪಾತ್ರೆಯಾಯಿತು. ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯವಾಯಿತು. ಹೀಗೆ ವ್ಯಾಪಾರ ಕೈಗೊಂಡ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪೆನಿ ಎಷ್ಟೊಂದು ಪ್ರಭಾವಿಯಾಗಿ ಬೆಳೆಯಿತೆಂದರೆ ಭಾರತದಲ್ಲಿ ರಾಷ್ಟ್ರೀಯತೆ ಎಂಬುದು ಮತ್ತೊಮ್ಮೆ ಜಾಗೃತವಾಗತೊಡಗಿತು. ಸ್ವದೇಶಿ ಮತ್ತು ಸ್ವಧರ್ಮಗಳಿಗೆ ದೇಶೀಯರು ಹೋರಾಟವನ್ನೇ ಮಾಡಬೇಕಾಯಿತು. ಇದರ ಪರಿಣಾಮವಾಗಿ ೧೮೫೭ರಲ್ಲಿ ಚಳವಳಿಗಳು ನಡೆದವು. ಅನಂತರ ಈಸ್ಟ್ ಇಂಡಿಯಾದ ಕೈಯಿಂದ ಬ್ರಿಟೀಷ್ ಪಾರ್ಲಿಮೆಂಟ್ ಅಧಿಕಾರ ತೆಗೆದುಕೊಂಡರೂ ವ್ಯಾಪಾರವೇನೂ ನಿಲ್ಲಲಿಲ್ಲ. ವ್ಯಾಪಾರದಿಂದ ವಶಹಾತು ಅಥವಾ ವಶಹಾತಿನ ಕಾರಣಕ್ಕೆ ವ್ಯಾಪಾರ ತಂತ್ರ ಭಾರತವನ್ನು ನಲುಗಿಸಿದ್ದೆಷ್ಟು? ಮಾಡಿದ ಗಾಯಗಳೆಷ್ಟು?
ಇದೇ ವ್ಯಾಪಾರದ ತೀವ್ರತೆಗೆ ಕಡಿವಾಣ ಹಾಕಲು ಮೋಹನದಾಸನೆಂಬ ಗಾಂಧಿ ವಕೀಲಿಕೆಯನ್ನು ಬಿಟ್ಟು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರಬೇಕಾಯಿತು. ಸಾವರ್ಕರರಂತಹ ಹೋರಾಟಗಾರರು ಸಾಗರದಾಚೆಯ ದ್ವೀಪದಲ್ಲಿ ಕಠೋರ ಶಿಕ್ಷೆ ಅನುಭವಿಸಬೇಕಾಯಿತು. ಗುಡಿಯೊಳಗಣ ಗಣಪನೂ ಬೀದಿಗೆ ಬರಬೇಕಾಯಿತು. ಹಲವು ದಾರ್ಶನಿಕರು, ಆಧುನಿಕ ಋಷಿಮುನಿಗಳು ಜನ್ಮತಾಳಬೇಕಾಯಿತು. ವೀರ ಯೋಧರು ಪ್ರಾಣತೆರಬೇಕಾಯಿತು. ಅವರ ವ್ಯಾಪಾರಕ್ಕೆ ನಮ್ಮ ಮಕ್ಕಳು ಉಪವಾಸವಿರಬೇಕಾಯಿತು. ಅವರ ವ್ಯಾಪಾರಕ್ಕೆ ನಾವು ದುಡಿಯಬೇಕಾಯಿತು. ಅವರ ವ್ಯಾಪಾರಕ್ಕೆಂದೇ ನಾವು ಬೆಳೆಯಬೇಕಾಯಿತು.ಅವರು ಮಾರುವರೆಂದೇ ನಾವು ಧರಿಸುವಂತಾಯಿತು. ಅವರ ವ್ಯಾಪಾರಕ್ಕೆ ನಾವು ಸುಂಕ ತೆರಬೇಕಾಯಿತು. ಕೊನೆಗೆ ಅವರ ವ್ಯಾಪಾರಕ್ಕೆ ನಾವು ಆಳಿಸಿಕೊಳ್ಳಲೂ ಬೇಕಾಯಿತು. ನಮ್ಮತನವನ್ನು ನಾವು ಕಳೆದುಕೊಳ್ಳಲೂಬೇಕಾಯಿತು. ವ್ಯಾಪಾರದ ಹಿಂದೆ ಎಷ್ಟೊಂದು ಕಥೆಗಳಿವೆ ನಮ್ಮ ಹಿಂದೆ. ಆ ಕಥೆಗಳಲ್ಲಿ ಎಷ್ಟೊಂದು ವ್ಯಥೆಗಳಿವೆ!?
ಅಂಥ ವ್ಯಾಪಾರದ ಕಥೆಯನ್ನು ನಾವು ಮರೆಯಬಹುದೇ?
ಏನೆಲ್ಲಾ ನಡೆದುಹೋಯಿತು ಆ ವ್ಯಾಪಾರದಿಂದ. ಜಲಿಯನ್‌ವಾಲಾಬಾಗ್‌ನಂಥ ಹತ್ಯಾಕಾಂಡವನ್ನೂ ,ಅರ್ಥವಾಗದ ಆಕ್ಟ್‌ಗಳನ್ನೂ ಕ್ವಿಟ್ ಇಂಡಿಯಾ ಚಳವಳಿಗಳನ್ನೂ , ಹೇರಿಕೆ-ಹೆದರಿಕೆಗಳನ್ನೂ ಅಡ್ಡಾದಿಡ್ಡಿ ಆಳ್ವಿಕೆಗಳನ್ನೂ , ಕೊನೆಗೆ ಸ್ವಾತಂತ್ರ್ಯವೆಂಬ ಕಾಗದ ಪತ್ರಗಳ ಬಟವಾಟೆಯನ್ನೂ, ನೆಹರೂರಂಥವರು ಗಾಧಿಗೆ ಕೂರುವುದನ್ನೂ ದೇಶ ಮೂಕವಾಗಿ ನೋಡಬೇಕಾಯಿತು. ಎಲ್ಲವೂ ವಿದೇಶಿಯ ವ್ಯಾಪಾರದಿಂದ . ಅವರ ವ್ಯಾಪಾರದ ಸದ್ದುಗಳು ಇಂದಿಗೂ ಭಾರತದ ಕಿವಿಗಳಿಂದ ಸಂಪೂರ್ಣ ಹೊರಟುಹೋಗಿಲ್ಲ.
ಹಾಗಾಗಿ ವ್ಯಾಪಾರದ ಕಥೆ ಭಾರತ ಮರೆಯಭಾರದ ಕಥೆ.
ಆದರೆ, ಅವರ ಆಳುವ ಗುಣವೆನ್ನಿ ಅಥವಾ ನಮ್ಮ ಆಳಿಸಿಕೊಳ್ಳುವ ಗುಣವೆನ್ನಿ ನಮ್ಮ ಇತಿಹಾಸವನ್ನು ನಾವು ಮರೆತಿದ್ದೇವೆ. ಅವರ ಇತಿಹಾಸವನ್ನು ಅವರು ಮರೆತಿಲ್ಲ. ವ್ಯಾಪಾರದ ಗುಂಗು, ವ್ಯಾಪಾರದ ಮೂಲಕ ಭಾರತವನ್ನಾವರಿಸುವ ಆಸೆಯಿನ್ನೂ ಪಾಶ್ಚಾತ್ಯರಲ್ಲಿ ಹೊರಟುಹೋಗಿಲ್ಲ ಎಂಬುದರ ಲಕ್ಷಣಗಳು ಆಗಾಗ್ಗೆ ಕಂಡುಬರುತ್ತಿರುತ್ತವೆ. ಕಳೆದ ವಾರವಷ್ಟೇ ಕೇಂದ್ರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಒಮ್ಮತ ವ್ಯಕ್ತಪಡಿಸಿ ಜಾರಿಗೆ ತರಲಾಗಿರುವ FDI (forign direct investment)ಅಂದರೆ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಶೇ. ೫೧ರಷ್ಟು ಇರಬಹುದು ಎಂಬ ನಿರ್ಣಯವನ್ನು ನೋಡಿದಾಗ ನಮ್ಮ ಮರೆತುಹೋದ ಇತಿಹಾಸವೂ ಅವರು ಮರೆಯಲಾರದ ಇತಿಹಾಸ ಯಾವುದೆಂಬುದು ಗೋಚರವಾಗುತ್ತದೆ. ವ್ಯಾಪಾರದಲ್ಲಿ ವಿದೇಶಿ ಕೈವಾಡ ಎಂದಾಗ ಆಡಳಿತ ಬೆಚ್ಚಿಬೀಳಬೇಕು. ಅಂಥಾ ಇತಿಹಾಸದ ಗಾಢಾ ಛಾಯೆ ಇರುವ ದೇಶದಲ್ಲಿ ಇದೇನಿದು FDI ? ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ? ಯಾವ ದೇಶವೇ ಆಗಲಿ ತನ್ನ ಚಿಲ್ಲರೆ ವ್ಯಾಪಾರ ಪರರ ಸೊತ್ತಾದರೆ ತಾನು ಸತ್ತಂತೆಯೇ. ಇದೀಗ ಭಾರತದಲ್ಲಿ ಆಗುತ್ತಿರುವುದು ಕೂಡ ಅದೇ. ಭಾರತದಲ್ಲಿ ಚಿಲ್ಲರೆ ವ್ಯಾಪಾರವೆಂದರೆ ನೆನಪಾಗುವುದು ವಾರಕ್ಕೊಮ್ಮೆ ನಡೆಯುವ ಸಂತೆಗಳು, ಕಿರಾಣಿ ಅಂಗಡಿಗಳು, ಅಂಗಡಿಯಾತ ಮತ್ತು ಗ್ರಾಹಕನ ನಡುವಿನ ಸಂಬಂಧಗಳು, ಸಾಲಗಳು, ಅಂಗಡಿಯಾತ ಮತ್ತು ಕೃಷಿಕನ ನಡುವಿನ ಅನ್ಯೋನ್ಯತೆಗಳು. ಇಲ್ಲಿ ಚಿಲ್ಲರೆ ವ್ಯಾಪಾರವೆಂದರೆ ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯದಂಥವು. ಇದು ಅಪ್ಪಟ ಸ್ವಾವಲಂಭನೆಯ ಉದ್ದಿಮೆಗಳು. ಊರ ಮಧ್ಯದಲ್ಲೋ, ರಥಬೀದಿಯಲ್ಲೋ , ಪೇಟೆಯ ಮೂಲೆಯಲ್ಲೋ ,ಸೆಟ್ಟರೋ ಕಾಮತರೋ ಇಟ್ಟುಕೊಂಡ ಕಿರಾಣಿ ಅಂಗಡಿಗಳು ಅಥವಾ ರೈತರೇ ತಾವು ಬೆಳೆದ ಸರಕುಗಳನ್ನು ತಾವೇ ವ್ಯಾಪಾರ ಮಾಡುವ ವಿಧಾನಗಳು ಸಶಕ್ತ ಸಮಾಜದ ಮಾರ್ಗಗಳಾಗಿದ್ದವು. ಭಾರತದಲ್ಲಿ ಈ ಚಿಲ್ಲರೆ ವ್ಯಾಪಾರ ಉದ್ದಿಮೆಗಳು ಅತ್ಯಂತ ಪ್ರಭಾವಿ ಉದ್ಯಮಗಳೆಂದು ಹೆಸರರನ್ನೂ ಪಡೆದಿದ್ದವು. ಎರಡು ರೂ. ಕೊತ್ತಂಬರಿ ಸೊಪ್ಪಿಗೂ ೫೦ಗ್ರಾಮು ಮೆಂತ್ಯಕ್ಕೂ ಕೂಡ ಇಲ್ಲಿ ಸ್ಥಾನವುಂಟು. ಅದರ ಪರಿಣಾಮವಾಗಿ ಈ ಚಿಲ್ಲರೆ ವ್ಯಾಪಾರ ವಲಯ ದೇಶದ ಒಟ್ಟು ಜಿಡಿಪಿ ಯ ಶೇ. ೧೪ರಷ್ಟು ಪಾಲನ್ನು