Tuesday, January 31, 2012

ಗಾಂಧಿ ಕನಸು ಕಂಡಿದ್ದರು, ಮೋದಿ ನನಸು ಮಾಡಿದರು


ಕೆಲವರ್ಷಗಳ ಹಿಂದೆ ಕನ್ನಡದ ಪತ್ರಿಕೆಯೊಂದರ ಹಬ್ಬದ ವಿಶೇಷಾಂಕ ಪ್ರಕಟವಾಗಿತ್ತು. ಅದರಲ್ಲಿನ ಒಂದು ಕಥೆಯನ್ನು ಸೃಜನಾತ್ಮಕವೆಂದು ಘೋಷಿಸಿ ಮೊದಲ ಬಹುಮಾನವನ್ನೂ ಕೊಡಲಾಗಿತ್ತು. ಶ್ರೀರಂಗಪಟ್ಟಣದ ಟಿಪ್ಪುವಿನ ಸಮಾಧಿಯ ಮೇಲೆ ಒಂದು ಬಿಳಿ ಬಣ್ಣದ ಪಾರಿವಾಳಕ್ಕೆ ಗಾಯವಾಗಿದೆ. ಅದಕ್ಕಿನ್ನೂ ಪ್ರಾಣಭೀತಿಯಿದೆ. ತನ್ನ ಜೀವ ರಕ್ಷಿಸಿಕೊಳ್ಳಲು ಅದು ನಾಡಿನಾದ್ಯಂತ ಹಾರಿದರೂ ಸುರಕ್ಷತೆಯ ಭಾವ, ಜಾಗ ಅದಕ್ಕಿನ್ನೂ ಸಿಕ್ಕಿಲ್ಲ. ಕೊನೆಗೆ ಅದು ಶಾಂತಿಯನ್ನರಸಿ ಗಾಂಧಿ ನಾಡಿಗೆ ಹಾರುತ್ತದೆ. ಅಲ್ಲಿ ಅದಕ್ಕೆ ಎತ್ತ ನೋಡಿದರತ್ತ ರಕ್ತದ ಕಲೆಗಳೇ ಕಂಡು ಅರಬ್ಬೀ ಕಡಲೇ ವಾಸಿಯೆಂದು ಅತ್ತ ಹಾರುವುದು ಆ ಕಥೆಯ ಓಘ. ಆ ಪಾರಿವಾಳವಾದರೋ ಶ್ವೇತಾಂಬರದ ಚುಕ್ಕಿಯು, ಶಾಂತಿಯ ದೂತನು ಎಂದೆಲ್ಲಾ ರೂಪಕಗಳನ್ನು ಪೋಣಿಸಿ ಕಥೆಯನ್ನು ಓಡಿಸಲಾಗಿತ್ತು. ಅಂಥ ವಿಚಿತ್ರವೂ, ವಿಪರೀತವೂ, ಒಣ ಕಥಾಹಂದರವೂ ಆದಂಥ ಆ ಕಥೆಯನ್ನು ಕನ್ನಡದ ಬುದ್ಧಿಜೀವಿ ತೀರ್ಪುಗಾರರು ಟಿಪ್ಪುವನ್ನು ಮತ್ತು ಗಾಂಧಿಯನ್ನು ಹೊಗಳಲು ಬಳಸಿಕೊಂಡಿದ್ದರು. ಕರ್ನಾಟಕದ ಕೋಮುವಾದಿಗಳೆಂದು ಸಂಘಪರಿವಾರವನ್ನು ಮತ್ತು ಸಾವಿನ ವ್ಯಾಪಾರಿಯೆಂದು ನರೇಂದ್ರ ಮೋದಿಯನ್ನು ಯದ್ವಾತದ್ವಾ ಜಾಡಿಸಿದ್ದರು. ಶಾಂತಿಯ ಪ್ರತಿಪಾದನೆ ಎನ್ನುತ್ತಾ ಸುಳ್ಳಿನ ಜಾಲರಿಯಲ್ಲೇ ಕಥೆ ಒದ್ದಾಡುತ್ತಿತ್ತು. ಕಥೆ ಕಾಂಗ್ರೆಸ್ ಪ್ರಾಯೋಜಿತ ಜಾಹೀರಾತಿನಂತಿದ್ದುದರಿಂದ ಮೊದಲ ಬಹುಮಾನವೂ ಸಿಕ್ಕಿತ್ತು. ನಿಂದಕರು ಮೋದಿಯನ್ನು ತೆಗಳಲು ಕಥೆಯೂ ಒಂದು ಅಸ್ತ್ರವೇ ಎಂಬುದನ್ನು ತೋರಿಸಿಕೊಟ್ಟಿದ್ದರು. ಹತ್ಯೆ ಮಾಡಲು ದಾರಿಕಾಯುತ್ತಾ ಕುಳಿತವರು ನೆರಳನ್ನೂ ಬಿಡರು ಎಂಬಂತೆ ಪಾರಿವಾಳವನ್ನಿಟ್ಟುಕೊಂಡು ಗಾಂಧಿಯನ್ನು ತೆಗಳಿದ್ದರು. ನೆರಳಿಗೂ ಗಧಾಪ್ರಹಾರ ಮಾಡಿದ್ದರು.