ಪಡೆದುಕೊಂಡಿದೆ. ಸ್ವಾವಲಂಭನೆಯ , ಮಹತ್ತ್ವಾಕಾಂಕ್ಷೆಯ ವ್ಯಕ್ತಿಗೆ ಚಿಲ್ಲರೆ ವ್ಯಾಪಾರ ಉದ್ಯಮ ಗೌರವಾನ್ವಿತ ಸ್ಥಾನವನ್ನು ಕೊಟ್ಟಿದೆ. ದೇಶದ ಒಟ್ಟು ಉದ್ಯೋಗಗಳಲ್ಲಿ ಚಿಲ್ಲರೆ ವ್ಯಾಪಾರ ಉದ್ಯಮ ಶೇ. ೭ರಷ್ಟು ಪಾಲನ್ನು ಹೊಂದಿದೆ. ಇವಿಷ್ಟು ಕಣ್ಣಿಗೆ ಕಾಣುವ ಸಂಗತಿಗಳಾದರೆ ಚಿಲ್ಲರೆ ವ್ಯಾಪಾರಕ್ಕೆ ಪೂರಕವಾಗಿರುವ ಸಂಗತಿಗಳೂ ಹಲವಿವೆ. ಅಂದರೆ ದೇಶದ ಬಹುಸಂಖ್ಯಾತ ಜನರು ಒಂದಲ್ಲಾ ಒಂದು ರೀತಿಯಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ಅವಲಂಭಿಸಲೇ ಬೇಕು. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಭಾರತೀಯ ಕಂಪೆನಿಗಳು ಬಹುಬ್ರಾಂಡ್‌ಗಳ ಚಿಲ್ಲರೆ ವ್ಯಾಪಾರಕ್ಕೆ ಇಳಿದರೂ ಕೂಡ ಭಾರತೀಯ ಚಿಲ್ಲರೆ ವ್ಯಾಪಾರ ಉದ್ದಿಮೆ ಸಂಪೂರ್ಣ ನಾಶವಾಗಿರಲಿಲ್ಲ. ಏಕೆಂದರೆ ಕಿರಾಣಿ ಅಂಗಡಿಗಳ ಮೇಲೆ ಜನರಿಗೊಂದು ನಂಬಿಕೆ ಇದ್ದೇ ಇತ್ತು. ಬಿಗ್ ಬಜಾರಿನ ಬೆಲ್ಲಕಿಂತ ಭಟ್ಟರಂಗಡಿಯ ಬೆಲ್ಲಕ್ಕೇ ಇಂದಿಗೂ ಬೇಡಿಕೆ ಹೆಚ್ಚು. ಹಾಗಾಗಿ ಇಂದಿಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕಿರಾಣಿ ಅಂಗಡಿಗಳ ವಹಿವಾಟು ಮಾಲ್‌ಗಳ ವ್ಯವಹಾರಕ್ಕಿಂತ ಸಾವಿರಪಟ್ಟು ಅಧಿಕವಿದೆ. ಈ ಅಂಕಿಅಂಶವನ್ನು ಕಂಡುಹಿಡಿದ ಸರಕಾರ ಇದೀಗ ಚಿಲ್ಲರೆ ವ್ಯಾಪಾರವನ್ನು ವಿದೇಶಿ ಕಂಪೆನಿಗಳ ಪಾದಕ್ಕಿಟ್ಟು ಧನ್ಯತೆಯನ್ನು ಅನುಭವಿಸುತ್ತಿದೆ. ಇನ್ನು ದೇಶದ ೫೩ ಮಹಾನಗರಗಳಲ್ಲಿ ವಾಲ್ ಮಾರ್ಟ್, ಕ್ಯಾರಿಫೋರ್ ಮತ್ತು ಟೆಸ್ಕೋಗಳಂತಹ ಕಂಪೆನಿಗಳು ಮಳಿಗೆಗಳನ್ನು ತೆರೆದು