ವಾಸ್ತವವಾಗಿ ಮೋದಿ ಎಂಬ ಗುಜರಾತಿನ ಆಡಳಿತಗಾರನ ಆ ನೆರಳು ಸ್ವತಃ ಗಾಂಧಿಯದ್ದೇ. ಗಾಂಧಿ ಕನಸ್ಸಿನ ರಾಮರಾಜ್ಯವನ್ನು ಅರಸಲು ಹೊರಡುವವರಿಗೆ ಗುಜರಾತಿನಲ್ಲಿ ಕಾಣುವುದು ಮೋದಿಯೇ. ಗಾಂಧಿ ಕೊಂದವರ ಸಂತಾನದವನು ಎಂಬ ಹಣೆಪಟ್ಟಿಹೊತ್ತುಕೊಂಡ ಮೋದಿಯಿಂದಲೇ ಗಾಂಧಿಜೀಯ ಕನಸುಗಳು ಇಂದು ಒಂದೊಂದಾಗಿ ಸಾಕಾರವಾಗುತ್ತಿದೆ. ದೇಶದೆಲ್ಲೆಡೆ ಗಾಂಧಿ ಚಿಂತನೆಗಳು ಕೇವಲ ಪಠ್ಯಗಳಿಗೆ ಮತ್ತು ಭಾಷಣಗಳಿಗಷ್ಟೇ ಸೀಮಿತವಾಗಿರಬಹುದು. ಆದರೆ ಗುಜರಾತಿನಲ್ಲಿ ಮಾತ್ರ ಗಾಂಧಿ ತತ್ತ್ವವಿಚಾರದ ಅನುಷ್ಠಾನವಾಗಿದೆ. ಹಾಗಾಗಿ ಆ "ಶ್ವೇತಾಂಬರದ ಚುಕ್ಕಿ" ಬರೀ ಪೂರ್ವಾಗ್ರಹಪೀಡಿತ ಹಕ್ಕಿ.
ಗಾಂಧಿ ಒಬ್ಬ ಕನಸುಗಾರ. ಸಮಾಜದ ಬಗ್ಗೆ ಗಾಂಧೀಜಿಯವರಿಗೆ ಸ್ಪಷ್ಟ ಕಲ್ಪನೆಯಿತ್ತು. ತನ್ನ ವ್ಯಾಪ್ತಿಯಲ್ಲಿ ತಾನು ಸ್ವಾವಲಂಭಿಯಾಗಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಅವರ ಚಿಂತನೆಗಳನ್ನು ದೇಶವೇ ಒಪ್ಪಿಕೊಂಡಿತ್ತು. ಗ್ರಾಮಸ್ವರಾಜ್ಯವೇ ಸ್ವಾತಂತ್ರ್ಯ ಎಂದು ಅವರು ಬಿಂಬಿಸಿದ್ದರು.ಸಮಾಜದ ತಳಮಟ್ಟದ ಅಧ್ಯಯನಾಧಾರಿತ ಅರ್ಥವ್ಯವಸ್ಥೆಯನ್ನು ಅವರು ಸಮರ್ಥವಾಗಿ ಮಂಡಿಸಿದ್ದರು. ದರಿದ್ರನ ಉದ್ದಾರವೇ ದೇಶದ ಉದ್ದಾರವೆಂದು ಸಾರಿದ್ದರು. ಸರ್ವರಿಗೂ ಶಿಕ್ಷಣ, ಮಹಿಳೆಯರಿಗೆ ಪ್ರಾಧಾನ್ಯ, ಮೂಲತಃ ಗಾಂಧೀಜಿಯದ್ದೇ ಚಿಂತನೆಗಳು. ಆದರ್ಶದ ಪಾಲನೆ, ಸತ್ಯಸಂದ ನಡವಳಿಕೆ, ಪಾನನಿರೋಧ, ಶ್ರಮಾಧಾರಿತ ಬದುಕು, ಸಂಸ್ಕಾರಯುತ ಕುಟುಂಬ, ಸರಳ ಜೀವನ-ಉನ್ನತ ಚಿಂತನೆ, ಗುಡಿ ಕೈಗಾರಿಕೆ, ಸ್ವಚ್ಛ ಪರಿಸರ ಮುಂತಾದ ಶ್ರೇಷ್ಠ ಮೌಲ್ಯಗಳನ್ನು ಅವರು ಪ್ರತಿಪಾದಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಈ ಎಲ್ಲಾ ಆದರ್ಶಗಳು ಮಣ್ಣುಪಾಲಾದವು. ಗಾಂ ಧರಿಸದ ಟೊಪ್ಪಿಯನ್ನು ಧರಿಸಿ ಜನರಿಗೆ ಟೋಪಿ ಹಾಕಿದ್ದು ಮತ್ತು ಗಾಂಧಿ ಹೆಸರಿನಲ್ಲಿ ರಾಜಕಾರಣ ಮಾಡಿದ್ದನ್ನು ಬಿಟ್ಟರೆ ಗಾಂಧೀಜಿಗೂ ಗ್ರಾಮಸ್ವರಾಜ್ಯಕ್ಕೂ ಏನೇನೂ ಸಂಬಂಧವಿಲ್ಲ ಎನ್ನುವಂತೆ ಸುದೀರ್ಘಕಾಲ ಕಾಂಗ್ರೆಸ್ ದೇಶವನ್ನು ಆಳಿತು. ಗರೀಭಿ ಹಠಾವೋ ಎಂಬುದು ಭರ್ಜರಿ ಘೋಷಣೆಯಾಯಿತೇ ಹೊರತು ರಾಮರಾಜ್ಯ ಮರೀಚಿಕೆಯಾಯಿತು.
ಆದರೆ ಇಂದಿನ ಗುಜರಾತನ್ನು ನೋಡಿದಾಗ ಸ್ವತಃ ಗಾಂಧೀಜಿಯೇ ತಲೆದೂಗಬೇಕು ಎನಿಸುತ್ತದೆ. ತನ್ನ ಅರ್ಥಚಿಂತನೆಯ ಸಾಕಾರ ರೂಪವನ್ನು ಗಾಂಧೀಜಿ ಕಣ್ಣಾರೆ ಕಾಣಲಿಲ್ಲ. ತನ್ನ ಚಿಂತನೆ ಇಷ್ಟೊಂದು ಅದ್ಭುತವಾಗಿ ಅನುಷ್ಠಾನಕ್ಕೆ ಯೋಗ್ಯವೆಂದು ಅವರಿಗೂ ಗೊತ್ತಿರಲಿಕ್ಕಿಲ್ಲ. ಗಾಂಧೀ ತತ್ತ್ವದ ಒಂದೊಂದು ಎಳೆಯೂ ಇಲ್ಲಿ ವಟವೃಕ್ಷದಂತೆ ವಿಸ್ತಾರವಾಗಿದೆ.
ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಘೋಷಿಸಿದ ಗಾಂಧೀಜಿಯವರಿಗೆ ಸ್ವಾವಲಂಭನೆ ಮತ್ತು ಸ್ವಾಭಿಮಾನದ ಬದುಕಿನ ವಾತಾವರಣ ಹಳ್ಳಿಗಳೇ ಎಂಬುದರ ಅರಿವಿತ್ತು. ಹಾಗಾಗಿ ಅವರು ಹಳ್ಳಿಗಳಿಗೆ ಮರಳಿ ಎಂದು ಕರೆ ನೀಡಿದ್ದರು. ಆದರೆ ಕಾಲ ಉರುಳಿದಂತೆ ಜನರು ಹಳ್ಳಿಗಳನ್ನು ತ್ಯಜಿಸತೊಡಗಿದರು. ಗುಜರಾತ್ ಕೂಡ ಅದಕ್ಕೆ ಹೊರತಾಗಿರಲಿಲ್ಲ. ಗಾಂಧಿ ನಾಡಿನಲ್ಲಿಯೇ ಗಾಂಧಿ ಚಿಂತನೆ ಮಕಾಡೆ ಮಲಗಿಬಿಟ್ಟಿತ್ತು. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಅನಂತರ ಗಾಂಧಿ ಚಿಂತನೆಗಳಿಗೂ ಜೀವ ಬಂತು. ಮೋದಿ ಕೈಗೊಂಡ ಕ್ರಮಗಳಿಂದ ಜನರು ಗುಜರಾತಿನ ಪಟ್ಟಣಗಳಿಂದ ಜನರು ಹಳ್ಳಿಗಳತ್ತ ಮರಳಿದರು. ಇಂದು ಗುಜರಾತಿನ ಒಟ್ಟು ಜನಸಂಖ್ಯೆಯ ಶೇ.೬೦ ಭಾಗ ಹಳ್ಳಿಗಳಲ್ಲಿವೆ. ಏಕೆಂದರೆ ಹಳ್ಳಿಗಳಲ್ಲಿ ಎಲ್ಲವೂ ಇದೆ. ೨೪ ಗಂಟೆ ವಿದ್ಯುತ್ ಇದೆ, ಹಳ್ಳಿಗಳಲ್ಲಿ ಜನರಿಗೆ ಬದುಕುವ ದಾರಿಗಳು ಕಾಣುತ್ತಿವೆ, ಹಳ್ಳಿಗಳಲ್ಲೇ ಜನರಿಗೆ ಲಾಭವಿದೆ. ಅದುವರೆಗೆ ಪಟ್ಟಣಗಳ ಟೆಕ್ಸ್ ಟೈಲ್ಸ್ ಮಿಲ್ಲುಗಳಲ್ಲಿ , ವಜ್ರದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು ಊರಲ್ಲಿ ಸ್ವಂತ ಉದ್ದಿಮೆಗಳನ್ನು ಕೈಗೊಂಡಿದ್ದಾರೆ. ಗುಡಿಕೈಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಫ್ಲೋರ್ ಮಿಲ್ಲುಗಳು, ಹೊಲಿಗೆ ಯಂತ್ರಗಳಿಗೆ ಮೋದಿ ಸಾಲ ಕೊಟ್ಟರು. ಅದಕ್ಕಿಂತ ಹೆಚ್ಚಾಗಿ ೨೪ ಗಂಟೆ ಕರೆಂಟ್ ಕೊಟ್ಟರು. "ಹಳ್ಳಿಗಳಿಗೆ ಹೋಗಿ ಏನು ಮಾಡಬೇಕು?" ಎಂಬುದಕ್ಕೆ ಗುಜರಾತಿನಲ್ಲಿ ಆಸ್ಪದವೇ ಇಲ್ಲ. "ಹಳ್ಳಿಯಲ್ಲೇ ಏನೂ ಮಾಡಬಹುದು" ಎಂಬುದು ಸದ್ಯದ ಪರಿಸ್ಥಿತಿ. ಗುಜರಾತಿನ ಯಾವ ಮಹಿಳೆಯೂ ಇಂದು ಸುಮ್ಮನೆ ಕೂತಿಲ್ಲ. ಅವರೆಲ್ಲರೂ ಇಂದು ಒಂದಲ್ಲಾ ಒಂದು ಗುಡಿ ಕೈಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಂಬ್ರಾಯಿಡರಿ, ಚಿತ್ರಕಲೆ, ಕಲ್ಲುಗಳಲ್ಲಿ ಚಿತ್ತಾರ, ಬಿದಿರಿನ ಉತ್ಪನ್ನಗಳು, ಹೈನುಗಾರಿಕೆಯಲ್ಲಿ ಬಿಡುವಿಲ್ಲದ ಮಹಿಳೆಯರು ಗುಜರಾತಿನ ಶಕ್ತಿಯೆಂದೇ ಹೇಳಬೇಕು. ಒಮ್ಮೆ ಗಾಂ "ಎಲ್ಲಿ ಮಹಿಳೆಯರು ಸಮೃದ್ಧಿಯಿಂದಿರುವರೋ ಅಲ್ಲಿ ಸಂತೃಪ್ತಿ ಇರುತ್ತದೆ" ಎಂದು ಹೇಳಿದ್ದರು. ಆ ಕನಸಿಂದು ಗುಜರಾತಿನಲ್ಲಿ ಸಾಕಾರವಾಗುತ್ತಿದೆ. ಏಕೆಂದರೆ ಗುಜರಾತಿನಲ್ಲಿಂದು ಕುಡಿದು ಬರುವ ಗಂಡನಿಲ್ಲ. ಪೋಲಿ ಬಿದ್ದ ಮಗನಿಲ್ಲ. ಮನೆಯಲ್ಲಿ ದಾರಿದ್ರ್ಯವಿಲ್ಲ. ಚಿಂತೆಗೆ ಸಮಯವಿಲ್ಲ.ಏಕೆಂದರೆ ಹೆಂಡವಿಲ್ಲ. ಕತ್ತಲಿಲ್ಲ. ರಾಮರಾಜ್ಯವೆಂದರೆ ಇನ್ನು ಬೇರೇನಾದರೂ ಇದೆಯೇನು?
ಇಂದು ಗುಜರಾತಿನ ಅಹಮದಾಬಾದ್ ಮತ್ತು ಸೂರತ್ ನಗರಗಳು ಜಾಗತಿಕ ಟೆಕ್ಸ್‌ಟೈಲ್ ಉದ್ಯಮದ ಆಧಾರಸ್ತಂಭಗಳು. ವಾಸ್ತವವಾಗಿ ಅವುಗಳ ಮೂಲಶಕ್ತಿ ಮಹಿಳೆಯರೇ. ನಾನಾ ಎನ್.ಜಿ. ಓ ಗಳು , ಸಹಕಾರಿ ಸಂಸ್ಥೆಗಳು ಪೈಪೋಟಿಗೆ ಬಿದ್ದವರಂತೆ ಗುಡಿಕೈಗಾರಿಕೆಗೆ ಪ್ರೋತ್ಸಾಹ ನೀಡುತ್ತಿವೆ. ಅಗರಬತ್ತಿ ಉದ್ಯಮ , ವಜ್ರವನ್ನು ಹೊಳಪುಗೊಳಿಸುವ ಕಾಯಕದಲ್ಲಿ ಮಹಿಳೆಯರೇ ಮೇಲುಗೈ. ಚಿನ್ನ, ಬೆಳ್ಳಿ ಮತ್ತು ಕೃತಕ ಆಭರಣಗಳ ತಯಾರಿಕೆಯಲ್ಲಿ ಕೂಡ ಗುಜರಾತಿನ ಮಹಿಳೆಯರು ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಗುಜರಾತಿನ ಬೆಹನ್‌ಗಳ ಕೈಚಳಕದಿಂದ ತಯಾರಾದ ಆಭರಣಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಗಾಂಧೀಜಿ ಅಂದೇ ಮಹಿಳಾ ಸಬಲೀಕರಣದ ಬಗ್ಗೆ ಕನಸ್ಸು ಕಂಡಿದ್ದರು. ಮೋದಿ ಅದನ್ನು ನನಸು ಮಾಡಿದರು.
ಸೃಜನಶೀಲತೆ ಗಾಂಧಿ ಅರ್ಥವ್ಯವಸ್ಥೆಯ ಮುಖ್ಯ ಲಕ್ಷಣ. ಹೊಸತನದೊಂದಿಗೆ ಸರಳತೆಯೇ ಅದರ ಆತ್ಮ. ಮೋದಿಯಲ್ಲಿ ಕಾಣುವುದು ಕೂಡ ಅಂಥದ್ದೇ ಸೃಜನಶೀಲತೆಯ ಸುಸ್ಥಿರ ಅಭಿವೃದ್ಧಿ. ಗುಜರಾತಿನ ಸಾರಿಗೆ ವ್ಯವಸ್ಥೆಯೇ ಅದಕ್ಕೆ ಸಾಕ್ಷಿ. ಹೀಗೊಂದು ಪ್ರಯೋಗವನ್ನು ಮಾಡಿದರೆ ಹೇಗೆ ಎಂದು ಚಿಂತಿಸಿ ಅನುಷ್ಠಾನಕ್ಕೆ ತಂದೇ ಬಿಟ್ಟರು ಮೋದಿ. ಇಂದು ಅಹಮದಾಬಾದ್ ಮತ್ತು ಗಾಂಧಿನಗರದ ಚತುಷ್ಪತ ರಸ್ತೆಗಳ ನಡುವೆ ಒಂದು ವಾಹನವಷ್ಟೇ ಸಾಗಬಹುದಾದ ರಸೆಯೊಂದು ಖಾಲಿ ಇರುತ್ತದೆ. BRTS( bus rapid transit system) ಎಂಬ ಬಸ್ ಮಾತ್ರ ಅಲ್ಲಿ ಓಡುತ್ತವೆ. ನಗರದ ೫೮ ಕಿ. ಮೀ ವ್ಯಾಪ್ತಿಯನ್ನು ಅದು ಮುಟ್ಟುತ್ತದೆ. ಟ್ರಾಫಿಕ್‌ಗಳ ಕಿರಿಕಿರಿಯಿಲ್ಲದೆ, ಅಚ್ಚುಕಟ್ಟುತನದ ಸೇವೆಗಾಗಿ ಅತ್ಯಾಧುನಿಕ ತಂತ್ರಜ್ನಾನವನ್ನು ಅದರಲ್ಲಿ ಅಳವಡಿಸಲಾಗಿದೆ. ಯಾವಾಗ BRTS ಬಸ್ ವ್ಯವಸ್ಥೆ ಆರಂಭವಾಯಿತೋ ಅಂದಿನಿಂದ ನಗರದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರು ಕಾರುಗಳನ್ನು ಬಿಟ್ಟು ಬಸ್ ಹತ್ತಿದರು. ಇಂಥದ್ದೇ ಜೀವನ ಶೈಲಿಯನ್ನು ಗಾಂಧೀಜಿ ಅಂದು ಭೋದಿಸಿದ್ದರು. ಮೋದಿ ಅದನ್ನು ನನಸು ಮಾಡಿದ್ದರು.
ಗುಜರಾತಿನ ಮುಖ್ಯ ಶಕ್ತಿಯೇ ಸಂಪೂರ್ಣ ವಿದ್ಯುತ್. ರಾಜ್ಯದುದ್ದಕ್ಕೂ ಇಪ್ಪತ್ತನಾಲ್ಕು ಗಂಟೆ ಮೂರು ಫೇಸಿನ ಕರೆಂಟು. ರಾಜ್ಯದ ಎಲ್ಲಾ ೧೮,೦೨೮ ಗ್ರಾಮಗಳೂ ಇಂದು "ಜ್ಯೋತಿ ಗ್ರಾಮಗಳು" . "ಜ್ಯೋತಿ ಕುಟಿರ" ಎಂಬ ಯೋಜನೆ ಗುಡ್ಡಗಾಡು ಪ್ರದೇಶಗಳಿಗೆ ಉಚಿತ ವಿದ್ಯುತ್ತನ್ನು ವಿತರಿಸುವಲ್ಲಿ ಯಶಸ್ವಿಯಾಗಿದೆ. ಕರೆಂಟು ಉತ್ಪಾದಿಸಲು ಮೋದಿ ಕೈಗೊಂಡ ಕ್ರಮಗಳೂ ಕೂಡ ಗಾಂಧಿ ಅರ್ಥವ್ಯವಸ್ಥೆಯಂತೆ ಸೃಜನಶೀಲ ಸುಸ್ಥಿರ ಅಭಿವೃದ್ಧಿಯ ಮಾರ್ಗ. ದೇಶದಲ್ಲೇ ಅತಿ ಉದ್ದದ ಕರಾವಳಿ ತೀರ ಹೊಂದಿರುವ ಗುಜರಾತ್ ಎಂದೂ ಕಡಲ್ಕೊರೆತ ಎನ್ನುತ್ತಾ ಕೂರಲಿಲ್ಲ. ಪರಿಣಾಮ ಇಂದು ಕರಾವಳಿಯುದ್ದಕ್ಕೂ ಗಾಳಿ ಚಕ್ರಗಳು ತಿರುಗುತ್ತಿವೆ. ಅಲೆಗಳೂ ಕರೆಂಟನ್ನು ಉತ್ಪಾದಿಸುತ್ತಿವೆ. ನದಿಕೊಳ್ಳದ ಪ್ರದೇಶಗಳಲ್ಲಿ ಅಣೆಕಟ್ಟುಗಳು ಕರೆಂಟಿನ ಬರ ನೀಗಿಸುತ್ತವೆ. ಮಳೆ ಇಲ್ಲದ ಊರುಗಳಲ್ಲಿ ಸೋಲಾರು ದೀಪಗಳು ಬೆಳಗುತ್ತಿವೆ. ಆಯಾಯ ಹವಾಮಾನಕ್ಕೆ ತಕ್ಕಂತೆ ಕಸವನ್ನು ರಸ ಮಾಡುವ ತಂತ್ರವನ್ನು ಮೋದಿ ಮಾಡಿದ್ದಾರೆ. ಮನೆಮನೆಗಳಲ್ಲಿ ಸೋಲಾರ್ ಒಲೆಗಳು, ಎಲ್ಲಾ ಗ್ರಾಮಗಳಲ್ಲೂ ಗ್ಯಾಸ್ ಸಂಪರ್ಕಗಳು, ಪ್ರತೀ ಗ್ರಾಮದಲ್ಲೂ ಬ್ರಾಡ್ ಬ್ಯಾಂಡ್ ಸೌಲಭ್ಯ, ಎಲ್ಲಾ ಗ್ರಾಮ ಪಂಚಾಯತುಗಳೂ "ಇ" ವ್ಯವಸ್ಥೆಯಲ್ಲೇ ನಡೆಯುವುದು ಗುಜರಾತ್ ವಿಶೇಷ. ಪರಿಣಾಮ ಇಂದು ಪ್ರತಿ ಗ್ರಾಮಗಳ ಜನರೂ ಇಂಟರ್‌ನೆಟ್ ಬಳಸುತ್ತಿದ್ದಾರೆ. ಗ್ರಾಮೀಣರ ಚಿಂತನೆ ಉನ್ನತವಾಗಿರಬೇಕು. ಜಾಗತಿಕ ಪರಿಜ್ನಾನವಿರಬೇಕು ಎಂದು ಗಾಂಧೀಜಿ ಅಂದೇ ಹೇಳಿದ್ದರು. ಕನಸು ಕಂಡಿದ್ದರು. ಮೋದಿ ಅದನ್ನು ನನಸು ಮಾಡಿದರು. ಇಂದು ನೀರಾವರಿಯಲ್ಲೂ ಮುಂಚೂಣಿಯಲ್ಲಿರುವ ರಾಜ್ಯವಾಗಿ ಗುಜರಾತ್ ಬೆಳೆದಿದೆ. ಅಣೆಕಟ್ಟುಗಳು, ಕೆರೆಗಳು ರಾಜ್ಯದ ಸುಮಾರು ೧ಲಕ್ಷ ಹೆಕ್ಟೇರು ಭೂಮಿಗೆ ನೀರುಣಿಸುತ್ತಿವೆ. ಸುಜಲಾಂ ಸುಫಲಾಂ ಎಂಬ ಅರ್ಥಗರ್ಭಿತ ಹೆಸರಿನ ಈ ಯೋಜನೆಯನ್ನು ಸ್ವತಃ ಗಾಂಧೀಜಿಯ ಅಣತಿಯ ಮೇರೆಗೆ ಮೋದಿ ಇಟ್ಟಿದ್ದಾರೇನೋ ಎನಿಸುತ್ತದೆ.
ಸ್ವಾತಂತ್ರ್ಯ ಸಂಗ್ರಾಮದ ಹೊತ್ತಲ್ಲಿ ಗಾಂಧೀಜಿ ತಮ್ಮ ಉಪ್ಪಿನ ಹಕ್ಕನ್ನು ಎಂದಿಗೂ ಬಿಟ್ಟುಕೊಡೆವು ಎಂದು ಹಠ ಹಿಡಿದಿದ್ದರು. ಸತ್ಯಾಗ್ರಹವನ್ನೇ ಹೂಡಿದ್ದರು. ಅಂದು ಯಾವ ಉಪ್ಪಿನಿಂದ ವಿದೇಶಿಯರು ದೇಶೀಯರ ಸ್ವಾಭಿಮಾನವನ್ನು ಕೆಣಕಿದ್ದರೋ , ಯಾವ ಉಪ್ಪು ದೇಶವನ್ನೇ ಎಬ್ಬಿಸಿತ್ತೋ ಇಂದು ಅದೇ ಜಾಗದಿಂದ , ಅದೇ ಉಪ್ಪನ್ನು ಬ್ರಿಟೀಷರಿಗೆ ಮಾರುವ ಛಲಗಾರ ಮೋದಿ. ದೇಶದ ಒಟ್ಟು ಉಪ್ಪು ಉತ್ಪಾದನೆಯ ಶೇ. ೭೫ರಷ್ಟನ್ನು ಉತ್ಪಾದಿಸುವ ರಾಜ್ಯವಾಗಿ ಗುಜರಾತ್ ಇತಿಹಾಸದ ಸೇಡನ್ನು ತೀರಿಸಿಕೊಂಡಿದೆ ಎನ್ನಲೇಬೇಕು.
ಹತ್ತಿ ಬಟ್ಟೆಯನ್ನೇ ಧರಿಸಿ ಎಂದು ಗಾಂಧೀಜಿ ಆಗಾಗ್ಗೆ ಕರೆ ನೀಡುತ್ತಲೇ ಇದ್ದರು. ಆದರೆ ಕಾಂಗ್ರೆಸ್ ಸ್ವಾತಂತ್ರ್ಯಾನಂತರ ನೂಲಿಲ್ಲದ ಚರಕವನ್ನು ತಿರುಗಿಸುತ್ತಾ ಬಂತು. ಗಾಂಧೀಜಿಯ ಕನಸು ನನಸಾಗಲೇ ಇಲ್ಲ.ಅದನ್ನು ಮೋದಿ ಇಂದು ನನಸು ಮಾಡುತ್ತಿದ್ದಾರೆ. ಇಂದು ಗುಜರಾತ್ ಹತ್ತಿ ಬಟ್ಟೆ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೂರನೆ ಸ್ಥಾನದಲ್ಲಿದೆ. ಯಾವ ಗಾಂಧಿಯನ್ನು ಬ್ರಿಟೀಷರು ಅರೆಬೆತ್ತಲೆ ಮಾಡಿದ್ದರೋ ಆ ಬ್ರಿಟೀಷರಿಗೆ ಮೋದಿ ಬಟ್ಟೆ ಎಸೆಯುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸಿನಿಂದ ಸಂಕಟ ಅನುಭವಿಸುವ ಗಾಂಧೀಜಿಯ ಆತ್ಮಕ್ಕೆ ಶಾಂತಿಯನ್ನು ಒದಗಿಸಿದವರು ಈ ಮೋದಿ.
ಇಷ್ಟೆಲ್ಲಾ ಆದರೂ ಗುಜರಾತ್ ಸಂಪೂರ್ಣ ಸ್ವಚ್ಛ, ಸುಂದರ , ಮಾಲಿನ್ಯಮುಕ್ತ. ಸಾಬರಮತಿ ನದಿ ಕೂಡ ಗುಜರಾತಿನಲ್ಲಿ ಒಪ್ಪವಾಗಿ, ಓರಣವಾಗಿ, ಶಿಸ್ತಿನಿಂದ ಹರಿಯುತ್ತದೆ. ಮೋದಿ ನದಿ ಪಾತ್ರವನ್ನೂ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ. ನದಿ ದಂಡೆಗಳೂ ಪ್ರವಾಸಿ ತಾಣಗಳಾಗಿ, ವಾಣಿಜ್ಯ ಸಂಕೀರ್ಣಗಳಾಗಿ ಮೇಲೇಳುತ್ತಿದೆ. ೧೦ ಕಿ. ಮೀ ದೂರದವರೆಗೆ ನದಿಯ ಅಗಲವನ್ನು ಸಮತಟ್ಟ್ಪುಗೊಳಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನದ್ದು ಮಹಾಪಾಪ ಎಂಬ ಗಾಂಧೀಜಿಯ ಮಾತನ್ನು ಮೋದಿ ನದಿದಂಡೆಗೂ ಅನ್ವಯಿಸಿದ್ದಾರೆ. ಇಷ್ಟೇ ಅಲ್ಲದೆ ಇಂಜಿಯರಿಂಗ್ , ಹೊಟೇಲ್, ಉನ್ನತ ಶಿಕ್ಷಣ, ಪೈಪುಗಳು, ಗಡಿಯಾರಗಳು, ರಾಸಾಯನಿಕ ಗೊಬ್ಬರ ಉದ್ಯಮಗಳಲ್ಲಿ ಗುಜರಾತ್ ವಿಶ್ವದ ಮುಂಚೂಣಿಯಲ್ಲಿರುವ ರಾಜ್ಯ.
ಮೂರು ದಿನದ ಗುಜರಾತಿನ ತಿರುಗಾಟದಲ್ಲಿ ಮೋದಿಗಿಂತ ಗಾಂಧೀಜಿಯೇ ಕಾಣುತ್ತಿದ್ದರು. ಅಲ್ಲಿನ ಜನರ ಮುಖದಲ್ಲಿ ಜೀವಕಳೆಯಿತ್ತು. ಸದಾ ಲವಲವಿಕೆಯಿತ್ತು. ವ್ಯಗ್ರತೆಯಿಲ್ಲದ, ಕುಟಿಲತೆ ಕಾಣದ ಮುಸಲ್ಮಾನರ ಮುಖಗಳು ಗುಜರಾತಿನಲ್ಲಿ ಕಂಡುಬರುತ್ತಿದ್ದವು. ಪಾನ್ ಅಂಗಡಿಯ ಯೂಸೆಫ್ I am proud to be a Gujrathi ಎಂದ. ಕಾರು ಚಾಲಕ ಇಮ್ರಾನ್ "ಮೋದಿ ಭಾಯಿ ಸಭೀ ಗೂಂಡಾಗರ್ಭಿ ಕತಂ ಕರದಿಯಾ " ಎಂದ. ಗಾಂಧಿ ಕೂಡ ಇದನ್ನೇ ಕನಸು ಕಂಡಿದ್ದರು. ಮೋದಿ ಅದನ್ನು ನನಸು ಮಾಡಿದರು.
ಒಂದು ತಮಾಷೆಯ ಮಾತಿದೆ. ಒಂದೆಡೆ ಸ್ನಾನದ ಸೋಪಿನ ಪರಿಮಳ ಬರುತ್ತಿತ್ತಂತೆ. ಆಗೊಬ್ಬ " ಆಹಾ, ಯಾರೋ ಸ್ನಾನ ಮಾಡುತ್ತಿದ್ದಾರೆ" ಎಂದನಂತೆ. ವಾಸ್ತವವಾಗಿ ಅಲ್ಲಿ ಸ್ನಾನದ ಸೋಪಿನ ಕಾರ್ಖಾನೆಯೊಂದಿತ್ತಂತೆ. ಗುಜರಾತಿನಲ್ಲಿ ಮೋದಿಯದು ಗಾಂಧಿ ಆಡಳಿತವಾದರೂ ತೆಗಳುವ ಬಾಯಿಗಳು ಇನ್ನೂ ವಿರಮಿಸಿಲ್ಲ. ಅವರೆಲ್ಲರೂ ಬಚ್ಚಲು ಮನೆಯ ಗುಂಗಿನಲ್ಲೇ ಇರುವವರು. ಬೆವರಿನ ವಾಸನೆಗೂ ಪುಳಿಯೋಗರೆ ಪರಿಮಳಕ್ಕೂ ವ್ಯತ್ಯಾಸ ಗೊತ್ತಿಲ್ಲದವರು.

2 comments:

srikanth bhat said...

suuuuuuuuuuuuuuuuuper....guru...
gujarath suttibandastu "santosha" ayitu... tnx...

Prasad Hegde said...

Awesome article :)