ತೆಂಗಿನ ಕಾಯಿ, ಉದ್ದು, ರವೆಗಳ ವ್ಯಾಪಾರವನ್ನು ಮಾಡಲಿವೆ. ಮಹಾನಗರದಲ್ಲಿ ಪ್ರಭಾವಿಗಳಾಗಿದ್ದ ಕಿರಾಣಿ ಅಂಗಡಿಗಳ ಭಾಗಿಲುಗಳು ಮುಚ್ಚಲಿವೆ. ಯಾವ ಕಾರಣಕ್ಕೂ ಮಣ್ಣಿನ ಮಕ್ಕಳ ಅಂಗಡಿಗಳು ಓಡಿಬಂದವರ ಅಂಗಡಿಗಳ ಸಂಖ್ಯೆಗಿಂತ ಹೆಚ್ಚಂತೂ ಇರಬಾರದೆಂಬುದು ಸರಕಾರದ ಆದೇಶವಾಗಲಿದೆ. ಹೀಗೆ ಶೇ.೫೧ ರಷ್ಟು ಬಂಡವಾಳ ಹೂಡಿಕೆಗೆ ಆಸ್ಪದ ನೀಡುವುದರಿಂದ ಮುಂದಿನ ಮೂರು ವರ್ಷದಲ್ಲಿ ೧೦ ಮಿಲಿಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಮೋಡಿಯ ಮಾತನ್ನೂ ಸರಕಾರ ಹೇಳುತ್ತಿವೆ. ಸ್ವಾವಲಂಭನೆಯ ಉದ್ಯೋಗವನ್ನು ಕಿತ್ತುಕೊಂಡ ಸರಕಾರ ಭಾರತೀಯ ಸೇಲ್ಸ್ ಮ್ಯಾನ್ ಗಳನ್ನು , ವಾಚ್‌ಮ್ಯಾನ್‌ಗಳನ್ನು ಹೆಚ್ಚಿಸಲಿವೆ.
ದೇಶದಲ್ಲಿ ಈಗಾಗಲೇ ಸಗಟು ವ್ಯಾಪಾರದಲ್ಲಿ ವಾಲ್‌ಮಾರ್ಟ್‌ನಂಥ ಕಂಪೆನಿಗಳು ಲಗ್ಗೆ ಇಟ್ಟಿವೆ. ಏಕ ಬ್ರಾಂಡ್ ಮಾರಾಟಮಳಿಗೆಗಳು ಭಾರತದ ಸಣ್ಣಸಣ್ಣ ಪಟ್ಟಣಗಳಲ್ಲೂ ಇವೆ. ಇವುಗಳಾಗಲೇ ಭಾರತೀಯರಿಗೆ ಬ್ರಾಂಡಿನ ಹುಚ್ಚನ್ನು ಹಿಡಿಸಿ ಕೊಳ್ಳುಭಾಕ ಸಂಸ್ಕೃತಿಯನ್ನು ಮಧ್ಯಮವರ್ಗಗಳಲ್ಲಿ ನೆಲೆವೂರಿಸಿವೆ. ಇನ್ನು ಚಿಲ್ಲರೆ ವ್ಯಾಪಾರದಲ್ಲಿ ಬಹುಬ್ರಾಂಡ್ ಮಾರಾಟದ ಸ್ವರೂಪವೇನಾಗಬಹುದೆಂಬುದನ್ನು ಊಹಿಸುವುದು ಅತ್ಯಂತ ಸುಲಭ. ರೀಬಾಕ್ ಬ್ರಾಂಡಿನ ಶೂಗಳಿಗೆ ಐದು ಸಾವಿರ ಕೊಡುವ ಮಾನಸಿಕತೆ ಬ್ರಾಂಡೆಡ್ ಕುಂಬಳ ಕಾಯಿಗೆ ನೂರಿನ್ನೂರು ಕೊಡದಿರುತ್ತದೆಯೇ? ಆ ಕುಂಬಳ ಕಾಯಿ ಪಕ್ಕದ ಊರಲ್ಲಿ ಬೆಳೆದರೂ ಮಾರುಕಟ್ಟೆಯ ಏಕಸ್ವಾಮ್ಯ ಅದನ್ನು ಬ್ರಾಂಡ್ ಆಗಿಯೇ ಮಾರುವ ಅನಿವಾರ್ಯತೆಯನ್ನು ಸೃಷ್ಟಿಗೊಳಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಆದರೆ ಸರಕಾರ ಮತ್ತು ಧೈತ್ಯ ಕಂಪೆನಿಗಳು ಈಗಾಗಲೇ ಉದ್ವೇಗಭರಿತರಾದಂತೆ ಮಾತಾಡುತಿದ್ದಾರೆ. ರೈತರು ಈಗ ಗಳಿಸುತ್ತಿರುವುದಕ್ಕಿಂತ ಶೇ. ೧೦-೩೦ರಷ್ಟು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ ಎಂಬುದು ಕೂಡ ಒಂದು ಹೇಳಿಕೆ. ಆದರೆ ರೈತರಿಗೂ ಹೆಚ್ಚಿನ ಬೆಲೆ ಕೊಟ್ಟು ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ನೀಡುತ್ತಾ ಇದ್ದಿದ್ದರೆ ವಾಲ್ ಮಾರ್ಟ್ ಜಗತ್ತಿನ ಅತ್ಯಂತ ದೊಡ್ಡ ಮಾರಾಟ ಸಂಸ್ಥೆಯಾಗುತಿತ್ತೇ ಎಂಬ ಸತ್ಯವನ್ನೂ ಪರಾಮರ್ಶಿಸಬೇಕಲ್ಲವೇ? ಭಾರತದ ರೈತರಿಗೆ ಹೆಚ್ಚಿನ ಬೆಲೆ ತೆರುವುದಕ್ಕಿಂತ ಕಡಿಮೆ ಬೆಲೆಗೆ ವಿದೇಶದಿಂದ ಸರಕುಗಳನ್ನು ತರುವ ಸಂದರ್ಭವನ್ನೇಕೆ ವಿದೇಶಿ ಕಂಪೆನಿಗಳು ಕಳೆದುಕೊಂಡಾರು? ಚೀನಾ ಸರಕುಗಳು ಭಾರತಕ್ಕೆ ಲಗ್ಗೆ ಇಟ್ಟ ದೃಷ್ಟಾಂತವೇ ನಮ್ಮೆದುರು ಇಲ್ಲವೇ? ಒಂದು ತೆಂಗಿನ ಕಾಯಿಗೂ ಹೈಪರ್ ಮಾರ್ಕೆಟ್‌ಗಳಿಗೋ ಸೂಪರ್ ಮಾರ್ಕೆಟ್‌ಗಳಿಗೋ ಹೋಗುವಂತೆ ಮಾಡಿಬಿಟ್ಟಿತಲ್ಲಾ ಸರಕಾರ.
ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ನಮ್ಮ ವ್ಯಾಪಾರಕ್ಕೆ ವಿದೇಶಿಯರ ಉಪದ್ರವ ನಿಂತಿಲ್ಲವೆಂದರೆ ೧೯೪೭ರಲ್ಲಿ ನಮಗೆ ಸಿಕ್ಕಿದ್ದೇನು? ಕ್ವಿಟ್ ಇಂಡಿಯಾ ಎಂದು ಓಡಿಸಿದ್ದು ಯಾರನ್ನು? ಈಸ್ಟ್ ಇಂಡಿಯಾ ಕರೆಯದೇ ಬಂತು. ವಾಲ್ ಮಾರ್ಟ್ ಕರೆಯೋಲೆಯೊಂದಿಗೇ ಬಂತು. ಇಷ್ಟೇ ವ್ಯತ್ಯಾಸ.

No comments: